ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview| ಯಾವುದೇ ಭಾಷೆಗೆ ಕಿರೀಟ ಬೇಡ: ದೊಡ್ಡರಂಗೇಗೌಡ

Last Updated 31 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಕನ್ನಡದ ಪ್ರಗಾಥಗಳ ಸಾಮ್ರಾಟ ಎಂದೇ ಖ್ಯಾತರಾದ ದೊಡ್ಡರಂಗೇಗೌಡರು ಕವಿ, ಸಾಹಿತಿ, ಚಲನಚಿತ್ರ ಗೀತ ರಚನೆಕಾರ, ಮೇಲಾಗಿ ನೆಚ್ಚಿನ ಶಿಷ್ಯರ ಪ್ರೀತಿಯ ಮೇಷ್ಟ್ರು. ‘ಮನುಜ’ ಎಂಬ ಕಾವ್ಯನಾಮವನ್ನೂ ಹೊಂದಿರುವ ಈ ಕವಿಯೀಗ, ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಸಾರಬೇಕಾದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಆ ನೆಪದಲ್ಲಿ ‘ಪ್ರಜಾವಾಣಿ’ ಅವರೊಂದಿಗೆ ನಡೆಸಿದ ಮಾತುಕತೆಯ ಆಯ್ದಭಾಗ ಇಲ್ಲಿದೆ

*ಅಧ್ಯಕ್ಷರಾಗಿ ಘೋಷಣೆಯಾಗಿ ಎರಡು ವರ್ಷ ಕಳೆದಿದೆ. ಈ ಅವಧಿ ನಿಮ್ಮ ಮೇಲೆ ಮಾಡಿದ ಪರಿಣಾಮ...

ಈ ಅವಧಿಯಲ್ಲಿ ನಾನು ಸಂಪೂರ್ಣವಾಗಿ ಅಧ್ಯಯನ ನಿರತನಾದೆ. ನನ್ನ ಜೀವನದಲ್ಲಿ ನಾನು ಬರೆಯದ ದಿನಗಳೇ ಇಲ್ಲ. ಈ ಅಭ್ಯಾಸ ಅಷ್ಟು ಒಗ್ಗಿಹೋಗಿದೆ. 70–80ರ ದಶಕದಲ್ಲಿ 80–85 ಕಥೆಗಳನ್ನು ಬರೆದಿದ್ದೆ. ನಂತರದಲ್ಲಿ ನಾನು ಎಷ್ಟರಮಟ್ಟಿಗೆ ಕಾವ್ಯರಚನೆಯಲ್ಲಿ ಮಗ್ನನಾದೆ ಎಂದರೆ, ಪದ್ಯ ಬರೆಯದೇ ಇದ್ದ ಕ್ಷಣವೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಕಾವ್ಯದ ಸಂಸರ್ಗದಲ್ಲಿ ಬಿದ್ದೆ. ಇದನ್ನು ನಾನು ಕಾವ್ಯ ಕೃಷಿ ಎನ್ನುತ್ತೇನೆ. ಸಾಹಿತ್ಯ ತಪಸ್ವಿಯಂತೆ ನನ್ನ ಸುತ್ತ ನಾನೇ ವಲ್ಮೀಕವನ್ನು ಕಟ್ಟಿಕೊಳ್ಳುತ್ತಾ ಏಕಾಂತತೆಯನ್ನು ಅನುಭವಿಸುತ್ತಾ, ಜೀವನಾನುಭವವನ್ನು ಕಂಡ ರೀತಿಯಲ್ಲಿ ಅವುಗಳನ್ನೇ ಪುಟ್ಟಪುಟ್ಟ ಕಥೆಗಳನ್ನಾಗಿ ಮಾಡಿ ಝೆನ್‌ ಕಥೆಗಳನ್ನೂ ಬರೆದೆ.

ಗದ್ಯ ಬರೆಯುವುದು ಬಹಳ ಕಷ್ಟದ ಕೆಲಸ. ಪದ್ಯವಾದರೆ ಒಂದು ಆವೇಗ, ಆವೇಷ, ಉನ್ಮಾದದಲ್ಲಿ ಕಾರಂಜಿಯ ರೀತಿ ಚಿಮ್ಮಿಬಿಡುತ್ತೆ. ಆಮೇಲೆ ಅದಕ್ಕೊಂದು ವಿರಾಮ. ಅದನ್ನೇ ವರ್ಡ್ಸ್‌ವರ್ತ್‌ ‘They flash upon that inward eye’ ಎಂದಿರುವುದು. ಪದ್ಯ ಕೋಲ್ಮಿಂಚಿನಂತೆ... ನಾಳೆ ಬರೆಯುತ್ತೇನೆ ಎಂದು ಮುಂದೂಡಿದರೆ ಅದರಲ್ಲಿ ಆ ತೀವ್ರತೆ, ಪದಪುಂಜದ ಅನುಕ್ರಮಣಿಕೆ ಇರುವುದಿಲ್ಲ. ಆದರೆ ಕಥೆಗೆ ಮಾನಸಿಕವಾಗಿ ಸಿದ್ಧತೆ ಬೇಕು. ಶಿಲ್ಪಿ ಒಂದು ಮೂರ್ತಿಯನ್ನು ಕೆತ್ತಿದಂತೆ ಕಥೆಯನ್ನು ಕೆತ್ತಬೇಕು. ಇಲ್ಲ ಶಿಲ್ಪಭಗ್ನವಾಗುತ್ತದೆ. ಪಾತ್ರಗಳ ಮೇಲೆ ಬಲವಂತವಾಗಿ ತತ್ವ, ಸಿದ್ಧಾಂತಗಳನ್ನು ಹೇರಬಾರದು. ಅವುಗಳು ಅದರ ಪಾಡಿಗೆ ಬೆಳೆದು, ಅಂತ್ಯ ಕಾಣಬೇಕು. ನಾನು ಈ ದಿಸೆಯಲ್ಲಿ ಪ್ರಯತ್ನ ಮಾಡಿದೆ. ಹೀಗೆ ಕೋವಿಡ್‌ ಅವಧಿಯಲ್ಲಿ ಮತ್ತೆ ಆರಂಭವಾದ ಗದ್ಯ ಪಯಣದಲ್ಲಿ 47 ಕಥೆಗಳನ್ನು ಬರೆದೆ ಎಂದರೆ ಆಶ್ಚರ್ಯವಾಗಬಹುದು! ನಿಂತು ಹೋದ ಕಥಾಬರವಣಿಗೆಯನ್ನು ಮತ್ತೆ ಪ್ರಾರಂಭಿಸಲು ಕೋವಿಡ್‌ ಒಂದು ನೆಪವಾಯ್ತು. ಜೊತೆಗೆ 84 ಕವಿತೆಗಳ ಹೊಸ ಸಂಕಲನ ‘ಮಣ್ಣಿನ ಹಣತೆಗಳು’ ಕೂಡಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

*ಈ ಅವಧಿಯಲ್ಲಿ ಅಧ್ಯಕ್ಷರ ಉತ್ಸಾಹ ಕುಂದಿದೆಯೇ? ಸಮ್ಮೇಳನಕ್ಕೆ ಸಿದ್ಧತೆ ಹೇಗಿತ್ತು?

ದೈಹಿಕವಾಗಿ ನಾನು ಆಗಿನಷ್ಟು ಸದೃಢನಾಗಿಲ್ಲ. ಕೊಂಚ ಮಂಡಿನೋವು... ಆದರೆ ಮಾನಸಿಕವಾಗಿ ನಾನು ಬಹಳ ಗೆಲುವಿನಲ್ಲಿದ್ದೇನೆ. ನನಗೆ ಬರೆಯದೇ ಇದ್ದರೆ ಐಸೊಲೇಷನ್‌! ಅಥವಾ ಲಾಕ್‌ಡೌನ್‌! ಬರವಣಿಗೆ ಅಭ್ಯಾಸ ನನ್ನ ಮನೋಸ್ಥೈರ್ಯ ಹೆಚ್ಚಿಸಿದೆ.

ಕಳೆದೆರಡು ವರ್ಷಗಳ ಅವಧಿಯಲ್ಲಿ ನನಗಿಂತ ಪ್ರಬುದ್ಧರು, ಹಿರಿಯರು, ಬರವಣಿಗೆಯ ಸಂಶೋಧನೆಗಳಲ್ಲಿ ಕೆಲಸ ಮಾಡಿದಂಥವರನ್ನು ಭೇಟಿಯಾಗಿದ್ದೆ. ಅವರ ಬಳಿ ಕುಳಿತು ಚರ್ಚಿಸಿ, ವಿದ್ಯಾರ್ಥಿಯ ಹಾಗೆ ಟಿಪ್ಪಣಿ ಮಾಡಿಕೊಂಡಿದ್ದೇನೆ. ಭಾಷಣದಲ್ಲಿ ಕರ್ನಾಟಕದ, ಕನ್ನಡದ ಎಲ್ಲ ಬಗೆಯ ಕಾರ್ಯಾಲಯಗಳ ಸಮಸ್ಯೆಗಳನ್ನು ಹೇಳಬೇಕು ಎನ್ನುವುದು ನನ್ನ ಇಂಗಿತ. ಇದಕ್ಕಾಗಿ ಟಿಪ್ಪಣಿ ಮಾಡಿಕೊಂಡಿದ್ದೇನೆ. ಇವೆಲ್ಲವುಗಳನ್ನೂ ಸೇರಿಸಿದರೆ ದೊಡ್ಡ ಗ್ರಂಥವೇ ಆಗುತ್ತದೆ. ಇವುಗಳಲ್ಲಿ ಆಯ್ದ ಅಂಶಗಳನ್ನು 48 ಪುಟಗಳ ಭಾಷಣವನ್ನಾಗಿ ಮಾಡಿದ್ದೇನೆ. ಉಳಿದ ಅಂಶಗಳನ್ನು ಮುಂದೆ ಬಿಡಿಬಿಡಿ ಲೇಖನಗಳನ್ನಾಗಿ ಮಾಡುತ್ತೇನೆ.

*ಅಧ್ಯಕ್ಷರಾಗಿ ವೇದಿಕೆಯೇರುವ ಸಂದರ್ಭದಲ್ಲಿ ಗಡಿ ವಿವಾದ ನಿಮ್ಮ ಮುಂದೆ ಬಂದಿದೆ...

ಭಾಷಾವಾರು ಪ್ರಾಂತ್ಯಗಳ ವರ್ಗೀಕರಣವನ್ನು ವಲ್ಲಭಬಾಯಿ ಪಟೇಲ್‌ ಅವರು ಮಾಡಿದ ಮೇಲೆ, ಗಡಿ ಹಾಕಿ ಇದು ಕರ್ನಾಟಕದ ವ್ಯಾಪ್ತಿ, ಇದು ಮಹಾರಾಷ್ಟ್ರದ ವ್ಯಾಪ್ತಿ ಎಂದು ತೋರಿಸಿದ್ದಾರೆ. ಈ ಕುರಿತು ಬೇಕಾದಷ್ಟು ಆಯೋಗಗಳು ಆಗಿವೆ, ತೀರ್ಪುಗಳೂ ಬಂದಿದ್ದಾವೆ. ಮಹಾಜನ್‌ ವರದಿ ನಮಗೆ ಭಗವದ್ಗೀತೆ, ಬೈಬಲ್‌, ಕುರಾನ್‌. ಅದಕ್ಕೆ ಅಷ್ಟು ಬೆಲೆ ಇದೆ. ಪ್ರತಿವರ್ಷವೂ ಸಮ್ಮೇಳನದ ಸಂದರ್ಭದಲ್ಲೇ ಮರಾಠಿಗರು ಈ ವಿಷಯದ ಬಗ್ಗೆ ಕ್ಯಾತೆ ತೆಗೆಯುತ್ತಾರೆ. ಅವರು ಮಹಾಮೇಳವನ್ನು ಅದ್ಧೂರಿಯಾಗಿ ಮಾಡುತ್ತಾರೆ. ಅದಕ್ಕೆ ಎಳ್ಳಷ್ಟು ಅಡಚಣೆ ಆಗದ ರೀತಿ ನೋಡಿಕೊಳ್ಳುತ್ತಾರೆ. ನಮಗೆ ಗಡಿತಂಟೆ ತೆಗೆದು, ಸಮ್ಮೇಳನದ ಸಂದರ್ಭದಲ್ಲಿ ಗಲಿಬಿಲಿಗೊಳಿಸುವ ಕಿಡಿಗೇಡಿತನ ಮಹಾರಾಷ್ಟ್ರದ ಮಂತ್ರಿಗಳು ಮತ್ತು ಅಲ್ಲಿನ ಅತಿರೇಕವಾದಿಗಳದ್ದು. ಅದನ್ನೇ ಮೂಲಧನವನ್ನಾಗಿ ಮಾಡಿ, ಮೈಬೆಚ್ಚಗೆ ಮಾಡಿಕೊಳ್ಳುತ್ತಿದ್ದಾರೆ.

ನಾನು ತಯಾರಿಸಿದ ಅಧ್ಯಕ್ಷ ಭಾಷಣದ ಮೊದಲ ಅಜೆಂಡಾದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರಲಿಲ್ಲ. ಆದರೆ ಕಳೆದೆರಡು ವಾರದಿಂದ ನಡೆದ ಘಟನೆಗಳ ನಂತರ, ಈ ವಿಷಯವನ್ನು ಸೇರಿಸಿ, ಅದಕ್ಕೆ ಮೊದಲ ಆದ್ಯತೆ ನೀಡಿದ್ದೇನೆ. ಮಹಾಜನ್‌ ವರದಿ ಅನ್ವಯ ಬೆಳಗಾವಿ ಕನ್ನಡ ನಾಡಿಗೆ ಸೇರಬೇಕು. ಒಂದು ಅಂಗುಲ ನೆಲವನ್ನೂ ನಿಮಗೆ ಬಿಟ್ಟುಕೊಡುವುದಿಲ್ಲ ಎಂದು ನಾವು ಗಂಟಾಘೋಷವಾಗಿ ಹೇಳಬೇಕಾಗಿದೆ. ಒಂದು ಹಳ್ಳಿಯನ್ನೂ ಬಿಟ್ಟುಕೊಡುವುದಿಲ್ಲ ಎಂಬುವುದು ಇದರ ಅರ್ಥ. ಇಷ್ಟೆಲ್ಲ ಹೇಳುವುದಕ್ಕೂ ಕಾರಣವಿದೆ. ನಾನು ಪ್ರವಾಸಪ್ರಿಯ. ಅಕ್ಕಲಕೋಟೆ, ಜತ್ತ, ಸೊಲ್ಹಾಪುರ ನೋಡಿದ್ದೇನೆ. ಅಲ್ಲಿ ನೂರು ಮನೆಗಳಿದ್ದರೆ ಆ ಪೈಕಿ ತೊಂಬತ್ತು ಮನೆಯಲ್ಲಿ ಕನ್ನಡವನ್ನು ಮಾತನಾಡುತ್ತಾರೆ. ಸೊಲ್ಹಾಪುರ, ಆಗಿನ ಸೊನ್ನಲಗಿ, ಕನ್ನಡದ ಆವಾಸಸ್ಥಾನ. ನಾವು ಆ ಪ್ರಾಂತವನ್ನು ನಮ್ಮದು ಎನ್ನಲು ಏಕೆ ಹಿಂದೆಮುಂದೆ ನೋಡಬೇಕು. ನಮಗೆ ಸೇರಬೇಕು ಎನ್ನುವುದು ನೈತಿಕ ಹಕ್ಕು. ಇದಕ್ಕೆ ವಿರೋಧವಾಗಿರುವವರನ್ನು ವಿರೋಧಿಸುವಲ್ಲಿ ತಪ್ಪಿಲ್ಲ. ಈ ಕಾರಣಕ್ಕಾಗಿ ನಾನು ಮರಾಠಿಗರನ್ನು ವಿರೋಧಿಸಿದ್ದೇನೆ.

ಇದೇ ರೀತಿ ಕಾಸರಗೋಡಿನಲ್ಲೂ ಒಂದು ಸಮಸ್ಯೆ ಇದೆ. ಇಲ್ಲಿ ಶಾಲೆಗಳು ಇಕ್ಕಟ್ಟಿಗೆ ಸಿಲುಕಿವೆ. ಇಲ್ಲಿನ ಶಾಲೆಗಳಲ್ಲಿ ಕನ್ನಡ ಭಾಷೆ ತಿಳಿದಿಲ್ಲದ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕನ್ನಡದ ಮಕ್ಕಳಿಗೆ ಕನ್ನಡದಲ್ಲಿ ಪಾಠ ಹೇಳಬೇಕು. ಇದು ಸಾಂವಿಧಾನಿಕ ಹಕ್ಕೊತ್ತಾಯ. ಕಾಸರಗೋಡು ಕನ್ನಡ ನಾಡಿಗೆ ಸೇರಬೇಕಾದದ್ದು ಎನ್ನುವುದು ಒಳ್ಳೆಯ ಇಂಗಿತ, ಇದರಲ್ಲಿ ಯಾವುದೇ ಪ್ರಲೋಭನೆಯೂ ಇಲ್ಲ.

*ಭಾಷಾ ವಿಚಾರ ಬಗೆಹರಿಯದ ಸವಾಲಿನಂತೆ ಮತ್ತೆ ಮತ್ತೆ ಉದ್ಭವಿಸುತ್ತಿದೆ...

ಭಾರತದ ಸಂವಿಧಾನದಲ್ಲಿ ಒಪ್ಪಿತವಾದ ಭಾಷೆಗಳಿಗೆ ಸರಿಸಮಾನವಾದ ಸ್ಥಾನಮಾನ ಸಿಗಬೇಕು. ಯಾವುದಕ್ಕೂ ಕಿರೀಟ ತೊಡಿಸುವುದು ಬೇಡ. ಅಥವಾ ತಲೆಪಟ್ಟಿ ಕಟ್ಟಿ ನೀನು ಯಜಮಾನ, ಪ್ರಮುಖ ಎಂದು ಹೇಳುವುದು ಬೇಡ. ಇದರಿಂದಲೇ ಹೆಚ್ಚು ಅಪಾಯ. ನಿಜವಾದ ಅರ್ಥದಲ್ಲಿ ಹೇಳುವುದಾದರೆ ಕನ್ನಡಿಗರು ಹಿಂದಿಯನ್ನು ವಿರೋಧಿಸಲೇ ಇಲ್ಲ. ತಮಿಳುನಾಡಿನಲ್ಲಿ ಹಿಂದಿ ವಿರುದ್ಧ ಇರುವ ಅಲೆಯನ್ನು ನೋಡಿದರೆ ಇಲ್ಲಿ ಕಡಿಮೆ. ಹಿಂದಿ ಪ್ರಚಾರ ಸಮಿತಿಗಳು ಕರ್ನಾಟಕದಲ್ಲಿ ಇರುವಷ್ಟು ಬೇರೆ ಎಲ್ಲೂ ಇಲ್ಲ ಎನಿಸುತ್ತದೆ.

ಪ್ರಸ್ತುತ ಕನ್ನಡಕ್ಕೆ ದೊಡ್ಡ ಸಮಸ್ಯೆ ಇರುವುದು ಹಿಂದಿ, ತಮಿಳು, ಮಲಯಾಳಂ, ತೆಲುಗು ಅಥವಾ ಇತರೆ ಭಾರತೀಯ ಭಾಷೆಗಳಿಂದ ಅಲ್ಲ. ಸದ್ಯ ಇಂಗ್ಲಿಷಿನ ವಿರುದ್ಧ ಸೆಟೆದುನಿಂತು ಹೋರಾಡಲೇಬೇಕಾದ ಕ್ರಮದ ಅಗತ್ಯವಿದೆ. ನಮ್ಮನ್ನು ಆಳಿದ ಬ್ರಿಟಿಷರು ನಮ್ಮನ್ನು ಹೇಗೆ ತಲೆಕೆಡಿಸಿದ್ದಾರೆ ಎಂದರೆ ಇಡೀ ಜಗತ್ತಿನಲ್ಲಿ ಇಂಗ್ಲಿಷ್‌ ಬಿಟ್ಟರೆ ಬೇರೆ ಭಾಷೆ ಇಲ್ಲ ಎಂದು ತುಂಬಿಸಿದ್ದಾರೆ. ನಾನು ಪ್ರವಾಸ ಮಾಡಿದ ಸಂದರ್ಭದಲ್ಲಿ ಗಮನಿಸಿದೆ; ಫ್ರಾನ್ಸ್‌, ಜಪಾನ್‌, ಜರ್ಮನಿ, ಸಿಲೋನ್‌, ಚೀನಾದಲ್ಲಿ ಇಂಗ್ಲಿಷ್‌ಗೆ ಸೊಪ್ಪು ಹಾಕುವುದಿಲ್ಲ. ಇವರ್‍ಯಾರೂ ಇಂಗ್ಲಿಷ್‌ಗೆ ನೇತುಬಿದ್ದಿಲ್ಲ. ಇಂಗ್ಲಿಷ್‌ ಇಲ್ಲದೆಯೂ ಸ್ವತಂತ್ರರಾಗಿದ್ದಾರೆ, ಪ್ರಭುತ್ವವನ್ನು ಹೊಂದಿದ್ದಾರೆ. ಅವರೆಲ್ಲರೂ ವೈಜ್ಞಾನಿಕವಾಗಿ ಮುಂದುವರಿದಿಲ್ಲವೇ? ತಂತ್ರಜ್ಞಾನದ ಅಭಿವೃದ್ಧಿಯೂ ಅವರವರ ಭಾಷೆಗಳ ಮೂಲಕವೇ ಆಗುತ್ತಿದೆ. ಈ ಮೂಲಕ ತಮ್ಮ ಭಾಷೆ ಸಮರ್ಥವಾಗಿದೆ ಎಂದು ತೋರಿಸಿದ್ದಾರೆ. ಕನ್ನಡ ಅನ್ನದ ಭಾಷೆ ಅಲ್ಲ ಎನ್ನುವ ಪೋಷಕರ ತಪ್ಪು ತಿಳಿವಳಿಕೆ ನಮ್ಮಲ್ಲಿನ ಈ ಸಮಸ್ಯೆಗೆ ಕಾರಣ. ನಾವಿನ್ನೂ ಇಂಗ್ಲಿಷ್‌ನ ಭ್ರಮೆಯಲ್ಲಿದ್ದೇವೆ.

*ಸಮ್ಮೇಳನಗಳಲ್ಲಿನ ನಿರ್ಣಯಗಳ ಮೇಲೆ ನಿಗಾ ಇಡುವವರು ಯಾರು?

ಈ ಬಾರಿ ಕೇವಲ ಮೂರು ನಿರ್ಣಯ ಮಂಡಿಸಬೇಕು ಎನ್ನುವ ಆಲೋಚನೆ ಇದೆ. ಕನ್ನಡದ ಪ್ರಾಮುಖ್ಯತೆ ಬಗ್ಗೆ ಒಂದು ನಿರ್ಣಯ ಇದ್ದೇ ಇರಲಿದೆ. ನಾವು ಏನೇ ನಿರ್ಣಯ ಮಾಡಿದರೂ, ಅದನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಹೆಚ್ಚು ನಿರ್ಣಯಗಳನ್ನು ಮಾಡುವುದರಲ್ಲಿ ಅಥವಾ ಸಣ್ಣಪುಟ್ಟದಕ್ಕೂ ನಿರ್ಣಯ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳ ಅನುಷ್ಠಾನಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪರಿಶೀಲನಾ ಸಮಿತಿ ರಚಿಸಿ, ಒತ್ತಾಯಗಳನ್ನು ತರುವ ಕೆಲಸ ಮಾಡಬೇಕು ಎಂದು ನಿರ್ಧರಿಸಿದ್ದೇವೆ. ಮುಂದಿನ ಸಮ್ಮೇಳನ ಆರಂಭವಾಗುವ ಮೊದಲು ಹಿಂದಿನ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು ಅನುಷ್ಠಾನ ಆಗಲೇಬೇಕು.

*‘ಶಾಸ್ತ್ರೀಯ ಭಾಷೆ ಸ್ಥಾನ ಎಳ್ಳಷ್ಟೂ ನೆರವಾಗಿಲ್ಲ’

‘ಈ ವಿಷಯ ಹೇಳಲು ನನಗೆ ದುಃಖ ಆಗುತ್ತದೆ. ಪಕ್ಕದ ತಮಿಳುನಾಡಿನ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಶಾಸ್ತ್ರೀಯ ಭಾಷಾ ಸ್ಥಾನಮಾನದಡಿ ತಮಿಳು ಭಾಷೆ ಅಭಿವೃದ್ಧಿಗೆ ₹500 ಕೋಟಿ ತೆಗೆದುಕೊಂಡರು. ನಮ್ಮವರು ಇನ್ನೂ ₹25–30 ಕೋಟಿ ತೆಗೆದುಕೊಳ್ಳಲು ಆಗಲಿಲ್ಲ. ಭಾಷೆಯ ಉನ್ನತೀಕರಣಕ್ಕೆ ದುಡ್ಡು ಇರಬೇಕಲ್ಲವೇ. ನಮಗೆ ನಾಚಿಕೆಯಾಗಬೇಕು. ಶಾಸ್ತ್ರೀಯ ಭಾಷೆಗೊಂದು ಕಾರ್ಯಾಲಯ ಇರಬೇಕು. ಇಷ್ಟು ದಿನ ನನೆಗುದಿಗೆ ಬಿದ್ದಿದ್ದ ಈ ಯೋಜನೆ ಈಗ ಒಂದು ಹಂತ ತಲುಪಿದೆ. ಇದಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳ ಬಗ್ಗೆ ಸರ್ಕಾರ ಇನ್ನೂ ಗಮನಹರಿಸಿಲ್ಲ. ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕರೂ ಕನ್ನಡಕ್ಕೆ ಎಳ್ಳಷ್ಟು ಸಹಾಯವಾಗಲಿಲ್ಲ ಎನ್ನುವ ದುಃಖ ನನಗೆ. ಇದನ್ನು ನಾನು ಸುದೀರ್ಘವಾಗಿ ಸಮ್ಮೇಳನದಲ್ಲಿ ಪ್ರಸ್ತಾಪಿಸುತ್ತೇನೆ. ಶಾಸ್ತ್ರೀಯ ಭಾಷೆ ಸ್ಥಾನಮಾನದ ಶೀರ್ಷಿಕೆಯಡಿ ಕೇಂದ್ರ ಸರ್ಕಾರದ ಮೇಲೆ ಇನ್ನಾದರೂ ಒತ್ತಡ ಹೇರಿ ನಮ್ಮ ಸಂಸದರು ಹಣವನ್ನು ಮಂಜೂರು ಮಾಡಿಸಿಕೊಂಡು ಕನ್ನಡದ ಅಭಿವೃದ್ಧಿಗೆ ಕಟಿಬದ್ಧರಾಗಲಿ’ ಎನ್ನುತ್ತಾರೆ ದೊಡ್ಡರಂಗೇಗೌಡರು.

ಮೂರು ತಿಂಗಳು ಕನ್ನಡ..ಕನ್ನಡ...

ನನ್ನದೊಂದು ಸಿದ್ಧಾಂತವಿದೆ. ಬೀರೆ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆನಿಂತು, ಇಲ್ಲಿ ಕೆಲಸ ಮಾಡಬೀಕು ಎಂದರೆ ಕನಿಷ್ಠ ಮೂರು ತಿಂಗಳು ಇಲ್ಲಿಯ ಭಾಷೆಯನ್ನು ಕಲಿಯಬೀಕು ಎನ್ನುವುದು ನನ್ನ ಪ್ರಸ್ತಾವ. ಆಗ ಕನ್ನಡದ, ಕನ್ನಡಿಗರ ಒಳತಿರುಳು ಅವರಿಗೆ ಗೊತ್ತಾಗುತ್ತದೆ. ಕನ್ನಡದಲ್ಲಿ ಕರ್ನಾಟಕ ಇದೆ. ಕರ್ನಾಟಕದಲ್ಲಿ ಕನ್ನಡಿಗ ಇದ್ದಾನೆ. ಇವು ಒಂದಕ್ಕೊಂದು ತಳುಕು ಹಾಕಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT