ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂದರ್ಶನ | ಅರ್ಥಹೀನ ಘೋಷಣೆಗೆ ಮೋದಿ ನಿಸ್ಸೀಮ: ಜೈರಾಂ ರಮೇಶ್‌

Last Updated 15 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಸಂಸತ್ತಿನ ಮುಂಗಾರು ಅಧಿವೇಶನವು ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಣ ಕಂದಕವು ಇನ್ನಷ್ಟು ತೀವ್ರಗೊಳ್ಳುವ ಮೂಲಕ ಕೊನೆಗೊಂಡಿದೆ. ಸಂಸತ್‌ ಕಲಾಪ ನಡೆದ ರೀತಿಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಅದರ ನಡುವೆಯೇ ಎರಡೂ ಕಡೆಯವರು ತಮ್ಮ ನಿಲುವುಗಳನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕ ಜೈರಾಂ ರಮೇಶ್‌ ಅವರು ಪ್ರಜಾವಾಣಿ ಜತೆಗೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ:

*ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರ ಜತೆಗೆ, ಎಲ್ಲರ ವಿಕಾಸ ಎಂಬ ಘೋಷಣೆಗೆ ‘ಎಲ್ಲರ ಪ್ರಯತ್ನ’ ಎಂಬುದನ್ನೂ ಸೇರಿಸಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಅರ್ಥಹೀನ ಘೋಷಣೆ ಸೃಷ್ಟಿಸುವುದರಲ್ಲಿ ಮೋದಿ ನಿಸ್ಸೀಮರಾಗಿದ್ದಾರೆ. ಇವೆಲ್ಲವೂ ಆ ಕ್ಷಣದ ವಾಕ್‌ ವೈಭವ. ಈ ರೀತಿಯ ಅಪ್ರಾಮಾಣಿಕತೆ ಮತ್ತು ಆಷಾಢಭೂತಿತನದಲ್ಲಿ ಮೋದಿ ಅವರು ಭಾರಿ ಪಾರದರ್ಶಕವಾಗಿದ್ದಾರೆ. ಸಂವಿಧಾನ ತಿದ್ದುಪಡಿ (127ನೇ ತಿದ್ದುಪಡಿ) ಮಸೂದೆಗೆ ಕೂಡ ಸಂಸತ್ತಿಗೆ ಬಂದು ಮತ ಹಾಕಲು ಮನಸ್ಸಿಲ್ಲದ ಪ್ರಧಾನಿ ಅವರು. ಆದರೆ, ಭಾರತದ ರಾಜಕಾರಣಕ್ಕೆ ತಮ್ಮ ಕೊಡುಗೆ ಬಹಳ ದೊಡ್ಡದು ಎಂದು ಅವರು ಅಂದುಕೊಂಡಿದ್ದಾರೆ.

*ವಿಭಜನೆಯ ಕ್ರೌರ್ಯ ಸ್ಮರಣಾ ದಿನವನ್ನಾಗಿ ಆಗಸ್ಟ್‌ 14 ಅನ್ನು ಆಚರಿಸಲಾಗುವುದು ಎಂದು ಸರ್ಕಾರ ಹೇಳಿದೆ. ನೀವು ಇದನ್ನು ಒಪ್ಪುವಿರಾ?

ಇದು ಸಮಾಜವನ್ನು ವಿಭಜಿಸುವ ಮತ್ತು ಧ್ರುವೀಕರಿಸುವ ಯತ್ನ. ಬಂಗಾಳ ವಿಭಜನೆಯಾಗಬೇಕು ಎಂಬುದರ ಬಹುದೊಡ್ಡ ಪ್ರತಿಪಾದಕಾಗಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರಿದ್ದರು. 1922ರಲ್ಲಿ ವಿ.ಡಿ. ಸಾವರ್ಕರ್‌ ಅವರು ಮುಂದಿಟ್ಟಿದ್ದ ಎರಡು ದೇಶ ಸಿದ್ಧಾಂತದ ಒಟ್ಟು ಫಲಿತಾಂಶವೇ ದೇಶ ವಿಭಜನೆ.

*ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಘೋಷಣೆ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ಧಾರೆ. ನೀವು ಒಪ್ಪುವಿರಾ?

ಹೌದು. ಇಡೀ ಸ್ವಾತಂತ್ರ್ಯ ಹೋರಾಟವನ್ನೇ ಅಪಮೌಲ್ಯಗೊಳಿಸಲು ಮೋದಿ ಬಯಸಿದ್ದಾರೆ. ದೇಶ ವಿಭಜನೆಗೆ ಮುಖ್ಯ ಕಾರಣ ಸಾವರ್ಕರ್‌, ಹಿಂದೂ ಮಹಾಸಭಾ, ಆರ್‌ಎಸ್‌ಎಸ್‌ ಮತ್ತು ಮುಸ್ಲಿಂ ಲೀಗ್‌.

*ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಣ ಸಂಬಂಧವು ದುರಸ್ತಿಯಾಗದ ರೀತಿಯಲ್ಲಿ ಹಾಳಾಗಿದೆಯೇ?

ಇದು ಸಂಪೂರ್ಣವಾಗಿ ಛಿದ್ರವಾಗಿದೆ ಎಂಬುದು ನಿಜ. ಎರಡೂ ಕಡೆಯವರನ್ನು ಒಟ್ಟಾಗಿ ತರುವ ಪ್ರಯತ್ನವನ್ನು ರಾಜ್ಯಸಭೆಯ ಸಭಾಪತಿ (ವೆಂಕಯ್ಯ ನಾಯ್ಡು) ಮಾಡಲಿಲ್ಲ. ಸದನದ ನಾಯಕನನ್ನು (ಪೀಯೂಷ್‌ ಗೋಯಲ್‌) ನಾವು ನಂಬಲು ಸಾಧ್ಯವಿಲ್ಲ. ಸಂಸದೀಯ ವ್ಯವಹಾರ ಸಚಿವರು (ಪ್ರಲ್ಹಾದ ಜೋಶಿ) ಸಂಪೂರ್ಣವಾಗಿ ಅಪ್ರಾಮಾಣಿಕ. ವಿರೋಧ ಪಕ್ಷಗಳ ಮಟ್ಟಿಗೆ ಒಂದು ಸಕಾರಾತ್ಮಕ ಅಂಶ ಏನೆಂದರೆ, ಸದನ ನಾಯಕರೆಲ್ಲರೂ ಮಲ್ಲಿಕಾರ್ಜುನ ಖರ್ಗೆ (ರಾಜ್ಯಸಭೆಯ ವಿಪಕ್ಷ ನಾಯಕ) ಕೊಠಡಿಯಲ್ಲಿ ಸೇರುತ್ತಿದ್ದರು. ಏಳು ವರ್ಷಗಳಲ್ಲಿ ಇದೇ ಮೊದಲಿಗೆ ವಿರೋಧ ಪಕ್ಷಗಳು ಯೋಜನಾಬದ್ಧವಾಗಿ ಕೆಲಸ ಮಾಡಿವೆ. ಖರ್ಗೆ ಅವರ ವರ್ಚಸ್ಸು, ಹಿರಿತನ, ಆಕ್ರಮಣಕಾರಿ ಮನೋಭಾವ ಇದಕ್ಕೆ ದೊಡ್ಡ ಕೊಡುಗೆ ಕೊಟ್ಟಿದೆ.

*ಆಜಾದ್‌ ಅವರು ಆಕ್ರಮಣಶೀಲ ಆಗಿರಲಿಲ್ಲ ಎಂಬುದು ಇದರ ಅರ್ಥವೇ?

ಅವರ ಬಗ್ಗೆ ಏನೂ ಹೇಳಲಾರೆ. ಖರ್ಗೆ ಆಕ್ರಮಣಶೀಲವಾಗಿದ್ದಾರೆ, ಅವರು ನೇರವಾಗಿದ್ದಾರೆ ಮತ್ತು ಸರ್ಕಾರ ಅಥವಾ ಸಭಾಪತಿಯ ಅಸಂಬದ್ಧಗಳನ್ನು ಕೇಳಿಕೊಂಡು ಅವರು ಇರುವುದಿಲ್ಲ ಎಂದಷ್ಟೇ ಹೇಳಬಲ್ಲೆ.

*ಕಾಂಗ್ರೆಸ್‌ನ ನಾಯಕತ್ವ ಪ್ರಶ್ನೆಯು ಸದ್ಯದಲ್ಲೇ ಪರಿಹಾರ ಆಗಬಹುದೇ?

ಕೋವಿಡ್‌–19ರ ಎರಡನೇ ಅಲೆಯನ್ನು ನಾವು ಅಂದಾಜು ಮಾಡಿರಲಿಲ್ಲ. ಜನರು ವೈದ್ಯಕೀಯ ಆಮ್ಲಜನಕಕ್ಕಾಗಿ ಕಷ್ಟ ಪಡುತ್ತಿರುವಾಗ ಪಕ್ಷದ ಚುನಾವಣೆ ನಡೆಸುವುದು ಸಾಧ್ಯವಿರಲಿಲ್ಲ. ಹಾಗಾಗಿ ಗಡುವನ್ನು ಮುಂದಕ್ಕೆ ಹಾಕಲೇಬೇಕಿತ್ತು. ಈಗ, ಹೊಸ ಗಡುವು ಹಾಕಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT