ಬುಧವಾರ, ಆಗಸ್ಟ್ 10, 2022
20 °C

ಸಂದರ್ಶನ | ಭೂ ಸುಧಾರಣಾ ಕಾಯ್ದೆ ಜಾರಿಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ವಿರೋಧ

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

TB Jayachandra

ಭೂ ಸುಧಾರಣಾ ಕಾಯ್ದೆ ಜಾರಿಗೆ ಮಾಜಿ ಕೃಷಿ ಸಚಿವ ಟಿ.ಬಿ.ಜಯಚಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆ ಜಾರಿಯಾದರೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಈಸ್ಟ್ ಇಂಡಿಯಾ ಕಂಪನಿಗಳು ಹುಟ್ಟಿಕೊಂಡು, ಈ ಸಂಸ್ಥೆಗಳೇ ಆಡಳಿತ ನಡೆಸುವ ಅಪಾಯವಿದೆ ಎಂದು ಎಚ್ಚರಿಸುತ್ತಾರೆ

* ಭೂ ಸುಧಾರಣಾ ಕಾಯ್ದೆ ಜಾರಿಗೆ ಏಕೆ ವಿರೋಧ?

ಖಾಸಗಿಯವರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅವಕಾಶ ಕೊಟ್ಟರೆ ಕೃಷಿ ಉತ್ಪಾದನೆ ಹಾಗೂ ಭೂಮಿಯ ಮೇಲೆ ಹಿಡಿತ ಸಾಧಿಸುತ್ತಾರೆ. ಈಸ್ಟ್ ಇಂಡಿಯಾ ಮಾದರಿಯ ಕಂಪನಿಗಳು ಹುಟ್ಟಿಕೊಂಡು ಜಮೀನು ಖರೀದಿಸು ತ್ತವೆ. ಇಂತಹ ಸಂಸ್ಥೆಗಳ ಲಾಭದ ಆಮಿಷಕ್ಕೆ ಒಳಗಾಗಿ ಜಮೀನು ಮಾರಾಟ ಮಾಡುವ ರೈತರು, ಅಲ್ಲೇ ಕೂಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣ
ವಾಗಲಿದೆ. ರಿಯಲ್ ಎಸ್ಟೇಟ್‌ಗೆ ದಾರಿಯಾಗುತ್ತದೆ. ಬಡ, ಮಧ್ಯಮ ವರ್ಗದ ರೈತರು ಅತ್ಯಲ್ಪ, ಕ್ಷಣಿಕ ಆಸೆ ಯಿಂದ ಜಮೀನು ಕಳೆದುಕೊಳ್ಳುತ್ತಾರೆ. ಇನ್ನು ಮುಂದೆ ‘ಶ್ರೀಮಂತ’ ಎಂಬ ಒಂದೇ ವರ್ಗ ಬದುಕುತ್ತದೆ.

* ಹೊಸ ಕಾಯ್ದೆಯಲ್ಲೂ ನಿಯಂತ್ರಣ ಸಾಧ್ಯವಿಲ್ಲವೆ?

ಎಲ್ಲಿದೆ ನಿಯಂತ್ರಣ? ಇದು ಸಂಪೂರ್ಣ ರೈತ, ಕೃಷಿ ವಿರೋಧಿ ಕಾನೂನು. ಬಂಡವಾಳಶಾಹಿಗಳು, ರಾಜಕಾರಣಿಗಳು, ಉದ್ಯಮಿಗಳು, ಯಥೇಚ್ಛವಾಗಿ ಹಣ ಇದ್ದವರು, ಶ್ರೀಮಂತರು, ಅಕ್ರಮವಾಗಿ ಹಣ ಸಂಪಾದಿಸಿದ ಅಧಿಕಾರಿಗಳು, ಸರ್ಕಾರಿ ನೌಕರರು, ಷೇರು ದಲ್ಲಾಳಿಗಳು ಕೃಷಿ ಭೂಮಿ ಖರೀದಿಸಿ ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ. ಅಕ್ರಮವಾಗಿ ಬಂದ ಹಣವನ್ನು ಇದರ ಮೇಲೆ ತೊಡಗಿಸುತ್ತಾರೆ. ರೈತರಿಂದ ಕಡಿಮೆ ಬೆಲೆಗೆ ಕೊಂಡು, ಭೂಮಿಯನ್ನು ಒಟ್ಟುಗೂಡಿಸಿ ಹೆಚ್ಚಿನ ಬೆಲೆಗೆ ಮಾರಾಟಮಾಡಿ ಇಲ್ಲೂ ಲಾಭ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ಬರಲಿದೆ.

* ಹಳೆಯ ಕಾನೂನು ಬದಲಾವಣೆ ಬೇಡವೆ?

ಕಾನೂನು ಬದಲಾಯಿಸಲು ಯಾರಿಗೆ ಸಮಸ್ಯೆಯಾಗಿತ್ತು. ಅಗತ್ಯವಿದ್ದರೆ ಮತ್ತಷ್ಟು ಸರಳಗೊಳಿಸ
ಬಹುದಿತ್ತು. ಕೈಗಾರಿಕೆಗಳಿಗೆ ಭೂಮಿ ಬೇಕಿದ್ದರೆ ಈಗಲೂ ಕೊಡಲು ಅವಕಾಶಗಳಿವೆ. ಭೂ ಪರಿವರ್ತನೆ, ಕೆಐಎಡಿಬಿ ಮೂಲಕ ಉದ್ಯಮಿಗಳಿಗೆ ನೀಡಲಾಗುತ್ತಿದೆ. ಮನೆ ನಿರ್ಮಾಣಕ್ಕೆ ಗೃಹ ಮಂಡಳಿ, ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರಗಳ ಮೂಲಕ ಕೊಡುವ ಸಾಧ್ಯತೆಗಳಿದ್ದರೂ ತಿದ್ದುಪಡಿ ತರುತ್ತಿರುವುದು ಯಾರಿಗೆ ಲಾಭ ಮಾಡಿಕೊಡಲು ಎಂಬುದು ಎಂತಹವರಿಗೂ ಅರ್ಥವಾಗುತ್ತದೆ.

* ರೈತರು ಕೃಷಿ ತೊರೆದು ನಗರ ಸೇರುತ್ತಿದ್ದಾರೆ. ಹಾಕಿದ ಬಂಡವಾಳವೂ ಸಿಗುತ್ತಿಲ್ಲವೆಂದು ಯುವ ಜನರು ಬೇಸಾಯದಿಂದ ವಿಮೋಚನೆ ಬಯಸುತ್ತಿದ್ದಾರೆ? ಕೃಷಿ ಭೂಮಿ ಪಾಳು ಬಿಟ್ಟಿದ್ದಾರೆ. ಹೊಸಬರು ಕೃಷಿ ಮಾಡಬಾರದೆ?

ಸರ್ಕಾರ ಸಮಸ್ಯೆಗೆ ಪರಿಹಾರವನ್ನೇ ಹುಡುಕಿಲ್ಲ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವಂತೆ ಮಾಡಿದೆಯೆ? ಈಗಲೂ ಬೆಲೆ ಕುಸಿತದಿಂದ ಆಹಾರ ಉತ್ಪನ್ನಗಳನ್ನು ಬೀದಿಗೆ ಚೆಲ್ಲುತ್ತಿಲ್ಲವೆ? ಇದೆಲ್ಲ ಎಲ್ಲಿಂದ ಉತ್ಪಾದನೆ ಆಗಿದ್ದು. ಬೆಲೆ ಸಿಕ್ಕಿದ್ದರೆ ಬೆಳೆ ಬೆಳೆಯು
ತ್ತಿದ್ದರು, ಭೂಮಿ ಪಾಳು ಬಿಡುತ್ತಿರಲಿಲ್ಲ. ಈಗಲೂ

ಬೆಲೆ ಸಿಕ್ಕರೆ ಯಾರೂ ಪಾಳು ಬಿಡುವುದಿಲ್ಲ. ಬೆಲೆ ಸಿಗದೆ ಕೃಷಿಯಿಂದ ಲಾಭವಿಲ್ಲ ಎಂದು ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗಿದ್ದಾರೆ. ಕೃಷಿಯಲ್ಲಿಲಾಭವಿದೆ ಎಂದು ತೋರಿಸಿ ಕೊಟ್ಟರೆ ಮತ್ತೆ ತೊಡಗಿಸಿಕೊಳ್ಳುತ್ತಾರೆ. ಶ್ರೀಮಂತರ ಕೈಗೆ ಕೃಷಿ ಭೂಮಿ ಹೋಗಿ, ಅವರೂ ಉಳುಮೆ ಮಾಡದೆ ಪಾಳು ಬಿಟ್ಟರೆ ಅಹಾರ ಉತ್ಪಾದನೆ ತೀವ್ರ ಪ್ರಮಾಣದಲ್ಲಿ ಕುಸಿಯಲಿದೆ. ಮುಂದೆ ಅನ್ನಕ್ಕಾಗಿ ಕೈಚಾಚಿ ಬೇಡಬೇಕಾಗುತ್ತದೆ.

* ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗಲೂ ಕಾನೂನು ಬದಲಾವಣೆ ಮಾಡಲಿಲ್ಲವೆ?

ರೈತರಿಗೆ ಅನುಕೂಲ ಆಗುವಂತೆ ಬದಲಾವಣೆ ಮಾಡಿದ್ದು, ಜಮೀನು ಖರೀದಿಗೆ ಇದ್ದ ಆದಾಯದ ಮಿತಿಯನ್ನು ಹೆಚ್ಚಿಸಿದ್ದೇವೆ. ಆದರೆ ಯಾರು, ಎಷ್ಟು ಬೇಕಾದರೂ ಭೂಮಿ ಕೊಳ್ಳಲು ಅವಕಾಶ ನೀಡಿರಲಿಲ್ಲ. ಬಿಜೆಪಿ ಸರ್ಕಾರ ಕೃಷಿ ಕ್ಷೇತ್ರಕ್ಕೆ ಮಾರಕ
ವಾಗುವಂತಹ ಕಾಯ್ದೆ ಜಾರಿಗೆ ತರುತ್ತಿದೆ. ಇದರಿಂದ ಮುಂದೆ ರೈತರು ಬೀದಿಪಾಲಾಗಿ, ಕೊಡುವ ಕೈಗಳು ಬೇಡುವ ಕೈಗಳಾಗುತ್ತವೆ. ಕೃಷಿ ಕ್ಷೇತ್ರಕ್ಕೆ ಮರಣ ಶಾಸನವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು