ಮಂಗಳವಾರ, ಏಪ್ರಿಲ್ 20, 2021
29 °C

ಕುರುಬರ ಹೋರಾಟ ಯಾರ ವಿರುದ್ಧವೂ ಅಲ್ಲ: ಈಶ್ವರಪ್ಪ ಪ್ರತಿಪಾದನೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಕುರುಬ ಸಮುದಾಯವೂ ಸೇರಿದಂತೆ ರಾಜ್ಯದ ವಿವಿಧ ಸಮುದಾಯಗಳು ಮೀಸಲಾತಿಯಲ್ಲಿ ಬದಲಾವಣೆಗೆ ಒತ್ತಾಯಿಸಿ ಬೀದಿಗಿಳಿದಿವೆ. ಈ ಹೋರಾಟದ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕುರುಬ ಸಮುದಾಯದಲ್ಲಿ ಹೊಂದಿರುವ ವರ್ಚಸ್ಸು ಕುಂದಿಸುವುದು ಕೂಡ ಹೋರಾಟದ ಹಿಂದಿನ ಉದ್ದೇಶ ಎನ್ನಲಾಗುತ್ತಿದೆ. ಆದರೆ, ಹೋರಾಟ ಯಾರ ವಿರುದ್ಧವೂ ಅಲ್ಲ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ. 

***
*ಕುರುಬ ಸಮುದಾಯದ ಮೀಸಲಾತಿ ಹೋರಾಟದ ರೂವಾರಿಗಳು ಯಾರು?

ಕುರುಬ ಸಮುದಾಯದ ಇಬ್ಬರು ಶ್ರೀಗಳು ಹೋರಾಟದ ರೂವಾರಿಗಳು. ಅವರ ಮಾರ್ಗದರ್ಶನದಂತೆ ಕುರುಬ ಸಮಾಜದ ಎಸ್‌ಟಿ ಮೀಸಲಾತಿ ಹೋರಾಟ ಸಮಿತಿ ಪಾದಯಾತ್ರೆ, ಸಮಾವೇಶ ಸಂಘಟಿಸಿತ್ತು. ಸಮಿತಿಯಲ್ಲಿ ನಾನು, ಎಚ್‌.ಎಂ.ರೇವಣ್ಣ, ಎಚ್‌.ವಿಶ್ವನಾಥ್, ಬಂಡೆಪ್ಪ ಕಾಶೆಂಪುರ್, ವಿರೂಪಾಕ್ಷಪ್ಪ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರೂ ಇದ್ದೆವು.

*ಧರ್ಮನಿರಪೇಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಪ್ರಮಾಣವಚನ ಸ್ವೀಕರಿಸಿದ ಸಚಿವರೇ ಒಂದು ಜಾತಿಯ ಪರವಾದ ಹೋರಾಟದಲ್ಲಿ ಭಾಗವಹಿಸಬಹುದೇ?

ಧ್ವನಿ ಇಲ್ಲದ, ತುಳಿತಕ್ಕೆ ಒಳಗಾದ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಸಮಾಜಗಳಿಗೆ ಅಗತ್ಯ ಮೀಸಲಾತಿ ನೀಡಬೇಕು ಎನ್ನುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಸ್ವಾತಂತ್ರ್ಯಾನಂತರ ಸುದೀರ್ಘ ಅವಧಿ ಆಡಳಿತ ನಡೆಸಿದ ಕಾಂಗ್ರೆಸ್‌ ಶೋಷಿತ ಎಲ್ಲ ಸಮುದಾಯಗಳನ್ನು ಗುರುತಿಸುವಲ್ಲಿ ವಿಫಲವಾಗಿದೆ. ಅತ್ಯಂತ ಹಿಂದುಳಿದ ಕುರುಬರು, ಗಂಗಾಮತಸ್ಥರು, ಉಪ್ಪಾರರು, ಸವಿತಾ ಸಮಾಜ ಸೇರಿ ಕೆಲವು ಸಮುದಾಯಗಳಿಗೆ ನ್ಯಾಯ ದೊರೆತಿಲ್ಲ. ಕುರುಬರಷ್ಟೆ ಅಲ್ಲ, ಇಂತಹ ಸಮುದಾಯಗಳು ಕರೆದಾಗ ಅವರ ಅಹವಾಲು ಕೇಳಿದ್ದೇನೆ. ನನ್ನ ಸಮಾಜದ ಶ್ರೀಗಳು ಕರೆದಾಗಲೂ ಹೋಗಿರುವೆ. ನಾನು ಕುರುಬ ಸಮುದಾಯ ಮತ್ತು ಸರ್ಕಾರದ ಪ್ರತಿನಿಧಿಯಾಗಿ ಈ ಎರಡರ ನಡುವೆ ಕೊಂಡಿಯ ರೀತಿ ಕೆಲಸ ಮಾಡಿ ಕುರುಬ ಸಮುದಾಯದ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸುವ ಪ್ರಯತ್ನ ಮಾಡಿರುವೆ.

*ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ದೊಡ್ಡ ನಾಯಕ ಎಂದು ಹೇಳಲಾಗುತ್ತಿದೆ. ಈಗ, ಸಮುದಾಯದಲ್ಲಿ ಅವರ ವರ್ಚಸ್ಸು ಕುಗ್ಗಿಸುವ ತಂತ್ರದ ಭಾಗವಾಗಿ ಮೀಸಲಾತಿ ಹೋರಾಟ ನಡೆಸಲಾಗುತ್ತಿದೆ ಎಂಬ ವಾದವೂ ಕೇಳಿಬರುತ್ತಿದೆಯಲ್ಲ... 

ಕುರುಬರ ಹೋರಾಟ ಸಿದ್ದರಾಮಯ್ಯ ವಿರುದ್ಧವೂ ಅಲ್ಲ, ಪರವೂ ಅಲ್ಲ. ಸಮಾಜದ ಶ್ರೀಗಳ ಆಶಯಕ್ಕೆ ಮನ್ನಣೆ ಅಷ್ಟೆ. ಶ್ರೀಗಳು ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದ್ದರು. ಮೊದಲು ಅವರು ಭೇಟಿ ಕೊಟ್ಟಿದ್ದೇ ಸಿದ್ದರಾಮಯ್ಯ ಮನೆಗೆ. ಹೋರಾಟದಲ್ಲಿ ಭಾಗವಹಿಸುವುದಿಲ್ಲ. ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದರಂತೆ. ನಂತರ ನಮ್ಮ ಮನೆಯಲ್ಲೇ ವಿವಿಧ ಪಕ್ಷದಲ್ಲಿರುವ ಸಮುದಾಯದ ಮುಖಂಡರ ಸಭೆ ನಡೆಸಿದ್ದೆವು. ಮೀಸಲಾತಿ ಹೋರಾಟ ಯಾವುದೇ ಪಕ್ಷದ ಹೋರಾಟವಲ್ಲ. ಸಿದ್ದರಾಮಯ್ಯ ಬರದೇ ಇದ್ದರೆ ಏನೂ ಆಗುತ್ತಿರಲಿಲ್ಲ. ಆದರೆ, ವಿಭಾಗೀಯ ಸಮಾವೇಶಗಳ ಯಶಸ್ಸಿನ ನಂತರ ಸಿದ್ದರಾಮಯ್ಯ ಆಡಿದ ಮಾತುಗಳು ರಾಜಕೀಯ ಬಣ್ಣ ಪಡೆದವು. ಪಾದಯಾತ್ರೆ, ಸಮಾವೇಶಕ್ಕೆ ಆರ್‌ಎಸ್‌ಎಸ್‌ ದುಡ್ಡುಕೊಟ್ಟಿದೆ ಎಂದು ಟೀಕಿಸುವ ಮೂಲಕ ಶ್ರೀಗಳಿಗೆ, ಸಮಾಜಕ್ಕೆ ನೋವು ಮಾಡಿದರು.

*ಆರ್‌ಎಸ್‌ಎಸ್‌ ವಿರುದ್ಧ ಸಿದ್ದರಾಮಯ್ಯ ನೀಡಿದ ಹೇಳಿಕೆಯಲ್ಲಿ ಯಾವುದೇ ಹುರುಳು ಇಲ್ಲವೇ?

ಆರ್‌ಎಸ್‌ಎಸ್ ಹಣ ನೀಡಿಲ್ಲ. ಹೋರಾಟದಲ್ಲಿ ಭಾಗಿಯಾದ ಶ್ರೀಗಳು, ಸಮಾಜದ ಜನರನ್ನು ಟೀಕೆ ಮಾಡಲು ಸಾಧ್ಯವಾಗದೆ ಆರ್‌ಎಸ್‌ಎಸ್‌ ಹಾಗೂ ನನ್ನನ್ನು ಟೀಕೆ ಮಾಡುವ ಮೂಲಕ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು.

*ಕುಲಶಾಸ್ತ್ರೀಯ ಅಧ್ಯಯನದ ವರದಿ ಬರುವವರೆಗೆ ಕಾಯಬಹುದಿತ್ತಲ್ಲವೇ?

ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರುವ ಅರ್ಹತೆ ಸಮುದಾಯಕ್ಕೆ ಇದೆ ಎನ್ನುವ ವಿಷಯ ಬಹುತೇಕರಿಗೆ ತಿಳಿದಿಲ್ಲ. ಅಧ್ಯಯನದ ವರದಿ ಬರುವಷ್ಟರಲ್ಲಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವುದಷ್ಟೇ ಶ್ರೀಗಳ ನಿಲುವಾಗಿತ್ತು. ಅದಕ್ಕಾಗಿ ಪಾದಯಾತ್ರೆ ಹಮ್ಮಿಕೊಂಡರು. ಇತರೆ ಸಮಾಜಗಳಂತೆ ಅವರು ಮೀಸಲಾತಿ ನಿರ್ಧಾರಕ್ಕೆ ಗಡುವು ನೀಡಲಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ನಾಲ್ಕು ಜಿಲ್ಲೆಗಳ ಕುರುಬರಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ನೀಡಲು ಮಾಡಿದ್ದ ಶಿಫಾರಸು ತಿರಸ್ಕೃತವಾಗಿದೆ. ಸರಿಯಾದ ದಾಖಲೆ ಸಲ್ಲಿಸಿದ್ದರೆ ಇಂತಹ ಯಡವಟ್ಟು ಆಗುತ್ತಿರಲಿಲ್ಲ. ಮುಂದೆ ಜಾಗೃತವಾಗಿ ಹೆಜ್ಜೆ ಇಡಲು ಈ ಹೋರಾಟ ಪೂರ್ವ ಸಿದ್ಧತೆ ಅಷ್ಟೆ.

*ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಈಗ ಎಸ್‌ಟಿ ಸೌಲಭ್ಯ ಪಡೆಯುತ್ತಿರುವ ನಾಯಕ, ವಾಲ್ಮೀಕಿ ಮತ್ತಿತರ ಸಮುದಾಯಗಳ ಮೀಸಲಾತಿ ಸೌಲಭ್ಯ ಏರುಪೇರಾಗುವುದಿಲ್ಲವೇ?

ಇಲ್ಲ. ಕುರುಬರೂ ಸೇರಿ ಯಾವ ಸಮುದಾಯವನ್ನು ಸೇರಿಸಿದರೂ ಅವರು ಈಗ ಪಡೆಯುತ್ತಿರುವ ಮೀಸಲಾತಿ ಪ್ರಮಾಣದ ಶೇಕಡಾವಾರು ವರ್ಗಾವಣೆಯಾಗುತ್ತದೆ. ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣದಲ್ಲೂ ಹೆಚ್ಚಳವಾಗುತ್ತದೆ.

*ಎಲ್ಲ ಸಮುದಾಯದ ಸ್ವಾಮಿಗಳೂ ಬೀದಿಗಿಳಿದಿದ್ದಾರಲ್ಲ...

ಅವರು ಬೀದಿಗಿಳಿದ ಕಾರಣಕ್ಕೆ ಜನರಿಗೆ ನಂಬಿಕೆ ಬಂದಿದೆ. ಹಿಂದೆ ಆಡಳಿತ ನಡೆಸಿದ ಜನಪ್ರತಿನಿಧಿಗಳು ಬೇಡಿಕೆ ಈಡೇರಿಸದ ಕಾರಣ ಮೀಸಲಾತಿ ಸೌಲಭ್ಯ ಪಡೆಯುವ ವಿಶ್ವಾಸವೇ ಇಲ್ಲವಾಗಿತ್ತು. ಸ್ವಾಮೀಜಿಗಳು ನೇತೃತ್ವ ವಹಿಸಿರುವುದು ಜನರಲ್ಲಿ ಹೊಸ ಭರವಸೆ ಮೂಡಿಸಿದೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು