ಮಂಗಳವಾರ, ಜೂನ್ 22, 2021
28 °C
‘ಗ್ರಾಹಕರನ್ನು ನೆಮ್ಮದಿಯಾಗಿ ಬದುಕಲು ಬಿಡಿ ಪ್ಲೀಸ್’

ಆಯ್ಕೆಗಳು ಹೆಚ್ಚಾದಷ್ಟೂ ನೆಮ್ಮದಿ ಕಡಿಮೆಯಾಗುತ್ತೆ ಅಂತಾರೆ ಈ ಮನಃಶಾಸ್ತ್ರಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಒಂದು ಹೋಟೆಲ್‌ಗೆ ಇಡ್ಲಿ ತಿನ್ನಲೆಂದು ಹೋಗಿದ್ದೀರಿ ಎಂದಿಟ್ಟುಕೊಳ್ಳಿ. ಮಲ್ಲಿಗೆ ಇಡ್ಲಿ, ಸಾದಾ ಇಡ್ಲಿ, ತಟ್ಟೆ ಇಡ್ಲಿ, ಬೆಣ್ಣೆ ಸವರಿದ ಇಡ್ಲಿ, ಇಡ್ಲಿ ಸಾಂಬಾರ್, ಇಡ್ಲಿ ಚಟ್ನಿ... ಹೀಗೆ ವೇಟರ್ ಒಂದಿಷ್ಟು ಆಯ್ಕೆಗಳನ್ನು ಮುಂದಿಟ್ಟಾಗ ನೀವೇನು ಮಾಡ್ತೀರಿ? ಮನೆಯಿಂದ ಹೊರಡುವಾಗ ಮಾಡಿಕೊಂಡಿದ್ದ ‘ತಿಂಡಿ ತಿನ್ನಬೇಕು’ ಎನ್ನುವ ನಿರ್ಧಾರ ಮತ್ತು ಅದನ್ನು ಪ್ರೇರೇರಿಸಿದ ರುಚಿಯ ಆಸೆಯನ್ನು ಈ ಆಯ್ಕೆಗಳು ಹಾಳುಮಾಡಿತು ಎನಿಸುತ್ತದೆಯೇ?

‘ಆಯ್ಕೆ ಜಾಸ್ತಿಯಾದಷ್ಟೂ ಅನುಭವಿಸುವ ಖುಷಿಯ ಪ್ರಮಾಣ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಜರ್ಮನಿಯ ಮನಃಶಾಸ್ತ್ರಜ್ಞೆ ಡಾ.ಈವಾ ಕ್ರಕೌ. ತಮ್ಮ ಸಿದ್ಧಾಂತವನ್ನು ಅವರು ಅ.9ರಂದು ‘ಸೈಕಾಲಜಿ ಟುಡೆ’ ಜಾಲತಾಣಕ್ಕೆ ಬರೆದಿರುವ ಲೇಖನದಲ್ಲಿ ಉದಾಹರಣೆ ಸಮೇತ ನಿರೂಪಿಸಿದ್ದಾರೆ. ‘ಆಯ್ಕೆಗಳು ಹೆಚ್ಚಾದಷ್ಟೂ ಗೊಂದಲ ಮತ್ತು ಅಸಮಾಧಾನವೂ ಹೆಚ್ಚಾಗುತ್ತದೆ. ಹಲವು ಆಯ್ಕೆಗಳಿದ್ದಾಗ, ನಾವು ಯಾವುದಾದರು ಒಂದನ್ನು ಮಾತ್ರ ಆರಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತೇವೆ. ಯಾವುದು ನಮ್ಮ ಅನುಭವಕ್ಕೆ ದಕ್ಕಲಿಲ್ಲವೋ ಅದು ನಮ್ಮನ್ನು ಕಾಡತೊಡಗುತ್ತದೆ’ ಎನ್ನುವುದು ಅವರು ಮಂಡಿಸುವ ವಾದ.

ಲೇಖನದಲ್ಲಿ ಅವರು ಸ್ಟಾರ್‌ಬಕ್ ಕಂಪನಿಯು ಗ್ರಾಹಕರ ಮುಂದೆ ಇರಿಸಿರುವ 80 ಸಾವಿರ ವೈವಿಧ್ಯಮಯ ಕಾಫಿ ಆಯ್ಕೆಗಳನ್ನು ಪ್ರಸ್ತಾಪಿಸಿದ್ದಾರೆ. ಲೇಖನದ ಮುಖ್ಯ ಅಂಶಗಳು ಇಲ್ಲಿವೆ...

ಕಾಫಿ ಕುಡಿಯುವ ಆಸೆಯಿಂದ ನೀವು ಒಂದು ಕಾಫಿಶಾಪ್‌ಗೆ ಹೋಗಿದ್ದೀರಿ. ಅಲ್ಲಿ ನಿಮಗೆ ಎದುರಾಗುವ ಮೊದಲ ಪ್ರಶ್ನೆ, ‘ಯಾವ ಕಾಫಿ ಬೇಕು?’ ಮೇಲ್ನೋಟಕ್ಕೆ ಅತ್ಯಂತ ಸರಳವಾಗಿ ಕಾಣಿಸುವ ಈ ಪ್ರಶ್ನೆಗೆ ಉತ್ತರ ಹೇಳುವುದು ಅಂತಿರಲಿ, ಕಂಡುಕೊಳ್ಳುವುದು ಕೂಡಾ ತುಂಬಾ ಕಷ್ಟ. ಯಾಕೆ ಕಷ್ಟ ಅಂತ ವಿವರಿಸ್ತೀನಿ ನೋಡಿ. ‘ಯಾವ ಕಾಫಿ ಬೇಕು?’ ಪ್ರಶ್ನೆಗೆ ಉತ್ತರಿಸಲು ಹೊರಟಾಗ ನಿಮಗೆದುರಾಗುವ ಉಪಪ್ರಶ್ನೆಗಳು ಹೀಗಿರುತ್ತವೆ.

ಯಾವ ಬೀಜದ ಪುಡಿಯಿಂದ ತಯಾರಿಸಿದ ಕಾಫಿ ಬೇಕು? (ಅರೇಬಿಕಾ ಅಥವಾ ರೊಬಸ್ಟಾ) ಯಾವ ದೇಶದಲ್ಲಿ ಬೆಳೆದ ಬೀಜದ ಪುಡಿಯಿಂದ ತಯಾರಿಸಿದ ಕಾಫಿ ಬೇಕು? (ಬ್ರಿಜಿಲ್, ಕಾಂಬೊಡಿಯಾ, ಘಾನಾ ಅಥವಾ ಭಾರತ) ಈ ಎರಡೂ ಪ್ರಶ್ನೆಗೆ ಉತ್ತರ ಕಂಡುಕೊಂಡ ನಂತರ ಇನ್ನಷ್ಟು ಪ್ರಶ್ನೆಗಳು ನಿಮಗೆ ಎದುರಾಗಲಿವೆ. ರಿಸ್ಟ್ರೆಟ್ಟೊ, ಎಕ್ಸ್‌ಪ್ರೆಸ್ಸೊ, ಲಂಗೋ, ಕೆಫೆ ಕ್ರೆಮಾ, ಮಚಾಟೊ, ಕೆಪೆಚಿನೊ, ಫ್ಲಾಟ್ ವೈಟ್, ಕೆಫೆ ಉ ಲಾಟ್, ಟರ್ಕಿಷ್ ಕಾಫಿ, ಅಮೆರಿಕಾನೊ, ಲಾಂಗ್‌ಬ್ಲಾಕ್, ಕೆಫೆ ಲಾಟ್ಟೆ, ಫ್ರಾಪ್ಪೆ, ಐರಿಷ್ ಕಾಫಿ... ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದಾದ ನಂತರ ನಿಮ್ಮೆದುರು ಹಾಲಿನ ಆಯ್ಕೆ ಬರುತ್ತದೆ. ಕೊಬ್ಬು ಸಹಿತ, ಕೊಬ್ಬು ರಹಿತ, ಲ್ಯಾಕ್ಟೋ ಬ್ಯಾಕ್ಟೀರಿಯಾ ಮುಕ್ತ, ಸೋಯಾಹಾಲು... ಹೀಗೆ ಈ ಪಟ್ಟಿಯನ್ನು ಅರ್ಥ ಮಾಡಿಕೊಂಡ ನಂತರವೂ ಕಾಫಿ ಕುಡಿಯುವ ಆಸೆ ನಿಮ್ಮಲ್ಲಿ ಉಳಿದುಕೊಂಡಿದ್ದರೆ ನೀವು ಕಾಫಿಯೊಂದನ್ನು ಆರ್ಡರ್ ಮಾಡಬಹುದು!

ಈ ಸ್ಟಾರ್‌ಬಕ್ಸ್ ಕಂಪನಿ ‘ನಮ್ಮಲ್ಲಿ 80 ಸಾವಿರ ವಿಧದ ಪಾನೀಯ ಮಿಶ್ರಣಗಳು ಸಿಗುತ್ತವೆ’ ಎಂದು ಹೆಮ್ಮೆಯಿಂದ ಜಾಹೀರಾತು ನೀಡಿದೆ. ಇದನ್ನು ನಾವು ಸಂಭ್ರಮಿಸಬೇಕೆ? ನನಗೇನೋ ಆಯ್ಕೆಗಳು ಹೆಚ್ಚಾದಷ್ಟೂ ಗೊಂದಲಗಳು ಮತ್ತು ಅಸಮಾಧಾನಗಳು ಹೆಚ್ಚಾಗುತ್ತವೆ ಎನಿಸುತ್ತದೆ. ನೆಮ್ಮದಿಯಂತೂ ಬಲುದೂರ ಓಡುತ್ತದೆ. ಹೇಗೆ ಗೊತ್ತೆ?

ನಿರ್ಧಾರ ತೆಗೆದುಕೊಳ್ಳುವ ಸಂಕಷ್ಟ

80 ಸಾವಿರಕ್ಕೂ ಹೆಚ್ಚು ಪಾನೀಯಗಳ ಆಯ್ಕೆ ನೀಡುವುದರೊಂದಿಗೆ ಸ್ಟಾರ್‌ಬಕ್ಸ್‌ ನಮ್ಮ ಬದುಕನ್ನು ದುಸ್ತರಗೊಳಿಸಿದೆ. ‘ನನ್ನ ಮೆಚ್ಚಿನ ಕಾಫಿ ಯಾವುದು ಆಗಿರಬಹುದು’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದರಲ್ಲಿಯೇ ನಮ್ಮ ಆಯುಸ್ಸು ಮುಗಿದು ಹೋಗುತ್ತದೆ. ಪ್ರತಿದಿನ ಸ್ಟಾರ್‌ಬಕ್ಸ್‌ನ ಎರಡು ಬಗೆಯ ಕಾಫಿ ರುಚಿನೋಡಲು ನೀವು ಮುಂದಾಗುತ್ತೀರಿ ಎಂದರೂ ಸ್ಟಾರ್‌ಬಕ್ಸ್ ಒದಗಿಸುವ ಆಯ್ಕೆಗಳನ್ನು ಅನುಭವಿಸಲು ನಿಮಗೆ 109 ವರ್ಷಗಳ ಆಯುಸ್ಸು ಬೇಕು. ಆಯ್ಕೆಗಳನ್ನು ಅರಿತುಕೊಳ್ಳುವ ಮೊದಲೇ ನಾನು ಸತ್ತುಹೋಗಿರುತ್ತೇನೆ ಎಂದು ನನಗೆ ಅನಿಸುತ್ತೆ. ನನ್ನಂಥವಳ ಎದುರು ಇಷ್ಟೆಲ್ಲಾ ಆಯ್ಕೆ ಇಟ್ಟುಬಿಟ್ಟರೆ ‘ಅಯ್ಯೋ, ನಿಮ್ಮ ಕಾಫಿಯ ಸಹವಾಸವೇ ಬೇಡ. ಒಂದು ಲೋಟ ನೀರು ಕೊಡಿ ಸಾಕು’ ಎಂದು ಸುಮ್ಮನಾಗಿಬಿಡುತ್ತೇನೆ.

ಆಯ್ಕೆಗಳು ಜಾಸ್ತಿಯಾದಷ್ಟೂ ಅಸಮಾಧಾನವೂ ಹೆಚ್ಚು

‘ನಿಮ್ಮೆದುರು ಇರುವ ಆಯ್ಕೆಗಳು ಹೆಚ್ಚಾದಷ್ಟೂ, ನೀವು ತೆಗೆದುಕೊಳ್ಳುವ ಅಂತಿಮ ನಿರ್ಧಾರದ ಬಗ್ಗೆ ನಿಮಗೆ ತೃಪ್ತಿ ಕಡಿಮೆಯಾಗುತ್ತದೆ. ಆಯ್ಕೆಗಳು ಕಡಿಮೆಯಿದ್ದಾಗ ತೃಪ್ತಿ ಹೆಚ್ಚುತ್ತದೆ’ ಎಂದು ಹಲವು ಸಂಶೋಧನೆಗಳು ಹೇಳಿವೆ.

ನನ್ನ ಮಾತು ವಿಚಿತ್ರ ಎನಿಸಿತೆ? ಸುಮ್ಮನೆ ಒಂದು ಕ್ಷಣ ಯೋಚಿಸಿ. ಸ್ಟಾರ್‌ಬಕ್ಸ್‌ ಕೆಫೆಯಲ್ಲಿ ಕೊಟ್ಟ ಮೆನು ಓದಲು 10 ನಿಮಿಷ ವ್ಯಯಿಸಿದ ನಂತರ ಕೊಬ್ಬುರಹಿತ ಹಾಲಿನಿಂದ ತಯಾರಾದ ಐಸ್ಡ್‌ ಕೋಲ್ಡ್ ಫೋಮ್ ಕೆಪೆಚಿನೊ ತೆಗೆದುಕೊಂಡಿರಿ ಎಂದಿಟ್ಟುಕೊಳ್ಳೋಣ. ಹೊರಗಿನ ಬಿಸಿಲಿಗೆ ನಿಮ್ಮ ಕೋಲ್ಡ್‌ ಕಾಫಿ ಆಪ್ಯಾಯಮಾನ ಎನಿಸಬಹುದು. ಆದರೆ ಇದ್ದಕ್ಕಿದ್ದಂತೆ ಬೇಡದ ಆಲೋಚನೆಗಳು ನಿಮ್ಮ ತಲೆಯಲ್ಲಿ ಬಿರುಗಾಳಿ ಎಬ್ಬಿಸುತ್ತವೆ.

‘ಅಯ್ಯೋ 80 ಸಾವಿರ ಆಯ್ಕೆಗಳಲ್ಲಿ ನಾನು ಇದನ್ನೇ ಏಕೆ ಆರಿಸಿಕೊಂಡೆ? ಇದಕ್ಕಿಂತಲೂ ಉತ್ತಮವಾಗಿದ್ದ ಇನ್ನಷ್ಟು ಕಾಫಿಗಳು ಇತ್ತಲ್ಲವೇ? ನಿನ್ನೆ ತಗೊಂಡಿದ್ದ ವೆನಿಲ್ಲಾ ಫ್ಲೇವರ್‌ನ ತೆಂಗಿನಹಾಲಿನ ಕಾಫಿಗಿಂತ ಇದು ಚೆನ್ನಾಗಿದೆಯೇ? ನಿನ್ನೆ ಕುಡಿದಿದ್ದ ವೆನಿಲ್ಲಾ ಕಾಫಿಯಲ್ಲಿ ತೆಂಗಿನಹಾಲಿನ ಸ್ವಾದ ಅನುಭವಕ್ಕೆ ಬರಲಿಲ್ಲವಲ್ಲಾ. ಛೇ, ಇನ್ನೊಮ್ಮೆ ಅದನ್ನೆ ತೆಗೆದುಕೊಳ್ಳಬೇಕಿತ್ತು’. ಇಷ್ಟೆಲ್ಲಾ ಯೋಚಿಸುತ್ತಾ ಕುಡಿದ ಕೋಲ್ಡ್ ಕಾಫಿ ಎಂದಾದರೂ ತೃಪ್ತಿಕೊಟ್ಟೀತೆ?

ನಮ್ಮನ್ನು ನಾವೇ ಬೈದುಕೊಳ್ತೀವಿ

ಯಾವಾಗ ನಮ್ಮ ಆಯ್ಕೆ ತಪ್ಪಾಗಿರಬಹುದು ಎನಿಸುತ್ತದೋ ಅದೇ ಕ್ಷಣದಿಂದ ಅಸಮಾಧಾನವೂ ಆರಂಭವಾಗಿಬಿಡುತ್ತೆ. ‘ಕೈಯಂಚಿನಲ್ಲಿ ಅತ್ಯುತ್ತಮ ಆಯ್ಕೆಗಳಿದ್ದಾಗ ಕಡಿಮೆ ಗುಣಮಟ್ಟದ ಆಯ್ಕೆ ಮಾಡಿಕೊಂಡೆ ನೀನು’ ಎಂದು ಮನಸ್ಸು ಚುಚ್ಚಲು ಆರಂಭಿಸುತ್ತೆ. ಆಗ ಖಿನ್ನತೆಗೆ ಜಾರುವ ಮನಸ್ಸು ತನ್ನನ್ನು ತಾನೇ ಬೈದುಕೊಳ್ಳಲು ಶುರುಮಾಡುತ್ತೆ.

ವಿಪರೀತ ಆಯ್ಕೆಗಳು ನಮ್ಮ ನೆಮ್ಮದಿ ಕಸಿದುಕೊಳ್ಳುತ್ತಿವೆ ಎಂದು ನಾನು ಏಕೆ ಹೇಳಿದೆ ಎಂಬುದು ಈಗಲಾದರೂ ನಿಮಗೆ ಅರ್ಥವಾಯಿತೆ? ಬದುಕಿನಲ್ಲಿ ಆಯ್ಕೆಗಳೇ ಇರಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಅದು ನಮ್ಮಂಥ ಗ್ರಾಹಕರ ಸಂತಸ ಕಸಿಯುವಷ್ಟು ಇರಬಾರದು ಎಂಬುದಷ್ಟೇ ನನ್ನ ವಾದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು