ವ್ಯಭಿಚಾರವು ಅಪರಾಧವಲ್ಲ... ಮುಂದೇನು?

7
ಪರಸ್ಪರರ ವ್ಯಭಿಚಾರದ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲು ಪತಿ– ಪತ್ನಿಯರಿಗೆ ಸಮಾನ ಅವಕಾಶ ಇರಬೇಕು

ವ್ಯಭಿಚಾರವು ಅಪರಾಧವಲ್ಲ... ಮುಂದೇನು?

Published:
Updated:
Deccan Herald

‘ವ್ಯಭಿಚಾರವು ಅಪರಾಧವಲ್ಲ, ಸಲಿಂಗಕಾಮವು ಅಪರಾಧವಲ್ಲ ಮತ್ತು ವ್ಯಕ್ತಿಯ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಒಂದಾದ ಮೇಲೊಂದರಂತೆ ಕಳೆದ ಒಂದು ತಿಂಗಳಲ್ಲಿ ನೀಡಿದ ತೀರ್ಪುಗಳು ಸಂಪ್ರದಾಯವಾದಿಗಳಲ್ಲಿ ತಳಮಳ ಹುಟ್ಟಿಸಿವೆ. ಈ ವಿಷಯಗಳಲ್ಲಿ ಮಾತ್ರ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸನಾತನಿಗಳು ಸಹಮತ ಹೊಂದಿದ್ದಾರೆ!  ಚುನಾವಣೆಗಳು ಸಮೀಪಿಸುತ್ತಿರುವ ಕಾಲದಲ್ಲಿ ಪ್ರಕಟವಾದ ಈ ತೀರ್ಪುಗಳು, ಹಿಂದುತ್ವ ವಾದವನ್ನು ಹೆಚ್ಚು ಬೆಂಬಲಿಸುವ ಇಂದಿನ ಕೇಂದ್ರ ಸರ್ಕಾರವನ್ನು ತೀವ್ರ ಪೇಚಿಗೆ ಸಿಲುಕಿಸಿವೆ!

ಆದಾಗ್ಯೂ, ವೇಗವಾಗಿ ಬದಲಾಗುತ್ತಿರುವ ಜಾಗತಿಕ ವಿಚಾರಧಾರೆ ಹಾಗೂ ಹೆಚ್ಚೆಚ್ಚು ಮಹತ್ವ ಪಡೆಯುತ್ತಿರುವ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಸಮಾನತೆ ಮತ್ತು ವೈಜ್ಞಾನಿಕ ಚಿಂತನೆಗಳ ಎದುರು ಸಾಂಪ್ರದಾಯಿಕವಾದಗಳು ತಮ್ಮ ಧ್ವನಿಯನ್ನು, ಶಕ್ತಿಯನ್ನು, ಹಿಂದಿನ ಕ್ರೌರ್ಯಗಳನ್ನು ಕಳೆದುಕೊಳ್ಳುತ್ತಿವೆ. ಈ ಎಲ್ಲ ದೃಷ್ಟಿಕೋನಗಳಿಂದಲೂ ಸುಪ್ರೀಂ ಕೋರ್ಟಿನ ಈ ಮೂರೂ ತೀರ್ಪುಗಳು ಪ್ರಶ್ನಾತೀತವಾಗಿವೆ ಎಂಬುದು ಸ್ಪಷ್ಟ.

ಪ್ರಗತಿಪರ ವಿಚಾರಧಾರೆಯನ್ನು ಪ್ರತಿಬಿಂಬಿಸುವ ಈ ತೀರ್ಪುಗಳು ನಮ್ಮ ಈಗಿರುವ ಕೌಟುಂಬಿಕ, ಧಾರ್ಮಿಕ ಮತ್ತು ಸಾಂಪ್ರದಾಯಿಕ ನೈತಿಕತೆ ಮತ್ತು ದೈನಂದಿನ ವೈಯಕ್ತಿಕ ನಡೆನುಡಿಯ ಮೇಲೆ ಆಳವಾದ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ಅಲ್ಲಗಳೆಯಲಾಗದು. ಅವುಗಳ ವಿಶ್ಲೇಷಣೆ ಈ ಕ್ಷಣದಲ್ಲಿ ಅನವಶ್ಯಕ. ಆದಾಗ್ಯೂ ವ್ಯಭಿಚಾರಕ್ಕೆ ಸಂಬಂಧಿಸಿದ ತೀರ್ಪಿನ ಕೆಲವು ಅಂಶಗಳು ಚರ್ಚಾರ್ಹವಾಗಿವೆ.

ವ್ಯಭಿಚಾರವನ್ನು ಶಿಕ್ಷಾರ್ಹ ಅಪರಾಧವಲ್ಲ ಎಂದು ಪರಿಗಣಿಸುವ ಬಗ್ಗೆ ಈವರೆಗೆ ನಡೆಯುತ್ತಿದ್ದ ಚರ್ಚೆಗೆ ಈಗ ತೆರೆಬಿದ್ದಿದೆ. ಆದರೆ ಅಷ್ಟು ಸುಲಭವಾಗಿ ಮುಗಿಯುವ ಸಮಸ್ಯೆ ಇದಲ್ಲ! ಭಾರತ ಸರ್ಕಾರವು ಸುಪ್ರೀಂ ಕೋರ್ಟ್‌ ಮುಂದೆ ಮಂಡಿಸಿದ ವಾದದಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 497 ಅನ್ನು ರದ್ದುಗೊಳಿಸಿದರೆ ಕೌಟುಂಬಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ ಎಂಬ ಕಾರಣ ಮುಂದಿಟ್ಟು ಅದನ್ನು ರದ್ದು ಮಾಡಬಾರದೆಂಬ ನಿಲುವು ತಾಳಿತ್ತು. ಆ ವಾದವನ್ನು ನ್ಯಾಯಾಲಯವು ತಳ್ಳಿಹಾಕಿದೆ. ಅದಕ್ಕೆ ನ್ಯಾಯಾಲಯವು ನೀಡಿದ ಕಾರಣಗಳನ್ನು ನೋಡಿದರೆ ಸರ್ಕಾರಕ್ಕೆ ಮತ್ತು ಸಂಸತ್ತಿಗೆ ಈ ವಿಷಯದಲ್ಲಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಲು ಅಥವಾ ಹೊಸ ಕಾನೂನು ರೂಪಿಸಲು ಅವಕಾಶ ವಿದೆ ಎಂದು ಕಂಡುಬರುತ್ತದೆ. ಆ ಕಾರಣಗಳನ್ನೊಮ್ಮೆ ನೋಡೋಣ.

ಮೊದಲನೆಯ ಕಾರಣ: ಗಂಡನ ವ್ಯಭಿಚಾರದ ವಿರುದ್ಧ ದಾವೆ ಹೂಡುವ ಅಥವಾ ಅಪರಾಧ ಪ್ರಕರಣ ದಾಖಲಿಸುವ ಹಕ್ಕು ಹೆಂಡತಿಗೆ ಇಲ್ಲ ಎಂದು ಐಪಿಸಿ ಸೆಕ್ಷನ್‌ 497 ಹೇಳುತ್ತಿತ್ತು. ಆದ್ದರಿಂದ ಅದು ಗಂಡು- ಹೆಣ್ಣಿನ ನಡುವೆ ಇರಬೇಕಾದ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಅದಕ್ಕಾಗಿ ಅದು ಸಂವಿಧಾನಬಾಹಿರ. ಅದು ಸತ್ಯ. ಆದರೆ  ಸೆಕ್ಷನ್‌ 497ಕ್ಕೆ ಪರ್ಯಾಯ ನಿಯಮವನ್ನು ರೂಪಿಸುವ ಮೂಲಕ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕನ್ನು ನಮ್ಮ ಸಂಸತ್ತು ನೀಡಬಹುದಲ್ಲವೇ? ಅದಕ್ಕೆ ಅಷ್ಟೊಂದು ಬಲವಾದ ವಿರೋಧವೂ ಬರಲಿಕ್ಕಿಲ್ಲ!

ಎರಡನೆಯ ಕಾರಣ: ಅವಿವಾಹಿತ ಮಹಿಳೆ ಅಥವಾ ವಿಧವೆಯರೊಂದಿಗಿನ ವ್ಯಭಿಚಾರದ ಬಗ್ಗೆ ಐಪಿಸಿ ಸೆಕ್ಷನ್‌ 497 ಏನನ್ನೂ ಹೇಳುವುದಿಲ್ಲ. ಇಂಥ ಪ್ರಕರಣಗಳಲ್ಲಿ ಅವಿವಾಹಿತ ಮಹಿಳೆ ಅಥವಾ ವಿಧವೆಯರು ಸಿಲುಕುವುದೇ ಹೆಚ್ಚು. ಇದಕ್ಕೆ ವಿಶೇಷವಾಗಿ ಗಂಡಸರು ಕಾರಣವಾಗಿರುತ್ತಾರೆ. ಹಾಗಾಗಿ ಇಂತಹ ಮಹಿಳೆಯರ ಶೋಷಣೆಯನ್ನೂ ನಿವಾರಿಸಬೇಕಾಗಿದೆ. ಹೊಸ ನಿಯಮ ರೂಪಿಸುವಾಗ ನಮ್ಮ ಸಂಸತ್ತು ಇದನ್ನೂ ಪರಿಗಣಿಸಬಹುದು.

ಮೂರನೆಯ ಕಾರಣ: ಮದುವೆಯಾದ ಮಹಿಳೆಯನ್ನು ಗಂಡನ ಖಾಸಗಿ ಆಸ್ತಿಯೆಂದು ಐಪಿಸಿ ಸೆಕ್ಷನ್‌ 497 ಪರಿಗಣಿಸುತ್ತದೆ. ಅದು ತಪ್ಪು. ಆದ್ದರಿಂದ ಈ ಸೆಕ್ಷನ್‌ ಅನ್ನು ರದ್ದುಪಡಿಸಲಾಗಿದೆ. ಹಾಗೆಂದು ಹೆಣ್ಣು, ಗಂಡಿನ ಆಸ್ತಿಯೆಂದು ಈ ಸೆಕ್ಷನ್‌ನಲ್ಲಿ ನಿರ್ದಿಷ್ಟವಾಗಿ ಹೇಳಿಲ್ಲ. ಬೇರೊಬ್ಬ ಗಂಡಸು ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ ಅದನ್ನು ‘ಅಕ್ರಮ ಪ್ರವೇಶ’ ಎಂದು ಪರಿಗಣಿಸಿ ಅಂತಹ ಗಂಡಸಿನ ವಿರುದ್ಧ ಗಂಡನು ದಾವೆ ಹೂಡಲು ಅವಕಾಶವಿದೆ. ಅಕ್ರಮ ಪ್ರವೇಶವು ಜಡ ಆಸ್ತಿಗೆ ಸಂಬಂಧಿಸುವುದರಿಂದ ಹೆಂಡತಿಯು ಗಂಡನ ಜಡ ಆಸ್ತಿಯೆಂದು ತಿಳಿಯಲಾಗುತ್ತದೆ.

‘ಹೆಂಡತಿಯು ಗಂಡನ ಆಸ್ತಿ’ ಎಂದು ಭಾವಿಸುವುದು ಸರಳವಾದ ಅಂಶ ಏನಲ್ಲ. ಪಿತೃಪ್ರಧಾನ ಕೌಟುಂಬಿಕ ವ್ಯವಸ್ಥೆಗಳಿರುವ ಬಹುತೇಕ ದೇಶಗಳಲ್ಲಿ ವಿವಾಹಿತ ಮಹಿಳೆಯು ಆಕೆಯ ಗಂಡನ ಸ್ವತ್ತು ಎಂದು ತಿಳಿಯುವುದು ಸರ್ವೇಸಾಮಾನ್ಯ. ಕೆಲವು ಧರ್ಮಗ್ರಂಥಗಳಲ್ಲೂ ಈ ರೀತಿಯ ನಿಯಮಗಳಿವೆ. ವಿವಾಹಿತ ಮಹಿಳೆಯು ವ್ಯಭಿಚಾರಿಯಾದರೆ ಆಕೆಗೆ ದೈಹಿಕ ಶಿಕ್ಷೆ ನೀಡುವ ಅಧಿಕಾರವೂ ಗಂಡನಿಗೆ ಇದೆ ಎಂದು ಈ ಧಾರ್ಮಿಕ ಸಂಪ್ರದಾಯಗಳು ಹೇಳುತ್ತವೆ. ಏಷ್ಯಾ ಹಾಗೂ ಆಫ್ರಿಕಾದ ಇಸ್ಲಾಮಿಕ್‌ ದೇಶಗಳಲ್ಲಿ ಹಾಗೂ ಹಿಂದೂಗಳಲ್ಲಿ ಇಂತಹ ಸಾಂಪ್ರದಾಯಿಕ ಕಟ್ಟುಕಟ್ಟಳೆಗಳಿವೆ. ಹಿಂದೆ ಯುರೋಪ್‌ ಹಾಗೂ ಅಮೆರಿಕದಲ್ಲಿಯೂ ಇದೇ ರೀತಿಯ ನಿಯಮಗಳಿದ್ದವು. ಅದೇ ಮನೋಭಾವದ ಸಾಮಾಜಿಕ ಹಿನ್ನೆಲೆಯಲ್ಲಿಯೇ ಐಪಿಸಿ ಸೆಕ್ಷನ್‌ 497 ರೂಪುಗೊಂಡಿತ್ತು ಎಂಬುದನ್ನು ನೆನಪಿಡಬೇಕು.

ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿ ನಾಗರಿಕ ಸಂಹಿತೆ ಪರಿಣಾಮದಿಂದ ಮದುವೆಗೆ ಸಂಬಂಧಿಸಿದ ಹಿಂದಿನ ಬಹುತೇಕ ನಿರ್ಬಂಧಗಳು ಈಗ ಉಳಿದಿಲ್ಲ. ಅಲ್ಲಿ ಮಹಿಳೆಗೆ ಹೆಚ್ಚು ಆಯ್ಕೆಯ ಸ್ವಾತಂತ್ರ್ಯವಿದೆ. ಅಲ್ಲಿನ ಬಹುತೇಕರು ‘ಮದುವೆ’ ಎಂಬ ಧಾರ್ಮಿಕ ಸಂಸ್ಕಾರವನ್ನು ಈಗೀಗ ಒಂದು ಪ್ರಹಸನದಂತೆ ಕಾಣುತ್ತಾರೆ. ಮದುವೆಯಾಗದೇ ಕೂಡಿ ಬಾಳುವವರ ಸಂಖ್ಯೆ ಅತಿಯಾಗಿ ಹೆಚ್ಚುತ್ತಿದೆ. ದಕ್ಷಿಣ ಅಮೆರಿಕದ ಕೆಲವು ದೇಶಗಳಲ್ಲಿ ನೂರಕ್ಕೆ ಅರವತ್ತರಷ್ಟು ಜನರು ವಿವಾಹರಹಿತ ಸಹಬಾಳ್ವೆಗೆ ಒಗ್ಗಿಕೊಂಡಿದ್ದಾರೆ. ವಿವಾಹ ವಿಚ್ಛೇದನಗಳು ಸಹಜವಾಗಿ, ಸುಲಭವಾಗಿ, ಶೀಘ್ರವಾಗಿ ಆ ದೇಶಗಳಲ್ಲಿ ನಡೆಯುತ್ತಿರುತ್ತವೆ. ಮದುವೆ ಎಂಬುದು ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳುತ್ತಿದೆ. ‘ಹೆಣ್ಣುಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದರೆ ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಅಷ್ಟೊಂದು ಸ್ವಾತಂತ್ರ್ಯ ಸರಿಯಲ್ಲ’ ಎಂಬುದು ಸಂಪ್ರದಾಯಸ್ಥರ ವಾದ. ಅದು ತಾರ್ಕಿಕ, ವೈಜ್ಞಾನಿಕ ಒರೆಗಲ್ಲಿಗೆ ನಿಲ್ಲತಕ್ಕ ವಾದವಲ್ಲ. ಆದ್ದರಿಂದಲೇ ನಮ್ಮ ನ್ಯಾಯಾಲಯವು ಅಂತಹ ವಾದವನ್ನು ಮತ್ತು ಸರ್ಕಾರದ ಇದೇ ರೀತಿಯ ನಿಲುವನ್ನೂ ತಳ್ಳಿಹಾಕಿದೆ.

ವ್ಯಭಿಚಾರವನ್ನು ಅಪರಾಧಗೊಳಿಸುವ ಕಾಯ್ದೆ ಈಗ ರದ್ದಾಗಿದೆ. ಆದರೆ ನಮ್ಮ ದೇಶದಲ್ಲಿ ಶೇಕಡ 90ರಷ್ಟು ಜನರ ಅದರಲ್ಲೂ ಗಂಡಸರ ಮನೋಭೂಮಿಕೆ ಬದಲಾಗಿದೆಯೇ? ಅದನ್ನು ಅಷ್ಟೊಂದು ಸುಲಭವಾಗಿ ಬದಲಿಸಬಹುದೇ? ಬದಲಾವಣೆಗೆ ಪೂರಕವಾದ ಮನೋಭಾವವನ್ನು ಮೂಡಿಸಲು ನಮ್ಮ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಗಳು ಯಾವ ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ?

ಕೊನೆಯದಾಗಿ, ಅತೃಪ್ತ ವೈವಾಹಿಕ ಜೀವನವೇ ವ್ಯಭಿಚಾರಕ್ಕೆ ಕಾರಣವಾಗಿರಬಹುದು ಎಂಬ ವಿಶೇಷ ಕಾರಣವನ್ನು ಮುಖ್ಯ ನ್ಯಾಯಮೂರ್ತಿ ನೀಡಿದ್ದಾರೆ. ನಮ್ಮ ದೇಶದಲ್ಲಿ ಶೇಕಡ 95ರಷ್ಟು ಮದುವೆಯ ನಿರ್ಣಯಗಳನ್ನು ತಂದೆ–ತಾಯಿಯೇ ಮಾಡುತ್ತಾರೆ. ವಧುವಿನ ಮೇಲೆ ಒತ್ತಾಯ, ಜೋಡಿಗಳ ನಡುವೆ ಹೆಚ್ಚು ವಯಸ್ಸಿನ ಅಂತರ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸರಿಸಾಟಿಯಲ್ಲದ ಜೋಡಿಗಳೇ ಹೆಚ್ಚು. ವರದಕ್ಷಿಣೆಗಾಗಿ ಒಪ್ಪಿಕೊಳ್ಳುವ ಮದುವೆಗಳೂ ಕಡಿಮೆಯೇನಲ್ಲ. ಅಂತಹ ಪ್ರಕರಣಗಳಲ್ಲಿ ‘ವೈಯಕ್ತಿಕ ತೃಪ್ತಿ’, ‘ಲೈಂಗಿಕ ತೃಪ್ತಿ’ ಅನೇಕಸಲ ಮರೀಚಿಕೆಯಾಗಿಬಿಡುತ್ತದೆ. ಅದರಿಂದಾಗಿ ವಿವಾಹೇತರ ಸಂಬಂಧಗಳು ಹೆಚ್ಚುತ್ತವೆ ಎನ್ನುವುದು ಸುಳ್ಳೇನಲ್ಲ.

ಮನಸ್ಸಿಲ್ಲದ ಮದುವೆಯಿಂದ ವಿಚ್ಛೇದನ ಪಡೆಯಬಹುದಲ್ಲವೇ? ವಿಚ್ಛೇದನಕ್ಕೆ ಹೆಂಡತಿ ಮುಂದಾದರೂ ಅದಕ್ಕೆ ಒಪ್ಪದ ಗಂಡಸರೂ ಕಡಿಮೆಯೇನಿಲ್ಲ! ಅಂತಹ ಮಹಿಳೆಯರನ್ನು ಕೊಲ್ಲುವುದೂ ಉಂಟು. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಅವಕಾಶವಿದ್ದರೂ ಅದಕ್ಕೆ ಅಡ್ಡಿಪಡಿಸುವ ಅನೇಕ ಸಂಗತಿಗಳಿರುತ್ತವೆ. ಮಕ್ಕಳಿದ್ದರೆ, ಗಂಡ ನಿರುದ್ಯೋಗಿಯಾಗಿದ್ದರೆ, ಅನಾರೋಗ್ಯದಿಂದ ಬಳಲುತ್ತಿದ್ದರೆ, ಶ್ರೀಮಂತ ಕುಟುಂಬದಿಂದ ಬಂದಿದ್ದರೆ, ಒಪ್ಪಿಗೆಯ ವಿಚ್ಛೇದನಕ್ಕೆ ಹೆಚ್ಚು ಅಡೆತಡೆಗಳಿರುತ್ತವೆ. ಅತೃಪ್ತ ವಿವಾಹದಿಂದ ಸುಲಭವಾಗಿ, ಶೀಘ್ರವಾಗಿ ವಿಚ್ಛೇದನ ಪಡೆಯುವುದು ನಮ್ಮ ಈಗಿನ ನ್ಯಾಯ ವ್ಯವಸ್ಥೆಯಲ್ಲಿ ಕಷ್ಟಸಾಧ್ಯ. ಹಾಗಾಗಿ ಅತೃಪ್ತಿಯನ್ನು ನಿವಾರಿಸಿಕೊಳ್ಳಲು ಕೆಲವರು ವ್ಯಭಿಚಾರದ ದಾರಿ ತುಳಿಯುತ್ತಾರೆ ಎನ್ನುವುದು ಮುಖ್ಯ ನ್ಯಾಯಮೂರ್ತಿಯವರ ಇಂಗಿತ. ಗಂಡನನ್ನು ತೊರೆಯಲಿಕ್ಕೂ ಆಗಲ್ಲ, ಮಿಂಡನಿಂದ ದೂರವಿರಲೂ ಆಗುವುದಿಲ್ಲ ಎಂದಾದರೆ ಆ ವೈವಾಹಿಕ ಸಂಬಂಧವನ್ನು ಏನೆಂದು ಕರೆಯಬೇಕು? ಗಂಡ-ಮಿಂಡರ ಸಮಸ್ಯೆಗೆ 497ನೇ ಸೆಕ್ಷನ್‌ ರದ್ದತಿಯು ಒಂದು ಉಪಾಯವೇ? ಹೀಗಾದರೆ ವಿವಾಹವೆಂಬ ಕಟ್ಟುಕಟ್ಟುಳೆ ಮತ್ತು ಕುಟುಂಬವೆಂಬ ಸಾಮಾಜಿಕ ಸಂಸ್ಥೆಯ ಪಾವಿತ್ರ್ಯಕ್ಕೆ ಬೆಲೆಯುಂಟೇ ಎಂಬುದು ಸನಾತನಿಗಳು ಕೇಳುವ ಪ್ರಶ್ನೆ. ಮುಂದೇನು ಎಂಬುದು ನಮ್ಮ ಸಂಸತ್ತಿನ ಮುಂದಿರುವ ಗಂಭೀರ ಸಮಸ್ಯೆ.

ಈ ಎಲ್ಲ ಗೋಜಲುಗಳನ್ನು ಪರಿಗಣಿಸಬೇಕು. ರದ್ದಾಗಿರುವ ಸೆಕ್ಷನ್‌ಗೆ ಪರ್ಯಾಯವಾಗಿ ಹೊಸ ಕಾನೂನು ರೂಪಿಸುವುದು ಅಗತ್ಯ. ಪರಸ್ಪರರ ವ್ಯಭಿಚಾರದ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲು ಗಂಡ ಮತ್ತು ಹೆಂಡತಿ ಇಬ್ಬರಿಗೂ ಸಮಾನವಾಗಿ ಅವಕಾಶ ಇರಬೇಕು. ವ್ಯಭಿಚಾರದಲ್ಲಿ ಸಿಲುಕಿರುವ ಮೂರನೆಯ ವ್ಯಕ್ತಿಯು ವಿವಾಹಿತನೇ– ವಿವಾಹಿತಳೇ, ಅವಿವಾಹಿತನೇ–ಅವಿವಾಹಿತಳೇ, ವಿದುರನೇ– ವಿಧವೆಯೇ ಎಂಬುದು ಮಹತ್ವದ್ದಾಗಿರಬೇಕಿಲ್ಲ. ಮೂರನೆಯ ವ್ಯಕ್ತಿಯನ್ನೂ ಶಿಕ್ಷಾರ್ಹಗೊಳಿಸಬೇಕು. ಗಂಡ– ಹೆಂಡತಿ ಇಬ್ಬರೂ ಸಮಾನರು. ಅವರಲ್ಲಿ ಯಾರೇ ವ್ಯಭಿಚಾರಿಯಾದರೂ ಶಿಕ್ಷೆ ಸಮಾನವಾಗಿರಬೇಕು. ಇಂತಹ ಅಂಶವನ್ನು ಅಳವಡಿಸುವಾಗ ಸಲಿಂಗ ವಿವಾಹದಲ್ಲಿರುವ ಭಾಗೀದಾರರಿಗೂ ಇದೇ ಕಾನೂನು–ಕಟ್ಟಳೆ ಅನ್ವಯಿಸುವಂತೆ ಉಪಬಂಧಗಳ ವ್ಯಾಖ್ಯಾನವಿರಬೇಕು. ವ್ಯಭಿಚಾರವನ್ನು ‘ಶಿಕ್ಷಾರ್ಹ ಅಪರಾಧ’ವೆಂದು ಪರಿಗಣಿಸದಿದ್ದರೆ ವೈವಾಹಿಕ ಜೀವನದ ಪಾವಿತ್ರ್ಯ ಹೆಚ್ಚು ದಿನ ಉಳಿಯಲಾರದು ಎಂಬ ಸನಾತನಿಗಳ ವಾದದಲ್ಲಿ ಸ್ವಲ್ಪವಾದರೂ ಅರ್ಥವಿದೆ ಎನ್ನುವುದನ್ನು ನಿರಾಕರಿಸುವಂತಿಲ್ಲ.

ಗಂಡನು ಹೆಂಡತಿಯ ಒಡೆಯನಲ್ಲ, ಹೆಂಡತಿಯು ಗಂಡನ ಸ್ವತ್ತಲ್ಲ, ಅವರಿಬ್ಬರೂ ಮದುವೆಯೆಂಬ ಬಂಧನದಲ್ಲಿ ಸಮಾನ ಪಾಲುದಾರರು ಎನ್ನುವುದನ್ನು ಸಂಪ್ರದಾಯಸ್ಥರು ಒಪ್ಪುವುದಿಲ್ಲ. ಮುಸ್ಲಿಂ ಕಾಯ್ದೆಯಲ್ಲಿ ಮಾತ್ರ ಮದುವೆಯೆಂದರೆ ಗಂಡು-ಹೆಣ್ಣಿನ ನಡುವಿನ ಒಪ್ಪಂದ ಎಂದು ತಿಳಿಯಲಾಗುತ್ತದೆ. ಹಿಂದೂ ಮತ್ತು ಕ್ರೈಸ್ತ ಕಾನೂನುಗಳಲ್ಲಿ ಮದುವೆಯು ಒಂದು ದೈವಿಕ ಸಂಬಂಧವೆಂದು ಪರಿಗಣಿತವಾಗುವುದರಿಂದ ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಈ ಪರಿಕಲ್ಪನೆಗಳು ಬದಲಾಗಬೇಕೆಂದರೆ ಎಲ್ಲರಿಗೂ ಏಕರೂಪವಾದ ನಾಗರಿಕ ಸಂಹಿತೆಯು ಮೊದಲಿಗಿಂತ ಈಗ ಹೆಚ್ಚು ಸಮಂಜಸವೆನಿಸುತ್ತದೆ. ಅದನ್ನು ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಈಗಿನ ಕೇಂದ್ರ ಸರ್ಕಾರವು ರಚಿಸಲು ಮುಂದಾಗುವುದೇ?

ಲೇಖಕ: ನಿವೃತ್ತ ಐ.ಎ.ಎಸ್‌. ಅಧಿಕಾರಿ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !