ಇವಿಎಂ– ವಿವಿಪ್ಯಾಟ್‌ ತಾಳೆಯ ಲೆಕ್ಕ!

ಸೋಮವಾರ, ಜೂನ್ 17, 2019
28 °C
ವಿವಿಪ್ಯಾಟ್‌ಗೆ ಸಂಬಂಧಿಸಿದ ವಿವಾದವು ಹಿಂದಿಗಿಂತಲೂ ಇಂದು ಹೆಚ್ಚು ಜೀವಂತವಾಗಿ ಕಾಣಿಸುತ್ತಿದೆ

ಇವಿಎಂ– ವಿವಿಪ್ಯಾಟ್‌ ತಾಳೆಯ ಲೆಕ್ಕ!

Published:
Updated:

ಮೇ 23ರಂದು ಚುನಾವಣಾ ಆಯೋಗವು ಮತಗಳ ಎಣಿಕೆ ನಡೆಸಲಿದೆ. ಲೋಕಸಭೆಗೆ ನಡೆದ ಈ ಚುನಾವಣೆಯಲ್ಲಿ ಸೋಲು ಕಾಣಲಿರುವ ಪ್ರತಿ ಅಭ್ಯರ್ಥಿಯೂ ವಿವಿಪ್ಯಾಟ್‌ (ಮತದಾನ ದೃಢೀಕರಣ ರಸೀದಿ ಯಂತ್ರ) ಬಗ್ಗೆ ಒಂದಿಷ್ಟು ಅಸಮಾಧಾನ ವ್ಯಕ್ತಪಡಿಸಬಹುದು.

ಇವಿಎಂ ಬಳಕೆಯಲ್ಲಿ ಯಾವ ದೇಶವೂ ಭಾರತದ ಸಮೀಪಕ್ಕೆ ಸಹ ಬರುವುದಿಲ್ಲ. ‘ಇವಿಎಂಗಳನ್ನು ಕುರುಡಾಗಿ ನಂಬಬೇಕಿಲ್ಲ, ಮತದಾರನಿಗೆ ತನ್ನ ಮತವನ್ನು ಇವಿಎಂ ಹೇಗೆ ದಾಖಲಿಸಿಕೊಂಡಿದೆ ಎಂಬುದನ್ನು ನೋಡುವ ಹಕ್ಕು ಇದೆ’ ಎನ್ನುವ ವಾದವನ್ನು ಸುಪ್ರೀಂ ಕೋರ್ಟ್‌ 2013ರಲ್ಲಿ ಒಪ್ಪಿತು. ಪ್ರತಿ ಇವಿಎಂ ಜೊತೆ ವಿವಿಪ್ಯಾಟ್‌ ಇರುವಂತೆ ಮಾಡಿ ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಇವಿಎಂಗಳ ಜೊತೆ ವಿವಿಪ್ಯಾಟ್ ಅಳವಡಿಸಲಾಗಿದೆ.

ಇಲ್ಲೊಂದು ಪ್ರಶ್ನೆ ಇದೆ: ತಾವು ಮತ ಚಲಾಯಿಸಿದ್ದು ಯಾವ ಪಕ್ಷಕ್ಕೆ ಎಂಬುದನ್ನು ವಿವಿಪ್ಯಾಟ್‌ನಲ್ಲಿ ಕಂಡು ಮತದಾರ ತೃಪ್ತನಾಗಿದ್ದಾನಾದರೆ, ವಿವಿಪ್ಯಾಟ್‌ ದಾಖಲಿಸಿರುವ ಮತಗಳನ್ನು ಇವಿಎಂನ ದಾಖಲೆಯೊಂದಿಗೆ ಏಕೆ ತಾಳೆ ಮಾಡಬೇಕು? ಇದು ಸಮಯ ಹಾಳು ಮಾಡುವ ಕೆಲಸವಲ್ಲವೇ?

ಇವಿಎಂ ಎಂಬುದು ಒಂದು ಯಂತ್ರ ಮಾತ್ರ. ಯಾವುದೇ ಯಂತ್ರದಂತೆ ಅದು ಕೂಡ ತಪ್ಪು ಮಾಡಬಹುದು. ಉದಾಹರಣೆಗೆ, ಒಂದು ಇವಿಎಂ 3,600 ಮತಗಳನ್ನು ದಾಖಲಿಸಿ ಇಟ್ಟುಕೊಂಡಿದೆ ಎಂದು ಭಾವಿಸೋಣ. ಆ ಬೂತ್‌ನಲ್ಲಿರುವ ನೈಜ ಮತದಾರರ ಸಂಖ್ಯೆಯೂ 3,600. ವಿವಿಪ್ಯಾಟ್‌ನಿಂದ ಹೊರಬಂದ ರಸೀದಿ ನೋಡಿ ಎಲ್ಲ ಮತದಾರರಿಗೂ ತೃಪ್ತಿ ಆಗಿದೆ. ಫಲಿತಾಂಶದ ದಿನ ಇವಿಎಂ 3,600 ಮತಗಳನ್ನು ತೋರಿಸಿದೆ. ಆಗ ಚುನಾವಣಾ ಆಯೋಗವು ‘ವಿವಿಪ್ಯಾಟ್‌ನಲ್ಲಿ ದಾಖಲಾದ ಸಂಖ್ಯೆಗೂ ಇವಿಎಂನಲ್ಲಿ ದಾಖಲಾದ ಸಂಖ್ಯೆಗೂ ತಾಳೆಯಾಗಿದೆ. ಹಾಗಾಗಿ, ವಿವಿಪ್ಯಾಟ್‌ನ ರಸೀದಿಗಳನ್ನು ಪ್ರತ್ಯೇಕವಾಗಿ ತಾಳೆ ಮಾಡುವ ಅಗತ್ಯವಿಲ್ಲ’ ಎಂದು ಹೇಳುತ್ತದೆ. ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್‌ ತಜ್ಞರು ಹೀಗೊಂದು ಪ್ರಶ್ನೆ ಕೇಳಬಹುದು: ‘ಮತದಾರ ಯಾರಿಗೆ ಮತ ಚಲಾಯಿಸಿದ್ದಾನೆ ಎಂಬುದನ್ನು ವಿವಿಪ್ಯಾಟ್‌ ಸರಿಯಾಗಿ ತೋರಿಸಿರಬಹುದು. ಆದರೆ, ಇವಿಎಂನಲ್ಲಿ ಅವನ ಮತ ತಪ್ಪಾಗಿ ದಾಖಲಾಗಿರುವ ಸಾಧ್ಯತೆ ಇದೆಯಲ್ಲ?’ ಇಂತಹ ಪ್ರಶ್ನೆಗಳನ್ನು ಸ್ವೀಕರಿಸಿರುವ ಚುನಾವಣಾ ಆಯೋಗವು ಕೆಲವು ವಿವಿಪ್ಯಾಟ್‌ಗಳ ರಸೀದಿಗಳನ್ನು ಲೆಕ್ಕ ಮಾಡಿ, ಅವುಗಳನ್ನು ಇವಿಎಂ ದಾಖಲಿಸಿರುವ ಮತಗಳ ಜೊತೆ ತಾಳೆ ಮಾಡುತ್ತದೆ. ದೇಶದಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿರುವ ಪ್ರಶ್ನೆಯೆಂದರೆ, ಪ್ರತಿ ಕ್ಷೇತ್ರದಲ್ಲಿ ಎಷ್ಟು ವಿವಿಪ್ಯಾಟ್‌ ರಸೀದಿಗಳನ್ನು ಇವಿಎಂ ದಾಖಲಿಸಿರುವ ಮತಗಳ ಜೊತೆ ತಾಳೆ ಮಾಡಬೇಕು ಎನ್ನುವುದು.

ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸರಾಸರಿ 1,708 ಮತಗಟ್ಟೆಗಳು, ಎಂಟು ವಿಧಾನಸಭಾ ಕ್ಷೇತ್ರಗಳು ಇರುತ್ತವೆ ಎಂದು ಆಯೋಗದ ದಾಖಲೆಗಳು ಹೇಳುತ್ತವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 225 ಮತಗಟ್ಟೆಗಳು ಇರುತ್ತವೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತಗಟ್ಟೆಯ ವಿವಿಪ್ಯಾಟ್‌ ದಾಖಲೆಯನ್ನು ಯಾದೃಚ್ಛಿಕವಾಗಿ (ರ್‍ಯಾಂಡಮ್‌) ಆಯ್ಕೆ ಮಾಡಿಕೊಂಡು ತಾಳೆ ಮಾಡಿದರೆ ಸಾಕು ಎನ್ನುವುದು ಆಯೋಗದ ವಾದ. ಆ ವಿವಿಪ್ಯಾಟ್‌ ಹಾಗೂ ಇವಿಎಂ ಮತಗಳ ನಡುವೆ ತಾಳೆಯಾದರೆ, ಇಡೀ ಕ್ಷೇತ್ರದ ಎಲ್ಲ ಇವಿಎಂಗಳು ಸರಿಯಾಗಿ ಮತಗಳನ್ನು ದಾಖಲಿಸಿವೆ ಎಂದು ಆಯೋಗ ಪರಿಭಾವಿಸುತ್ತದೆ. ಅಂದರೆ, ಆಯೋಗವು ಶೇಕಡ 0.5ಕ್ಕಿಂತ ಕಡಿಮೆ ಪ್ರಮಾಣದ ವಿವಿಪ್ಯಾಟ್‌ಗಳನ್ನು ತಾಳೆ ಮಾಡಲು ಬಳಸಿಕೊಳ್ಳುತ್ತದೆ.

ಆಯೋಗದ ಈ ನಿಲುವನ್ನು ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು, ಶೇಕಡ 50ರಷ್ಟು ವಿವಿಪ್ಯಾಟ್‌ಗಳನ್ನು ಮತಗಳ ಜೊತೆ ತಾಳೆ ಮಾಡಬೇಕು ಎಂದು ಕೋರಿದ್ದವು. ‘ಶೇಕಡ 50ರಷ್ಟು’ ಎನ್ನುವ ಕೋರಿಕೆಯನ್ನು ಕೋರ್ಟ್‌ ಒಪ್ಪಲಿಲ್ಲವಾದರೂ, ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಐದು ವಿವಿಪ್ಯಾಟ್‌ಗಳ ದಾಖಲೆಯನ್ನು ಇವಿಎಂ ಮತಗಳ ಜೊತೆ ತಾಳೆ ಮಾಡಬೇಕು ಎಂದು ಹೇಳಿತು. ಇಷ್ಟಾದರೂ, ತಾಳೆ ಮಾಡಲು ಬಳಸಿಕೊಳ್ಳುವ ವಿವಿಪ್ಯಾಟ್‌ಗಳ ಪ್ರಮಾಣ ಶೇಕಡ 2ರಷ್ಟು ಮಾತ್ರ. ಇಷ್ಟು ಸಾಕೇ?

ಕೆಲವು ಅಂಶಗಳನ್ನು ಗಮನಿಸೋಣ: ಅಮೆರಿಕದ ಕೆಲವು ರಾಜ್ಯಗಳಲ್ಲಿ ಶೇಕಡ 10ರಷ್ಟು ವಿವಿಪ್ಯಾಟ್‌ಗಳನ್ನು ತಾಳೆ ಮಾಡಲು ಬಳಸಿಕೊಳ್ಳಬೇಕು. ತಾಳೆ ಮಾಡಬೇಕಿರುವ ವಿವಿಪ್ಯಾಟ್‌ ಪ್ರಮಾಣವನ್ನು ಶೇಕಡ 20ರಷ್ಟಕ್ಕೆ ಹೆಚ್ಚಿಸಲು ಕೆಲವು ರಾಜ್ಯಗಳು ಆಲೋಚಿಸುತ್ತಿವೆ. ಕೇವಲ ಶೇಕಡ 2ರಷ್ಟು ವಿವಿಪ್ಯಾಟ್‌ಗಳನ್ನು ತಾಳೆ ಮಾಡುವುದು ಸಾಕಾಗುವುದಿಲ್ಲ ಎಂದು ಅನೇಕ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಪರಿಗಣಿಸಲಾಗಿದೆ.

ಇವಿಎಂ ತಪ್ಪು ಮಾಡುವುದಿಲ್ಲ ಎಂದು ಹಲವರು ನಂಬಿದ್ದಾರೆ. ಆದರೆ, 2014ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಆಯೋಗ ಹೊಂದಿರುವ ದಾಖಲೆಗಳ ಪ್ರಕಾರ, 543 ಕ್ಷೇತ್ರಗಳಲ್ಲಿ 1,43,573 ಮತಗಳು ಇವಿಎಂಗಳಲ್ಲಿ ತಪ್ಪಾಗಿ ದಾಖಲಾಗಿದ್ದವು. ಆ ಮತಗಳನ್ನು ಲೆಕ್ಕಕ್ಕೆ ಪರಿಗಣಿಸಲಿಲ್ಲ. 2016ರಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆಗೂ ಮುನ್ನ ಇವಿಎಂಗಳನ್ನು ಆಯೋಗ ಪರೀಕ್ಷಿಸಿದಾಗ, ಬೇರೆ ರಾಜ್ಯಗಳಲ್ಲಿ ಬಳಕೆಯಾಗಿ ಅಸ್ಸಾಂಗೆ ತರಲಾಗಿದ್ದ ಶೇಕಡ 10ರಷ್ಟು ಇವಿಎಂಗಳು ದೋಷಯುಕ್ತವಾಗಿದ್ದುದು ಕಂಡುಬಂತು.

ಚುನಾವಣೆಗಾಗಿ ಭಾರಿ ಪ್ರಮಾಣದಲ್ಲಿ ಹಣ ವೆಚ್ಚ ಮಾಡುವ ಆಯೋಗವು ವಿವಿಪ್ಯಾಟ್‌ ತಾಳೆ ಮಾಡಲು ಹೆಚ್ಚು ಸಮಯ ನೀಡಲು ಹಿಂಜರಿಯುತ್ತಿದೆ. ಅಂದಾಜು 1,708 ಮತಗಟ್ಟೆಗಳು ಇರುವ ಲೋಕಸಭಾ ಕ್ಷೇತ್ರದ 40 ಮತಗಟ್ಟೆಗಳ ವಿವಿಪ್ಯಾಟ್‌ಗಳನ್ನು ಮಾತ್ರ ತಾಳೆ ಮಾಡಿದರೆ ಸಾಕೇ ಎಂಬುದನ್ನು ಅರ್ಥ ಮಾಡಿಕೊಳ್ಳುವ ಮುನ್ನ, ಅಂಕಿ-ಸಂಖ್ಯೆಗಳ ಹಿಂದಿನ ವಿಜ್ಞಾನವನ್ನು ಅರ್ಥೈಸಿಕೊಳ್ಳಬೇಕು.

ನಿಮ್ಮೆದುರು 100 ಸೇಬುಹಣ್ಣು ಇಡಲಾಗುತ್ತದೆ. ನಂತರ ಒಂದು ಹಣ್ಣನ್ನು ತೆಗೆದು ಅದರ ಜಾಗದಲ್ಲಿ ಕೊಳೆತಂತೆ ಕಾಣುವ ಇನ್ನೊಂದು ಹಣ್ಣನ್ನು ಇರಿಸಲಾಗುತ್ತದೆ. ನಂತರ, ಕೊಳೆತಂತೆ ಕಾಣುವ ಹಣ್ಣನ್ನು ಹೆಕ್ಕುವಂತೆ ಹೇಳಲಾಗುತ್ತದೆ. ಆಗ ನೀವು ಕಷ್ಟವಿಲ್ಲದೆಯೇ ಆ ಹಣ್ಣನ್ನು ಹೆಕ್ಕುವಿರಿ.

ಈಗ, ಇನ್ನೊಂದು ಸಂದರ್ಭ ಊಹಿಸೋಣ. ನಿಮ್ಮ ಕಣ್ಣಿಗೆ ಬಟ್ಟೆ ಕಟ್ಟಿ, ಟೇಬಲ್ ಮೇಲೆ ಇದ್ದ ನೂರೂ ಸೇಬುಹಣ್ಣುಗಳನ್ನು ಅತ್ತ ಇತ್ತ ಮಾಡಿ, ಕೊಳೆತಂತೆ ಕಾಣುವ ಆ ಹಣ್ಣನ್ನು ಮಾತ್ರ ಆಯ್ಕೆ ಮಾಡುವಂತೆ ಹೇಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೊಳೆತಂತೆ ಕಾಣುವ ಆ ಹಣ್ಣನ್ನು ಆಯ್ಕೆ ಮಾಡುವ ಸಾಧ್ಯತೆ ನೂರರಲ್ಲಿ ಒಂದು ಅಂಶ ಮಾತ್ರ! ಈ ಸ್ಥಿತಿಯಲ್ಲಿ, ನೀವು ಎರಡು–ಮೂರು ಬಾರಿ ಮಾತ್ರವಲ್ಲ, ಹತ್ತು ಬಾರಿ ಪ್ರಯತ್ನಿಸಿದರೂ ಕೊಳೆತಂತೆ ಕಾಣುವ ಸೇಬುಹಣ್ಣು ಹೆಕ್ಕಿಕೊಳ್ಳುವ ಸಾಧ್ಯತೆ ಕಡಿಮೆ. ಹಾಗಾಗಿ, ಒಂದು ಬಾರಿ ಅಥವಾ ಹತ್ತು ಬಾರಿ ಪ್ರಯತ್ನಿಸಿ, ಟೇಬಲ್‌ ಮೇಲೆ ಇರುವುವೆಲ್ಲ ಒಳ್ಳೆಯ ಸೇಬುಹಣ್ಣುಗಳು ಎಂಬ ತೀರ್ಮಾನಕ್ಕೆ ಬರಲಾಗದು. ಈ ತರ್ಕದ ನೆಲೆಯಲ್ಲಿ ಹೇಳುವುದಾದರೆ, ಚಿಕ್ಕ ಸಂಖ್ಯೆಯ ಇವಿಎಂಗಳಲ್ಲಿ ದೋಷವಿದ್ದರೂ, ಪ್ರತಿ ಲೋಕಸಭಾ ಕ್ಷೇತ್ರದ 40 ಮತಗಟ್ಟೆಗಳ ವಿವಿಪ್ಯಾಟ್‌ಗಳನ್ನು ಮಾತ್ರ ತಾಳೆ ಮಾಡಲು ಆಯ್ದುಕೊಳ್ಳುವುದರಿಂದ ದೋಷ ಪತ್ತೆ ಮಾಡುವುದು ತೀರಾ ಕಷ್ಟಸಾಧ್ಯ.

ಇವಿಎಂಗಳಿಗೆ ಸಂಬಂಧಿಸಿದ ವಿವಾದದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ಅಂಕಿ-ಅಂಶ ತಜ್ಞರು ಸಾರ್ವಜನಿಕವಾಗಿ ಇದುವರೆಗೆ ಹೆಚ್ಚೇನೂ ಹೇಳಿಲ್ಲ. ಹಾಗಾಗಿ, ವಿವಿಪ್ಯಾಟ್‌ಗೆ ಸಂಬಂಧಿಸಿದ ವಿವಾದವು ಹಿಂದಿಗಿಂತಲೂ ಇಂದು ಹೆಚ್ಚು ಜೀವಂತವಾಗಿ ಕಾಣಿಸುತ್ತಿದೆ.

ಲೇಖಕ: ಸುಪ್ರೀಂ ಕೋರ್ಟ್‌ನಲ್ಲಿ ವಕೀಲ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 22

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !