ಗುರುವಾರ , ನವೆಂಬರ್ 21, 2019
22 °C
ಕನ್ನಡ ಭಾಷೆ– ಸಂಸ್ಕೃತಿಯ ಸಂವೇದನೆಗೆ ಧಕ್ಕೆ ತರುವಂತಹ ಮಾತು ತರವಲ್ಲ

ಹೊಣೆ ಅರಿಯದ ನುಡಿ ಹೇಳುವುದೇನು?

Published:
Updated:

‘ದಿಟವ ನುಡಿಯುವುದು, ನುಡಿದಂತೆ ನಡೆವುದು, ಹುಸಿಯ ನಡೆದು ತಪ್ಪುವ ಪ್ರಪಂಚಿಯನೊಲ್ಲ ಕೂಡಲ ಸಂಗಮದೇವ’ ಎಂಬ ಬಸವಣ್ಣನವರ ವಚನವು ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ಸೂಕ್ತವೆನಿಸುತ್ತದೆ. ನಡೆ-ನುಡಿಗಳೆಲ್ಲವೂ ತನ್ನ ಮಹತ್ವ ಮತ್ತು ಹೊಣೆಯನ್ನು ಕಳೆದುಕೊಂಡಿರುವ ಕಾಲ ಇದು. ಹುಸಿಯ ಹೇಳುವ ಸಂಸಾರಿಗನನ್ನು ತಿರಸ್ಕರಿಸುವಂತಹ ಹಾಗೂ ನಿಜ ನುಡಿವವನ ಬೆನ್ನಿಗೆ ನಿಲ್ಲುವಂತಹ ನಿಲುವು ಇಂದಿನ ಅಗತ್ಯ.

ನಮ್ಮ ಜನಪ್ರತಿನಿಧಿಗಳು ಮನಬಂದಂತೆ, ವಿವೇಕರಹಿತ ಹೇಳಿಕೆ ನೀಡುತ್ತಿದ್ದಾರೆ. ದಿನವೂ ಮರೆತು ಹುಸಿ
ನುಡಿಯುವ ಪ್ರಪಂಚಿಗನಂತೆ ಆಡುವ ಈ ಬಗೆಯನ್ನು ಪ್ರಶ್ನಿಸಬೇಕಿದೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವುದೇ ನಿಜವಾದ ಸ್ವಾತಂತ್ರ್ಯ. ಈ ನೆಲೆಯಲ್ಲಿ ನೋಡಿದಾಗ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರ ‘ಮನೆಹಾಳರು’ ಹೇಳಿಕೆಯು ಅಪ್ರಬುದ್ಧದಿಂದ ಕೂಡಿದೆ ಎಂದು ಹೇಳಬಹುದು. ಸಂಸ್ಕೃತಿ ಇಲಾಖೆಯ ಅಧೀನದ ವಿವಿಧ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಗೆ ಅಧ್ಯಕ್ಷರನ್ನು ಮತ್ತು
ಸದಸ್ಯರನ್ನು ನೇಮಕ ಮಾಡಿದ ನಂತರ ಅವರು ‘ಮನೆಹಾಳು ಜನರಿಗೆ ಅವಕಾಶವಿಲ್ಲ’ ಎಂದು ಉಲಿದು ತಮ್ಮ ಸ್ಥಾನಮಾನದ ಘನತೆಯನ್ನೇ ಬುಡಮೇಲಾಗಿಸಿದ್ದಾರೆ. ಹೊಣೆ ಅರಿಯದ ನುಡಿಯು ಏನನ್ನು ಸೂಚಿಸುತ್ತದೆ?

ಜಿ.ಎಸ್.ಶಿವರುದ್ರಪ್ಪ, ಶಾಂತರಸ, ಗಿರಡ್ಡಿ ಗೋವಿಂದರಾಜ, ಬರಗೂರು ರಾಮಚಂದ್ರಪ್ಪ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ ಹಾಗೂ ಇವರಂತಹ ಅನೇಕ ಸಾಹಿತಿ–ಕಲಾವಿದರು ಹಿಂದೆ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಹೊಣೆ ಹೊತ್ತು, ಉತ್ತಮ ಕೆಲಸಗಳ ಮೂಲಕ ಕನ್ನಡತನವನ್ನು ಎತ್ತರಕ್ಕೆ ಒಯ್ದಿದ್ದಾರೆ. ಹಾಗಿದ್ದರೆ ಇವರದು ಮನೆಹಾಳು ಸಾಧನೆಯೇ? ರಾಜ್ಯದ ಸಂಸ್ಕೃತಿಇಲಾಖೆಯನ್ನು ಪ್ರತಿನಿಧಿಸುವ ಸಚಿವರ ಮಾತು ‘ನುಡಿದರೆ ಲಿಂಗ ಮೆಚ್ಚಿ ಅಹುದೆನುವಂತಿರಬೇಕು’ ಅಲ್ಲವೇ?

ಬಿ.ಎಸ್. ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೂ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರ
ಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಆಗಿತ್ತು. ಆಗ ಇಂತಹ ಮನಃಸ್ಥಿತಿ ಇರಲಿಲ್ಲ. ಈಗ ಯಾಕೆ ಈ ‘ಮನೆಹಾಳು’ ಧೋರಣೆ!?

ಕನ್ನಡ ಮತ್ತು ಸಂಸ್ಕೃತಿ ಖಾತೆಯ ಹೊಣೆಯನ್ನು ಎಂ.ಪಿ. ಪ್ರಕಾಶ್‌, ಜೀವರಾಜ್‌ ಆಳ್ವ, ಬಿ.ಟಿ. ಲಲಿತಾ
ನಾಯಕ್‌, ಲೀಲಾದೇವಿ ಆರ್.ಪ್ರಸಾದ್‌, ಉಮಾಶ್ರೀ ಮುಂತಾದವರು ಹೊತ್ತಿದ್ದರು. ಅವರಿಂದ ಎಂದೂ ಇಂತಹ ‘ಘನತೆವೆತ್ತ’ ಮಾತುಗಳು ಬಂದಿರಲಿಲ್ಲ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂವೇದನೆಗೆ ಧಕ್ಕೆ ತರುವಂತಹ ನುಡಿಯನ್ನು ಅವರು ಆಡಿದ್ದು ನನ್ನ ನೆನಪಿನಲ್ಲಿ ಇಲ್ಲ. ಆ ಕಾಲದಲ್ಲಿ ಇಲ್ಲದಂತಹ
‘ಮನೆಹಾಳು’ತನವು ಇಂದೇಕೆ ಬಂತು?

ಕನ್ನಡಕ್ಕೆ ಹಲವು ಸಾಮಾಜಿಕ, ಸಾಂಸ್ಕೃತಿಕ ನೆಲೆಗಳು ಮತ್ತು ಅನನ್ಯತೆಗಳು ಉಂಟು. ಅವುಗಳನ್ನು ಬೆಳೆಸುವ ಬಗೆ ಕುರಿತು ಮಾತನಾಡುವುದು ಇಂದಿನ ಅಗತ್ಯ. ಭಾಷಿಕ ಸಮಸ್ಯೆಗಳು ಹಿಂದೆಂದಿಗಿಂತ ಈಗ ಅಧಿಕವಾಗಿವೆ. ಗಡಿನಾಡಿನಲ್ಲಿ ಭಾಷೆಯನ್ನು ಗಟ್ಟಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಹತ್ತೆಂಟು ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು ಇದೆ. ಹೊರನಾಡ ಕನ್ನಡಿಗರ ಸಮಸ್ಯೆಗಳೇನು ಎಂಬುದನ್ನು ತಿಳಿಯುವ ಜರೂರು ಇದೆ. ನಾಡಧ್ವಜ ಕುರಿತು ಸ್ಪಷ್ಟ ನಿಲುವು ಪ್ರಕಟವಾಗಬೇಕಿದೆ. 

ಹೀಗೆ ಮಾಡಬೇಕಾದ ಕೆಲಸಗಳು ನೂರೆಂಟು ಇರುವಾಗ, ‘ಕೆಡವುವವರು ಕಟ್ಟುವವರು’ ಎಂದು ಹಣೆಪಟ್ಟಿ ಅಂಟಿಸುವ ಕೆಲಸ ಬೇಕೇ?  ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಉಮೇಶ ಕತ್ತಿಯವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆಯ ಬಗ್ಗೆ ಮತ್ತೆ ಮಾತನಾಡಿದ್ದಾರೆ. ದಕ್ಷಿಣ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ, ಕರಾಡ ಒಳಗೊಂಡಂತೆ ನಾಲ್ಕು ಜಿಲ್ಲೆ ಹಾಗೂ ಉತ್ತರ ಕರ್ನಾಟಕದ ಹದಿಮೂರು ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯವನ್ನು ರಚಿಸಿದರೆ ಈ ಭಾಗ ಅಭಿವೃದ್ಧಿಯಾಗುತ್ತದೆ ಎಂದಿದ್ದಾರೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ತಾವೇ ಪ್ರಸ್ತಾಪಿಸಿರುವ ಈ ಹೊಸ ರಾಜ್ಯಕ್ಕೆ ತಾವೇ ಮುಖ್ಯಮಂತ್ರಿ ಆಗುವುದಾಗಿಯೂ ಹೇಳಿಕೊಂಡಿದ್ದಾರೆ. ಇವರೂ ಬಿಜೆಪಿ ನಾಯಕರೇ. ಸದ್ಯಕ್ಕೆ ಸಚಿವ ಸ್ಥಾನ ಕೈತಪ್ಪಿದೆ. ಆಳುವ ಪಕ್ಷದ ಹಿರಿಯ ಮುಖಂಡರಿಂದಲೇ ನಾಡಿನ ಏಕತೆ ವಿಚಾರದಲ್ಲಿ ಇಂತಹ ಅಪಸ್ವರ ಹೊರಡುವುದು ಸರಿಯೇ ಎನ್ನುವುದು ಕೂಡ ಈಗ ಚರ್ಚಾರ್ಹ ಸಂಗತಿ.

ರಾಜ್ಯ ಪುನರ್‌ ವಿಂಗಡಣೆ ಎಂಬುದು ಬಿಡುಬೀಸು ಹೇಳಿಕೆ ನೀಡಿದಷ್ಟು ಸುಲಭ ಅಲ್ಲ. ನೆರೆರಾಜ್ಯದ ನಾಲ್ಕು ಜಿಲ್ಲೆಗಳನ್ನು ಒಳಗೊಂಡು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಯಾಗಬೇಕಾದರೆ ಅದಕ್ಕೆ ಬೇಕಿರುವ ಸುದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆ ಬಗ್ಗೆ ಅರಿವು ಇದ್ದವರು ಈ ರೀತಿ ಮಾತನಾಡಲಾರರು. ಭಾಷಾವಾರು ಪ್ರಾಂತ್ಯಗಳ ರಚನೆಯಾದದ್ದು 1956ರಲ್ಲಿ. ಅದಕ್ಕಾಗಿ, ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಫಜಲ್ ಅಲಿ ಆಯೋಗವನ್ನು ರಚಿಸಿತ್ತು. ಅಂತಹ ಮತ್ತೊಂದು ಆಯೋಗ ರಚಿಸುವಂತೆ ಕೇಂದ್ರವನ್ನು ಒತ್ತಾಯಿಸುವ ರಾಜಕೀಯ ಬಲ ಕತ್ತಿ ಅವರಿಗೆ ಇದೆಯೇ? 

ಕರ್ನಾಟಕದ 864 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಏಕೀಕರಣ ಸಮಿತಿಯು ಸುಪ್ರೀಂ ಕೋರ್ಟ್‌ನಲ್ಲಿ  ಮೊಕದ್ದಮೆ ದಾಖಲಿಸಿದೆ. 1956ರ ಎಸ್.ಆರ್.ಸಿ ಕಾನೂನನ್ನು ಮಹಾರಾಷ್ಟ್ರ ಸರ್ಕಾರ ಪ್ರಶ್ನಿಸಿದೆ. ಹೀಗಿರುವಾಗ ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳನ್ನು ಪಡೆಯುವಂತಹ ಮಾತು ವಿಪರ್ಯಾಸಕರ. ಕತ್ತಿ ಅವರ ಮಾತಿಗೆ ಅವರ ಪಕ್ಷದಿಂದ ಮೌನವೇ ಉತ್ತರವಾಗಿರುವುದು ಏನನ್ನು ಸೂಚಿಸುತ್ತದೆ? 

ಉತ್ತರ ಕರ್ನಾಟಕ ಹಿಂದುಳಿದಿದೆ. ಆ ಭಾಗಕ್ಕೆ ಅನ್ಯಾಯವಾಗಿದೆ ಎಂಬುದು ನಾಯಕರಿಗೆ ಆಗೊಮ್ಮೆ ಈಗೊಮ್ಮೆ ನೆನಪಾಗುತ್ತದೆ. ಅದನ್ನು ಸರಿಪಡಿಸಲು ತಾವು ಇಲ್ಲಿಯವರೆಗೆ ಏನು ಮಾಡಿದ್ದೇವೆ ಎಂಬುದನ್ನು ಮೊದಲು ಜನರ ಮುಂದಿಡಲಿ. ಅದರ ಬಗ್ಗೆ ವಿಸ್ತೃತ ಚರ್ಚೆಯಾಗಲಿ. ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದರೆ ಅದಕ್ಕೆ ಕಾರಣ ಏನು, ಯಾರು? ಅದರಲ್ಲಿ ಜನಪ್ರತಿನಿಧಿಗಳ ಪಾತ್ರ ಎಷ್ಟು ಎಂಬುದೂ ಹೊರಬರಲಿ.
ಆಗ ವಸ್ತುಸ್ಥಿತಿ ಗೊತ್ತಾಗುತ್ತದೆ.

ಎರಡು ತಿಂಗಳ ಹಿಂದೆ ಬದುಕನ್ನು ನುಚ್ಚುನೂರಾಗಿಸಿದ್ದ ಪ್ರವಾಹ ಮತ್ತೆ ಎರಗಿದೆ. ಬೆಳೆ, ಮನೆ–ಮಠ ಕಳೆದುಕೊಂಡು ಜನ ನರಳುತ್ತಿದ್ದಾರೆ. ಪರಿಹಾರ ವಿತರಣೆಯಲ್ಲಿ ವಿಳಂಬ ಆಗಿದೆ. ಅದರ ಸಮರ್ಪಕತೆ ಬಗ್ಗೆ ದೂರುಗಳಿವೆ. ಪ್ರಭಾವಿಗಳ ಮೇಲಾಟದ ಬಗ್ಗೆ ಆರೋಪಗಳು ಇವೆ. ಜನರ ದುಃಖ–ದುಮ್ಮಾನಗಳನ್ನು ಆಲಿಸುವ, ಅರ್ಹ ಫಲಾನುಭವಿಗಳನ್ನು ಸರಿಯಾಗಿ ಗುರುತಿಸುವ ಕೆಲಸ ಈಗ ಆಗಬೇಕಾಗಿದೆ. ಸೂರು ಕಟ್ಟಿಕೊಳ್ಳಲು ಅವರಿಗೆ ನೆರವಾಗಬೇಕಾಗಿದೆ. ತುರ್ತಾಗಿ ಆಗಬೇಕಿರುವ ಇಂತಹ ಕೆಲಸಗಳ ಕಡೆ ಗಮನ ಕೊಡಬೇಕಾದುದು ಅಗತ್ಯ. ಅದನ್ನು ಬಿಟ್ಟು, ಆ ಕ್ಷಣದ ಪ್ರಚಾರದ ಹಂಬಲದ ಹೇಳಿಕೆ
ಗಳನ್ನು ನೀಡುವುದು, ವಿವಾದಗಳನ್ನು ಹುಟ್ಟುಹಾಕುವುದು ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರದ ಭಾಗವೆಂದೇ ಪರಿಗಣಿಸಬೇಕಾಗುತ್ತದೆ.

ಸುಸಂಸ್ಕೃತ ರಾಜಕೀಯ ಪ್ರಜ್ಞೆ ಮತ್ತು ಜನಪರ ಚಿಂತನೆಗಳ ಮೂಲಕ ಜನಮಾನಸದಲ್ಲಿ ಉಳಿದ ನಾಯಕರು ನಮ್ಮಲ್ಲಿ ಅನೇಕರಿದ್ದಾರೆ. ಹೋರಾಟಕ್ಕೆ, ಮೌಲ್ಯಗಳಿಗೆ, ಬದ್ಧತೆಗೆ, ಸರಳತೆಗೆ ಹೆಸರಾಗಿ ಬದುಕಿ ತೋರಿದ್ದಾರೆ. ಶಾಂತವೇರಿ ಗೋಪಾಲಗೌಡ, ನಜೀರ್‌ ಸಾಬ್‌, ಎಚ್‌.ಜಿ. ಗೋವಿಂದೇಗೌಡ, ಪ್ರೊ.ಐ.ಜಿ. ಸನದಿ ಮೊದಲಾದ ಮಹನೀಯರ ಮಾನವೀಯಮೌಲ್ಯಗಳು ಇಂದಿಗೂ ನಮಗೆ ಬೆಳಕಾಗಿವೆ. ಆ ಮೌಲ್ಯಗಳ ಬೆಳಕಲ್ಲಿ ನಮ್ಮ ಜನಪ್ರತಿನಿಧಿಗಳ ವ್ಯಕ್ತಿತ್ವ ರೂಪುಗೊಳ್ಳಲಿ.

ಲೇಖಕ: ಪ್ರಾಧ್ಯಾಪಕ, ಭಾವುರಾವ ಕಾಕತಕರ ಕಾಲೇಜು, ಬೆಳಗಾವಿ

ಪ್ರತಿಕ್ರಿಯಿಸಿ (+)