ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಮನೆಯೇ ಅಸುರಕ್ಷಿತವಾದವರ ಸೊಲ್ಲೇಕೆ ನಮಗೆ ಕೇಳುತ್ತಿಲ್ಲ?

ದುರಿತ ಕಾಲದ ನೋವು | ಲೋಕಕ್ಕೆ ಕಾಣದ ಮಗ್ಗುಲ ಗುದ್ದು
Last Updated 23 ಜೂನ್ 2020, 1:33 IST
ಅಕ್ಷರ ಗಾತ್ರ
ADVERTISEMENT
"ಸಬಿತಾ ಬನ್ನಾಡಿ"

‘1967ರ ಒಂದು ದಿನ ನನ್ನ ಎರಡು ವರ್ಷದ ಮಗಳನ್ನು ಸೂಪರ್ ಮಾರ್ಕೆಟ್‌ನ ತಳ್ಳುಗಾಡಿಯಲ್ಲಿ ಕೂರಿಸಿಕೊಂಡು ಶಾಪಿಂಗ್ ಮಾಡುತ್ತಿದ್ದಾಗ, ಇನ್ನೊಂದು ಅಂತಹುದೇ ಗಾಡಿಯಲ್ಲಿ ಕೂತಿದ್ದ ಶ್ವೇತವರ್ಣದ ಹೆಣ್ಣುಮಗುವೊಂದು ಉತ್ಸಾಹದಿಂದ ‘ಅಮ್ಮಾ, ನೋಡು! ಪುಟ್ಟ ಸೇವಕಿ!’ ಎಂದಾಗ ಆ ಅಮ್ಮ ‘ಶ್’ ಎಂದು ಸುಮ್ಮನಾಗಿಸಿದಳೇ ಹೊರತು, ಮಗಳನ್ನು ತಿದ್ದುವ ಗೋಜಿಗೆ ಹೋಗಲಿಲ್ಲ’ ಎಂದು ಉತ್ತರ ಅಮೆರಿಕದ ಕಪ್ಪು ವರ್ಣದ ಲೇಖಕಿ ಆದ್ರೆ ಲೋರ್ದ್ ಬರೆಯುತ್ತಾಳೆ. ಇಲ್ಲಿ ಪುಟ್ಟ ಮಗುವಿನೊಳಗೂ ಜನಾಂಗೀಯ ಮನಃಸ್ಥಿತಿ ಹೇಗೆ ಮೊಳೆತಿದೆ ಮತ್ತು ಅದನ್ನು ಹೇಗೆ ಪೋಷಿಸಲಾಗುತ್ತಿದೆ ಎನ್ನುವುದನ್ನು ಆಕೆ ಹೇಳುತ್ತಿದ್ದಾಳೆ. ಅದು ಇನ್ನೂ ಚಿಗುರಿದ ಸ್ಥಿತಿಯಲ್ಲೇ ಇದೆ ಎನ್ನುವುದಕ್ಕೆ ಅಮೆರಿಕದಲ್ಲಿ ನಡೆದ ಜಾರ್ಜ್ ಫ್ಲಾಯ್ಡ್‌ನ ಜನಾಂಗೀಯ ಹತ್ಯೆಯೇ ಸಾಕ್ಷಿ.

ಈ ದೌರ್ಜನ್ಯ ಜಗತ್ತಿನ ಗಮನ ಸೆಳೆಯಿತು. ನಮ್ಮಲ್ಲೂ ದಲಿತರು, ಅಲ್ಪಸಂಖ್ಯಾತರ ಜೀವಂತ ದಹನಗಳು ನಡೆದಿವೆ. ಜನಾಂಗೀಯತೆ, ಲಿಂಗ ತಾರತಮ್ಯ ಮೊದಲಾದವು ಹೊರಗಿನ ಯಾವ ಸ್ಥಿತಿಗಳು ಬದಲಾದರೂ ಮುಂದುವರಿಯುವುದರಲ್ಲಿ ಮನಃಸ್ಥಿತಿಯ ಪಾತ್ರ ಬಹಳ ದೊಡ್ಡದು. ಇದರ ಮುಂದುವರಿದ ರೂಪವಾದ ಕೌಟುಂಬಿಕ ದೌರ್ಜನ್ಯವು ಲಾಕ್‍ಡೌನ್ ಕಾಲದಲ್ಲಿ ಹೆಚ್ಚಳವಾದ ವರದಿಯೂ ಇದನ್ನೇ ಹೇಳುತ್ತದೆ.

‘ಮನೆಯಲ್ಲಿರಿ, ಸುರಕ್ಷಿತವಾಗಿರಿ’ ಎಂಬುದು ಸಂಪೂರ್ಣ ಲಾಕ್‍ಡೌನ್ ಸಮಯದ ಪ್ರಸಿದ್ಧ ಟ್ಯಾಗ್‍ಲೈನ್ ಆಗಿತ್ತು. ಮನೆ ಎಷ್ಟು ಸುರಕ್ಷಿತ? ಯಾರಿಗೆ ಸುರಕ್ಷಿತ ಎಂಬಂತೆ, ಲಾಕ್‍ಡೌನ್ ಸಮಯದಲ್ಲಿ ಕೌಟುಂಬಿಕ ದೌರ್ಜನ್ಯ (ಡೊಮೆಸ್ಟಿಕ್ ವಯೊಲೆನ್ಸ್) ಹೆಚ್ಚಾದ ಬಗ್ಗೆ ಸುದ್ದಿ ಬಂದಿತ್ತು. ಆದರೆ ಒಮ್ಮೆ ಲಾಕ್‍ಡೌನ್ ಸಡಿಲವಾದ ಮೇಲೆ ಆ ಕುರಿತು ಯಾವ ಸುದ್ದಿಯೂ ಮಹತ್ವ ಪಡೆಯುತ್ತಿಲ್ಲ. ಇದು ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯದಲ್ಲಿ ಸದಾ ಆಗುವ ಸಂಗತಿಯೇ.

ಯಾವಾಗಲೋ ಒಮ್ಮೆ ಧುತ್ತನೆ ಕಾಣಿಸುವ ಸುದ್ದಿಯ ಆವಕ ಇದ್ದಕ್ಕಿದ್ದಂತೆ ಮರೆಗೆ ಸಂದು ಬಿಡುತ್ತದೆ. ಆಮೇಲೆ ಅವರವರ ಕೈ ಅವರವರ ತಲೆಯ ಮೇಲೆ. ಬಹಳ ಆಶ್ಚರ್ಯ ಎಂದರೆ, ಲಾಕ್‍ಡೌನ್ ಸಮಯದಲ್ಲಿ ಜಗತ್ತಿನಾದ್ಯಂತ ಈ ಪ್ರಕ್ರಿಯೆ ಕಾಣಿಸಿಕೊಂಡಿತು. ಶೇಕಡಾವಾರು ಪ್ರಮಾಣ ಹೆಚ್ಚೂ ಕಡಿಮೆ ಇರಬಹುದು ಅಷ್ಟೇ. ಇದರ ಬಲಿಪಶುಗಳು ಕೇವಲ ಮಹಿಳೆಯರಲ್ಲ, ಮಕ್ಕಳೂ ಇದ್ದಾರೆ.

ಹಿಂದೊಮ್ಮೆ ಟಿ.ವಿ. ಷೋ ಒಂದರಲ್ಲಿ, ಅಲ್ಲಿದ್ದ ಪುರುಷ ವೀಕ್ಷಕರಿಗೆ ನಿರೂಪಕರು ಒಂದು ಪ್ರಶ್ನೆ ಕೇಳುತ್ತಾರೆ- ಹೆಂಗಸರು ಎಲ್ಲಿ ಹೆಚ್ಚು ಅಸುರಕ್ಷಿತರು? ಪ್ರಯಾಣ ಮಾಡುವಾಗ, ಕತ್ತಲಾದ ಮೇಲೆ ಜನವಸತಿ ಕಡಿಮೆ ಇರುವ ರಸ್ತೆಗಳಲ್ಲಿ... ಹೀಗೆ ಹಲವು ಉತ್ತರಗಳು ಬಂದವು. ಆನಂತರ ಆ ಕಾರ್ಯಕ್ರಮಕ್ಕಾಗಿ ಮಾಡಿದ ಸಂಶೋಧನೆಯ ಫಲಿತಗಳನ್ನು ತೋರಿಸಲಾಯಿತು. ಅದರ ಪ್ರಕಾರ ಅತಿ ಹೆಚ್ಚು, ಅಂದರೆ ಹೆಚ್ಚೂ ಕಡಿಮೆ ಐವತ್ತು ಪ್ರತಿಶತ ಪ್ರಕರಣಗಳು ಮನೆಯೊಳಗಿನ ಹಿಂಸೆಗೆ ಸಂಬಂಧಿಸಿದ್ದುದು ಗೊತ್ತಾಯಿತು. ಅಂದರೆ, ಹೆಂಗಸು ಮನೆಯೊಳಗೇ ಹೆಚ್ಚು ಅಸುರಕ್ಷಿತಳಾಗಿದ್ದಾಳೆ!

ನಮಗೆ ಮನೆಯ ಹೊರಗಿನ ಹಿಂಸೆ ಕಾಣಿಸುತ್ತಿದೆ. ಹಿಂಸಕರೂ ಕಾಣಿಸುತ್ತಾರೆ. ಅದರೆ ಮನೆಯೊಳಗಿನದು ಕಾಣಿಸುತ್ತಿಲ್ಲ. ನಿಜವಾಗಿಯೂ ನಮಗಿದು ಕಾಣಿಸುತ್ತಿಲ್ಲವೇ? ನೋಡುವ ಮನಸ್ಸು ನಮಗಿಲ್ಲವೇ? ಅಥವಾ ಅದು ಹಿಂಸೆಯೆಂದೇ ನಮಗೆ ಅನ್ನಿಸುತ್ತಿಲ್ಲವೇ? ಹೌದು, ನಮಗದು ಹಿಂಸೆಯೆಂದೇ ಅನ್ನಿಸುತ್ತಿಲ್ಲ. ಆದ್ದರಿಂದ ನಾವು ಹೆಂಗಸರು, ಮಕ್ಕಳ ಮಾತಿಗೆ ಕಿವಿಗೊಡುತ್ತಿಲ್ಲ.

ಇದು ಹಿಂಸೆಯೆಂದು ಅನ್ನಿಸಿಕೊಳ್ಳದಿರುವುದೇ ಬಹಳ ದೊಡ್ಡ ಸಮಸ್ಯೆ. ಇಡೀ ನಮ್ಮ ಮಾನಸಿಕತೆಯನ್ನು ಇದಕ್ಕಾಗಿ ಎಷ್ಟು ಚೆನ್ನಾಗಿ ರೂಪಿಸಲಾಗಿದೆಯೆಂದರೆ, ನಮಗೆ ಪ್ರೀತಿ, ಗೌರವ, ಸುರಕ್ಷೆ ಇತ್ಯಾದಿಗಳೂ ಯಾವುವೆಂದು ಅರಿವಾಗದಷ್ಟು. ಗಂಡು– ಹೆಣ್ಣು ಸೇರಿಯೇ ಈ ಹಿಂಸೆಯ ಕೂಪದೊಳಗೆ ಮುಳುಗಿ, ಬದುಕಿನ ಸೌಂದರ್ಯವನ್ನೇ ಅರಿಯದೇ ಹೋಗುವಷ್ಟು.

ಬಹಳ ಗೌರವಾನ್ವಿತ ವ್ಯಕ್ತಿ ಎನಿಸಿಕೊಂಡವನು, ಹೊರಗಿನ ಬದುಕಿನಲ್ಲಿ ಬಹಳ ಮೆಲು ಮಾತಿನವನು, ಸಂಭಾವಿತ ಎನಿಸಿಕೊಂಡವನು ಮನೆಯಲ್ಲಿ ಸುತ್ತ ನಾಲ್ಕು ಮನೆಗೂ ಕೇಳುವಂತೆ ಗರ್ಜಿಸಿದಾಗ, ಹೆಂಡತಿ ಕಿಟಕಿ, ಬಾಗಿಲುಗಳನ್ನೆಲ್ಲಾ ಭದ್ರಪಡಿಸಿ ಮರ್ಯಾದೆ ಕಾಪಾಡಿಕೊಳ್ಳಲು ಹರಸಾಹಸಪಡುತ್ತಾಳಲ್ಲಾ, ಹೀಗೆ ಮಾಡುವಂತೆ ಅವಳಿಗೆ ಸಿಕ್ಕ ತರಬೇತಿ ಯಾವುದು? ಇಲ್ಲಿಂದಲೇ ಅವನಿಗೊಂದು ಧೈರ್ಯ ಸಿಗಲು ಶುರುವಾಗುತ್ತದೆ. ಒಮ್ಮೆ ಕವಯಿತ್ರಿಯೊಬ್ಬಳು ‘ನಾನು ಹೊಡೆಸಿಕೊಂಡು ಸಾಕಾಗಿ ಒಂದು ದಿನ ಅವನಿಗೆ ವಾಪಸು ಹೊಡೆದುಬಿಟ್ಟೆ. ಅಂದಿನಿಂದ ಅವನು ಹೊಡೆಯುವುದು ಬಿಟ್ಟ’ ಎಂದಳು. ‘ಎಷ್ಟೋ ಬಾರಿ ಹೆಣ್ಣುಮಕ್ಕಳು, ನನ್ನ ಗಂಡ ನನ್ನನ್ನು ಬಹಳ ಪ್ರೀತಿಸುತ್ತಾನೆ. ಆದ್ದರಿಂದಲೇ ಹೊಡೆಯುತ್ತಾನೆ ಎನ್ನುತ್ತಾರಲ್ಲಾ?’ ಎಂಬ ಅಮೀರ್‌ ಖಾನ್ ಪ್ರಶ್ನೆಗೆ ಹೋರಾಟಗಾರ್ತಿ ಕಮಲಾ ಬಾಸಿನ್, ‘ಹೌದಲ್ಲಾ, ಹಾಗಿದ್ದರೆ ನಾವು ಹೆಂಗಸರು ಗಂಡಸರನ್ನು ಸರಿಯಾಗಿ ಪ್ರೀತಿಸುತ್ತಿಲ್ಲ, ನಾವೂ ಅವರಿಗೆ ಸರಿಯಾಗಿ ಬಾರಿಸಿ ಪ್ರೀತಿ ವ್ಯಕ್ತಪಡಿಸಬೇಕಲ್ಲವೇ?’ ಎಂದು ಉತ್ತರಿಸುತ್ತಲೇ ಅದರ ಕಾರಣವನ್ನೂ ಹೇಳುತ್ತಾರೆ. ‘ಗಂಡಸರು ಯಾವ ನಲ್ಲಿಯಿಂದ ನೀರು ಕುಡಿಯುತ್ತಾರೋ ಹೆಂಗಸರೂ ಅದೇ ನಲ್ಲಿಯಿಂದ ಕುಡಿಯುತ್ತಾರೆ. ಅವರು ಪಿತೃಸತ್ತೆಯ ಮನಃಸ್ಥಿತಿಯಿಂದ ತರಬೇತಿಯಾದಂತೆಯೇ ಇವರೂ ಅದೇ ಮನಃಸ್ಥಿತಿಯಿಂದ ತರಬೇತಿ ಪಡೆದಿದ್ದಾರೆ. ಹೀಗಾಗಿ, ಗಂಡಸು ಹೀಗೆಲ್ಲಾ ಮಾಡುವುದು ಸಹಜ ಎಂದು ಇವರು ಭಾವಿಸುತ್ತಾರೆ’ ಎನ್ನುತ್ತಾರೆ.

ಕೊನೆಗೊಂದು ದಿನ, ಪ್ರೀತಿ ಹೀಗೇ ಇರುವುದಾದರೆ ಈ ಪ್ರೀತಿಯ ಸಹವಾಸವೇ ಬೇಡ ಎಂದು ಇವರು ಹೊರಗೆ ಬಂದರೂ ಬರಬಹುದು. ಆದರೆ ಅಷ್ಟೊತ್ತಿಗಾಗಲೇ ಅವರು ಅನವಶ್ಯಕವಾದ ಹಿಂಸೆಗೆ ತುತ್ತಾಗಿರುತ್ತಾರೆ. ಇದರೊಂದಿಗೆ, ಯಾವ ಮಕ್ಕಳಿಗಾಗಿ ಜೀವ ತೇಯುತ್ತಿರುತ್ತಾರೋ ಅವರೂ ಇದನ್ನೆಲ್ಲ ಅನುಭವಿಸುವುದನ್ನು ತಡೆಯಲಾಗದೆ ಒದ್ದಾಡುತ್ತಾರೆ. ಇದು ಗಂಡಸು, ಹೆಂಗಸು ಎಂಬ ಪ್ರಶ್ನೆಯಲ್ಲ. ಗಂಡುಮೇಲರಿಮೆಯನ್ನು ಒಪ್ಪಿಕೊಂಡಿರುವ ಮನಃಸ್ಥಿತಿಯ ಪ್ರಶ್ನೆ. ಇದು ಎಷ್ಟು ಆಳವಾಗಿ ಬೇರೂರಿದೆಯೆಂದರೆ, ಇವುಗಳಿಂದ ಕಳಚಿಕೊಂಡಾಗ ಸಿಗುವ ಮಧುರ ಬಂಧದ ಸುಖವನ್ನೇ ಕಳೆದುಕೊಳ್ಳುವಷ್ಟು.

ಪಾಪ, ಲಾಕ್‍ಡೌನ್ ಕಾಲದಲ್ಲಿ ಬಹಳಷ್ಟು ಹೆಂಗಸರು, ಮಕ್ಕಳು ಹೊಡೆತ ಬಡಿತಗಳಿಂದ ತಪ್ಪಿಸಿಕೊಳ್ಳಲು ಮನೆಯಿಂದ ಹೊರಬರುವುದೂ ಸಾಧ್ಯವಾಗದೆ, ಅದನ್ನು ಅನುಭವಿಸಲೂ ಆಗದೆ ಒದ್ದಾಡಿದರು. ಅತ್ಯಂತ ಕ್ಷುಲ್ಲಕವೆನಿಸುವ- ಸಾರಿಗೆ ಉಪ್ಪು ಕಡಿಮೆಯಾಯ್ತು, ತರಕಾರಿಯವನೊಂದಿಗೆ ಏನು ಮಾತು, ಕಿಟಕಿಯಲ್ಲಿ ಯಾರನ್ನು ನೋಡ್ತಾ ಇದೀಯ, ಟಿ.ವಿ. ರಿಮೋಟ್ ಕೊಡು ಎಂಬಂತಹವೇ ಇವತ್ತಿಗೂ ಕೌಟುಂಬಿಕ ಹಿಂಸೆಗೆ ಕಾರಣವಾಗುತ್ತಿವೆ ಎನ್ನುವುದು ಎಷ್ಟು ಅಸಹ್ಯವಾದ ಸಂಗತಿ ಅಂತ ನಮಗಾರಿಗೂ ಅನ್ನಿಸುವುದಿಲ್ಲ. ಈ ಕಾರಣಗಳನ್ನು ಮುಂದಿಟ್ಟು ಹಿಂಸಿಸುತ್ತಿರುವವರು ಕೇವಲ ಅನಕ್ಷರಸ್ಥರೋ ಕೂಲಿ ಕಾರ್ಮಿಕರೋ ಮಾತ್ರ ಅಲ್ಲ. ಅತ್ಯಂತ ಸೊಫಿಸ್ಟಿಕೇಟೆಡ್ ಬದುಕಿನ ವೈಯ್ಯಾರದವರೂ ಮಾಡುವುದು ಇದನ್ನೇ.

ಪತಿಯನ್ನು ಕಳೆದುಕೊಂಡು ದುಃಖದಲ್ಲಿರುವ ನಟನ ಪತ್ನಿಯೇ ಇರಲಿ, ಮಂತ್ರಿಗಳ ನಿಲುವನ್ನು ಪ್ರಶ್ನಿಸುವ ರೈತಳೇ ಇರಲಿ, ಸಾರ್ವಜನಿಕವಾಗಿ ಇವರನ್ನು ಝಂಕಿಸುವಾಗ ಬಳಸುವ ಕೊಳಕು ಮತ್ತು ಅಧಿಕಾರದ ಭಾಷೆಯ ಹಿಂದಿರುವುದೂ ಗಂಡುಮೇಲರಿಮೆಯ ಒಪ್ಪಿತ ಮನಃಸ್ಥಿತಿಯೇ.

ಲಾಕ್‍ಡೌನ್ ಕಾಲದಲ್ಲಿ ಮನೆಯೊಳಗಿನ ಹಿಂಸೆ ಬಗ್ಗೆ ಅಂಕಿ ಅಂಶ ನೀಡಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಧ್ವನಿ ಆ ನಂತರದಲ್ಲಿ ಅಷ್ಟಾಗಿ ಕೇಳಿಸುತ್ತಿಲ್ಲ. ವಾಣಿಜ್ಯ ಚೇತರಿಕೆಗಾಗಿ, ಮದ್ಯ ಮಾರಾಟಕ್ಕಾಗಿ ಸರ್ಕಾರಗಳು ತೋರಿಸುತ್ತಿರುವ ಉತ್ಸಾಹವನ್ನು, ಕುಡಿತದಿಂದ ಬಡಿತ ತಪ್ಪಿಸಿಕೊಂಡ ಹೆಂಗಸರ ಅನುಭವ ಕೇಳಲು ತೋರಿಸುತ್ತಿಲ್ಲ. ಆದರೆ ಸಹನೆಯೆಂಬ ಪದದ ಅಪವ್ಯಾಖ್ಯಾನವನ್ನು ದಮನಿಗಳಲ್ಲಿ ತುಂಬಿ ನಿಶ್ಚಿಂತರಾಗಿರುವವರಿಗೆ, ಆ ಕುರಿತ ಜಾಗೃತಿಯೇ ಅಪರಾಧವಾಗಿ ಕಾಣಿಸುವ ವಿಪರ್ಯಾಸ ಮಾತ್ರ ಮುಂದುವರಿಯುತ್ತಲೇ ಇದೆ.


ಸಬಿತಾ ಬನ್ನಾಡಿ

ಲೇಖಕಿ: ಕನ್ನಡ ಪ್ರಾಧ್ಯಾಪಕಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT