ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥವ್ಯವಸ್ಥೆಗೆ ಪರಂಪರೆಯಲ್ಲೇ ಮದ್ದು

ರಾಜಕೀಯ ವಲಯದಲ್ಲಿನ ಒರಟುತನವು ಅರ್ಥವ್ಯವಸ್ಥೆಯ ಆತ್ಮವಿಶ್ವಾಸ ಕುಗ್ಗಿಸುವುದು
Last Updated 10 ನವೆಂಬರ್ 2019, 20:03 IST
ಅಕ್ಷರ ಗಾತ್ರ

ಬಲಿಷ್ಠ ಸರ್ಕಾರಗಳು ಇರುವ ದೇಶಗಳ ಅರ್ಥವ್ಯವಸ್ಥೆ ಕೆಲವೊಮ್ಮೆ ದುರ್ಬಲವಾಗುವುದೂ ಇರುತ್ತದೆ.ಹಲವು ವರ್ಷಗಳ ಕಾಲ ಭರವಸೆಯ ಬೆಳವಣಿಗೆ ದಾಖಲಿಸಿದ್ದ ಭಾರತ ಈಗ ಅಂತಹ ಒಂದು ದೇಶವಾಗುವ ಅಪಾಯ ಎದುರಿಸುತ್ತಿದೆ.

ಒಟ್ಟು190ದೇಶಗಳಲ್ಲಿ ವಾಣಿಜ್ಯ ವಹಿವಾಟು ನಡೆಸುವುದು ಎಷ್ಟು ಸುಲಭ ಎಂಬುದನ್ನು ಹೇಳುವ ವರದಿಯನ್ನು ವಿಶ್ವಬ್ಯಾಂಕ್ ಈಚೆಗೆ ಬಿಡುಗಡೆ ಮಾಡಿತು.ಇದರಲ್ಲಿ ಭಾರತದ ಸ್ಥಾನ ಕಳೆದ ವರ್ಷಕ್ಕೆ ಹೋಲಿಸಿದರೆ ಸುಧಾರಿಸಿದೆ.ವಾಣಿಜ್ಯ ವಹಿವಾಟು ನಡೆಸುವುದನ್ನು ಸುಲಭಗೊಳಿಸುವಲ್ಲಿ ಅತಿಹೆಚ್ಚಿನ ಸುಧಾರಣೆ ಕಂಡ10ದೇಶಗಳ ಸಾಲಿನಲ್ಲಿ ಭಾರತ ಮಾತ್ರವಲ್ಲದೆ,ಸೌದಿ ಅರೇಬಿಯಾ,ಪಾಕಿಸ್ತಾನ ಮತ್ತು ಚೀನಾ ಕೂಡ ಇವೆ.ಹೀಗಿದ್ದರೂ,ಭಾರತದ ಅರ್ಥವ್ಯವಸ್ಥೆ ಮಂದಗತಿಯತ್ತ ಸಾಗುತ್ತಿರುವುದನ್ನು ಹಲವಾರು ಸೂಚಕಗಳು ಹೇಳುತ್ತಿವೆ.ಚೀನಾಕ್ಕೆ ಎದುರಾಳಿ ಆಗುವ ಆರ್ಥಿಕ ಶಕ್ತಿಯನ್ನಾಗಿ ಭಾರತವನ್ನು ಪರಿವರ್ತಿಸುವೆ ಎಂಬ ಭರವಸೆ ನೀಡಿ ನರೇಂದ್ರ ಮೋದಿ ಅವರು2014ರಲ್ಲಿ ಅಧಿಕಾರಕ್ಕೆ ಬಂದರು.ಈ ವರ್ಷ ಮತ್ತೆ ಅಧಿಕಾರಕ್ಕೆ ಬಂದ ಅವರು2024ರೊಳಗೆ ಭಾರತವನ್ನು ಈಗಿನದ್ದಕ್ಕಿಂತ ಎರಡು ಪಟ್ಟು ದೊಡ್ಡದಾದ ಅರ್ಥವ್ಯವಸ್ಥೆಯನ್ನಾಗಿ ಪರಿವರ್ತಿಸುವುದಾಗಿ ಹೇಳಿದ್ದಾರೆ.

ಆದರೆ,ಸರ್ಕಾರದ ಅಧಿಕೃತ ಮಾಹಿತಿ ಅನ್ವಯ ಈ ವರ್ಷದ ಮೊದಲನೆಯ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರ ಶೇಕಡ5ರಷ್ಟು ಮಾತ್ರ ಇತ್ತು.ಹಿಂದಿನ ವರ್ಷ ಇದು ಶೇಕಡ8ರಷ್ಟಿತ್ತು. ಈಚೆಗೆ, ಅಂತರರಾಷ್ಟ್ರೀಯ ಹಣಕಾಸು ನಿಧಿ ಕೂಡ ಭಾರತದ2019ರ ಆರ್ಥಿಕ ವೃದ್ಧಿ ದರದ ಅಂದಾಜನ್ನು ಶೇಕಡ6.1ಕ್ಕೆ ತಗ್ಗಿಸಿದೆ. 2003ರಿಂದ2011ರ ನಡುವಿನಲ್ಲಿ ಬೆಳವಣಿಗೆ ದರವು ಸರಾಸರಿ ಶೇಕಡ8.5ರ ಹತ್ತಿರ ಇತ್ತು.ಈಗ ಆಗಿರುವ ಕುಸಿತವು ಅನಿರೀಕ್ಷಿತ.ಹಾಗೆಯೇ,ಕಳವಳಕಾರಿ.

ಭಾರತದಲ್ಲಿ ಕಾರುಗಳ ಮಾರಾಟವು ಏಪ್ರಿಲ್‌-ಸೆಪ್ಟೆಂಬರ್‌ ನಡುವಿನ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ23ರಷ್ಟಕ್ಕಿಂತ ಹೆಚ್ಚು ಕುಸಿದಿದೆ.ದೇಶದ ಆಟೊಮೊಬೈಲ್‌ ಉದ್ದಿಮೆ ಹೇಳಿರುವ ಪ್ರಕಾರ,ರಫ್ತು ಬೆಳವಣಿಗೆ ಕೂಡ ಜಡವಾಗಿದೆ.ದೇಶದ ಹಣಕಾಸು ವ್ಯವಸ್ಥೆಯಲ್ಲಿ ಅಪಾಯ ಕಾದಿದೆ ಎಂದು ಸ್ಟ್ಯಾಂಡರ್ಡ್‌&ಪೂರ್‌ ಸಂಸ್ಥೆ ಹೇಳಿದೆ.

ದೇಶದ ನಿರುದ್ಯೋಗ ದರ45ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣ ತಲುಪಿದೆ.ಒಂದೆಡೆ ಆರ್ಥಿಕ ಬೆಳವಣಿಗೆ ದರ ಕುಗ್ಗುತ್ತಿದ್ದರೆ,ಇನ್ನೊಂದೆಡೆ ಅಸಮಾನತೆ ಕೂಡ ಹೆಚ್ಚಾಗುತ್ತಿದೆ.ಆಕ್ಸ್‌ಫ್ಯಾಮ್‌ ಪ್ರಕಾರ, 2017ರಲ್ಲಿ ದೇಶದಲ್ಲಿ ಸೃಷ್ಟಿಯಾದ ಸಂಪತ್ತಿನ ಶೇಕಡ71ರಷ್ಟು ಪಾಲು,ಶೇಕಡ1ರಷ್ಟು ಜನರ ಕೈಸೇರಿದೆ.ಈಗಿನ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಅಸಮಾನತೆ ಉಲ್ಬಣಗೊಳ್ಳುತ್ತಿತ್ತು.ಆದರೆ,ಈಗ ಬೆಳವಣಿಗೆ ದರ ಕುಸಿದಿರುವುದು,ನಿರುದ್ಯೋಗ ಹೆಚ್ಚಾಗುತ್ತಿರುವುದು ಅದರ ಪರಿಣಾಮವನ್ನು ತೀವ್ರಗೊಳಿಸಿದೆ.

ಹಾಗಾದರೆ,ಭಾರತದಲ್ಲಿ ಆರ್ಥಿಕ ಬೆಳವಣಿಗೆ ದರ ತಗ್ಗುತ್ತಿದ್ದರೂ,ಇಲ್ಲಿ ವಾಣಿಜ್ಯ ವಹಿವಾಟು ನಡೆಸುವುದು ಸುಲಭ ಆಗುತ್ತಿರುವುದು ಹೇಗೆ?ಈ ಎರಡು ವಿದ್ಯಮಾನ ಗಳು ಒಂದಕ್ಕೊಂದು ವಿರೋಧಾಭಾಸ ಎನ್ನುವುದಕ್ಕಿಂತ,ಒಂದನ್ನು ಇನ್ನೊಂದು ವಿವರವಾಗಿ ಹೇಳುತ್ತಿದೆ.

ವಿಶ್ವಬ್ಯಾಂಕ್‌ ನಡೆಸುವ,ಸುಲಲಿತ ವಾಣಿಜ್ಯ ವಹಿ ವಾಟಿನ ಅಂದಾಜು, ದೇಶದ ಕಾನೂನುಗಳು ಕಾಗದದ ಮೇಲೆ ಎಷ್ಟು ಉತ್ತಮವಾಗಿ ಕಾಣುತ್ತವೆ ಎಂಬುದನ್ನು ಆಧರಿಸಿದೆ;ಆ ಕಾನೂನುಗಳು ವಾಸ್ತವದಲ್ಲಿ ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ಇದು ಹೇಳುವು ದಿಲ್ಲ.ಅಂದರೆ,ಸುಲಲಿತ ವಾಣಿಜ್ಯ ವಹಿವಾಟು ಪಟ್ಟಿ ಯಲ್ಲಿ ಒಳ್ಳೆಯ ಸ್ಥಾನ ಪಡೆಯಲು ಸಾಧ್ಯವಾಗುವಂತೆ ಯಾವುದೇ ಸರ್ಕಾರ ತನ್ನ ನಿಯಮಗಳನ್ನು ಬದಲಿಸಿಕೊಳ್ಳ ಬಹುದು.ಆ ಬದಲಾವಣೆಯಿಂದ ವಾಸ್ತವದಲ್ಲಿ ದೊಡ್ಡ ಪರಿಣಾಮ ಆಗಿರಲೇಬೇಕು ಎಂಬುದಿಲ್ಲ!

ಆದರೆ,ನೈಜ ಬೆಳವಣಿಗೆಯು ಈ ಕಾನೂನುಗಳು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನದಲ್ಲಿ ಇವೆ ಎಂಬುದನ್ನು ಆಧರಿಸಿದೆ.ಈಚಿನ ದಿನಗಳಲ್ಲಿ ಭಾರತದ ಸಮಾಜದಲ್ಲಿ ವಿಭಜನಕಾರಿ ಧೋರಣೆ ಹೆಚ್ಚುತ್ತಿದೆ, ಸರ್ಕಾರದ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ವಿಶ್ವಾಸ ಕಡಿಮೆ ಆಗುತ್ತಿರುವುದನ್ನು ಪರೋಕ್ಷವಾಗಿ ಹೇಳುವ ಈ ಒಂದು ಸೂಚ್ಯಂಕವನ್ನು ಗಮನಿಸಿ. ಇದನ್ನು ಅರ್ಥಶಾಸ್ತ್ರಜ್ಞರು ‘ಹೂಡಿಕೆ’ ಎನ್ನುತ್ತಾರೆ. ಭವಿಷ್ಯದ ಉತ್ಪಾದಕತೆಯನ್ನು ಹೆಚ್ಚಿಸುವ ಯಂತ್ರಗಳು, ಕಾರ್ಖಾನೆಗಳು, ಮೂಲಸೌಕರ್ಯಗಳಿಗೆ ಸಂಬಂಧಿಸಿದ್ದು ಇದು. ಪ್ರವರ್ಧಮಾನಕ್ಕೆ ಬರುತ್ತಿರುವ, ಹೇರಳ ಸಂಖ್ಯೆಯಲ್ಲಿ ಕೆಲಸಗಾರರನ್ನು ಹೊಂದಿರುವ ಅರ್ಥವ್ಯವಸ್ಥೆಯಲ್ಲಿ ಹೂಡಿಕೆ ಹೆಚ್ಚಾದರೆ ಒಟ್ಟಾರೆ ಬೆಳವಣಿಗೆಯೂ ಹೆಚ್ಚುತ್ತದೆ ಎನ್ನುವುದನ್ನು ಸೂಚಿಸುವ ಆಧಾರಗಳು ಹಲವು ಇವೆ.

ಸ್ವಾತಂತ್ರ್ಯಾನಂತರ ಹಲವು ವರ್ಷಗಳವರೆಗೆ ಭಾರತವು ಕಡಿಮೆ ಹೂಡಿಕೆಯ ದೇಶವಾಗಿತ್ತು. 1970ರ ದಶಕದ ಉತ್ತರಾರ್ಧದವರೆಗೂ ದೇಶದ ಹೂಡಿಕೆಯು ಒಟ್ಟು ಜಿಡಿಪಿಯ ಶೇಕಡ20ರಷ್ಟನ್ನು ದಾಟಲಿಲ್ಲ. 2004-05ರಲ್ಲಿ ಇದು ಶೇಕಡ30ರ ಗಡಿ ದಾಟಿತು. 2011-12ರಲ್ಲಿ ಶೇಕಡ39ಕ್ಕೆ ಏರಿತು.ಆದರೆ2016-17ರ ವೇಳೆಗೆ ಹೂಡಿಕೆ ಪ್ರಮಾಣ ಶೇಕಡ30ಕ್ಕೆ ಇಳಿಯಿತು.

ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ವಿಶ್ವಾಸ ಗಟ್ಟಿಯಾಗಿಲ್ಲದಿದ್ದರೆ ಹೂಡಿಕೆಯಲ್ಲಿ ಕುಸಿತ ಕಾಣು ತ್ತದೆ.ದೇಶದ ನೀತಿಗಳ ಬಗ್ಗೆ ವಾಣಿಜ್ಯೋದ್ಯಮಗಳು ಕಳವಳ ಹೊಂದಿದ್ದರೆ,ಹಣ ಹೂಡಿಕೆ ಮಾಡಲು ಅವು ಹಿಂದೇಟು ಹಾಕುತ್ತವೆ.ಮಾರುಕಟ್ಟೆ ವ್ಯವಸ್ಥೆ ಯಲ್ಲಿ ಅಸೂಕ್ಷ್ಮವಾಗಿ ಮಧ್ಯಪ್ರವೇಶಿಸಿದ ಮೋದಿ ನೇತೃತ್ವದ ಸರ್ಕಾರವು ನೋಟು ರದ್ದತಿಯ ತೀರ್ಮಾನ ಕೈಗೊಂಡಿದ್ದು,ಅಧಿಕಾರಶಾಹಿಯಲ್ಲಿ ಅಥವಾ ರಾಜ ಕೀಯ ವಲಯದಲ್ಲಿನ ಒರಟುತನ ಅರ್ಥವ್ಯವಸ್ಥೆಯ ಆತ್ಮವಿಶ್ವಾಸವನ್ನು ಹಾಳುಮಾಡಬಲ್ಲದು.

ದೇಶದ ಆರ್ಥಿಕ ಸಾಧನೆಯು ಅಲ್ಲಿನ ಆರ್ಥಿಕ ನೀತಿ ಗಳನ್ನು ಎಷ್ಟು ಅವಲಂಬಿಸಿರುತ್ತದೆಯೋ ಅಲ್ಲಿನ ರಾಜಕಾರಣವನ್ನೂ ಅಷ್ಟೇ ಅವಲಂಬಿಸಿರುತ್ತದೆ.ಸ್ವಾತಂತ್ರ್ಯ ಸಿಕ್ಕ ತಕ್ಷಣ ಭಾರತವು ರಾಜಕೀಯ ಸಂಸ್ಥೆಗಳಲ್ಲಿ ಮೊದಲು ಹೂಡಿಕೆ ಆರಂಭಿಸಿತು- ಅಂದರೆ, ಮೊದಲಿಗೆ ಪ್ರಜಾತಂತ್ರವನ್ನು ಸ್ಥಾಪಿಸಿತು, ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿತು. ಮಾಧ್ಯಮಗಳ ಸ್ವಾತಂತ್ರ್ಯ ಖಾತ್ರಿಪಡಿಸಿತು, ಧರ್ಮನಿರಪೇಕ್ಷತೆ ಅಳವಡಿಸಿಕೊಂಡಿತು, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ನಿಂತಿತು.

ಎರಡನೆಯ ಮಹಾಯುದ್ಧದ ನಂತರ ಹಲವು ದೇಶಗಳು ವಸಾಹತುಶಾಹಿ ಹಿಡಿತದಿಂದ ಹೊರ ಬಂದವು.ಭಾರತ ಮಾಡಿದ ಕೆಲಸವನ್ನು ಬೇರೆಡೆ ಕೆಲವು ಪ್ರಗತಿಪರ ನಾಯಕರು ತಾವೂ ಮಾಡಲು ಯತ್ನಿಸಿದರು.ಆದರೆ ಆ ಯತ್ನಗಳು ಹೆಚ್ಚು ಫಲ ಕೊಡ ಲಿಲ್ಲ.ದಂಗೆಗಳು,ಕ್ಷಿಪ್ರ ಕ್ರಾಂತಿಗಳ ಪರಿಣಾಮವಾಗಿ ಪ್ರಜಾತಂತ್ರವು ಒಂದಾದ ನಂತರ ಒಂದು ದೇಶದಲ್ಲಿ ಕುಸಿದುಬಿತ್ತು.ಅಲ್ಲೆಲ್ಲ ಮಿಲಿಟರಿ ಆಡಳಿತ ಬಂತು ಅಥವಾ ಧಾರ್ಮಿಕ ಸಂಘರ್ಷ ಶುರುವಾಯಿತು.ಇದಕ್ಕೆ ಹೊರತಾಗಿ ನಿಂತಿದ್ದು ಉದಾರವಾದಿ ಸಂವಿಧಾನ ಹೊಂದಿರುವ,ಕಾಲಕಾಲಕ್ಕೆ ಚುನಾವಣೆಗಳು ನಡೆಯುವ ಹಾಗೂ ಶಕ್ತಿಯುತ ಸುಪ್ರೀಂ ಕೋರ್ಟನ್ನು ಹೊಂದಿರುವ ಭಾರತ.

ಕೌಶಿಕ್ ಬಸು
ಕೌಶಿಕ್ ಬಸು

ಪ್ರಗತಿಪರ ರಾಜಕಾರಣದಲ್ಲಿ ಭಾರತ ಮಾಡಿದ ಹೂಡಿಕೆ ಸರಿಯೇ ಎಂಬ ಬಗ್ಗೆ ಚರ್ಚಿಸಬಹುದು.ನನ್ನ ಪ್ರಕಾರ ಅದು ಸರಿಯಾಗಿತ್ತು. ಆದರೆ,ಅಂಥದ್ದೊಂದು ರಾಜಕೀಯ ಬಂಡವಾಳವನ್ನು ಸೃಷ್ಟಿಸಿಕೊಂಡ ನಂತರ,ಈಗ ಅದನ್ನು ವ್ಯರ್ಥ ಮಾಡುವುದು ಬಹುದೊಡ್ಡ ತಪ್ಪಾಗುತ್ತದೆ.ದೇಶದ ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳು ಈಗಲೂ ಗಟ್ಟಿಯಾಗಿವೆ.ಈಗ ಕಂಡುಬಂದಿರುವ ಆರ್ಥಿಕ ಕುಸಿತಕ್ಕೆ ಕಾರಣ,ಭಾರತವು ಉದಾರವಾದದಿಂದ ವಿರುದ್ಧ ದಿಕ್ಕಿಗೆ ಹೊರಳಿಕೊಂಡಿದ್ದು.ತನ್ನ ಪ್ರಗತಿಪರ ಪರಂಪರೆಯ ಮೇಲೆ ಪುನಃ ಹಕ್ಕು ಸ್ಥಾಪಿಸುವ ಮೂಲಕ ಭಾರತವು ಅರ್ಥವ್ಯವಸ್ಥೆಗೆ ಮತ್ತೆ ಶಕ್ತಿ ತುಂಬಬಹುದು.

-ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT