ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವಿವಾದಗಳಿಗೆ ಕಾರಣ ಆಗದಿರಲಿ

Last Updated 9 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಶತಮಾನಗಳ ಇತಿಹಾಸ ಹೊಂದಿದ ರಾಮಜನ್ಮಭೂಮಿ ಸ್ಥಳದ ಕುರಿತ ವಿವಾದಕ್ಕೆ ಸುಪ್ರೀಂಕೋರ್ಟ್‌ ತನ್ನ ತೀರ್ಪಿನ ಮೂಲಕ ಅಂತ್ಯ ಹಾಡಿದೆ. ತೀರ್ಪಿನ ಕುರಿತು ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ರಾಜಕೀಯ, ಸಾಮಾಜಿಕ, ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದ್ದ ಈ ವಿವಾದ ಒಂದು ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ.

ದೇಶದ ಕಾನೂನು ವ್ಯವಸ್ಥೆಯಲ್ಲಿ ಸುಪ್ರೀಂಕೋರ್ಟ್‌ ಅತ್ಯುನ್ನತ ಸಂಸ್ಥೆ. ಇಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಭಾರತದ ರಾಜಕೀಯ– ಸಾಮಾಜಿಕ ಕ್ಷೇತ್ರಗಳ ಮೇಲೆ ದೂರಗಾಮಿ ಪರಿಣಾಮವನ್ನು ಬೀರುತ್ತದೆ. ತೀರ್ಪು ಪ್ರಕಟಣೆಯ ಮುಂಚೆಯೇ ದೇಶದ ಬಹುತೇಕ ಸಂಘ– ಸಂಸ್ಥೆಗಳು ಸೌಹಾರ್ದ ವಾತಾವರಣಕ್ಕೆ ಹಂಬಲಿಸಿದ್ದು ಸ್ವಾಗತಾರ್ಹ.

ರಾಮ ಜನ್ಮಭೂಮಿ ಕುರಿತು ಸುಪ್ರೀಂಕೋರ್ಟ್‌ ತೀರ್ಮಾನವನ್ನು ಗೌರವಿಸಬೇಕಾದದ್ದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಅದೇ ಸಂದರ್ಭದಲ್ಲಿ ಗೌರವ ಪ್ರಶ್ನಾತೀತವಾಗಿರಬೇಕೆಂದೇನೂ ಅಲ್ಲ. ಪ್ರಸ್ತುತ ತೀರ್ಪು ನ್ಯಾಯ ತರ್ಕದ ಆಚೆ ಸಾಮಾಜಿಕ ಸೌಹಾರ್ದದ ಕಾಳಜಿ ಹೊಂದಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದರೆ ಅಗೌರವ ಸೂಚಿಸಿದಂತಲ್ಲ. ತೀರ್ಪು ಪ್ರಕಟಣೆಯ ಮುಂಚೆಯೇ ನ್ಯಾಯಮೂರ್ತಿಗಳು ಮಾಧ್ಯಮಗಳ ಮುಂದೆ ಬಂದು ಸೌಹಾರ್ದ ಕಾಪಾಡಲು ಮನವಿ ಮಾಡುತ್ತಾರೆ. ಇದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನ ಸಾಮಾಜಿಕ ಪರಿಣಾಮಗಳ ಕುರಿತು ಹೊಂದಿದ ಆತಂಕ ಮತ್ತು ಕಾಳಜಿ. ಪ್ರಸ್ತುತ ತೀರ್ಪು ಕೊಡಲು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ವಹಿಸಿದ ಶ್ರಮ ತೀರ್ಪಿನ ಪಕ್ಷಿನೋಟದಿಂದಲೇ ವೇದ್ಯವಾಗುತ್ತದೆ.

ಕ್ರಿ.ಶ. ಪೂರ್ವ ರಾಮಾಯಣ ಕಾಲದಿಂದ 1528, 1528ರಿಂದ 1558, 1558ರಿಂದ 1949 ಮತ್ತು ವ್ಯಾಜ್ಯದ ಅಂತಿಮ ವಾದ–ವಿವಾದದವರೆಗಿನ ಎಲ್ಲ ಸಾಕ್ಷ್ಯ, ಪುರಾವೆ, ಆಧಾರಗಳನ್ನು ಪರಿಶೀಲಿಸಿದ್ದಾರೆ, ನ್ಯಾಯಾಪೇಕ್ಷಿಗಳ ಎಲ್ಲ ವಾದಗಳನ್ನೂ ಆಲಿಸಿ ದಾಖಲಿಸಿದ್ದಾರೆ. ಅಂತಿಮವಾಗಿ ತೀರ್ಪು ನೀಡುವಾಗ ಹಿಂದೂಗಳ ‘ನಂಬಿಕೆ, ವಿಶ್ವಾಸ’ ಆಚರಣೆಗಳ ಪುರಾವೆಗಳನ್ನು ಅವಲಂಬಿಸುತ್ತಾರೆ.

ರಾಮಜನ್ಮಭೂಮಿ ಕುರಿತ ತೀರ್ಪನ್ನು ನಂಬಿಕೆ ಮತ್ತು ವಿಶ್ವಾಸಗಳ ಪುರಾವೆಗಳನ್ನು ಅನುಲಕ್ಷಿಸಿ, ಸಾಮಾಜಿಕ ಸೌಹಾರ್ದದ ಕಾಳಜಿಯಿಂದ ನೀಡಲಾಗಿದೆ. ಆದರೆ ಆತಂಕವಿರುವುದು ಇಲ್ಲಿಯೇ. ನಂಬಿಕೆ, ವಿಶ್ವಾಸಗಳು ಪುರಾವೆ ಅಂತಾದರೆ ದೇಶದಲ್ಲಿ ಹಲವಾರು ಕಡೆ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತವೆ.

ಪ್ರಸ್ತುತ ರಾಮಜನ್ಮಭೂಮಿ ವಿವಾದದ ತೀರ್ಪು ಒಂದು ಮಾದರಿ. ರೂಲಿಂಗ್‌ ಆಗಿ ಹೊಸ ವಿವಾದಗಳಿಗೆ ದಾರಿ ಮಾಡುವ ಆತಂಕವಿದೆ. ಹಿಂದೂ, ಮುಸ್ಲಿಂ ಧರ್ಮದವರು ಇದನ್ನು ಒಪ್ಪಬಹುದು. ಆದರೆ ಧರ್ಮಾಂಧರು ಇದರ ದುರುಪಯೋಗ ಪಡೆಯುತ್ತಾರೆ. ಶಬರಿಮಲೈ ಕುರಿತ ಸುಪ್ರೀಂ ಕೋರ್ಟ್‌ನ ತೀರ್ಪನ್ನು ವಿರೋಧಿಸಿ ಬೀದಿಗಿಳಿದ ಹಿಂದೂ ಮತಾಂಧರು ಇಂದು ಸುಪ್ರೀಂಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ. ಹಿಂದಿನಿಂದಲೂ ಅವರ ಘೋಷಣೆ ‘ಅಯೋಧ್ಯಾ ಜಾರಿ ಹೈ, ಕಾಶಿ, ಮಥುರಾ ಬಾಕಿ ಹೈ’ ಎಂಬುದು. ನ್ಯಾಯಾಲಯಗಳು ಮತ್ತು ಜನಸಾಮಾನ್ಯರು ಧರ್ಮ, ಧಾರ್ಮಿಕ ಕ್ಷೇತ್ರಗಳು ರಾಜಕೀಯ ಹಿತಾಸಕ್ತಿಗೆ ಬಲಿಯಾಗಬಾರದೆಂದು ಆಶಿಸಿದರೂ, ಧರ್ಮಾಂಧರು ಅದಕ್ಕೆ ಅವಕಾಶ ಕೊಡುವುದಿಲ್ಲ.

ಭಾರತದ ಇತಿಹಾಸದಲ್ಲಿ ಇಸ್ಲಾಂ, ಕ್ರಿಶ್ಚಿಯನ್ ಧರ್ಮ ಪ್ರವೇಶವಾಗುವ ಮುಂಚೆಯೇ ಶೈವ– ವೈಷ್ಣವ, ವೈದಿಕ–ಜೈನ, ವೈದಿಕ–ಬೌದ್ಧ ಹೀಗೆ ವಿವಿಧ ಧರ್ಮಾನುಯಾಯಿಗಳ ನಡುವೆ ಸಂಘರ್ಷಗಳಾಗಿವೆ. ಪೂಜಾ ಸ್ಥಾನಗಳ ಮೇಲೆ ದಾಳಿಗಳಾಗಿ ದೇವರುಗಳು ಪಲ್ಲಟವಾಗಿವೆ. ನಂಬಿಕೆ, ವಿಶ್ವಾಸ, ಆಚರಣೆ ಇವೆಲ್ಲ ಪ್ರಮುಖ ಪುರಾವೆಗಳಾಗಿ, ವಿವಾದವಾಗಿ ನ್ಯಾಯಾಲಯಗಳ ಮುಂದೆ ಬಂದರೆ ಸಾಮಾಜಿಕ ಬದುಕು ಕೋಲಾಹಲಕ್ಕೆ ಈಡಾಗುತ್ತದೆ. ನಿರ್ದಿಷ್ಟ ಸಂದರ್ಭದಲ್ಲಿ ಬಂದ ಇಂದಿನ ತೀರ್ಪು ಸಾಮಾಜಿಕ ಸೌಹಾರ್ದ ನೆಲೆಸಲು ಸಹಕಾರಿಯಾಗಲಿ. ಆದರೆ, ಇತರೆ ವಿವಾದಗಳಿಗೆ ಮಾದರಿಯಾಗದಿರಲಿ ಎಂದು ಆಶಿಸಬೇಕಾಗಿದೆ. ಪ್ರಸ್ತುತ ತೀರ್ಪು ಬರುವವರೆಗೆ ಕಾಯದೇ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಶಕ್ತಿಗಳು ಕಾನೂನನ್ನು ಕೈಗೆತ್ತಿಕೊಂಡಿದ್ದು ಮರೆಯಲಾಗದ ಅಪರಾಧ. ಇಂಥ ಶಕ್ತಿಗಳಿಗೆ ಶಿಕ್ಷೆಯಾಗಬೇಕು.

ಬೇರೆ ವಿವಾದಗಳನ್ನು ಸೃಷ್ಟಿಸಿ ದೇವರು, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಇನ್ನಾದರೂ ತಡೆಯಬೇಕಾಗಿದೆ.

ರಾಮಜನ್ಮಭೂಮಿ ವಿವಾದ ಕುರಿತ ತೀರ್ಪು ಪ್ರಕಟವಾದ ತಕ್ಷಣವೇ ಕೆಲವು ದೃಶ್ಯ ಮಾಧ್ಯಮಗಳು, ವ್ಯಕ್ತಿ, ಸಂಘಟನೆಗಳ ಪ್ರತಿನಿಧಿಗಳು ‘ಹಿಂದೂಗಳ ಗೆಲುವು, ರಾಮಲಲ್ಲಾ ಗೆಲುವು’ ಹೀಗೆ ಹಲವಾರು ರೀತಿಯಲ್ಲಿ ಪ್ರಚೋದನಾತ್ಮಕ ಮಾತುಗಳನ್ನು ಆಡುವುದನ್ನು ನೋಡಿದರೆ, ಧರ್ಮದ ಹೆಸರಿನ ರಾಜಕಾರಣಿಗಳು ವಿವಾದ ಇತ್ಯರ್ಥವಾದ ಸಮಾಧಾನಕ್ಕಿಂತಲೂ, ಉನ್ಮಾದ ಎದ್ದು ಕಾಣುತ್ತಿದೆ. ಈ ಉನ್ಮಾದ ಶಾಂತಿ–ಸಹಬಾಳ್ವೆಯ ಉದ್ದೇಶದಿಂದ ಬಂದ ತೀರ್ಪನ್ನು ಸೇಡಿಗೆ, ಪ್ರತೀಕಾರಕ್ಕೆ ಬಳಸಲು ದಾರಿ ಮಾಡಿಕೊಡುತ್ತದೆ. ಹಾಗಾಗದೇ ಒಂದು ವಿವಾದ ಇತ್ಯರ್ಥವಾದ ಸಮಾಧಾನವಿರಲಿ.

(ಲೇಖಕರು ಸಾಮಾಜಿಕ ಕಾರ್ಯಕರ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT