ಬುಧವಾರ, ನವೆಂಬರ್ 20, 2019
22 °C
ಶಾಲಾ ಪಠ್ಯವು ಮಾಹಿತಿಯ ನಿರೂಪಣೆಯೇ ಹೊರತು ಪರ–ವಿರೋಧದ ಪ್ರತಿಪಾದನೆ ಅಲ್ಲ

ಪಠ್ಯಪುಸ್ತಕವು ಪಕ್ಷ ಪುಸ್ತಕವಲ್ಲ

Published:
Updated:
Prajavani

ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರು ಶಾಲಾ ಪಠ್ಯಗಳಿಂದ ಟಿಪ್ಪು ಸುಲ್ತಾನ್ ಕುರಿತ ವಿಷಯವನ್ನು ತೆಗೆದುಹಾಕಬೇಕೆಂದು ಶಿಕ್ಷಣ ಸಚಿವರಿಗೆ ಪತ್ರ ಬರೆದ ನಂತರ, ಈ ವಿಷಯ ವಿವಾದಕ್ಕೆ ಕಾರಣವಾಗಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ವಿವಾದದ ಪರಿಹಾರಕ್ಕೆ ಸಮಿತಿಯೊಂದರ ಮೊರೆ ಹೋಗಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ತೆಗೆದುಹಾಕುವ ಸೂಚನೆ ನೀಡಿದ್ದಾರೆ.

ಹೀಗೆ ಯಾವುದೇ ಪಠ್ಯ ವಿಷಯವನ್ನು ಪಕ್ಷದ ನೆಲೆಯಿಂದ ಮಾತ್ರ ನೋಡಿ, ಅದನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕಬೇಕೆಂಬ ನಿಲುವು ಮತ್ತು ಒತ್ತಾಯವು ಯಾರಿಂದ ಬಂದರೂ ಅದು ಶಿಕ್ಷಣ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ.

ಪಠ್ಯ ವಿಷಯಗಳಲ್ಲಿ ತಪ್ಪು ಮಾಹಿತಿಯಿದ್ದರೆ, ಆಕ್ಷೇಪಾರ್ಹ ಅಂಶಗಳಿದ್ದರೆ ಪರಿಷ್ಕರಿಸಿ ತಿದ್ದುಪಡಿ ಮಾಡಬಹುದೇ ಹೊರತು, ಪೂರ್ಣ ಪಾಠವನ್ನೇ ಅಳಿಸಿಹಾಕುವ ಪ್ರವೃತ್ತಿ ಯಾವತ್ತೂ ಸರಿಯಲ್ಲ. ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ನನ್ನನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಸರ್ವಾಧ್ಯಕ್ಷನನ್ನಾಗಿ ನೇಮಿಸಿದಾಗ, ನಾನು ಅಂದಿನ ಶಿಕ್ಷಣ ಸಚಿವರ ಎದುರೇ ಹೀಗೆ ಹೇಳಿದ್ದೆ: ‘ಪಠ್ಯಪುಸ್ತಕಗಳ ಕೇಸರೀಕರಣಕ್ಕೆ ಕಾಂಗ್ರೆಸ್ಸೀಕರಣ ಪರ್ಯಾಯವಲ್ಲ. ಪಠ್ಯಪುಸ್ತಕಗಳು ಪಕ್ಷ ಪುಸ್ತಕಗಳಲ್ಲ’. ಈಗಲೂ ನಾನು ಈ ಹೇಳಿಕೆಗೆ ಬದ್ಧನಾಗಿದ್ದೇನೆ. ಪಠ್ಯಪುಸ್ತಕಗಳು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಇರಬೇಕೆಂದು ನಂಬಿದ್ದೇನೆ.

ಟಿಪ್ಪು ಸುಲ್ತಾನ್ ಕುರಿತು ಕೆಲವು ನಕಾರಾತ್ಮಕ ಅಂಶಗಳನ್ನು ಮುಂದು ಮಾಡಿ ಇಡೀ ಪಾಠವನ್ನೇ ತೆಗೆಯಬೇಕೆನ್ನುವವರು ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಒಂದರಿಂದ ಪದವಿಪೂರ್ವ ತರಗತಿಯವರೆಗಿನ ಪಠ್ಯಗಳು ಯಾವುದೇ ವಿಷಯದ ಪರ ಮತ್ತು ವಿರೋಧದ ವಿಷಯಗಳನ್ನು ಪ್ರತಿಪಾದಿಸುವುದಿಲ್ಲ. ಬದಲಾಗಿ, ವಿವಾದರಹಿತವಾದ ಮಾಹಿತಿಯನ್ನು ಮಾತ್ರ ನಿರೂಪಿಸುತ್ತವೆ. ಟಿಪ್ಪು ಸುಲ್ತಾನ್ ವಿಷಯದಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗಿದೆ. ಟಿಪ್ಪು ಕುರಿತ ಪಾಠವನ್ನು ತೆಗೆದರೆ ಇತಿಹಾಸದ ಒಂದು ಮುಖ್ಯ ಕಾಲಘಟ್ಟವನ್ನೇ ಕೈಬಿಟ್ಟಂತಾಗುತ್ತದೆ. ಆದ್ದರಿಂದ ಕೈಬಿಡುವುದು ಶಿಕ್ಷಣವಿರೋಧಿ ಕ್ರಮವಾಗುತ್ತದೆ.

ಇಷ್ಟಕ್ಕೂ ಸಮಾಜವಿಜ್ಞಾನದ ಶಾಲಾ ಪಠ್ಯಗಳಲ್ಲಿ ಈಗ ಟಿಪ್ಪು ಕುರಿತು ಯಾವ ಮಾಹಿತಿಯಿದೆ ಎಂಬುದನ್ನು ಮೊದಲು ತಿಳಿಯಬೇಕು. ಆರನೇ ತರಗತಿಯ ಪಠ್ಯದಲ್ಲಿ ಹೀಗಿದೆ: ‘ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳನ್ನು ಟಿಪ್ಪು ನಡೆಸಿದನು. ಫ್ರೆಂಚರ ಜೊತೆಯಲ್ಲಿ ಸಹಾಯಕ್ಕೆ ಸಂಧಾನ ನಡೆಸಿ ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಪ್ರಯತ್ನಿಸಿದ. ಟಿಪ್ಪು ಸುಲ್ತಾನನು ಅನೇಕ ಜನಪರ ಕಾರ್ಯಗಳನ್ನು ಕೈಗೊಂಡನು. ಟಿಪ್ಪು ಸುಲ್ತಾನನು 1799ರಲ್ಲಿ ಬ್ರಿಟಿಷರ ಜೊತೆಗಿನ ಯುದ್ಧದಲ್ಲಿ ಪ್ರಾಣತೆತ್ತನು’ (ಪುಟ–27).

ಈ ಮಾಹಿತಿಯಲ್ಲಿ ವೈಭವೀಕರಣ ಎಲ್ಲಿದೆ? ಇದ್ದದ್ದನ್ನು ಇದ್ದಂತೆ ಸರಳವಾಗಿ ಹೇಳಲಾಗಿದೆ. ಇದನ್ನು ವಿಸ್ತರಿಸಿ, ಏಳನೇ ತರಗತಿಯ ಸಮಾಜವಿಜ್ಞಾನ ಪಠ್ಯದಲ್ಲಿ, ಟಿಪ್ಪು ನಡೆಸಿದ ಯುದ್ಧಗಳ ವಿವರಗಳ ಜೊತೆಗೆ ಕೆಲವು ಸಕಾರಾತ್ಮಕ ಸಾಧನೆಗಳನ್ನು ವಿವರಿಸಲಾಗಿದೆ (ಪುಟ–48). ಇದರಲ್ಲಿ ಯಾವುದೂ ಸುಳ್ಳಲ್ಲ. ಸುಳ್ಳೆಂದು ಸಾಬೀತಾದರೆ ತಿದ್ದಬಹುದು.

ಇನ್ನು ಹತ್ತನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದ 31ನೇ ಪುಟದಲ್ಲಿ ಟಿಪ್ಪು ಸುಲ್ತಾನ್ ಕುರಿತ ಇನ್ನಷ್ಟು ಮಾಹಿತಿಯಿದೆ. ‘ಬ್ರಿಟಿಷರನ್ನು ತನ್ನ ರಾಜ್ಯ ವಿಸ್ತರಣೆ ನೀತಿಗೆ ಅಡ್ಡಪಡಿಸುತ್ತಿರುವ ಶತ್ರುಗಳು ಎಂದು ಭಾವಿಸಿ ಅವರನ್ನು ಓಡಿಸುವ ಗಂಭೀರ ಪ್ರಯತ್ನಗಳನ್ನು ಮಾಡಿದನು. ತಮ್ಮ ಕುಟಿಲ ನೀತಿಯಿಂದ ಭಾರತೀಯ ರಾಜ್ಯಗಳನ್ನು ಕಬಳಿಸುತ್ತಿದ್ದ ಬ್ರಿಟಿಷರನ್ನು ಪರಮ ವೈರಿಗಳು ಎಂದು ತಿಳಿದ ಅವನು, ಅವರನ್ನು ಭಾರತದಿಂದ ಓಡಿಸುವುದು ತನ್ನ ಆದ್ಯ ಕರ್ತವ್ಯವೆಂದು ತಿಳಿದಿದ್ದನು’ ಎಂಬ ಸಾಲುಗಳಿಂದ ಆರಂಭವಾಗುವ ಮಾಹಿತಿಯು ಮುಂದೆ ಟಿಪ್ಪು ಮಾಡಿದ ಯುದ್ಧಗಳ ವಿವರಗಳನ್ನು ಒಳಗೊಂಡಿದೆ.

ಈ ವಿವರಗಳಲ್ಲಿ ಟಿಪ್ಪುವನ್ನು ‘ಸ್ವಾತಂತ್ರ್ಯ ಹೋರಾಟಗಾರ’ ಎಂದು ವೈಭವೀಕರಿಸಿಲ್ಲ. ಪೂರ್ಣಪ್ರಮಾಣದ ಸ್ವಾತಂತ್ರ್ಯ ಚಳವಳಿ ರೂಪುಗೊಳ್ಳಲು ಟಿಪ್ಪು ನಂತರದ ಅನೇಕ ದಶಕಗಳೇ ಆಗಿದ್ದರಿಂದ ಆ ಚರ್ಚೆಗೆ ಹೋಗದೆ, ಟಿಪ್ಪುವನ್ನು ‘ಬ್ರಿಟಿಷ್ ವಿರೋಧಿ ಹೋರಾಟಗಾರ’ ಎಂದು ನಿಸ್ಸಂದೇಹವಾಗಿ ಕರೆಯಲೇಬೇಕು. ಸ್ವಾತಂತ್ರ್ಯ ಚಳವಳಿಯ ಸ್ವರೂಪವನ್ನು ಚರ್ಚಿಸಲು ವಿಶ್ವವಿದ್ಯಾಲಯ ಹಂತದ ಪಠ್ಯಗಳು ಸೂಕ್ತ; ಶಾಲಾ ಪಠ್ಯಗಳಲ್ಲ. ಹೀಗಾಗಿ, ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಲ್ಲವಾದರೂ ಏಳನೇ ತರಗತಿ ಪಠ್ಯದಲ್ಲಿ ‘ಮೈಸೂರು ಹುಲಿ ಎಂದು ಪ್ರಸಿದ್ಧವಾಗಿದ್ದಾನೆ’ ಎಂಬ ವಾಕ್ಯವಿದೆ. ‘ಮೈಸೂರು ಹುಲಿ’ ಎಂದು ಗುಣವಿಶೇಷ ಬಳಸಿ ಕರೆದದ್ದು ಬ್ರಿಟಿಷ್‌ ಇತಿಹಾಸಕಾರರು ಎಂಬುದನ್ನೂ ಇಲ್ಲಿ ಉಲ್ಲೇಖಿಸಬೇಕಾಗಿದೆ. ಮೈಸೂರಿನ ಇತಿಹಾಸ ಪ್ರಾಧ್ಯಾಪಕ ಡಾ. ಅಶ್ವತ್ಥನಾರಾಯಣ ಅವರು ಹೇಳಿದಂತೆ, ಜೇಮ್ಸ್‌ ಗ್ರ್ಯಾಂಟ್ ತನ್ನ ‘ಇಲಸ್ಟ್ರೇಟೆಡ್‌ ಹಿಸ್ಟರಿ ಆಫ್ ಇಂಡಿಯಾ’ ಕೃತಿಯಲ್ಲಿ ‘ಟೈಗರ್’ ಎಂದು ಕರೆದಿದ್ದಾನೆ. ಆ ನಂತರ ನಮ್ಮಲ್ಲಿ ಅದು ಚಾಲ್ತಿಗೆ ಬಂತು.

ಪಠ್ಯದಲ್ಲಿ ಈಗ ಇರುವುದನ್ನು ತಪ್ಪು ಮಾಹಿತಿ ಎನ್ನಲು ಸಾಧ್ಯವಿಲ್ಲ. ಆದರೂ ಮತಾಂಧನೆಂದೂ ಆತನ ಕ್ರೌರ್ಯದ ವಿವರಗಳು ಕೂಡ ಇರಬೇಕಿತ್ತೆಂದೂ ಆತ ಕ್ರೂರಿಯಾದ್ದರಿಂದ ಇಡೀ ಪಾಠವನ್ನು ಕೈಬಿಡಬೇಕೆಂದೂ ವಾದಿಸಲಾಗುತ್ತಿದೆ. ಹೀಗೆ ವಾದಿಸುವವರಿಗೆ ನನ್ನದೊಂದು ಪ್ರಶ್ನೆ: ಏಳನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದ 52ನೇ ಪುಟದಲ್ಲಿರುವ ಸಾವರ್ಕರ್‌ ಕುರಿತ ಮಾಹಿತಿಗೂ ಇದೇ ವಾದವನ್ನು ಮಂಡಿಸುವಿರಾ? ಹಾಗಾದರೆ ಪಠ್ಯದಲ್ಲಿರುವ ಸಾವರ್ಕರ್‌ ಕುರಿತ ಮಾಹಿತಿಯನ್ನು ಇಲ್ಲಿ ಓದಿ; ಅದು ಹೀಗಿದೆ: ‘ವಿನಾಯಕ ದಾಮೋದರ ಸಾವರ್ಕರ್‌ ಮತ್ತೋರ್ವ ಕ್ರಾಂತಿಕಾರಿ. 1899ರಲ್ಲಿ ಅವರು ‘ಮಿತ್ರಮೇಳ’ ಎನ್ನುವ ಪ್ರಥಮ ಗುಪ್ತ ಸಂಘಟನೆಯನ್ನು ಕಟ್ಟಿದರು. ಅವರಿಗೆ ಬ್ರಿಟಿಷ್ ಸರ್ಕಾರ ಜೀವಾವಧಿ ಕಾರಾಗೃಹ ವಾಸವನ್ನು ವಿಧಿಸಿ ಅಂಡಮಾನ್ ಜೈಲಿಗೆ ರವಾನಿಸಿತು. ಅವರು ಕ್ರೂರ ದೈಹಿಕ ಚಿತ್ರಹಿಂಸೆಯನ್ನು ಅನುಭವಿಸಿದ ಅಂಡಮಾನ್ ಜೈಲಿನಲ್ಲಿ ಭಾರತ ಸರ್ಕಾರ ಅವರ ಸ್ಮಾರಕವನ್ನು ನಿರ್ಮಿಸಿದೆ’.

ಸಾವರ್ಕರ್ ಕುರಿತು ವಿವಾದಾತ್ಮಕ ಸಂಗತಿಗಳೂ ಇರುವುದರಿಂದ ಅವರ ವಿಷಯವೇ ಪಠ್ಯದಲ್ಲಿ ಇರಬಾರದೆಂದು ಯಾರಾದರೂ ವಾದಿಸಿದರೆ ಟಿಪ್ಪು ವಿರೋಧಿಗಳು ಒಪ್ಪುತ್ತಾರೆಯೇ? ಅಥವಾ ಇರುವ ವಿಷಯಗಳ ಜೊತೆಗೆ ಸಾವರ್ಕರ್ ಅವರನ್ನು ಕುರಿತ ನಕಾರಾತ್ಮಕ ವಿಷಯಗಳನ್ನು ಸೇರಿಸಬೇಕೆಂದರೆ ಅದಕ್ಕೆ ಸದರಿ ಶಾಸಕರು ಮತ್ತು ಸರ್ಕಾರ ಒಪ್ಪಬಹುದೇ? ಟಿಪ್ಪುವಿನ ವಿಷಯಕ್ಕೊಂದು, ಸಾವರ್ಕರ್ ವಿಷಯಕ್ಕೊಂದು ಪ್ರತ್ಯೇಕ ಮಾನದಂಡ ಅನುಸರಿಸುವ ಪ್ರವೃತ್ತಿಯೂ ಮತಾಂಧತೆಯಲ್ಲವೇ?

ಇನ್ನೊಂದು ಪ್ರಶ್ನೆ: ನಮ್ಮ ಸಂವಿಧಾನದ ಮೂಲ ಪ್ರತಿಯ 144ನೇ ಪುಟದಲ್ಲಿ ಟಿಪ್ಪು ಚಿತ್ರವಿದ್ದು, ಅದನ್ನೂ ತೆಗೆಯಬೇಕೆಂದು ಮೂಲಭೂತವಾದಿ ‘ಮುತ್ಸದ್ದಿ’ಗಳು ಒತ್ತಾಯಿಸುತ್ತಾರೆಯೇ? ಕಡೆಯದಾಗಿ ಒಂದು ವಿಷಯ: ಯಾವ ಬ್ರಿಟಿಷರ ವಿರುದ್ಧ ಟಿಪ್ಪು ನಿರಂತರ ಹೋರಾಟ ಮಾಡಿದನೋ ಅದೇ ಬ್ರಿಟಿಷರ ಸರ್ಕಾರವು ತನ್ನ ‘ಬ್ರಿಟಿಷ್ ಮ್ಯೂಸಿಯಂ’ನಲ್ಲಿ ಟಿಪ್ಪುವಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಸಾರ್ವಜನಿಕ ವೀಕ್ಷಣೆಗೆ ತೆರೆದಿಟ್ಟಿದೆ. ತನ್ನ ವಿರೋಧಿಯನ್ನೂ ಪ್ರಜಾಸತ್ತಾತ್ಮಕವಾಗಿ ಗೌರವಿಸಿದೆ. ಆದರೆ ನಮ್ಮಲ್ಲಿರುವ ಕೆಲವು ಮೂಲಭೂತವಾದಿಗಳು ಟಿಪ್ಪುವಿನ ಒಳ್ಳೆಯ ಕೆಲಸಗಳಿಗೂ ಪಠ್ಯಪುಸ್ತಕಗಳಲ್ಲಿ ಅವಕಾಶ ಇರಬಾರದೆಂದು ಪಟ್ಟು ಹಿಡಿದಿದ್ದಾರೆ! ಎಂಥ ವಿಪರ್ಯಾಸ! ಸರ್ಕಾರಕ್ಕೆ ಸಾಮಾನ್ಯ ವಿವೇಕ ಜಾಗೃತವಾಗಲಿ.

ಪ್ರತಿಕ್ರಿಯಿಸಿ (+)