ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಮನೆಯೊಳಗೆ ಮದ್ದಾನೆ ನುಗ್ಗುತ್ತಿದೆ!

ಇಂದು ಜೀವವೈವಿಧ್ಯ ದಿನ: ಬದುಕಿನ ಬವಣೆಯ ಮೂಲ ಅರಿಯಬೇಕಾದ ಕಾಲ
Last Updated 22 ಮೇ 2020, 1:45 IST
ಅಕ್ಷರ ಗಾತ್ರ

ಭೂಮಾತೆಯ ಜೈವಿಕ ಪರಿಸರ ಎಂಬುದು ವಿಕಾಸವೆಂಬ ದೀರ್ಘ ತಪಸ್ಸಿನ ಫಲ. ಆಧುನಿಕ ಅಭಿವೃದ್ಧಿ ಯಂತ್ರದ ಚಕ್ರಕ್ಕೆ ಸಿಲುಕಿ ಅದೀಗ ಜರ್ಜರಿತವಾಗುತ್ತಿದೆ. ಸೃಷ್ಟಿಯೊಳಗಣ ಸೂಕ್ಷ್ಮ ಸಮತೋಲನ ತಪ್ಪಿದಂತೆಲ್ಲ ಜೀವಜಾಲದ ಲಯ ಮಾಯವಾಗಿ, ಜೀವನಚಕ್ರದ ಹಳಿತಪ್ಪಿದ ಸೂಕ್ಷ್ಮಾಣುಗಳು ಬಗೆಬಗೆಯ ರೋಗಗಳನ್ನು ಸೃಷ್ಟಿಸುತ್ತಿವೆ. ಈ ಸರಣಿಯ ಹೊಸ ಆವೃತ್ತಿಯಂತಿರುವ ಕೋವಿಡ್-19 ರೋಗದ ವೈರಾಣುವಿನ ಆರ್ಭಟಕ್ಕೆ, ಆಧುನಿಕ ಸಮಾಜವೇ ಬಾಯಿಮುಚ್ಚಿ ಬೆಚ್ಚಿ ಕುಳಿತಂತಿದೆ!

ಈ ಜಾಗತಿಕ ದುರಂತದಲ್ಲಿಯೂ ಪರಿಸರ ವಿಜ್ಞಾನವು ಸಾರುತ್ತಿರುವ ಸಮಸ್ಯೆಯ ಮೂಲಕಾರಣಗಳಿಗೆ ಆಡಳಿತವರ್ಗ ಕಿವಿಗೊಡುವಂತೆ ತೋರುತ್ತಿಲ್ಲ. ಕೊಳ್ಳುಬಾಕ ಸಂಸ್ಕೃತಿಯ ಕೃತಕಸುಖದ ಭ್ರಮೆಯಿಂದ ಹೊರಬಂದು, ‘ಪರಿಸರಸ್ನೇಹಿ ಜೀವನ ವಿಧಾನಗಳತ್ತ ಈಗಲಾದರೂ ಹೆಜ್ಜೆಯಿಡದಿದ್ದರೆ, ಇನ್ನಾವಾಗ’ ಅಂತ ಹಕ್ಕೊತ್ತಾಯ ಮಾಡಬೇಕಾದ ಜನಮಾನಸವೂ
ಹುಸಿನಿದ್ದೆಯಲ್ಲಿ ಇದ್ದಂತಿದೆ.

ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್ ಗೋರ್ 2006ರಲ್ಲಿ ನಿರ್ಮಿಸಿದ ಆಸ್ಕರ್ ವಿಜೇತ ‘ಒಂದು ಕಹಿಸತ್ಯ’ ಸಾಕ್ಷ್ಯಚಿತ್ರದಲ್ಲಿನ ನಿರೂಪಣೆಯಂತೆಯೇ, ಸಂಕಷ್ಟಕ್ಕೆ ಒಳಗಾಗಿಯೂ ವಿನಾಶಕಾರಿ ಅಭಿವೃದ್ಧಿಗೆ ಮುಖಮಾಡುವ ರೋಗಕ್ಕೆ ನಾವೆಲ್ಲ ಬಲಿಯಾದಂತಿದೆ! ಮೇ 22ರಂದು ಆಚರಿಸುವ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಸಂದರ್ಭವಾದರೂ ಜಗದ ಜಗುಲಿಗೆ ನುಗ್ಗುತ್ತಿರುವ ಪ್ರಕೃತಿ ವಿಕೋಪವೆಂಬ ಮದ್ದಾನೆಯನ್ನು ಗಮನಿಸಲು ಎಚ್ಚರಿಸಬೇಕು.

‘ಅಂಶವೊಂದರ ಮಿತಿಯೇ ಸಮಷ್ಟಿಯ ಗತಿಯನ್ನು ನಿರ್ಧರಿಸುವುದು’ ಎನ್ನುತ್ತದೆ ಜೀವಶಾಸ್ತ್ರದ ಒಂದು ತತ್ವ. ತೀರಾ ನಿಷ್ಕ್ರಿಯ ಅಂಶಗಳೇ ವ್ಯವಸ್ಥೆಯೊಂದರ ದಕ್ಷತೆ ಹಾಗೂ ಅಂತಿಮ ಫಲಶ್ರುತಿಯನ್ನು ನಿರ್ಧರಿಸುವುದು ಎನ್ನುವ ನೀತಿಯದು. ನಾವೇ ರೂಪಿಸಿಕೊಂಡ ಆಡಳಿತ ವ್ಯವಸ್ಥೆಗಳಲ್ಲಿ ಕ್ಷಮತೆ ಮಾಯವಾಗಿ, ಅವುಗಳೇ ಭವಿಷ್ಯಕ್ಕೆ ಕೊಡಲಿಯಾಗುವ ಸಾಧ್ಯತೆಗಳು ಇದೀಗ ನಿಚ್ಚಳವಾಗುತ್ತಿವೆ. ಸಂಸತ್ತು, ವಿಧಾನಮಂಡಲಗಳಂಥ ಪರಮಾಧಿಕಾರವುಳ್ಳ ಸಾಂವಿಧಾನಿಕ ದೇಗುಲಗಳೇ ಪದೇಪದೇ ದೂರದೃಷ್ಟಿರಹಿತ ಪ್ರಕೃತಿ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತಿವೆ. ಈ ಕುರಿತು ಎಚ್ಚರಿಸುವ ನೀತಿ ಆಯೋಗ, ಸಂಸತ್ತಿನ ಸ್ಥಾಯಿ ಸಮಿತಿಗಳು, ತಜ್ಞ ಆಯೋಗಗಳಂಥ ಉನ್ನತ ವೇದಿಕೆಗಳು ನೀಡುವ ವಿವೇಕದ ಸಲಹೆಗಳೂ ಕಡತದಲ್ಲಿ ಕಣ್ಮರೆಯಾಗುತ್ತಿವೆ.

2015ರಲ್ಲಿ ವಿಶ್ವಸಂಸ್ಥೆ ಸ್ವೀಕರಿಸಿದ ಹದಿನೇಳು ಸುಸ್ಥಿರ ಅಭಿವೃದ್ಧಿ ಸೂತ್ರಗಳನ್ನು (ಎಸ್.ಡಿ.ಜಿ.) ಒಪ್ಪಿಯೂ ಅವುಗಳ ಅನುಷ್ಠಾನದಲ್ಲಿ ಮಾತ್ರ ಸರ್ಕಾರಕ್ಕೆ ನಿರ್ಲಕ್ಷ್ಯ. ಭೂತಾಪ ಹೆಚ್ಚಿಸುವ ಅನಿಲಗಳ ಉತ್ಪತ್ತಿ ನಿಗ್ರಹಿಸಲು ಪಾಲಿಸಬೇಕಾದ ಕನಿಷ್ಠ ಜವಾಬ್ದಾರಿ ಕುರಿತ 2016ರ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಮಾಡಿಯೂ ಮಾಲಿನ್ಯ ತಡೆಗೆ ಸರ್ಕಾರ ಹೆಜ್ಜೆಯಿಡುತ್ತಿಲ್ಲ. ಮಾರುಕಟ್ಟೆ ಆರ್ಥಿಕತೆ ತಂದೊಡ್ಡಿರುವ ಕ್ಷಣಿಕ ಲಾಭದ ಸುಖದಲ್ಲಿ ಮೈಮರೆತಂತಿವೆ ಆಡಳಿತ ಸೂತ್ರಗಳು!

ಶಾಸಕಾಂಗ ತಪ್ಪಿದರೂ ಸರ್ಕಾರದ ಬೆನ್ನೆಲುಬಾದ ಕಾರ್ಯಾಂಗವು ಆಡಳಿತದ ಸ್ಥಿರತೆ ಕಾಯಬಲ್ಲದೆಂಬುದು ಅಡಳಿತಶಾಸ್ತ್ರದ ನಂಬಿಕೆ. ಆದರೆ, ಆಳುವವರ ಒತ್ತಡಕ್ಕೋ ತನ್ನದೇ ನಿಷ್ಕ್ರಿಯತೆಗೋ ಅಥವಾ ಆಮಿಷಕ್ಕೋ ಒಳಗಾದಂತಿರುವ ಈ ಕಣ್ಗಾವಲಿನ ವ್ಯವಸ್ಥೆಗಳೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯಲ್ಲಿ ಸೋಲುತ್ತಿವೆ. ಅಗ್ಗದ ರಾಜಕಾರಣದಲ್ಲಿ ಜನಪ್ರತಿನಿಧಿಗಳು ಮೈಮರೆತರೂ ಅಧಿಕಾರಿವರ್ಗ ಕೈಬಿಡಲಾರದೆಂಬ ಜನರ ಲಾಗಾಯ್ತಿನ ವಿಶ್ವಾಸವೇ ಕರಗುತ್ತಿದೆ!

ಶಾಸಕಾಂಗ ಹಾಗೂ ಕಾರ್ಯಾಂಗಗಳಿಗೆ ವಸ್ತುನಿಷ್ಠ ಅಭಿಪ್ರಾಯ ನೀಡಲೆಂದೇ ಸಂವಿಧಾನಬದ್ಧವಾಗಿ ರೂಪಿತವಾದ ಹಲವು ಉನ್ನತ ಚಿಂತನಾ ಚಾವಡಿಗಳು ನಮ್ಮಲ್ಲಿವೆ. ಅಭಿವೃದ್ಧಿ ಯೋಜನೆಯೊಂದಕ್ಕೆ ಅರಣ್ಯ ಪ್ರದೇಶವನ್ನು ವರ್ಗಾಯಿಸಬೇಕೇ ಎಂದು ನಿರ್ಧರಿಸಲು ‘ಅರಣ್ಯ ಸಲಹಾ ಸಮಿತಿ’ಗಳಿವೆ (ಎಫ್‌ಎಸಿ). ಉದ್ದಿಮೆಯೊಂದು ಪರಿಸರದ ಸ್ಥಿರತೆಗೆ ಭಂಗ ತರುವುದೇ ಎಂದು ಪರಿಶೀಲಿಸಿಯೇ ಒಪ್ಪಿಗೆ ನೀಡಲು ‘ಪರಿಸರ ಮೌಲ್ಯಮಾಪನ ಸಮಿತಿ’ (ಇಎಸಿ) ಇದೆ. ಪ್ರಸ್ತುತ ಶೇ 5ಕ್ಕಿಂತಲೂ ಕಡಿಮೆ ಭೂಭಾಗದಲ್ಲಿರುವ ವನ್ಯಜೀವಿ ಸಂರಕ್ಷಿತ ಪ್ರದೇಶವನ್ನಾದರೂ ಜತನದಿಂದ ಕಾಪಾಡುವ ಜವಾಬ್ದಾರಿಯಿರುವ ವನ್ಯಜೀವಿ ಮಂಡಳಿಗಳು ಕೇಂದ್ರ ಹಾಗೂ ಎಲ್ಲ ರಾಜ್ಯಗಳಲ್ಲಿವೆ. ಆದರೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಿದ್ದ ಈ ಉನ್ನತ ಸಮಿತಿಗಳ ಧ್ವನಿ ಅಡಗತೊಡಗಿ ದಶಕಗಳೇ ಸಂದಿವೆ.

ಆಡಳಿತದ ಶಕ್ತಿಕೇಂದ್ರಗಳಿಂದ ಹೇರಲ್ಪಡುವ ನಿರ್ಧಾರಗಳಿಗೆ ಅವು ತಲೆಯೊಡ್ಡುವ ಸಂದರ್ಭಗಳೇ ಹೆಚ್ಚು. ಆರ್ಥಿಕವಾಗಿ ಸ್ವಲ್ಪವೂ ಕಾರ್ಯಸಾಧುವಲ್ಲದ ಹಾಗೂ ಸ್ಥಳೀಯರ ಅಪೇಕ್ಷೆಯೂ ಇರದೆ, ಸಹ್ಯಾದ್ರಿಯ ಸೂಕ್ಷ್ಮಪರಿಸರದ ಬೇಡ್ತಿನದಿ ಕಣಿವೆಯ ದಟ್ಟಕಾಡನ್ನು ಸೀಳುವ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ರಾಜ್ಯ ವನ್ಯಜೀವಿ ಮಂಡಳಿಯು ಕಳೆದ ಮಾರ್ಚ್‌ನಲ್ಲಿ ಒಪ್ಪಿಗೆ ನೀಡಿಬಿಟ್ಟಿತಲ್ಲ! ಇಂಥವನ್ನು ತಡೆಯಬೇಕಿದ್ದ ಕೇಂದ್ರ ಅರಣ್ಯ ಸಚಿವಾಲಯದ ನಡೆಯಾದರೂ ಹೇಗಿದೆ? ಸಮೃದ್ಧ ಮಳೆಕಾಡಿರುವ ಶರಾವತಿ ನದಿ ಕಣಿವೆಯ ಸಿಂಗಳೀಕ ಅಭಯಾರಣ್ಯದಲ್ಲಿ ಭೂಗತ ಜಲವಿದ್ಯುತ್ ಸ್ಥಾವರ ಸ್ಥಾಪಿಸುವ ಅವೈಜ್ಞಾನಿಕ ಪ್ರಸ್ತಾವಕ್ಕೆ, ಪರಾಮರ್ಶೆ ನಡೆಸದೆಯೇ ಒಪ್ಪಿಗೆ ಕೊಡಹೊರಟಿದೆ. ಕೇಂದ್ರ ವನ್ಯಜೀವಿ ಮಂಡಳಿಯು ಕಳೆದ ಏಪ್ರಿಲ್ ತಿಂಗಳ ಆರಂಭದಲ್ಲಿ, ಲಾಕ್‌ಡೌನ್ ಮರೆಯಲ್ಲಿ ಅಂತರ್ಜಾಲದಲ್ಲಿಯೇ ತ್ವರಿತ ಸಭೆ ನಡೆಸಿ, ಈ ಆಘಾತಕಾರಿ ಯೋಜನೆಗೆ ಆರಂಭಿಕ ಒಪ್ಪಿಗೆ ನೀಡಿಬಿಟ್ಟಿತು! ಆಡಳಿತಸೂತ್ರದ ಕೈಗಳಲ್ಲಿಯೇ ಸಾಂವಿಧಾನಿಕ ಸಂಸ್ಥೆಗಳು ನಿತ್ರಾಣವಾದರೆ, ಕಾಯುವವರು ಯಾರು?

ಆಡಳಿತನೀತಿ ಹಾಗೂ ಕಾರ್ಯವಿಧಾನಗಳೆರಡೂ ಹಳಿ ತಪ್ಪಿದಾಗ, ಎಚ್ಚರಿಸುವ ಸಾಮರ್ಥ್ಯವಿರುವ ಇನ್ನೊಂದು ವರ್ಗವೆಂದರೆ ದೇಶದ ವೈಜ್ಞಾನಿಕ ಸಮೂಹ. ಪ್ರತಿಭೆ ಮತ್ತು ಪರಿಶ್ರಮದ ವಿಜ್ಞಾನಿಗಳಿಗೆ ಇಲ್ಲಿ ಕೊರತೆಯಿಲ್ಲ. ಉನ್ನತ ಸಂಶೋಧನಾ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅಂಥ ಮೇಧಾವಿಗಳಿದ್ದಾರೆ. ಹಲವರು ಸರ್ಕಾರದ ತಜ್ಞ ಸಮಿತಿಗಳಲ್ಲೂ ಇರುತ್ತಾರೆ. ಆದರೆ, ಸರ್ಕಾರ ದಾರಿ ತಪ್ಪಿದಾಗಲೂ ಬೆರಳೆಣಿಕೆಯಷ್ಟು ವಿಜ್ಞಾನಿಗಳನ್ನು ಬಿಟ್ಟು, ಉಳಿದ ವಿಜ್ಞಾನಿಗಳು ಮೌನ ತಾಳುತ್ತಿರುವುದು ವಿಷಾದದ ಸಂಗತಿ.

ಪಶ್ಚಿಮಘಟ್ಟದಲ್ಲಿನ ಗಣಿಗಾರಿಕೆ, ಮಲೆನಾಡಿನ ಅರಣ್ಯವನ್ನು ಸೀಳುವ ಹೊಸ ರೈಲು ಮಾರ್ಗಗಳು, ವಿದ್ಯುತ್ ಯೋಜನೆಗಳ ಅವೈಜ್ಞಾನಿಕ ವಿಸ್ತರಣೆ, ಕೈಗಾರಿಕಾ ತ್ಯಾಜ್ಯದಿಂದಾಗುವ ನದಿ-ಕೆರೆಗಳ ಮಾಲಿನ್ಯ, ಸಹ್ಯಾದ್ರಿ ಕರಗುತ್ತಿರುವಂತೆ ಕರಾವಳಿಯಲ್ಲಿ ತೋರುತ್ತಿರುವ ಮತ್ಸ್ಯಕ್ಷಾಮ- ಇಂಥ ಹಲವು ಸಂಗತಿಗಳ ಗಂಭೀರ ಪರಿಣಾಮಗಳ ಕುರಿತು ಅದೆಷ್ಟೋ ಸಂಶೋಧನಾ ಲೇಖನಗಳು ಪ್ರಕಟವಾಗುತ್ತಲೇ ಇವೆ; ವೈಜ್ಞಾನಿಕ ಗೋಷ್ಠಿಗಳಲ್ಲೂ ಅನುರಣಿಸುತ್ತಿವೆ. ಆದರೆ, ಈ ಕಟುಸತ್ಯಗಳನ್ನು ಗಟ್ಟಿಧ್ವನಿಯಲ್ಲಿ ಸರ್ಕಾರದ ಮುಂದಿಡುವ ಸಾಕ್ಷಿಪ್ರಜ್ಞೆಯ ವಿಜ್ಞಾನಿಗಳ ಪ್ರಭೇದ ಮಾತ್ರ ಕಣ್ಮರೆಯಾಗುತ್ತಿದೆ!

ಗೋಡೆಬರಹ ಸ್ಪಷ್ಟವಿದೆ! ಅವೈಜ್ಞಾನಿಕ ಭೂಬಳಕೆ, ಕಾಡುನಾಶ, ಮಾಲಿನ್ಯಕಾರಕ ಉದ್ದಿಮೆಗಳು, ರಾಸಾಯನಿಕ ತ್ಯಾಜ್ಯಗಳ ಮಾಲಿನ್ಯ, ಇಂಧನಗಳ ಮಿತಿಯಿಲ್ಲದ ಬಳಕೆ- ಇಂಥವೆಲ್ಲವುಗಳ ಪರಿಣಾಮವೇನು? ಜೀವವೈವಿಧ್ಯದ ಅಳಿವು, ತಾಪಮಾನದ ಏರಿಕೆ ಹಾಗೂ ಲೆಕ್ಕವಿರದಷ್ಟು ಪ್ರಾಕೃತಿಕ ಸಮಸ್ಯೆಗಳು! ಜಾಗತಿಕ ವ್ಯಾಪ್ತಿಯ ಕೋವಿಡ್-19 ಅಥವಾ ಮಲೆನಾಡಿನ ಮಂಗನಕಾಯಿಲೆ ಈ ವಿದ್ಯಮಾನಗಳ ಅಂತಿಮ ಪರಿಣಾಮದಂತಿವೆಯಲ್ಲವೇ!

ಜೀವವೈವಿಧ್ಯ ದಿನಾಚರಣೆಯಂಥ ಸಂದರ್ಭ ವಾದರೂ ಭೂಗೋಳದ ಮಾತೃತ್ವ ರೂಪಿಸುವ ಜೈವಿಕ ಪರಿಸರ ಮತ್ತು ಅದರೊಳಗಣ ಜೀವಸಂಕುಲಗಳನ್ನು ಸಂರಕ್ಷಿಸಲು ಪ್ರೇರೇಪಿಸಬೇಕಿದೆ. ಅಭಿವೃದ್ಧಿಸೌಧ ಸುಸ್ಥಿರವಾಗಿ ಇರಬೇಕಾದರೆ ಜೀವಲೋಕದ ನೆಲೆಗಟ್ಟು ಸುರಕ್ಷಿತವಾಗಿ ಇರಬೇಕೆಂಬ ಅರಿವಾಗಬೇಕಿದೆ. ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿಯೇ ಇಂದಿನ ಬಿಕ್ಕಟ್ಟುಗಳಿಗೆ ಪರಿಹಾರವಿದೆ ಎಂಬ ವಿವೇಕ ಮೂಡತೊಡಗಿದರೆ, ದಾಳಿಯಿಡುತ್ತಿರುವ ಪ್ರಕೃತಿ ವಿಕೋಪವೆಂಬ ಮದ್ದಾನೆಯ ಅಗಾಧತೆ ಗೋಚರಿಸೀತು; ಅದನ್ನು ಕಟ್ಟುವ ಕಂಬ-ಹಗ್ಗಗಳೂ ದೊರೆತಾವು.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT