ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸ್ಪಷ್ಟ ಚಿತ್ರಣ ಬಿಚ್ಚಿಡದ ಬಜೆಟ್‌

ಕೇಂದ್ರ ಬಜೆಟ್
Last Updated 30 ಜನವರಿ 2020, 5:50 IST
ಅಕ್ಷರ ಗಾತ್ರ

ಆರ್ಥಿಕತೆಯಲ್ಲಿ ವ್ಯಾಪಕವಾದ ಮಂದಗತಿಯನ್ನು ಆರ್ಥಿಕ ತಜ್ಞರು ಗಂಭೀರವಾಗಿ ಪರಿಗಣಿಸಿದ್ದರು. ತಮ್ಮ ಮೊದಲ ಬಜೆಟ್‌ ಮಂಡಿಸುವ ನಿರ್ಮಲಾ ಸೀತಾರಾಮನ್‌ ಅವರು ಈ ಮಂದಗತಿಯನ್ನು ತಡೆಗಟ್ಟಲು ಅವಶ್ಯವಾದ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂಬ ನಿರೀಕ್ಷೆ ಹಲವರಲ್ಲಿ ಇತ್ತು. ಆದರೆ, ಮೂಲಸೌಕರ್ಯ ರಂಗದಲ್ಲಿ ಹೂಡಿಕೆ ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆ ಪ್ರಕ್ರಿಯೆಗೆ ವೇಗೋತ್ಕರ್ಷ ಜೋಡಿಸುವ, ಉದ್ಯೋಗ ಸೃಷ್ಟಿಸುವ ಬೃಹತ್ ಪ್ರಯತ್ನಕ್ಕೆ ಕೈ ಹಾಕಲಾಗಿದೆಯೆಂಬ ಭಾವನೆ ಹುಟ್ಟಿಸುವ ರೀತಿಯಲ್ಲಿ ಬಜೆಟ್ ಭಾಷಣ ಮಾಡಿ ಕೈತೊಳೆದುಕೊಂಡು ಬಿಟ್ಟಿದ್ದಾರೆ.

ಮೂಲ ಸೌಕರ್ಯ ರಂಗದಲ್ಲಿ ಹೂಡಿಕೆಗೆ ಹೆಚ್ಚು ಅವಕಾಶಗಳಿದ್ದು ಅವುಗಳನ್ನು ಬಳಸಿಕೊಂಡಾಗ ಇತರ ಕ್ಷೇತ್ರಗಳಲ್ಲಿ ಹೂಡಿಕೆಯ ಸಾಧ್ಯತೆಗಳು ತೆರೆದುಕೊಳ್ಳುತ್ತವೆ, ಉದ್ಯೋಗ ಸೃಷ್ಟಿಯಾಗುತ್ತದೆ, ಜನರ ಆದಾಯದಲ್ಲಿ ಏರಿಕೆಯಾಗಿ ಅಭಿವೃದ್ಧಿ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ ಎನ್ನುವ ನಂಬಿಕೆ ಹುಟ್ಟಿಸುವ ಸಂಕಲ್ಪದೊಂದಿಗೆ ನಿರ್ಮಲಾ ಬಜೆಟ್ ಕಸರತ್ತು ಮಾಡಿದಂತೆ ಭಾಸವಾಗುತ್ತದೆ.

ಈ ತನಕ ನಮ್ಮ ದೇಶದಲ್ಲಾಗಿದ್ದು ಗ್ರಾಹಕರ ಬೇಡಿಕೆ ಆಧಾರಿತ ಬೆಳವಣಿಗೆ. ಉದ್ಯೋಗ ಸೃಷ್ಟಿಯಾಗಲು ಇನ್ನು ಮುಂದೆ ಹೂಡಿಕೆ ಆಧಾರಿತ ಬೆಳವಣಿಗೆಯಾಗಬೇಕೆಂದು ಗುರುವಾರ ಸಂಸತ್ತಿನಲ್ಲಿ ಮಂಡನೆಯಾದ 2018-19ನೇ ಸಾಲಿನ ಆರ್ಥಿಕ ಸಮೀಕ್ಷೆ ಬಲವಾಗಿ ವಾದಿಸಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ₹100 ಲಕ್ಷ ಕೋಟಿಗಳಷ್ಟು ಹಣ ಮೂಲಸೌಕರ್ಯ ರಂಗದಲ್ಲಿ ಹೂಡಿಕೆ ಮಾಡುವ ಮಹತ್ವಾಕಾಂಕ್ಷೆ ಕೇಂದ್ರ ಸರ್ಕಾರದ್ದು. ಅದನ್ನು ನಿರ್ಮಲಾ ತಮ್ಮ ಬಜೆಟ್ ಭಾಷಣದಲ್ಲಿ ಬುದ್ಧಿವಂತಿಕೆಯಿಂದ ಸ್ಮರಿಸಿಕೊಳ್ಳುತ್ತಾರೆ. ಆದರೆ ಈ ಆಯವ್ಯಯದ ಏಳು ತಿಂಗಳ ಜೀವತಾವಧಿಯಲ್ಲಿ ಪ್ರಾರಂಭಿಸುವ ಅಥವಾ ಅನುಷ್ಠಾನಕ್ಕೆ ತರುವ ಯೋಜನೆಗಳ ಬಗ್ಗೆ ಎಲ್ಲೂ ಸ್ಪಷ್ಟ ಮಾಹಿತಿ ನೀಡಿಲ್ಲ. ‘ನಾರಿ’ ಮತ್ತು ‘ನಾರಾಯಣಿ’ ನಡುವೆ ಸುಲಭವಾಗಿ ಸಂಪರ್ಕ ಕಲ್ಪಿಸಿದ ನಿರ್ಮಲಾ, ನಾರಿಯಾಗಿ ತೋರಿದ ಬುದ್ಧಿವಂತಿಕೆ ಇದು ಎಂದೇ ಭಾವಿಸಿ ಸಮಾಧಾನ ಪಟ್ಟುಕೊಳ್ಳಬೇಕೆ?

2015ರ ಮೇ ತಿಂಗಳಿನಲ್ಲಿ ನೀತಿ ಆಯೋಗ ‘ಮೂಲಸೌಕರ್ಯ: ಸಂಪರ್ಕ ಸೌಲಭ್ಯಗಳ ಮೂಲಕ ಬೆಳವಣಿಗೆ ಪ್ರಕ್ರಿಯೆಯ ಬಲವರ್ಧನೆ’ ಎನ್ನುವ ಶೀರ್ಷಿಕೆಯ ದೊಡ್ಡ ಮುನ್ನೋಟವನ್ನು ತಯಾರಿಸಿತ್ತು. ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಅನೇಕ ಯೋಜನೆಗಳನ್ನು ಪೂರ್ತಿಗೊಳಿಸುವ ಆಶಯವನ್ನು ನೀತಿ ಆಯೋಗ ಬಲವಾಗಿ ವ್ಯಕ್ತಪಡಿಸಿತ್ತು. ಅದೇ ಆಶಯ 2018-19ರ ಆರ್ಥಿಕ ಸಮೀಕ್ಷೆಯಲ್ಲೂ ಪುನರಾವರ್ತನೆಯಾಗಿದೆ. ನಿರ್ಮಲಾ ಬಜೆಟ್ ಭಾಷಣದಲ್ಲಿ ‘ಸಂಪರ್ಕ ಸೌಲಭ್ಯ ದೇಶದ ಜೀವಾಳ’ ಎಂದು ಹೇಳುತ್ತ ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರ್ಕಾರದ ಉಡಾನ್‌, ಭಾರತಮಾಲಾ, ಸಾಗರಮಾಲಾ ಯೋಜನೆಗಳ ಆಶ್ರಯದಲ್ಲಿ ಮಾಡಿದ ಸಾಧನೆಗಳನ್ನು ಚೆನ್ನಾಗಿ ವಿವರಿಸಿದ್ದಾರೆ. ಮುಂದೆ ಮಾಡಬೇಕಾದ ಕಾರ್ಯಗಳನ್ನು ದೀರ್ಘಾವಧಿಗೆ ಜೋಡಿಸಿಬಿಟ್ಟಿದ್ದಾರೆ! ವಸತಿ ಮತ್ತು ನಗರಾಭಿವೃದ್ಧಿಗೆ ₹48,022 ಕೋಟಿ ಅನುದಾನದ ಅಗತ್ಯವನ್ನು ಮನಗಂಡ ವಿತ್ತ ಸಚಿವೆ ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಜಾಣ ಮೌನ ತೋರಿದ್ದೇಕೆ?

ರೈಲ್ವೆ ಮೂಲಸೌಕರ್ಯದ ಅಭಿವೃದ್ಧಿ ಮತ್ತು ಸುಧಾರಣೆಗೆ 2018-30ರ ಅವಧಿಯಲ್ಲಿ ₹50 ಲಕ್ಷ ಕೋಟಿ ಹೂಡಿಕೆಯ ಅಗತ್ಯವನ್ನು ಪ್ರತಿಪಾದಿಸಿದ ಹಣಕಾಸಿನ ಸಚಿವೆ ಈಗಾಗಲೇ ಪ್ರಾರಂಭವಾದ ಯೋಜನೆಗಳನ್ನು ಪೂರ್ತಿಗೊಳಿಸಲಿಕ್ಕೂ, ಹೊಸ ಯೋಜನೆಗಳನ್ನು ಜಾರಿಗೊಳಿಸಲಿಕ್ಕೂ ಖಾಸಗೀ-ಸರ್ಕಾರಿ ಸಹಭಾಗಿತ್ವದ ಮಾದರಿಗೆ ಮೊರೆ ಹೋಗಿದ್ದಾರೆ.

ರಸ್ತೆ ಸಾರಿಗೆಯ ಸಮಗ್ರ ವಿಕಾಸಕ್ಕೆ ₹83,015 ಕೋಟಿ ಹೂಡಿಕೆ ಬೇಕೆಂಬ ವಿಚಾರ ಮುಂಗಡ ಪತ್ರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಹಣಕಾಸಿನ ಸಂಪನ್ಮೂಲ ಒದಗಿಸಿ ಪುನರ್ ರಚಿಸುವ ನಿರ್ಧಾರ ಪ್ರಕಟವಾಗಿದೆ. ಭಾರತಮಾಲಾ ಯೋಜನೆಯ ಮೊದಲನೆಯ ಹಂತ ಮುಗಿದ ಮೇಲೆ ಎರಡನೇ ಹಂತದಲ್ಲಿ ರಾಜ್ಯಗಳಲ್ಲಿ ರಸ್ತೆ ಸಾರಿಗೆಯ ಅಭಿವೃದ್ಧಿಗೆ ಕೇಂದ್ರ ಆರ್ಥಿಕ ನೆರವು ನೀಡಲಿದೆ. ನೆರವಿಗೆ ರಾಜ್ಯಗಳು ಕಾಯುತ್ತಿರಬೇಕು.

ಇಂಧನ ಪೂರೈಕೆಗಾಗಿ ‘ಒಂದು ರಾಷ್ಟ್ರ, ಒಂದು ಗ್ರಿಡ್’ ಎನ್ನುವ ದಿಟ್ಟ ಸುಧಾರಣೆಯನ್ನು ನಿರ್ಮಲಾ ಘೋಷಿಸಿದ್ದಾರೆ. ಇದಕ್ಕೆ ಬೇಕಾದ ನೀಲನಕ್ಷೆಯನ್ನು ಈ ವರ್ಷವೇ ತಯಾರಿಸುವ ಭರವಸೆಯೂ ಅವರಿಂದ ಬಂದಿದೆ. ಅದನ್ನು ಸ್ವಲ್ಪ ಕಾಯ್ದು ನೋಡಬೇಕು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT