ಶನಿವಾರ, ಡಿಸೆಂಬರ್ 14, 2019
24 °C
ಚೀನಾ ಸರ್ಕಾರದ ರಹಸ್ಯ ದಾಖಲೆ ಸೋರಿಕೆಯಿಂದ ವಿಷಯ ಬಹಿರಂಗ

ನಿರ್ದಯ ದಮನವೇ ಚೀನಾ ನೀತಿ

ಆಸ್ಟಿನ್‌ ರಾಮ್ಜಿ, ಕ್ರಿಸ್‌ ಬಕ್ಲಿ Updated:

ಅಕ್ಷರ ಗಾತ್ರ : | |

ಪರೀಕ್ಷೆಗಳು ಮುಗಿದು ನಿರಾಳರಾಗಿದ್ದ ವಿದ್ಯಾರ್ಥಿಗಳು ಚೀನಾದ ಪಶ್ಚಿಮ ಭಾಗದಲ್ಲಿರುವ ತಮ್ಮ ಮನೆಗಳತ್ತ ಹೋಗಲು ಖುಷಿಯಿಂದ ಟಿಕೆಟ್‌ ಕಾಯ್ದಿರಿಸಿದ್ದರು. ಆದರೆ, ಮನೆಗಳಲ್ಲಿ ತಮ್ಮ ಹೆತ್ತವರು ಇಲ್ಲ, ಸಂಬಂಧಿಕರು ಮತ್ತು ನೆರೆಯವರು ಕೂಡ ಇಲ್ಲ. ಈ ಎಲ್ಲರನ್ನೂ ಅಲ್ಪಸಂಖ್ಯಾತ ಮುಸ್ಲಿಮರಿಗಾಗಿ ನಿರ್ಮಿಸಿರುವ ಬಂಧನ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂಬುದು ಅವರಿಗೆ ತಿಳಿಯಿತು. 

ಪರಿಸ್ಥಿತಿ ಕೈಮೀರಬಹುದು ಎಂಬ ಆತಂಕ ಷಿನ್‌ಜಿಯಾಂಗ್‌ನ ಅಧಿಕಾರಿಗಳಲ್ಲಿ ಇತ್ತು. ಹಾಗಾಗಿ, ಅವರು ಎಲ್ಲದಕ್ಕೂ ಸನ್ನದ್ಧರಾದರು. ಸ್ಥಳೀಯ ಅಧಿಕಾರಿಗಳಿಗೆ ರಹಸ್ಯ ನಿರ್ದೇಶನಗಳನ್ನು ನೀಡಲಾಯಿತು. ಇಲ್ಲಿ ಬಂದಿಳಿಯುವ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ, ಸುಮ್ಮನಾಗಿಸಬೇಕು. ‘ತಮ್ಮ ಕುಟುಂಬದ ಸದಸ್ಯರು ಎಲ್ಲಿ’ ಎಂದೇ ಆರಂಭವಾಗುವ ಅವರ ಚಿಂತೆಯ ಪ್ರಶ್ನೆಗಳನ್ನು ಹೇಗೆ ನಿಭಾಯಿಸಬೇಕು ಎಂಬ ವಿಚಾರವೂ ಈ
ನಿರ್ದೇಶನದಲ್ಲಿ ಸೇರಿತ್ತು. 

ಈ ನಿರ್ದೇಶನವು 403 ಪುಟಗಳನ್ನು ಹೊಂದಿದೆ. ಕಮ್ಯುನಿಸ್ಟ್‌ ಚೀನಾದಿಂದ ಇತ್ತೀಚಿನ ದಶಕಗಳಲ್ಲಿ ಸೋರಿಕೆಯಾದ ಮಹತ್ವದ ಸರ್ಕಾರಿ ದಾಖಲೆ ಇದು. ಇದು, ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಕೈಸೇರಿದೆ. ಷಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಅಭೂತಪೂರ್ವವಾದ ನೋಟವನ್ನು ಈ ದಾಖಲೆ ನೀಡುತ್ತದೆ. ಉಯ್ಗರ್‌, ಕಜಕ್‌ ಮತ್ತು ಇತರ ಜನಾಂಗಗಳ ಸುಮಾರು 10 ಲಕ್ಷ ಮಂದಿಯನ್ನು ಕಳೆದ ಮೂರು ವರ್ಷಗಳಲ್ಲಿ ಬಂಧನಕ್ಕೆ ತಳ್ಳಲಾಗಿದೆ. 

ಈ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾದ ಟೀಕೆಯನ್ನು ಪಕ್ಷವು ಅಲ್ಲಗಳೆದಿದೆ. ಇದು
ಭಯೋತ್ಪಾದನೆಯನ್ನು ತಡೆಯಲು ಸಹಕಾರಿಯಾಗುವ ಸರಳ ವಿಧಾನ ಮತ್ತು ಉದ್ಯೋಗ ತರಬೇತಿ ಕೇಂದ್ರ ಎಂದು ಹೇಳಿದೆ. ಇದು ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರುವ ಅಸಾಧಾರಣ ಕ್ರಮ ಎಂದು ಸರ್ಕಾರ ಕೂಡ ಹೇಳುತ್ತಿದೆ. ಆದರೆ, ಬಲಪ್ರಯೋಗದಿಂದಲೇ ಜನರನ್ನು ಈ ಬಂಧನ ಕೇಂದ್ರಗಳಿಗೆ ಸಾಗಿಸಲಾಗಿದೆ ಎಂಬುದು ದಾಖಲೆಗಳಿಂದ ದೃಢಪಟ್ಟಿದೆ.

ತೀವ್ರವಾದಿ ಹಿಂಸೆಯ ವಿರುದ್ಧ ತುರ್ತು ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಸಾಮೂಹಿಕ ಬಂಧನ ನಡೆಸಬೇಕು ಎಂದು ಪಕ್ಷದ ಹಿರಿಯ ಮುಖಂಡರು ಹೇಳಿರುವುದು ಕೂಡ ದಾಖಲಾಗಿದೆ. ಅದರ ಪರಿಣಾಮಗಳು ಏನಾಗಬಹುದು ಎಂಬುದನ್ನು ಹೇಗೆ ನಿರ್ಭಾವುಕವಾಗಿ ಅವರು ಚರ್ಚಿಸಿದ್ದಾರೆ ಎಂಬುದನ್ನು ಸೋರಿಕೆಯಾದ ದಾಖಲೆಗಳು ಹೇಳಿವೆ. 

ಹೆತ್ತವರನ್ನು ಬಂಧಿಸುವುದನ್ನು ಮಕ್ಕಳು ನೋಡಿದ್ದಾರೆ. ತಮ್ಮ ಶಾಲಾ ಶುಲ್ಕವನ್ನು ಪಾವತಿಸುವವರು ಯಾರು ಎಂಬ ಚಿಂತೆ ವಿದ್ಯಾರ್ಥಿಗಳನ್ನು ಕಾಡತೊಡಗಿದೆ. ಹೊಲದಲ್ಲಿ ಬಿತ್ತನೆ ಮಾಡಲು ಅಥವಾ ಬೆಳೆದು ನಿಂತ ಬೆಳೆಯನ್ನು ಕಟಾವು ಮಾಡಲು ಜನರೇ ಇಲ್ಲ ಎಂದು ವರದಿಯಾಗಿದೆ. ಈ ಬಗ್ಗೆ ದೂರು ನೀಡಿದ ಜನರಿಗೆ, ‘ಕಮ್ಯುನಿಸ್ಟ್‌ ಪಕ್ಷವು ಕೊಟ್ಟ ನೆರವಿಗೆ ಋಣಿಯಾಗಿರಬೇಕು, ಏನನ್ನೂ ಮಾತನಾಡಬಾರದು’ ಎಂದು ಅಧಿಕಾರಿಗಳು ತಾಕೀತು ಮಾಡಿದ್ದಾರೆ. 

ಮಾವೊ ಯುಗದ ಬಳಿಕ ಚೀನಾ ಸರ್ಕಾರದ ಅಗೋಚರ ವ್ಯವಸ್ಥೆಯು ಜನರನ್ನು ನಿರ್ಬಂಧಿಸುತ್ತಿರುವ ವಿವರಗಳನ್ನು ಸೋರಿಕೆಯಾದ ದಾಖಲೆಯು ಬಹಿರಂಗಪಡಿಸಿದೆ. ಅವುಗಳಲ್ಲಿ ಬಹಳ ಮುಖ್ಯವಾದ ಅಂಶಗಳು ಹೀಗಿವೆ:

1. 2014ರ ಏಪ್ರಿಲ್‌ನಲ್ಲಿ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಷಿನ್‌ಜಿಯಾಂಗ್‌ಗೆ ಭೇಟಿ ಕೊಟ್ಟಿದ್ದರು. ಅದಕ್ಕೆ ಕೆಲ ವಾರಗಳ ಮೊದಲು, ಉಯ್ಗರ್‌ ಉಗ್ರರು ಅಲ್ಲಿನ ರೈಲು ನಿಲ್ದಾಣವೊಂದರಲ್ಲಿ ಎರ‍್ರಾಬಿರ‍್ರಿ ಮಚ್ಚು ಬೀಸಿ 150 ಜನರನ್ನು ಇರಿದಿದ್ದರು. 31 ಜನರು ಮೃತಪಟ್ಟಿದ್ದರು. ಷಿ ಅವರು ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಧಿಕಾರಿಗಳ ಜತೆ ಸರಣಿ ಸಭೆಗಳನ್ನು ನಡೆಸಿ ನಿರ್ದೇಶನಗಳನ್ನು ನೀಡಿದ್ದರು. ಭಯೋತ್ಪಾದನೆ, ಒಳನುಸುಳುವಿಕೆ ಮತ್ತು ಪ್ರತ್ಯೇಕತಾವಾದವನ್ನು ನಿರ್ದಯವಾಗಿ ಹತ್ತಿಕ್ಕಲು ಹೇಳಿದ್ದರು. ನಿರಂಕುಶಾಧಿಕಾರವನ್ನು ಇದಕ್ಕಾಗಿ ಬಳಸಿಕೊಳ್ಳುವಂತೆ ಸೂಚಿಸಿದ್ದರು. 

2. ಪಕ್ಷದ ಉತ್ಸಾಹಿ ಕಾರ್ಯಕರ್ತರಾಗಿದ್ದ ಚೆನ್‌ ಕ್ವಾನ್‌ಗೊ ಅವರನ್ನು ಪಕ್ಷದ ಷಿನ್‌ಜಿಯಾಂಗ್‌ ಪ್ರದೇಶದ ಮುಖ್ಯಸ್ಥನನ್ನಾಗಿ 2016ರ ಆಗಸ್ಟ್‌ನಲ್ಲಿ ನೇಮಿಸಲಾಯಿತು. ಅದಾದ ಬಳಿಕ ಇಲ್ಲಿನ ಬಂಧನ ಕೇಂದ್ರಗಳು ವಿಸ್ತರಣೆಯಾಗುತ್ತಲೇ ಹೋದವು. ತಮ್ಮ ಕ್ರಮವನ್ನು ಸಮರ್ಥಿಸಿ
ಕೊಳ್ಳುವುದಕ್ಕಾಗಿ ಷಿ ಅವರ ಭಾಷಣದ ಪ್ರತಿಗಳನ್ನು ಚೆನ್‌ ವಿತರಿಸಿದರು. ‘ಸೆರೆಯಲ್ಲಿ ಇಡಬೇಕಾದವರನ್ನೆಲ್ಲ ಬಂಧಿಸಿ’ ಎಂಬುದು ಚೆನ್‌ ಅವರ ಆದೇಶವಾಗಿತ್ತು.

3. ಇಂತಹ ದಮನಕ್ಕೆ ಸ್ಥಳೀಯ ಅಧಿಕಾರಿಗಳ ವಿರೋಧ ಇತ್ತು. ಇಂತಹ ಕ್ರಮವು ಆರ್ಥಿಕ ಪ್ರಗತಿಯನ್ನು ಹಾದಿತಪ್ಪಿಸಬಹುದು ಮತ್ತು ಜನಾಂಗೀಯ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಭೀತಿಯನ್ನೂ ಅವರು ಹೊಂದಿದ್ದರು. ತಮ್ಮ ದಾರಿಗೆ ಅಡ್ಡವಾಗಿದ್ದ ಇಂತಹ
ಅಧಿಕಾರಿಗಳನ್ನು ಚೆನ್‌ ತೊಲಗಿಸಿದರು.

ಸೋರಿಕೆಯಾದ ದಾಖಲೆಗಳಲ್ಲಿ ಒಟ್ಟು 24 ಭಾಗಗಳಿವೆ. ಷಿ ಮತ್ತು ಇತರ ನಾಯಕರು ಆಯ್ದ ಗುಂಪುಗಳಿಗೆ ಖಾಸಗಿಯಾಗಿ ಮಾಡಿದ ಭಾಷಣಗಳೇ 200 ಪುಟಗಳಷ್ಟಿವೆ. ಅಧಿಕಾರಿಗಳಿಗೆ ನೀಡಿದ ನಿರ್ದೇಶನಗಳು ಮತ್ತು ಕಣ್ಗಾವಲು ವರದಿಗಳು 150 ಪುಟಗಳಷ್ಟಿವೆ. ಇಸ್ಲಾಂ ಧರ್ಮವು ಚೀನಾದ ಇತರ ಪ್ರದೇಶಗಳಿಗೆ ಹರಡದಂತೆ ನೋಡಿಕೊಳ್ಳುವ ಯೋಜನೆಗಳೂ ಸೇರಿವೆ. ಈ ಎಲ್ಲ ದಾಖಲೆಗಳನ್ನು ಹೇಗೆ ಒಟ್ಟುಗೂಡಿಸಲಾಯಿತು ಎಂಬುದು ತಿಳಿದಿಲ್ಲ. ಆದರೆ, ಈ ದಮನಕಾರಿ ನೀತಿಯ ಬಗ್ಗೆ ಪಕ್ಷದ ಒಳಗೆ ದೊಡ್ಡಮಟ್ಟದ ಅತೃಪ್ತಿ ಇದೆ ಎಂಬುದು ಸ್ಪಷ್ಟ
ವಾಗುತ್ತಿದೆ. ಜನರನ್ನು ಸಾಮೂಹಿಕವಾಗಿ ಸೆರೆಮನೆಗೆ ತಳ್ಳಿದ ಅಪರಾಧದಿಂದ ಷಿ ಮತ್ತು ಇತರ ನಾಯಕರು ತಪ್ಪಿಸಿ
ಕೊಳ್ಳುವುದನ್ನು ಈ ದಾಖಲೆಗಳು ತಡೆಯಬಹುದು ಎಂಬ ನಿರೀಕ್ಷೆಯು ದಾಖಲೆ ಸೋರಿಕೆ ಮಾಡಿದ ವ್ಯಕ್ತಿಯಲ್ಲಿ ಇದೆ.

ನೀತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಚೀನಾ ಸರ್ಕಾರವು ಅತ್ಯಂತ ರಹಸ್ಯವಾಗಿಯೇ ಕೈಗೊಳ್ಳುತ್ತದೆ. ಷಿನ್‌ಜಿಯಾಂಗ್‌ನ ವಿಚಾರದಲ್ಲಿ ಈ ಗೋಪ್ಯತೆ ಇನ್ನೂ ಹೆಚ್ಚು. ಯಾಕೆಂದರೆ ಇದು ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಮಧ್ಯ ಏಷ್ಯಾದ ಜತೆಗೆ ಗಡಿ ಹಂಚಿಕೊಂಡಿರುವ ಸೂಕ್ಷ್ಮಪ್ರದೇಶ. ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಪ್ರದೇಶವೂ ಹೌದು. ಇಲ್ಲಿನ ಸುಮಾರು ಎರಡೂವರೆ ಕೋಟಿ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮುಸ್ಲಿಮ
ರಿದ್ದಾರೆ. ಇವರಲ್ಲಿ ಹೆಚ್ಚಿನವರು ಉಯ್ಗರ್‌ ಸಮುದಾಯಕ್ಕೆ ಸೇರಿದವರು. ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರಣ ಗಳಿಂದಾಗಿ ಇವರು ಬಹಳ ಹಿಂದಿನಿಂದಲೂ ತಾರತಮ್ಯ, ನಿರ್ಬಂಧಕ್ಕೆ ಒಳಗಾಗಿದ್ದಾರೆ. ಉಯ್ಗರ್‌ ಜನರು ತೋರುವ ಪ್ರತಿರೋಧವನ್ನು ಹತ್ತಿಕ್ಕಲು ಸರ್ಕಾರ ದಶಕಗಳಿಂದ ಯತ್ನಿಸುತ್ತಿದೆ. ಸರ್ಕಾರ ಮತ್ತು ಚೀನಾ ವಿರೋಧಿ ಹಿಂಸಾಚಾರ ಹೆಚ್ಚಾದ ಬಳಿಕ, ಸರ್ಕಾರದ ದಮನ ನೀತಿ ಇನ್ನಷ್ಟು ತೀವ್ರವಾಗಿದೆ.

‘ನಿಮ್ಮ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರಿಗೆ ಮುಸ್ಲಿಂ ಮೂಲಭೂತವಾದದ ‘ವೈರಸ್‌’ ತಗಲಿದೆ. ಅವರನ್ನು ಪ್ರತ್ಯೇಕವಾಗಿ ಇರಿಸಿ, ಚಿಕಿತ್ಸೆ ನೀಡಿದರೆ ಮಾತ್ರ ಗುಣಮುಖರಾಗಲು ಸಾಧ್ಯ ಎಂಬುದನ್ನು ವಿದ್ಯಾರ್ಥಿ
ಗಳಿಗೆ ಮನದಟ್ಟಾಗುವಂತೆ ಹೇಳಬೇಕು’ ಎಂಬ ನಿರ್ದೇಶನ ಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ. ತಮ್ಮ ಸಂಬಂಧಿ
ಕರನ್ನು ದೂರ ಇರಿಸಲಾಗಿದೆ ಎಂಬ ವಿಚಾರ
ದಲ್ಲಿ ವಿದ್ಯಾರ್ಥಿಗಳು ಸರ್ಕಾರಕ್ಕೆ ಕೃತಜ್ಞರಾಗಿರ
ಬೇಕು. ಲೋಪದಿಂದ ಕೂಡಿದ ಚಿಂತನೆಯ ನಿರ್ಮೂಲ
ನಕ್ಕೆ, ಸರ್ಕಾರ ಒದಗಿಸಿರುವ ಮುಕ್ತ ಶಿಕ್ಷಣದ ಅವಕಾಶವು ಅವರ ಕುಟುಂಬದ ಸಂತಸಮಯ ಜೀವನಕ್ಕೆ ಬುನಾದಿಯಾಗಲಿದೆ’ ಎಂದೂ ದಾಖಲೆಯು ಹೇಳುತ್ತದೆ.

ಬಂಧನ ಶಿಬಿರಗಳಿಂದ ಯಾರನ್ನು ಬಿಡುಗಡೆ ಮಾಡ
ಬಹುದು ಎಂಬುದಕ್ಕೆ ಶ್ರೇಯಾಂಕ ವ್ಯವಸ್ಥೆಯೊಂದನ್ನೂ ಅಧಿಕಾರಿಗಳು ರೂಪಿಸಿದ್ದಾರೆ. ವಿದ್ಯಾರ್ಥಿಗಳ ವರ್ತನೆಯು ಅವರ ಸಂಬಂಧಿಕರ ಶ್ರೇಯಾಂಕದ ಮೇಲೆ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ವಿದ್ಯಾರ್ಥಿ
ಗಳಿಗೆ ಆಯೋಜಿಸಲಾಗಿರುವ ತರಬೇತಿ, ಸಭೆ ಮತ್ತು ಇತರ ಚಟುವಟಿಕೆಗಳಲ್ಲಿ ಅವರ ಹಾಜರಾತಿ ಮತ್ತು ವರ್ತನೆಯನ್ನು ದಿನವೂ ವಿಶ್ಲೇಷಿಸಲಾಗುತ್ತಿದೆ. 

ದಿ ನ್ಯೂಯಾರ್ಕ್‌ ಟೈಮ್ಸ್‌

 

ಪ್ರತಿಕ್ರಿಯಿಸಿ (+)