ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸಕಾರಣವಾದ ಶಂಕೆ ಮತ್ತು ಪ್ರಜಾಪ್ರಭುತ್ವ

ಮಾತು ವಾಗ್ವಾದದಾಚೆಯ ಮಥನವಾಗುವುದೆಂದರೆ ನಿಜದ ನಿಜ ಮಗ್ಗುಲನ್ನು ತೆರೆದು ತೋರುವುದೆಂದರ್ಥ
Last Updated 29 ಜುಲೈ 2020, 21:49 IST
ಅಕ್ಷರ ಗಾತ್ರ

ಹೆಂಡತಿ– ಮಕ್ಕಳನ್ನು ನಡುನೀರಲ್ಲಿ ಕೈಬಿಟ್ಟು, ಸನ್ಯಾಸಿಯ ವೇಷ ಧರಿಸಿ, ಮಠ ಕಟ್ಟಿ ಸಕಲ ಭೋಗಭಾಗ್ಯ, ಅಧಿಕಾರ, ಅಂತಸ್ತು ಎಲ್ಲವನ್ನೂ ಅನುಭವಿಸುವ ವ್ಯಕ್ತಿಯೊಬ್ಬ ಸನ್ಯಾಸಿಯೋ ಅಥವಾ ಅವನು ಮಾಡಿಟ್ಟ ಸಾಲಗಳನ್ನು ತೀರಿಸುತ್ತಾ ಪುಟ್ಟ ಮಕ್ಕಳನ್ನು ಬೆಳೆಸುವುದಕ್ಕಾಗಿ ಎಲ್ಲ ನೋವು, ಅವಮಾನದ ತಾಪವನ್ನು ತಪದಂತೆ ಸಹಿಸುತ್ತಾ ಬಡತನದ ಬೇಗೆಯಲ್ಲಿ ಅರೆಹೊಟ್ಟೆ, ಹರಿದ ಚಾಪೆಯಲ್ಲಿ ಮಲಗಿ, ಒಂಟಿಯಾಗಿ ಬದುಕನ್ನು ಬಳಪದಂತೆ ತೇದುಕೊಂಡ ಅವನ ಹೆಂಡತಿ ನಿಜವಾದ ಸನ್ಯಾಸಿಯೋ? ಈ ಇಬ್ಬರಲ್ಲಿ ಯಾರದ್ದು ಸನ್ಯಾಸಿಯ ಬದುಕು? ಈ ಪ್ರಶ್ನೆಯನ್ನು ಓದುಗರಿಗೆ ಎಸೆದು ವಿರಮಿಸುವ ‘ಸನ್ಯಾಸಿಯ ಬದುಕು’ ಎಂಬ ಕಾದಂಬರಿಯನ್ನು ಶಿವರಾಮ ಕಾರಂತರು 1948ರಲ್ಲಿ ಬರೆದಿದ್ದರು. ಈ ಪ್ರಶ್ನೆ ಈಗಲೂ ಹಾಗೇ ಇದೆ.

ಲೋಕ ಆತನ ಕಾಲಿಗೆ ಬೀಳುತ್ತದೆಯೇ ಹೊರತು ಆಕೆಯ ಬೇನೆಗೆ ಮದ್ದು ಹುಡುಕುವುದಿಲ್ಲ. ಅವನು ಹೇಳುವುದೆಲ್ಲ ಕಾರಣಿಕದ ನುಡಿಗಳಂತೆ ಕೇಳಿಸಿದರೆ, ಅವಳ ಮಾತಿಗೆ ಕನಿಷ್ಠ ಕಿವಿಯಾದರೂ ಸಿಗಬಹುದು ಎಂಬ ಖಾತರಿ ಇಲ್ಲ. ‘ಸತ್ಯವಂತರಿಗಿದು ಕಾಲವಲ್ಲ, ದುಷ್ಟ ಜನರಿಗೆ ಸುಭಿಕ್ಷ ಕಾಲ’ ಎಂಬ ಪುರಂದರದಾಸರ ಮಾತು ಪ್ರತೀ ಕಾಲಘಟ್ಟದಲ್ಲೂ ಇಂದಿನದೇ ಮಾತು ಅನ್ನಿಸುವಷ್ಟು ಸುಪರಿಚಿತವಾಗಿರುತ್ತದೆ.

ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಇಂತಹ ಹುಣ್ಣುಗಳಿಗೆ ಮದ್ದು ಅರೆಯಬಹುದು ಎಂಬ ದೊಡ್ಡ ಭರವಸೆ, ಅದನ್ನು ನಂಬಿದವರಲ್ಲೆಲ್ಲರಲ್ಲೂ ಇತ್ತು. ಜಗತ್ತಿನಾದ್ಯಂತ ಬಹುದೊಡ್ಡ ಹೋರಾಟಗಳು, ಕ್ರಾಂತಿಗಳು ನಡೆದದ್ದು ಸರ್ವ ಮನುಜನೂ ಸಮಾನ ಎಂಬ ಕಾಣ್ಕೆಯನ್ನು ಕೈಗೂಡಿಸುವುದಕ್ಕಾಗಿ. ಆದರೆ ಇದು ಹೇಗಿರುತ್ತದೆ ಎಂದರೆ, ಒಂದು ಕಡೆಯಿಂದ ಹೊಲಿದುಕೊಂಡು ಹೋದ ಹೊಲಿಗೆ ಇನ್ನೊಂದು ಕಡೆಯಿಂದ ಬಿಚ್ಚಿಕೊಳ್ಳುತ್ತಾ ಹೋದಂತೆ. ಮತ್ತೆ ಮತ್ತೆ ಹೊಲಿಯುವ ಕ್ರಿಯೆಗೆ ಕೈಜೋಡಿಸಲು ಆಯಾ ಕಾಲದ ಸೂಕ್ಷ್ಮ ಮನಸ್ಸುಗಳು ತಲ್ಲಣವನ್ನು ಅನುಭವಿಸುತ್ತಲೇ ಇರುತ್ತವೆ. ಹಾಗೆಯೇ ಇಲ್ಲೊಂದು ಗುರುತರ ಪ್ರಶ್ನೆಯಿದೆ. ಅದೆಂದರೆ, ಹೀಗೆ ಹೊಲಿಗೆ ಬಿಚ್ಚುತ್ತಿರುವವರು ಯಾರು ಎಂಬುದನ್ನು ತಿಳಿಸುವುದು ಹೇಗೆ? ಹೀಗೆ ನಿಜವನ್ನು ತಿಳಿಸತೊಡಗಿದ ತಕ್ಷಣ ಬಂದೂಕಿನ ಮೊನೆ ನಿಜ ಹೇಳುವವರ ನೆತ್ತಿಯ ಕಡೆಗೆ ಗುರಿ ಇಡುತ್ತದೆ. ಹೌದು, ಪ್ರಶ್ನೆ ಇರುವುದೇ ಇಲ್ಲಿ. ಯಾವುದು ನಿಜ? ಯಾವುದು ಸುಳ್ಳು? ಸನ್ಯಾಸಿಯ ವೇಷ ತೊಟ್ಟವನ ಬಳಿ ಪುಂಡರ ಪಡೆ ಮಾತ್ರ ಇರುವುದಿಲ್ಲ, ಜೊತೆಗೆ ಜೇನಿನಂತೆ ಕರಗುವ ನಾಲಿಗೆಯೂ ಇರುತ್ತದೆ. ಈ ನಾಲಿಗೆ ತನಗೆ ಬೇಕಾದಂತೆ ‘ಮೌಲ್ಯ’ಗಳನ್ನು ಸೃಷ್ಟಿ ಮಾಡಿ ರವಾನಿಸುತ್ತಿರುತ್ತದೆ. ಅಧ್ಯಾತ್ಮದ ರುಮಾಲು ಸುತ್ತಿಕೊಂಡ ಈ ಮಾತುಗಳಲ್ಲಿ ಭಕ್ತಾದಿಗಳಿಗೆ ಯಾವ ಅನುಮಾನವೂ ಕಾಣುವುದಿಲ್ಲ.

ಮೇಲೆ ಉಲ್ಲೇಖಿಸಿದ ಕಾದಂಬರಿಯಲ್ಲಿ, ಹೆಸರು ಬದಲಾದ ಆ ಸನ್ಯಾಸಿಯ ಪ್ರಸಿದ್ಧಿ ಅವನ ಊರ ತನಕವೂ ಹಬ್ಬಿ, ಅಲ್ಲಿ ಅವನ ಭಾವಚಿತ್ರವಿಟ್ಟು ಪೂಜೆ ನಡೆಯುತ್ತಿರುತ್ತದೆ. ಆ ಭಾವಚಿತ್ರ ನೋಡಿದ ಹೆಂಡತಿ ದಂಗಾಗುತ್ತಾಳೆ. ಆದರೆ ಅವಳು ಏನನ್ನೂ ಹೇಳುವುದಿಲ್ಲ. ಒಂದು ವೇಳೆ ಹೇಳಿದ್ದರೂ ಅವನ ಸ್ಥಾನಕ್ಕೇನಾದರೂ ಚ್ಯುತಿ ಬರುತ್ತಿತ್ತೇ? ಖಂಡಿತಾ ಇಲ್ಲ. ದೇಶ ವಿದೇಶದ ಪತ್ರಿಕೆಗಳಲ್ಲಿ ಅವನು ಅದಾಗಲೇ ಪ್ರಸಿದ್ಧ. ಒಂದು ಹಂತ ದಾಟಿದ ಮೇಲೆ ಅವನಿಗೆ ಹೊಡೆವ ಕಲ್ಲು ಹೊಡೆದವರಿಗೇ ವಾಪಸು ಬರುತ್ತದೆ. ನಿಶ್ಶಂಕೆಯು ಮೌಲ್ಯವಾದ ಮೇಲೆ ಶಂಕೆಯು ದ್ರೋಹವೆನಿಸಿಕೊಳ್ಳುತ್ತದೆ. ಈ ತರ್ಕ ನಿರಂತರವಾಗಿ ಜಾರಿಯಲ್ಲಿದೆ. ಹಾಗೆ ಜಾರಿಯಲ್ಲಿಡುವುದಕ್ಕಾಗಿ ವ್ಯವಸ್ಥೆ ಸದಾ ಶಾಮೀಲಾಗಿ ಶ್ರಮಿಸುತ್ತಿರುತ್ತದೆ.

ಪ್ರಜಾಪ್ರಭುತ್ವವು ಹಲವು ಮಗ್ಗುಲುಗಳ ಚರ್ಚೆಯಲ್ಲಿ ಜೀವಂತವಿರುತ್ತದೆಯೇ ಹೊರತು ಸುಗ್ರೀವಾಜ್ಞೆಯ ಆದೇಶಗಳಲ್ಲೋ ಬೆಂಬಲಿಗರನ್ನು ಕೊಂಡುಕೊಳ್ಳುವುದರಲ್ಲೋ ಅಲ್ಲ. ಆಳುವವರ ಪ್ರತೀ ನಡೆಯೂ ಇಲ್ಲಿ ಸಕಾರಣವಾದ ಶಂಕೆಗೆ ಒಳಪಡಬಹುದು. ಆ ಅವಕಾಶದಿಂದ ಪ್ರಜೆಗಳು ವಂಚಿತರಾಗಬಾರದು. ಆದರೆ ಇಂದು ಈ ಅವಕಾಶ ತೀವ್ರವಾಗಿ ಕುಸಿಯುತ್ತಿದೆ. ಅಕಾರಣವಾದ ಸಂಶಯಕ್ಕಿಂತ ಭಿನ್ನವಾದುದು ಸಕಾರಣವಾದ ಶಂಕೆ. ಅಕಾರಣವಾದ ಸಂಶಯದ ಮೂಲಕ ಹೆಣ್ಣನ್ನು, ಬಡವರನ್ನು, ಕರಿಯರನ್ನು ಹಾದರಗಿತ್ತಿಯರು, ಕಳ್ಳರು, ಕೊಲೆಗಡುಕರು ಎಂದೆಲ್ಲಾಸ್ಥಾಪಿಸಿದ್ದನ್ನು ಇತಿಹಾಸದುದ್ದಕ್ಕೂ ಕಂಡಿದ್ದೇವೆ. ಈ ಕಾರಣದಿಂದಾಗಿ, ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬ ಪ್ರಜಾಪ್ರಭುತ್ವದ ಇನ್ನೊಂದು ಆದರ್ಶ ಮೂಲೆ ಗುಂಪಾಗುವುದೇ ಹೆಚ್ಚು. ಅವರ ವಿರುದ್ಧ ಇರುವ ಸಾಕ್ಷ್ಯದಷ್ಟು ಅವರ ಪರ ವಕಾಲತ್ತು ಇರುವುದಿಲ್ಲ.

ಇಂತಹ ಎಲ್ಲ ಕಾಲದ ಸತ್ಯವನ್ನು ‘ಟ್ವೆಲ್ವ್‌ ಆ್ಯಂಗ್ರಿಮೆನ್‌’ ಎಂಬ 1957ರ ಅಮೆರಿಕನ್ ಸಿನಿಮಾ ಅಪೂರ್ವವಾಗಿ ಹಿಡಿದಿಡುತ್ತದೆ. ಈ ಸಿನಿಮಾದ ಮೂಲ ಭಿತ್ತಿಯೇ ಸಕಾರಣ ಶಂಕೆ. ಆರಂಭದ ಮೂವತ್ತು ಸೆಕೆಂಡುಗಳನ್ನು ಬಿಟ್ಟರೆ ಇಡೀ ಸಿನಿಮಾ ನಡೆಯುವುದು ಕೋರ್ಟ್ ರೂಮಿನ ಒಂದೇ ಕೋಣೆಯಲ್ಲಿ. ಹನ್ನೆರಡು ಜನ ಜೂರಿಗಳು ನಡೆಸುವ ನಿರಂತರ ಚರ್ಚೆಯೇ ಸಿನಿಮಾದ ವಸ್ತು.

ಹದಿನೆಂಟು ವರ್ಷದ ಹುಡುಗನೊಬ್ಬನ ಮೇಲೆ ಅವನ ತಂದೆಯನ್ನು ಕೊಂದ ಆಪಾದನೆ ಇದೆ. ಸಾಕ್ಷ್ಯಗಳೂ ಅದನ್ನು ಪುಷ್ಟೀಕರಿಸುವಂತಿವೆ. ಆತ ನಿಜವಾಗಿಯೂ ತಪ್ಪಿತಸ್ಥ ಎಂದಾದರೆ ಅವನಿಗೆ ಗಲ್ಲು ಶಿಕ್ಷೆ ಕಾಯಂ ಆಗುತ್ತದೆ. ನ್ಯಾಯಾಧೀಶರು ಈ ಹನ್ನೆರಡು ಜೂರಿಗಳಿಗೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕೆಂದೂ ಆದರೆ ಯಾವುದೇ ತೀರ್ಮಾನ ಒಮ್ಮತದಿಂದ ಕೂಡಿರಬೇಕೆಂದೂ ಷರತ್ತು ವಿಧಿಸುತ್ತಾರೆ. ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವಂತೆ ಕಂಡಿದ್ದರಿಂದ ಬಹಳ ಬೇಗ ಇದನ್ನು ತೀರ್ಮಾನಿಸಬಹುದು ಎಂದುಕೊಂಡೇ ಎಲ್ಲರೂ ಭಾವಿಸಿ, ಚರ್ಚೆಯಿಲ್ಲದೇ ತೀರ್ಮಾನವನ್ನು ವೋಟಿಗೆ ಹಾಕುವುದೆಂದುಕೊಳ್ಳುತ್ತಾರೆ.
ಆದರೆ ಅವರಲ್ಲೊಬ್ಬ ಜೂರಿ ಇದರ ವಿರುದ್ಧ ವೋಟು ಹಾಕುತ್ತಾನೆ. ಅವನ ವಾದವೇನೆಂದರೆ, ‘ಆ ಹುಡುಗ ಅಪರಾಧಿಯೋ ನಿರಪರಾಧಿಯೋ ನನಗೆ ತಿಳಿದಿಲ್ಲ. ಆದರೆ ಈ ವಿಚಾರವನ್ನು ಚರ್ಚಿಸದೇ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಆ ಬಡ ಹುಡುಗನ ಪರ ಯಾವ ಲಾಭವೂ ಇಲ್ಲದೆ ವಾದಿಸಬೇಕಾದ್ದರಿಂದ ಅವನ ವಕೀಲ ಆಸಕ್ತಿ ವಹಿಸದೆ ಇರುವುದೂ ಅವನನ್ನು
ಅಪರಾಧಿಯಾಗಿಸಿರಬಹುದು. ಹೀಗಾಗಿ, ಆತನಿಗೆ ವಿಧಿಸುವ ಈ ಶಿಕ್ಷೆಯ ಬಗೆಗೆ ನನಗೆ ಸಕಾರಣವಾದ ಶಂಕೆಯಿದೆ’ ಎನ್ನುತ್ತಾನೆ.

ಆ ಹುಡುಗನೊಬ್ಬ ಸ್ಲಂನಿಂದ ಬಂದವನು. ತಂದೆಯ ಜೊತೆ ಜಗಳವಾಡುವಾಗ ‘ನಿನ್ನನ್ನು ಕೊಂದುಬಿಡುತ್ತೇನೆ’ ಎಂದು ಗರ್ಜಿಸಿದವನು. ಸ್ಲಂನಲ್ಲಿ ಬೆಳೆದವನು ಇನ್ನು ಹೇಗೆ ಇರುತ್ತಾನೆ ಎಂಬ ಪೂರ್ವಗ್ರಹವೇ ಅಲ್ಲಿನ ಹೆಚ್ಚಿನವರಲ್ಲಿ ತುಂಬಿ ತುಳುಕುತ್ತಿರುವಾಗ, ಈತ ಎತ್ತುವ ಪ್ರಶ್ನೆಗಳು ಮತ್ತು ತರ್ಕಗಳಿಂದಾಗಿ ಸಾಕ್ಷ್ಯಗಳಲ್ಲಿ ಇರುವ ದೋಷಗಳು ಅವರುಗಳಿಗೇ ಕಾಣಿಸತೊಡಗುತ್ತವೆ. ಇಡೀ ಪ್ರಕರಣವನ್ನು ಬೇರೆಯದೇ ಕಣ್ಣಿನಿಂದ ನೋಡುವುದು ಸಾಧ್ಯವಾಗುತ್ತದೆ. ಅವನನ್ನು ತೀವ್ರವಾಗಿ ವಿರೋಧಿಸಿದವರು, ಸಿಟ್ಟಾಗಿ ಹರಿಹಾಯ್ದವರು ಕೂಡಾ ಕ್ರಮೇಣ ಅವನಂತೆಯೇ ಚಿಂತಿಸತೊಡಗುತ್ತಾರೆ. ತಮ್ಮ ಸೀಮಿತ ಅನುಭವಗಳಾಚೆಯ ಲೋಕವನ್ನು ಸ್ಪರ್ಶಿಸತೊಡಗುತ್ತಾರೆ. ಪ್ರತೀ ಸ್ಥಾಪಿತ ಸತ್ಯದ ಆಚೆಗೆ ಇನ್ನೊಂದು ಮುಖ ಮಾತ್ರವಲ್ಲ, ಸಾಧ್ಯತೆಯೂ ಇರುತ್ತದೆ ಎಂಬುದನ್ನು ತೋರುತ್ತಾರೆ. ಮಾತು ಮಥನವಾದಾಗ ಇದು ಸಾಧ್ಯ ಮತ್ತು ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ಇದೊಂದು ಬಹುದೊಡ್ಡ ಸಾಧ್ಯತೆ ಕೂಡಾ. ಇದು ಅದರ ಸೌಂದರ್ಯವೂ ಹೌದು.

ಹೀಗೆ, ನಿಜದ ನಿಜ ಮಗ್ಗುಲು ಹೊರಬರಬಾರದೆಂದೇ ಮಾತನ್ನು ಹತ್ತಿಕ್ಕಲಾಗುತ್ತದೆ. ವ್ಯಕ್ತಿಗಳನ್ನು
ವೈಭವೀಕರಿಸಲಾಗುತ್ತದೆ. ಸುಳ್ಳು ಎಂಬುದು ಸತ್ಯದ ಉಡುಗೆ ತೊಟ್ಟು ನಿರ್ಭೀತಿಯಿಂದ ತಿರುಗಾಡಲು ನೆಲಹಾಸು ಹಾಸಲಾಗುತ್ತದೆ. ಹೀಗಾಗಿಯೇ ಇಂದು ಅನುಮಾನಿತ ಸತ್ಯವನ್ನು ತೆರೆದು ತೋರುವುದಕ್ಕಾಗಿ ಹುಟ್ಟಿಕೊಂಡ ಸಕಾರಣವಾದ ಶಂಕೆಗಳು, ಅಕಾರಣ ಸಂಶಯಕ್ಕೆ ಗುರಿಯಾದ ಸೀತೆಯಂತೆ ಅವಮಾನವನ್ನು ಎದುರಿಸುತ್ತಿವೆ.

ಲೇಖಕಿ: ಕನ್ನಡ ಪ್ರಾಧ್ಯಾಪಕಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT