ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸೀನಿದರೆ ಜಾಗತೀಕರಣ ಕುಸಿಯದು!

ರಾಜಕೀಯ ಇಷ್ಟ– ಕಷ್ಟಗಳು ಜಾಗತೀಕರಣದ ಮೇಲೆ ಪರಿಣಾಮ ಬೀರುವುದಿಲ್ಲ
Last Updated 21 ಜೂನ್ 2019, 19:45 IST
ಅಕ್ಷರ ಗಾತ್ರ

ವಿಶ್ವ ವ್ಯಾಪಾರ ವ್ಯವಸ್ಥೆಯನ್ನು ಕಟ್ಟಿದ ದೇಶದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ರಾಷ್ಟ್ರೀಯ ಉದ್ದೇಶ ಕ್ಕಾಗಿ ಅಂತರರಾಷ್ಟ್ರೀಯ ವಾಣಿಜ್ಯ ಚಟುವಟಿಕೆಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಕೆಲಸ ಮುಂದುವರಿಸಿದ್ದಾರೆ. ಚೀನಾದ ಜೊತೆ ವಾಣಿಜ್ಯ ಸಮರ ಸಾರಿದ್ದಾರೆ, ಯುರೋಪ್‌ ಹಾಗೂ ಜಪಾನ್‌ನಂತಹ ಮಿತ್ರರು ತಯಾರಿಸುವ ಉಕ್ಕಿನ ಮೇಲೆ ಸುಂಕ ಹೇರಿ ದ್ದಾರೆ, ಅಮೆರಿಕದ ಮಾರುಕಟ್ಟೆಯಲ್ಲಿ ಭಾರತಕ್ಕೆ ಇದ್ದ ಅವಕಾಶವನ್ನು ಮಿತಿಗೊಳಿಸಿದ್ದಾರೆ. ಮೆಕ್ಸಿಕೊ ವಿಚಾರ ದಲ್ಲಿಯೂ ಸುಂಕದ ಏಟು ಕೊಡುವುದಾಗಿ ಹೇಳಿದ್ದಾರೆ.

ಆದರೆ, ಜಾಗತೀಕರಣವು ಜನಜೀವನದ ಅತ್ಯಂತ ಅಗತ್ಯ ಗುಣವಾಗಿಬಿಟ್ಟಿದೆ. ಈ ಸ್ಥಿತಿಯಿಂದ ಹಿಂದೆ ಹೋಗಲು ಬಹುಶಃ ಸಾಧ್ಯವೇ ಇಲ್ಲ. ವಿಮಾನಗಳಿಂದ ಆರಂಭಿಸಿ ವೈದ್ಯಕೀಯ ಉಪಕರಣಗಳವರೆಗೆ ಆಧುನಿಕ ಸರಕುಗಳನ್ನು ಉತ್ಪಾದಿಸುವ ಪ್ರಕ್ರಿಯೆ ಅದೆಷ್ಟು ಸಂಕೀರ್ಣ, ಅವುಗಳ ಉತ್ಪಾದನೆಗೆ ಅದೆಷ್ಟು ಕಡೆಗಳಿಂದ ಬಿಡಿಭಾಗಗಳನ್ನು ತರಿಸಿಕೊಳ್ಳಬೇಕು ಅಂದರೆ, ಅನಿರೀಕ್ಷಿತವಾಗಿ ಸುಂಕ ಹೆಚ್ಚಿಸಿದ ಮಾತ್ರಕ್ಕೆ ಕಂಪನಿಗಳು ಚೀನಾ ಅಥವಾ ಮೆಕ್ಸಿಕೊದಲ್ಲಿ ಇರುವ ಕಾರ್ಖಾನೆಗಳನ್ನು ಸ್ಥಗಿತಗೊಳಿಸಿ, ಉತ್ಪಾದನೆಯನ್ನು ಓಹಿಯೊ ಅಥವಾ ಇಂಡಿಯಾನಾದಲ್ಲಿ ಆರಂಭಿಸಿಬಿಡುವುದಿಲ್ಲ.

ಭವಿಷ್ಯದಲ್ಲಿ ಸಂಘರ್ಷಗಳು ನಡೆಯದಂತೆ ನೋಡಿ ಕೊಳ್ಳಲು ‘ಜಾಗತಿಕ ಮಟ್ಟದ ವ್ಯಾಪಾರ’ ಒಂದು ಮದ್ದು, ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡುವುದು ವಿಶ್ವದ ಸ್ಥಿರತೆಗೆ ಹಾದಿ ಮಾಡಿಕೊಡುತ್ತದೆ ಎಂಬ ಪ್ರತಿಪಾದನೆಯನ್ನು ಅಮೆರಿಕವು ಎರಡನೆಯ ವಿಶ್ವ ಯುದ್ಧದ ನಂತರ ಮಾಡಿತ್ತು. ಆ ವಾದ ಈಗ ಕೊನೆಗೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ವಿವಾದಗಳಿಗೆ ಸಂಬಂಧಿಸಿದಂತೆ ಅಮೆರಿಕದ ಆಡಳಿತವು ಬಲಿಷ್ಠ ನಿಯಮಗಳನ್ನು ರೂಪಿಸಿತ್ತು. ಇದರಿಂದಾಗಿ, ರಾಜಕೀಯ ಹಸ್ತಕ್ಷೇಪದ ಬಗ್ಗೆ ಹೆಚ್ಚಿನ ಭೀತಿ ಇಲ್ಲದೆಯೇ ವಿವಿಧ ದೇಶಗಳು ವ್ಯಾಪಾರ ವಹಿವಾಟು ನಡೆಸುವಂತೆ ಆಗಿತ್ತು. ಆದರೆ, ಈ ಪಾತ್ರ ನಿಭಾಯಿಸುವಿಕೆಯನ್ನು ಕೈಬಿಡುವ ಮೂಲಕ ಟ್ರಂಪ್ ಅವರು ನಿಯಮಗಳನ್ನು ಆಧರಿಸಿದ ವ್ಯಾಪಾರ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದಾರೆ. ಜೊತೆಯಲ್ಲೇ, ವ್ಯಾಪಾರದಲ್ಲಿ ಪಾರದರ್ಶಕತೆ ಹಾಗೂ ಮಾನವ ಹಕ್ಕುಗಳಿಗೆ ತೀರಾ ಕಡಿಮೆ ಬೆಲೆ ಕೊಡುವ ಚೀನಾಕ್ಕೆ ಹಾದಿ ಸುಗಮಗೊಳಿಸಿದ್ದಾರೆ.

‘ಒಂದು ವಿಷಯವಂತೂ ಬಹಳ ಸ್ಪಷ್ಟ: ವಿಶ್ವದ ವ್ಯಾಪಾರ ವ್ಯವಸ್ಥೆಯಲ್ಲಿ ಮರುಹೊಂದಾಣಿಕೆ ಆಗಬೇಕಿದೆ. ಈಗಿರುವುದೆಲ್ಲ ಕುಸಿಯುತ್ತಿರುವಂತೆ ಈ ಹಂತದಲ್ಲಿ ಕಾಣಿಸುತ್ತಿದೆ’ ಎನ್ನುತ್ತಾರೆ ಲಂಡನ್ ಸ್ಕೂಲ್‌ ಆಫ್ ಎಕನಾಮಿಕ್ಸ್‌ನಲ್ಲಿ ಅರ್ಥಶಾಸ್ತ್ರಜ್ಞೆ ಆಗಿರುವ ಸ್ವಾತಿ ಧಿಂಗ್ರಾ. ಟ್ರಂಪ್ ಅವರು ಆರಂಭಿಸಿರುವ ವಾಣಿಜ್ಯ ಸಮರವು ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ, ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿಸಿದೆ, ಮುಂದಿನ ಹಂತದ ಸಂಘರ್ಷ ಎಲ್ಲಿ ಶುರುವಾಗುತ್ತದೆ ಎಂಬುದನ್ನು ವಾಣಿಜ್ಯ ವೃಂದ ಆತಂಕದಿಂದ ನಿರೀಕ್ಷಿಸುವಂತೆ ಆಗಿದೆ.

‘ಇದು ಅಮೆರಿಕೋತ್ತರ ವಿಶ್ವ ಅರ್ಥ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಜಾಗತೀಕರಣವು ಹೆಚ್ಚು ಅಸ್ಥಿರವಾಗಿರುತ್ತದೆ. ಜಗತ್ತು ಈ ಹಂತದಲ್ಲಿ ಹೆಚ್ಚು ಅಪಾಯಕಾರಿ ಆಗಿರುತ್ತದೆ. ಅಲ್ಲದೆ, ಮಾರುಕಟ್ಟೆ ಲಭ್ಯತೆ ಮತ್ತಷ್ಟು ಕಡಿಮೆ ಆಗಿರುತ್ತದೆ’ ಎನ್ನುತ್ತಾರೆ ವಾಷಿಂಗ್ಟನ್‌ನ ಪೀಟರ್ಸನ್ ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಸಂಸ್ಥೆಯ ಅಧ್ಯಕ್ಷ ಆ್ಯಡಂ ಎಸ್. ಪೋಸೆನ್. ಟ್ರಂಪ್ ಅವರ ವಾದಸರಣಿ ಹೀಗಿದೆ: ಅಮೆರಿಕ ತಾನು ಹೊಂದಿರುವ ವಿಶ್ವದ ಅತಿದೊಡ್ಡ ಅರ್ಥ ವ್ಯವಸ್ಥೆ ಎನ್ನುವ ಪಟ್ಟವನ್ನು ತನ್ನ ಹಿತಕ್ಕೆ ಬಳಕೆ ಮಾಡಿಕೊಳ್ಳಬೇಕು. ಅಮೆರಿಕದ ಆಗ್ರಹಗಳಿಗೆ ಇತರ ದೇಶಗಳು ಒಪ್ಪಿಕೊಳ್ಳುವಂತೆ ಮಾಡಲು, ತನ್ನಲ್ಲಿನ ಮಾರುಕಟ್ಟೆ ಅವಕಾಶವನ್ನು ಸೀಮಿತಗೊಳಿಸುವುದಾಗಿ ಆ ದೇಶಗಳಿಗೆ ಬೆದರಿಕೆ ಒಡ್ಡಬೇಕು.

ಆದರೆ, ಇಂತಹ ಬೆದರಿಕೆಗಳಿಗೆ ಮಣಿಯಲು ಜಗತ್ತಿನ ಇತರ ದೇಶಗಳು ಒಪ್ಪುತ್ತಿಲ್ಲ. ಹಲವು ದೇಶಗಳು ವ್ಯಾಪಾರ ವಹಿವಾಟಿಗಾಗಿ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿವೆ. ತಮ್ಮ ಕಂಪನಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಡುವ, ಅಮೆರಿಕದ ಕಂಪನಿಗಳಿಗೆ ತುಸು ತೊಂದರೆ ತರಬಹುದಾದ ಹೊಸ ಒಪ್ಪಂದವೊಂದಕ್ಕೆ ಯುರೋಪ್ ಮತ್ತು ಜಪಾನ್ ಈ ವರ್ಷ ಚಾಲನೆ ನೀಡಿವೆ.

ಟ್ರಾನ್ಸ್‌–‍ಪೆಸಿಫಿಕ್‌ ಪಾಲುದಾರಿಕೆ ಒಪ್ಪಂದದ ಅಡಿ ಒಟ್ಟಾದ 11 ದೇಶಗಳು, ಅಮೆರಿಕದ ರೈತರಿಗೆ ಆಕರ್ಷಕ ಅವಕಾಶಗಳನ್ನು ಒದಗಿಸಿದ್ದವು. ಈ ಒಪ್ಪಂದದ ಅಡಿ ತನ್ನ ಮಾರುಕಟ್ಟೆಯನ್ನು ಕೃಷಿ ಆಮದು ವಸ್ತುಗಳಿಗೆ ಮುಕ್ತಗೊಳಿಸುವುದಾಗಿ ಜಪಾನ್ ಒಪ್ಪಿಕೊಂಡಿತ್ತು. ಆದರೆ, ಟ್ರಂಪ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ಒಪ್ಪಂದದಿಂದ ಹಿಂದೆ ಸರಿದರು. ಆ ಮೂಲಕ ಅಮೆರಿಕದ ರೈತರಿಗೆ ಸಿಕ್ಕಿದ್ದ ಅವಕಾಶ ತಪ್ಪಿತು. ಈಗ, ಜಪಾನಿನ ಮಾರುಕಟ್ಟೆ ಪ್ರವೇಶಿಸುವ ಅವಕಾಶ ಯುರೋಪಿನ ರೈತರಿಗೆ ಸಿಕ್ಕಿದೆ. ಟ್ರಂಪ್ ಅವರ ಸುಂಕ ಹೆಚ್ಚಳ ಕ್ರಮಕ್ಕೆ ಚೀನಾ ದೇಶವು ಅಮೆರಿಕದ ಉತ್ಪನ್ನಗಳಿಗೆ ತಾನೂ ಸುಂಕ ಹೆಚ್ಚಿಸುವ ಮೂಲಕ ಪ್ರತ್ಯುತ್ತರ ನೀಡಿದೆ. ಇದೇ ವೇಳೆ, ಜರ್ಮನಿ, ಕೆನಡಾ ದೇಶಗಳ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡಿದೆ.

ಚೀನಾ ದೇಶವು ಅಮೆರಿಕದ ಕೃಷಿ ಹಾಗೂ ಮೀನು ಉತ್ಪನ್ನಗಳ ಮೇಲಿನ ಸುಂಕವನ್ನು ಶೇಕಡ 21ರಿಂದ ಶೇಕಡ 42ಕ್ಕೆ ಹೆಚ್ಚಿಸಿದೆ. ಇದೇ ವೇಳೆ, ವಿಶ್ವದ ಇತರ ದೇಶಗಳಿಂದ ಚೀನಾಕ್ಕೆ ಬರುವ ಇವೇ ಉತ್ಪನ್ನಗಳ ಮೇಲಿನ ಸುಂಕವನ್ನು ಶೇಕಡ 19ಕ್ಕೆ ಇಳಿಕೆ ಮಾಡಿದೆ. ಟ್ರಂಪ್ ಅವರು ತಾವು ಸುಂಕ ಹೆಚ್ಚಳ ಮಾಡಿದ್ದು ಅಮೆರಿಕದವರಿಗೆ ಮತ್ತೆ ಉದ್ಯೋಗ ದೊರಕಿಸಿಕೊಡಲು ಎಂದು ಹೇಳಿದ್ದರು. ಟ್ರಂಪ್ ಅವರ ಪ್ರಕಾರ, ಹಿಂದಿನ ಕೆಲವು ಅಧ್ಯಕ್ಷರು ಅಮೆರಿಕದ ಕಾರ್ಖಾನೆಗಳಲ್ಲಿನ ಉದ್ಯೋಗಗಳನ್ನು ಕದಿಯಲು ಇತರ ದೇಶಗಳಿಗೆ ಅವಕಾಶ ಮಾಡಿಕೊಟ್ಟಿದ್ದರು. ಸುಂಕ ಹೆಚ್ಚಿಸಿರುವ ಪರಿಣಾಮವಾಗಿ ಆ ಉದ್ಯೋಗಗಳನ್ನು ಅಮೆರಿಕ ದವರಿಗೆ ಪುನಃ ತಂದುಕೊಡಲು ಸಾಧ್ಯವಾಗುತ್ತದೆ ಎನ್ನುವುದು ಟ್ರಂಪ್ ವಾದ. ಇಂಥ ವಿವರಣೆಗಳು ರಾಜಕೀಯದಲ್ಲಿ ಚೆನ್ನಾಗಿರುತ್ತವೆ. ಆದರೆ, ಇವು ಜಾಗತಿಕ ಮಾರುಕಟ್ಟೆ ಕುರಿತ ಹಳೆಯ ನಂಬಿಕೆಗಳನ್ನು ಆಧರಿಸಿವೆ. ಟ್ರಂಪ್ ಆರಂಭಿಸಿರುವ ವಾಣಿಜ್ಯ ಸಮರವು ಅಮೆರಿಕದವರ ಪಾಲಿಗೆ ಉದ್ಯೋಗ ಹೆಚ್ಚಿಸುವುದು ಅನುಮಾನ. ಇದರ ಪರಿಣಾಮವಾಗಿ ತಯಾರಾಗಿರುವ ಉತ್ಪನ್ನಗಳ ಬೆಲೆ ಹೆಚ್ಚಾಗುತ್ತದೆ. ವಹಿವಾಟಿನ ನಿಯಮ ಗಳ ವಿಚಾರದಲ್ಲಿ ಅನಿಶ್ಚಿತತೆ ಮನೆಮಾಡುತ್ತದೆ. ಈಗಾಗಲೇ ದುರ್ಬಲವಾಗಿರುವ ವಿಶ್ವ ಅರ್ಥವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಬೃಹತ್ ಪ್ರಮಾಣದ ಉತ್ಪಾದಕರು ಚೀನಾವನ್ನು ತಮ್ಮ ನೆಲೆಯಾಗಿಸಿಕೊಂಡು, ಉತ್ಪನ್ನಗಳನ್ನು ವಿಶ್ವದ ವಿವಿಧೆಡೆ ಮಾರಾಟ ಮಾಡುತ್ತಾರೆ.

ಕೃಷಿ ಮತ್ತು ನಿರ್ಮಾಣ ಪರಿಕರಗಳ ಕಂಪನಿ ಕ್ಯಾಟರ್‌ಪಿಲ್ಲರ್‌ ತನ್ನ ಕಾರ್ಖಾನೆಗಳನ್ನು ಚೀನಾದಲ್ಲಿ ಹೊಂದಿದೆ. ಅದು ತನ್ನ ಅನೇಕ ಉತ್ಪನ್ನಗಳನ್ನು ಏಷ್ಯಾ ದಲ್ಲಿ ಮಾರಾಟ ಮಾಡುತ್ತದೆ. ಚೀನಾವನ್ನು ತೊರೆಯುವ ಮನಸ್ಸು ಹೊಂದಿರುವ ಕಂಪನಿಗಳು, ಅಮೆರಿಕಕ್ಕೆ ಬರುವ ಸಾಧ್ಯತೆಗಿಂತಲೂ ಹೆಚ್ಚಾಗಿ, ಕಡಿಮೆ ಖರ್ಚಿನಲ್ಲಿ ಚಟುವಟಿಕೆ ನಡೆಸಬಹುದಾದ ವಿಯೆಟ್ನಾಂನಂತಹ ದೇಶಗಳತ್ತ ಮುಖ ಮಾಡುವ ಸಾಧ್ಯತೆ ಇದೆ. ಆಟಿಕೆಗಳನ್ನು ತಯಾರಿಸುವ ಹ್ಯಾಸ್‌ಬ್ರೊ ಕಂಪನಿಯು ಅಮೆರಿಕದಲ್ಲೇ ತಯಾರಿಕೆ ಆರಂಭಿಸುವ ಆಲೋಚನೆಯಲ್ಲಿ ಇದೆ. ಆದರೆ, ಮೊಬೈಲ್‌ ಕ್ಯಾಮೆರಾಗಳನ್ನು ಸಿದ್ಧಪಡಿಸುವ ಗೋಪ್ರೊ ಕಂಪನಿಯು ಮೆಕ್ಸಿಕೊ ಕಡೆ ಮುಖ ಮಾಡಿದೆ.

ಜಾಗತೀಕರಣ ಸಾಕಾರಗೊಂಡಿದ್ದು ಸರ್ಕಾರ ಗಳು ರೂಪಿಸಿದ ವಿನ್ಯಾಸಗಳಿಂದಾಗಿ ಅಲ್ಲ. ಜಾಗತೀಕರಣವು ರಾಜಕೀಯ ಇಷ್ಟ–ಕಷ್ಟಗಳಿಂದಾಗಿ ಕುಸಿದು ಹೋಗುವುದೂ ಇಲ್ಲ. ವಾಣಿಜ್ಯ ವಹಿವಾಟು ನಡೆಸು ವವರು ವಿಶ್ವದ ಮಾರುಕಟ್ಟೆಯ ಪ್ರಯೋಜನ ಪಡೆಯು ವುದನ್ನು ಮುಂದುವರಿಸುತ್ತಾರೆ. ಸಂಪತ್ತಿನ ಪ್ರಯೋಜನವನ್ನು ಸಮಾನವಾಗಿ ಹಂಚುವಲ್ಲಿ ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳು ಸೋತಿದ್ದರೂ, ವಾಣಿಜ್ಯ ವಹಿವಾಟು ನಡೆಸುವವರು ಗಡಿಗಳನ್ನು ಮೀರಿ ವಹಿವಾಟು ನಡೆಸುತ್ತಾರೆ. ಇದು ಸಂಪತ್ತು ಸೃಷ್ಟಿಯ ಸೂತ್ರ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT