ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ನೀತಿ: ಕರಡು ಹೇಗಿದೆ?

ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆಗೆ ದೇಶ ತೆರೆದುಕೊಳ್ಳುವ ಸಾಧ್ಯತೆ...
Last Updated 30 ಡಿಸೆಂಬರ್ 2019, 22:59 IST
ಅಕ್ಷರ ಗಾತ್ರ

ಡಾ.ಕೆ.ಕಸ್ತೂರಿರಂಗನ್‌ ನೇತೃತ್ವದ ಸಮಿತಿಯು ರಾಷ್ಟ್ರೀಯ ಶಿಕ್ಷಣ ನೀತಿ– 2019ರ ಕರಡನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ 2019ರ ಮೇ 31ರಂದು ಸಲ್ಲಿಸಿದೆ. ವರದಿ ಸಲ್ಲಿಕೆಯ ನಂತರ ಅದರ ಬಗ್ಗೆ ಅಂದಾಜು ಎರಡು ಲಕ್ಷ ಸಲಹೆಗಳು ಬಂದಿವೆ, ಕರಡಿನ ಬಗ್ಗೆ ಚರ್ಚೆ ಹಾಗೂ ಅದರ ಪರಿಷ್ಕರಣೆ ಆಗಿದೆ, ಸಲಹೆಗಳನ್ನು ಎರಡು ಸಮಿತಿಗಳು ಪರಿಶೀಲನೆ ಮಾಡಿವೆ. ಈ ಕರಡು ನೀತಿಗೆ ಇನ್ನು ಕೆಲವು ವಾರಗಳಲ್ಲಿ ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡುವ ನಿರೀಕ್ಷೆ ಇದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿ ವಾಲಯ ಪ್ರಕಟಿಸಿದ 2018–19ನೇ ಸಾಲಿನ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಮೀಕ್ಷೆಯ ಹಿನ್ನೆಲೆಯಲ್ಲಿ ಈ ಕರಡು ನೀತಿಯನ್ನು ನಾವು ನೋಡಬೇಕು. ದೇಶದಲ್ಲಿ 993 ವಿಶ್ವವಿದ್ಯಾಲಯಗಳು, 39,991 ಕಾಲೇಜುಗಳು ಹಾಗೂ ಒಂದೇ ಕೋರ್ಸ್‌ ಬೋಧಿಸುವ 10,725 ಶಿಕ್ಷಣ ಸಂಸ್ಥೆಗಳು ಇವೆ. 18ರಿಂದ 23 ವರ್ಷದ ನಡುವಿನ ವಯಸ್ಸಿನ ಪ್ರತೀ ಒಂದು ಲಕ್ಷ ಅರ್ಹ ಜನರಿಗೆ ಇರುವ ಕಾಲೇಜುಗಳ ಸಂಖ್ಯೆ ಬಿಹಾರದಲ್ಲಿ ಏಳು, ಕರ್ನಾಟಕದಲ್ಲಿ 53. ರಾಷ್ಟ್ರಮಟ್ಟದಲ್ಲಿ ಇದರ ಸರಾಸರಿ 28. ಶೇಕಡ 60.53ರಷ್ಟು ಕಾಲೇಜುಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಶೇ 16.3ರಷ್ಟು ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ 100ಕ್ಕಿಂತ ಕಡಿಮೆ. ಶೇ 4ರಷ್ಟು ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ 3 ಸಾವಿರಕ್ಕಿಂತ ಹೆಚ್ಚು. ಉನ್ನತ ಶಿಕ್ಷಣಕ್ಕೆ ಸೇರುವವರ ಒಟ್ಟು ಸಂಖ್ಯೆ 3.74 ಕೋಟಿ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ಹೆಣ್ಣುಮಕ್ಕಳ ಪ್ರಮಾಣ ಶೇ 49ರಷ್ಟು.

ಭಾರತವು ಜ್ಞಾನ ಆಧಾರಿತ ಸಮಾಜ ಹಾಗೂ ಅರ್ಥವ್ಯವಸ್ಥೆಯಾಗಿ ಪರಿವರ್ತನೆ ಕಾಣುತ್ತಿರುವ ಹೊತ್ತಿ ನಲ್ಲಿ, ನಾಲ್ಕನೆಯ ಕೈಗಾರಿಕಾ ಕ್ರಾಂತಿಯೊಂದು ಮುಂದೆ ಬರಲಿರುವ ಹೊತ್ತಿನಲ್ಲಿ ಭಾರತದಲ್ಲಿನ ಉನ್ನತ ಶಿಕ್ಷಣ ಕ್ಷೇತ್ರವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ವ್ಯವಸ್ಥೆ ಹರಿದು–ಹಂಚಿಹೋಗಿರುವುದು, ತೀರಾ ಆರಂಭಿಕ ಹಂತದಲ್ಲೇ ವಿಷಯ ಪರಿಣತಿಯತ್ತ ಗಮನ ನೀಡುವುದು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳು ಮತ್ತು ಪ್ರದೇಶಗಳ ಜನರಿಗೆ ಉನ್ನತ ಶಿಕ್ಷಣ ಲಭ್ಯವಾಗದಿರುವುದು, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರಿಗೆ ಸ್ವಾಯತ್ತತೆ ಇಲ್ಲದಿರುವುದು ಆ ಸಮಸ್ಯೆಗಳ ಸಾಲಿಗೆ ಸೇರುತ್ತವೆ. ಈ ವಾಸ್ತವ, ಈ ಸಮಸ್ಯೆಗಳನ್ನು ಗಮನದಲ್ಲಿ ಇರಿಸಿಕೊಂಡು ಡಾ. ಕಸ್ತೂರಿರಂಗನ್‌ ಸಮಿತಿಯು ವರದಿ ರೂಪಿಸಿದೆ.

ಹೆಚ್ಚು ಉದಾರವಾದ ಪದವಿ ಶಿಕ್ಷಣ; ಬೋಧಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡು ವುದು; ಪಠ್ಯಕ್ರಮ, ವಿದ್ಯಾರ್ಥಿಗಳ ಸಾಮರ್ಥ್ಯ ಪರೀಕ್ಷಾ ವಿಧಾನಗಳಲ್ಲಿ ಬದಲಾವಣೆ ತರುವುದು; ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆ; ಸ್ವತಂತ್ರ ಮಂಡಳಿ ಯಿಂದ ಆಡಳಿತ ನಿರ್ವಹಣೆ; ಸಂಖ್ಯಾದೃಷ್ಟಿಯಿಂದ ಕಡಿಮೆ ಆದರೂ ಕಟ್ಟುನಿಟ್ಟಾಗಿರುವ ನಿಯಮಗಳನ್ನು ರೂಪಿಸುವುದು; ಬಹುಶಿಸ್ತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಇರುವ ಉನ್ನತ ಶಿಕ್ಷಣ ವ್ಯವಸ್ಥೆಯ ಕಡೆ ಸಾಗುವುದು ಈ ಕರಡು ನೀತಿಯಲ್ಲಿ ಆದ್ಯತೆ ಪಡೆದಿವೆ. ಭಾರತವನ್ನು ಕೇಂದ್ರೀಕರಿಸಿಕೊಂಡ, ಸುಸ್ಥಿರ ಹಾಗೂ ಸಮಾನ ವ್ಯವಸ್ಥೆಯೊಂದನ್ನು ರೂಪಿಸುವುದು ಈಗಿನ ಅಗತ್ಯ ಎಂಬುದು ಈ ಆದ್ಯತಾ ಅಂಶಗಳ ಆಶಯಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ಭಾರತ ಹಾಗೂ ಭಾರತೀಯರ ನೈಜ ಗುಣ ಮತ್ತು ಸಂಸ್ಕೃತಿ ಅರಳುವಂತೆ ಸುಧಾರಣೆಗಳು ಆಗಬೇಕು.

ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದಕ್ಕುವಂತೆ ಆಗಲು, ಮೂರು ವಿಧಗಳನ್ನು ಹೊಂದಿರುವ ಹೊಸ ಸಾಂಸ್ಥಿಕ ವ್ಯವಸ್ಥೆ ಬೇಕು. ಸಂಶೋಧನಾ ವಿಶ್ವವಿದ್ಯಾಲಯಗಳು, ಬೋಧನಾ ವಿಶ್ವವಿದ್ಯಾಲಯಗಳು ಹಾಗೂ ಪದವಿಗಳನ್ನು ನೀಡುವ ಸ್ವಾಯತ್ತ ಕಾಲೇಜುಗಳು ನಮಗೆ ಬೇಕು. ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಬಹುಶಿಸ್ತೀಯ ಆಗಬೇಕು, ಬೇರೆ ಬೇರೆ ವಿಷಯಗಳ ಬಗ್ಗೆ ಕೋರ್ಸ್‌ಗಳನ್ನು ನೀಡ ಬೇಕು. ಬಹುಶಿಸ್ತೀಯ ಕೋರ್ಸ್‌ಗಳನ್ನು ಒದಗಿಸಲು ಅನುಕೂಲ ಆಗುವಂತೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಗ್ಗೂಡಿಸಬೇಕು.

ಕರಡಿನ ಪ್ರಕಾರ, ‘ಮುಕ್ತ (ಲಿಬರಲ್‌) ಶಿಕ್ಷಣ’ ಎನ್ನುವುದು ಪದವಿ ಶಿಕ್ಷಣದ ನೆಲೆ ಆಗುತ್ತದೆ. ವಿಜ್ಞಾನ, ಕಲೆ ಮತ್ತು ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳನ್ನು ವಿಂಗಡಣೆ ಮಾಡುವ ಪದ್ಧತಿ ನಿಲ್ಲುತ್ತದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್‌ಗಳು ಎಲ್ಲ ವಿದ್ಯಾರ್ಥಿಗಳಿಗೂ ಮುಕ್ತವಾಗಲಿವೆ. ಹೊಸದಾಗಿ ಪ್ರವರ್ಧಮಾನಕ್ಕೆ ಬರುವ ಕ್ಷೇತ್ರಗಳಿಗೆ ಅಗತ್ಯವೆನಿಸಿದ ಕೋರ್ಸ್‌ಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ರೂಪಿಸುತ್ತವೆ.

ಮುಕ್ತ ಮಾನವಿಕ ಶಿಕ್ಷಣವು ವಿದ್ಯಾರ್ಥಿಗಳನ್ನು ವಿಜ್ಞಾನ–ಮಾನವಿಕ, ಗಣಿತ ಮತ್ತು ಮಾನವಿಕ, ವೈದ್ಯಕೀಯ ಮತ್ತು ಭೌತವಿಜ್ಞಾನದಂತಹ ವಿವಿಧ ಜ್ಞಾನಶಿಸ್ತುಗಳ ನಡುವಿನ ಸಂಬಂಧ ಅರಿಯುವಂತೆ ಮಾಡುತ್ತದೆ. ಇದು ವಿದ್ಯಾರ್ಥಿಯನ್ನು ಆತನ ಮೊದಲ ವೃತ್ತಿಗೆ ಮಾತ್ರ ಸಿದ್ಧಪಡಿಸದೆ, ಆತನನ್ನು ಎರಡನೆಯ, ಮೂರ ನೆಯ ವೃತ್ತಿಗಳ ನಿಟ್ಟಿನಲ್ಲೂ ತಯಾರು ಮಾಡುತ್ತದೆ. ಅಷ್ಟೇ ಅಲ್ಲ, ಉದ್ಯೋಗಗಳ ವ್ಯಾಪ್ತಿಯನ್ನು ಮೀರಿಯೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತದೆ.

ಉನ್ನತ ಶಿಕ್ಷಣ ಸಂಸ್ಥೆಗಳ ಆಡಳಿತವನ್ನು ಸ್ವತಂತ್ರ ಮಂಡಳಿಗಳು ನೋಡಿಕೊಳ್ಳುತ್ತವೆ. ಅವುಗಳಿಗೆ ಆಡಳಿತಾತ್ಮಕವಾಗಿ ಹಾಗೂ ಶೈಕ್ಷಣಿಕವಾಗಿ ಸಂಪೂರ್ಣ ಸ್ವಾಯತ್ತೆ ನೀಡಲಾಗುತ್ತದೆ. ಇದರಿಂದ ಬಾಹ್ಯ ಹಸ್ತಕ್ಷೇಪಗಳು ಕೊನೆಯಾಗುವುದು ಮಾತ್ರವಲ್ಲದೆ, ಹೆಚ್ಚಿನ ಸಾಮರ್ಥ್ಯ ಇರುವವರು ಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳು ಸ್ವಾಯತ್ತವಾಗಿ ಕೆಲಸ ಮಾಡುವುದು ಮಾತ್ರವಲ್ಲದೆ, ಈಗಿರುವ ‘ಸಂಯೋಜನೆ’ ವ್ಯವಸ್ಥೆ ನಿಲ್ಲುತ್ತದೆ. ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಮಾನವಾಗಿ ಕಾಣಲಾಗುತ್ತದೆ. ಸ್ವತಂತ್ರ ಆಡಳಿತ ಮಂಡಳಿಯ ರಚನೆ, ಸಂಸ್ಥೆಗಳ ಮುಖ್ಯಸ್ಥರ ವೃತ್ತಿಪರತೆಯನ್ನು ನಿರಂತರವಾಗಿ ಹೆಚ್ಚಿಸುವುದು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸಗಾರರ ಗಟ್ಟಿ ತಂಡ ಇರುವಂತೆ ನೋಡಿಕೊಳ್ಳುವುದು, ಸಂಪನ್ಮೂಲ ಕ್ರೋಡೀಕರಣಕ್ಕೆ ವ್ಯವಸ್ಥೆ ಇರುವುದು... ಇವೆಲ್ಲ ಈ ಮಾದರಿಯ ಮುಖ್ಯ ಅಂಶಗಳು.

ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಕಾರ್ಯವು ಸ್ಪಂದನಶೀಲವಾಗಿಯೂ ಅತ್ಯಂತ ಕಡಿಮೆ ಪ್ರಮಾಣದ್ದೂ ಆಗಿರಬೇಕು. ಇದರಿಂದ ಅತ್ಯುತ್ತಮವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ. ಆರ್ಥಿಕ ಸುಸ್ಥಿರತೆ, ಆರ್ಥಿಕ ಪಾರದರ್ಶಕತೆ ಮತ್ತು ಉತ್ತಮ ಆಡಳಿತ ಸಾಧ್ಯವಾಗುತ್ತದೆ. ಗುಣಮಟ್ಟದ ಮಾನದಂಡಗಳನ್ನು ಸಿದ್ಧಪಡಿಸುವುದು, ಹಣಕಾಸಿನ ನೆರವು ಒದಗಿಸುವುದು, ಮಾನ್ಯತೆ ನೀಡುವ ವ್ಯವಸ್ಥೆಗಳನ್ನು ಪ್ರತ್ಯೇಕಿಸಲಾಗುತ್ತದೆ. ಇವುಗಳನ್ನು ರಾಷ್ಟ್ರಮಟ್ಟದಲ್ಲಿ ಸ್ವತಂತ್ರ ಸಂಸ್ಥೆಗಳಿಂದ ನಡೆಸಲಾಗುತ್ತದೆ.

ವೃತ್ತಿಪರ ಶಿಕ್ಷಣ ಸೇರಿದಂತೆ ಎಲ್ಲ ಬಗೆಯ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ‘ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಪ್ರಾಧಿಕಾರ’ ಮಾತ್ರವೇ ನಿಯಂತ್ರಣ ವ್ಯವಸ್ಥೆಯಾಗಿ ಕೆಲಸ ಮಾಡಲಿದೆ. ಪುನರ್‌ರಚಿತ ‘ನ್ಯಾಕ್‌’ ನೇತೃತ್ವದಲ್ಲಿ ಮಾನ್ಯತಾ ಮಾಹಿತಿ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ಈಗಿನ ನಿಯಂತ್ರಣ ಪ್ರಾಧಿಕಾರಗಳೆಲ್ಲ ವೃತ್ತಿಪರ ಗುಣಮಟ್ಟ ನಿಗದಿ ಮಾಡುವ ಸಂಸ್ಥೆಗಳಾಗಿ ಬದಲಾಗಲಿವೆ.

ಸಂಶೋಧನೆ ಮತ್ತು ನಾವೀನ್ಯವು ಅರ್ಥವ್ಯವಸ್ಥೆಗೆ ಪೂರಕ ಆಗಿರುವ ಕಾರಣ, ಸಂಸತ್ತು ಕಾಯ್ದೆಯೊಂದನ್ನು ರೂಪಿಸಿ ‘ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’ವನ್ನು ರಚಿಸಲಿದೆ. ಎಲ್ಲ ಬಗೆಯ ಜ್ಞಾನಶಾಖೆಗಳಲ್ಲಿ ನಡೆಯುವ ಸಂಶೋಧನೆಗಳಿಗೆ ಅನುದಾನ ಒದಗಿಸುವುದು, ಶಿಕ್ಷಣ ಸಂಸ್ಥೆಗಳ ಮಟ್ಟದಲ್ಲಿ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವುದು ಇದರ ಕೆಲಸ ಆಗಿರಲಿದೆ. ವಿಜ್ಞಾನ, ತಂತ್ರಜ್ಞಾನ, ಸಮಾಜ ವಿಜ್ಞಾನ ಮತ್ತು ಕಲೆ, ಮಾನವಿಕ ಕ್ಷೇತ್ರಗಳಲ್ಲಿ ಈ ಪ್ರತಿಷ್ಠಾನ ಕೆಲಸ ಮಾಡಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಉಲ್ಲೇಖವಾಗಿರುವ ಈ ಎಲ್ಲ ಅಂಶಗಳು ಹೊಸ ಹಾಗೂ ಚಲನಶೀಲ ಭಾರತ ನಿರ್ಮಾಣದಲ್ಲಿ ನವ ಯುಗವೊಂದನ್ನು ತೆರೆಯಲಿವೆ.

ಪ್ರೊ. ಎಂ.ಕೆ.ಶ್ರೀಧರ್, ಬೆಂಗಳೂರಿನ ಸೆಂಟರ್‌ ಫಾರ್‌ ಎಜುಕೇಷನಲ್‌ ಅಂಡ್‌ ಸೋಷಿಯಲ್‌ ಸ್ಟಡೀಸ್‌ನ ಅಧ್ಯಕ್ಷ
ಪ್ರೊ. ಎಂ.ಕೆ.ಶ್ರೀಧರ್, ಬೆಂಗಳೂರಿನ ಸೆಂಟರ್‌ ಫಾರ್‌ ಎಜುಕೇಷನಲ್‌ ಅಂಡ್‌ ಸೋಷಿಯಲ್‌ ಸ್ಟಡೀಸ್‌ನ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT