ಸೋಮವಾರ, ಸೆಪ್ಟೆಂಬರ್ 23, 2019
27 °C
ಕಲಾ ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಕಾರ್ಪೊರೇಟ್ ವ್ಯವಸ್ಥೆಯೊಂದೇ ಕಾರಣವಲ್ಲ...

ಕಲೆ ಮತ್ತು ತರತಮದ ಮಡಿವಂತಿಕೆ

Published:
Updated:
Prajavani

ಇಂದಿನ ದೃಶ್ಯಕಲೆ ವ್ಯಕ್ತಿವಾದವಾಗಿ ಬೆಳೆದಿದೆ. ಅದಕ್ಕೆ ಸಾಮೂಹಿಕ ಅಥವಾ ಚಳವಳಿಯ ಸ್ವರೂಪದಲ್ಲಿ ನಂಬಿಕೆಯಿಲ್ಲ. ನಮ್ಮೀ ಜಾಗತೀಕರಣದ ಸಂತಾನವಾದ ಜಾಲತಾಣ ಪ್ರಪಂಚದಲ್ಲಿ ತಾನು ರಚಿಸಿದ್ದೇ ಸರ್ವೋತ್ತಮ ಎಂಬ ಭ್ರಮೆಯಲ್ಲಿರುವ ಕಲಾವಿದ, ಅದನ್ನು ಮಾರ್ಕೆಟ್ ಮಾಡುವ ತಂತ್ರವನ್ನು ಬಲು ಜಾಣತನದಿಂದ ಕಲಿತುಕೊಂಡಿದ್ದಾನೆ. ಯಾವುದೋ ಮ್ಯೂಜಿಯಮ್‍ನಲ್ಲಿ ಒರಟಾದ ಬಂಡೆಗಲ್ಲು ಅಥವಾ ಒಂದು ಕಮೋಡ್‌ನಂತಹವೂ ಸೃಜನಶೀಲ ಕಲೆಗಳಾಗಿ ಮಾರುಕಟ್ಟೆಯ ಮುಂಚೂಣಿಯ ವಸ್ತುಗಳಾಗಿವೆ. ಈ ಬಗೆಯ ಅಭಿವ್ಯಕ್ತಿಗಳ ಮಧ್ಯೆ, ದೇಸಿ ಕಲೆಯ ಪ್ರವೃತ್ತಿ ಹಿನ್ನಡೆ ಕಂಡಿದೆ. ಇದು ಚಿತ್ರ, ಶಿಲ್ಪ, ಪ್ರತಿಷ್ಠಾಪನ ಮತ್ತಿತರ ಕಲೆಗೂ ಅನ್ವಯ.

ಇನ್‍ಸ್ಟಂಟ್ ಮಾದರಿಯ ಇವೆಂಟ್ ಮ್ಯಾನೇಜ್‌ಮೆಂಟ್ ಸ್ವರೂಪಕ್ಕೆ ಕಲಾಜಗತ್ತು ಹೊರಳಿದೆಯೆಂದು ಭಾಸವಾಗುತ್ತದೆ. ಇಂತಹ ಬೆಳವಣಿಗೆಗೆ, ಕಾರ್ಪೊರೇಟ್ ವ್ಯವಸ್ಥೆಯೊಂದೇ ಕಿಟಕಿಯ ಮೂಲಕ ಬಂದದ್ದು ಕಾರಣವಲ್ಲ. ಕಳೆದೆರಡು ದಶಕಗಳ ನಮ್ಮ ಕಲಾಶಾಲೆಗಳು ಪರೋಕ್ಷ, ಅಪರೋಕ್ಷ ಕಾಣಿಕೆ ಸಲ್ಲಿಸಿವೆ. ಕಲಾ ಜಗತ್ತಿನ ದಿಗ್ಗಜ(?)ರೆನಿಸಿಕೊಂಡವರ ಸ್ವಹಿತಾಸಕ್ತಿಯ ಸಾಂಸ್ಕೃತಿಕ ರಾಜಕಾರಣದ ಹಲವು ಮುಖಗಳು ಪ್ರಕಟಗೊಂಡಿವೆ. ಹೀಗಾಗಿ, ಈ ನೆಲದ ದೇಸೀಯತೆಯೂ ಕಾಣದಾಗಿದೆ.

ಸಾಹಿತ್ಯ, ರಂಗಭೂಮಿಯಂತೆ ಚಿತ್ರಕಲೆಯ ಶಿಕ್ಷಣವು ಯುರೋಪಿನ ಮಾದರಿಗಳದ್ದೇ ಆಗಿದೆ. ಮುಂಬೈನ ಜೆ.ಜೆ ಸ್ಕೂಲ್‌ ಆಫ್‌ ಆರ್ಟ್‌ ಕಾಲೇಜು, ಕಲ್ಕತ್ತಾ, ದೆಹಲಿ, ಮದರಾಸಿನ ಕಲಾಶಿಕ್ಷಣದ ಮಾದರಿಗಳು ಬ್ರಿಟಿಷ್ ಕಲಾ ಶಿಕ್ಷಣದ ಪಠ್ಯದ ಮಾದರಿಗಳೇ ಆಗಿದ್ದವು. ಅರವತ್ತು, ಎಪ್ಪತ್ತರ ದಶಕದಲ್ಲಿ ನಮ್ಮ ಹಡಪದ, ಹುಬಳೀಕರ, ಮುನ್ನೋಳಿ, ಪಟೇಲ ಅವರು ಸೇರಿ ಬೆಂಗಳೂರಲ್ಲಿ ‘ವಿ ಫೋರ್’ ಮೂಲಕ ಚಿತ್ರಕಲೆಯಲ್ಲಿ ಆಧುನಿಕ ಕಲೆಯ ಹೊಸಗಾಳಿ ತಂದರು. ಉತ್ತರ ಕರ್ನಾಟಕದ ಬಹುತೇಕ ಕಲಾವಿದರು ಮುಂಬೈ ಸ್ಕೂಲ್ ಆಫ್ ಥಾಟ್‍ನ ಶಿಶುಗಳು. ಎರಡನೆಯ ಮಹಾಯುದ್ಧ ನಂತರದ ‘ಕಟ್ಟುವ ಕೆಡಹುವ’ ಸೃಜನ ಪರಂಪರೆ ನಮ್ಮಲ್ಲೂ ಬಂದಿತು. ಅರವತ್ತರ ದಶಕವು ಪ್ರಯೋಗಶೀಲ ಗುಣದ್ದು. ಮುಂಬೈನ ಬಾಂಬೆ ಆರ್ಟ್‌ ಸೊಸೈಟಿಯ ಹುಸೇನ್, ಗಾಯತೊಂಡೆ, ಸೋಜಾ ಮುಂತಾದವರ ಚಳವಳಿಯ ಪ್ರಭಾವ ಸಹಜವಾಗಿಯೇ ಇನ್ನಿತರ ಪ್ರಾಂತಗಳ ಮೇಲಾಗಿದೆ. ಆ ಪ್ರಭಾವದ ಕಲಾ ಶಾಲೆಗಳ ಆರಂಭಿಕ ಕೊಡುಗೆ ಸತ್ವಯುತವಾಗಿ ಇದ್ದುದರಲ್ಲಿ ಅನುಮಾನವಿಲ್ಲ.

ಆದರೆ ಇಂದು, ಕೆಲವನ್ನು ಹೊರತುಪಡಿಸಿದರೆ ಕಲಾಶಾಲೆಗಳ ಗುಣಮಟ್ಟ ಪಾತಾಳಕ್ಕೆ ಇಳಿದಿದೆ ಎಂಬ ಆರೋಪವು ದಟ್ಟವಾಗಿ ಕೇಳಿಬರುತ್ತಿದೆ. ಚಿತ್ರಕಲೆಯಲ್ಲಿ ಪದವಿ ಪಡೆದವನಿಗೆ ತೈಲ ವರ್ಣದ ಬಳಕೆಯೇ ಗೊತ್ತಿಲ್ಲ ಎನ್ನುವಷ್ಟರ ಮಟ್ಟಿಗೆ ಕಲಾಶಿಕ್ಷಣ ಕುಸಿದಿದೆ. ಇದು ಎಲ್ಲರನ್ನೂ ಆತ್ಮಾವಲೋಕನಕ್ಕೆ ಎಳಸುವಂಥದ್ದು. ಮೊದಲೇ ನಮ್ಮ ಸಮಾಜ, ಸರ್ಕಾರಗಳು ಚಿತ್ರಕಲೆಯನ್ನು ಬದುಕಿನ ಭಾಗವಾಗಿ ಸ್ವೀಕರಿಸಿಲ್ಲ. ಕಲಾಶಿಕ್ಷಣವು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸರ್ಕಾರವು ಮಲತಾಯಿ ಧೋರಣೆ ತೋರುತ್ತಾ ಬಂದಿದೆ. ಗುಣಮಟ್ಟ ಕಾಪಾಡದ ಕಲಾಶಾಲೆಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ತಾವು ಸ್ವೀಕರಿಸುವ ಶುಲ್ಕಕ್ಕೆ ನ್ಯಾಯ ಒದಗಿಸಬೇಕು. ಭ್ರೂಣಾವಸ್ಥೆಯಲ್ಲಿರುವ ಕಲಾಶಿಶುವಿನ ಹತ್ಯೆಯನ್ನು ತಡೆಯಬೇಕು. ಇದರ ಮಧ್ಯೆ, ನಾಡಿನ ಕೆಲವು ಕಲಾಶಾಲೆಗಳು ದೃಶ್ಯಕಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ತಮ್ಮ ಅನನ್ಯತೆಯನ್ನು ಮೆರೆದಿವೆ. ಅವು ಬೆಳೆದಿವೆ. ಅವರ ಶಿಷ್ಯರು, ಗುರುಗಳೂ ಬೆಳೆದು ಹೆಮ್ಮರವಾಗಿದ್ದಾರೆ.

ಆದರೆ ಸಾಂಸ್ಕೃತಿಕ ರಾಜಕಾರಣದ ಮೂಲಕ ಸ್ವಹಿತಾಸಕ್ತಿಗೆ ನಿಂತ ಘಟನೆಗಳು ಹೇರಳವಾಗಿ ಸಿಗುತ್ತವೆ. ಅವುಗಳಲ್ಲಿ ಒಂದನ್ನು ಉದಾಹರಿಸುತ್ತೇನೆ. ಪ್ರತಿಷ್ಠಿತ ಕಲಾ ಕಾಲೇಜಿನಲ್ಲಿ ಶಿಕ್ಷಣ ಪಡೆದವರೊಬ್ಬರು ಕಲಾವಿದರಾಗಿ ಹೆಸರು ಮಾಡಿದ್ದಾರೆ. ಅವರು ಒಂದು ಮಹಾನಗರದಲ್ಲಿ ನಡೆದ ‘ಆರ್ಟ್‌ ಫೇರ್’ನಲ್ಲಿ ಸ್ಟಾಲ್ ಒಂದನ್ನು ಪಡೆದು, ಕಲಾಕೃತಿಗಳನ್ನು ತೂಗುಹಾಕಿದ್ದರು. ಕರ್ನಾಟಕ ಸೇರಿ ಹಲವು ರಾಜ್ಯಗಳ ಹಿರಿ-ಕಿರಿ ಕಲಾವಿದರ ಸ್ಟಾಲ್‍ಗಳಿದ್ದವು. ಮೂರು ದಿನಗಳ ಆ ಕಲಾಜಾತ್ರೆಯ ಕೊನೆಯ ದಿನ ಸಂಘಟಕರಲ್ಲೊಬ್ಬರು, ಕಲಾಕೃತಿ ಕೊಳ್ಳುವ ಸಂಗ್ರಹಕಾರರನ್ನು ಎಲ್ಲ ಸ್ಟಾಲ್‍ಗಳತ್ತ ನ್ಯಾಯಯುತವಾಗಿ ಕರೆತಂದು ತೋರಿಸದೇ, ತಮ್ಮವರೆಂಬ ಕಾರಣಕ್ಕೆ ಆ ನಿರ್ದಿಷ್ಟ ಕಲಾವಿದನ ಹತ್ತಿರ ಮಾತ್ರ ತಮ್ಮ ಜೊತೆಗಾರರೊಂದಿಗೆ ಕರೆದೊಯ್ದು, ಅವರ ಕೃತಿಗಳನ್ನು ಪ್ರಶಂಸಿಸಿ, ಅಕ್ಷರಶಃ ಭಟ್ಟಂಗಿತನಕ್ಕೆ ಇಳಿದು, ನಾಲ್ಕೈದು ಕಲಾಕೃತಿಗಳು ಮಾರಾಟವಾಗುವ ಹಾಗೆ ನೋಡಿಕೊಂಡರು. ಕೊಳ್ಳುವಾತನ ಮೇಲೆ ಅವರ ಒತ್ತಡ ತಂತ್ರವು ಫಲಿಸಿತ್ತು. ಆದರೆ ಸಪ್ಪಗೆ ಮುಖಮಾಡಿ ಆಸೆಗಣ್ಣಿಂದ ಕಾದ ಉಳಿದವರು ಮಾತ್ರ ಗೊಣಗಿಕೊಂಡು ಸುಮ್ಮನಾದರು.

ಇಂದು ಸ್ಕೂಲ್ ಆಫ್ ಆರ್ಟ್‌ನ ಮಾದರಿ ಬದಲಾಗಿದೆ. ಒಬ್ಬ ಕಲಾವಿದ ತನ್ನನ್ನು ತಾನು ಪ್ರಮೋಷನ್‍ಗೆ ಒಡ್ಡಿಕೊಳ್ಳುವುದು ಅನಿವಾರ್ಯ. ಇದು ಮುಂಚೆಯೂ ಇದ್ದಿರಬಹುದು. ಕಲೆಯ ಶ್ರೀಮಂತಿಕೆ ಪಡೆದ ಯುರೋಪಿನಲ್ಲೂ ಇದೇ ಮಾದರಿಯನ್ನು ಹಿಂದಿನಿಂದ ಅನುಸರಿಸುತ್ತಿದ್ದರೆಂದು ಹೇಳಲಾಗುತ್ತದೆ. ಬೌದ್ಧಿಕತೆಯನ್ನು ಸೃಜನಶೀಲ ಸಂವೇದನೆಯ ಮೂಲಕ ಅಭಿವ್ಯಕ್ತಿಸಿರುವುದನ್ನು ಕಲಾವಿದರು ಸೇರಿ ರಸಿಕ ವೃಂದಕ್ಕೆ ಹೇಳಿಕೊಟ್ಟು, ತಮ್ಮನ್ನು ‘ಪ್ರಮೋಟ್’ ಮಾಡಿಕೊಳ್ಳುತ್ತಿದ್ದರು.

‘ಕನ್‌ಸ್ಟ್ರಕ್ಷನ್ ಮತ್ತು ಡಿ–ಕನ್‌ಸ್ಟ್ರಕ್ಷನ್’ನ ರಚನಾತ್ಮಕತೆಯ ಕ್ರಿಯೆಗಳು ಅವರ ಕೃತಿಗಳಿಗೆ ಮೌಲ್ಯ ತಂದುಕೊಟ್ಟವು. ದೃಶ್ಯ ಸಂವೇದನೆ ಇರದ ಕೃತಿ ಬಹುಕಾಲ ಬದುಕಲಾರದು ಎಂಬ ಸತ್ಯ ಇಂದು ಉಳಿದಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ನಮ್ಮ ಕಲಾವಿದರ ನಡುವೆಯೂ ಅಸ್ಪೃಶ್ಯರಿದ್ದಾರೆ. ಅವರು ಬೇರಾರೂ ಅಲ್ಲ. ಸ್ವಯಂ ಕಲಿಕೆಯ ಮೂಲಕ ತಮ್ಮ ಛಾಪನ್ನು ಒತ್ತಿದವರು. ದುರ್ದೈವವೆಂದರೆ, ಅಕಾಡೆಮಿಕ್ ನೆಲೆಯ ಮೂಲಕ ಬಂದವರು ಅವರನ್ನು ಹತ್ತಿರವೂ ಸೇರಿಸಿಕೊಳ್ಳುವುದಿಲ್ಲ. ಲಲಿತ ಕಲಾ ಅಕಾಡೆಮಿ ಅಥವಾ ತತ್ಸಮ ಸರ್ಕಾರಿ, ಅರೆ ಸರ್ಕಾರಿ ಸಂಘ ಸಂಸ್ಥೆಗಳು ಅವರಿಂದ ಅಂತರವನ್ನು ಕಾಪಾಡಿಕೊಂಡಿವೆ. ಯಾವುದೇ ಕಲಾ ಶಿಬಿರಗಳಿಗೆ ಅವರನ್ನು ಆಹ್ವಾನಿಸುವುದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೆಟ್ಟಿಲು ತುಳಿಯುವುದು ಅವರಿಗೆ ಸಾಧ್ಯವಿಲ್ಲದ ಸಂಗತಿ. ಅವರಿಗೆ ಗೌರವ, ಪುರಸ್ಕಾರ, ಬಹುಮಾನಗಳಂತೂ ಕನಸಿನ ಮಾತು. ಆದರೆ ಕಲೆಯ ಚರಿತ್ರೆ ಓದಿದವರು ನೆನಪಿಡಬೇಕು. ವಿನ್ಸೆಂಟ್ ವ್ಯಾನ್‌ಗೊ, ಹೆನ್ರಿ ರೂಸ್ಸೊ, ಫ್ರೀಡಾ ಕಾಹ್ಲೊ ಮುಂತಾದರು ಸ್ವಸಾಮರ್ಥ್ಯದಿಂದ ಪ್ರಸಿದ್ಧಿಗೆ ಬಂದ ಕಲಾವಿದರು. ಇವರು, ಈ ಅಸ್ಪೃಶ್ಯವೆಂದು ತಿಳಿಯುವ, ಪ್ರತಿಷ್ಠಿತ ಅಕಾಡೆಮಿಕ್ ವಲಯದಿಂದ ದೂರವುಳಿದ, ಸ್ವಂತ ಕಲಿಕೆಯ ಕಲಾವಿದರೇ ಹೌದೆನ್ನುವುದನ್ನು ಮರೆಯಬಾರದು. ಹೀಗಾಗಿ, ನಮ್ಮ ನಡುವಿನ ಇಂತಹ ಕಲಾವಿದರನ್ನು ಅವಕಾಶ ವಂಚಿತರನ್ನಾಗಿ ಮಾಡಕೂಡದು.

ಕಲಾವಿದರಲ್ಲಿ ಅಷ್ಟೇ ಅಲ್ಲ, ಕಲಾ ಪ್ರಕಾರಗಳನ್ನು ಸಹ ತರತಮದಿಂದ ಕಾಣುವ ಪರಿಪಾಟವಿದೆ. ಇಲಸ್ಟ್ರೇಷನ್, ಎಪ್ಪತ್ತರದಶಕದಲ್ಲಿ ಸಾಹಿತ್ಯಕ್ಕೆ ಸಮೃದ್ಧತೆಯನ್ನು ತಂದುಕೊಟ್ಟ ಕಲೆ. ಪುಣೆಯ ರವಿ ಪರಾಂಜಪೆ ತಮ್ಮ ಕಲೆಯ ಮೂಲಕ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಸಾಂಸ್ಕೃತಿಕ ಮೌಲ್ಯವನ್ನೇ ತಂದುಕೊಟ್ಟವರು. ಈ ಕಲೆಯ ಬಗ್ಗೆ ಅವಜ್ಞೆ ಕೇವಲ ಸಾಮಾಜಿಕವಾಗಿ ಇಲ್ಲ, ಶ್ರೇಷ್ಠ ಕಲಾವಿದರಲ್ಲಿಯೂ ಇದೆ. ಹಿರಿಯ ಕಲಾವಿದರೊಬ್ಬರು ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ಪ್ರಸಿದ್ಧ ಚಿತ್ರಕಲಾವಿದ ಮತ್ತು ಇಲಸ್ಟ್ರೇಟರ್ ಒಬ್ಬರ ಕಲಾಕೃತಿಯನ್ನು ‘ಅದು ಇಲಸ್ಟ್ರೇಷನ್‌ ಮಾದರಿಯದು’ ಎಂಬ ಕಾರಣಕ್ಕೆ, ಅಕಾಡೆಮಿಯ ಬಹುಮಾನಕ್ಕೆ ಪರಿಗಣಿಸಲು ನಿರಾಕರಿಸಿದ್ದರೆಂಬ ಮಾತಿದೆ. ಇಲಸ್ಟ್ರೇಷನ್ ಒಂದು ಕಲಾಪ್ರಕಾರವೇ ಅಲ್ಲ ಎಂದು ಪ್ರತಿಪಾದಿಸುವ ಕಲಾವಿಮರ್ಶಕರೊಬ್ಬರು, ಅದೇ ಕಲೆಯನ್ನು ಕಾಪಿ ಮಾಡಿ ಕಲಾಕೃತಿಗಳನ್ನು ರಚಿಸಿ, ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದು ವಿಸಂಗತನ. ಕಲೆಯು ನೋಡುಗನ ಅಂತರಂಗದ ಬೆಳಕು, ದನಿಯೇ ವಿನಾ ಇನ್ನೇನಲ್ಲ. ಅದು ತನ್ನನ್ನು ತಾನು ಅಭಿವ್ಯಕ್ತಿಸುವ, ಅನುಭವ ನೀಡುವ ಸಂವೇದನಶೀಲ ದೃಶ್ಯ ಮಾಧ್ಯಮ. ಈ ನಿಲುವು ಪ್ರಧಾನವಾದುದು. ತರತಮದ ಮಡಿವಂತಿಕೆ ಸೃಷ್ಟಿಸಿ ಕಲಾಜಗತ್ತನ್ನು ಮಲಿನಗೊಳಿಸುವುದು ಬೇಡ.

ಲೇಖಕ: ಚಿತ್ರಕಲಾವಿದ, ನಾಟಕಕಾರ

Post Comments (+)