ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಥ ಶಿಕ್ಷಕ ಮತ್ತು ಮೌಲ್ಯ ಪ್ರಜ್ಞೆ

ಶಿಕ್ಷಕರನ್ನು ಹೇಗೆ ನಿರ್ವಹಿಸಬೇಕು? ವೇತನ ಹೆಚ್ಚಳದಿಂದಲೇ? ಹೊಗಳಿಕೆಯಿಂದಲೇ? ಅಥವಾ...
Last Updated 22 ಜನವರಿ 2020, 20:00 IST
ಅಕ್ಷರ ಗಾತ್ರ
ADVERTISEMENT
""

ಹುದ್ದೆ ಖಾಲಿ ಇದೆ, ಆದರೆ ನೇಮಿಸಲು ಅರ್ಹರಾದ ಶಿಕ್ಷಕರು ಮತ್ತು ಉಪನ್ಯಾಸಕರು ಸಿಗುತ್ತಿಲ್ಲ ಎಂಬ ಭಾವನೆ ಬರುತ್ತಿದೆ ಎನ್ನುವುದು, ಶಿಕ್ಷಣ ಕ್ಷೇತ್ರಕ್ಕೆ ಭವಿಷ್ಯ ಇದೆ ಎನ್ನುವುದರ ಸೂಚನೆಯೂ ಹೌದು. ಯಾಕೆಂದರೆ, ಶಿಕ್ಷಕರ ಸಾಮರ್ಥ್ಯ ವೃದ್ಧಿ ಎನ್ನುವುದೆಲ್ಲವೂ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಮತ್ತು ನೇಮಕಗೊಂಡ ಶಿಕ್ಷಕರಿಗೆ ತರಬೇತಿಗಳನ್ನು ಹೆಚ್ಚಿಸುತ್ತಾ ಹೋಗಿವೆ.

ಉದಾಹರಣೆಗೆ, ಬಿ.ಇಡಿ ಅಥವಾ ಡಿ.ಇಡಿ ಅಂಕಗಳ ಮಾನದಂಡ ಸಾಲುವುದಿಲ್ಲ, ಪದವಿ– ಪಿಯುಸಿ ಅಂಕವನ್ನೂ ಪರಿಗಣಿಸಬೇಕು ಎಂದು ಆಯಿತು. ಇನ್ನೂ ಶಿಕ್ಷಕರ ಅರ್ಹತೆ ಸಾಲುವುದಿಲ್ಲ, ಸಿಇಟಿ ಮಾಡಿ ಅದಕ್ಕೆ ಬಿ.ಇಡಿಯಿಂದ ಶೇ 20ರಷ್ಟು, ಪದವಿಯಿಂದ ಶೇ 10ರಷ್ಟು ಹಾಗೂ ಸಿಇಟಿಯಿಂದ ಶೇ 70ರಷ್ಟು ಅಂಕ ತೆಗೆದುಕೊಂಡು ನೇಮಕ ಮಾಡಬೇಕು ಎಂದಾಯಿತು. ಇಷ್ಟಾದರೂ ಶಿಕ್ಷಕರ ಅರ್ಹತೆ ಸಾಕಾಗಲಿಲ್ಲ, ಟಿಇಟಿ ಮಾಡಬೇಕು ಎಂದಾಯಿತು.

ಟಿಇಟಿಯೂ ಸಾಲಲಿಲ್ಲ. ಅದರಲ್ಲಿ ಮತ್ತೆ ಪ್ರಬಂಧರೂಪಿ ಪ್ರಶ್ನೆಗಳು ಬೇಕು ಎಂದಾಯಿತು. ಅಷ್ಟಾಗಿಯೂ ಶಿಕ್ಷಕರ ಸಾಮರ್ಥ್ಯ ಸಾಲಲಿಲ್ಲ; ವರ್ಷದುದ್ದಕ್ಕೂ ಶಿಕ್ಷಕರಿಗೆ ತರಬೇತಿಯನ್ನೇ ಕೊಡೋಣ ಎಂದಾಯಿತು. ಇಷ್ಟೆಲ್ಲ ಆದ ಮೇಲಾದರೂ ಇನ್ನೊಂದು ಹೆಚ್ಚುವರಿ ಪರೀಕ್ಷೆ ಮಾಡೋಣ ಎಂದು ಅನಿಸದೆ ಪ್ರಾಮಾಣಿಕವಾಗಿ ‘ಸಮರ್ಥ ಶಿಕ್ಷಕರು ಸಿಗುತ್ತಾ ಇಲ್ಲ’ ಎಂದು ಹೇಳಿಕೊಳ್ಳುವ ಹತಾಶೆಯ ಒಡಲಿನಲ್ಲಿಯೇ, ಸಮರ್ಥ ಶಿಕ್ಷಕರ ಬರುವಿಕೆಯ ಭರವಸೆಯೂ ಹುಟ್ಟಿಕೊಳ್ಳುತ್ತದೆ.

‘ಸಮರ್ಥ ಶಿಕ್ಷಕರು’ ಎಂಬ ಪರಿಕಲ್ಪನೆಗೆ ಮೂರು ಪ್ರಮುಖ ಆಯಾಮಗಳಿವೆ. ಮೊದಲನೆಯದು, ವಿಷಯಜ್ಞಾನ ಮತ್ತು ತಜ್ಞತೆ. ಈ ಸಾಮರ್ಥ್ಯ ಚೆನ್ನಾಗಿದೆಯೇ ಎಂದು ಪರೀಕ್ಷಿಸಲು ಶಿಕ್ಷಕರ ನೇಮಕಾತಿಗೆ ಪರೀಕ್ಷೆಗಳನ್ನು ಹೆಚ್ಚಿಸುತ್ತಾ ಹೋಗುವುದಲ್ಲ. ಬದಲು ಶಿಕ್ಷಕರ ತರಬೇತಿಯ ಡಿ.ಇಡಿ, ಬಿ.ಇಡಿ ಕೋರ್ಸುಗಳ ಗುಣಮಟ್ಟವನ್ನು ಹೆಚ್ಚಿಸಬೇಕು. ಗುಣಮಟ್ಟವನ್ನು ಹೆಚ್ಚಿಸುವುದು ಎಂದರೆ, ಕಂಪ್ಯೂಟರ್‌ಗಳನ್ನು, ಪ್ರೊಜೆಕ್ಟರ್‌ಗಳನ್ನು ಜಾಸ್ತಿ ಮಾಡುವುದು ಎಂದೂ ಅಲ್ಲ. ಶಿಕ್ಷಕರ ಶಿಕ್ಷಣದಲ್ಲಿ ತರಬೇತಿ ಹೊಂದುವವರ ಪಠ್ಯಪುಸ್ತಕದ ಗಾತ್ರವನ್ನು ಹಿಗ್ಗಿಸುವುದೂ ಅಲ್ಲ. ಬದಲು ಶಿಕ್ಷಕ ತರಬೇತಿ ಪಡೆಯುವವರು ಚಿಂತನಶೀಲರಾಗುವಂತೆ ತರಬೇತು ನೀಡಬೇಕು. ಪಠ್ಯ ವಿಷಯಗಳನ್ನು ಸ್ವಂತ ಸಾಮರ್ಥ್ಯದಲ್ಲಿ ಹೇಗೆ ಅರ್ಥೈಸುತ್ತಾರೆ, ವಿವರಿಸುತ್ತಾರೆ ಎಂಬುದನ್ನು ಪರೀಕ್ಷಿಸಬೇಕು.

ಬಿ.ಇಡಿ,‌ ಡಿ.ಇಡಿ ಕೋರ್ಸುಗಳ ಪರೀಕ್ಷೆಯ ಗುಣಮಟ್ಟವನ್ನು ಹೆಚ್ಚಿಸಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ಕಷ್ಟ ಎನ್ನುವಷ್ಟು ಗುಣಮಟ್ಟದ ಪರೀಕ್ಷೆ ಇರಲಿ. ಆ ಉತ್ತರ ಪತ್ರಿಕೆಗಳನ್ನು ಬಿಗಿಯಾಗಿ ಮೌಲ್ಯಮಾಪನ ಮಾಡಬೇಕು. ಶಿಕ್ಷಕರಾಗಲಿರುವವರ ಉತ್ತರ ಪತ್ರಿಕೆಗಳನ್ನು ಬಿಗಿಯಾಗಿಯೇ ಮೌಲ್ಯಮಾಪನ ಮಾಡಬೇಕು. ಆಮೇಲೆ ಮತ್ತೊಂದು ಸಿಇಟಿ ಮಾದರಿ ಪರೀಕ್ಷೆಯ ಅಗತ್ಯವಿಲ್ಲ.

ಬಿ.ಇಡಿ ಅಥವಾ ಡಿ.ಇಡಿ ಅಂಕಗಳ ಆಧಾರದಲ್ಲೇ ನೇಮಕಾತಿ ಮಾಡಬಹುದು. ಮತ್ತೊಂದು ನೇಮಕಾತಿ ಪರೀಕ್ಷೆ ಮಾಡಲೇಬೇಕು ಎಂದಾದರೆ ಅದು ಕೆಎಎಸ್ ಮುಖ್ಯ ಪರೀಕ್ಷೆಯ ಮಾದರಿಯಲ್ಲಿ ಪ್ರಬಂಧ ಮಾದರಿಯ ಪರೀಕ್ಷೆಯಾಗಬೇಕೇ ಹೊರತು ಬಹು
ಆಯ್ಕೆ ಮಾದರಿಯ ಪರೀಕ್ಷೆ ಅಲ್ಲ. ಬಹುಆಯ್ಕೆ ಮಾದರಿಯ ಪರೀಕ್ಷೆಯು ವಾಕ್ಯರಚನೆಯ ಸಾಮರ್ಥ್ಯವನ್ನಾಗಲೀ ವಿಷಯ ವಿಸ್ತರಣೆಯ ಸಾಮರ್ಥ್ಯವನ್ನಾಗಲೀ ಪರೀಕ್ಷಿಸುವುದಿಲ್ಲ. ಶಿಕ್ಷಕರಿಗೆ ಬೇಕಾಗಿರುವುದೇ ಈ ಸಾಮರ್ಥ್ಯಗಳು.

ಎರಡನೆಯದು, ಪಾಠ ಬೋಧನೆಯ ವಿಧಾನ. ಕಾಲೇಜುಗಳಲ್ಲಿ ಬೋಧಕರ ಜ್ಞಾನ ಮುಖ್ಯವಾದರೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಜ್ಞಾನವೇ ಮುಖ್ಯ ಅಲ್ಲ. ಜ್ಞಾನವನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ತಲುಪಿಸುವ ವಿಧಾನದ ಸಾಮರ್ಥ್ಯವು ಶಿಕ್ಷಕರಿಗೆ ಜಾಸ್ತಿ ಇರಬೇಕಾಗುತ್ತದೆ. ಈ ವಿಧಾನಗಳೆಲ್ಲವನ್ನೂ ಡಿ.ಇಡಿ– ಬಿ.ಇಡಿ ತರಬೇತಿಗಳಲ್ಲಿ ಕಲಿಸಲಾಗುತ್ತದೆ. ಆದರೆ ಅಲ್ಲಿ ಆಗುವ ಸಮಸ್ಯೆ ಎರಡು ಬಗೆಯದು. ಮೊದಲನೆಯದು, ಪ್ರಾಯೋಗಿಕ ತರಗತಿಗಳು ಶಿಕ್ಷಣ ಸಿದ್ಧಾಂತಗಳಿಗೆ ಜಾಸ್ತಿ ಮಹತ್ವ ಕೊಟ್ಟು ತರಗತಿಯ ವಾಸ್ತವಗಳಿಗೆ ಮಹತ್ವ ಕೊಡದೇ ಇರುವುದು. ಎರಡನೆಯದು, ತರಬೇತಿಯಲ್ಲಿರುವ ಶಿಕ್ಷಕ ವಿದ್ಯಾರ್ಥಿಗಳಿಗೆ ಸ್ವಂತ ಜವಾಬ್ದಾರಿ ಇಲ್ಲದಿರುವುದು. ಪಠ್ಯವಸ್ತುವನ್ನು ಇಷ್ಟು ದಿನಗಳಲ್ಲಿ ಮುಗಿಸಿ ಪರೀಕ್ಷೆಯಲ್ಲಿ ಮಕ್ಕಳಿಂದ ಇಷ್ಟು ಫಲಿತಾಂಶವನ್ನು ಕೊಡಿಸಬೇಕು ಎಂಬ ಒತ್ತಡ ಇಲ್ಲದಾಗ ಬಹಳ ಚೆನ್ನಾಗಿ ಪಾಠ ಮಾಡಲು ಬರುತ್ತದೆ‌. ಆದರೆ ಶಾಲೆಗಳಿಗೆ ಬಂದಾಗ ಈ ಒತ್ತಡದಲ್ಲಿ ಪಾಠ ಬೋಧನೆ ಮಾಡಬೇಕಾಗು
ತ್ತದೆ. ಆಗ ಬೋಧನಾ ವಿಧಾನ ದುರ್ಬಲವಾಗುತ್ತದೆ‌. ಈ ಸನ್ನಿವೇಶವು ಆಡಳಿತಾತ್ಮಕವಾಗಿ ಬದಲಾಗಬೇಕು.

ಏಳನೆಯ ತರಗತಿಗೇ ಶಾಲೆ ಬಿಡುತ್ತಿದ್ದ ಮಕ್ಕಳು ಇದ್ದ ಕಾಲದಲ್ಲಿ ಏಳನೇ ತರಗತಿ ಪಠ್ಯದಲ್ಲಿ ಬಂದ ವಿಷಯವೇ ಹತ್ತನೇ ತರಗತಿ ಪಠ್ಯದಲ್ಲಿ ಬರುವುದರಲ್ಲಿ ಅರ್ಥವಿತ್ತು. ಇಂದು ಎಲ್ಲ ವಿದ್ಯಾರ್ಥಿಗಳೂ ಹತ್ತನೇ ತರಗತಿವರೆಗೆ ಓದುತ್ತಾರೆ ಎಂದ ಮೇಲೆ, ಎರಡೂ ತರಗತಿಗಳಲ್ಲಿ ಒಂದೇ ವಿಷಯ ಬರಬೇಕಾಗಿಲ್ಲ. ಗಣಿತವನ್ನು ಹೊರತುಪಡಿಸಿದರೆ ಉಳಿದ ಪಠ್ಯಗಳಲ್ಲಿ ಒಂದೇ ವಿಷಯ ಬೇರೆ ಬೇರೆ ಪಠ್ಯದಲ್ಲಿ ಬರುತ್ತದೆ. ಅದನ್ನು ತೆಗೆಯಬಹುದು. ಇದನ್ನೆಲ್ಲ ಸರಿಪಡಿಸಿದರೆ ಪಠ್ಯದ ಗಾತ್ರ ಸಣ್ಣದಾಗುತ್ತದೆ. ಆಗ ಬೋಧಿಸಬೇಕಾದ ವಿಧಾನದಲ್ಲೇ ಬೋಧಿಸಲು ಆಗುತ್ತದೆ. ಆದರೆ ಬಿ.ಇಡಿ– ಡಿ.ಇಡಿಗಳಲ್ಲಿ ಹೆಚ್ಚು ಪರಿಣಾಮಕಾರಿಯಾದ ಬೋಧನಾ ವಿಧಾನದ ಕೌಶಲಗಳನ್ನು ಅಧ್ಯಾಪಕರಲ್ಲಿ ರೂಢಿಸಬೇಕು.

ಮೂರನೆಯದು, ಅಧ್ಯಾಪಕರಿಗೆ ಇರಬೇಕಾದ ಮಕ್ಕಳ ಕುರಿತ ಕಾಳಜಿ. ಪ್ರಬಂಧ ಮಾದರಿಯ ಪರೀಕ್ಷೆಯಲ್ಲಿ ಅಭ್ಯರ್ಥಿ ಕೊಡುವ ಉತ್ತರವು ಮಕ್ಕಳ ಕುರಿತ ಅವರ ಕಾಳಜಿಯ ಮಟ್ಟವನ್ನು ಹೊರಗೆಡಹುತ್ತದೆ. ಅದನ್ನು ಗಮನಿಸಿ ಮೌಲ್ಯಮಾಪನ ಮಾಡಬೇಕು. ಈ ಭಾಗದಲ್ಲಿ‌ ಮೌಲ್ಯ ಪ್ರಜ್ಞೆ, ಸಮಾಜದೊಂದಿಗೆ ಅಧ್ಯಾಪಕರ ಒಡನಾಟ, ಸೃಜನಶೀಲ ಸಾಮರ್ಥ್ಯ ಎಲ್ಲವನ್ನೂ ಶಿಕ್ಷಕ ತರಬೇತಿಯಲ್ಲಿ ರೂಢಿಸಬೇಕು. ಈಗಾಗಲೇ ಇವೆಲ್ಲ ಇವೆ. ಆದರೆ ಎಲ್ಲವೂ ಅಂಕಗಳನ್ನು ಪಡೆಯಲು ಸಲ್ಲಿಸುವ ತಾಂತ್ರಿಕ ದಾಖಲೆಗಳಾಗುತ್ತವೆ. ಆ ಗುಣವೇ ಮೈಗೂಡಿ ಬರುವ ಹಾಗೆ ಆಗಬೇಕು.

ಶಿಕ್ಷಕರನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ಕೂಡ ಸಮರ್ಥ ಶಿಕ್ಷಕರ ಸೃಷ್ಟಿಗೆ ಕಾರಣವಾಗುತ್ತದೆ. ನಮ್ಮದು ಬ್ರಿಟಿಷರು ರೂಪಿಸಿದ ಆಡಳಿತ. ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕವೇ ಪರಿಹಾರ ಕಂಡುಕೊಳ್ಳುವುದು ಆ ಆಡಳಿತದ ಸ್ವರೂಪ. ಆದ್ದರಿಂದ ನಮ್ಮಲ್ಲಿ ತಪ್ಪು ಮಾಡಿದ ಶಿಕ್ಷಕರ ಇನ್‌ಕ್ರಿಮೆಂಟ್ ಕಡಿತಗೊಳಿಸುವ ವ್ಯವಸ್ಥೆ ಇದೆಯೇ ಹೊರತು ಒಳ್ಳೆಯದನ್ನು ಮಾಡಿದ ಶಿಕ್ಷಕರಿಗೆ ಒಂದು ಇನ್‌ಕ್ರಿಮೆಂಟ್ ಜಾಸ್ತಿ ಕೊಡುವ ವ್ಯವಸ್ಥೆ ಇಲ್ಲ. ಸಾಮಾನ್ಯವಾಗಿ ಸಮರ್ಥ ಶಿಕ್ಷಕರು ಸ್ವಲ್ಪ ಜಾಸ್ತಿ ಕೆಲಸ ಮಾಡುತ್ತಾರೆ. ಜಾಸ್ತಿ ಮಾಡಲು ಹೋದಾಗ ಸಣ್ಣ ಪುಟ್ಟ ಎಡವಟ್ಟೂ ಆಗುತ್ತದೆ. ಆಗ ಆದೇಶ ಇಲ್ಲದೆ ಹೆಚ್ಚಿನದನ್ನು ಮಾಡಲು ಹೋದದ್ದು ಯಾಕೆ ಎಂದು ನಿರ್ಬಂಧಿಸುತ್ತಾ ಹೋದ ಹಾಗೆ, ಉಳಿದ ಶಿಕ್ಷಕರಿಗೆ ಮಾದರಿಯಾಗಬಲ್ಲ ಸಮರ್ಥ ಶಿಕ್ಷಕನೊಬ್ಬನ ನಾಶವೂ ಆಗುತ್ತಾ ಹೋಗುತ್ತದೆ‌.

ಶಿಕ್ಷಕರ ವೇತನ ಹೆಚ್ಚಿಸುವುದೇ ಸಮರ್ಥ ಶಿಕ್ಷಕರನ್ನು ರೂಪಿಸಲಾರದು. ಹೊಗಳಿಕೆಯೂ ಸಮರ್ಥರನ್ನು ರೂಪಿಸಲಾರದು. ಶಿಕ್ಷಕರ ಮಾತಿಗೆ ಸ್ಪಂದಿಸುವ ಶಕ್ತಿ ವ್ಯವಸ್ಥೆಗೆ ಇದೆ ಎಂಬುದನ್ನು ತೋರಿಸಿದಾಗ ಶಿಕ್ಷಕರಲ್ಲಿ ಆತ್ಮವಿಶ್ವಾಸ ನಿರ್ಮಾಣವಾಗುತ್ತದೆ. ನಾವು ಬರೀ ಕೆಲಸದವರಲ್ಲ; ಶಾಲೆ ನಮ್ಮದು ಎಂಬ ಭಾವವನ್ನು ಶಿಕ್ಷಕರಲ್ಲಿ ಹುಟ್ಟುಹಾಕಲು ಸಾಧ್ಯವಾಗುತ್ತದೆ. ಪ್ರಾಥಮಿಕ ಶಾಲೆಯ ಪಾಠ ಪುಸ್ತಕ ರಚಿಸಲು ಸಮರ್ಥರಾದವರು 54 ಸಾವಿರ ಪಾಥಮಿಕ ಶಾಲೆಗಳಲ್ಲಿ ಒಬ್ಬನೂ ಇಲ್ಲ; ವಿಶ್ವವಿದ್ಯಾಲಯದವರನ್ನು ಕರೆತಂದು ಪಾಠ ಪುಸ್ತಕ ರಚಿಸಬೇಕಷ್ಟೆ ಎಂಬ ಸಂದೇಶವನ್ನೇ ಕೊಡುತ್ತಾ ಹೋದರೆ, ಸಮರ್ಥ ಶಿಕ್ಷಕರು ರೂಪುಗೊಳ್ಳಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಒಳ್ಳೆಯ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಅದಕ್ಕಾಗಿ ಅವರು ಅಭಿನಂದನಾರ್ಹರು.

ಅರವಿಂದ ಚೊಕ್ಕಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT