ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗದ ಅಸಮಂಜಸ ನಡೆ

ಉಪಚುನಾವಣೆ ಮುಂದೂಡುವುದನ್ನು ಬಯಸಲು ‘ಸುಪ್ರೀಂ’ಗೆ ಸಮರ್ಥನೆ ಇರಲಿಲ್ಲ
Last Updated 14 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಕೇಂದ್ರ ಚುನಾವಣಾ ಆಯೋಗವು ಎರಡು ವಾರಗಳ ಹಿಂದೆ ಅಭೂತಪೂರ್ವ ಕೆಲಸವೊಂದನ್ನು ಮಾಡಿತು– ನಿಗದಿಯಾಗಿದ್ದ ಚುನಾವಣೆಯನ್ನು ಕಾನೂನುಬಾಹಿರವಾಗಿ, ಅಸಮರ್ಥನೀಯವಾಗಿ ಮುಂದೂಡಿತು.

ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ವೇಳಾಪಟ್ಟಿಯನ್ನು ಸೆಪ್ಟೆಂಬರ್ 21ರಂದು ಘೋಷಿಸಿತು. ಅದಕ್ಕೆ ಸಂಬಂಧಿಸಿದ ಅಧಿಸೂಚನೆ ಎರಡು ದಿನಗಳ ನಂತರ ಪ್ರಕಟವಾಯಿತು. ಇಂತಹ ಅಧಿಸೂಚನೆ ಪ್ರಕಟವಾದ ನಂತರ, ಪ್ರಸ್ತಾವಿತ ಚುನಾವಣೆಯ ವಿಚಾರದಲ್ಲಿ ದೇಶದ ಯಾವುದೇ ಕೋರ್ಟ್‌ ಮಧ್ಯಪ್ರವೇಶಿಸುವಂತೆ ಇರಲಿಲ್ಲ. ವಿಧಾನಸಭೆ ಅಥವಾ ಲೋಕಸಭೆಗೆ ನಡೆಯುವ ಚುನಾವಣೆಯಲ್ಲಿ ಕೋರ್ಟ್‌ಗಳು ಏಕೆ ಮಧ್ಯಪ್ರವೇಶಿಸುವುದಿಲ್ಲ ಎಂಬುದಕ್ಕೆ ಹಲವು ಕಾರಣಗಳಿವೆ. ಮುಖ್ಯ ಕಾರಣ, ಸಂವಿಧಾನದ 329ನೇ ವಿಧಿ. ಚುನಾವಣೆಗೆ ಸಂಬಂಧಿಸಿದ ಯಾವುದೇ ತಕರಾರುಗಳನ್ನು ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರವಷ್ಟೇ, ಚುನಾವಣಾ ತಕರಾರು ಅರ್ಜಿ ಅಥವಾ ಇತರ ಅರ್ಜಿಗಳ ಮೂಲಕ ಇತ್ಯರ್ಥಪಡಿಸಬಹುದು. ‍ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಯು ಕ್ರಮಬದ್ಧವಾಗಿ ನಡೆಯುವಲ್ಲಿ ಹಲವರ ಭಾಗೀದಾರಿಕೆ ಇರುತ್ತದೆ. ಹಾಗಾಗಿ, ಯಾವುದೇ ವ್ಯಕ್ತಿಯ ಅಥವಾ ಒಂದು ರಾಜಕೀಯ ಪಕ್ಷದ ಹಿತಾಸಕ್ತಿಗಳು ಕೋರ್ಟ್‌ಗೆ ಚುನಾವಣೆಯನ್ನು ತಡೆಯಲು ಸಾಕಾಗುವುದಿಲ್ಲ.

2019ರ ಜುಲೈನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿಯ ಭಾಗವಾಗಿದ್ದ 17 ಶಾಸಕರು ತಮ್ಮ ಪಕ್ಷಗಳಿಂದ ದೂರ ಉಳಿದರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ದರು, ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸಿದರು, ಬಿಜೆಪಿಯ ಕೆಲವು ನಾಯಕರ ಜೊತೆ ಮುಂಬೈಗೆ ಹಾರಿದರು. ತಮ್ಮ ನಡೆಗೆ ಅವರು ಕೆಲವು ಸಮರ್ಥನೆಗಳನ್ನು ನೀಡಿದರು. ಆದರೆ, ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಹಿಂದೇಟು ಹಾಕಿದರು– ಹಿಂದೇಟು ಹಾಕಿದ್ದು ಕಾನೂನುಬಾಹಿರವಾಗಿತ್ತು. ಪಕ್ಷ ತೊರೆದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸ್ಪೀಕರ್‌ಗೆ ಮನವಿ ಸಲ್ಲಿಸಿದವು. ಇದನ್ನು ಒಪ್ಪಿದ ಸ್ಪೀಕರ್‌, 17 ಶಾಸಕರನ್ನು ಸಂವಿಧಾನದ ಹತ್ತನೆಯ ಶೆಡ್ಯೂಲ್‌ ಅನುಸಾರ ಅನರ್ಹಗೊಳಿಸಿದರು. ಅನರ್ಹಗೊಂಡವರು ಹಾಲಿ ವಿಧಾನಸಭೆಯ ಅವಧಿ 2023ರಲ್ಲಿ ಪೂರ್ಣಗೊಳ್ಳುವ ವರೆಗೆ ಮತ್ತೆ ಸದನದ ಸದಸ್ಯರಾಗುವಂತೆ ಇಲ್ಲ ಎಂದು ಹೇಳುವ ಮೂಲಕ ಸ್ಪೀಕರ್‌ ತಮ್ಮ ಅಧಿಕಾರವ್ಯಾಪ್ತಿ ಮೀರಿದರು.

ಶಾಸಕ ಸ್ಥಾನದಿಂದ ಅನರ್ಹಗೊಂಡವರು ಸ್ಪೀಕರ್‌ ಆದೇಶವನ್ನು ಸಂವಿಧಾನದ 32ನೇ ವಿಧಿಯ ಅಡಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಸರ್ಕಾರ ಅಥವಾ ಇತರ ಸಂಸ್ಥೆಗಳಿಂದ ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಈ ವಿಧಿಯ ಅಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಸ್ಪೀಕರ್‌ ಆದೇಶದಿಂದ ಉಲ್ಲಂಘನೆ ಆಗಿದೆ ಎನ್ನಲಾದ ಹಕ್ಕುಗಳು ಸುಪ್ರೀಂ ಕೋರ್ಟ್‌ನಿಂದ ಯಾವುದೇ ಪ್ರಕರಣದಲ್ಲೂ ‘ಮೂಲಭೂತ ಹಕ್ಕುಗಳು’ ಎಂದು ಪರಿಗಣಿತವಾಗಿಲ್ಲ. ಹಾಗಾಗಿ, ಈ ಶಾಸಕರನ್ನು ಕರ್ನಾಟಕ ಹೈಕೋರ್ಟ್‌ಗೆ ಕಳುಹಿಸುವ ಬದಲು ಸುಪ್ರೀಂ ಕೋರ್ಟ್‌ ತನ್ನ ಮೌಲ್ಯಯುತ ಸಮಯವನ್ನು ಅವರ ವಾದ ಆಲಿಸಲು ವಿನಿಯೋಗಿಸುವ ತೀರ್ಮಾನ ತೆಗೆದುಕೊಂಡಿದ್ದು ಆಶ್ಚರ್ಯಕರ.

ವಿಧಾನಸಭೆಯ ಸದಸ್ಯರನ್ನು ಸ್ಪೀಕರ್‌, ಸಂವಿಧಾನದ 10ನೆಯ ಶೆಡ್ಯೂಲ್‌ನ ಅಡಿ ಅನರ್ಹಗೊಳಿಸಿದಾಗ, ಅನರ್ಹತೆಯ ಪರಿಣಾಮಗಳು ಕೂಡ ಆ ಶೆಡ್ಯೂಲ್‌ನಲ್ಲಿ ಹೇಳಿರುವಂತೆಯೇ ಇರಬೇಕು. ಅನರ್ಹತೆಯ ಅವಧಿ ಇಂತಿಷ್ಟು ಎಂದು 10ನೆಯ ಶೆಡ್ಯೂಲ್‌ ಹೇಳುವುದಿಲ್ಲ. ವಿಧಾನಸಭೆಯ ಸದಸ್ಯರನ್ನು ಸಂವಿಧಾನದ ಬೇರೆ ವಿಧಿಗಳ ಅಡಿಯಲ್ಲಿ ಹಾಗೂ ಪ್ರಜಾಪ್ರಾತಿನಿಧ್ಯ ಕಾಯ್ದೆ ಅಡಿಯಲ್ಲಿ ಕೂಡ ಅನರ್ಹಗೊಳಿಸಬಹುದು. ಆ ರೀತಿ ಅನರ್ಹಗೊಳಿಸಿದರೆ, ಅಂತಹ ಅನರ್ಹತೆ ಎಷ್ಟು ಕಾಲ ದವರೆಗೆ ಎಂಬುದು ಉಲ್ಲೇಖವಾಗಿದೆ. ಹೀಗಿರುವಾಗ, ಯಾವುದೇ ಸದಸ್ಯನನ್ನು 10ನೆಯ ಶೆಡ್ಯೂಲ್‌ನ ಅಡಿ ಅನರ್ಹಗೊಳಿಸಿದಾಗ, ಆತ ಆ ಸದನಕ್ಕೆ ನಡೆಯುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿ, ಮರುಆಯ್ಕೆ ಆಗುವವರೆಗೆ ಮಾತ್ರ ಅನರ್ಹನಾಗಿರುತ್ತಾನೆ ಎಂದು ತೀರ್ಮಾನಿಸುವುದು ನ್ಯಾಯಾಲಯಕ್ಕೆ ಕಷ್ಟದ ಕೆಲಸವಲ್ಲ. ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದ 18 ಶಾಸಕರನ್ನು ಅನರ್ಹಗೊಳಿಸಿದಾಗ, ಅವರು ಉಪಚುನಾವಣೆ ಎದುರಿಸುವುದನ್ನು ತಡೆಯುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿತ್ತು.

ಅ. 21ರಂದು ನಡೆಯಬಹುದಿದ್ದ ಉಪಚುನಾವಣೆಯಲ್ಲಿ ಸ್ಪರ್ಧಿಸಲು 15 ಜನ ಅನರ್ಹಗೊಂಡ ಶಾಸಕರು ಮುಕ್ತರಿದ್ದಾರೆ ಎಂದು ಆಯೋಗದ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು ಎಂದು ವರದಿಯಾಗಿದೆ. ಉಪಚುನಾವಣೆ ತಡೆಹಿಡಿಯು
ವುದನ್ನು ಅಥವಾ ಮುಂದಕ್ಕೆ ಹಾಕುವುದನ್ನು ಬಯಸಲು ಸುಪ್ರೀಂ ಕೋರ್ಟ್‌ಗೆ ಸಮರ್ಥನೆಗಳು ಇರಲಿಲ್ಲ. ಅನರ್ಹ
ಗೊಂಡವರು ಉಪಚುನಾವಣೆಯಲ್ಲಿ ಸ್ಪರ್ಧಿಸಿ, ಜಯ ಗಳಿಸಿದ ನಂತರ ಅವರು ಸ್ಪರ್ಧಿಸುವಂತೆ ಇರಲಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಮಾನಿಸಿದ್ದಿದ್ದರೆ– ಆ ಸಾಧ್ಯತೆ ತೀರಾ ಕ್ಷೀಣ– ಆ ಚುನಾವಣೆಯಲ್ಲಿ ಎರಡನೆಯ ಅತಿಹೆಚ್ಚು ಮತ ಗಳಿಸಿದ ಅಭ್ಯರ್ಥಿ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 100ರ ಅನ್ವಯ ತಾನು ವಿಜಯಿ ಎಂದು ಘೋಷಿಸಬೇಕು ಎಂದು ನ್ಯಾಯಾಲಯವನ್ನು ಕೇಳಿಕೊಳ್ಳಬಹುದಿತ್ತು.

ಅನರ್ಹತೆಯ ಕಾರಣದಿಂದಾಗಿ, ತಾವು ಸರ್ಕಾರದಲ್ಲಿ ಸಚಿವರಾಗಲು ಸಾಧ್ಯವಿಲ್ಲ ಎಂದು ಅನರ್ಹಗೊಂಡವರ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದಾಗ, ಅನರ್ಹಗೊಂಡವರಿಗೆ ಬಿಜೆಪಿ ನೇತೃತ್ವದ ಸರ್ಕಾರವು (ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ವಿರೋಧ ಪಕ್ಷದಲ್ಲಿ ಇತ್ತು) ಸಚಿವ ಸ್ಥಾನ ಸ್ವೀಕರಿಸುವುದಕ್ಕೆ ಆಹ್ವಾನ ನೀಡಿದೆಯೇ ಎಂದು ಕೋರ್ಟ್‌ ಕೇಳ ಬಹುದಿತ್ತು! ಆ ಮೂಲಕ, ಈ ಪ್ರಕರಣದ ಬಗ್ಗೆ ಇನ್ನಷ್ಟು ವಿಷಯಗಳನ್ನು ಅರ್ಥ ಮಾಡಿಕೊಳ್ಳಬಹುದಿತ್ತು.

ಅಷ್ಟೇ ಅಲ್ಲ, ‘ಉಪಚುನಾವಣೆಗೆ ಸ್ಪರ್ಧಿಸುವಾಗ ಅನರ್ಹಗೊಂಡವ ಎಂಬ ಕಳಂಕ ಹೊತ್ತುಕೊಳ್ಳಲು ಸಿದ್ಧವಿಲ್ಲ’ ಎಂದು ಅವರು ಮಂಡಿಸಿದ ವಾದವು, ಚುನಾವಣಾ ಆಯೋಗವನ್ನು ಬಹಳ ಕಲಕಿತು ಎಂದು ಅನಿಸುತ್ತದೆ! ಆಗ ಆಯೋಗವು, ತಾನು ಉಪಚುನಾವಣೆ ಯನ್ನು ಮುಂದಕ್ಕೆ ಹಾಕುವುದಾಗಿಯೂ ಸುಪ್ರೀಂ ಕೋರ್ಟ್‌ ತೀರ್ಮಾನಕ್ಕೆ ಕಾಯುವುದಾಗಿಯೂ ನ್ಯಾಯಾ ಲಯಕ್ಕೆ ಹೇಳಿತು. ಇದು ಚುನಾವಣಾ ಆಯೋಗವು ತನ್ನ ಆತ್ಮ ಮಾರಿಕೊಂಡಿದ್ದಕ್ಕೆ ಸಮ.

ಹಿಂದೆ ಜೆಡಿಎಸ್–ಕಾಂಗ್ರೆಸ್ ಮೈತ್ರಿಯ ಜೊತೆಯಲ್ಲಿ ಇದ್ದ, ಈಗ ಅನರ್ಹಗೊಂಡಿರುವ ಶಾಸಕರು ಯಾವ ಬಗೆಯ ‘ಕಳಂಕ’ದ ಬಗ್ಗೆ ಭೀತಿ ಹೊಂದಿದ್ದರು ಎಂಬು ದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಏಕೆಂದರೆ, ಅವರಲ್ಲಿ ಬಹುತೇಕರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲು ಬಿಜೆಪಿ ಪಕ್ಷದಿಂದ ತಮಗೆ ಟಿಕೆಟ್ ಸಿಗುತ್ತದೆ ಎಂದು ನೆಚ್ಚಿಕೊಂಡಿದ್ದವರು.

ಕರ್ನಾಟಕ ವಿಧಾನಸಭೆಯ ಒಟ್ಟು ಸಂಖ್ಯಾಬಲ 224. ಈ ಪೈಕಿ 17 ಸ್ಥಾನಗಳು ಅನರ್ಹತೆಯ ಕಾರಣದಿಂದಾಗಿ ಖಾಲಿ ಇವೆ. ವಿಧಾನಸಭೆಯ ಪೂರ್ಣ ಸಂಖ್ಯಾಬಲವನ್ನು ಪರಿಗಣಿಸಿದರೆ ಆಡಳಿತಾರೂಢ ಬಿಜೆಪಿಯು ತಾಂತ್ರಿಕ ವಾಗಿ ಅಲ್ಪಮತದ ಸರ್ಕಾರ ನಡೆಸುತ್ತಿದೆ. ರಾಜ್ಯದಲ್ಲಿ ಈಗ ನಡೆಯಲಿರುವ ಉಪಚುನಾವಣೆಯು ಯಾವುದೋ ಮಾಮೂಲಿ ಉಪಚುನಾವಣೆಯಂತೆ ಅಲ್ಲ. ಏಕೆಂದರೆ, ಈ ಉಪಚುನಾವಣೆಯ ಫಲಿತಾಂಶ ಪ್ರಕಟವಾದ ನಂತರದ ವಿಧಾನಸಭೆಯ ಸಂಖ್ಯಾಬಲವು ಸರ್ಕಾರದಲ್ಲಿ ಯಾರಿರುತ್ತಾರೆ ಎಂಬುದನ್ನು ತೀರ್ಮಾನಿಸುತ್ತದೆ. ಹಾಗಾಗಿ, ಇದು ಮಾಮೂಲಿ ವಿಧಾನಸಭಾ ಚುನಾವಣೆ ಹೊಂದಿರುವಂತಹ ಮಹತ್ವವನ್ನು ಹೊಂದಿದೆ.

ಯಾವುದೇ ಬಲವಾದ ಕಾರಣ ಇಲ್ಲದೆ, ಉಪಚುನಾವಣೆಯನ್ನು ಮುಂದಕ್ಕೆ ಹಾಕುವುದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡುವ ಮೂಲಕ ವಿಧಾನಸಭೆಯಲ್ಲಿ ಸಂಖ್ಯಾಬಲದ ಕೊರತೆಯನ್ನು ಮುಂದುವರಿಸಿದ್ದಕ್ಕೆ ಯಾವ ಸಮರ್ಥನೆಯೂ ಇಲ್ಲ. ಅಷ್ಟೇ ಅಲ್ಲ, ಚುನಾವಣಾ ಆಯೋಗವು ತನ್ನ ಕಣ್ಣೆದುರಿನಲ್ಲಿಯೇ ಸಾಂವಿಧಾನಿಕ ಕರ್ತವ್ಯವನ್ನು ತ್ಯಜಿಸುವುದಕ್ಕೆ ಅವಕಾಶ ಕೊಟ್ಟಿದ್ದು ಸುಪ್ರೀಂ ಕೋರ್ಟ್‌ನ ವೈಫಲ್ಯ ಕೂಡ ಹೌದು.

ಲೇಖಕ: ಸುಪ್ರೀಂ ಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT