ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯ

Last Updated 1 ಫೆಬ್ರುವರಿ 2018, 10:01 IST
ಅಕ್ಷರ ಗಾತ್ರ

ಬೆಳಗಾವಿ: ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ಯುಜಿಸಿ ಮಾಜಿ ಅಧ್ಯಕ್ಷ ಪ್ರೊ.ವಿ.ಎಸ್‌. ಚವ್ಹಾಣ ಹೇಳಿದ್ದಾರೆ. ಇಲ್ಲಿನ ವಿಟಿಯು ಸಭಾಂಗಣದಲ್ಲಿ ಬುಧವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಬೇಕಿದ್ದ ಅವರು, ಅನಾರೋಗ್ಯದಿಂದ ಗೈರುಹಾಜರಾದರು. ಮುದ್ರಿತ ಭಾಷಣವನ್ನು ಪ್ರೊ.ಆರ್.ಎನ್‌. ಮನಗೂಳಿ ಓದಿದರು.

‘ದೇಶದಲ್ಲಿ 18ರಿಂದ 30ರ ವರ್ಷ ವಯಸ್ಸಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭವಿಷ್ಯದ ದಿನಗಳು ಅವರದಾಗಿವೆ ಹಾಗೂ ಸಶಕ್ತ ರಾಷ್ಟ್ರ ನಿರ್ಮಾಣದ ಹೊಣೆಯೂ ಅವರ ಮೇಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಉನ್ನತ ಶಿಕ್ಷಣ ಇಂದು ಹೊರಳು ದಾರಿಯಲ್ಲಿದೆ. ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳಬೇಕು ಎನ್ನುವುದು ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿದೆ. ಕೆಲ ದಶಕಗಳಿಂದಿಚೀಗೆ ವಿಶ್ವವಿದ್ಯಾಲಯ ಶಿಕ್ಷಣದಲ್ಲಿ ರಚನಾತ್ಮಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಗುಣಮಟ್ಟದ ವಿಶ್ವವಿದ್ಯಾಲಯಗಳ ಸ್ಥಾಪನೆಯ ಪರಿಕಲ್ಪನೆಯೂ ಕಂಡುಬರುತ್ತಿದೆ. ವಾಸ್ತವವಾಗಿ ಆಧುನಿಕ ಪರಿಕಲ್ಪನೆಯ ವಿ.ವಿಗಳನ್ನು ರೂಪಿಸುವಲ್ಲಿ ಗೊಂದಲದಲ್ಲಿದ್ದೇವೆ. ಬದಲಾಗುತ್ತಿರುವ ಬೇಡಿಕೆಗಳಿಗೆ ತಕ್ಕಂತೆ ಸ್ಥಾಪಿಸಬೇಕಾಗಿದೆ’ ಎಂದು ವಿಶ್ಲೇಷಿಸಿದ್ದಾರೆ.

ಹೆಚ್ಚಿನ ಜನರಿಗೆ: ‘ವಿಶ್ವದಲ್ಲಿ ಭಾರತವು ಅತಿಹೆಚ್ಚಿನ ಜನರಿಗೆ ಉನ್ನತ ಶಿಕ್ಷಣ ಒದಗಿಸಬೇಕಾದ ಅನಿವಾರ್ಯತೆಯಲ್ಲಿದೆ. ಪ್ರಸ್ತುತ, ಇನ್ನೂ ಹೆಚ್ಚಿನ ಮಂದಿಗೆ ಉನ್ನತಶಿಕ್ಷಣ ತಲುಪಿಸಬೇಕಾಗಿದೆ. ಈ ಸನ್ನಿವೇಶದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು ಸವಾಲಿನ ಸಂಗತಿಯೂ ಆಗಿದೆ. ಇಂದು ವಿಶ್ವವಿದ್ಯಾಲಯಗಳು ದೇಶದ ಬಹುದೊಡ್ಡ ಆಸ್ತಿಗಳಾಗಿವೆ.

ಅಲ್ಲಿ ಅಗತ್ಯ ಸಂಶೋಧನೆಗಳು ನಡೆಯುತ್ತವೆ. ಮಾರುಕಟ್ಟೆ ಮತ್ತು ಔದ್ಯೋಗಿಕ ಅಗತ್ಯಕ್ಕೆ ತಕ್ಕಂತೆ ಕೌಶಲ ಆಧರಿತ ಮಾನವ ಸಂಪನ್ಮೂಲ ಸೃಷ್ಟಿಯಾಗುತ್ತಿದೆ. ಸಾಮಾಜಿಕ, ಸಾಂಸ್ಕೃತಿಕ ಮೌಲ್ಯವರ್ಧನೆಗೆ ಕಾರಣವಾಗಿವೆ. ವಾಸ್ತವವಾಗಿ ಇಂದು ವಿಶ್ವವಿದ್ಯಾಲಯಗಳು ಹಲವು ಒತ್ತಡದ ಸನ್ನಿವೇಶಗಳನ್ನು ಎದುರಿಸುತ್ತವೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಿರ್ದಿಷ್ಟ ಜ್ಞಾನ ನೀಡುವಲ್ಲಿ, ಮೌಲ್ಯಗಳನ್ನು ವಿಸ್ತರಿಸುವಲ್ಲಿ ನಿರತವಾಗಿರುವುದರಿಂದ ಒತ್ತಡ ಸೃಷ್ಟಿಯಾಗಿದೆ’ ಎಂದು ಅವರು ಹೇಳಿದ್ದಾರೆ.

ಸವಾಲುಗಳನ್ನು ಎದುರಿಸಬೇಕು: ‘ದೇಶ ಇಂದು ಹಲವು ಸಂಕೀರ್ಣತೆಗಳನ್ನು ಹೊಂದಿದೆ. ಸವಾಲುಗಳನ್ನು ಎದುರಿಸುತ್ತಿದೆ. ಬಡತನ, ಅನಕ್ಷರತೆ ಕಾಡುತ್ತಿದೆ. ಸಾಮಾಜಿಕ ಅಸಮಾನತೆಯು ಮುಖ್ಯ ಸವಾಲಾಗಿದೆ. ಇದರಿಂದಾಗಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಸಂಖ್ಯೆ ಶೇ 20ನ್ನೂ ಮೀರಿಲ್ಲ. ಇದು ಜಾಗತಿಕ ಪ್ರವೇಶಾತಿ ಪ್ರಮಾಣಕ್ಕಿಂತಲೂ ಕಡಿಮೆ ಇದೆ. ಇಂತಹ ಸವಾಲುಗಳನ್ನು ನಮ್ಮ ಯುವಜನರು ಎದುರಿಸಬೇಕಾಗಿದೆ.

ಆಧುನಿಕ ರಾಷ್ಟ್ರ ನಿರ್ಮಾಣ ಮಾಡಬೇಕಾಗಿದೆ. ಇದಕ್ಕಾಗಿ ಅರ್ಪಣಾ ಮನೋಭಾವದ ಮತ್ತು ಗುಣಮಟ್ಟದ ಶಿಕ್ಷಣ ಹೊಂದಿರುವ ಶಿಕ್ಷಕ, ಜನಸೇವಕ, ಉದ್ಯಮಿ, ಎಂಜಿನಿಯರ್‌ಗಳು ಬೇಕಾಗಿದ್ದಾರೆ. ಪರಿಶ್ರಮದಿಂದ ಯಶಸ್ಸು ಗಳಿಸುವುದನ್ನು ಇಂದಿನ ಯುವಜನರಿಗೆ ಕಲಿಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕುಲಪತಿ ಪ್ರೊ.ಶಿವಾನಂದ ಬಿ. ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಪ್ರೊ.ಸಿದ್ದು ಪಿ. ಆಲಗೂರ, ಪ್ರೊ.ರಂಗರಾಜ ವನದುರ್ಗ, ಹಣಕಾಸು ಅಧಿಕಾರ ಪರಶುರಾಮ ದುಡಗುಂಟಿ, ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಡೀನ್‌ಗಳು, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು ಇದ್ದರು. ಸ್ವಾಗತ, ಘಟಿಕೋತ್ಸವ ಭಾಷಣ ಹಾಗೂ ಕಾರ್ಯಕ್ರಮ ಪಟ್ಟಿಯನ್ನು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿತ್ತು.

25,943 ಮಂದಿಗೆ ಪದವಿ ಪ್ರದಾನ

ಘಟಿಕೋತ್ಸವದಲ್ಲಿ 23,436 ಪದವಿ ಹಾಗೂ 5,507 ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. 18 ಪಿಎಚ್‌.ಡಿ ಪ್ರದಾನ ಮಾಡಲಾಯಿತು. 8 ಸ್ನಾತಕ ವಿದ್ಯಾರ್ಥಿಗಳು, 23 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು. ವಿಭಿನ್ನ ವಿಷಯಗಳಲ್ಲಿ ಅತಿಹೆಚ್ಚು ಅಂಕ ಗಳಿಸಿದ 15 ಬಿಎ, 12 ಬಿಕಾಂ, 10 ಬಿ.ಎಸ್ಸಿ ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸಿದರು. ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 176 ರ‍್ಯಾಂಕ್‌ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT