ಮಂಗಳವಾರ, ಜೂನ್ 2, 2020
27 °C
ಲಾಕ್‍ಡೌನ್ ನಂತರ ಏರಬಹುದಾದ ಅಪರಾಧಗಳ ನಿರ್ವಹಣೆ ಹೇಗೆ?

ವಿಶ್ಲೇಷಣೆ | ಜೋಕೆ... ಪಾತಕಿ ಹೊಂಚುಹಾಕುತ್ತಿದ್ದಾನೆ!

ಡಾ. ಡಿ.ವಿ.ಗುರುಪ್ರಸಾದ್ Updated:

ಅಕ್ಷರ ಗಾತ್ರ : | |

ರಾಷ್ಟ್ರದಾದ್ಯಂತ ಲಾಕ್‍ಡೌನ್ ಸಡಿಲಗೊಳಿಸಿದ ನಂತರ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತದೆ ಎಂಬ ಭವಿಷ್ಯ ನುಡಿಯಲು ಪ್ರಕಾಂಡ ಪಾಂಡಿತ್ಯ ಬೇಕಾಗಿಲ್ಲ. ಇದು ಸಾಮಾನ್ಯ ಜ್ಞಾನ. ಇದಕ್ಕೆ ಮುಖ್ಯ ಕಾರಣಗಳೆಂದರೆ; ಇದ್ದಕ್ಕಿದ್ದಂತೆ ಉಂಟಾಗುವ ನಿರುದ್ಯೋಗ, ಅರೆ ಉದ್ಯೋಗದಿಂದಾಗುವ ಆರ್ಥಿಕ ಹೊರೆ, ಹಣದ ಅಲಭ್ಯತೆಯಿಂದ ಹೆಚ್ಚುವ ಸಾಲದ ಹೊರೆ, ಮಾದಕ ವಸ್ತುಗಳ ಚಟ ಮತ್ತು ಮಾನಸಿಕ ಉದ್ವೇಗ.

ಲಾಕ್‍ಡೌನ್ ಸಡಿಲಿಸಿದ ನಂತರವೂ ಕಾರ್ಖಾನೆಗಳು, ನಿರ್ಮಾಣ ಚಟುವಟಿಕೆಗಳು, ಸೇವಾ ಕ್ಷೇತ್ರಗಳು ಮೊದಲಿನ ಸ್ಥಿತಿಗೆ ಬರಲು ಬಹಳಷ್ಟು ಸಮಯವೇ ಹಿಡಿಯುವುದರಿಂದ ಲಕ್ಷಾಂತರ ಜನ ತಮ್ಮ ನೌಕರಿ ಕಳೆದುಕೊಳ್ಳುತ್ತಾರೆ. ಇದರ ಪರಿಣಾಮವಾಗಿ, ಬಡವರು ಮತ್ತು ಕಡುಬಡವರ ಭವಿಷ್ಯ ಡೋಲಾಯಮಾನವಾಗುತ್ತದೆ. ಆರ್ಥಿಕ ಪರಿಸ್ಥಿತಿಯು ಕೊರೊನಾ ಪೂರ್ವದಲ್ಲಿದ್ದಂತಹ ಸ್ಥಿತಿಗೆ ಮರಳಬೇಕಾದರೆ, ಕನಿಷ್ಠ ಎರಡು– ಮೂರು ವರ್ಷಗಳಾದರೂ ಬೇಕು ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ವಿದೇಶಗಳಲ್ಲಿಯೂ ಇಂತಹುದೇ ಪರಿಸ್ಥಿತಿ ಇರುವುದರಿಂದ, ಅನಿವಾಸಿ ಭಾರತೀಯರು ಗಣನೀಯ ಪ್ರಮಾಣದಲ್ಲಿ ಸ್ವದೇಶಕ್ಕೆ ವಾಪಸಾಗಿ ನಿರುದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಾರೆ.

ಸರ್ಕಾರವು ಬಡವರಿಗೆ ವಿವಿಧ ಬಗೆಯ ಪರಿಹಾರಗಳನ್ನು ನೀಡಿದರೂ ಇವು ಸಾರ್ವಜನಿಕರ ತೃಪ್ತಿಯ ಮಟ್ಟವನ್ನು ತಲುಪುವುದಿಲ್ಲ. ತಮ್ಮ ಅಗತ್ಯಗಳ ಪೂರೈಕೆಗೆ ಕೆಲವರು ಅಪರಾಧಗಳ ಮೊರೆ ಹೋಗುತ್ತಾರೆ. ಈಗಾಗಲೇ ಅಪರಾಧಗಳನ್ನು ಮಾಡಿರುವಂತಹವರೇ ಅಲ್ಲದೆ ಈವರೆಗೆ ಅಪರಾಧದ ಜಗತ್ತನ್ನೇ ಕಾಣದಂತಹವರೂ ಇಂತಹ ಕೃತ್ಯಕ್ಕೆ ಮುಂದಾಗಬಹುದು. ಹಣಕ್ಕಾಗಿಯೇ ಅಪರಾಧಗಳು ಹೆಚ್ಚಾಗಿ ನಡೆದರೂ ಮದ್ಯ, ಮಾದಕ ಪದಾರ್ಥಗಳ ಪೂರೈಕೆಗಾಗಿಯೂ ಕುಕೃತ್ಯಗಳು ನಡೆಯುತ್ತವೆ.

ಕಳ್ಳತನ, ದರೋಡೆ, ಸುಲಿಗೆ, ಮೋಸ, ಒತ್ತೆಹಣಕ್ಕಾಗಿ ಅಪಹರಣದಂತಹ, ಸ್ವತ್ತಿಗಾಗಿ ನಡೆಯುವ ಅಪರಾಧಗಳು ಕೊರೊನಾ ಸೋಂಕಿತರ ಸಂಖ್ಯೆ ಏರಿದಂತೆ ಕ್ಷಿಪ್ರಗತಿಯಲ್ಲಿ ಏರುತ್ತವೆ. ದೈಹಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಪರಾಧಗಳ ಸಂಖ್ಯೆ ಹೆಚ್ಚಾದರೂ ಇವು ಸ್ವತ್ತಿನ ಕಾರಣದ ಅಪರಾಧಗಳಷ್ಟು ಪ್ರಮಾಣದಲ್ಲಿ ಇರುವುದಿಲ್ಲ.

ನಗರಗಳು ಹಾಗೂ ಮಹಾನಗರಗಳಲ್ಲಿ ಹೀಗೆ ಸ್ವತ್ತಿಗಾಗಿ ಬಗೆ ಬಗೆಯ ಅಪರಾಧಗಳು ನಡೆದರೆ, ಜಿಲ್ಲೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಅಪರಾಧಗಳು ಕಳವು, ಸುಲಿಗೆ ಮತ್ತು ದರೋಡೆಗಳಿಗೆ ಸೀಮಿತವಾಗುತ್ತವೆ. ನಗರಗಳಲ್ಲಿ ‘ಕ್ರೈಂ ಆಫ್ ಆಪರ್ಚುನಿಟಿ’, ಅಂದರೆ ಅವಕಾಶ ಸಿಕ್ಕಾಗ ಮಾಡುವಂತಹ ಅಪರಾಧಗಳ ಸಂಖ್ಯೆ ಏರುತ್ತದೆ. ಇವುಗಳಲ್ಲಿ ಮುಖ್ಯವಾದವು ಸರಗಳ್ಳತನ ಹಾಗೂ ಬ್ಯಾಗುಗಳ ಕಳ್ಳತನ. ಒಬ್ಬಂಟಿಯಾಗಿ ಹೋಗುತ್ತಿರುವ ವ್ಯಕ್ತಿಗಳ ಆಭರಣಗಳು ಮತ್ತು ಬ್ಯಾಗುಗಳನ್ನು ದ್ವಿಚಕ್ರ ವಾಹನಗಳಲ್ಲಿ ಬಂದು ಕಿತ್ತುಕೊಂಡು ಪರಾರಿಯಾಗುವುದು, ಬ್ಯಾಂಕು, ಎಟಿಎಂ ಮುಂತಾದೆಡೆಯಿಂದ ಹಣ ಪಡೆದು ಬರುವಾಗ, ಗಮನ ಬೇರೆಡೆ ಸೆಳೆದು ಇಲ್ಲವೇ ಬೇರೆ ರೀತಿಯಾಗಿ ಹಣ ದೋಚುವ ಪ್ರಯತ್ನಗಳು ನಡೆಯುತ್ತವೆ.

ಕೆಲವರು ಮನೆಗಳಿಗೆ ಬೀಗ ಹಾಕಿಕೊಂಡು ಊರು ಸೇರಿಕೊಂಡಿದ್ದಾರೆ. ಇಂತಹ ಮನೆಗಳು ಕಳ್ಳರ ದೃಷ್ಟಿಗೆ ಬೀಳುತ್ತವೆ. ಮನೆಗಳಲ್ಲಿ ಒಬ್ಬಂಟಿಯಾಗಿ ಹೆಣ್ಣುಮಕ್ಕಳು ಹಾಗೂ ಹಿರಿಯ ನಾಗರಿಕರು ಇದ್ದಾಗ ಕಳ್ಳರು ಮತ್ತು ದರೋಡೆಕೋರರಿಗೆ ಅವರು ಸುಲಭದ ತುತ್ತಾಗುತ್ತಾರೆ.

ಸೈಬರ್ ಅಪರಾಧಗಳೂ ಗಣನೀಯ ಪ್ರಮಾಣದಲ್ಲಿ ಏರುತ್ತವೆ. ಬಹಳಷ್ಟು ಜನ ನಿರುದ್ಯೋಗಿಗಳಾಗುವುದರಿಂದ ಅವರಿಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡುವ ಸೈಬರ್ ಕಳ್ಳರು, ಉದ್ಯೋಗಾಕಾಂಕ್ಷಿಗಳ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಾರೆ. ಆನ್‍ಲೈನ್ ವ್ಯಾಪಾರ ವಹಿವಾಟು ಹೆಚ್ಚಾಗುತ್ತಾ ಹೋದಂತೆಲ್ಲಾ ಮೋಸಗಾರರೂ ಚುರುಕಾಗುತ್ತಾರೆ. ತಾವು ಬ್ಯಾಂಕಿನಿಂದ ಅಥವಾ ಆನ್‍ಲೈನ್ ಸಂಸ್ಥೆಗಳಿಂದ ಮಾತನಾಡುತ್ತಿರುವುದಾಗಿ ಹೇಳಿಕೊಂಡು ಸಾರ್ವಜನಿಕರ ಬ್ಯಾಂಕ್ ಖಾತೆಗಳ ವಿವರ, ಪಾಸ್‍ವರ್ಡ್, ಒಟಿಪಿಗಳನ್ನು ಪಡೆದು ಮೋಸ ಮಾಡುತ್ತಾರೆ. ಸೈಬರ್ ಕಳ್ಳರು ಇತ್ತೀಚೆಗೆ ‘ಕೊರೊನಾ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ’ ಎಂಬ ನಕಲಿ ವೆಬ್‌ಸೈಟ್‌ ತೆರೆದು ಜನರಿಗೆ ಮೋಸ ಮಾಡುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚುವುದು ಈಗಾಗಲೇ ಕಠಿಣವಾಗಿರುವಾಗ, ಇಂತಹ ಅಪರಾಧಗಳು ಪತ್ತೆಯಾಗದೆ ಉಳಿಯುವ ಸಂಭವವೇ ಹೆಚ್ಚು.

ಬೀದಿ ಕಳ್ಳತನ ಮತ್ತು ಮನೆಗಳ್ಳತನ ಮಾಡುವವರನ್ನು ಸಿ.ಸಿ. ಟಿ.ವಿ ಕ್ಯಾಮೆರಾ ಮೂಲಕವೂ ಪತ್ತೆ ಮಾಡುವುದು ಕಷ್ಟವಾಗುತ್ತದೆ. ಏಕೆಂದರೆ ಪ್ರತೀ ವ್ಯಕ್ತಿಯೂ ಮುಖಕ್ಕೆ ಮಾಸ್ಕ್ ಧರಿಸಬೇಕಾದದ್ದು ಕಡ್ಡಾಯವಾಗಿರುವುದರಿಂದ ಕಳ್ಳರನ್ನು ಗುರುತಿಸುವುದು ಸುಲಭವೇನಲ್ಲ. ಹೀಗಾಗಿ ಇಂತಹ ಬಹಳಷ್ಟು ಪ್ರಕರಣಗಳು ನಿಗೂಢವಾಗಿಯೇ ಉಳಿಯುವ ಸಾಧ್ಯತೆ ಇರುತ್ತದೆ.

ಕಟ್ಟಡ ನಿರ್ಮಾಣ ಹಾಗೂ ಕಾರ್ಖಾನೆ ವಲಯದಲ್ಲಿ ಕೆಲಸ ಕಡಿಮೆಯಾಗುವುದರಿಂದ ಹಲವಾರು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ವಾಪಸಾಗುತ್ತಾರೆ. ಬೆಳೆದ ಬೆಳೆ ಸರಿಯಾದ ಬೆಲೆಗೆ ಮಾರಾಟವಾಗದೆ ರೈತರು ಕಂಗಾಲಾಗಿದ್ದಾರೆ. ಒಂದು ವೇಳೆ ಬರಗಾಲವೂ ಎದುರಾದರೆ ಅವರ ಗೋಳನ್ನು ಕೇಳುವವರು ಯಾರೂ ಇರುವುದಿಲ್ಲ. ಗ್ರಾಮೀಣ ಉದ್ಯೋಗ ಭರವಸೆ ಯೋಜನೆಗಳು ಪರಿಣಾಮಕಾರಿ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೂ ಹಣದ ಬೇಡಿಕೆ ಇದ್ದೇ ಇರುತ್ತದೆ. ಸಾಲ ತೀರಿಸುವ ಚಿಂತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಆಹಾರ ಪದಾರ್ಥ ಹಾಗೂ ಮಾದಕ ದ್ರವ್ಯಗಳ ಕಳವು, ಹಣಕ್ಕೆ ಸಂಬಂಧಿಸಿದ ಅಪರಾಧಗಳು ನಡೆಯಬಹುದು.

ಲಾಕ್‍ಡೌನ್ ಪರಿಣಾಮದಿಂದ ಮಾನಸಿಕ ಒತ್ತಡ ತೀವ್ರವಾಗುತ್ತಿದ್ದು ಲಾಕ್‍ಡೌನ್ ತೆರವಿನ ನಂತರವೂ ನೌಕರಿಯಿಲ್ಲದೇ ಹೋದಾಗ ಈ ಒತ್ತಡವು ಪರಾಕಾಷ್ಠೆಯನ್ನು ಮುಟ್ಟುತ್ತದೆ. ಮನೆಯಲ್ಲಿದ್ದವರ ಜತೆಗೆ ಜಗಳ, ಹೆಂಡತಿ– ಮಕ್ಕಳ ಮೇಲೆ ದೈಹಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತವೆ. ಖಿನ್ನತೆಯ ಕಾರಣದಿಂದ ಆತ್ಮಹತ್ಯೆಗಳ ಸಂಖ್ಯೆ ಏರುವ ಸಾಧ್ಯತೆ ಹೆಚ್ಚು. ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತವೆ ಮತ್ತು ಮಾದಕ ವಸ್ತುಗಳ ಮೇಲಿನ ಅವಲಂಬನೆ ಜಾಸ್ತಿಯಾಗುತ್ತದೆ.

ಪೊಲೀಸರ ಮೇಲೆ ಈಗಾಗಲೇ ಕೆಲಸದ ಒತ್ತಡ ಹೆಚ್ಚಾಗಿದೆ. ನಂತರವೂ ಕೊರೊನಾ ಸೋಂಕಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಅವರು ತೊಡಗಿಕೊಳ್ಳಲೇ ಬೇಕಾಗುತ್ತದೆ. ಕೆಲವು ಬಡಾವಣೆಗಳಲ್ಲಿ ಮುಂದುವರಿಯಬಹುದಾದ ಶಟ್‌ಡೌನ್ ಅನ್ನು ಅನುಷ್ಠಾನಕ್ಕೆ ತರುವುದಲ್ಲದೆ, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವುದರ ಮೇಲೆ ನಿಗಾ ಇರಿಸಬೇಕಾಗುತ್ತದೆ. ಸಂಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಇವೆಲ್ಲದರ ಫಲವಾಗಿ ಅವರಿಗೆ ಅಪರಾಧ ತಡೆ ಹಾಗೂ ಪತ್ತೆಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸಲಾಗುವುದಿಲ್ಲ.

ಈ ಎಲ್ಲ ಕಾರಣಗಳಿಂದ, ಸಾರ್ವಜನಿಕರೇ ಸ್ವತಃ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡು ಸ್ವತ್ತಿನ ಅಪರಾಧಗಳನ್ನು ತಡೆಯಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಬಡಾವಣೆಯಲ್ಲಿ ನೆರೆಹೊರೆಯವರ ಸಹಭಾಗಿತ್ವದಿಂದ ಪಹರೆ ಏರ್ಪಡಿಸಿ, ಬಡಾವಣೆಗೆ ಬರುವ ಹೊಸಬರನ್ನು ವಿಚಾರಿಸಿ, ಹಿರಿಯ ನಾಗರಿಕರು ಮತ್ತು ಒಂಟಿ ಮಹಿಳೆಯರ ನೆರವಿಗೆ ಬಂದರೆ ಅಪರಾಧಗಳನ್ನು ತಡೆಯಬಹುದು. ತಮ್ಮ ಬಡಾವಣೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವುದು ಸೂಕ್ತ. ಸಾರ್ವಜನಿಕರು ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರುಗಳಲ್ಲಿಟ್ಟು, ರಸ್ತೆಯಲ್ಲಿ ಓಡಾಡುವಾಗ ಸರಗಳು, ಮೊಬೈಲ್ ಫೋನುಗಳ ಬಗ್ಗೆ ಎಚ್ಚರದಿಂದ ಇರಬೇಕು. ಆನ್‌ಲೈನ್ ವ್ಯವಹಾರಗಳ ಬಗ್ಗೆ ಅತೀವ ಎಚ್ಚರದಿಂದ ಇರಬೇಕಾದದ್ದು ಅವಶ್ಯ. ಯಾರೇ ಕೇಳಿದರೂ ಒಟಿಪಿ, ಪಾಸ್‍ವರ್ಡ್‌ಗಳನ್ನು ಕೊಡಲೇಬಾರದು.

ಹೊಸ ಅಪರಾಧಿಗಳು ಹುಟ್ಟಿಕೊಳ್ಳುವುದರಿಂದಅಪರಾಧಗಳ ಪತ್ತೆ ಕಾರ್ಯ ಪೊಲೀಸರಿಗೆ ಮೊದಲಿಗಿಂತಲೂ ಕಷ್ಟವಾಗುತ್ತದೆ. ಹೀಗಾಗಿ, ನಾಗರಿಕರು ಎಚ್ಚರದಿಂದಿದ್ದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಪೊಲೀಸರ ಜೊತೆ ಸಹಕರಿಸಬೇಕು. ಇದು ಅನಿವಾರ್ಯ.


ಡಾ. ಡಿ.ವಿ.ಗುರುಪ್ರಸಾದ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು