ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ನಿರ್ವಹಣೆಗೆ ಸರಳ ಸೂತ್ರಗಳು

Last Updated 30 ಆಗಸ್ಟ್ 2020, 19:35 IST
ಅಕ್ಷರ ಗಾತ್ರ

ಹಣಕಾಸು ನಿರ್ವಹಣೆಯಲ್ಲಿ ಮೂರು ವಿಚಾರಗಳು ಬಹಳ ಮುಖ್ಯವಾಗುತ್ತವೆ. ಮೊದಲನೆಯದು, ಆದಾಯ ಬಂದ ತಕ್ಷಣ ಉಳಿತಾಯ ಮಾಡಿ ನಂತರದಲ್ಲಿ ಖರ್ಚು ಮಾಡುವುದು. ಎರಡನೆಯದು, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಖರ್ಚು ತಗ್ಗಿಸುವುದು. ಮೂರನೆಯದು, ಸಾಲ ಮಾಡುವಾಗ ಅಳೆದು–ತೂಗಿ ಮುನ್ನಡೆಯುವುದು. ಈ ಮೂರು ಕೆಲಸಗಳನ್ನು ಸರಿಯಾಗಿ ಮಾಡಿದರೆ ಹಣಕಾಸಿನ ಸಮಸ್ಯೆಗಳು ನಿಮ್ಮನ್ನು ಅಷ್ಟಾಗಿ ಬಾಧಿಸುವುದಿಲ್ಲ.

ಉಳಿತಾಯ ಹೆಚ್ಚಿಸಲು ಆರು ಸೂತ್ರಗಳು

1. ಆದಾಯ – ಉಳಿತಾಯ = ಖರ್ಚು (ಪ್ರತಿ ತಿಂಗಳು ನಿಮ್ಮ ಆದಾಯದಲ್ಲಿ ನಿರ್ದಿಷ್ಟ ಮೊತ್ತ ಉಳಿತಾಯ ಮಾಡಿ)

2. ನಿಮ್ಮ ಕುಟುಂಬ ಸದಸ್ಯರ ಜತೆ ಮಾತುಕತೆ ನಡೆಸಿ, ಎಲ್ಲೆಲ್ಲಿ ಹೂಡಿಕೆ ಮಾಡಬೇಕು, ಭವಿಷ್ಯದಲ್ಲಿ ಬರುವ ಖರ್ಚುಗಳನ್ನು ನಿರ್ವಹಿಸಲು ಹೇಗೆ ಸಜ್ಜಾಗಬೇಕು ಎಂದು ಚರ್ಚಿಸಿ, ಹೂಡಿಕೆ ಗುರಿಗಳನ್ನು ತೀರ್ಮಾನಿಸಿ. ಉದಾಹರಣೆಗೆ, 10 ವರ್ಷಗಳ ನಂತರ ನೀವು ಮನೆ ಖರೀದಿಸಬೇಕು ಎಂಬ ಗುರಿ ನಿಗದಿ ಮಾಡಿಕೊಂಡಿದ್ದರೆ ಪ್ರತಿ ತಿಂಗಳು ಆ ಉದ್ದೇಶಕ್ಕೆ ಎಷ್ಟು ಹಣ ಉಳಿತಾಯ ಮಾಡಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಕುಟುಂಬದ ಸದಸ್ಯರಲ್ಲಿ ಸ್ಪಷ್ಟತೆ ಇರಲಿ.

3. ನಿಮ್ಮ ಗುರಿಗಳನ್ನು ಉಳಿತಾಯದ ಜತೆ ಜೋಡಿಸಿ. ಪ್ರತಿ ಗುರಿ ಸಾಧಿಸಲು ತಿಂಗಳಿಗೆ ಎಷ್ಟು ಉಳಿತಾಯ ಮಾಡಬೇಕು ಎಂಬುದನ್ನು ನಿಗದಿಪಡಿಸಿಕೊಳ್ಳಿ. ಉದಾಹರಣೆಗೆ, ಮನೆ ಕಟ್ಟಿಸಲು ₹ 20,000, ಭವಿಷ್ಯದಲ್ಲಿಮಕ್ಕಳ ಶಿಕ್ಷಣಕ್ಕೆ ₹ 5,000, ಕಾರು ಖರೀದಿಸಲು ₹ 10,000. ಹೀಗೆ ಪ್ರತಿ ಗುರಿಗೂ ನಿರ್ದಿಷ್ಟ ಮೊತ್ತದ ಉಳಿತಾಯವಿರಲಿ.

4. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರಿಗೆ ಪಿಗ್ಗಿ ಬಾಕ್ಸ್ (ಹಣ ಕೂಡಿಡುವ ಡಬ್ಬಿ) ಕೊಡಿಸಿ. ಹೀಗೆ ಮಾಡಿದಾಗ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಹಣದ ಮೌಲ್ಯ ತಿಳಿಯುತ್ತದೆ.

5. ನಿಮ್ಮ ಅನಗತ್ಯ ವೆಚ್ಚಗಳ ಭವಿಷ್ಯದ ಲೆಕ್ಕಾಚಾರ ಮಾಡಿ. ಉದಾಹರಣೆಗೆ ಸಿಗರೇಟ್ ಸೇದಲು ಪ್ರತಿ ತಿಂಗಳು ₹ 2,000 ಖರ್ಚು ಮಾಡುತ್ತೀರಿ ಎಂದಾದರೆ ವರ್ಷಕ್ಕೆ ₹ 24,000 ವೆಚ್ಚ ಆಗುತ್ತದೆ. ಇದೇ ವೆಚ್ಚವನ್ನು 10 ವರ್ಷ ಮಾಡಿದರೆ ಸಿಗರೇಟಿಗೆ ಮಾಡಿದ ಖರ್ಚೇ ₹ 2.40 ಲಕ್ಷ ಆಗುತ್ತದೆ. ಇದೇ ರೀತಿ ನಮ್ಮ ಎಲ್ಲ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿದಾಗ ಎಷ್ಟು ಉಳಿತಾಯವಾಗುತ್ತದೆ ಎಂಬುದನ್ನು ಅಂದಾಜು ಮಾಡಿ.

6. ಪ್ರತಿ ತಿಂಗಳು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ ನಿಮ್ಮ ಹೂಡಿಕೆ ಗುರಿಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆಯೇ ಎಂಬುದನ್ನು ಪರಾಮರ್ಶಿಸಿ.

ವೆಚ್ಚ ತಗ್ಗಿಸಲು ಐದು ಸೂತ್ರಗಳು

1. ಪ್ರತಿ ತಿಂಗಳ ವೆಚ್ಚದ ಬಜೆಟ್ ತಯಾರು ಮಾಡಿ.

2. ನಿರ್ದಿಷ್ಟ ವರ್ಷದಲ್ಲಿ ಏನೆಲ್ಲಾ ಖರೀದಿಸಬೇಕು ಎಂಬುದರ ಪಟ್ಟಿ ಮಾಡಿ, ಅದಕ್ಕೆ ಬಜೆಟ್ ನಿಗದಿಪಡಿಸಿ.

3. ನಿಮ್ಮ ತೆರಿಗೆ ಉಳಿತಾಯಕ್ಕೆ ಯೋಜನೆ ರೂಪಿಸಿಕೊಳ್ಳಿ.

4. ಶಾಪಿಂಗ್‌ ಗೆ ಹೋಗುವ ಮೊದಲು ಅಗತ್ಯ ವಸ್ತುಗಳ ಪಟ್ಟಿ ಮಾಡಿ.

5. ಮದುವೆ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳಿಗೆ ದುಬಾರಿ ವೆಚ್ಚ ಬೇಡ.

ಸರಿಯಾದ ಸಾಲ ಪಡೆಯಲು ಸೂತ್ರ

1. ನಿಮ್ಮ ಎಲ್ಲ ಸಾಲಗಳ ಮಾಸಿಕ ಕಂತಿನ ಮೊತ್ತವು (ಇಎಂಐ) ನಿಮ್ಮ ತಿಂಗಳ ಆದಾಯದ ಶೇಕಡ 50ರಷ್ಟಕ್ಕಿಂತ ಹೆಚ್ಚಿಗೆ ಇರಬಾರದು.

2. ಗೃಹ ಸಾಲ ನಿಯಮ:

* ನಿಮ್ಮ ವಾರ್ಷಿಕ ಆದಾಯದ ಐದು ಪಟ್ಟು ಮಾತ್ರ ನಿಮ್ಮ ಮನೆಯ ಮೌಲ್ಯ ಇರಬೇಕು.

* ಮನೆ ಕೊಳ್ಳುವಾಗ ಕನಿಷ್ಠ ಶೇ 25ರಷ್ಟು ಡೌನ್ ಪೇಮೆಂಟ್ ಮಾಡಬೇಕು.

* ನಿಮ್ಮ ತಿಂಗಳ ಆದಾಯದ ಶೇ 30ರಷ್ಟು ಮಾತ್ರ ನಿಮ್ಮ ಗೃಹ ಸಾಲದ ಮಾಸಿಕ ಕಂತು (ಇಎಂಐ) ಆಗಿರಬೇಕು.

* ಗರಿಷ್ಠ 20 ವರ್ಷಕ್ಕಿಂತ ಹೆಚ್ಚು ಅವಧಿಗೆ ಸಾಲ ಪಡೆಯಬಾರದು.

3. ವಾಹನ ಸಾಲ ನಿಯಮ:

* ವಾಹನ ಸಾಲ ಪಡೆಯುವಾಗ ಕನಿಷ್ಠ ಶೇ 20ರಷ್ಟು ಡೌನ್ ಪೇಮೆಂಟ್ ಮಾಡಿ.

* ಗರಿಷ್ಠ ನಾಲ್ಕು ವರ್ಷಕ್ಕೆ ಸಾಲ ಪಡೆಯಿರಿ.

* ನಿಮ್ಮ ಮಾಸಿಕ ಆದಾಯದ ಶೇ 10ರಷ್ಟು ಮಾತ್ರ ಈ ಸಾಲದ ಮಾಸಿಕ ಕಂತು (ಇಎಂಐ) ಆಗಿರಬೇಕು.

6 ತಿಂಗಳ ಗರಿಷ್ಠ ಮಟ್ಟಕ್ಕೆ ಜಿಗಿದ ಸೂಚ್ಯಂಕಗಳು

ಸತತ ಆರು ದಿನಗಳ ವಹಿವಾಟಿನಲ್ಲಿ ಕಂಡುಬಂದ ಸಕಾರಾತ್ಮಕತೆಯ ಪರಿಣಾಮ ಷೇರುಪೇಟೆ ಸೂಚ್ಯಂಕಗಳು ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. 39,467 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.69ರಷ್ಟು ಏರಿಕೆ ದಾಖಲಿಸಿದೆ. 11,649ರಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.43ರಷ್ಟು ಹೆಚ್ಚಳ ಕಂಡಿದೆ. ಮಿಡ್ ಕ್ಯಾಪ್ ಸೂಚ್ಯಂಕ ಶೇ 2.28ರಷ್ಟು ಏರಿಕೆಯಾಗಿದ್ದರೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 3.7ರಷ್ಟು ಜಿಗಿದಿದೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಬ್ಯಾಂಕ್ ಶೇ 10ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 8ರಷ್ಟು, ಮಾಧ್ಯಮ ಶೇ 6ರಷ್ಟು, ರಿಯಲ್ ಎಸ್ಟೇಟ್ ಶೇ 4ರಷ್ಟು, ವಾಹನ ವಲಯ ಶೇ 2.2ರಷ್ಟು, ಐ.ಟಿ. ವಲಯ ಶೇ 0.3ರಷ್ಟು ಹೆಚ್ಚಳ ಕಂಡಿವೆ.

ಏರಿಕೆ – ಇಳಿಕೆ: ನಿಫ್ಟಿಯಲ್ಲಿ ಇಂಡಸ್ ಇಂಡ್ ಬ್ಯಾಂಕ್ ಶೇ 32ರಷ್ಟು, ಆ್ಯಕ್ಸಿಸ್ ಬ್ಯಾಂಕ್ ಶೇ 16ರಷ್ಟು, ಎಸ್‌ಬಿಐ ಶೇ 11.5ರಷ್ಟು, ಐಸಿಐಸಿಐ ಬ್ಯಾಂಕ್ ಶೇ 10.3ರಷ್ಟು, ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ 9.7ರಷ್ಟು, ಟಾಟಾ ಮೋಟರ್ಸ್ ಶೇ 18ರಷ್ಟು ಮತ್ತು ಜೀ ಎಂಟರ್‌ಟೇನ್ಮೆಂಟ್ ಶೇ 12ರಷ್ಟು ಗಳಿಸಿವೆ. ಶ್ರೀ ಸಿಮೆಂಟ್ ಶೇ 5ರಷ್ಟು, ಎನ್‌ಟಿಪಿಸಿ ಶೇ 4ರಷ್ಟು, ಪವರ್ ಗ್ರಿಡ್ ಶೇ 3.5ರಷ್ಟು ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಶೇ 3ರಷ್ಟು ಕುಸಿದಿವೆ. ಬ್ರಾಡರ್ ಮಾರ್ಕೆಟ್‌ನಲ್ಲಿ ವೊಡಾಫೋನ್ ಐಡಿಯಾ ಶೇ 19ರಷ್ಟು, ಆರ್‌ಬಿಎಲ್ ಬ್ಯಾಂಕ್ ಶೇ 15ರಷ್ಟು, ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಶೇ 14ರಷ್ಟು, ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಶೇ 12.5ರಷ್ಟು, ಎನ್‌ಡಿಎಂಸಿ ಶೇ 12ರಷ್ಟು ಜಿಗಿದಿವೆ. ಟೊರೆಂಟ್ ಫಾರ್ಮಾ ಶೇ 4ರಷ್ಟು, ಆಯಿಲ್ ಇಂಡಿಯಾ ಶೇ 3ರಷ್ಟು ಮತ್ತು ಹೆಕ್ಸಾವೇರ್ ಶೇ 2ರಷ್ಟು ತಗ್ಗಿವೆ.

ಮುನ್ನೋಟ: ಈ ವಾರ ಜಿಡಿಪಿ ದರ, ವಾಹನ ಮಾರಾಟ ಅಂಕಿ-ಅಂಶ, ಜಾಗತಿಕ ವಿದ್ಯಮಾನಗಳು, ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಆಗುವ ಬೆಳವಣಿಗೆಗಳು ಸೇರಿ ಹಲವು ಅಂಶಗಳು ಮಾರುಕಟ್ಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ. ಜೆ.ಕೆ. ಸಿಮೆಂಟ್, ರೇಣುಕಾ ಶುಗರ್ಸ್, ಒಎನ್‌ಜಿಸಿ, ಸುಪ್ರೀಂ, ಅವಿವಾ, ಕೋಲ್ ಇಂಡಿಯಾ, ಡಿಶ್ ಟಿವಿ, ವಿಆರ್‌ಎಲ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

(ಲೇಖಕ ಸುವಿಷನ್ ಹೋಲ್ಡಿಂಗ್ಸ್ ಪೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT