ಕಲಬುರ್ಗಿಯಿಂದ ಜೆಕ್‌ ರಿಪಬ್ಲಿಕ್‌ವರೆಗೆ

7

ಕಲಬುರ್ಗಿಯಿಂದ ಜೆಕ್‌ ರಿಪಬ್ಲಿಕ್‌ವರೆಗೆ

Published:
Updated:
Deccan Herald

ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಹೊಣೆಯನ್ನು ಮಹಿಳೆಯರಿಗೆ ಕೊಡಬಹುದೇ? ಕೊಟ್ಟರೆ ನಿಭಾಯಿಸಬಲ್ಲರೇ... ಇಲ್ಲ ಆಗಲಿಕ್ಕಿಲ್ಲ. ದೇಶ ವಿದೇಶದವರೊಂದಿಗೆ ವ್ಯವಹರಿಸಬೇಕು. ವ್ಯಾಪಾರ, ವಹಿವಾಟು ಕರ್ತವ್ಯದ ನಿಟ್ಟಿನಲ್ಲಿ ಹೇಗೋ ನಿಭಾಯಿಸಬಹುದು. ಆದರೆ ಬಾಂಧವ್ಯ ಕುದುರಿಸಲು, ಸಂಜೆ ಪಾರ್ಟಿಗಳನ್ನು ಮಾಡಬೇಡವೇ? ಗುಂಡು– ತುಂಡುಗಳಿರುವ ತಡರಾತ್ರಿಯ ಪಾರ್ಟಿಗಳನ್ನು ಅವರು ಹೇಗೆ ನಿಭಾಯಿಸುವರು...?  ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗುವ ಮುನ್ನ ಎದ್ದ ಪ್ರಶ್ನೆಗಳಿವು.

ಆನಂತರ ಕರ್ನಾಟಕವು ಈ ಕ್ಷೇತ್ರದಲ್ಲಿ ಮಾಡಿದ ಸಾಧನೆಯೇ ಎಲ್ಲ ಪ್ರಶ್ನೆಗಳಿಗೆ ಉತ್ತರವಾಯಿತು. ‘ಇನ್‌ವೆಸ್ಟ್‌ ಕರ್ನಾಟಕ’ ಕಾರ್ಯಕ್ರಮದ ಯಶಸ್ಸು ನಮ್ಮಲ್ಲಿ ಹೊಸಹೊಸ ಐಡಿಯಾ ಹಾಗೂ ಹುಮ್ಮಸ್ಸು ಎರಡನ್ನೂ ತುಂಬಿಕೊಟ್ಟಿತು. ಈ ಸಂದರ್ಭದಲ್ಲಿ ಮಹಿಳಾ ಉದ್ಯಮಿಗಳ ವಾಟ್ಸ್‌ಆ್ಯಪ್‌ ಸಮೂಹವೊಂದು ಸೃಷ್ಟಿಯಾಯಿತು. ಇನ್‌ವೆಸ್ಟ್‌ ಕರ್ನಾಟಕ ಮುಗಿದ ನಂತರ ಮಹಿಳಾ ಉದ್ಯಮಿಗಳ ಈ ತಂಡ ತೋರಿದ ಒಲವು–ಬಲವು ‘ಇವರು ಇನ್ನೇನನ್ನಾದರೂ ಮಾಡಬಲ್ಲರು’ ಎಂಬ ಭರವಸೆ ಮೂಡಿಸಿತು. ಆಗ ಶುರುವಾದದ್ದೇ ‘ಥಿಂಕ್‌ ಬಿಗ್‌’ ಸಮೂಹ.

ಈ ಕಾರ್ಯಕ್ರಮದಡಿ ಮಹಿಳೆಯರಿಗೆ ಒಂದಷ್ಟು ತರಬೇತಿಗಳನ್ನು ನೀಡಿದೆವು. ಆಮದು, ರಫ್ತು, ಪ್ಯಾಕೇಜಿಂಗ್ ಮುಂತಾದವುಗಳ ಬಗೆಗೆ ಕಾರ್ಯಾಗಾರ, ವಿಚಾರಸಂಕಿರಣ ಹಮ್ಮಿಕೊಂಡೆವು. ಮಹಿಳಾ ಉದ್ಯಮಕ್ಕೆ ವಿಶೇಷ ಪಾಲಿಸಿ
ಗಳನ್ನು ರಚಿಸಲಾಯಿತು. ಸ್ವಾವಲಂಬಿಗಳಾಗುವುದು ಮಹಿಳೆಯರ ಮೊದಲ ಹಂತವಾಗಿದ್ದರೆ, ಮುಂದಿನ ಹಂತದಲ್ಲಿ ಅವರು ಸಾಧಕಿಯರಾಗಲು ಹವಣಿಸುತ್ತಿದ್ದರು. ಏನನ್ನಾದರೂ ಮಾಡಬೇಕು. ವಿಶೇಷವಾದುದನ್ನು ಸಾಧಿಸಬೇಕು ಎಂಬ ತಹತಹ ಅವರಲ್ಲಿ ಎದ್ದುಕಾಣುತ್ತಿತ್ತು.

ಈ ಹುಮ್ಮಸ್ಸನ್ನು ವ್ಯರ್ಥಹೋಗಲು ಬಿಡಬಾರದು ಎಂಬಉದ್ದೇಶದಿಂದ ಒಂದು ಯೋಜನೆ ರೂಪಿಸಿ, ‘ಮಹಿಳಾ ಉದ್ಯಮಗಳ ಉತ್ಪಾದನಾ ಪಾರ್ಕ್‌ ರಚಿಸಲು ಮುಂದಾಗುವವರಿಗೆ ಸಹಾಯ ನೀಡಲು ಸರ್ಕಾರ ಸಿದ್ಧವಿದೆ’ ಎಂದು ಘೋಷಿಸಿದೆವು. ಮಹಿಳೆಯರು ತಯಾರಿಸುವ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಿರುವ ಮಹಿಳಾ ಮಂಡಳಿಗಳೆಲ್ಲ ಒಗ್ಗೂಡಿ ಮುಂದೆ ಬರಬೇಕಿತ್ತು. ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದ ನಮಗೆ, ಪ್ರಸ್ತಾವನೆ ಬಂದಿದ್ದು ಕಲಬುರ್ಗಿಯಿಂದ.

ಅತಿ ಹಿಂದುಳಿದ ವಿಭಾಗ, ಮಹಿಳೆಯರ ಶಿಕ್ಷಣವೇ ಸವಾಲಾಗಿದ್ದ ಪ್ರದೇಶದಿಂದ ಮೊದಲ ಪ್ರಸ್ತಾವನೆ ಬಂದಿದ್ದರಿಂದ ನಮಗೆಲ್ಲ ಖುಷಿಯಾಗಿತ್ತು. ಆ ಸಂಘಟನೆಯ ಹೆಸರು ಕೆ–ಲ್ಯಾಂಪ್‌ (kalburgi Ladies Association Manufacturing Park). ಇದಕ್ಕಾಗಿ 50 ಎಕರೆ ಜಮೀನು ಮಂಜೂರು ಮಾಡಲಾಯಿತು. 200 ಸಂಘಟನೆಗಳು ಒಟ್ಟಾಗಿ,ಇದಕ್ಕೆ ಮುಂದಾಗಿದ್ದವು. ಅದರಲ್ಲಿ ಆಗಲೇ ಮಳಿಗೆಗಾಗಿ ಒಂದಷ್ಟು ಜಮೀನು ಖರೀದಿಯಾಗಿದೆ. ಈ ಭಾಗದ ಮಹಿಳೆಯರು ಸಂಘಟನಾತ್ಮಕವಾಗಿ ಒಗ್ಗೂಡಿದರು. ಯೋಜನೆಗೆತಕ್ಕಂತೆ ಪ್ರಸ್ತಾವನೆ ಸಲ್ಲಿಸಿದರು. ತಾವು ತಯಾರಿಸುವ ವಸ್ತುಗಳ ಗುಣಮಟ್ಟವು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಇರುವಂತೆ ನೋಡಿಕೊಂಡರು.

ಶ್ರಮ ವ್ಯರ್ಥ ಹೋಗುವುದಿಲ್ಲ. ಅವರ ಈ ಶ್ರಮಕ್ಕೆ ಬಲು ಬೇಗ ಪ್ರತಿಫಲ ಲಭಿಸಿತು. ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಸಹಯೋಗದಲ್ಲಿ ಜೆಕ್‌ ರಿಪಬ್ಲಿಕ್‌ನ ಬ್ರುನೊದಲ್ಲಿ ನಡೆದ ಅಂತರರಾಷ್ಟ್ರೀಯ ಎಂಜಿನಿಯರಿಂಗ್‌ ಮೇಳದಲ್ಲಿ ಭಾಗವಹಿಸಲು ರಾಜ್ಯದ ಮಹಿಳಾ ಪ್ರತಿನಿಧಿಗಳ ಒಂದು ಗುಂಪಿಗೆ ಅವಕಾಶ ಲಭಿಸಿತ್ತು. ಆ ಗುಂಪಿನಲ್ಲಿ ನಾಲ್ವರು ಕಲಬುರ್ಗಿಯ ‘ಕೆ– ಲ್ಯಾಂಪ್‌’ನವರಿದ್ದರು.

ಅಲ್ಲಿ ತಮ್ಮ ಕರಕುಶಲ ಉತ್ಪನ್ನಗಳನ್ನು, ಆಹಾರೋತ್ಪನ್ನಗಳನ್ನು ಪ್ರದರ್ಶನಕ್ಕೆ ಇರಿಸಿದ್ದರು. ಉಡುಗೆ–ತೊಡುಗೆಗಳೂ ಇದ್ದವು. ಜೆಕ್‌ ರಿಪಬ್ಲಿಕ್‌ ಜೊತೆಗೆ ಈ ಸಂಘವು ಒಂದು ಒಂಡಂಬಡಿಕೆಯನ್ನೂ ಮಾಡಿಕೊಂಡು ಬಂದಿತು. ಜೆಕ್‌ ರಿಪಬ್ಲಿಕ್‌ ಯುರೋಪಿನ ಅತಿ ಸಣ್ಣ ದೇಶ. ಅಲ್ಲಿಯ ಮಹಿಳಾ ಉದ್ಯಮಿಗಳ ಬಲವರ್ಧನೆ ನೋಡಿದರೆ ಅಚ್ಚರಿ ಎನಿಸುತ್ತದೆ. ಕೆ–ಲ್ಯಾಂಪ್‌ನವರಿಗೆ ಇದೊಂದು ವಿಶೇಷ ಅನುಭವವಾಗಿತ್ತು. ಇದೀಗ ಅಲ್ಲಿ ಭಾರತೀಯ ಮಳಿಗೆ ಸ್ಥಾಪನೆಗೆ ಪ್ರಸ್ತಾವ ಬಂದಿದೆ. ಅದಕ್ಕಾಗಿ ಅವರು ಯೋಜನೆ ರೂಪಿಸಿದ್ದಾರೆ.

ತೀರ ಇತ್ತೀಚಿನ ಉದಾಹರಣೆಯೊಂದಿದೆ; ಚಿಕ್ಕ ಮಗಳೂರಿಗೆ ವಿಶೇಷ ಜಿಲ್ಲಾಧಿಕಾರಿಯಾಗಿ ನಾನು ನಿಯುಕ್ತಳಾಗಿದ್ದೆ. ಅಲ್ಲಿಯೂ ಮಹಿಳಾ ಮಂಡಳಿಗಳೆಂದರೆ ಹಪ್ಪಳ, ಉಪ್ಪಿನಕಾಯಿ ತಯಾರಿಸುವ, ಜೇನು ಸಂಗ್ರಹಿಸುವ ಇಲ್ಲವೇ ಡಿಟರ್ಜೆಂಟ್‌, ಸೋಪು ಉತ್ಪಾದನಾ ಮಂಡಳಿಗಳಾಗಿದ್ದವು. ಇವನ್ನು ಹೊರತುಪಡಿಸಿ ಮೊಲ ಸಾಕಾಣಿಕೆ, ಬಿದಿರಿನ ಉತ್ಪನ್ನಗಳ ತಯಾರಿಕೆ ಬಗ್ಗೆ ತರಬೇತಿ ಕೊಡಿಸೋಣ ಎಂದಾಗ, ಬಹುತೇಕ ಜನರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಒಂದಷ್ಟು ಜನ ಹೆಣ್ಣುಮಕ್ಕಳು ಮುಂದೆ ಬಂದು ತರಬೇತಿ ಪಡೆದರು. ಕರಕುಶಲ ವಸ್ತುಗಳನ್ನು ತಯಾರಿಸಿದರು. ಮೈಸೂರು ದಸರಾ ಸಂಭ್ರಮದಲ್ಲಿ ಇವರೊಂದು ಮಳಿಗೆಯನ್ನೂ ಇಟ್ಟರು. ಮಹಿಳೆಯರ ಮಳಿಗೆ ಎಂಬ ಕಾರಣಕ್ಕೆ ವಿಶೇಷ ಆಕರ್ಷಣೆಯ ಕೇಂದ್ರವೂ ಆಗಿದ್ದರು.

ಆಗಲೂ ಕೇಳಿಬಂದಿದ್ದು ಅವವೇ ಪ್ರಶ್ನೆಗಳು. ಇದು ಮಹಿಳೆಯರಿಂದ ಸಾಧ್ಯವೇ? ಮಾರುಕಟ್ಟೆಯ ಕ್ಷೇತ್ರ, ಉತ್ಪಾದನೆಯ ಕ್ಷೇತ್ರ ಮಹಿಳೆಯರಿಗೆ ಹೇಳಿ ಮಾಡಿಸಿದ್ದಲ್ಲ. ಅವರಿಂದದು ಆಗದ ಕೆಲಸ. ಓಡಾಡಬೇಕಾಗುತ್ತದೆ. ಮನೆಯ ಜವಾಬ್ದಾರಿಯನ್ನೂ ಹೊರಬೇಕು. ಎರಡು ದೋಣಿಗಳಲ್ಲಿ ಪಯಣ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆಗಳು ಅವರ ಮುಂದೆ ಇದ್ದವು. ಲಿಂಗಾಧಾರಿತ ಇಂಥ ಪ್ರಶ್ನೆಗಳಿಗೆ ಯಾವತ್ತೂ ಪದಗಳಲ್ಲಿ ಉತ್ತರ ಹೇಳಬಾರದು, ಕೃತಿಗಳಲ್ಲಿಯೇ ತೋರಿಸಬೇಕು.

ಇದೆಲ್ಲವೂ ಸಾಧ್ಯವಾಗಿದ್ದು ‘ಉಬುಂಟು’ ಪರಿಕಲ್ಪನೆಯಿಂದ. ಇದೀಗಾಗಲೇ ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ. ಮಾನವಶಾಸ್ತ್ರಜ್ಞ ಒಬ್ಬ ದಕ್ಷಿಣ ಆಫ್ರಿಕಾದ ಬುಡಕಟ್ಟು ಮಕ್ಕಳಿಗೆ ಒಂದು ಸ್ಪರ್ಧೆಯನ್ನೇರ್ಪಡಿಸಿದ. ಒಂದು ಮರದ ಕೆಳಗೆ ಬುಟ್ಟಿ ತುಂಬ ಚಾಕ್ಲೇಟುಗಳನ್ನಿಟ್ಟು, ‘ಯಾರು  ಮೊದಲು ಅವನ್ನು ಮುಟ್ಟುತ್ತಾರೆಯೋ ಅವರಿಗೆ ಆ ಎಲ್ಲ ಚಾಕ್ಲೇಟುಗಳು’ ಎಂದ. ಆ ಮಕ್ಕಳೆಲ್ಲರೂ ಕೈಕೈ ಹಿಡಿದು ಒಟ್ಟಿಗೆ ಸಾಗಿದರು. ಒಟ್ಟಾಗಿ ಅವನ್ನೆಲ್ಲ ಹಂಚಿಕೊಂಡು ತಿಂದರು. ಇದಾದ ನಂತರ ಮಕ್ಕಳಿಗೆ ಅದ್ಯಾಕೆ ಹಾಗೆ ಮಾಡಿದಿರಿ ಎಂದಾಗ, ಅವರೆಲ್ಲ ‘ಉಬುಂಟು... ಉಬುಂಟು...’ ಎಂದು ಕೇಕೆ ಹಾಕಿದರು. ಅದರರ್ಥ, ಸುಖ– ಸವಿ ಎಲ್ಲವೂ ಎಲ್ಲರೊಟ್ಟಿಗೆ. ಒಬ್ಬನು ಸೋಲಿನ ದುಃಖದಲ್ಲಿದ್ದಾಗ ನಾನು ಖುಷಿ ಪಡುವುದು ಹೇಗೆ? ಎಂದು. ಇದನ್ನು ನಾವು ಮಹಿಳಾ ಉದ್ಯಮಗಳಸಂಘಟನೆಗೆ ಅನ್ವಯಿಸಿದೆವು. ಒಂದು ವರ್ಷದ ಹಿಂದೆಯೇ ಉಬುಂಟು ಸ್ಥಾಪನೆಯಾಯಿತು.  ಅವೇಕ್‌, ಕೋವೆ, ಎಮರ್ಜ್‌, ಎಫ್‌ಕೆಸಿಸಿಐ ಮುಂತಾದ ಸಂಘಟನೆಗಳೆಲ್ಲ ಒಟ್ಟಾಗಿ, ಒಗ್ಗೂಡಿ ಮುನ್ನಡೆಯಲು ಉಬುಂಟು ಸ್ಥಾಪಿಸಿದವು.
‌ಯೂಟ್ಯೂಬ್‌ನಲ್ಲಿ ಈ ಬಗ್ಗೆ ಸಣ್ಣ ಡಾಕ್ಯುಮೆಂಟರಿ ಸಹ ಇದೆ.

ಮಹಿಳೆಯರಿಗೆ ಜವಾಬ್ದಾರಿ ಕೊಡುವ ಮುನ್ನ ಅನುಮಾನಗಳು ಮೂಡುವುದು ಸಹಜ. ಆದರೆ ಅಭಿವೃದ್ಧಿಯ ಪಥದಲ್ಲಿ ಮಹಿಳಾ ದೃಷ್ಟಿಕೋನ ಅತಿ ವಿಶಿಷ್ಟವಾದುದು. ಅವರಿಗೊಂದಷ್ಟು ಬೆಂಬಲ ನೀಡಿದರೆ, ಉಳಿದವರು ಹೆಮ್ಮೆಯಿಂದ ಅವರತ್ತ ನೋಡುವಂತೆ ಮಾಡಬಲ್ಲರು. ಬೇಸರವೆನಿಸುವುದು, 84ರಲ್ಲಿ ಕಾಡಿದ್ದ ಅನುಮಾನ, ಆತಂಕಗಳು ಈಗಲೂ ದೂರವಾಗಿಲ್ಲವಲ್ಲ ಎಂಬ ಕಾರಣಕ್ಕೆ. ಪರಿಸ್ಥಿತಿ ಬದಲಾಗಿದೆ. ಮಹಿಳೆಯರ ಸಾಮರ್ಥ್ಯವೂ ಬದಲಾಗಿದೆ. ಬದಲಾಗಬೇಕಿರುವುದು ಯೋಚನಾಲಹರಿ ಮಾತ್ರ!

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !