ಗುರುವಾರ , ಜೂಲೈ 2, 2020
28 °C

ಸಮುದಾಯದ ಶ್ರೇಯಸ್ಸಿಗೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ

ಡಾ.ಸ್ಮಿತಾ ಜೆ.ಡಿ. Updated:

ಅಕ್ಷರ ಗಾತ್ರ : | |

ಭಾರತದಂತಹ ಮುಂದುವರಿಯುತ್ತಿರುವ ದೇಶವು ಹಳ್ಳಿಗಳಿಂದ ಕೂಡಿದೆ. ಅಂದಾಜು 6.40 ಲಕ್ಷ ಹಳ್ಳಿಗಳನ್ನು ಹೊಂದಿದೆ. ಒಂದು ಸಮುದಾಯದ ಆರೋಗ್ಯವು ಅಲ್ಲಿನ ಸರ್ಕಾರದ ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಮೇಲೆ ನಿರ್ಧಾರವಾಗುತ್ತದೆ. ಸಮುದಾಯದ ಆರೋಗ್ಯವನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸುವುದು ಸರ್ಕಾರಿ ಆರೋಗ್ಯ ಯೋಜನೆಗಳು, ಕಾರ್ಯಕ್ರಮಗಳು. ಇಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು, ಸಮುದಾಯದ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿರುವುದು ಆರೋಗ್ಯ ಇಲಾಖೆಯ ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು.

ಅವಿರತ ಪರಿಶ್ರಮದಿಂದ ಕೋವಿಡ್‌ನಂತಹ ಸಂದಿಗ್ಧ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದೆ. ಕರ್ನಾಟಕವು 2346 ಪಿ.ಎಚ್.ಸಿಗಳು, 326 ಸಿ.ಹೆಚ್.ಸಿ ಹಾಗೂ 176 ಸರ್ಕಾರಿ ಆಸ್ಪತ್ರೆಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹತ್ತು ಹಲವಾರು ಕಾರ್ಯಕ್ರಮಗಳಿವೆ. ಗ್ರಾಮೀಣ ಆರೋಗ್ಯ ವ್ಯವಸ್ಥೆಯು ದೇಶದ ಬೆನ್ನೆಲುಬಾಗಿ ಹೊರಹೊಮ್ಮಿದೆ.

ಹೆಣ್ಣು ಮಗಳ ಗರ್ಭಾವಸ್ಥೆಯಿಂದ ಹಿಡಿದು, ಮಗುವಿನ ಜನನ, ಆರೈಕೆ, ಲಸಿಕಾ ಕಾರ್ಯಕ್ರಮವನ್ನು ಒಳಗೊಂಡು ಮಗುವಿನ ಆರೋಗ್ಯಕರ ಬೆಳವಣಿಗೆ ಹಾಗೂ ಸಮಾಜದ ಒಳಿತಿಗಾಗಿ ಹತ್ತು ಹಲವಾರು ಕಾರ್ಯಕ್ರಮಗಳ ಉಸ್ತುವಾರಿ ಹಾಗೂ ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆಯ ಸಿಬ್ಬಂಧಿಯು ಅವಿರತವಾಗಿ ಶ್ರಮಿಸುತ್ತಿದೆ.

ವಾಜಪೇಯಿ ಆರೋಗ್ಯ ಶ್ರೀ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ, ಸಂಜೀವಿನಿ... ಮುಂತಾದ ಯೋಜನೆಗಳ ಅಡಿಯಲ್ಲಿ ಕ್ಯಾನ್ಸರ್, ನರ ಸಂಬಂಧಿ ರೋಗಗಳು ಸೇರಿದಂತೆ ಹೆಚ್ಚು ಹಣ ವ್ಯಯವಾಗುವ ರೋಗಗಳನ್ನು ನಿವಾರಿಸಲು ಯೋಜನೆಗಳನ್ನು ಒಳಗೊಂಡಿದೆ. ಆರೋಗ್ಯ ಇಲಾಖೆ ಅನುಷ್ಠಾನಗಳಿಸುತ್ತಿರುವ ಯೋಜನೆಗಳನ್ನು ಹೀಗೆ ಪರಿಚಯಿಸಬಹುದು.

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು: ಜನನಿ ಸುರಕ್ಷಾ ಯೋಜನೆ, ಮಡಿಲು ಕಿಟ್, ಪ್ರಸೂತಿ ಆರೈಕೆಯಂತಹ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಆರ್ಥಿಕ ಧನ ಸಹಾಯವಲ್ಲದೆ ಆರೋಗ್ಯಕರ ತಾಯಿ ಮಗುವಿನ ಆರೈಕೆಗಾಗಿ ಶ್ರಮಿಸುತ್ತಿದೆ.

ಮಕ್ಕಳ ಹಾಗೂ ಹರೆಯದವರ ಆರೋಗ್ಯ ಸೇವೆಗಳು: ಶುಚಿ ಕಾರ್ಯಕ್ರಮ, ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಹದಿಹರೆಯದವರಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಮಾಹಿತಿ, ಶಾಲಾ ಮಕ್ಕಳಲ್ಲಿ ಕಂಡುಬರುವ ರೋಗಗಳನ್ನು ನಿರ್ಣಯ ಮಾಡಿ ಸೂಕ್ತ ಚಿಕಿತ್ಸೆಗಳನ್ನು ಒದಗಿಸಿ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸುತ್ತಿದೆ.

ಲಸಿಕಾ ಕಾರ್ಯಕ್ರಮಗಳು: ಇಂದ್ರಧನುಷ್ ಕಾರ್ಯಕ್ರಮದಡಿಯಲ್ಲಿ 7 ಮಾರಕ ರೋಗಗಳಾದ ಪೋಲಿಯೋ, ಡಿಫ್ತೀರಿಯಾ, ನಾಯಿಕೆಮ್ಮು, ಟಿಬಿ, ಮೀಸಲ್ಸ್, ಟೆಟಾನಸ್ ಹಾಗೂ ಹೆಪಟೈಟಿಸ್ ವಿರುದ್ಧ ಲಸಿಕೆಗಳನ್ನು ನೀಡಲಾಗುವುದು.

ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕಾರ್ಯಕ್ರಮ: ಲೆಪ್ರಸಿ, ಏಡ್ಸ್, ಟಿಬಿ ಮುಂತಾದ ಸಾಂಕ್ರಾಮಿಕ ರೋಗಗಳನ್ನು ತಡೆಯುವಲ್ಲಿ  ಶ್ರಮಿಸುತ್ತಿದೆ.

ವೆಕ್ಟೆರ್‌ಬಾರ್ನ್ ರೋಗಗಳ ನಿಯಂತ್ರಣ ಕಾರ್ಯಕ್ರಮ: ಈ ಯೋಜನೆಯಡಿ ಮಲೇರಿಯಾ, ಫೈಲೇರಿಯಾ, ಡೆಂಗ್ಯೂ ಮುಂತಾದ ರೋಗಗಳನ್ನು ನಿಯಂತ್ರಿಸಲು ಶ್ರಮಿಸುತ್ತಿದೆ. 

ಅಯೋಡಿನ್ ಕೊರತೆಯಿಂದ ಬರುವ ರೋಗಗಳ ತಡೆಗಟ್ಟುವಿಕೆ ಕಾರ್ಯಕ್ರಮ, ಸಂಯೋಜಿತ ಕಾಯಿಲೆಯ ಕಣ್ಗಾವಲು ಕಾರ್ಯಕ್ರಮಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಯಶಸ್ವಿಯಾಗಿ ಆರೋಗ್ಯ ವ್ಯವಸ್ಥೆಯನ್ನು ಕಾಪಾಡಲು ಸರ್ಕಾರಿ ಆಸ್ಪತ್ರೆಗಳು, ವೈದ್ಯರು ಹಾಗೂ ಸಿಬ್ಬಂಧಿವರ್ಗದವರು ಶ್ರಮಿಸುತ್ತಿದ್ದಾರೆ.

ಮಹಾಮಾರಿ ಕೋವಿಡ್-19ರಂಥ ಸೋಂಕನ್ನು ತಡೆಗಟ್ಟುವಲ್ಲಿ ಮುಂದುವರಿದ ದೇಶಗಳಾದ ಅಮೆರಿಕ, ಇಟಲಿಯಂತಹ ದೇಶಗಳು ನೆಲಕಚ್ಚಿರುವಾಗ ಭಾರತದ ಆರೋಗ್ಯ ವ್ಯವಸ್ಥೆಯ ಶ್ರಮವನ್ನು ನಾವು ಅರಿತುಕೊಳ್ಳಬೇಕಿದೆ. ಆರೋಗ್ಯ ಇಲಾಖೆಯಡಿಯಲ್ಲಿ ಬರುವ ಎಲ್ಲಾ ಆಸ್ಪತ್ರೆಗಳು ಸಾವಿರಾರು ಹೊರರೋಗಿಗಳು, ಒಳರೋಗಿಗಳಿಗೆ ಚಿಕಿತ್ಸೆ ನೀಡುವುದಲ್ಲದೆ, ಮೇಲಿನ ಕಾರ್ಯಕ್ರಮಗಳ ಉಸ್ತುವಾರಿ, ಪ್ರಗತಿ, ಅಂಕಿ ಅಂಶಗಳ ವರದಿ ಮುಂತಾದವುಗಳನ್ನು ನಿಭಾಯಿಸಲು ಹಗಲಿರುಳು ದುಡಿಯುತ್ತಿದೆ.

ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸರ್ಕಾರವು ಸೂಕ್ತ ಆರ್ಥಿಕ ಸಹಾಯದೊಂದಿಗೆ ಪ್ರೋತ್ಸಾಹಿಸಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ.

- ಡಾ.ಸ್ಮಿತಾ ಜೆ.ಡಿ., ದಂತ ವೈದ್ಯಾಧಿಕಾರಿ, ಗುಂಡ್ಲುಪೇಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು