ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೂರ ಶಿಕ್ಷೆಯ ಚರಿತ್ರೆ: ಚಿನ್ನಕ್ಕೆ ಎದುರಾಗಿ ಮಣ್ಣಿನ ಸಿಂಹಾಸನ

ಇದ್ದಾಗಲೂ ಪ್ರತಿಭಟಿಸುವವರು ಇದ್ದೇ ಇರುತ್ತಾರೆ!
Last Updated 27 ಜೂನ್ 2019, 20:22 IST
ಅಕ್ಷರ ಗಾತ್ರ

ಒಂದು ದಿಗ್ಭ್ರಾಂತ ಮೌನ ನಮ್ಮನ್ನು ಆವರಿಸಿಕೊಳ್ಳು ವಂತಿದೆ. ಆ ದಿಗ್ಭ್ರಾಂತಿ, ನಿಜದ ಮೇಲೆ ಕಟ್ಟಿಕೊಂಡಿರುವ ಪೊರೆಯನ್ನು ತೆರೆದು ತೋರಲು ಆಗದೇ ಇರುವುದಕ್ಕಾಗಿ. ಆದರೆ ಇದು ಶಾಶ್ವತ ಸ್ಥಿತಿಯೇನೂ ಅಲ್ಲ. ಚರಿತ್ರೆಯು ದ್ದಕ್ಕೂ ಇಂತಹ ತಡೆಗೋಡೆಗಳು ಕಟ್ಟಿಕೊಂಡಿವೆ ಮತ್ತು ಕೆಡವಿಕೊಂಡಿವೆ. ಆದರೆ ಒಂದಂತೂ ಸತ್ಯ. ಸದ್ಯದ ಕಾಲ- ಜಗತ್ತಿನ ಹಲವೆಡೆ ದಬ್ಬಾಳಿಕೆಯೇ ಆಳ್ವಿಕೆಯಾಗುವುದಕ್ಕೆ ಸಮ್ಮತಿ ದೊರಕಿದ ಕಾಲ.

ಪ್ಯಾಲೆಸ್ಟೀನ್‌ನ ಭೂಮಿಯನ್ನು ಇಸ್ರೇಲ್ ಆಕ್ರಮಿಸಿಕೊಂಡಿದ್ದನ್ನು ಕೆಲವೇ ವರ್ಷಗಳ ಹಿಂದೆ ಒಪ್ಪದವರು ಹಲವರಿದ್ದರು. ಆದರೆ ಈಗ ಇದು ‘ಸಾಧಾರಣ’ ಸಂಗತಿ ಯೆನಿಸಿಕೊಂಡು ಬಹುಪಾಲು ಎಲ್ಲರ ಸಮ್ಮತಿಯನ್ನು ಹುಟ್ಟಿಸಿಕೊಂಡಿದೆ. ದಬ್ಬಾಳಿಕೆಯೆಂಬುದು ಕೇವಲ ರಾಜಕೀಯ ಅಧಿಕಾರದ ರೂಪದಲ್ಲೇ ಬರಬೇಕೆಂದಿಲ್ಲ. ಅದು ಕಾಮರೂಪಿ. ಯಾವಾಗ ಬೇಕಿದ್ದರೂ ಜನ ಮೆಚ್ಚುವ ರೂಪವನ್ನು ಧರಿಸಿ ನಿಂತು ಮರುಳು ಮಾಡಬಹುದು. ಶೂರ್ಪನಖಿ ಸುಂದರ ಯುವತಿಯಾಗಿ ನಿಂತು ರಾಮ–ಲಕ್ಷ್ಮಣರನ್ನು ಮರುಳುಗೊಳಿಸಲು ಯತ್ನಿಸಿದಳು. ಅವರೇನೋ ಮರುಳಾಗಲಿಲ್ಲ. ಹಾಗಂತ ಎಲ್ಲರೂ ಮರುಳಾಗುವುದಿಲ್ಲ ಎನ್ನಲಾದೀತೆ? ಇಂದಿನ ಅತ್ಯಾಧುನಿಕ ಕಾಲದಲ್ಲಿ ಬಂಡವಾಳಶಾಹಿಯು ಮಾರುಕಟ್ಟೆ ಎಂಬ ವೇದಿಕೆಯನ್ನೇರಿ ಮಾಯಾಲೋಕ ಸೃಷ್ಟಿಸಿ, ನಮ್ಮ ಬದುಕಿನ ಪರಿಯನ್ನೇ ಬದಲಿಸಿ ಹೊಸ ಹೊಸ ಹಪಹಪಿಯನ್ನು ನಮ್ಮ ಹೃದಯ ಬಡಿತದೊಂದಿಗೆ ಬೆರೆಸಿ ದೇಹದುದ್ದಕ್ಕೂ ರಕ್ತವಾಗಿಸಿ ಹರಿಸುತ್ತಿಲ್ಲವೇ?

‘ದ ಡೆವಿಲ್ ವೇರ‍್ಸ್ ಪ್ರಾಡ’ ಎಂಬ ಅಮೆರಿಕನ್ ಸಿನಿಮಾದಲ್ಲಿ ಕಂಪನಿಯೊಂದನ್ನು ಯಶಸ್ವಿಯಾಗಿ ಮುನ್ನಡೆಸಿ ಎಲ್ಲರಿಂದಲೂ ಸೈಯೆನಿಸಿಕೊಳ್ಳುವ ಹುಕಿಗೆ ಬಿದ್ದಾಕೆಯೊಬ್ಬಳು ತನ್ನೊಳಗಿನ ವಿಪ್ಲವಗಳನ್ನು ತಿಳಿದೂ, ಹೊರಗೆ ಕಠಿಣ ಶಿಸ್ತಿನ, ನಿದ್ದೆ ಮಾಡದೇ ಕೆಲಸ ಮಾಡುವ ಶ್ರಮಜೀವಿ ಎನಿಸಿಕೊಂಡು, ತನ್ನ ಜೊತೆ ಕೆಲಸ ಮಾಡುವ ಪ್ರತಿಯೊಬ್ಬರೂ ಪ್ರತಿಕ್ಷಣವೂ ತನಗೆ ಹೆದರಿ ಗೌರವಿಸುವುದನ್ನು ಗಮನಿಸುತ್ತಾ, ಅವರ ಸುಖ ದುಃಖಗಳನ್ನೆಲ್ಲಾ ನಗಣ್ಯ ಮಾಡಿ, ಕಂಪನಿಗಾಗಿ ಕೆಲಸ ಮಾಡುವುದೇ ಅಂತಿಮ ಮತ್ತು ಆ ಮೂಲಕ ವೃತ್ತಿಯಲ್ಲಿ ಪದೋನ್ನತಿಯನ್ನು ಹೊಂದುವುದೇ ಪರಮ ಧ್ಯೇಯ ಎಂಬು ದನ್ನು ನಂಬಿಸುತ್ತಾ, ನಂಬುತ್ತಾ ಬದುಕುತ್ತಾಳೆ. ತನ್ನ ಉದ್ಯೋಗಿಗಳು ಧರಿಸುವ ಬಟ್ಟೆಯ ನಿರಿಗೆ, ಟೈ ಕಟ್ಟಿರುವ ರೀತಿ, ಶೂನ ವಿನ್ಯಾಸದವರೆಗೆ ಪ್ರತಿಯೊಂದರಲ್ಲೂ ಪರ್‍ಫೆಕ್ಷನ್ ಬಯಸುವ ಇವಳು, ಕಂಪನಿಯೊಳಗಿರುವ ಮೇಲಾಟದ ಎಲ್ಲ ರಾಜಕೀಯಗಳನ್ನು ಚಾಣಾಕ್ಷತನದಿಂದ ಗೆಲ್ಲುತ್ತಾಳೆ. ಶತ್ರುಗಳನ್ನು ಜಾಣತನದಿಂದ ಸಂಹರಿಸುತ್ತಾ ಗೆಲುವಿನ ಮೆಟ್ಟಿಲೇರಿ, ಮಾಧ್ಯಮಗಳು ಅವಳದೊಂದು ಫೋಟೊ ತೆಗೆಯಲು ಸಿಗುವುದೇ ತಮ್ಮ ಬಹುಕಾಲದ ಪುಣ್ಯಫಲ ಎಂದು ಪರಿತಪಿಸುವಂತೆ ಮಾಡಬಲ್ಲ ಸೆಲೆಬ್ರಿಟಿ ಯಾಗುತ್ತಾಳೆ. ಗತ್ತಿನ ಪೋಸ್‍ನ ಹಿಂದೆ ಅವಳ ವ್ಯಕ್ತಿಗತ ಬದುಕಿನ ಹುಣ್ಣುಗಳು ಅಡಗಿ ಹಿಂಸಿಸುತ್ತಿರುತ್ತವೆ.

ಜಗತ್ತು ಇಂತಹ ಮಾದರಿಯ ಹಿಂದೆ ಬಿದ್ದು ಯಶೋಗಾಥೆಗಳನ್ನು ಉಣಬಡಿಸುತ್ತದೆ, ಕಿರಿಯರಿಗೆ ಅವರಂತೆ ಆಗುವ ಬೋಧನೆ ಮಾಡುತ್ತದೆ. ಹೀಗೆ ಅಂತಹುದೇ ಯಶಸ್ಸನ್ನು ಸಾಧಿಸುವ ಹಟಕ್ಕೆ ಬಿದ್ದ ಹುಡುಗಿಯೊಬ್ಬಳು ಬಹಳ ಬೇಗ ಅದರ ಟೊಳ್ಳುತನ ಅರಿತು ಅವೆಲ್ಲವನ್ನೂ ಧಿಕ್ಕರಿಸಿ, ತನಗೆ ಆರಾಮವೆನಿಸುವ ಸಾಮಾನ್ಯ ಉಡುಗೆಯನ್ನು ತೊಟ್ಟು ಜನರೊಳಗೆ ಬೆರೆತುಹೋಗುವ ಸರಳ ಜೀವನಕ್ಕೆ ಮರಳುತ್ತಾಳೆ. ಹೀಗೆ ಅವಳು ವಾಪಸ್‌ ಮರಳುವುದು ಕೇವಲ ಅವಳ ವ್ಯಕ್ತಿಗತ ಆಯ್ಕೆ ಮಾತ್ರ ಅಲ್ಲ. ಅದು ಪೊಳ್ಳು ಮತ್ತು ದರ್ಪದ ಅಧಿಕಾರಕ್ಕೆ ಹೇಳುವ ಧಿಕ್ಕಾರ ಕೂಡ ಹೌದು. ಯಾವುದೇ ಅಧಿಕಾರವು ತಾನೇ ಅಂತಿಮ ಎಂದು ಸವಾರಿ ಮಾಡತೊಡಗಿದಾಗ ಇನ್ಯಾವುದೋ ಮೂಲೆಯಿಂದ ಅದಕ್ಕೆ ಪ್ರತಿಭಟನೆ ಬೇರೆ ಬೇರೆ ರೀತಿಯಲ್ಲಿ ರೂಪು ತಳೆಯುತ್ತದೆ. ಬುದ್ಧನಂತಹವರು ತೋರಿದ ದಾರಿ ಇದು. ಶರಣರ ದಾರಿಯೂ ಇದೇ ಆಗಿತ್ತು. ಇದು ಪ್ರತಿ ದಾರಿ, ನಿರಾಕರಣೆಯ ದಾರಿ ಮತ್ತು ಇದು ಸದ್ದಿಲ್ಲದೇ ಜರುಗುವ ಬದಲಾವಣೆಯ ದಾರಿ. ಬಾಯಿ ಮುಚ್ಚಿಸಬಹುದು, ಕಣ್ಣು ಮುಚ್ಚಿಸಲಾಗುವುದಿಲ್ಲ. ಆಗ ಅದು ಅಧಿಕಾರದಿಂದ ಯಾರನ್ನಾದರೂ ಇಳಿಸುವುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಧಿಕಾರವನ್ನೇ ತ್ಯಜಿಸಿ ತನ್ನ ಮೇಲಿನ ಸ್ವಯಂ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ.

ತನ್ನ ಮೇಲಿನ ಸ್ವಯಂ ಅಧಿಕಾರವನ್ನು ಉಳಿಸಿಕೊಳ್ಳಬೇಕೆಂಬುದು ಮನುಷ್ಯನೊಳಗೆ ಸುಪ್ತವಾಗಿರುವ ಪ್ರಬಲ ಬಯಕೆಯೂ ಹೌದು. ಇಲ್ಲದೇ ಹೋದಲ್ಲಿ ತನ್ನ ತಲೆದಂಡ ಶತಃಸಿದ್ಧ ಎಂದು ಗೊತ್ತಿರುವಾಗಲೂ ಕೆಲವರು ಮುನ್ನುಗ್ಗುವುದು ಸಾಧ್ಯವಿರುತ್ತಿರಲಿಲ್ಲ. ನಮ್ಮದೇ ನಾಡಿನಲ್ಲಿ ನಡೆದುಹೋದ ಸ್ವಾತಂತ್ರ್ಯ ಚಳವಳಿಯಲ್ಲಿ ನೇಣಿಗೆ ಕೊರಳುಕೊಟ್ಟ ಹೋರಾಟಗಾರರು, ಜಲಿಯನ್‍ವಾಲಾಬಾಗ್‍ನಂತಹ ಹತ್ಯಾಕಾಂಡ ನಡೆದ ಮೇಲೂ ಹೆದರದೆ ಹೋರಾಡಿದ ಅಸಂಖ್ಯ ಚಳವಳಿಗಾರರು ಇದಕ್ಕೆ ಜೀವಂತ ಉದಾಹರಣೆಗಳೇ. ಹಾಗಾಗಿ, ಯಾವ ಕಾಲಕ್ಕೂ ‘ವಿರೋಧ’ದ ಸಂಪೂರ್ಣ ಪ್ರತಿಬಂಧ ಸಾಧ್ಯವಿಲ್ಲ. ಅದು ವೇಷ ಮರೆಸಿಕೊಂಡು ಭೂಗತವಾಗಿ ಇರಬಹುದೇ ಹೊರತು ವಿರೋಧದ ಧ್ವನಿಯನ್ನು ಸಂಪೂರ್ಣ ಹತ್ತಿಕ್ಕಲಾಗದು.

ಸೌದಿ ಅರೇಬಿಯಾದಂತಹ ದೇಶದಲ್ಲಿ ಹೆಣ್ಣುಮಕ್ಕಳು ಡ್ರೈವಿಂಗ್ ಅವಕಾಶ ಕೇಳಿ ಹೋರಾಟ ಮಾಡಿದಾಗ ಅವರನ್ನು ಜೈಲಿಗೆ ಅಟ್ಟಲಾಯಿತು. ಆದರೆ ಈಗ ಕ್ರಮೇಣ ಇದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲಿನ ರಾಜಮನೆತನದ ಹೆಣ್ಣುಮಗಳೊಬ್ಬಳು, ವಿದೇಶಿ ಲೇಖಕಿಯ ಮೂಲಕ (ಜೀನ್ ಪಿ ಸಾಸನ್) ಅಲ್ಲಿನ ಹೆಣ್ಣುಮಕ್ಕಳ ಪ್ರಾಣಿಸದೃಶ ಬದುಕನ್ನು ಅನಾವರಣ ಮಾಡುತ್ತಾಳೆ. ಬದುಕಿನ ಸಕಲ ಐಹಿಕ ಭೋಗ ಭಾಗ್ಯಗಳೂ ಕಾಲ ಬುಡದಲ್ಲಿ ಬಿದ್ದಿರುವ ಆ ರಾಜಕುಮಾರಿ ತನ್ನ ಗಂಡನ, ತಂದೆಯ ಜೊತೆ ಇಲ್ಲದೆ ಅಥವಾ ಅವನ ಒಪ್ಪಿಗೆಯ ಪತ್ರವಿಲ್ಲದೆ ಎಲ್ಲಿಯೂ ತಿರುಗಾಡುವಂತಿಲ್ಲ. ಅಂತಿರುವಲ್ಲಿ ವ್ಯವಸ್ಥೆಯೊಳಗಣ ಬದಲಾವಣೆಗೆ ಸೊಲ್ಲು ಎತ್ತುವುದೂ ಸಾಧ್ಯವಿಲ್ಲ. ಸಾಕುಪ್ರಾಣಿಗಳಂತೆ ಮುದ್ದಾಗಿ ಬೆಳೆಯುವ ಇವರು ಬಯಸಿದರೆ ಇಂಗ್ಲೆಂಡ್, ಪ್ಯಾರಿಸ್‍ಗಳಲ್ಲಿ ಶಾಪಿಂಗ್ ಮಾಡಬಹುದು. ಆದರೆ ಅಪ್ಪ, ಹದಿನೆಂಟರ ಸುಂದರ ಮಗಳನ್ನು ನಲವತ್ತರ ಗಂಡಿಗೆ ನಾಲ್ಕನೆಯ ಹೆಂಡತಿಯಾಗಿ ಮದುವೆ ಮಾಡಿಕೊಟ್ಟರೆ ಮಾತಾಡುವಂತಿಲ್ಲ.

ಅಪ್ಪನೇ ಹದಿನೆಂಟರ ಹುಡುಗಿಯನ್ನು ಮದುವೆಯಾಗಿ ತಂದರೂ ಉಸಿರೆತ್ತುವಂತಿಲ್ಲ. ಅವಳ ಒಡಹುಟ್ಟಿದ ಅಣ್ಣ– ತಮ್ಮಂದಿರು ಬಡದೇಶಗಳ ಹನ್ನೆರಡು, ಹದಿನಾಲ್ಕರ ಹುಡುಗಿಯರನ್ನು ದುಡ್ಡು ಕೊಟ್ಟು ಖರೀದಿಸಿ ರೇಪ್ ಮಾಡಿದ್ದು ತಿಳಿದೂ ವಿರೋಧಿಸುವಂತಿಲ್ಲ. ಇಂತಲ್ಲಿ ಒಂದು ಹೆಜ್ಜೆ ಮುಂದಿಟ್ಟರೆ ಆಗುವ ಪರಿಣಾಮ ಏನು? ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬಹುದು. ಹೆತ್ತವರೇ ಮನೆಯ ಈಜುಕೊಳದಲ್ಲಿ ಮುಳುಗಿಸಿ ಉಸಿರು ಕಟ್ಟಿಸಿ ಸಾಯಿಸಬಹುದು ಅಥವಾ ಜೀವನವಿಡೀ ತಳದಲ್ಲಿ ಒಂದು ತಟ್ಟೆ ತೂರುವಷ್ಟು ಮಾತ್ರ ಸಂದು ಇರುವ ಕತ್ತಲ ಕೋಣೆಯ ಬಂದಿಯಾಗಿ ಹುಚ್ಚಿಯಾಗಬಹುದು. ಇದೆಲ್ಲವನ್ನೂ ಅವಳು ಕಣ್ಣಾರೆ ನೋಡಿಯೂ ಅದನ್ನು ಕಾದಂಬರಿಯ ಮೂಲಕ ಹೊರಜಗತ್ತಿಗೆ ತಿಳಿಸುವ ಸಾಹಸವನ್ನು ಮಾಡುತ್ತಾಳೆ. ಅಚ್ಚರಿ ಎನಿಸುತ್ತದೆ. ಇಂತಹ ಕ್ರೂರ ಶಿಕ್ಷೆಯ ಚರಿತ್ರೆ ಇದ್ದಾಗಲೂ ಪ್ರತಿಭಟಿಸುವವರು ಇದ್ದೇ ಇರುತ್ತಾರೆ ಎಂಬುದಕ್ಕಾಗಿ.

ತನ್ನ ಹೆಸರನ್ನು ಮರೆಮಾಚಿ ಬರೆದ ‘ಪ್ರಿನ್ಸೆಸ್’ ಎಂಬ ಈ ಕಾದಂಬರಿ 1992ರಲ್ಲೇ ಪ್ರಕಟವಾಗಿ ಇಂದಿಗೂ ಹಲವು ಮರುಮುದ್ರಣಗಳನ್ನು ಕಂಡಿದೆ. ಅದರಲ್ಲಿ ಆಕೆ ಹೇಳುವ ಮಾತೊಂದು ಬಹಳ ಮುಖ್ಯ ಅನ್ನಿಸುತ್ತದೆ. ‘ಕೇವಲ ನೂರು ವರ್ಷಗಳ ಹಿಂದೆ ಬಡ ಅಲೆಮಾರಿ ಗಳಾಗಿದ್ದ ತಮ್ಮ ಪೂರ್ವಜರು, ತೈಲಕ್ಕೆ ಬೆಲೆ ಬಂದ ಮೇಲೆ ಇದ್ದಕ್ಕಿದ್ದಂತೆ ಆಗರ್ಭ ಶ್ರೀಮಂತರಾದರು. ಅವರ ಮಕ್ಕಳಿಗೆ ಬಡತನ ಎಂದರೇನೆಂದೇ ತಿಳಿದಿಲ್ಲ. ಹಣದಿಂದ ಏನನ್ನು ಬೇಕಾದರೂ ಖರೀದಿಸುವ ಅಧಿಕಾರದ ಅಹಂ ಕಾರದಿಂದ ಅವರು ತಮ್ಮ ಅಂಕೆಗೆ ಸಿಗುವುದೆಲ್ಲವನ್ನೂ ಪಶುಸದೃಶವಾಗಿ ನೋಡುತ್ತಾರೆ’. ಇದು ವಿವೇಕದ ಮಾತಷ್ಟೇ ಅಲ್ಲ, ಎಚ್ಚರಿಕೆಯ ಮಾತೂ ಹೌದು. ತಿಳಿವಿನ ಕಣ್ಣಿಗೆ ಪೊರೆ ಕಟ್ಟದಿರಲಿ.

ಲೇಖಕಿ: ಕನ್ನಡ ಪ್ರಾಧ್ಯಾಪಕಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT