ಗುರುವಾರ , ಆಗಸ್ಟ್ 22, 2019
27 °C
ವಾಣಿಜ್ಯ ಪಾಲುದಾರರಿಗೆ ವಿಚ್ಛೇದನ ಕೊಡುವುದು ಕಡುಕಷ್ಟ

ಔದ್ಯಮಿಕ ಸಾಹಸ ಅಂತ್ಯದೆಡೆ ಸಾಗದಿರಲಿ

Published:
Updated:
Prajavani

ನಲವತ್ತು ವರ್ಷಗಳ ಹಿಂದೆ ನಾನು ಸೇನೆಯಿಂದ ಅವಧಿಪೂರ್ವ ನಿವೃತ್ತಿ ಪಡೆದ ನಂತರ ಹಾಸನದಲ್ಲಿ ರಾಯಲ್‌ ಎನ್‌ಫೀಲ್ಡ್‌ ದ್ವಿಚಕ್ರವಾಹನ ವಿತರಕನಾಗಿ ಮೊದಲ ವಾಣಿಜ್ಯ ವಹಿವಾಟು ಆರಂಭಿಸಿದೆ. ಆಗ ನನ್ನ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿದ್ದ ಬಾಲಕೃಷ್ಣ ಆಚಾರ್‌ ಹೇಳಿದ್ದ ಮಾತು ಮನಸ್ಸಿನಲ್ಲಿ ಇನ್ನೂ ಉಳಿದಿದೆ. ‘ಕ್ಯಾಪ್ಟನ್, ನೀವು ವ್ಯಾಪಾರಕ್ಕೆ ಹೊಸಬರಾಗಿರುವ ಕಾರಣ, ಪಾಲುದಾರರನ್ನು ಸೇರಿಸಿಕೊಳ್ಳುವಾಗ ಎಚ್ಚರಿಕೆ ಇರಲಿ. ಪತ್ನಿಗೆ ವಿಚ್ಛೇದನ ಕೊಡಬಹುದು, ಆದರೆ ಪಾಲುದಾರರಿಗೆ ವಿಚ್ಛೇದನ ಕೊಡುವುದು ಕಷ್ಟ ಎಂಬು ದನ್ನು ಎಂದೂ ಮರೆಯಬೇಡಿ’ ಎಂದಿದ್ದರು ಅವರು.

ಇಂಡಿಗೊ ಕಂಪನಿಯ ಸಹಸಂಸ್ಥಾಪಕರಾದ ರಾಕೇಶ್ ಗಂಗ್ವಾಲ್ ಮತ್ತು ರಾಹುಲ್ ಭಾಟಿಯಾ ನಡುವಿನ ತಿಕ್ಕಾಟ ಈಗ ಬಹಿರಂಗವಾಗಿದೆ. ಇದು, ನನಗೆ ಆಚಾರ್ ಹೇಳಿದ್ದ ಮಾತು ನೆನಪಿಸಿತು. ಕಂಪನಿಯೊಂದರಲ್ಲಿ ಸರಿಸುಮಾರು ಒಂದೇ ಪ್ರಮಾಣದಲ್ಲಿ ಷೇರು ಹೊಂದಿರುವ ಇಬ್ಬರು ಪಾಲುದಾರರು ಜಗಳಕ್ಕೆ ಇಳಿದಾಗ, ಒಬ್ಬನನ್ನು ಪಾಲುದಾರಿಕೆಯಿಂದ ಬಿಡಿಸುವುದು ಸುಲಭಕ್ಕೆ ಆಗಲಿಕ್ಕಿಲ್ಲ. ವಾಸ್ತವದಲ್ಲಿ, ಹಾಗೆ ಬಿಡಿಸುವುದು ಸಾಧ್ಯವೇ ಆಗದಿರಬಹುದು. ಅವರಿಬ್ಬರ ನಡುವಿನ ಸಂಘರ್ಷದಿಂದ ಅನಿರೀಕ್ಷಿತ ನಷ್ಟಗಳೂ ಎದುರಾಗಬಹುದು. ಇದು ಭಾರತದ ಯಶಸ್ವಿ ವಿಮಾನಯಾನ ಕಂಪನಿಯ ಪಾಲಿಗೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು.

ಉದ್ದಿಮೆಗಳಲ್ಲಿ ಸಹಸಂಸ್ಥಾಪಕರು ಅಥವಾ ಪಾಲುದಾರರ ನಡುವೆ ಭಿನ್ನಾಭಿಪ್ರಾಯ ಮೂಡುವುದು ಸಹಜ. ಗಟ್ಟಿತನ ಇರುವ ಕಾರ್ಯತಂತ್ರ ರೂಪಿಸಲು ಭಿನ್ನಾಭಿಪ್ರಾಯಗಳು ಅಗತ್ಯವೂ ಹೌದು. ಆದರೆ ಇಲ್ಲಿ, ಭಿನ್ನಾಭಿಪ್ರಾಯವು ಇವರಿಬ್ಬರ ವೈಯಕ್ತಿಕ ‘ಅಹಂ’ನ ಸಂಘರ್ಷಕ್ಕೆ, ಇಬ್ಬರ ನಡುವೆ ಅಪನಂಬಿಕೆಗೆ ದಾರಿ ಮಾಡಿಕೊಟ್ಟಿದೆ. ಇಬ್ಬರು ಪ್ರವರ್ತಕರು ಒಬ್ಬರನ್ನೊಬ್ಬರು ಸಾರ್ವಜನಿಕವಾಗಿ ನಿಂದಿಸಲು ಆರಂಭಿಸಿದರು. ಇದು, ಕಂಪನಿಯ ಪ್ರಮುಖ ಸ್ಥಾನಗಳಿಗೆ ನಡೆಯುವ ನೇಮಕಗಳ ಮೂಲಕ ಕಂಪನಿಯ ಸಂಪನ್ಮೂಲಗಳ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಯತ್ನಿಸುವ ಹೋರಾಟವಾಗಿ ರೂಪುಗೊಂಡಿತು. ಇದಾದ ನಂತರ, ನೈತಿಕವಾಗಿ ಸರಿಯಲ್ಲದ ಕೃತ್ಯಗಳನ್ನು ಎಸಗಲಾಗಿದೆ ಎನ್ನುವ ಆರೋಪಗಳು ಬಂದವು. ಪ್ರಮುಖ ಪ್ರವರ್ತಕರು ಅಥವಾ ಷೇರುದಾರರಲ್ಲಿ ಯಾರಾದರೂ ಒಬ್ಬರು ಇದನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರಿನ ರೂಪದಲ್ಲಿ ನೀಡಿದರೆ, ದೇಶದ ಪ್ರಧಾನಮಂತ್ರಿ ಬಳಿ ಈ ವಿಚಾರ ಕೊಂಡೊಯ್ದರೆ ವಿಮಾನಯಾನ ಕಂಪನಿಗೆ ಎದುರಾಗಬಹುದಾದ ಅಪಾಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಕಂಪನಿಯ ಆಡಳಿತದಲ್ಲಿ ಲೋಪವಾಗಿದೆ ಎನ್ನುವ ಕೆಲವು ಆರೋಪಗಳನ್ನು ಗಂಗ್ವಾಲ್ ಮಾಡಿದ್ದಾರೆ. ಅವರು ಇಷ್ಟು ವರ್ಷ ಏಕೆ ಸುಮ್ಮನಿದ್ದರು? ರಾಹುಲ್ ಭಾಟಿಯಾ ಅವರೂ ಗಂಗ್ವಾಲ್ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ. ಒಂದಿಷ್ಟು ಊಹಾಪೋಹಗಳೂ ಹರಿದಾಡುತ್ತಿವೆ. ಇಲ್ಲಿ, ಬರಿಗಣ್ಣಿಗೆ ಕಾಣುತ್ತಿರುವುದಕ್ಕಿಂತಲೂ ಮಿಗಿಲಾಗಿದ್ದು ಏನೋ ಇದೆ ಎಂಬುದು ಸ್ಪಷ್ಟ. ಇವರಿಬ್ಬರೂ ಒಬ್ಬರ ಮೇಲೊಬ್ಬರು ದೂರು ನೀಡಿದರೆ, ಅಕ್ರಮಗಳು ನಡೆದಿವೆಯೇ ಎನ್ನುವುದನ್ನು ಪತ್ತೆ ಮಾಡಲು ತನಿಖೆ ಆರಂಭವಾಗಬಹುದು. ಆಗ ವಿಮಾನಯಾನ ಸಂಸ್ಥೆ ಕಷ್ಟಕ್ಕೆ ಸಿಲುಕುತ್ತದೆ.

ಆದರೆ, ಇಲ್ಲಿನ ವಿಚಾರಗಳು ಇಂಡಿಗೊ ಕಂಪನಿಯ ವ್ಯಾಪ್ತಿಯನ್ನು ಮೀರಿ ನಿಂತಿವೆ. ಗಂಗ್ವಾಲ್ ಪ್ರಸ್ತಾಪಿಸಿರುವ ಅಂಶಗಳು ಆಡಳಿತದಲ್ಲಿ ಲೋಪಕ್ಕೆ ಸಂಬಂಧಿಸಿದಂತಹವು. ಅವನ್ನು ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ. ವಿದೇಶಿ ಹೂಡಿಕೆದಾರರ ಎದುರು ಭಾರತದ ಪ್ರತಿಷ್ಠೆಯನ್ನು ಕಾಯುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾರೆ. ಆದರೆ, ಈ ವಿಷಯದಲ್ಲಿ ಪ್ರಧಾನಿ ಏನು ಮಾಡಬಲ್ಲರು? ಒಂದು ‘ಅಂಗಡಿ’ಯ ಇಬ್ಬರು ಮಾಲೀಕರ ನಡುವಿನ ಜಗಳದಲ್ಲಿ ರಾಜಿ ಸಂಧಾನಕಾರ ಆಗಿ ಪಾಲ್ಗೊಳ್ಳುವುದು ಪ್ರಧಾನಿಯ ಕೆಲಸವಲ್ಲ. ಅದನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಮಾಡಬಹುದು. ಕುಟುಂಬದ ವಾಣಿಜ್ಯ ವಹಿವಾಟುಗಳಲ್ಲಿ ಸರ್ಕಾರಗಳು ಮಧ್ಯಪ್ರವೇಶ ಮಾಡಿದ್ದಿದ್ದರೂ, ಈ ಪ್ರಕರಣದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಬಾರದು. ಕಾನೂನು ಜಾರಿ ಸಂಸ್ಥೆಗಳ ಸ್ವಾಯತ್ತ ಸ್ಥಾನವನ್ನು ಬಲಪಡಿಸುವಂತಹ ಕಾನೂನುಗಳನ್ನು ರೂಪಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವ ಕೆಲಸವನ್ನು ಮಾತ್ರ ಅವರು ಮಾಡಬೇಕು.

ಆಡಳಿತಕ್ಕೆ ಸಂಬಂಧಿಸಿದ ವಿಚಾರ ಈ ಪ್ರಕರಣದ ತಿರುಳು; ಗಂಗ್ವಾಲ್ ಮತ್ತು ಭಾಟಿಯಾ ನಡುವಿನ ತಿಕ್ಕಾಟವನ್ನು ಕೊನೆಗೊಳಿಸುವುದಲ್ಲ. ಇಲ್ಲಿರುವ ಸಮಸ್ಯೆ, ಪ್ರವರ್ತಕರ ಮಧ್ಯೆ ಹಿತಾಸಕ್ತಿ ಸಂಘರ್ಷ. ಇದು ಇತರ ಷೇರುದಾರರ ಹಿತಾಸಕ್ತಿಗಳ ಮೇಲೆ, ಉದ್ಯೋಗಿಗಳ ಮೇಲೆ ಪರಿಣಾಮ ಉಂಟುಮಾಡುತ್ತದೆ. ಕಂಪನಿಯ ಇತರ ಪಾಲುದಾರರಾದ ಹಣಕಾಸು ಸಂಸ್ಥೆಗಳು, ಪೂರೈಕೆದಾರರ ಮೇಲೂ ಪರಿಣಾಮ ಉಂಟುಮಾಡುತ್ತದೆ.

ಪ್ರವರ್ತಕರು ತಮ್ಮ ಷೇರು ಪ್ರಮಾಣಕ್ಕೆ ಅನುಗುಣವಾಗಿ ಸ್ವತಂತ್ರ ನಿರ್ದೇಶಕರನ್ನು ನೇಮಕ ಮಾಡಿದಾಗ, ಆಡಳಿತ ಮಂಡಳಿ ಎಂಬುದು ತೋರಿಕೆಗೆ ಮಾತ್ರ ಆಗಿರುತ್ತದೆ. ಮಂಡಳಿಯು ಸಣ್ಣ ಪ್ರಮಾಣದ ಷೇರುದಾರರು, ನೌಕರರ ಹಿತಾಸಕ್ತಿಗಳನ್ನು ಕಾಯುವ ಕೆಲಸ ಮಾಡುವುದು ಅಪರೂಪ. ಸ್ವತಂತ್ರ ನಿರ್ದೇಶಕರು ‘ಸ್ವಾತಂತ್ರ್ಯ’ವನ್ನು ತುಸುವಾದರೂ ತೋರಿಸಿದಾಗ, ಅಪ್ರಾಮಾಣಿಕ ವ್ಯವಹಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಅವರಿಗೆ ಹೊರನಡೆಯುವ ಬಾಗಿಲು ತೋರಿಸಲಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವ, ಕುಟುಂಬದ ಮಾಲೀಕತ್ವದ ವಾಣಿಜ್ಯ ಸಂಸ್ಥೆಗಳು ಕಂಪನಿಯ ಖಜಾನೆಗೆ ಕೈಹಾಕಿದಾಗ ಅಥವಾ ತಮ್ಮದೇ ಮಾಲೀಕತ್ವದ ಇತರ ಕಂಪನಿಗಳ ನಡುವೆ ಹಣದ ವರ್ಗಾವಣೆಯಲ್ಲಿ ತೊಡಗಿದಾಗ ಗಣನೀಯ ಪ್ರಮಾಣದ ಷೇರು ಹೊಂದಿರುವ ಇತರರು ದನಿ ಎತ್ತುವುದು ಕಡಿಮೆ– ತಮ್ಮ ಹೂಡಿಕೆಗಳ ಮೇಲೆ ಉತ್ತಮ ಲಾಭಾಂಶ ಬರುತ್ತಿರುವವರಿಗೆ ಅವರು ಧ್ವನಿ ಎತ್ತುವುದಿಲ್ಲ.

ಇವೆಲ್ಲ ಒಂದು ರೀತಿಯ ಒಳಒಪ್ಪಂದ ಇದ್ದಂತೆ. ಏನಾದರೂ ಎಡವಟ್ಟಾದಾಗ ಮಾತ್ರ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆ, ತಪ್ಪಿತಸ್ಥರನ್ನು ಹಿಡಿಯಲು ಮುಂದಾಗುತ್ತಾರೆ. ಆದರೆ, ಆ ವೇಳೆಗೆ ಕಂಪನಿಯನ್ನು ಉಳಿಸಲು ಇದ್ದ ಕಾಲಾವಧಿ ಮುಗಿದುಹೋಗಿರುವ ಸಾಧ್ಯತೆಯೂ ಇರುತ್ತದೆ. ಪಾಶ್ಚಿಮಾತ್ಯ ದೇಶಗಳಷ್ಟು ಕಟ್ಟು ನಿಟ್ಟಾಗಿ ಭಾರತದ ಮಾರುಕಟ್ಟೆ ನಿಯಂತ್ರಕರು ಅಥವಾ ಇತರ ಶಾಸನಬದ್ಧ ಸಂಸ್ಥೆಗಳು ಕೆಲಸ ಮಾಡುವುದಿಲ್ಲ.

ಷೇರುಗಳಲ್ಲಿ ಹೂಡಿಕೆ ಮಾಡುವ ಸಾರ್ವಜನಿಕರು ಯಾವ ಪ್ರವರ್ತಕರಿಗೆ ನಿಯಮಗಳನ್ನು ಬಾಗಿಸುವ ಗುಣ ಇದೆ ಎಂಬುದನ್ನು ಗುರುತಿಸುತ್ತಾರೆ. ಇಂಥ ಪ್ರವರ್ತಕರನ್ನು ಎದೆಗಾರಿಕೆಯ ಉದ್ಯಮಿಗಳು ಎಂಬ ಭಾವನೆಯಿಂದ ಕಾಣಲಾಗುತ್ತದೆ. ಇಂತಹ ಪ್ರವರ್ತಕರು ನಡೆಸುವ ಎಲ್ಲ ಅಪ್ರಾಮಾಣಿಕ ಕೆಲಸಗಳನ್ನು ಸಾರ್ವಜನಿಕರು ತಮ್ಮ ಷೇರುಗಳಿಗೆ ಉತ್ತಮ ಬೆಲೆ ಬರುತ್ತಿರುವಷ್ಟು ಕಾಲ, ಬ್ಯಾಂಕುಗಳವರು ತಮ್ಮ ಸಾಲದ ಕಂತುಗಳು ಮರುಪಾವತಿ ಆಗುತ್ತಿರುವಷ್ಟು ಕಾಲ ಕ್ಷಮಿಸಿಬಿಡುತ್ತಾರೆ. ಆದರೆ, ಇದು ಅರ್ಥವ್ಯವಸ್ಥೆಯ ಆರೋಗ್ಯಕ್ಕೆ ಒಳ್ಳೆಯದಲ್ಲ.

ವಾಸ್ತವದಲ್ಲಿ, ಸ್ವತಂತ್ರ ನಿರ್ದೇಶಕರನ್ನು ಸಣ್ಣ ಸಣ್ಣ ಷೇರುದಾರರು (minority shareholders) ನೇಮಕ ಮಾಡುವಂತೆ ಆಗಬೇಕು; ಅವರು ಪ್ರವರ್ತಕರಿಂದ ನೇಮಕ ಆಗಬಾರದು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಲ್ಲಿ ಷೇರುದಾರ ಕೂಡ ಆಗಿದ್ದಾಗ, ಆಡಳಿತ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರ ಪ್ರಮಾಣ ಶೇಕಡ 50ರಷ್ಟಾಗಿರಬೇಕು ಎಂಬ ನಿಯಮ ಈಗಾಗಲೇ ಇದೆ. ಈ ಸ್ವತಂತ್ರ ನಿರ್ದೇಶಕರು ಬಹುಸಂಖ್ಯೆಯ ಷೇರು ಹೊಂದಿರುವವರ ಬದಲಾಗಿ, ಸಣ್ಣ ಸಣ್ಣ ಪ್ರಮಾಣದಲ್ಲಿ ಷೇರು ಹೊಂದಿರುವವರಿಂದ ನೇಮಕ ಆಗಬೇಕು ಎಂದು ನಿಯಮ ರೂಪಿಸಿದರೆ ಸಮಸ್ಯೆಗಳು ಬಹುಮಟ್ಟಿಗೆ ಪರಿಹಾರ ಕಾಣುತ್ತವೆ. ಕಾರ್ಪೊರೇಟ್ ಆಡಳಿತ ವ್ಯವಸ್ಥೆಯನ್ನು ಗಟ್ಟಿಗೊಳಿಸುವಲ್ಲಿ ನೆರವಾಗುತ್ತದೆ.

‘ಸೆಬಿ’ ಕೆಲವೊಂದಿಷ್ಟು ಸುಧಾರಣೆಗಳನ್ನು ತರಬಹುದು, ಅದಕ್ಕೆ ಒಂದಿಷ್ಟು ಕಾಲ ಬೇಕಾಗಬಹುದು. ಆದರೆ, ಗಂಗ್ವಾಲ್ ಮತ್ತು ಭಾಟಿಯಾ ತಮ್ಮ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳದಿದ್ದರೆ, ಬಹುದೊಡ್ಡ ಔದ್ಯಮಿಕ ಸಾಹಸವೊಂದು ಅಂತ್ಯದ ಕಡೆ ಸಾಗಬಹುದು ಎಂಬುದನ್ನು ಅರಿಯಬೇಕು.

Post Comments (+)