ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಪಠ್ಯ ಪೂರೈಸಿದರೆ ಸಾಕೇ?

ಜೀವನವನ್ನೇ ಒಂದು ಪಠ್ಯವನ್ನಾಗಿ ನೋಡಲು ಸಾಧ್ಯವಾಗುವಂತಹ ಶಿಕ್ಷಣ ಬೇಕಾಗಿದೆ
Last Updated 16 ಜುಲೈ 2020, 21:46 IST
ಅಕ್ಷರ ಗಾತ್ರ
ADVERTISEMENT
""

ಸಾಂಕ್ರಾಮಿಕವೊಂದು ಎಲ್ಲವನ್ನೂ ಅಸ್ಥಿರಗೊಳಿಸಿರುವ ಹೊತ್ತಿನಲ್ಲಿ ಶಿಕ್ಷಕರಾಗಿ ನಾವು ಏನು ಮಾಡಬೇಕು? ನಾವು ಲಘುವಾಗಿ ಪರಿಗಣಿಸುತ್ತಿದ್ದ ಜಗತ್ತು ಕುಸಿಯುತ್ತಿರುವಂತೆ ಕಾಣುತ್ತಿದೆ, ಪುಸ್ತಕದ ಜ್ಞಾನ ತನ್ನ ಅರ್ಥ ಕಳೆದುಕೊಂಡಿರುವಂತಿದೆ. ‘ನಾವು ವೃತ್ತಿಪರರು, ಸಂಬಳ ಪಡೆಯುವ ನೌಕರರು’. ಹಾಗಾಗಿ, ಸಂಬಂಧಪಟ್ಟ ಅಧಿಕಾರಿಗಳು– ಪ್ರಾಂಶು‍‍ಪಾಲರು, ಕುಲ‍ಪತಿಗಳು– ಹೇಳಿದ್ದನ್ನು ಮಾಡಬೇಕು. ಆನ್‌ಲೈನ್‌ ತರಗತಿ ನಡೆಸುವ, ಅಧಿಕೃತ ‍ಪಠ್ಯ ಬೋಧಿಸುವ, ಮನೆಕೆಲಸವನ್ನು ಅಪ್‌ಲೋಡ್ ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳುವ, ವಾರಕ್ಕೆ-ತಿಂಗಳಿಗೆ ಪರೀಕ್ಷೆ ನಡೆಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

ನಾವು ಸಂದೇಶವೊಂದನ್ನು ನೀಡುತ್ತಿರುವಂತಿದೆ: ಸಾಂಕ್ರಾಮಿಕ ಇರಲಿ, ಇಲ್ಲದಿರಲಿ; ಕೆಲಸಗಳೆಲ್ಲ ಎಂದಿನಂತೆ ನಡೆಯುತ್ತಿರಬೇಕು. ನಮ್ಮ ಮೇಲೆ ಯಾವ ಪರಿಣಾಮಗಳೂ ಆಗಬಾರದು, ನಾವು ಅದೇ ಪುಸ್ತಕ, ಅದೇ ಪಠ್ಯವನ್ನು ಕಲಿಸುತ್ತ- ಕಲಿಯುತ್ತ ಇರಬೇಕು. ಈ ನಡುವೆ, ಹೆಚ್ಚುತ್ತಲೇ ಇರುವ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ, ಎಲ್ಲ ಕಡೆಯೂ ಕಾಣುತ್ತಿರುವ ಆರ್ಥಿಕ ಹಾಗೂ ಅಸ್ತಿತ್ವಕ್ಕೆ ಸಂಬಂಧಿಸಿದ ಆತಂಕಗಳು ನಾವು ನಮ್ಮ ಆನ್‌ಲೈನ್‌ ತರಗತಿಗಳ ಮೂಲಕ ತೋರಿಸಿಕೊಳ್ಳುವ ‘ಸಹಜ ಸ್ಥಿತಿ’ ಎಷ್ಟು ಟೊಳ್ಳು ಎಂಬುದನ್ನು ಬಯಲು ಮಾಡುತ್ತವೆ.

ಹೀಗಿದ್ದರೂ ಎನ್‌ಸಿಇಆರ್‌ಟಿ ಪಠ್ಯದ ಗಣಿತ ವಿಷಯದ ಏಳನೆಯ ಅಧ್ಯಾಯವನ್ನು ಪೂರ್ಣಗೊಳಿಸಬೇಕು, ಝೂಮ್‌ ಮೂಲಕ ನಡೆಯುವ ತರಗತಿ ಬಗ್ಗೆ ತಂತ್ರಜ್ಞಾನಪ್ರೇಮಿ, ಇತಿಹಾಸದ ಪ್ರೊಫೆಸರ್‌ ಸಂಭ್ರಮದಿಂದ ಹೇಳಿಕೊಳ್ಳಬೇಕು, ಮೊಘಲ್ ಸಾಮ್ರಾಜ್ಯದ ಪತನಕ್ಕೆ ದಾರಿ ಮಾಡಿಕೊಟ್ಟ ಹತ್ತು ಕಾರಣಗಳನ್ನು ನೆನಪಿಟ್ಟುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹೇಳಬೇಕು. ಕೆಳಮಧ್ಯಮ ವರ್ಗಕ್ಕೆ ಸೇರಿದ ವಿದ್ಯಾರ್ಥಿ ಒಳ್ಳೆಯ ಇಂಟರ್ನೆಟ್ ಸಂಪರ್ಕ ಇಲ್ಲದೆ ಈ ಏಕಮುಖ ಮಾತುಕತೆ ಕೇಳಿಸಿಕೊಳ್ಳುವುದರಿಂದ ವಂಚಿತನಾಗಬೇಕು!

ಹೀಗಿದ್ದರೂ, ಈ ‘ಡಿಜಿಟಲ್’ ಯುಗದಲ್ಲಿ ಶಿಕ್ಷಣ ಸುಲಲಿತವಾಗಿ ನಡೆಯುತ್ತಿದೆ, ಮೂರು ವರ್ಷ ವಯಸ್ಸಿನ ಮಗು ಕೂಡ ಬೆಂಗಳೂರಿನಲ್ಲಿ ಲ್ಯಾಪ್‌ಟಾಪ್‌ ಎದುರು ಕುಳಿತು ತನ್ನ ಶಿಕ್ಷಕಿ ಹೇಳಿದ್ದನ್ನು ಸ್ವೀಕರಿಸುತ್ತಿದೆ ಎಂದು ನಮ್ಮ ನೀತಿ ನಿರೂಪಕರು ಮತ್ತು ಶೈಕ್ಷಣಿಕ ವಲಯದ ಮುಖ್ಯಸ್ಥರು ಸರ್ಕಾರಕ್ಕೆ ಭರವಸೆ ನೀಡುತ್ತಾರೆ. ಆದರೆ, ನಮ್ಮಲ್ಲಿ ಕೆಲವರು ಈ ಹೊತ್ತಿನಲ್ಲಿ ಎದ್ದುನಿಂತು, ಈ ಪ್ರಕ್ರಿಯೆಗಳಲ್ಲಿನ ಸಂವೇದನಾಶೂನ್ಯತೆಯನ್ನು ಹೇಳಬೇಕಲ್ಲವೇ?

ನಾವು ‘ವೃತ್ತಿಪರರು’, ಸಂಬಳ ಪಡೆಯುವವರು, ನಿಜ. ಆದರೆ, ಶಿಕ್ಷಕರಾದ ನಾವು ಅಧಿಕೃತ ಪಠ್ಯ ಹಾಗೂ ವಿದ್ಯಾರ್ಥಿಗಳ ನಡುವೆ ಮಧ್ಯವರ್ತಿಗಳಷ್ಟೇ ಅಲ್ಲ. ನಾವು ಬಿಕ್ಕಟ್ಟುಗಳ ಬಗ್ಗೆ ಆಳವಾದ ಸ್ಪಂದನ ಹೊಂದಿರುವ ಶಿಕ್ಷಣತಜ್ಞರೂ ಹೌದು. ಅರ್ಥಪೂರ್ಣ ಶಿಕ್ಷಣವು ಈ ವಿಷಯಗಳ ಬಗ್ಗೆ ಮಾತನಾಡಬೇಕು. ಈಗಿನ ಪಠ್ಯ ಈ ಸಂದರ್ಭದಲ್ಲಿ ಬೋಧಿಸಲು ಸರಿಯಾಗಿಲ್ಲದಿರಬಹುದು; ಪರಿಸ್ಥಿತಿಯು ಬೇರೇನಕ್ಕೋ ಹಂಬಲಿಸುತ್ತಿರಬಹುದು.

ಈ ಹಿನ್ನೆಲೆಯಲ್ಲಿ ಎರಡು ವಿಷಯಗಳನ್ನು ಹೇಳಬಯಸುವೆ. ಮೊದಲನೆಯದು, ತಾಂತ್ರಿಕ ಪ್ರಶ್ನೆಗೂ ಮೀರಿದ್ದನ್ನು ನಾವು ಕಾಣಬೇಕು. ಶಿಕ್ಷಣವೆಂಬುದು ಸಾಫ್ಟ್‌ವೇರ್‌ ಉದ್ಯಮವಲ್ಲ. ಸಾವು ಎಂಬುದು ಸಂಖ್ಯೆಯಾಗಿರುವಾಗ, ಸಮಾಜದ ಒಡಕುಗಳು ಸ್ಪಷ್ಟವಾಗಿ ಗೋಚರಿಸುತ್ತಿರುವಾಗ, ಎಲ್ಲೆಡೆ ಭಯ ಇರುವಾಗ ನೀವು ಏನನ್ನು ಕಲಿಸುತ್ತೀರಿ, ಹೇಗೆ ಸಂವಹನ ನಡೆಸುತ್ತೀರಿ ಎಂಬುದು ನೈಜ ಪ್ರಶ್ನೆ. ನಮ್ಮ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳ ಸ್ಥಿತಿ ‘ಸಹಜ’ವಾಗಿ ಇದೆ ಎಂದು ಶಿಕ್ಷಕರಾಗಿ ನಾವು ವರ್ತಿಸಿದರೆ, ನಮ್ಮನ್ನು ನಾವೇ ಮೋಸ ಮಾಡಿಕೊಂಡಂತೆ ಆಗುತ್ತದೆ.

ತನ್ನ ಸಂಬಂಧಿಕರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ನನ್ನ ವಿದ್ಯಾರ್ಥಿನಿಯೊಬ್ಬಳು ಈಚೆಗೆ ಹೇಳಿದಳು. ಆಗ ನಾನೇನು ಮಾಡಬೇಕು? ಆಕೆಗೆ ಲ್ಯಾಪ್‌ಟಾಪ್‌ ಮುಂದೆ ಕೂರುವಂತೆ ಹೇಳಿ, ನನ್ನ ಏಕಮುಖ ಸಂಭಾಷಣೆಯನ್ನು ಆಲಿಸಲು ಹೇಳಬೇಕೇ? ಅಥವಾ ನಾನು ಆಕೆಯ ಜೊತೆ ಅರ್ಥಪೂರ್ಣವಾಗಿ ಸಂವಹನ ನಡೆಸಿ, ನೋವು, ಪ್ರಾರ್ಥನೆ, ತಾಳ್ಮೆ, ಸಹನೆಯ ಬಗ್ಗೆ ಮಾತನಾಡಬೇಕೇ? ಏಳನೆಯ ತರಗತಿಯ ವಿದ್ಯಾರ್ಥಿಯೊಬ್ಬನ ತಂದೆ ಕೆಲಸ ಕಳೆದುಕೊಂಡಾಗ, ಅವರ ಕುಟುಂಬದಲ್ಲಿ ಆಗುತ್ತಿರುವ ಮಾನಸಿಕ ಹಾಗೂ ಭಾವನಾತ್ಮಕ ತುಮುಲದ ಬಗ್ಗೆ ಆಲೋಚಿಸಿಕೊಳ್ಳಿ.

‘ಮೂಲಭೂತ ಹಕ್ಕು’, ‘ರಾಜ್ಯ ನಿರ್ದೇಶನ ತತ್ವ’ಗಳ ಕುರಿತ ಮನೆಕೆಲಸವನ್ನು ಅಪ್‌ಲೋಡ್‌ ಮಾಡಲು ಆ ವಿದ್ಯಾರ್ಥಿ ವಿಫಲನಾದರೆ, ಅವನನ್ನು ಸಮಾಜವಿಜ್ಞಾನ ಶಿಕ್ಷಕ ಅನುತ್ತೀರ್ಣ ಮಾಡಬೇಕೇ? ಅಥವಾ, ಆ ವಿದ್ಯಾರ್ಥಿಗೆ ಸಮಾಧಾನ ತರುವಂತಹ ಒಂದು ಪತ್ರ ರವಾನಿಸಬೇಕೇ? ಸಾಂವಿಧಾನಿಕ ಆದರ್ಶಗಳು ಹಾಗೂ ವಾಸ್ತವ ಬದುಕಿನ ನಡುವಿನ ವ್ಯತ್ಯಾಸದ ಬಗ್ಗೆ ಒಂದು ದಿನ ತರಗತಿಯಲ್ಲಿ ಮಾತುಕತೆ ಆರಂಭಿಸಬೇಕೇ? ಈ ವ್ಯತ್ಯಾಸಗಳು ಇಂದಿನ ಸಂದರ್ಭದಲ್ಲಿ ಬಹಳ ಸ್ಪಷ್ಟವಾಗಿ ಕಾಣಿಸುತ್ತಿವೆ: ಹೊರಗಿನವರ ಪ್ರವೇಶವನ್ನು ನಿರ್ಬಂಧಿಸಿರುವ ಕೆಲವು ಸಮುದಾಯಗಳು ಮನೆಕೆಲಸದವರಿಗೆ ತಮ್ಮ ಮನೆಯ ಬಾಗಿಲುಗಳನ್ನು ಮುಚ್ಚಿವೆ.

ನಮ್ಮ ವಿದ್ಯಾರ್ಥಿಗಳಿಗೆ ಜೀವನವನ್ನೇ ಒಂದು ಪಠ್ಯವನ್ನಾಗಿ ನೋಡಲು ಸಾಧ್ಯವಾಗುವಂತಹ ಮಾತುಕತೆ, ಮನಸ್ಸನ್ನು ಅರಳಿಸುವಂತಹ ವಿಚಾರಗಳು, ಬಂಧನಗಳಿಂದ ಬಿಡುಗಡೆಗೊಳಿಸುವ ಶಿಕ್ಷಣದ ಅಗತ್ಯ ಇದೆ. ಈ ಸಂದರ್ಭದಲ್ಲಿ ಇದು ಮುಖ್ಯ. ಪುಸ್ತಕದ ಉಪನ್ಯಾಸಗಳ ಒಂದು ಸರಣಿಯನ್ನೇ ವಿದ್ಯಾರ್ಥಿಗಳು ತಪ್ಪಿಸಿಕೊಂಡರೂ ಅದರಿಂದ ಯಾವ ನಷ್ಟವೂ ಇಲ್ಲ.

ಅವಿಜಿತ್ ಪಾಠಕ್

ಎರಡನೆಯದಾಗಿ, ಶಿಕ್ಷಣ ಎಂಬ ವೃತ್ತಿಯನ್ನು ಹೇಗೆ ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ, ಹತ್ಯೆ ಮಾಡಲಾಗಿದೆ ಎಂಬುದರ ಬಗ್ಗೆ ಕೂಡ ನಾವು ಅವಲೋಕನ ನಡೆಸಿಕೊಳ್ಳಬೇಕು. ಬ್ರೆಜಿಲ್ ಮೂಲದ ಶಿಕ್ಷಣ ತಜ್ಞ ಪಾಲೊ ಫ್ರೆಯ್ರೆ ಅವರು, ಶಿಕ್ಷಕರು ಸಂವಾದಿಸುತ್ತಿರಬೇಕು ಎಂದು ಹೇಳಿರಬಹುದು; ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಎಂಬುದು ತೀವ್ರವಾಗಿ ಅನುಭವಿಸುವ ಭಾವನೆಗಳನ್ನು ಹಂಚಿಕೊಳ್ಳುವುದು ಎಂದು ಮಾರ್ಟಿನ್ ಬುಬರ್‌ ಅವರು ಹೇಳಿರಬಹುದು; ಶಿಕ್ಷಕನು ಮಗುವಿನ ಅಂತರಂಗವನ್ನು ಅರಳಿಸಲು ನೆರವಾಗುವ ಸಾಧನ ಎಂದು ಜಿಡ್ಡು ಕೃಷ್ಣಮೂರ್ತಿ ಹೇಳಿರಬಹುದು. ಆದರೆ, ತಂತ್ರಜ್ಞಾನದ ನೆಲೆಯಲ್ಲಿ ಆಲೋಚಿಸುವ ಕೆಲವರು ಮತ್ತು ನಮ್ಮ ನೀತಿ ನಿರೂಪಕರು ಈ ಆದರ್ಶಗಳನ್ನು ಕಂಡು ನಗುತ್ತಾರೆ. ಅವರು ಶಿಕ್ಷಕರನ್ನು ಕಲಿಕಾ ಯಂತ್ರದಲ್ಲಿನ ಚಕ್ರಗಳ ಹಲ್ಲುಗಳ ಮಟ್ಟಕ್ಕೆ ಇಳಿಸಿ ಆಗಿದೆ.

ನಿರ್ದಿಷ್ಟ ಫಲಿತಾಂಶ ತರಬಲ್ಲ ನಮ್ಮ ಶಕ್ತಿಯನ್ನು, ಸ್ಪಂದನಶೀಲತೆಯನ್ನು ನಮ್ಮಿಂದ ಈಗಾಗಲೇ ಕಿತ್ತುಕೊಳ್ಳಲಾಗಿದೆ. ನಾವು ಪಠ್ಯವನ್ನು ಪೂರ್ಣಗೊಳಿಸುತ್ತೇವೆ, ಅಷ್ಟೇ. ಈ ಪಠ್ಯಕ್ರಮದ ಮೇಲೆ ನಮಗೆ ಯಾವ ನಿಯಂತ್ರಣವೂ ಇಲ್ಲ. ಅದಕ್ಕೂ ಹೆಚ್ಚಾಗಿ, ಈಚಿನ ದಿನಗಳಲ್ಲಿ ನಾವು ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಿಕೊಂಡು, ಅವರು ಎಲ್ಲ ಬಗೆಯ ಪರೀಕ್ಷೆಗಳಲ್ಲಿ ಹಾಗೂ ನಾವು ಕಲಿಸುವ ‘ಕೌಶಲ’ಗಳ ಮಾಪನದಲ್ಲಿ ಪಡೆಯುವ ಗ್ರೇಡ್‌ಗಳನ್ನು ಪಟ್ಟಿ ಮಾಡಿಟ್ಟುಕೊಂಡು, ಅದರ ಅಂಕಿ–ಅಂಶಗಳನ್ನು ಪೂರೈಸುವ ವ್ಯಕ್ತಿಗಳು ಮಾತ್ರ.

ಎಲ್ಲರಿಂದ ದೂರವಾಗಿರುವ, ಯಾವ ಕನಸುಗಳೂ ಇಲ್ಲದ ನಾವು, ಹೇಳಿದ್ದನ್ನು ಮಾಡಿಕೊಂಡಿರುವ ಕೆಲಸಗಾರರು ಮಾತ್ರ. ಸಾಫ್ಟ್‌ವೇರ್‌ ಪರಿಣತರು, ರಾಜಕೀಯ ಪ್ರಭಾವಗಳ ಮೂಲಕ ನೇಮಕಗೊಂಡ ಕುಲಪತಿಗಳು, ಕಲ್ಪನೆಗಳೇ ಇಲ್ಲದ ನೀತಿ ನಿರೂಪಕರು, ಕಾರ್ಪೊರೇಟ್ ಜಗತ್ತಿನ ಮೇಲ್ವರ್ಗದವರು, ಕೆಲವು ಸ್ವಯಂ ಸೇವಾ ಸಂಘಟನೆಗಳಿಗೆ ಸೇರಿದವರು ನಮ್ಮ ಜೊತೆ ಪ್ರಯೋಗ ಮಾಡಿಕೊಂಡಿರಬಹುದು. ಏನನ್ನು ಕಲಿಸಬೇಕು, ಹೇಗೆ ಕಲಿಸಬೇಕು, ಆ ಮೂಲಕ ‘ಮಾರುಕಟ್ಟೆ ಸ್ನೇಹಿ’, ‘ಚೂಟಿ’, ‘ಹೆಚ್ಚು ದಕ್ಷ’ ಆಗುವುದು ಹೇಗೆ ಎಂಬ ಬಗ್ಗೆ ಅವರು ನಮಗೆ ಸೂಚನೆ ನೀಡಬಹುದು. ಈಗಿನ ದಿನಗಳಲ್ಲಿ ಶಿಕ್ಷಣವೆಂಬುದು ಒಳ್ಳೆಯ ವಾಣಿಜ್ಯೋದ್ಯಮ.

ಸಾಮಾಜಿಕ ಅಸ್ತಿತ್ವಕ್ಕೆ ಎದುರಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲೂ ನಾವು ಸಮಸ್ಯಾತ್ಮಕ ಆನ್‌ಲೈನ್‌ ಬೋಧನೆ ಹಾಗೂ ಪಠ್ಯ ಪೂರ್ಣಗೊಳಿಸುವುದನ್ನು ಮೀರಿದ ಸಂಗತಿಗಳನ್ನು ಕಾಣದಂತೆ ಆಗಿರುವುದಕ್ಕೆ ಇದೇ ಕಾರಣವೇ?

ಲೇಖಕ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಪ್ರೊಫೆಸರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT