ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಗಾರಿಕೆ, ನೈತಿಕ ನಾಯಕತ್ವದ ಮೆಕೇನ್‌

ರಾಜಕೀಯವಾಗಿ ತೃಣ ಮಾತ್ರದ ಲಾಭ ಕೂಡ ಇರದಿದ್ದ ವಿಷಯಗಳ ಬಗ್ಗೆಯೂ ಮಾತನಾಡುವರಾಗಿದ್ದರು
ಅಕ್ಷರ ಗಾತ್ರ

ಜಾನ್‌ ಮೆಕೇನ್‌ ತಮ್ಮ ಜೀವನದಲ್ಲಿ ಅತ್ಯಂತ ಧೈರ್ಯ ತೋರಬೇಕಾದ ಸಂದರ್ಭ ಎದುರಾಗಿದ್ದು ಬಹುಶಃಅವರು ಉತ್ತರ ವಿಯೆಟ್ನಾಂನಲ್ಲಿ ಯುದ್ಧ ಕೈದಿಯಾಗಿದ್ದಾಗ ಅಲ್ಲ. ಆ ಸಂದರ್ಭದಲ್ಲಿ ಅವರು ತೀರಾ ದುರ್ಬಲರಾಗಿದ್ದರು. ಅವರ ದೇಹದ ಆರೋಗ್ಯ ಕೂಡ ಉತ್ತಮವಾಗಿರಲಿಲ್ಲ. ಅವರ ಎರಡು ಕೈಗಳು ಮುರಿದಿದ್ದವು, ಒಂದು ಕಾಲು ಮುರಿದಿತ್ತು. ಒಂದು ಮೊಣಕಾಲು ನಜ್ಜುಗುಜ್ಜಾಗಿತ್ತು. ಬಂದೂಕಿನ ನಳಿಕೆಯ ತುದಿಯ ಚಾಕುವಿನಿಂದ ಚುಚ್ಚಿಸಿಕೊಂಡು ದೇಹದಲ್ಲಿ ಗಾಯಗಳಾಗಿದ್ದವು. ಹೀಗಿದ್ದರೂ, ಅವರು ಆಗ ತಮ್ಮನ್ನು ಸೆರೆಹಿಡಿದು ಇಟ್ಟಿದ್ದವರ ವಿರುದ್ಧ ಪ್ರತಿರೋಧ ತೋರುತ್ತಿದ್ದರು. ಅದರ ಪರಿಣಾಮವಾಗಿ ಇನ್ನಷ್ಟು ಪೆಟ್ಟು ತಿನ್ನುತ್ತಿದ್ದರು.

ಅವರು ತಮ್ಮ ಎದೆಗಾರಿಕೆ ತೋರಿಸಿದ ಸಂದರ್ಭ ಬಂದಿದ್ದು 2007–08ರ ಚಳಿಗಾಲದಲ್ಲಿ. ಆಗ ಅವರು, ಅಮೆರಿಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ರಿಪಬ್ಲಿಕನ್ ಪಕ್ಷ ತಮ್ಮನ್ನು ನಾಮನಿರ್ದೇಶನ ಮಾಡಬೇಕು ಎಂದು ಬಯಸಿದ್ದರು. ಆಗ ಈ ಪಕ್ಷದ ಮೂರನೆಯ ಎರಡರಷ್ಟು ಮತದಾರರು ಕೈದಿಗಳಿಗೆ ಚಿತ್ರಹಿಂಸೆ ನೀಡುವುದನ್ನು ಬೆಂಬಲಿಸುತ್ತಿದ್ದರು. ಹೀಗಿದ್ದರೂ, ‘ಚಿತ್ರಹಿಂಸೆ’ಯ ವಿಚಾರದಲ್ಲಿ ಅಮೆರಿಕದ ಅಂದಿನ ಉಪಾಧ್ಯಕ್ಷ ಡಿಕ್ ಚೇನಿ ಅವರ ವಿರುದ್ಧ ಮೆಕೇನ್ ಅವರು ಸಮರ ನಡೆಸಿದರು. ‘ಚಿತ್ರಹಿಂಸೆ’ ನೀಡುವುದನ್ನು ಮತ್ತೆ ಮತ್ತೆ ಖಂಡಿಸಿದರು.

ಮನುಷ್ಯನನ್ನು ಒಂದು ಹಲಗೆಗೆ ಕಟ್ಟಿ, ಆತನ ತಲೆ ಕೆಳ ಭಾಗಕ್ಕೆ ವಾಲಿಕೊಂಡಿರುವಂತೆ ಆ ಹಲಗೆಯನ್ನು ಇಟ್ಟು, ಅವನ ಮುಖದ ಮೇಲೆ ಉಸಿರು ಕಟ್ಟಿಸುವ ರೀತಿಯಲ್ಲಿ ನೀರು ಸುರಿಯುವ ಚಿತ್ರಹಿಂಸೆಯು ತೀರಾ ಘೋರ ಎಂದು ಮೆಕೇನ್‌ ಐಯೋವಾದಲ್ಲಿ ಮತದಾರರ ಎದುರು ಹೇಳಿದ್ದರು. ‘ಇದು ಭಯಂಕರ ಪದ್ಧತಿ. ಒಂದು ಬಗೆಯಲ್ಲಿ ಕ್ಷುದ್ರ ಪದ್ಧತಿ ಕೂಡ ಹೌದು’ ಎಂದಿದ್ದರು ಮೆಕೇನ್‌. ತೀವ್ರತರಹದ ವಿಚಾರಣೆಯು ‘ಈಗಿರುವ ಕಾನೂನುಗಳ ಉಲ್ಲಂಘನೆಯೂ ಹೌದು, ಜಿನೀವಾ ಒಪ್ಪಂದದ ಉಲ್ಲಂಘನೆಯೂ ಹೌದು’ ಎಂದು ಮೆಕೇನ್‌ ಅವರು ಒಂದು ಚರ್ಚೆಯ ವೇಳೆ ಹೇಳಿದ್ದರು. ‘ಶತ್ರು ಎಷ್ಟು ಕೆಟ್ಟವ ಎಂಬುದು ನನಗೆ ಗೊತ್ತಿದೆ. ಆದರೆ, ಚಿತ್ರಹಿಂಸೆ ಕೊಡುವುದು ಮೂಲಭೂತವಾಗಿ ಅಮೆರಿಕ ಯಾವ ಬಗೆಯ ದೇಶ ಎಂಬುದನ್ನು ಹೇಳುತ್ತದೆ’ ಎಂದು ಅವರು ಐಯೋವಾದಲ್ಲಿ ಹೇಳಿದ್ದರು.

ಮತದಾರರು ಕೇಳಬಯಸಿದ್ದ ಕೊನೆಯ ಮಾತು ಇದೇ ಆಗಿತ್ತು. ಆ ಹೊತ್ತಿನಲ್ಲಿ ಡೆಮಾಕ್ರಟಿಕ್‌ ಪಕ್ಷದಲ್ಲಿ ಕೂಡ ಹಲವರು ‘ಚಿತ್ರಹಿಂಸೆ’ಯನ್ನು ಖಂಡಿಸಲುಹಿಂಜರಿಯುತ್ತಿದ್ದರು. ಮನುಷ್ಯನ ಮುಖದ ಮೇಲೆ ನೀರು ಸುರಿದು, ಉಸಿರು ಕಟ್ಟುವಂತೆ ಮಾಡುವ ವಿಚಾರಣಾ ಪದ್ಧತಿಯನ್ನು ‘ಚಿತ್ರಹಿಂಸೆ’ ಎಂದು ಕರೆಯಲು ಸುದ್ದಿ ಸಂಸ್ಥೆಗಳು ಕೂಡ ಸಾಮಾನ್ಯವಾಗಿ ಮುಂದಾಗುತ್ತಿರಲಿಲ್ಲ. ಪರಿಸ್ಥಿತಿ ಹೀಗಿದ್ದರೂ, 2007ರಲ್ಲಿ ಈ ರಿಪಬ್ಲಿಕನ್‌ ಅಭ್ಯರ್ಥಿ ಈ ಒಂದು ಪದ್ಧತಿಯನ್ನು ತೀಕ್ಷ್ಣವಾಗಿ ಖಂಡಿಸಿದರು, ಅಲ್‌ ಕೈದಾ ಉಗ್ರಗಾಮಿ ಸಂಘಟನೆಯ ಶಂಕಿತ ಉಗ್ರರ ಹಕ್ಕುಗಳ ಪರ ದನಿ ಎತ್ತಿದರು. ರಾಜಕೀಯದಲ್ಲಿ ಎದೆಗಾರಿಕೆ, ನೈತಿಕ ನಾಯಕತ್ವ ಅಂದರೆ ಇದು. ಈ ಕಾರಣಕ್ಕಾಗಿಯೇ ನಾವು ಮೆಕೇನ್‌ ಅವರಿಂದ ಕೆಲವಷ್ಟು ಪಾಠಗಳನ್ನು ಕಲಿತುಕೊಳ್ಳಬಹುದು.

ಅಸಂಖ್ಯ ವಿಚಾರಗಳಲ್ಲಿ ನಾನು ಜಾನ್‌ ಮೆಕೇನ್‌ ಅವರ ಜೊತೆ ತಕರಾರು ಹೊಂದಿದ್ದೇನೆ. ಇರಾಕ್‌ ಯುದ್ಧಕ್ಕೆ ಅವರು ಬೆಂಬಲ ಸೂಚಿಸಿದ್ದರಿಂದ ಆರಂಭಿಸಿ, 2017ರ ತೆರಿಗೆ ಮಸೂದೆವರೆಗೆ ಆ ವಿರೋಧಗಳು ಇವೆ. ನಾನು ಉದಾರವಾದಿ; ಅವರು ಸಂಪ್ರದಾಯವಾದಿ. ಹಾಗಾಗಿ ಅವರು ನನ್ನನ್ನು ಆಗಾಗ ರೇಗಿಸುತ್ತಲೇ ಇದ್ದರು. ಆದರೆ, ನಮ್ಮಿಬ್ಬರ ನಡುವೆ ಅಸಮ್ಮತಿಗಳು ಎಷ್ಟೇ ಇದ್ದರೂ ನಾನು ಅವರಲ್ಲಿನ ಧೈರ್ಯವನ್ನು, ತಾವು ಬೆಳೆಸಿಕೊಂಡ ನೈತಿಕ ಮೌಲ್ಯಗಳನ್ನು ಪಾಲಿಸುವಲ್ಲಿ ಇದ್ದ ಬದ್ಧತೆ
ಯನ್ನು ಬಹುವಾಗಿ ಇಷ್ಟ‍ಪಡುತ್ತೇನೆ. ಅವರ ಸಾವು ವಾಷಿಂಗ್ಟನ್‌ನಲ್ಲಿ ಬಹುದೊಡ್ಡ ಶೂನ್ಯವನ್ನು ಸೃಷ್ಟಿಸಿದೆ.

ಹಾಗಂತ, ಪ್ರತಿ ಕ್ಷಣದಲ್ಲೂ ಮೆಕೇನ್ ಅವರು ಧೈರ್ಯಶಾಲಿಯಾಗಿ ವರ್ತಿಸಿದ್ದರು ಎಂದು ಹೇಳುತ್ತಿಲ್ಲ. ಯಾರನ್ನಾದರೂ ಓಲೈಸುವ ಕೆಲಸ ಮಾಡುವಾಗ ಅದನ್ನು ಚೆನ್ನಾಗಿ ಮಾಡಲು ಅವರಿಗೆ ಬರುತ್ತಿರಲಿಲ್ಲ. ಹಾಗಾಗಿ, ಅವರಿಗೆ ಒಂದಿಷ್ಟು ವಿಷಾದಗಳು ಇರುತ್ತಿದ್ದವು. ಅವರಿಂದ ಮತದಾರರನ್ನು ಒಪ್ಪಿಸಲು ಆಗಿಲ್ಲ ಎಂಬ ನಿಂದನೆಗಳು ವ್ಯಕ್ತವಾಗಿದ್ದವು.

2000ನೇ ಇಸವಿಯಲ್ಲಿ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾಗಿ ಅವರು ದಕ್ಷಿಣ ಭಾಗದಲ್ಲಿ, ಕನ್ಫೆಡರೇಟ್‌ ಧ್ವಜವು (ಅಮೆರಿಕದ ದಕ್ಷಿಣ ಭಾಗದಲ್ಲಿ ಹಿಂದೆ ಇದ್ದ, ಮಾನ್ಯತೆ ಇಲ್ಲದ ಒಂದು ರಾಷ್ಟ್ರ ಧ್ವಜ) ‘ಪರಂಪರೆಯ ದ್ಯೋತಕ’ ಎಂದು ಬಣ್ಣಿಸಿದ್ದರು. ನಂತರ ಆ ಮಾತಿಗೆಕ್ಷಮೆ ಕೇಳಿದ ಅವರು, ‘ನಾನು ಪ್ರಾಮಾಣಿಕವಾಗಿ ಮಾತನಾಡಿದ್ದಿದ್ದರೆ ದಕ್ಷಿಣ ಕೆರೊಲಿನಾದಲ್ಲಿ ಪ್ರಾಥಮಿಕ ಹಂತದಲ್ಲಿ ನನಗೆ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂಬ ಆತಂಕ ಇತ್ತು. ಹಾಗಾಗಿ, ನಾನು ನನ್ನ ಮೌಲ್ಯಗಳ ಜೊತೆ ರಾಜಿಯಾಗಲು ತೀರ್ಮಾನಿಸಿದೆ’ ಎಂಬ ವಿವರಣೆ ನೀಡಿದ್ದರು.

ಮೌಲ್ಯಗಳು ಮತ್ತು ರಾಜಕೀಯ ಅತ್ಯುನ್ನತ ಹಂತದಲ್ಲಿ ಕೂಡ ಒಂದಾಗಬಲ್ಲವು ಎಂಬುದನ್ನು ಮೆಕೇನ್‌ ಕಾಂಗ್ರೆಸ್ಸಿನಲ್ಲಿ ತೋರಿಸಿಕೊಟ್ಟರು. ಇಷ್ಟೇ ಅಲ್ಲ, ಸಾರಾ ಪಾಲಿನ್ ಅವರನ್ನು ಆಯ್ಕೆ ಮಾಡಿದ್ದು ‘ನಾನು ಮಾಡಿದ ಇನ್ನೊಂದು ತಪ್ಪು’ ಎಂದು ಹೇಳಿದ್ದರು. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದರಲ್ಲಿ ಅವರು ಮೊದಲಿಗರಾಗಿರುತ್ತಿದ್ದರು.

ಮೆಕೇನ್ ಅವರು ತಮ್ಮದೇ ಆದ ವಲಯವೊಂದರಲ್ಲಿ ಇದ್ದರು. 2008ರ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ರ್‍ಯಾಲಿಯ ಒಂದು ದೃಶ್ಯವನ್ನು ನೀವು ನೋಡಬೇಕು. ಅದರಲ್ಲಿ ವ್ಯಕ್ತಿಯೊಬ್ಬ, ‘ನಮಗೆ ಒಬಾಮ ಅವರು ಅಮೆರಿಕದ ಅಧ್ಯಕ್ಷ ಆಗುತ್ತಾರೆ ಎನ್ನುವುದುಭಯ ತರಿಸುತ್ತದೆ’ ಎನ್ನುತ್ತಾನೆ. ಅದಕ್ಕೆ ಉತ್ತರವಾಗಿ ಮೆಕೇನ್‌, ‘ಒಬಾಮ ಅವರು ಒಳ್ಳೆಯ ವ್ಯಕ್ತಿ. ಅವರು ಅಮೆರಿಕದ ಅಧ್ಯಕ್ಷ ಆಗುತ್ತಾರೆ ಎಂಬ ಬಗ್ಗೆ ನೀವು ಭಯಪಡಬೇಕಾದ ಅಗತ್ಯ ಇಲ್ಲ’ ಎನ್ನುತ್ತಾರೆ. ಆಗ ಮಹಿಳೆಯೊಬ್ಬರು ಮಾತನಾಡುತ್ತಾರೆ. ‘ಒಬಾಮ ಅವರು ಆಫ್ರಿಕಾ ಮೂಲದ ವ್ಯಕ್ತಿ ಆಗಿರುವ ಕಾರಣ ಅವರನ್ನು ನಂಬಲು ಆಗುವುದಿಲ್ಲ’ ಎನ್ನುತ್ತಾರೆ. ಇದಕ್ಕೆ ಉತ್ತರವಾಗಿ ಮೆಕೇನ್ ಅವರು, ‘ಇಲ್ಲ, ಅವರು ಬಹಳ ಸಭ್ಯ ವ್ಯಕ್ತಿ. ಕೆಲವು ಮೂಲಭೂತ ವಿಚಾರಗಳಲ್ಲಿ ನನಗೆ ಅವರ ಜೊತೆ ತಕರಾರು ಇದೆ, ಅಷ್ಟೇ. ಈ ಚುನಾವಣೆ ಪ್ರಚಾರ ನಡೆದಿರುವುದೇ ಆ ವಿಷಯಗಳ ಬಗ್ಗೆ’ ಎಂದು ಹೇಳಿದ್ದರು.

ಮೆಕೇನ್‌ ಅವರ ವ್ಯಕ್ತಿತ್ವಕ್ಕೆ ಇನ್ನೊಂದು ಮುಖ ಕೂಡ ಇತ್ತು. ಅವರು ತೀರಾ ಸಂಕೀರ್ಣವಾದ, ವಿರೋಧಾಭಾಸಗಳ ವ್ಯಕ್ತಿತ್ವ ಹೊಂದಿದ್ದರು. ಮೆಕೇನ್‌ ಅವರು ವಿಯೆಟ್ನಾಂನ ಜೈಲಿನಲ್ಲಿ ಇದ್ದಾಗ ಅವರ ಮೂವರು ಮಕ್ಕಳನ್ನು ಬೆಳೆಸಿದ ಮೊದಲ ಪತ್ನಿಗೆ ಮೋಸಮಾಡಿದರು. ಜೈಲಿನಿಂದ ಹೊರಬಂದ ನಂತರ, ಮೊದಲ ‍ಪತ್ನಿಯ ಜೊತೆ ಇದ್ದಾಗಲೇ ಎರಡನೆಯ ಪತ್ನಿಗೆ ಹತ್ತಿರವಾಗಲು ಆರಂಭಿಸಿದರು. ಮೆಕೇನ್‌ ಅವರು ಎರಡನೆಯ ಮದುವೆ ಆದಾಗ ಅವರ ಮಕ್ಕಳು ಕೋಪ ಮಾಡಿಕೊಂಡಿದ್ದರು. ಅವರ ಕೋಪ ಇದ್ದಿದ್ದು ಮೆಕೇನ್‌ ಮೇಲೆ ಮಾತ್ರ. ಅವರಲ್ಲಿ ಯಾರೊಬ್ಬರೂ ಮದುವೆ ಕಾರ್ಯಕ್ರಮಕ್ಕೆ ಹೋಗಲಿಲ್ಲ. ಹೀಗಿದ್ದರೂ, ಅವರೆಲ್ಲ ಮೆಕೇನ್‌ ಅವರನ್ನು ಬಹುಬೇಗ ಕ್ಷಮಿಸಿದರು. ಏಕೆಂದರೆ, ತಮ್ಮನ್ನು ತಾವೇ ಟೀಕಿಸಿಕೊಳ್ಳುವುದರಲ್ಲಿ ಮೆಕೇನ್‌ ಮೊದಲಿಗರಾಗಿರುತ್ತಿದ್ದರು.

ಅವರು ಯುದ್ಧದಲ್ಲಿ ಪಾಲ್ಗೊಂಡಿದ್ದಕ್ಕಿಂತ, ಅವರಲ್ಲಿನ ಹಾಸ್ಯಪ್ರಜ್ಞೆಗಿಂತ, ದಣಿವರಿಯದೆ ಅವರು ಪ್ರಯಾಣಿಸುತ್ತಿದ್ದುದಕ್ಕಿಂತ ಅವರಲ್ಲಿದ್ದ ನೈತಿಕತೆಯ ದಿಕ್ಸೂಚಿ ಅವರನ್ನು ಇತರರಿಗಿಂತ ಭಿನ್ನವಾಗಿ ನಿಲ್ಲಿಸಿತು. ಮೆಕೇನ್‌ ಅವರು ಗಾಳಿ ಬಂದಂತೆ ತೂರುವ ವ್ಯಕ್ತಿ ಆಗಿರಲಿಲ್ಲ. ಅವರ ವ್ಯಕ್ತಿತ್ವದಲ್ಲಿ ಕೆಲವು ಮೌಲ್ಯಗಳು ಆಳವಾಗಿ ಬೇರೂರಿದ್ದವು. ರಾಜಕೀಯವಾಗಿ ತೃಣ ಮಾತ್ರದ ಲಾಭ ಕೂಡ ಇರದಿದ್ದ ವಿಷಯಗಳ ಬಗ್ಗೆ ಅವರು ವರ್ಷಗಳ ಕಾಲ ಮಾತನಾಡಿದ್ದನ್ನು ನಾನು ನೋಡಿದ್ದೇನೆ. ಮಾನವ ಕಳ್ಳಸಾಗಣೆಗೆ ತುತ್ತಾದವರ ಬಗ್ಗೆ, ಬಾಂಬ್‌ ದಾಳಿಗೆ ತುತ್ತಾದ ಸಿರಿಯನ್ನರ ಬಗ್ಗೆ, ಜನಾಂಗೀಯ ಹತ್ಯಾಕಾಂಡ ಎದುರಿಸುತ್ತಿದ್ದ ರೊಹಿಂಗ್ಯಾ ಸಮುದಾಯದವರ ಬಗ್ಗೆ ಅಥವಾ ಚಿತ್ರಹಿಂಸೆಗೆ ಗುರಿಯಾದ ಶಂಕಿತ ಭಯೋತ್ಪಾದಕರ ಬಗ್ಗೆ ಮೆಕೇನ್‌, ‘ಮತದಾರರು ಏನು ಹೇಳುತ್ತಾರೋ ಅದನ್ನು ಮಾಡೋಣ’ ಎನ್ನುವ ಮನಸ್ಸಿನ ವ್ಯಕ್ತಿ ಆಗಿರಲಿಲ್ಲ. ಬದಲಿಗೆ, ಮತದಾರರನ್ನು ಈ ವಿಷಯಗಳಲ್ಲಿ ಮುನ್ನಡೆಸಲು ಯತ್ನಿಸುವ ವ್ಯಕ್ತಿತ್ವ ಅವರಲ್ಲಿ ಇತ್ತು. ಅವರು ಋಜು ಮಾರ್ಗವನ್ನು ಅನುಸರಿಸಲು ಯತ್ನಿಸಿದರು.

ಅಮೆರಿಕದ ಕಾಂಗ್ರೆಸ್ಸಿನಲ್ಲಿ ರಿಪಬ್ಲಿಕನ್‌ ಪಕ್ಷದ ದನಿ ನಿಧಾನವಾಗಿ ತಮ್ಮ ಪರವಾಗುವಂತೆ ಟ್ರಂಪ್‌ ಮಾಡಿದ್ದರೂ, ಸದಸ್ಯರು ಖಾಸಗಿಯಾಗಿ ಈ ಬಗ್ಗೆ ದೂರಿಕೊಂಡರೂ, ಮೆಕೇನ್‌ ಮಾತ್ರ ಕಾಲಕಾಲಕ್ಕೆ ಮಾತನಾಡುತ್ತಲೇ ಬಂದರು. ಆ ಕಾರಣಕ್ಕಾಗಿಯೇ ಮೆಕೇನ್‌ ನಮಗೆ ಮುಖ್ಯರಾಗುತ್ತಾರೆ. ಟ್ರಂಪ್ ಅವರು ಕೆನಡಾ ದೇಶವನ್ನು ಅವಮಾನಿಸಿದಾಗ, ಜಿ–7 ದೇಶಗಳ ಸಭೆಯಲ್ಲಿ ಯುರೋಪಿನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಂಡಾಗ ‘ಅಮೆರಿಕ ಎನ್ನುವ ದೇಶವು ಅದರ ಅಧ್ಯಕ್ಷನಿಗಿಂತಲೂ ದೊಡ್ಡದು’ ಎಂಬುದನ್ನು ವಿಶ್ವಕ್ಕೆ ಮತ್ತೆ ನೆನಪಿಸಿದ ಮುತ್ಸದ್ದಿಯಾಗಿದ್ದವರು ಮೆಕೇನ್‌. ಆ ಸಂದರ್ಭದಲ್ಲಿ ಮೆಕೇನ್‌ ಅವರು, ‘ಅಮೆರಿಕದ ರಾಜಕೀಯದಲ್ಲಿನ ಬಹುತೇಕರು ಮುಕ್ತ ವ್ಯಾಪಾರ, ಜಾಗತೀಕರಣದ ಪ‍ರ ಇದ್ದಾರೆ. ಎಪ್ಪತ್ತು ವರ್ಷಗಳ ಮೌಲ್ಯಗಳ ಆಧಾರದಲ್ಲಿ ಬೆಳೆದ ಮೈತ್ರಿಯನ್ನು ಬೆಂಬಲಿಸುತ್ತಾರೆ. ಅಮೆರಿಕದ ಅಧ್ಯಕ್ಷ ನಿಮ್ಮ ಜೊತೆ ಇರಲು ಒಪ್ಪದಿದ್ದರೂ ಅಮೆರಿಕದ ಜನ ನಿಮ್ಮ ಜೊತೆ ಇರುತ್ತಾರೆ’ ಎಂದು ಟ್ವೀಟ್ ಮಾಡಿದ್ದರು.

ವಿಯೆಟ್ನಾಂನಿಂದ ಮರಳಿದ ನಂತರ ಮೆಕೇನ್‌ ಅವರು ಕೆಲವು ಚಿಕಿತ್ಸೆಗಳನ್ನು ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ 12 ವರ್ಷ ವಯಸ್ಸಿನ ಬಾಲಕಿ ಆ್ಯನ್‌ ಜೋನ್ಸ್‌ ಮಿದುಳಿನ ಟ್ಯೂಮರ್‌ಗೆ ತುತ್ತಾಗಿ ಸಾಯುವ ಹಂತದಲ್ಲಿ ಇದ್ದಳು. ಮೆಕೇನ್‌ ಪ್ರತಿದಿನ ಬೇಗನೆ ಬಂದು ಆಕೆಯ ಜೊತೆ ಮಾತನಾಡುತ್ತ ಕುಳಿತಿರುತ್ತಿದ್ದರು. ಆಕೆಯನ್ನು ಮನೆಯವರೆಗೆ ತಲುಪಿಸಿ ಆಕೆಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ಆ್ಯನ್‌ ತೀರಿಕೊಂಡ ನಂತರ ಆಕೆಯ ತಾಯಿ ಸಿಲ್ವಿಯಾ ಮತ್ತು ಮೆಕೇನ್‌ ನಡುವಿನ ಸಂಪರ್ಕ ಇಲ್ಲವಾಯಿತು. ಆದರೆ, ಕೆಲವು ವರ್ಷಗಳ ನಂತರ ಸಿಲ್ವಿಯಾ, ತಮ್ಮ ಪುತ್ರಿಗೆ ಮೆಕೇನ್‌ ಹೇಗೆ ಸಹಾಯ ಮಾಡಿದ್ದರು ಎಂಬುದನ್ನು ಭಾವುಕರಾಗಿ ನನಗೆ ತಿಳಿಸಿದ್ದರು.

‘ನಾನು ಒಬ್ಬ ಡೆಮಾಕ್ರಾಟ್‌. ನಾನು ಮೆಕೇನ್‌ ಅವರಿಗೆ ರಾಜಕೀಯವಾಗಿ ಸಹಾಯ ಮಾಡುವ ಉದ್ದೇಶ ಹೊಂದಿಲ್ಲ. ಆದರೆ, ನಾನು ಹೇಳಿರುವುದು ಈ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಕೆಲವು ವಿಷಯಗಳನ್ನು ಹೇಳುತ್ತದೆ. ಅವರು ಹೀಗೆಲ್ಲ ಮಾಡಬೇಕಾಗಿದ್ದು ಏನೂ ಇರಲಿಲ್ಲ. ಅದನ್ನೆಲ್ಲ ಮಾಡಿದ್ದಕ್ಕೆ ಕಾರಣ ಅವರಲ್ಲಿ ಸಹೃದಯತೆ ಮಾತ್ರ’ ಎಂದು ಸಿಲ್ವಿಯಾ ನನ್ನ ಬಳಿ ಹೇಳಿದ್ದರು.

ಜನರ ಮನಸ್ಸು ಯಾವ ಕಡೆ ಹರಿಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡು, ಅದೇ ರೀತಿಯಲ್ಲಿ ವರ್ತಿಸಲು ಯತ್ನಿಸುವ ರಾಜಕಾರಣಿಗಳು ವಾಷಿಂಗ್ಟನ್‌ ನಲ್ಲಿ ಸಾಕಷ್ಟಿದ್ದಾರೆ. ಆದರೆ ಮೆಕೇನ್‌ ವಿಭಿನ್ನವಾಗಿದ್ದರು. ಮತದಾರರ ಮೇಲೆ ಕೋಪ ಮಾಡಿಕೊಳ್ಳುವ ಧೈರ್ಯ ಕೂಡ ಅವರಲ್ಲಿ ಇತ್ತು. ಸಿರಿಯಾದಂತಹ ಅಸಾಧ್ಯ ವಿಚಾರಗಳನ್ನು ನಿಭಾಯಿಸಿದರು. ಹಾಗೆಯೇ, ತುಸು ಅಸ್ಥಿರವಾಗಿಯಾದರೂ ಅಮೆರಿಕವನ್ನು ಮುನ್ನಡೆಸಲು ತೀವ್ರವಾಗಿ ಕೆಲಸ ಮಾಡಿದರು. ಅವರು ಕೆಲವು ಸಂದರ್ಭಗಳಲ್ಲಿ ಸೂಕ್ತವಾದ ಕೆಲಸ ಮಾಡುತ್ತಿದ್ದರು, ಇನ್ನು ಕೆಲವು ಸಂದರ್ಭಗಳಲ್ಲಿ ಸೂಕ್ತವಲ್ಲದ ಕೆಲಸ ಮಾಡುತ್ತಿದ್ದರು. ಆದರೆ, ವಿಯೆಟ್ನಾಂನ ಸೆರೆಮನೆಯಲ್ಲಿ ಅವರು ಹೇಗೆ ಹೀರೊ ತರಹ ಇದ್ದರೋ ಅದೇ ರೀತಿ ಅಮೆರಿಕದ ರಾಜಕೀಯದಲ್ಲೂ ಕಾಣಿಸಿಕೊಂಡರು. ಈ ಕಾರಣಕ್ಕಾಗಿ ದೇಶದಲ್ಲಿ ನಮ್ಮಂತಹ ಹಲವರು ಇಂದು ರಾಜಕೀಯ ನಿರ್ವಾತವನ್ನು ಅನುಭವಿಸುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT