ಬುಧವಾರ, ನವೆಂಬರ್ 20, 2019
22 °C
ಕನ್ನಡವನ್ನು ಜುಟ್ಟಿನ ಮಲ್ಲಿಗೆಗೆ ಕಟ್ಟಿ ಹಾಕದೆ, ಹೊಟ್ಟೆಯ ಹಿಟ್ಟಿಗೆ ಸಲ್ಲುವಂತೆ ಮಾಡಬೇಕಿದೆ

ಉಳಿದರೆ ಸಾಕೇ? ಬೆಳೆಯಬೇಡವೇ?

Published:
Updated:
Prajavani

‘ಕನ್ನಡ ಹೋಯ್ತು, ಕನ್ನಡ ಸಾಯ್ತಾ ಇದೆ ಅನ್ನುವುದೆಲ್ಲ ಈ ಬೆಂಗಳೂರು ಕನ್ನಡಿಗರ ಆಧಾರವಿಲ್ಲದ ಗೋಳು. ಇಲ್ಲೇ ಬೆಂಗಳೂರು ಗಡಿ ದಾಟಿದ್ರೆ ಸಾಕು ಕನ್ನಡ ಅದ್ಭುತ ವಾಗಿದೆ, ಎಲ್ಲ ಕಡೆ ಇದೆ. ಈಗೇನಿದ್ರೂ ಮನೆಯಲ್ಲಿ ಮಕ್ಕಳಿಗೆ ಕನ್ನಡವನ್ನು ಒಂದು ವಿಷಯವಾಗಿ ಕಲಿಸಿದ್ರೆ ಸಾಕು. ಕನ್ನಡ ಇನ್ನು ನೂರು ವರ್ಷ ಕಳೆದರೂ ಆರಾಮಾಗಿ ಇರುತ್ತೆ...’ ಎನ್ನುವ ಅರ್ಥದ ಮಾತುಗಳನ್ನು ಚಲನಚಿತ್ರ ನಿರ್ದೇಶಕರೊಬ್ಬರು ಇತ್ತೀಚೆಗೆ ಆಡಿದ್ದರು. ಅವರ ಅನಿಸಿಕೆ ಬಹಳಷ್ಟು ಕನ್ನಡಿಗರ ಅನಿಸಿಕೆಯೂ ಹೌದು.

ಅವರ ಈ ಮಾತಿನ ಹಿಂದೆ, ‘ಕನ್ನಡವು ಒಂದು ಮಾತಿನ ನುಡಿಯಾಗಿದ್ದರೆ ಸಾಕು’ ಎನ್ನುವ ಭಾವನೆ ಹೆಚ್ಚು ಇದ್ದಂತಿದೆಯೇ ಹೊರತು ಜಪಾನಿ, ಕೊರಿಯನ್, ಜರ್ಮನ್, ಫಿನ್ನಿಶ್ ಭಾಷೆಗಳ ರೀತಿಯಲ್ಲಿ ಸಮಾಜ
ದಲ್ಲಿ ಸ್ಥಳೀಯ ನುಡಿಯಾಡುಗರ ಕಲಿಕೆ, ದುಡಿಮೆ, ಬದುಕು, ಸಂಸ್ಕೃತಿ, ಕಲೆ, ಸಾಹಿತ್ಯ, ತಂತ್ರಜ್ಞಾನ... ಹೀಗೆ ಇಹ-ಪರದ ಎಲ್ಲ ಅಗತ್ಯಗಳನ್ನೂ ಪೂರೈಸಲು ಶಕ್ತವಾಗಬೇಕು ಅನ್ನುವ ದೊಡ್ಡ ಕನಸೇನೂ ಕಾಣಿಸುವುದಿಲ್ಲ. ಕನ್ನಡ ಬರೀ ಮಾತಿಗೆ ಸೀಮಿತವಾದ ನುಡಿಯಾಗಿ ಉಳಿದರೆ ಸಾಕು, ಹಾಗೆ ಉಳಿದರೆ ಇನ್ನೊಂದು ನೂರು ವರ್ಷ ತೊಂದರೆ ಇಲ್ಲ ಅಂತಲೇ ಅಂದುಕೊಂಡರೂ, ಭಾಷೆಯ ಬಳಕೆಯ ಇತರೆ ಸಾಧ್ಯತೆಗಳು ಕಡಿಮೆಯಾಗುತ್ತಾ ಹೋದರೆ ಮುಂದೊಂದು ದಿನ ತನ್ನ ಸೀಮಿತ ಸಾಧ್ಯತೆಗಳ ಕಾರಣದಿಂದಾಗಿಯೇ ಕನ್ನಡ ಅಡುಗೆ ಮನೆಗೆ ಸೀಮಿತವಾದ ನುಡಿಯಾಗಬಹುದು. ಅಂತಹ ಸ್ಥಿತಿಯ ಕಾರಣದಿಂದ ಅದರ ಬಳಕೆ ಕುಸಿದು, ಅದು ಅವನತಿ ಯತ್ತ ಸಾಗಬಹುದು. ಪ್ರಪಂಚದ ಅಳಿದು ಹೋದ ಅನೇಕ ಭಾಷೆಗಳ ಹಿಂದಿನ ಕತೆಯನ್ನು ಕಂಡರೆ ಕನ್ನಡದ ವಿಚಾರದಲ್ಲಿಯೂ ಸಣ್ಣದೊಂದು ಭೀತಿ ಮನಸ್ಸನ್ನು ಆವರಿಸುತ್ತದೆ. ಕಾಲಕ್ಕೆ ತಕ್ಕಂತೆ ಒಂದು ನುಡಿಯನ್ನು ಬಳಸುವ ಸಾಧ್ಯತೆಗಳು ಹೆಚ್ಚದೇ ಹೋದಲ್ಲಿ ಆ ನುಡಿ ಕಾಲಾನಂತರದಲ್ಲಿ ಅಳಿದರೆ ಅದರಲ್ಲಿ ಅಚ್ಚರಿ ಇಲ್ಲ.

ಇಂಥದ್ದೊಂದು ಪೀಠಿಕೆಯನ್ನು ಈ ಬರಹಕ್ಕೆ ಕೊಡಬೇಕಾದ ಅಗತ್ಯ ಯಾಕೆ ಬಂತೆಂದರೆ; ಕನ್ನಡಿಗರು ತಮ್ಮನ್ನು, ತಮ್ಮ ನುಡಿಯನ್ನು ಕಲ್ಪಿಸಿಕೊಳ್ಳುವ ಬಗೆಯು ಇಂದು ಚಾಲ್ತಿಯಲ್ಲಿರುವಂತೆ ಸಾಹಿತ್ಯ, ಸಿನಿಮಾ, ನಾಟಕ ಮುಂತಾದ ಜುಟ್ಟಿನ ಮಲ್ಲಿಗೆಯ ಅಗತ್ಯಗಳಿಗೆ ನಿಂತುಹೋಗಿ, ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಹೊಟ್ಟೆಯ ಹಿಟ್ಟಿನ ಸಾಧ್ಯತೆಗಳಿಗೆ ಕನ್ನಡ ಸಲ್ಲದು ಅನ್ನುವ ತೀರ್ಮಾನಕ್ಕೆ ಬಂದರೆ, ಅದರಿಂದ ಕನ್ನಡ ತೇಲುಗಣ್ಣು, ಮೇಲುಗಣ್ಣು ಬಿಡುತ್ತ ಉಳಿದರೂ, ಅದು ಬೆಳೆಯದು ಎಂಬುದನ್ನು ಮನಗಾಣಬೇಕಿದೆ.

ಈ ರೀತಿ ಕನ್ನಡದ ಸಾಧ್ಯತೆಗಳನ್ನು ಹೊಸ ರೀತಿಯಲ್ಲಿ ಕಲ್ಪಿಸಿಕೊಳ್ಳಬೇಕು ಅನ್ನುವುದನ್ನು ಒಪ್ಪಿದಾಗ ನಮ್ಮ ಮುಂದೆ ಒಂದು ದೊಡ್ಡ ಪ್ರಶ್ನೆ ಏಳುತ್ತದೆ. ಇಂತಹ ಸಾಧ್ಯತೆಗಳನ್ನು ಕನ್ನಡಕ್ಕೆ ಒಗ್ಗಿಸುವುದು ಯಾರ ಕೆಲಸ ಅನ್ನುವುದು ಆ ಪ್ರಶ್ನೆ. ಆರ್ಥಿಕವಾಗಿ ಮತ್ತು ಸಾಮಾಜಿಕ ವಾಗಿ ಬಲವಾಗಿರುವ ವರ್ಗದ ಬಹುತೇಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಿಂದ ದೂರ ಒಯ್ದು ಇಂಗ್ಲಿಷಿನಲ್ಲೇ ಅವರ ಆಲೋಚನೆ, ಚಿಂತನೆಯನ್ನು ರೂಪಿಸುವ ಶಿಕ್ಷಣ ಕೊಡಿಸಲು ಈಗಾಗಲೇ ಮುಂದಾಗಿ ದ್ದಾರೆ. ಶಿಕ್ಷಣ ಇಲಾಖೆಯ ಅಂಕಿ–ಅಂಶ ಇದನ್ನು ವರ್ಷ ವರ್ಷವೂ ಸಾಬೀತು ಮಾಡುತ್ತಿದೆ. ಮಕ್ಕಳ, ತಂದೆತಾಯಂದಿರ, ಶಿಕ್ಷಕರ ನಾಲಿಗೆಯ ಮೇಲೆ ಆಡದ ಇಂಗ್ಲಿಷಿನಲ್ಲಿ ಇದನ್ನು ಎಷ್ಟು ಸಮರ್ಥವಾಗಿ ಮಾಡ ಬಹುದು ಅನ್ನುವ ಪ್ರಶ್ನೆಯನ್ನು ಸದ್ಯಕ್ಕೆ ಬದಿಗಿರಿಸೋಣ. ಇದರ ಒಂದು ಪರಿಣಾಮ ಏನೆಂದರೆ, ಜ್ಞಾನ, ವಿಜ್ಞಾನದ ಹೊಸ ಕವಲುಗಳ ಬೆಳವಣಿಗೆ, ಆಡಳಿತದ ದಿಕ್ಕುದೆಸೆ ನಿರ್ಧರಿಸುವ ಅಧಿಕಾರಶಾಹಿಯ ಕಟ್ಟುವಿಕೆ... ಎಲ್ಲದರಲ್ಲೂ ಮೆಕಾಲೆ ಹೇಳಿದ ‘ಭಾರತೀಯ ಮೈಬಣ್ಣ, ಆದರೆ ಯೋಚನೆಯಲ್ಲಿ ಇಂಗ್ಲಿಷರು’ ಅನ್ನುವ ವರ್ಗ ವೊಂದು ನಮ್ಮ ನಡುವೆ ವ್ಯವಸ್ಥಿತವಾಗಿ ನೆಲೆಗೊಳ್ಳುತ್ತಿದೆ.

ಈ ಹಿನ್ನೆಲೆಯ ಬಹುತೇಕ ಮಕ್ಕಳು, ‘ಕರ್ನಾಟಕದ ಸಮಸ್ತರೂ ನಮ್ಮವರು, ಅವರ ಕಷ್ಟ–ನಷ್ಟ ನಮ್ಮದು, ಅವರ ಬದುಕಿನಲ್ಲಿ ಬದಲಾವಣೆ ತರುವ ಹೊಣೆಯಲ್ಲಿ ನಮ್ಮದೂ ಪಾಲಿದೆ’ ಎಂಬ ಯಾವ ಸಮಗ್ರ ನೋಟವನ್ನೂ ಹೊಂದಿರದೆ, ಎಲ್ಲ ಸಾಮಾಜಿಕ, ಆರ್ಥಿಕ ಸಮಸ್ಯೆ
ಗಳನ್ನು- ಅದರ ಸಂಕೀರ್ಣತೆಯನ್ನು ಅರಿಯುವ ಗೋಜಿಗೆ ಹೋಗದೆ- ಬಹಳ ಸರಳವಾದ ನೆಲೆಯಲ್ಲಿ ನಿಂತು ನೋಡುವ, ಟೊಳ್ಳು ಪೊಳ್ಳಾದ ಪರಿಹಾರವನ್ನು ಅದಕ್ಕೆ ಪ್ರತಿಪಾದಿಸುವವರಾಗಿ ಕಾಣಿಸುತ್ತಿದ್ದಾರೆ.

ಈ ಹಿನ್ನೆಲೆಯ ನಗರವಾಸಿ ಮಕ್ಕಳಿಗೆ ಹೆಚ್ಚು ಅನುಕೂಲ ಕಲ್ಪಿಸುವ ನೆಲೆಯಲ್ಲಿ ನಮ್ಮಲ್ಲಿನ ಎಂಜಿನಿ ಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಗಳು, ಯುಪಿಎಸ್‌ಸಿ ತರಹದ ಆಡಳಿತ ಸೇವೆಯ ನೇಮಕಾತಿಗಳು, ಕೇಂದ್ರ ಸರ್ಕಾರ ಮತ್ತು ಖಾಸಗಿ ಕ್ಷೇತ್ರದ ಬಿಳಿ ಕಾಲರಿನ ಬಹುತೇಕ ಉದ್ಯೋಗ ಅವಕಾಶಗಳು ರೂಪುಗೊಳ್ಳುತ್ತಿರುವುದರಿಂದ ಕನ್ನಡದಲ್ಲಿ ನೆಲೆನಿಂತ, ಕನ್ನಡದಲ್ಲಿ ಓದಿದ, ಕನ್ನಡದಲ್ಲೇ ಪ್ರಪಂಚವನ್ನು ಗೆಲ್ಲುವ ಕನಸು ಕಾಣುವ ಬಹುತೇಕ ಮಕ್ಕಳು ತಮ್ಮ ನೆಲದಲ್ಲೇ ಅವಕಾಶವಂಚಿತರಾಗುತ್ತಿದ್ದಾರೆ. ಅವರ ಬಗ್ಗೆ ಸಹಾನುಭೂತಿಯ ಬದಲಾಗಿ ಕನ್ನಡವೊಂದೇ ಬಲ್ಲ ಅವರು ದಡ್ಡರು, ಸೋಮಾರಿಗಳು, ಬಾವಿಯ ಕಪ್ಪೆಗಳು ಅನ್ನುವ ಅನಿಸಿಕೆಗಳನ್ನು ಹಲವರು ಅವರಲ್ಲೂ, ಸಮಾಜದಲ್ಲೂ ಬಿತ್ತುತ್ತ ಅವರನ್ನು ಮಾನಸಿಕವಾಗಿ ಇನ್ನಷ್ಟು ಕುಗ್ಗಿಸುತ್ತಿದ್ದಾರೆ. ಬೇರೆಯವರು ಪಡೆದುಕೊಳ್ಳುತ್ತಿರುವ ಅವಕಾಶಗಳು ತಮಗೆ ಕನ್ನಡದ ಕಾರಣದಿಂದಾಗಿ ದಕ್ಕುತ್ತಿಲ್ಲ ಅನ್ನುವ ಭಾವನೆಯಲ್ಲಿ ಕನ್ನಡದ ಕುರಿತ ಕೀಳರಿಮೆ ಹುಟ್ಟುವುದನ್ನೂ ಕಾಣಬಹುದು. ಈ ಕೀಳರಿಮೆಯಿಂದ ಅವರು ಇಂಗ್ಲಿಷ್–ಹಿಂದಿಯಂತಹ ನುಡಿಗಳತ್ತ ವಾಲಿಕೊಳ್ಳಲು ಪ್ರಯತ್ನಿಸಿದರೂ ತಮ್ಮದಲ್ಲದ ಈ ನುಡಿಗಳು ಅವರಿಗೆ ದಾಟಲಾಗದ ತಡೆಗೋಡೆಯಾಗಿ ಉಳಿಯುವುದನ್ನೂ ಕಾಣಬಹುದು.

ಕನ್ನಡವನ್ನು ಜುಟ್ಟಿನ ಮಲ್ಲಿಗೆಯ ನೆಲೆಯಲ್ಲಿ ಮಾತ್ರ ನೋಡುವ, ಇಹ-ಪರದ ಇತರೆಲ್ಲದಕ್ಕೂ ಇಂಗ್ಲಿಷ್– ಹಿಂದಿಯಲ್ಲಿ ಪರಿಹಾರ ಕಾಣುವ ವರ್ಗವೊಂದೆಡೆ, ಕನ್ನಡದ ಕುರಿತು ಕೀಳರಿಮೆ ಮಾತ್ರ ಹೊಂದುತ್ತ, ಇಂಗ್ಲಿಷ್– ಹಿಂದಿಯ ಪ್ರಪಂಚವನ್ನು ಕೈವಶ ಮಾಡಿಕೊಳ್ಳಲಾಗದ್ದು ತಮ್ಮ ವೈಫಲ್ಯ ಎಂದು ಭಾವಿಸಿ ಕುಗ್ಗಿ, ಕೊರಗುತ್ತಿರುವ ವರ್ಗ ಇನ್ನೊಂದೆಡೆ. ಹಾಗಿದ್ದಲ್ಲಿ ಹೊಟ್ಟೆಯ ಹಿಟ್ಟಿನ ಸುತ್ತ ಕನ್ನಡದ ಕೆಲಸಗಳನ್ನು ಮಾಡಬೇಕಾದವರು ಯಾರು? ಸರ್ಕಾರವೇ? ಸಮುದಾಯವೇ? ಮಾರುಕಟ್ಟೆಯೇ?

ಈ ಪ್ರಶ್ನೆಗೆ ಸರಳ ಉತ್ತರವಿಲ್ಲ. ಇಲ್ಲಿ ಎಲ್ಲರದ್ದೂ ಪಾತ್ರವಿದೆ. ಆಡಳಿತ, ಶಿಕ್ಷಣದಂತಹ ವಿಷಯಗಳಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ, ಸಂಪನ್ಮೂಲ
ಇತ್ಯಾದಿಗಳಲ್ಲಿ ಸರ್ಕಾರದ ಪಾತ್ರವಿದೆ. ಹಾಗೆಯೇ  ಕನ್ನಡಕ್ಕೆ ಮಾರುಕಟ್ಟೆಯ ಸಾಧ್ಯತೆಗಳನ್ನು ತಂದುಕೊಳ್ಳುವಲ್ಲಿ ಜನಸಾಮಾನ್ಯರು ಗ್ರಾಹಕರಾಗಿ ತಮ್ಮ ಭಾಷಾ ಹಕ್ಕು ಗಳನ್ನು ಪ್ರಯೋಗಿಸುವ ಭಾಷಾ ಕೇಂದ್ರಿತ ಗ್ರಾಹಕ ಚಳವಳಿಯ ಪಾತ್ರವಿದೆ. ಇನ್ನೊಂದೆಡೆ ತಂತ್ರಜ್ಞಾನದ ಹಲವಾರು ಸಾಧ್ಯತೆಗಳನ್ನು ಸಮುದಾಯದ ಪಾಲ್ಗೊಳ್ಳುವಿಕೆಯ ನೆಲೆಯಲ್ಲಿ ತರಬಹುದಾದ್ದರಿಂದ ಅಲ್ಲಿ ಇಂಗ್ಲಿಷಿನ ಪ್ರಪಂಚದಲ್ಲಿ ಬಾಳಿ- ಬದುಕುತ್ತಿರುವ ಆದರೆ ಕನ್ನಡದಲ್ಲಿ ತಮ್ಮ ಬೇರು ಹೊಂದಿರುವ ಸಣ್ಣ ಎಣಿಕೆಯ ಕನ್ನಡಿಗರ ಪಾತ್ರವೂ ಇದೆ.

ಕನ್ನಡವನ್ನು ಜುಟ್ಟಿನ ಮಲ್ಲಿಗೆಗೆ ಕಟ್ಟಿ ಹಾಕಿರುವ ಜನರಲ್ಲಿ ಕನ್ನಡದ ಬಗ್ಗೆ ಹೊಸ ಕನಸುಗಳನ್ನು ಬಿತ್ತುವುದು ಹಾಗೂ ಕನ್ನಡದ ಕುರಿತು ಕೀಳರಿಮೆಯಲ್ಲಿ ನರಳುತ್ತಿರುವ ಒಂದು ದೊಡ್ಡ ವರ್ಗಕ್ಕೆ ಕನ್ನಡದ ಬಗ್ಗೆ ನಂಬಿಕೆಯನ್ನು ಹಂಚುವುದು ಈಗ ಆಗಬೇಕಿರುವ ತುರ್ತಿನ ಕೆಲಸ. ನಮ್ಮ ರಾಜಕೀಯ ಮತ್ತು ಆರ್ಥಿಕ ಮಾದರಿಗಳು, ನಮ್ಮ ಸಾಂಸ್ಕೃತಿಕ ಚರ್ಚೆಯ ಚೌಕಟ್ಟುಗಳನ್ನು ‘ಕನ್ನಡಿಗನ ಏಳಿಗೆ’ ಎಂಬ ನೆಲೆಯಲ್ಲಿ ಮರುರೂಪಿಸುವ ಕೆಲಸವಾದಲ್ಲಿ, ಅದಕ್ಕೊಂದು ಗಟ್ಟಿಯಾದ ತಾತ್ವಿಕತೆಯ ನೆಲೆಗಟ್ಟು ಒದಗಿದಲ್ಲಿ, ಒಂದೆರಡು ದಶಕಗಳಲ್ಲಿಯಾದರೂ ಬದಲಾವಣೆಯ ಗಾಳಿ ಬೀಸಬಹುದು. ಅಲ್ಲಿಯವರೆಗೂ ತೇಪೆ ಹಾಕುತ್ತ ಮುಂದುವರಿಯಬಹುದು. ಬೇರೆ ದಾರಿಗಳು ಇಲ್ಲವಲ್ಲ!

ಲೇಖಕ: ಐ.ಟಿ. ತಂತ್ರಜ್ಞ, ಕನ್ನಡಪರ ಕಾರ್ಯಕರ್ತ

ಪ್ರತಿಕ್ರಿಯಿಸಿ (+)