ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯವೆಂಬ ನಿತ್ಯ ಸಚಿವ ಮಂಡಲ

ಅಧಿಕಾರ ಎಂಬುದು ಧರಿಸುವ ಕಿರೀಟವಲ್ಲ, ಹಿಡಿಯುವ ಕಂದೀಲು
Last Updated 30 ಅಕ್ಟೋಬರ್ 2019, 4:07 IST
ಅಕ್ಷರ ಗಾತ್ರ

ಸಾಹಿತ್ಯಕ್ಕೂ ಪ್ರಭುತ್ವಕ್ಕೂ ಇರುವ ನಂಟು ಯಾವ ರೀತಿಯದು? ಸಾಹಿತಿಯು ಪ್ರಭುತ್ವದ ಜೊತೆಗೆ ನಂಟು ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇದೆಯೇ ಅಥವಾ ಸಾಹಿತಿಯು ಪ್ರಭುತ್ವದಿಂದ ಸದಾ ಮಾರುದೂರ ಓಡಬೇಕೇ? ಇದು ಸಾಹಿತ್ಯದ ಪ್ರಶ್ನೆಯೇ? ಸಾಹಿತಿಯ ಪ್ರಶ್ನೆಯೇ?

ಅರಸನ ಓಲಗದಲ್ಲಿ ‘ಆಸ್ಥಾನ ಕವಿ’ ಎಂಬ ಪದವಿ ಇತ್ತು. ಅವನಿಗೆ (‘ಅವಳಿಗೆ’ ಅವಕಾಶ ಇಲ್ಲದ್ದು ಅವಳ ಪುಣ್ಯವೇ ಇರಬೇಕು) ಅರಸನನ್ನು ಓಲೈಸಲೇಬೇಕಾದ ಕಷ್ಟ ಇದ್ದೇ ಇತ್ತು. ‘ಓಲೈಸಿ ಬಾಳ್ವುದು ಕಷ್ಟ ಇಳಾಧಿನಾಥರಾ’ಎಂಬ ಪಂಪನ ಮಾತು ಪ್ರಸಿದ್ಧವಾದುದು. ಇಂತಹ ಕಷ್ಟವೆಲ್ಲ ಬೇಡ ಅಂತಲೇ ಹರಿಹರನ ಕಾಲಾನಂತರದ ಕವಿಗಳು ದೇವಪ್ರಭುತ್ವ ಮನ್ನಿಸಿ, ರಾಜಪ್ರಭುತ್ವ ನಿರಾಕರಿಸಿದರು. ಆ ಪರಂಪರೆ ಕನ್ನಡದಲ್ಲಿ ಬಹಳ ದೊಡ್ಡದಿದೆ.

ಅದಿರಲಿ, ಆದರೆ ಅದಕ್ಕಿಂತ ಹಿಂದೆ ಮತ್ತು ಮುಂದೆ ಆಸ್ಥಾನ ಕವಿಗಳಂತೂ ಇದ್ದೇ ಇದ್ದರು. ಆದರೆ ಅವರೆಲ್ಲ ಎಲ್ಲಿ ಹೋದರು? ಅವರನ್ನೆಲ್ಲ ಇವತ್ತು ನಾವು ಓದುತ್ತಿಲ್ಲವೆಂದರೆ ಆ ಕೃತಿಗಳೆಲ್ಲ ಸಿಗುತ್ತಿಲ್ಲ ಎಂಬುದು ಮೂಲ ಕಾರಣವಲ್ಲ. ಆ ಕೃತಿಗಳಿಗೆ ಸತ್ವ ಇಲ್ಲದ್ದರಿಂದ ಆ ಕಾಲದಲ್ಲೇ ಜನರಿಂದ ಮರೆಯಾಗಿ ಹೋದವು. ಕುಮಾರವ್ಯಾಸನನ್ನು ಜನ ಮೌಖಿಕ ಪರಂಪರೆಯ ರೀತಿಯಲ್ಲಿ ಉಳಿಸಿಕೊಂಡಿದ್ದಕ್ಕಿಂತ ದೊಡ್ಡ ಉದಾಹರಣೆ ಇದಕ್ಕೆ ಬೇಕಿಲ್ಲ. ಅಂದರೆ, ರಾಜನ ಆಸ್ಥಾನದಲ್ಲಿ ಆಸ್ಥಾನ ಕವಿಯಾದರೆ, ಕೃತಿಗಳು ಓಲೆಗರಿಯಲ್ಲಿ ಗ್ರಂಥರೂಪ ತಾಳುವ ಅನುಕೂಲ, ಅವುಗಳ ಹಲವು ಪ್ರತಿಗಳು ಅಚ್ಚಾಗುವ ಅವಕಾಶ ಎಲ್ಲವೂ ಇರುತ್ತಿತ್ತು. ಉಳಿದವರಿಗೆ ಈ ಅನುಕೂಲಗಳು ಇರುತ್ತಿರಲಿಲ್ಲ. ತತ್ಕಾಲಕ್ಕೆ ಅವರಿಗೆ ಕವಿಗಳಾಗಿದ್ದ ಕಾರಣಕ್ಕೇ ಸಿಗಬಹುದಾಗಿದ್ದ ಮನ್ನಣೆ ಸಿಗುತ್ತಿತ್ತು ಎಂದು ಹೇಳಲಾಗುವುದಿಲ್ಲ. ವಚನಗಳನ್ನು ಆ ಕಾಲಕ್ಕೆ ಕಾವ್ಯ ಎಂದು ಪರಿಗಣಿಸಿಯೇ ಇರಲಿಲ್ಲವಾದರೂ ಅದು ಜನರ ನೆನಪಿನಿಂದ ನೂರಾರು ವರ್ಷಗಳ ನಂತರವೂ ಉಳಿದ ಉದಾಹರಣೆಯೂ ಮತ್ತು ಅದು ಪ್ರೌಢದೇವರಾಯನ ಕಾಲದಲ್ಲಿ ಸಂಗ್ರಹ ಮತ್ತು ಕಾಪಾಡುವಿಕೆಗೆ ಒಳಗಾಗಿದ್ದು ಕೂಡ ಇದನ್ನೇ ಹೇಳುತ್ತದೆ. ಅಲ್ಲಿಗೆ ಉತ್ಕೃಷ್ಟ ಸಾಹಿತ್ಯ ಸೃಷ್ಟಿಗೂ ಪ್ರಭುತ್ವಕ್ಕೂ ನೇರ ಸಂಬಂಧ ಇಲ್ಲ ಎಂಬುದು ಸ್ಪಷ್ಟ. ಆದರೆ ಅದನ್ನು ಕಾಪಿಡುವುದಕ್ಕೆ ಪ್ರಭುತ್ವ ಸಹಾಯ ಮಾಡಬಹುದು ಎಂಬುದೂ ಅದನ್ನು ನಾಶ ಮಾಡಬೇಕೆಂದು ಪ್ರಭುತ್ವ ಬಯಸಿದರೆ ಅದು ಆ ಕೆಲಸಕ್ಕೆ ಕೈಹಾಕಿಯೇ ಹಾಕುತ್ತದೆ ಎಂಬುದೂ ಅಷ್ಟೇ ಸ್ಪಷ್ಟ. ಆಶ್ಚರ್ಯ! ಪ್ರಭುತ್ವದ ಬುಲ್‍ಡೋಜರ್ ಕೆಳಗೆ ಕೆಲವೊಮ್ಮೆ ಗರಿಕೆಗಳು ಜೀವ ಉಳಿಸಿಕೊಂಡು ಸೂರ್ಯನನ್ನು ನೋಡಿ ನಗುತ್ತವೆ.

ಗರಿಕೆ ಎಂದಾಗ ನೆನಪಾಗುತ್ತದೆ. ‘ದೊಡ್ಡವರ ಕಣ್ಣಿಗೆ ಬೀಳದೆ ಬದುಕಬೇಕು’ ಎಂಬುದೊಂದು ಗಾದೆ ಮಾತು. ಜನಪದರ ಅನುಭವದಿಂದ ಹುಟ್ಟಿದ ಮಾತು. ಆದರೇನು? ಇಂದಿನ ಪ್ರಚಾರ ಯುಗದಲ್ಲಿ ಎಷ್ಟು ಸಾಧ್ಯವೋ ಅಷ್ಟು ‘ಕಣ್ಣಿಗೆ’ ಬೀಳಬೇಕೆಂಬುದು ಮೌಲ್ಯ. ಇಲ್ಲದೇ ಹೋದರೆ ಅದು ಪೆದ್ದುತನ. ಇರಬಹುದೇನೋ, ಯಾರಿಗೆ ಗೊತ್ತು– ಕಾಲನಿಯಮ. ಆದರೆ ಸ್ವಾಭಿಮಾನ ಕಳೆದುಕೊಂಡು ಕಣ್ಣಿಗೆ ಬೀಳಬೇಕಾದ ಅವಶ್ಯಕತೆ ಖಂಡಿತಾ ಇಲ್ಲ. ಈ ಕಾಲದಲ್ಲೂ ಯಾವುದೇ ವಶೀಲಿಬಾಜಿ ಇಲ್ಲದೆ ಘನತರವಾದ ಸಾಹಿತ್ಯ ರಚಿಸುತ್ತಾ ಜನರ ಗಮನ ಸೆಳೆಯುತ್ತಿರುವ, ತೀರಾ ನಕ್ಷತ್ರಗಳಂತೆ ಹೊಳೆಯದಿದ್ದರೂ ಹಣತೆಯಂತೆ ಬೆಳಗುತ್ತಿರುವ ನೂರಾರು ಸಾಹಿತಿಗಳು ನಮ್ಮ ನಡುವೆ ಇದ್ದಾರೆ. ಆ ಬಗ್ಗೆ ಸಂಶಯ ಇಲ್ಲ.

ನಿಜವಾಗಿಯೂ ಆಗಬೇಕಾದ್ದೇನು? ಪ್ರಭುತ್ವವೇ ಸಾಹಿತ್ಯದ ಸಹಾಯ ಪಡೆಯಬೇಕೇ ಹೊರತು, ಸಾಹಿತಿ ಪ್ರಭು
ತ್ವದ ಬಳಿ ಹೋಗಬೇಕಾಗಿಲ್ಲ. ಅನುಭವದ ಗಟ್ಟಿ ದ್ರವ್ಯವುಳ್ಳ, ದಿಟ್ಟ ಮತ್ತು ಖಚಿತ ನಿಲುವಿರುವ ಸಾಹಿತಿಯಿಂದ ರಚಿತವಾದ ಸಾಹಿತ್ಯಕ್ಕೆ ದಾರ್ಶನಿಕತೆಯ ಸ್ವರೂಪ ತಾನೇ ತಾನಾಗಿ ಒದಗಿರುತ್ತದೆ. ಅಲ್ಲಿ ಸಾಹಿತಿ ಮುಖ್ಯವಾಗದೇ ಸಾಹಿತ್ಯ ಮುಖ್ಯವಾಗಿರುತ್ತದೆ. ಅದು ಕಾಲದಿಂದ ಕಾಲಕ್ಕೆ ಬದಲಾದ ಸನ್ನಿವೇಶದಲ್ಲೂ ಹೊಸ ಹುಟ್ಟು ಪಡೆಯುತ್ತಲೇ ಇರುತ್ತದೆ. ಇದನ್ನು ಯಾರು ಹೇಳಿದರು ಎಂಬುದಕ್ಕಿಂತಲೂ ಏನು ಹೇಳುತ್ತಿದ್ದಾರೆ ಎಂಬುದೇ ಮುಖ್ಯವಾಗುತ್ತದೆ. ಇಂತಹ ಸಾಹಿತ್ಯದ ಧ್ವನಿಗೆ ಕಿವಿಗೊಡುವ ಕೆಲಸವನ್ನು ಪ್ರಭುತ್ವ ಮಾಡಬೇಕು. ಅದು ಅದರ ಆಡಳಿತವನ್ನು ಇನ್ನಷ್ಟು ಕುಶಲವೂ, ಜೀವಪರವೂ ಆಗುವಂತೆ ಮಾಡುವುದಕ್ಕೆ ಪೂರಕವಾಗಿರುತ್ತದೆ. ಸಾಹಿತ್ಯದ ಮಾತುಗಳು ಕಟುವಾಗಿ ಕೇಳಿಸಿದರೂ ಅದನ್ನು ವ್ಯಕ್ತಿಗತವಾಗಿ ಪರಿಭಾವಿಸದೆ ಲೋಕದೃಷ್ಟಿಯಾಗಿ ಸ್ವೀಕರಿಸಿದರೆ, ಆಗ ಜೀವಸಂಕುಲದ ಒಳಿತಿಗಾಗಿ ಸಿಕ್ಕಿದ ಅಪೂರ್ವ ಅವಕಾಶವನ್ನು ಪ್ರಭುತ್ವ ಸಾರ್ಥಕ ಮಾಡಿಕೊಂಡಂತಾಗುತ್ತದೆ.

ಆದರೆ, ಇಂತಹ ಮಾತುಗಳಿಗೆ ಪ್ರಭುತ್ವ ಸದಾ ಕಿವುಡಾಗಿಯೇ ಇರುತ್ತದೆ. ಈ ಮಾತುಗಳು ಅದಕ್ಕೆ ಹಾಸ್ಯಾಸ್ಪದ ಎನಿಸುತ್ತವೆ. ಅಧಿಕಾರವೆಂದರೆ ಕಿರೀಟ ಎಂದು ಭಾವಿಸುವ ಮನಸ್ಸುಗಳೇ ಸುತ್ತ ಅಡರಿಕೊಂಡಿರುವಾಗ, ಅಧಿಕಾರವು ಕಂದೀಲು ಕೂಡಾ ಆಗಬಹುದು ಎಂಬ ದಿಟ ಮರೆಗೆ ಸರಿಯುತ್ತದೆ. ಒಂದು ಉದಾಹರಣೆ ನೋಡೋಣ: ಅರ್ಧ ಶತಮಾನಕ್ಕೂ ಹಿಂದೆಯೇ ಕುವೆಂಪು ಬರೆದ ‘ಧನ್ವಂತರಿಯ ಚಿಕಿತ್ಸೆ’ ಎಂಬ ಕತೆ ಮತ್ತು ಬೇಂದ್ರೆ ಬರೆದ ‘ಭೂಮಿ ತಾಯಿಯ ಚೊಚ್ಚಿಲ ಮಗ’ ಕವಿತೆಯು ರೈತನೆಡೆಗೆ ಪ್ರಭುತ್ವಗಳು ಹರಿಸಬೇಕಾದ ದೃಷ್ಟಿ ಯಾವುದು ಎಂಬುದನ್ನೂ, ಇಲ್ಲದೇ ಹೋದಲ್ಲಿ ಆಗಬಹುದಾದ ಅಪಾಯವನ್ನೂ ಹೇಳುತ್ತವೆ. ಪ್ರಭುತ್ವ ಕಿವಿಗೊಡಲಿಲ್ಲ. ಅವರು ಹೇಳಿದ್ದ ಅಪಾಯ ನಿಜವೇ ಆಗಿ, ಇಂದು ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಷ್ಟೆಲ್ಲಾ ನಿರೀಕ್ಷೆ ತುಟ್ಟಿಯಾದುದು ಬಿಡಿ. ಜಗತ್ತಿನಾದ್ಯಂತ, ಪ್ರಭುತ್ವಗಳು ವಾಸ್ತವದ ಕಟು ಸತ್ಯಗಳನ್ನು ಹೇಳುವವರನ್ನು ಶತ್ರುಗಳೆಂದು ಬಗೆದಿವೆಯೇ ಹೊರತು ದಾರ್ಶನಿಕರೆಂದಲ್ಲ. ನಾಝಿ ರಾಷ್ಟ್ರೀಯತೆಯನ್ನು ವಿರೋಧಿಸಿ ಬರೆದಿದ್ದಕ್ಕೆ ಜರ್ಮನಿಯ ಥಾಮಸ್ ಮನ್, ಶಾಂತಿಪ್ರಿಯತೆಯನ್ನು ಹೇಳಿದ್ದಕ್ಕೆ ಇಂಗ್ಲೆಂಡಿನ ಡಿ.ಎಚ್.ಲಾರೆನ್ಸ್, ನೆಪೋಲಿಯನ್‍ನನ್ನು ಟೀಕಿಸಿದ್ದಕ್ಕೆ ವಿಕ್ಟರ್ ಹ್ಯೂಗೋ, ಪ್ರವಾದಿಯೊಬ್ಬರನ್ನು ಹೋಲುವ ಪಾತ್ರವನ್ನು ಕಾದಂಬರಿಯಲ್ಲಿ ಸೃಷ್ಟಿಸಿದ್ದಕ್ಕೆ ಸಲ್ಮಾನ್ ರಶ್ದಿ, ಹಿಂದೂ ಅಲ್ಪಸಂಖ್ಯಾತರ ಪರ ಧ್ವನಿ ಎತ್ತಿದ್ದಕ್ಕೆ ಬಾಂಗ್ಲಾದ ತಸ್ಲಿಮಾ ನಸ್ರೀನ್ ಮೊದಲಾದ ಅನೇಕ ಲೇಖಕರು, ಕಲಾವಿದ ಚಾರ್ಲಿ ಚಾಪ್ಲಿನ್, ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್‌ ಇನ್ನೂ ಹಲವರು ಗಡಿಪಾರಿಗೆ ಒಳಗಾಗಿದ್ದಾರೆ. ಗ್ರಾಂಶಿಯಂಥ ಚಿಂತಕರು ಇಟಲಿಯ ಜೈಲುಗಳಲ್ಲಿ ಕೊನೆಯಾಗಿದ್ದಾರೆ. ನಮ್ಮ ನೆಲದಲ್ಲೇ ಶರಣರು, ಬೌದ್ಧರು ಇದನ್ನು ಎದುರಿಸಿದವರೇ. ಈ ದಶಕದಲ್ಲಿ ಹಲವರ ಕೊಲೆಯೂ ಆಗಿಹೋಗಿದೆ. ಇಲ್ಲಿ ಪ್ರಭುತ್ವ ಕೆಲವೊಮ್ಮೆ ನೇರವಾಗಿ, ಇನ್ನು ಕೆಲವೊಮ್ಮೆ ಸಾಮಾಜಿಕ, ಸಾಂಸ್ಕೃತಿಕ ಯಜಮಾನಿಕೆಯ ರೂಪದಲ್ಲಿ ಭಾಗಿಯಾಗಿರುತ್ತದೆ. ಹೀಗಿದ್ದೂ ಅವರು ವಿರೋಧಿಸಿದ ಪ್ರಭುತ್ವಗಳು ಅಳಿದಿವೆ. ಆದರೆ ಅವರ ವಿಚಾರಗಳು ಅಳಿದಿಲ್ಲ ಎಂಬುದರ ಹಿಂದಿನ ಸೂಚನೆಯನ್ನು ನಾವು ಈಗಲೂ ಅರಿತಂತೆ ಕಾಣುತ್ತಿಲ್ಲ– ಕೆಲವು ಸಾಹಿತಿಗಳನ್ನೂ ಸೇರಿಸಿಕೊಂಡಂತೆ. ಪುಟ್ಟ ಪೊಟ್ಟಣದೊಳಗಿರುವ ಕಡ್ಡಿ ತಾನು ಉರಿದು ದೀಪ ಹಚ್ಚುವ ಕೆಲಸವನ್ನೇ ಮಾಡುತ್ತದೆಂದು ಹೇಳಲಾಗದು. ಅದು ಮಾನವತೆಯ ಗುಡಿಸಲುಗಳಿಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುವ ಸಾಧ್ಯತೆಯೂ ಇರುತ್ತದೆ. ಅಂತಲ್ಲಿ ಕೇವಲ ಪ್ರಭುತ್ವಗಳನ್ನು ದೂರಿ ಪ್ರಯೋಜನವಿಲ್ಲ.

ಈ ಸಂದರ್ಭದಲ್ಲಿ ಪಿ. ಲಂಕೇಶ್ ಅವರು ಹೇಳಿದ ಮಾತುಗಳು ನೆನಪಾಗುತ್ತಿವೆ: ‘ಪ್ರತಿಭೆ, ವೈಚಾರಿಕತೆಯ ಒಗ್ಗಟ್ಟಿನಿಂದ ಚುನಾಯಿತ ಸರ್ಕಾರಗಳ ಮೇಲೆ ನೈತಿಕ, ಕ್ರಿಯಾಶೀಲ ಒತ್ತಡ ತರಬಲ್ಲ ಛಾತಿ ಪಡೆಯುವುದಾದರೆ, (ಸಾಹಿತ್ಯ) ಪರಿಷತ್ತು ಬೇಕು’. ಹೌದು, ಆಗ ಕುವೆಂಪು ಹೇಳಿದ್ದನ್ನು ಸ್ವಲ್ಪ ತಿದ್ದಿ ಹೇಳುವುದಾದರೆ, ಸಾಹಿತ್ಯವೆಂಬುದೇ ನಿತ್ಯ ಸಚಿವಮಂಡಲವಾಗುತ್ತದೆ.

ಲೇಖಕಿ: ಕನ್ನಡ ಪ್ರಾಧ್ಯಾಪಕಿ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT