ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಕೃಷಿ ಆಸಕ್ತರಿಗೆ ಭೂಮಿ ಕೊಡಬಾರದೇಕೇ?

Last Updated 19 ಜೂನ್ 2020, 19:30 IST
ಅಕ್ಷರ ಗಾತ್ರ

ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಯ ಪರ, ವಿರೋಧ ಚರ್ಚೆಗಳು ಬಿರುಸಿನಿಂದ ಸಾಗಿರುವ ಸಂದರ್ಭದಲ್ಲಿ ನಾವು ಕೆಲವು ಮುಖ್ಯ ಪ್ರಶ್ನೆಗಳನ್ನು ಬದಿಗೆ ಸರಿಸುತ್ತಿದ್ದೇವೆ. ಇಂದು ರೈತ ನೇಗಿಲಯೋಗಿಯಾಗಿ ಉಳಿದಿದ್ದಾನೆಯೇ? ತನ್ನಲ್ಲಿರುವ ಕೃಷಿಯೋಗ್ಯ ಭೂಮಿಯನ್ನು ರೈತ ಎಷ್ಟು ಸಮರ್ಥವಾಗಿ ಹೂಡುತ್ತಿದ್ದಾನೆ? ರೈತ ನಿಜಕ್ಕೂ ತಾನು ಆದರ್ಶ ರೈತನಾಗಿಯೇ ಉಳಿಯಲು ಒಂದು
ವರ್ಗಸಂಘರ್ಷದ ಹೋರಾಟವನ್ನು ನಡೆಸಿದ್ದಾನೆಯೇ? ದೇಶದಲ್ಲಿ ಇಂದು ಇರುವ ಒಟ್ಟು ಕೃಷಿಭೂಮಿಯಿಂದ ನಾವು ಮುಂದಿನ ದಶಕಗಳಲ್ಲಿ ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳುತ್ತೇವೆಯೇ?

ಹಂತಹಂತವಾಗಿ ಜಾರಿಯಾದ ಭೂಸುಧಾರಣೆಗಳು, ಹಸಿರುಕ್ರಾಂತಿ, ಔದ್ಯೋಗೀಕರಣ, ನಗರೀಕರಣ, ಆಧುನೀಕರಣ, ಜಾಗತೀಕರಣ ಮುಂತಾದ ಪ್ರಕ್ರಿಯೆಗಳು ರೈತ ಮತ್ತು ಭೂಮಿಯ ಸಂಬಂಧವನ್ನು ಬದಲಿಸುತ್ತಾ ಬಂದಿವೆ.

ಜಾಗತೀಕರಣದ ಪ್ರಕ್ರಿಯೆಗಳಂತೂ ರೈತನ ಕ್ರಿಯಾಶೀಲತೆ, ಹಕ್ಕುಸ್ವಾಮ್ಯ ಮತ್ತು ಸಾರ್ವಭೌಮತ್ವವನ್ನೇ ಕಸಿದುಕೊಂಡು, ಕೃಷಿಯ ಎಲ್ಲ ಒಳಸುರಿಗಳಿಗೆ ಮತ್ತು ಮಾರುಕಟ್ಟೆಗಳಿಗೆ ಆತ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳನ್ನು ಅವಲಂಬಿಸಬೇಕಿದೆ. ಇಂಥಾ ಪರಿಸ್ಥಿತಿಯಲ್ಲಿ ರೈತ ಮತ್ತು ಅವನ ಕುಟುಂಬ ನಿಜಕ್ಕೂ ಆ ಆದರ್ಶ ನೇಗಿಲಯೋಗಿಯಾಗಿ ಉಳಿಯಲು ಸಾಧ್ಯವೇ ಇಲ್ಲ.

ಕೃಷಿ ವೆಚ್ಚದಲ್ಲಿ ಏರಿಕೆ, ವೈಜ್ಞಾನಿಕ ಬೆಲೆಗಳಿಲ್ಲದಿರುವುದು, ಭೂಮಿಯ ಸಾರಹೀನತೆ, ಕೃಷಿಕೂಲಿ ಕಾರ್ಮಿಕರ ಅಭಾವ, ಹವಾಮಾನ ವೈಪರೀತ್ಯ ಮತ್ತು ದಾಸ್ತಾನು ಅಸೌಕರ್ಯಗಳಿಂದ ಬೆಳೆ ನಷ್ಟ, ಸಾಲಬಾಧೆ ಇವೆಲ್ಲ ಎಲ್ಲ ರೈತರನ್ನು ಕಾಡುತ್ತಿವೆ. ಅದರ ಜೊತೆಗೆ ಕರ್ನಾಟಕದ ವಿವಿಧ ಭೌಗೋಳಿಕ ಮೇಲ್ಮೈ ಭಾಗಗಳ ರೈತರು ಅವರವರದೇ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ.

ಮಲೆನಾಡ ರೈತರು ಮಾನವ-ವನ್ಯಜೀವಿ ಸಂಘರ್ಷದಲ್ಲಿ ಹೈರಾಣಾಗಿದ್ದರೆ, ಒಳನಾಡಿನ ಕಾಲುವೆ ನೀರಾವರಿ ಸೌಕರ್ಯವುಳ್ಳ ರೈತರ ತುಂಡುಗಳು ಜೌಗು ಹಿಡಿದು ಹೋಗಿವೆ. ಜೊತೆಗೆ ಅವರು ವಾಣಿಜ್ಯ ಬೆಳೆಗಳನ್ನೇ ಹೆಚ್ಚು ಬೆಳೆಯುತ್ತಾ, ಆಹಾರ ಬೆಳೆಗಳನ್ನು ಅಲ್ಪ ವಿಸ್ತೀರ್ಣದಲ್ಲಿ ಬೆಳೆಯುತ್ತಾ ಸ್ವಾತಂತ್ರ್ಯಾನಂತರ ಆಹಾರ ಭದ್ರತೆಯಉದ್ದೇಶದಿಂದ ರಾಷ್ಟ್ರ ಹಮ್ಮಿಕೊಂಡ ನೀರಾವರಿ ಯೋಜನೆಗಳ ಆಶಯಗಳನ್ನೇ ಬುಡಮೇಲು ಮಾಡುತ್ತಿದ್ದಾರೆ. ಇನ್ನು ಒಣಭೂಮಿ ಮತ್ತು ಮಳೆಯಾಶ್ರಿತ ರೈತರು ತಾವೂ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಆಸೆಯಿಂದ ಕಾಲುವೆ ನೀರಾವರಿಯನ್ನು ತಮಗೂ ವಿಸ್ತರಿಸಿ ಎಂದು ಆಗ್ರಹಿಸುತ್ತಿದ್ದಾರೆ.

ಬಹುತೇಕ ಎಲ್ಲ ಬಗೆಯ ರೈತರೂ ಒಂದಲ್ಲ ಒಂದು ರೀತಿಯಲ್ಲಿ ಐಚ್ಛಿಕವಾಗಿಯೋ, ಅನಿವಾರ್ಯವಾಗಿಯೋ ನೈಸರ್ಗಿಕ ನಿಯಮಗಳಿಗೆ ವಿರುದ್ಧವಾಗಿಯೇ ತೊಡಗಿಕೊಂಡ ಜಾಗತಿಕ ಕೃಷಿ ಮಾದರಿಗಳ ಭಾಗವಾಗಿದ್ದಾರೆ. ಜನರಿಗೆ ವಿಷಭರಿತ ಆಹಾರವನ್ನು ಉಣಿಸುವತ್ತಲೂ, ದೇಶದ ಪರಿಸರ ಸಮತೋಲನವನ್ನು ಕುಂಠಿತಗೊಳಿಸುವತ್ತಲೂ ತಮ್ಮ ಕೊಡುಗೆಯನ್ನೂ ಕೊಡುತ್ತಿದ್ದಾರೆ.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಿ, ಕೃಷಿಯನ್ನು ಆದರ್ಶ ಮತ್ತು ಲಾಭದಾಯಕವಾದ ಆಸಕ್ತಿ ಕ್ಷೇತ್ರವನ್ನಾಗಿಸುವ ನೀತಿಗಳ ರಚನೆ ಮತ್ತು ಅನುಷ್ಠಾನ ಮಾಡುವ ಮನಸ್ಸು ಆಡಳಿತವರ್ಗದಲ್ಲಿ ಇತ್ತೀಚಿನ ದಶಕಗಳಲ್ಲಿ ಕಾಣುತ್ತಿಲ್ಲ. ಜಾಗತೀಕರಣ, ಖಾಸಗೀಕರಣ ಮತ್ತು ನವ ಉದಾರೀಕರಣದ ಹಿನ್ನೆಲೆಯಲ್ಲಿ ದೇಶದೊಳಗಿನ ಉತ್ಪಾದನೆ ದೇಶದ ಜನರ ಪೂರೈಕೆಗಾಗಿ ಎನ್ನುವುದಕ್ಕಿಂತ ರಫ್ತಿನ ಮೂಲಕ ವಿದೇಶೀ ವಿನಿಮಯ ಗಳಿಸುವುದಕ್ಕಾಗಿ ಎನ್ನುವುದು ಆದ್ಯತೆಯಾಗುತ್ತಿದೆ.

ಕೃಷಿ ಉತ್ಪನ್ನಗಳೂ ಸೇರಿದಂತೆ ರಫ್ತು ಯೋಗ್ಯ ಉತ್ಪನ್ನಗಳ ಕೃಷಿ, ಕೈಗಾರಿಕೀಕರಣ ಮತ್ತು ಸೇವಾಕ್ಷೇತ್ರಗಳ ವಿಸ್ತರಣೆಗಳಿಗೆ ಭೂಮಿಯ ಬೇಡಿಕೆಯನ್ನು ಪೂರೈಸುವುದು ಇಂದಿನ ನೀತಿಗಳ ಉದ್ದೇಶ. ಈ ಬೇಡಿಕೆಗಳಿಗೆ ಭೂಮಿ ಒಂದು

ವಿಸ್ತರಿಸಲಾಗದ, ಹಾಗಾಗಿ ಬೆಲೆ ಕಟ್ಟಲಾಗದ ಸಂಪತ್ತು. ಆದರೆ ಅದನ್ನು ಹೊಂದಿರುವ ರೈತಾಪಿ ವರ್ಗ ಆಡಳಿತಕ್ಕೆ ಒಂದು ಹೊರೆ. ಈ ನಿರುತ್ತೇಜಕ ಸನ್ನಿವೇಶದಲ್ಲಿ ರೈತ ಕುಟುಂಬಗಳ ಮುಂದಿನ ಪೀಳಿಗೆಗಳು ಭೂಮಿಯನ್ನೂ ಕೃಷಿಯನ್ನೂ ನಂಬಿ ಬದುಕು ಕಟ್ಟಿಕೊಳ್ಳಲಾರವು.

ರೈತ ಮಕ್ಕಳಿಗೆ ಆಸಕ್ತಿ ಇಲ್ಲದಿರುವುದು ಇರಲಿ, ಅವರ ತಂದೆತಾಯಿಯರಿಗೇ ಮಕ್ಕಳನ್ನು ಕೃಷಿಗೆ ಬಿಡಲು ಆಸಕ್ತಿಯಿಲ್ಲ. ಮಾಲೀಕರಲ್ಲಿನ ದೊಡ್ಡ ವರ್ಗವು ಈ ತಿದ್ದುಪಡಿಗಳನ್ನು ಅನುಮೋದಿಸುತ್ತಾ, ತಮಗೂ ಹೊರೆಯೇ ಆಗಿರುವ ಭೂಮಿಒಂದು ಅತ್ಯುತ್ತಮ ಬೆಲೆಗೆ ಬಿಕರಿಯಾದರೆ ಸಾಕು ಎಂದು ನಿಟ್ಟುಸಿರು ಬಿಡುತ್ತಿದೆ.

ಹಾಗಾದರೆ ಮುಂದಿನ ಪೀಳಿಗೆಗಳಲ್ಲಿ ಕೃಷಿಯಲ್ಲಿ ತೊಡಗುವವರು ಯಾರು? ರೈತಾಪಿ ಕುಟುಂಬಗಳಿಗೇ ಕೃಷಿಯಲ್ಲಿ ಆಸಕ್ತಿಯಿಲ್ಲದ ವಾತಾವರಣದಲ್ಲಿ ಅವರಲ್ಲೇ ಕೃಷಿಭೂಮಿ ಉಳಿಯಬೇಕೇ ಎನ್ನುವ ಮುಖ್ಯಪ್ರಶ್ನೆ ಹುಟ್ಟುತ್ತದೆ. ಅದಕ್ಕೆ ಉತ್ತರವಾಗಿ ಕೃಷಿಯಲ್ಲಿ ಆಸಕ್ತಿಯಿರುವವರು ಭೂಮಿ ಕೊಂಡು ಆರಂಭ ಮಾಡಲಿ ಎನ್ನುವ ಉದ್ದೇಶವೇ ಈ ತಿದ್ದುಪಡಿಯ ಆಶಯ ಎಂದು ಸರ್ಕಾರ ಹೇಳುತ್ತಿದೆ. ಆದರೆ ಮೇಲೆ ತಿಳಿಸಿದಂತಹ ಆದ್ಯತೆಗಳಿಗೆ ಪೂರಕವಾಗುವಂತಹ ನೀತಿ ಬದಲಾವಣೆಗಳ ಹಿನ್ನೆಲೆಯಲ್ಲಿ, ಯಾವ ಕೋನದಿಂದ ನೋಡಿದರೂ ಇದೇ ಆಶಯ ಸರ್ಕಾರಕ್ಕಿದೆ ಎಂದರೆ ಯಾರೂ ನಂಬರು.

ದೊಡ್ಡ ಸಂಖ್ಯೆಯಲ್ಲಿ ಜನರನ್ನು ಕೃಷಿಯಿಂದ ಹೊರದಬ್ಬುವುದೇ ಈ ನೀತಿಗಳ, ಅವುಗಳ ತಿದ್ದುಪಡಿಗಳ ಆಶಯ ಎನ್ನುವುದು ಈಗ ಗುಪ್ತವಾಗೇನೂ ಉಳಿದಿಲ್ಲ. ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ದೀರ್ಘಕಾಲದ ನಿರ್ದೇಶನದಂತೆ ಕಾರ್ಪೊರೇಟ್ ವಲಯಗಳಿಗೆ ಭೂಮಿಯ ಹಕ್ಕನ್ನು ಪರಭಾರೆ ಮಾಡಲು ಅನುಕೂಲವಾಗುವಂತಹ ನೀತಿಗಳು ಈಗ ತ್ವರಿತಗತಿಯಲ್ಲಿ ನಮ್ಮ ಆಡಳಿತದಲ್ಲಿ ಬಂದು ಕೂರುತ್ತಿವೆ. ಪ್ರಸ್ತುತ ಈ ಭೂಸುಧಾರಣೆಗೆ ತಿದ್ದುಪಡಿ ತರುವ ವಿಷಯದಲ್ಲಿ ಎದ್ದಿರುವ ಪರ, ವಿರೋಧ ಚರ್ಚೆಗಳು ಅವರವರ ಭಾವಕ್ಕೆ, ಅವರವರ ಭೂಹಂಚಿಕೆ ರಾಜಕೀಯಕ್ಕೆ ತಕ್ಕಂತೆ ನಡೆಯುತ್ತಿವೆ ಎನ್ನುವುದನ್ನು ಗಮನಿಸಬೇಕು. ಉದ್ಯಮಿಗಳು ತಿದ್ದುಪಡಿಯ ಪರವಾಗಿದ್ದರೆ, ರೈತ ಸಂಘಟನೆಗಳು ಮತ್ತು ಅವರ ಬೆಂಬಲಿಗರು ವಿರೋಧವಾಗಿದ್ದು ಅವರವರ ನಿಗದಿತ ‘ಘೋಷ ಕೋಣೆ’ಗಳಲ್ಲಿ ಕುಳಿತು ಮಾತಾಡುತ್ತಿದ್ದಾರೆ.

ದೇಶದ ಸಂವಿಧಾನದ ಆಶಯಗಳಿಗೆ ಧಕ್ಕೆ ತರದಂತಹ ಆರ್ಥಿಕ, ಆಹಾರ ಮತ್ತು ಪರಿಸರ ಭದ್ರತೆ, ಜೈವಿಕ ಮತ್ತು ಆರ್ಥಿಕ ಸಾರ್ವಭೌಮತ್ವಗಳನ್ನು ಒಳಗೊಂಡ ಸಮಗ್ರ ಚಿಂತನೆಯೊಂದಿಗೆ ಆಗಬೇಕಿರುವಷ್ಟು ಮಟ್ಟದಲ್ಲಿ ಈ ಚರ್ಚೆಗಳು ಆಗುತ್ತಿಲ್ಲ.

ಸಾಮಾಜಿಕ, ಕೃಷಿಕ ಮತ್ತು ಪರಿಸರ ನೈತಿಕತೆಯನ್ನು ಬೇಕಿರುವ ಮಟ್ಟದಲ್ಲಿ ಪ್ರದರ್ಶಿಸಲಾಗದೆ, ನಷ್ಟದಲ್ಲೇ ಕೃಷಿ ಮಾಡುತ್ತಾ, ಇಡೀ ಕ್ಷೇತ್ರವನ್ನೇ ನಿರಾಶಾದಾಯಕ ಎಂದು ಸಾಬೀತು ಮಾಡಿರುವ ಈಗಿನ ಉತ್ಪಾದಕ ಪೀಳಿಗೆಯ ಕೈಯಲ್ಲೇ ಕೃಷಿಭೂಮಿ ಉಳಿಯಬೇಕೇ? ಆಪ್ಯಾಯತೆಯಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಕೈಗಳಿಗೆ ಕೃಷಿಭೂಮಿ ಹಸ್ತಾಂತರವಾಗಬಾರದೇಕೇ? ಅಂಥವರನ್ನು ಹೇಗೆ ಗುರುತಿಸುವುದು? ಕೃಷಿಯಿಂದ ನಿರ್ಗಮಿಸಿದ ಜನಸಮೂಹಕ್ಕೆ ಪರ್ಯಾಯಗಳೇನು? ಈ ಪ್ರಶ್ನೆಗಳು ದೇಶದ ಸರ್ವತೋಮುಖ ಪ್ರಗತಿಯ ದೂರದೃಷ್ಟಿಯಿಂದ ಅತ್ಯಂತ ಸಮಂಜಸ ಎನಿಸಬಹುದು.

ಸಂಬಂಧಿಸಿದ ಯಾವ ವರ್ಗಕ್ಕೂ ಈ ಪ್ರಶ್ನೆಗಳೇ ಬೇಡವೆನಿಸುವ ಖಾಸಗೀಕರಣದ ನಾಗಾಲೋಟದಲ್ಲಿ ನಾವಿದ್ದೇವೆ. ಹಾಗಲ್ಲದಿದ್ದರೆ ಮತ್ತು ಹೇಳಿರುವ ಉದ್ದೇಶಗಳಿಗೆ ಹೊರತಾದ ಇನ್ನಾವ ಉದ್ದೇಶಗಳೂ ಇಲ್ಲದಿದ್ದರೆ ದೀರ್ಘಕಾಲದಲ್ಲಿ ಮಹತ್ವದ ಪರಿಣಾಮಗಳನ್ನು ಉಂಟುಮಾಡಬಲ್ಲ ನೀತಿಗೆ ತಿದ್ದುಪಡಿಗಳನ್ನು ಸುಗ್ರೀವಾಜ್ಞೆಯ ಮೂಲಕ ತರುವ ಅಗತ್ಯ ಇಲ್ಲ. ಬದಲಿಗೆ ಸಾಕಷ್ಟು ಸಮಯ ತೆಗೆದುಕೊಂಡು ತಜ್ಞರಲ್ಲಿ ಮತ್ತು ವಿಧಾನಮಂಡಲದಲ್ಲಿ ಸುದೀರ್ಘವಾಗಿ ಚರ್ಚಿಸಿ ತರುವ ಮುತ್ಸದ್ದಿತನವನ್ನು ತೋರಬೇಕಾಗುತ್ತದೆ.

ಲೇಖಕ: ಕೃಷಿಪರ ಚಿಂತಕ, ಸಿನಿಮಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT