ಭಾಷಾಪ್ರೇಮ ಮತ್ತು ಭವಿಷ್ಯದ ತುಡಿತ

ಭಾನುವಾರ, ಜೂಲೈ 21, 2019
25 °C
ಮನೆಮಾತು ಬದಿಗಿಟ್ಟು ಭವಿಷ್ಯ ಅರಸಬೇಕಾದ ಅನಿವಾರ್ಯ ಗಡಿ ಕನ್ನಡಿಗರದು

ಭಾಷಾಪ್ರೇಮ ಮತ್ತು ಭವಿಷ್ಯದ ತುಡಿತ

Published:
Updated:
Prajavani

ಕರ್ನಾಟಕದಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿರುವುದಕ್ಕೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯ ಎಷ್ಟು ಕಾರಣವೋ ಪೋಷಕರ ಇಂಗ್ಲಿಷ್‌ ವ್ಯಾಮೋಹವೂ ಅಷ್ಟೇ ಕಾರಣ. ಇಂಗ್ಲಿಷ್‌ ಮಾಧ್ಯಮವಷ್ಟೇ ತಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ನೀಡಬಲ್ಲದು ಎಂಬ ನಂಬಿಕೆ ಸಾರ್ವತ್ರಿಕವಾಗಿರುವ ಈ ಹೊತ್ತಿನಲ್ಲಿ, ಬಿಸಿಯೂಟದಂತಹ ಮಹತ್ವದ ಯೋಜನೆಗಳು ಸಹ ಮಕ್ಕಳನ್ನು ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳತ್ತ ಸೆಳೆಯಲು ವಿಫಲವಾಗುತ್ತಿವೆ. ಹೀಗಾಗಿ, ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಿ ಆ ಶಾಲೆಗಳನ್ನು ಉಳಿಸಿಕೊಳ್ಳಲು ಇಲ್ಲಿನ ಸರ್ಕಾರ ಮುಂದಾಗಿದೆ. ಹೀಗೆ ತನ್ನ ನೆಲದಲ್ಲೇ ಕನ್ನಡ ಶಾಲೆಗಳಿಗೆ ಒದಗಿರುವ ದುರ್ಗತಿ ಇದಾದರೆ, ಅತ್ತ ಮಹಾರಾಷ್ಟ್ರದ ಗಡಿ ಭಾಗದಲ್ಲೂ ಕನ್ನಡ ಶಾಲೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ, ಅದಕ್ಕೆ ಕಾರಣಗಳು ಮಾತ್ರ ಬೇರೆಯಾಗಿವೆ.

ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಸೊಲ್ಲಾಪುರ, ಸಾಂಗ್ಲಿ ಹಾಗೂ ಕೊಲ್ಹಾಪುರದ ಹಲವಾರು ಗ್ರಾಮಗಳಲ್ಲಿ ಅಪಾರ ಸಂಖ್ಯೆಯ ಕನ್ನಡ ಭಾಷಿಕರು ನೆಲೆಸಿದ್ದಾರೆ. ಅವರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಲ್ಲೇ ಓದಿಸುವ ಮೂಲಕ ಮಾತೃಭಾಷೆ ಬಗೆಗಿನ ಪ್ರೀತಿಯನ್ನು ಕಾಪಿಟ್ಟುಕೊಂಡಿದ್ದರು. ಆದರೆ, ಈಗ ಕನ್ನಡ ಶಾಲೆಗಳ ಬಗೆಗೆ ಈ ಜನರಿಗೆ ಮೊದಲಿದ್ದ ಆಕರ್ಷಣೆ ಉಳಿದಿಲ್ಲ. ಇರುವ ಕನ್ನಡ ಶಾಲೆಗಳು ಮೂಲಸೌಕರ್ಯಗಳ ಕೊರತೆಯಿಂದ ಸೊರಗಿವೆ. ಅಲ್ಲದೆ, ಅಗತ್ಯ ಪ್ರಮಾಣದಲ್ಲಿ ಶಿಕ್ಷಕರಿಲ್ಲ. ಕೆಲವಾರು ವರ್ಷಗಳಿಂದ ಶಿಕ್ಷಕರ ನೇಮಕವೇ ಆಗಿಲ್ಲ. 

ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ಮಾತೃಭಾಷೆಯ ಮೇಲಿನ ಪ್ರೀತಿಯಿಂದ ಕನ್ನಡದಲ್ಲಿ ಕಲಿಯುವ ಮಕ್ಕಳಿಗೆ, ಮುಂದೆ ಉದ್ಯೋಗ ದೊರಕಿಸಿಕೊಳ್ಳುವುದಾದರೂ ಸುಲಭವೇ ಎಂದರೆ ಅದೂ ಇಲ್ಲ. ಕಲಿಯುವಾಗಿನ  ಎಡರುತೊಡರುಗಳು ಉದ್ಯೋಗ ದೊರಕಿಸಿಕೊಳ್ಳುವ ಸಂದರ್ಭದಲ್ಲೂ ಬೆಂಬಿಡದೇ ಕಾಡುತ್ತವೆ. ರಾಜ್ಯ ಸರ್ಕಾರಿ ಉದ್ಯೋಗಗಳಿಗಾಗಿ ನಡೆಯುವ ಪರೀಕ್ಷೆಗಳೆಲ್ಲವೂ ಮರಾಠಿ ಅಥವಾ ಇಂಗ್ಲಿಷ್‌ ಭಾಷೆಯಲ್ಲೇ ಇರುತ್ತವೆ. ಕನ್ನಡದಲ್ಲಿ ಓದಿದ ಮಕ್ಕಳಿಗೆ ಮರಾಠಿ ಭಾಷೆಯ ಮೇಲೆ ಹಿಡಿತ ಇರದು. ಇತ್ತ 10ನೇ ತರಗತಿ ನಂತರವಾದರೂ ಮುಂದಿನ ಶಿಕ್ಷಣವನ್ನು ಕರ್ನಾಟಕದಲ್ಲಿ ಪೂರೈಸಿ, ಇಲ್ಲಾದರೂ ಭವಿಷ್ಯ ಅರಸೋಣ ಎಂದುಕೊಂಡರೆ, ಅಲ್ಲಿ ಕಲಿತ ಪಠ್ಯಕ್ರಮಕ್ಕೂ ಇಲ್ಲಿಯ ಪಠ್ಯಕ್ರಮಕ್ಕೂ ತಾಳೆಯಾಗುವುದಿಲ್ಲವಾದ್ದರಿಂದ ಉನ್ನತ ಶಿಕ್ಷಣ ಕಲಿಕೆಗೆ ತೊಡಕಾದೀತು ಎಂಬ ಭಯ.

ಇಂತಹ ಸ್ಥಿತಿಯು ಕನ್ನಡ ಭಾಷಿಕರಿಗೆ ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸುವ ಬಗ್ಗೆ ನಿರಾಸಕ್ತಿ ಹೆಚ್ಚಲು ಕಾರಣವಾಗಿದೆ. ಉತ್ತೇಜಕ ಕ್ರಮಗಳ ಮೂಲಕ ಗಡಿ ಭಾಗದ ಕನ್ನಡ ಶಾಲೆಗಳನ್ನು ಉಳಿಸುವ ಇಚ್ಛಾಶಕ್ತಿ ಕರ್ನಾಟಕ ಸರ್ಕಾರಕ್ಕೆ ಇಲ್ಲ. ಈ ನಿಟ್ಟಿನಲ್ಲಿ ಬೇಡಿಕೆಗಳನ್ನು ಇಟ್ಟು, ಗಟ್ಟಿ ದನಿಯಲ್ಲಿ ಅವುಗಳ ಪರವಾಗಿ ಹೋರಾಡುವ ಮನಸ್ಸು ಕನ್ನಡಪರ ಸಂಘಟನೆಗಳಿಗೂ ಇದ್ದಂತಿಲ್ಲ. ಹೊರನಾಡ ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರವು 80ರ ದಶಕದಲ್ಲಿ ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ಅವಕಾಶ ಕಲ್ಪಿಸಿತ್ತು. ಅಂತಹ ಅವಕಾಶ ತಮಗೂ ದೊರೆಯಬಹುದೆಂಬ ದೂರದಾಸೆಯಿಂದ ಇಲ್ಲಿಯ ಹೊರನಾಡ ಕನ್ನಡಿಗರು ತಮಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ವರ್ಷಗಳು ಉರುಳಿದಂತೆ ಅಲ್ಲಿನ ಪರಿಸ್ಥಿತಿಯಲ್ಲೂ ಬದಲಾವಣೆಗಳಾಗುತ್ತಿವೆ. ಗಡಿ ಕನ್ನಡಿಗರು ಮಹಾರಾಷ್ಟ್ರದ ಮುಖ್ಯವಾಹಿನಿಯಲ್ಲಿ ಮಿಳಿತಗೊಳ್ಳುತ್ತಾ ಬಂದಿದ್ದಾರೆ. ಕೆಲವು ಪ್ರದೇಶಗಳಲ್ಲಂತೂ ಈ ಬೆಳವಣಿಗೆ ಢಾಳಾಗಿ ಕಾಣುತ್ತದೆ. ಉದಾಹರಣೆಗೆ, ಗಡಹಿಂಗ್ಲಜ ಭಾಗದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಕನ್ನಡಿಗರಿದ್ದಾರೆ. ಅವರಲ್ಲಿ ಹೆಚ್ಚಿನವರು ರಾಜಕೀಯವಾಗಿ ಪ್ರಬಲರಾಗಿದ್ದರೂ ತಮ್ಮ ಊರಿಗೊಂದು ಕನ್ನಡ ಶಾಲೆ ಬೇಕೆಂದು ಅವರೆಂದೂ ಬಹಿರಂಗವಾಗಿ ಧ್ವನಿ ಎತ್ತಿದ್ದಿಲ್ಲ. ಗಡಹಿಂಗ್ಲಜ ತಾಲ್ಲೂಕಿನ ಮುತನಾಳ ಎಂಬ ಗಡಿಹಳ್ಳಿಯಲ್ಲಿ ಒಂದೇ ಒಂದು ಕನ್ನಡ ಶಾಲೆಯಿತ್ತು. ಅದೂ ಬಂದ್‌ ಆಗುವುದನ್ನು ತಡೆಯುವ ಪ್ರಯತ್ನ ಸಹ ನಡೆಯದಿರುವುದರ ಹಿಂದೆ ಭಾಷಾ ಪ್ರೇಮಕ್ಕಿಂತ ಭವಿಷ್ಯ ಕಟ್ಟಿಕೊಳ್ಳುವ ತುಡಿತ ಕೆಲಸ ಮಾಡಿದಂತಿದೆ. ಮನೆಮಾತು ಕನ್ನಡವೇ ಆಗಿರುವ ಮರಾಠಿ ಪತ್ರಕರ್ತರೊಬ್ಬರನ್ನು ಈ ಬಗ್ಗೆ ಕೇಳಿದಾಗ ‘ಇಲ್ಲಿ ಕನ್ನಡಿಗರು ಮಹಾರಾಷ್ಟ್ರದ ಮುಖ್ಯವಾಹಿನಿ ಸೇರಿಹೋಗಿದ್ದಾರೆ. ಅವರಿಗೆ ಅಂತಹ ಬೇಡಿಕೆ ಇಡಬೇಕೆಂಬ ಯೋಚನೆಯೇ ಹೊಳೆದಂತಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಕೊಲ್ಹಾಪುರ ಜಿಲ್ಲೆಯ ಬಹುಪಾಲು ಭಾಗಗಳಲ್ಲೂ ಇದೇ ಸ್ಥಿತಿ ಇದೆ. ಅಲ್ಲಿರುವ ಕನ್ನಡಿಗರಿಗೆ ಧರ್ಮ, ವ್ಯಾಪಾರ, ಹಣ ಮತ್ತು ರಾಜಕೀಯ ಹಿತಾಸಕ್ತಿಗಳು ತಮ್ಮ ಭಾಷೆ, ಸಂಸ್ಕೃತಿಗಿಂತಲೂ ಮುಖ್ಯ ಎನಿಸಿರುವುದು ಅಲ್ಲಿನ ಜನರೊಂದಿಗೆ ಮಾತನಾಡಿದಾಗ ಮನದಟ್ಟಾಗುತ್ತದೆ. ಇದ್ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳದ ಸಕ್ಕರೆ ಉದ್ದಿಮೆ ಲಾಬಿಯ ದುರಂಧರರು ಮಾತ್ರ ಕರ್ನಾಟಕ, ಮಹಾರಾಷ್ಟ್ರದ ಎರಡೂ ಗಡಿಗಳಲ್ಲಿ ‘ಸುಪುಷ್ಟ’ರಾಗಿದ್ದಾರೆ. ಇಷ್ಟಾಗಿಯೂ ಇಲ್ಲಿಯ ನಿಲಜಗಿ ಗ್ರಾಮ ಪಂಚಾಯಿತಿ ಮತ್ತು ಕಾಗಲ ತಾಲ್ಲೂಕಿನ ಸುಳಕೂಡ ಗ್ರಾಮ ಪಂಚಾಯಿತಿಯಲ್ಲಿ, ಕರ್ನಾಟಕಕ್ಕೆ ಸೇರುವ ಠರಾವು ಪಾಸು ಮಾಡಿ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಇತ್ತೀಚಿನ ವಿಲಕ್ಷಣ ಬೆಳವಣಿಗೆ!

ಹಿಂದೊಮ್ಮೆ ಮಹಾರಾಷ್ಟ್ರದ ಗಡಿಯ ಕನ್ನಡ ಭಾಷಿಕ ಶಾಸಕರೊಬ್ಬರು ‘ನನ್ನ ನಾಲಿಗೆ ಕನ್ನಡ ಹಾಗೂ ಆತ್ಮ ಮರಾಠಿ’ ಎಂದಿದ್ದರು. ಇದು ಅವರ ಅನುಕೂಲಸಿಂಧು ರಾಜಕಾರಣವೂ ಇರಬಹುದು ಅಥವಾ ಅವರ ಅಸಹಾಯಕತೆಯೂ ಆಗಿರಬಹುದು. ಜವಳಿ ಉದ್ಯಮಕ್ಕೆ ಪ್ರಸಿದ್ಧವಾದ ಇಚಲಕರಂಜಿಗೆ ಹೊಟ್ಟೆಪಾಡಿಗಾಗಿ ದುಡಿಯಲು ವಲಸೆ ಬಂದ ನೇಕಾರರು, ಇತರ ಕಾರ್ಖಾನೆಗಳ ಕಾರ್ಮಿಕರು ಹಾಗೂ ಮೂಲನಿವಾಸಿ ಕನ್ನಡಿಗರು ಅಲ್ಲಿನ ಜನಸಂಖ್ಯೆಯಲ್ಲಿ ಶೇ 40ರಷ್ಟು ಪ್ರಮಾಣದಲ್ಲಿದ್ದಾರೆ. ದಶಕಗಳ ಪ್ರಯತ್ನದ ಫಲವಾಗಿ  ಅಲ್ಲೊಂದು ಕನ್ನಡ ಪ್ರಾಥಮಿಕ ಶಾಲೆ ತಲೆಎತ್ತಿತು. ಆ ಶಾಲೆಗೆ ಸೌಕರ್ಯಗಳು ಒದಗಿಬರದಿದ್ದರೂ ಸರ್ಕಾರದ ಹಲವು ಬಗೆಯ ‘ಕಿರಿಕಿರಿ’ಗಳಿದ್ದರೂ ಅಲ್ಲಿಯ ಕನ್ನಡ ಶಿಕ್ಷಕರು ಶಾಲೆಯನ್ನು ಜತನವಾಗಿ ಕಾಯ್ದುಕೊಂಡು ಬಂದಿದ್ದಾರೆ. ಏಳನೇ ಇಯತ್ತೆಯವರೆಗೆ ಶಿಕ್ಷಣ ಪಡೆದ ಅಲ್ಲಿಯ ಮಕ್ಕಳು ಹೈಸ್ಕೂಲು ಕಲಿಯಲು ಹತ್ತಿಪ್ಪತ್ತು ಕಿ.ಮೀ. ದೂರದ ಕರ್ನಾಟಕಕ್ಕೆ ಬರಬೇಕು. ಹಿಂದೊಮ್ಮೆ ಬೆಳಗಾವಿಗೆ ಬಂದಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ಅವರನ್ನು, ಈ ಕುರಿತು ಖುದ್ದು ಮಾಹಿತಿ ಪಡೆಯಲು ಸ್ಥಳಕ್ಕೆ ಭೇಟಿ ನೀಡುವಂತೆ ಅರಿಕೆ ಮಾಡಿಕೊಂಡೆ. ಅವರು ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದರು- ‘ಮುಂದಿನ ತಿಂಗಳು ಹದಿನೈದಕ್ಕೆ ಬೆಳಗಾವಿಗೆ ಬರ್ತಿದ್ದೇನೆ, ಖಂಡಿತ ಹೋಗೋಣ’ ಎಂದರು. ಆದರೆ, ಆ ತೇದಿ ಇದುವರೆಗೆ ಬಂದೇ ಇಲ್ಲ!

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರವು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗಳು. ಅದರಲ್ಲಿ ಹೊರನಾಡು ಕನ್ನಡಿಗರೂ ಒಳಗೊಳ್ಳುತ್ತಾರೆ. ಇವು ಶಾಲಾ– ಕಾಲೇಜು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಕೈತೊಳೆದುಕೊಂಡರೆ ಸಾಲದು. ಗಡಿಕನ್ನಡಿಗರನ್ನು ಅನಾಥ ಪ್ರಜ್ಞೆಗೆ ದೂಡಿರುವ ಬೆಳವಣಿಗೆಗಳತ್ತ ಗಮನಹರಿಸಬೇಕು. ಅವರ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳ ನಿವಾರಣೆಗೆ ಎಲ್ಲ ರೀತಿಯಲ್ಲೂ ಸ್ಪಂದಿಸಬೇಕು. ಆತ್ಮಸ್ಥೈರ್ಯ ತುಂಬಬೇಕು. ನೆರೆರಾಜ್ಯಗಳ ಸರ್ಕಾರಗಳ ಜತೆ ಸಮಾಲೋಚಿಸಿ ಪರಿಹಾರೋಪಾಯ ರೂಪಿಸಬೇಕು. ಹೊರನಾಡ ಕನ್ನಡಿಗರಿಗೆ ರಾಜ್ಯ ಸರ್ಕಾರದ ನೌಕರಿಗಳಲ್ಲಿ ಮೀಸಲಾತಿ ನೀಡುವ ಸಾಧ್ಯತೆ ಕುರಿತು ಪರ್ಯಾಲೋಚಿಸಬೇಕು. ನೆರೆರಾಜ್ಯಗಳಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು, ಬೆಳೆಸಲು, ಕನ್ನಡದ ಅಸ್ಮಿತೆಯನ್ನು ಕಾಪಾಡಲು ಇಚ್ಛಾಶಕ್ತಿ ತೋರಬೇಕು. 

ಲೇಖಕ: ಪ್ರಾಧ್ಯಾಪಕ, ಭಾವುರಾವಕಾಕತಕರ ಕಾಲೇಜು, ಬೆಳಗಾವಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !