ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಂದ್ರ ಆಸ್ಥಾನದ ‘ಮಹಾ’ಕ್ರಾಂತಿ!

Last Updated 29 ನವೆಂಬರ್ 2019, 20:07 IST
ಅಕ್ಷರ ಗಾತ್ರ

ಹಾಸ್ಗ್ಯಾಗ್ ಇನ್ನ ಬೆಳಗಿನ ಸಕ್ರಿ ನಿದ್ದಿಯೊಳಗ್‌ ಇದ್ದಾಗs ಫೋನ್‌ ಬಡ್ಕೊಳ್ಳೋದು ನೋಡಿ ನಿದ್ದೆಗಣ್ಣಾಗ ‘ಹಲೋ’ ಎನ್ನುತ್ತಿದ್ದಂತೆ, ‘ಮಹಾ ಸರ್ಜಿಕಲ್‌ ಸ್ಟ್ರೈಕ್‌ ಆಗೈತಿ. ದೇವೇಂದ್ರನ ಮಹಾ ಸರ್ಕಾರ ಮತ್ತೊಮ್ಮೆ ಅಸ್ತಿತ್ವಕ್ಕ ಬಂದದ’ ಅಂತ ಪ್ರಭ್ಯಾ ಭಾರಿ ಖುಷ್ಯಾಗ್‌ ಬಡ್ಕೊಳ್ಳಾಕತ್ತಿದ್ದ.

‘ಲೇ, ನಶೆದಾಗ ಏನರ್‌ ವದರ್‌ಬ್ಯಾಡ. ರಾತ್ರಿ ಕುಡ್ದಿದ್ದು ಇನ್ನs ಇಳಿದ್ಹಂಗ್‌ ಕಾಣ್ಸುದಿಲ್ಲ. ಬೆಳಗ್ಗ ಬೆಳಗ್ಗ ಮನಸ್ಸಿಗೆ ಬಂದ್ಹಂಗ್‌ ಬಡಬಡಸ್‌ಬ್ಯಾಡೊ ಭಾಡ್ಕೊ’ ಅಂತ ಬೈದೆ.

ನನ್ನ ಬೈಗುಳಕ್ಕ ಲಕ್ಷ ಕೊಡದ ಪ್ರಭ್ಯಾ, ‘ಬಿಜೆಪಿಯ ದೇವೇಂದ್ರ ಮತ್ತ ಎನ್‌ಸಿಪಿಯ ಅಜಿತ್‌ ಪವಾರ್ ಸಿಎಂ, ಡಿಸಿಎಂ ಆಗ್ಯಾರ್‌. ನಸುಕಿನ್ಯಾಗs ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡದ್‌. ಎದ್ದು ಟೀವಿ ನೋಡ್‌. ರಾತ್ರೋರಾತ್ರಿ ನಡೆದಿರೊ ಮಹಾಕ್ರಾಂತಿಯ ಹಕೀಕತ್‌ ಗೊತ್ತಾಗತೈತಿ’ ಎಂದ.

‘ಅಲ್ಲೋ ಮಧ್ಯರಾತ್ರಿ ಮಲಗುಮುಂದ ಶಿವಸೇನಾ ಜತೆ ಕೈನೋರು, ಎನ್‌ಸಿಪಿನೋರು ಕೈಜೋಡ್ಸಾಕ್‌ ತಯಾರಾಗಿದ್ದು ನೋಡಿ ನಾಳೆ ಬೆಳಗ್ಗೆಯಿಂದ ಮಹಾರಾಷ್ಟ್ರದಾಗ ಕೈಯ್ಯಾಗಿನ ಗಡಿಯಾರ ನೋಡ್ಕೊಂಡು ಹುಲಿ ಸವಾರಿ ಸಂಭಾಳಿಸುವುದು ಭಾಳ್‌ ಅಪಾಯ
ಕಾರಿ ಆಗಬಹುದು ಅಂತ ಅನಕೊಂಡ್‌ ಮಲಗಿದ್ದೆ. ಎಲ್ರೂ ಮಲ್ಕೊಂಡಾಗ ಶಾಣ್ಯಾ ಗುಂಪು ಇಡೀ ಎನ್‌ಸಿಪಿ ಎಂಎಲ್‌ಎಗಳನ್ನ ಚೋರಿ ಮಾಡ್ಯಾರೇನೊ’ ಎಂದೆ.

‘ಅದೆಲ್ಲ ನನಗ್‌ ಗೊತ್ತಿಲ್ಲ. ಟೀವ್ಯಾಗ್‌ ಬ್ರೇಕಿಂಗ್‌ ನ್ಯೂಸ್‌ ಬರಾಕತ್ತದ ಎದ್ದು ನೋಡ್‌’ ಎಂದ.

ನನ್ನ ಹೋಷ್‌ ಹಾರಿ ಹೋಯ್ತು. ಕಣ್ಣು
ತಿಕ್ಕೊಂಡು ಮೊಬೈಲ್‌ದಾಗಿನ ಹೊಸಾ ನೋಟಿಫಿಕೇಷನ್‌ ನೋಡ್‌ತಿದ್ಹಂಗ್‌ ರಾತ್ರಿ ಕರಾಮತ್ತಿನ ಕೃತ್ಯ ಎಲ್ಲಾ ನಿಚ್ಚಳಾತು.

ರಾತ್ರಿ ಬೆಳತನಕ ಜಾಗರಣ ಮಾಡಿದ್ದ ದೇವೇಂದ್ರನ ಆಸ್ಥಾನದಾಗಿನ ಶಾಣ್ಯಾ ಚಾಣಕ್ಯ, ಭಾರಿ ಗೊಂದ್ಲಾ ಹಾಕಿದ್ಹಂಗ್‌ ಕಾಣಸ್ತೈತಿ ಅಂತ ಆಲೋಚಿ
ಸುತ್ತ ಹಾಸಿಗಿ ಝಾಡಿಸಿ ಹೊರಬಾಗಿಲಕ್ಕ ಬರೂದಕ್ಕೂ ಪ್ರಭ್ಯಾ ಕುಣಕೋಂತ್‌ ಬರೋದಕ್ಕೂ ಸರಿ ಹೋಯ್ತು.

‘ಪವಾಡ ನಡ್ದದ ಅಥ್ವಾ ಡೇ ಆ್ಯಂಡ್‌ ನೈಟ್‌ ಮ್ಯಾಚ್‌ನ ಕೊನೇ ಓವರ್‌ದಾಗ್‌ ಭಾರಿ ತಿರುವು ಪಡ್ದದs ಏನ್‌’ ಎಂದೆ.

‘ಎರಡೂ ಅಲ್ಲ. ಕ್ರಿಕೆಟ್‌ ಮತ್ತ ರಾಜಕೀಯದಾಗ ಏನಾದ್ರೂ ಆಗಬಹುದು ಅಂತ ಗಡ್ಕರಿ ಸಾಹೇಬ್ರು ಹೇಳ್ದಂಗ್‌ ಆಗೈತಿ’ ಎಂದ.

‘ದೇವೇಂದ್ರನ ಆಸ್ಥಾನದಲ್ಲಿ ಮಧ್ಯರಾತ್ರಿಯ ಮಹಾಕ್ರಾಂತಿಯ ಹಿಂದೆ ಯಾರ‍್ಯಾರು ಇರಬಹುದು. ಇಷ್ಟ್ಯಾಕ್‌ ಅವ್ಸರದಾಗ್‌ ಅಧಿಕಾರ ಕದ್ರು. ಟೀವಿ, ಪೇಪರ್‌ನೋರ್‌ಗೂ ಗೊತ್ತಾಗದ್ಹಂಗ್ ಗುಟ್ಟಿನ್ಯಾಗ್‌ ಇಂಥಾ ಕೆಲ್ಸಾ ಮಾಡು ಹರ್ಕತ್‌ ಏನಿತ್ತು’ ಎಂದು ತಲೆ ಚಚ್ಚಿಕೊಂಡೆ.

ನನ್ನ ಮಾತ್ನ ಕೇಳಿ ಪ್ರಭ್ಯಾ ದಂಗಬಡ್ದಂಗಾಗಿ ‘ಹೌದಾ’ ಎಂದು ಮುಗ್ಧತೆಯಿಂದ ಕೇಳ್ದಾ.

‘ಆ ಕತಿ ಬಿಡು. ಉಪ ಚುನಾವಣೆ ಜೋಷ್ ಕೈಸಾ ಹೈ ದೋಸ್ತ್‌’ ಎಂದು ಹೇಳಿ ಆತನ ಗಮನವನ್ನ ಮಹಾರಾಷ್ಟ್ರದಿಂದ ಕರ್ನಾಟಕದ ರಾಜಕೀಯಕ್ಕೆ ಎಳೆದು ತಂದೆ.

‘ಒಂದ್‌ ವೋಟ್‌ ಕೂಡ ಆಚೀಚೆ ಆಗಲಾರ್ದ್ಹಂಗ್‌ ನೋಡ್ಕೊಬೇಕ್‌’ ಅಂತ ಸಿಎಂ ಹೇಳಿದ್ದನ್ನ ಪಾಲ್ಸಾಕ್‌ ಭಾರಿ ಕಸರತ್ತು ಮಾಡಾಕತ್ತೀವಿ’ ಅಂದ.

ನಿಶೆದಾಗಿನ ಮಾತ್‌ ಕಿಸೆದಾಗ್‌ ಅನ್ನು ಹಂಗ್‌ ಕಾಂಗ್ರೆಸ್‌, ಜೆಡಿಎಸ್‌ನ ಇನ್ನೂ ಕೆಲ ಎಂಎಲ್‌ಎಗಳು ತಮ್ಮ ಕಿಸೆದಾಗ್‌ ಅದಾರ್ ಅಂತ ಭಾಜಪದ ಘಟಾನುಘಟಿಗಳು ಹೇಳ್ಕೊಂಡ್‌ ತಿರುಗುಮುಂದ ಒಂದ್‌ ವೋಟ್‌ನಿಂದ ಏನಾಗ್ತೈತಿ ಹೇಳೋ ಮಳ್ಳ’ ಎಂದೆ.

‘ಏಯ್‌ ಹಂಗ್‌ ಅನಬ್ಯಾಡಪಾ. 1999ರ ಏಪ್ರಿಲ್‌
ನ್ಯಾಗ್‌ ಅಟಲ್‌ ಬಿಹಾರಿ ವಾಜಪೇಯಿ ಅವ್ರ ಸರ್ಕಾರ ಒಂದೇ ಒಂದ್‌ ವೋಟ್‌ನ್ಯಾಗ್‌ ಬಿದ್ದು ಹೋಗಿದ್ದು ನೆನಪದಪಾ. ವೀರಶೈವರ ಒಂದ್‌ ವೋಟ್‌ ಕೂಡ ಆಚೀಚೆ ಹೋಗಬಾರ್ದು, ಪಕ್ಷದ್ರೋಹ ಸಹಿಸುದಿಲ್ಲಂತ್ ಅಪ್ಪಣೆ ಕೊಡಿಸಿದ್ದು ಕಮಲದ ಪರ ಛಲೋ ಕೆಲ್ಸಾ ಮಾಡೊಹಂಗ್‌ ಕಾಣಸ್ತದ’ ಎಂದ.

‘ಕಾಂಗ್ರೆಸ್, ಜೆಡಿಎಸ್ ಬಿಟ್ಟು ಬಂದವರೂ ಪಕ್ಷದ್ರೋಹಿಗಳ ಅಲ್ಲೇನಪಾ. ಅವ್ರನ್ನ ಹೆಂಗ್‌ ಸಹಿಸಿಕೊಂಡಾರೊ’ ಎಂದೆ.

‘ಇನ್ನಷ್ಟು ಪಕ್ಷದ್ರೋಹಿಗಳನ್ನು ಹಿಡ್ಕೊಂಡ್‌ ಬಂದು ಸರ್ಕಾರ ಭದ್ರಪಡಸಾಕ್‌ ಎಲ್ಲಾ ತಯಾರಿ ನಡಸ್ಯಾರ್‌, ಗೊತ್ತಿಲ್ಲೇನ್‌ ನಿಂಗ್’ ಎಂದು ಕೇಳ್ದ.

‘ಹಂಗಿದ್ರ, ಮಹಾಕ್ರಾಂತಿ ನಂತರ ಕರ್ನಾಟಕದಾಗೂ ಹೊಸಾ ಕಲ್ಯಾಣ ಕ್ರಾಂತಿ ನಡೆಯೊ ಎಲ್ಲಾ ಲಕ್ಷಣಗಳು ಕಾಣಾಕತ್ತಾವ ಅಂದ್ಹಂಗಾತು’ ಎಂದು ಕಾಲೆಳೆದೆ. ಅದಕ್ಕ ಉತ್ರಾ ಕೊಡಾಕ್‌ ತಡವರಿಸಿದ ಪ್ರಭ್ಯಾ, ‘ಒಂದ್‌ ವೋಟೂ ಆಚೀಚೆ ಆಗ್ಲಾರ್‌ದ್ಹಂಗ್‌ ನೋಡೊ ಅರ್ಜೆಂಟ್‌ ಕೆಲ್ಸ ಐತಿ, ಬರ್ತೀನಿ’ ಎಂದು ಹೇಳಿ ಹೊರನಡೆದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT