ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ಕರಗುತ್ತಿದೆ ಮೂಲಿಕಾ ಸಂಪತ್ತು: ಮದ್ದೇನು?

ಔಷಧಿಮೂಲಿಕೆಗಳ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಗೆ ತಳಮಟ್ಟದ ಕಾರ್ಯವಿಧಾನಗಳು ಬೇಕು
Last Updated 14 ಜನವರಿ 2020, 3:36 IST
ಅಕ್ಷರ ಗಾತ್ರ

ಗಂಗಮ್ಮನ ಬಳ್ಳಿ ಎಂಬ ಮೂಲಿಕೆಯೊಂದಿದೆ. ರೋಗನಿರೋಧಕ ಶಕ್ತಿಯು ಏರುಪೇರಾಗಿ ಬರುವ ರೋಗಗಳಿಗೆ ಮದ್ದಾಗಬಲ್ಲ ಶಕ್ತಿ ಅದರದ್ದು. ಮಲೆನಾಡಿನಲ್ಲಂತೂ ಕೆಲವೇ ವರ್ಷಗಳ ಹಿಂದೆ ಸುಲಭವಾಗಿ ಎಟಕುತ್ತಿದ್ದ ಬಳ್ಳಿ ಇದು. ವರ್ಷಕ್ಕೊಮ್ಮೆ ಗಣೇಶನ ಹಬ್ಬದ ಸಾಂಪ್ರದಾಯಿಕ ಫಲವಳಿಗೆ ಪೂಜೆಗೆಂದು ಇದರ ತುಂಡೊಂದನ್ನು ತರಲೂ ರೈತರು ಈಗ ಪರದಾಡುವಷ್ಟು, ಅದು ವಿನಾಶದ ಅಂಚಿಗೆ ತಲುಪಿದೆ. ಆದರೆ, ವೈಚಿತ್ರ್ಯ ನೋಡಿ: ಜ್ಯೋತಿಷ್ಮತಿ ಎಂದು ಹೆಸರಿಸುವ ಈ ಬಳ್ಳಿಯ ಎಲೆ, ಬೀಜಗಳಿಂದ ತಯಾರಿಸಲಾಗಿದೆ ಎನ್ನಲಾಗುವ ತರಾವರಿ ಗುಳಿಗೆ, ಚೂರ್ಣ, ಲೇಹ್ಯ, ತೈಲಗಳು ಮಾತ್ರ ಮಾರುಕಟ್ಟೆಯಲ್ಲಿ ಧಾರಾಳ ಲಭ್ಯ!

ನಾಡಿನ ಸಸ್ಯವೈವಿಧ್ಯದ ಹರವಾದರೋ ಬಹುದೊಡ್ಡದು. ಹಾಗಾದರೆ ಜ್ಯೊತಿಷ್ಮತಿಯಂತೆ ವಿನಾಶದೆಡೆಗೆ ಸಾಗಿರುವ ಮೂಲಿಕೆಗಳೆಲ್ಲ ಯಾವುವು? ಅವುಗಳ ವೈವಿಧ್ಯ ಮತ್ತು ಲಭ್ಯತೆ ಎಷ್ಟು? ಈವರೆಗೆ ಅದೆಷ್ಟೋ ಅಧ್ಯಯನಗಳು ನಡೆದಿವೆಯಾದರೂ, ಈ ಬಗೆಯ ಪ್ರಶ್ನೆಗಳಿಗೆಲ್ಲ ಖಚಿತ ಉತ್ತರ ಕಷ್ಟವೇ. ರಾಜ್ಯದಲ್ಲಿ ಈವರೆಗೆ ಗುರುತಿಸಲಾದ ಹೂಬಿಡುವ ಸುಮಾರು ಐದು ಸಾವಿರ ಸಸ್ಯ ಪ್ರಭೇದಗಳಲ್ಲಿ ಕನಿಷ್ಠ ಐದನೇ ಒಂದು ಭಾಗವಾದರೂ ಮದ್ದಿಗಾಗಿ ಬಳಕೆಯಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ಕರ್ನಾಟಕ ಜೀವವೈವಿಧ್ಯ ಮಂಡಳಿಯು ರಾಷ್ಟ್ರೀಯ ಮೂಲಿಕಾ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಇತ್ತೀಚೆಗೆ ಈ ನಿಟ್ಟಿನಲ್ಲಿ ಸಮೀಕ್ಷೆಯೊಂದನ್ನು ಪೂರೈಸಿದೆ. ಪ್ರತೀ ತಾಲ್ಲೂಕಿನ ಮೂಲಿಕಾ ವೈವಿಧ್ಯದ ಹರವು ಮತ್ತು ಲಭ್ಯತೆಯ ಪ್ರಾಥಮಿಕ ಚಿತ್ರಣವನ್ನು ಕಂಡುಕೊಳ್ಳುವ ವರದಿಯದು. ಸ್ಥೂಲ ಅಂಕಿ-ಅಂಶಗಳನ್ನಾದರೂ ಪ್ರಥಮ ಬಾರಿಗೆ ಒದಗಿಸಿರುವ ಈ ಪ್ರಯತ್ನ ಸ್ವಾಗತಾರ್ಹವೇ. ಅದರೆ ಈ ಸಮೀಕ್ಷೆ ನೀಡುವ ಉತ್ತರಕ್ಕಿಂತ, ಹುಟ್ಟುಹಾಕುವ ಪ್ರಶ್ನೆಗಳೇ ಹೆಚ್ಚು ಮತ್ತು ಜಟಿಲವಾದವು. ಈ ಪಟ್ಟಿಯಲ್ಲಿನ ಬಹುತೇಕ ಸಸ್ಯ ಪ್ರಭೇದಗಳು ವಿನಾಶದ ಅಂಚಿಗೆ ತಲುಪುತ್ತಿವೆಯೆಂದಾದರೆ, ಕಾರಣಗಳೇನು? ಹೇಗೆ ಮಾಯವಾಗುತ್ತಿವೆ? ಎಲ್ಲಿಗೆ ಸೇರುತ್ತಿವೆ? ಈ ಸವಾಲುಗಳಿಗೆ ಉತ್ತರ ಹುಡುಕಬೇಕಾದ ಜರೂರತ್ತಿದೆ ಈಗ.

ಔಷಧಿಗಿಡಗಳ ಸಂಕುಲಗಳೆಲ್ಲ ನಾಶವಾಗಲು, ಸ್ಥೂಲವಾಗಿ ಎರಡು ಬಗೆಯ ಕಾರಣಗಳನ್ನು ಗುರುತಿಸಬಹುದು. ಮೊದಲನೆಯದು, ಎಲ್ಲರಿಗೂ ತೋರುವ ನಿರಂತರ ಅರಣ್ಯನಾಶ, ಅತಿಕ್ರಮಣ, ಬೆಂಕಿ, ಅಭಿವೃದ್ಧಿ ಯೋಜನೆಗಳು- ಇವೆಲ್ಲ ನುಂಗಿಹಾಕುತ್ತಿರುವ ಕಾಡಿನಂಗಳದಿಂದ ಅದೆಷ್ಟೋ ಬಗೆಯ ಗಿಡ, ಬಳ್ಳಿ, ಮರಗಳ ತಳಿಗಳು ಮಾಯವಾಗುತ್ತಿವೆ. ವಾಯುವಿಡಂಗ, ಸೀತಾಅಶೋಕ, ಮರದರಶಿನ, ರಂಜೆ ಇವೆಲ್ಲ ಅಪರೂಪವಾಗುತ್ತಿರುವುದು ಹೀಗಾಗಿ. ಅಕೇಶಿಯಾ, ರಬ್ಬರ್ ನೆಡುತೋಪುಗಳಿಗೆ ಗೋಮಾಳ, ಕಾನು, ಹಾಡಿ, ಬೆಟ್ಟ, ಹುಲ್ಲುಗಾವಲುಗಳು ಬಲಿಯಾದಂತೆಲ್ಲ ಮಂಜಿಷ್ಟ, ಅಮೃತಬಳ್ಳಿ, ಶತಾವರಿಯಂಥ ಅಮೂಲ್ಯ ಪ್ರಭೇದಗಳೂ ಮರೆಯಾಗುತ್ತಿವೆ. ಕರಾವಳಿಯ ಅಳಿವೆ, ಮಲೆನಾಡಿನ ಶೋಲಾ ಹಾಗೂ ಜೌಗು, ಬಯಲುನಾಡಿನ ದಿನ್ನೆ- ಇಂಥ ವಿಶಿಷ್ಟ ಭೂನೆಲೆಗಳು ತಮ್ಮ ಸ್ವರೂಪ ಕಳೆದುಕೊಂಡಂತೆಲ್ಲ, ಸಮುದ್ರಫಲ, ಶ್ರೀಹೊನ್ನೆ, ಕೇದಗೆ, ರಾಮಪತ್ರೆ, ಕದಂಬ, ಸುರಗಿ, ಜೀವಾಲೆಯಂಥ ನೂರಾರು ಪ್ರಭೇದಗಳು ನೆಲೆ ಕಳೆದುಕೊಳ್ಳುತ್ತಿವೆ. ನೈಸರ್ಗಿಕ ಸಂಪತ್ತಿನ ನಾಶದ ಈ ವೇಗವೇ ಭಯಹುಟ್ಟಿಸುವಂಥದ್ದು.

ಮದ್ದಿನಗಿಡಗಳನ್ನು ಸೂರೆಗೈಯುತ್ತಿರುವ ಎರಡನೇ ಬಗೆಯ ಕಾರಣಗಳಾದರೋ ಮೇಲ್ನೋಟಕ್ಕೆ ಕಾಣದವು. ದೇಶಿ ವೈದ್ಯಕೀಯ ಪರಂಪರೆಯ ಪ್ರಾಮುಖ್ಯ ಒಪ್ಪಲೇಬೇಕಾದ್ದು. ತ್ವರಿತ ಶಮನ ನೀಡುವ ಮನೆಮದ್ದು, ನಾಟಿ ವೈದ್ಯಕೀಯ, ಜನಪದ ಪಂಡಿತ ಪರಂಪರೆ ಹಾಗೂ ಶಾಸ್ತ್ರೀಯ ಆಯುರ್ವೇದಶಾಸ್ತ್ರ- ಇವೆಲ್ಲ ನಿಜಕ್ಕೂ ಅಮೃತಸದೃಶ. ವೈದ್ಯಕೀಯವು ಶ್ರೇಷ್ಠಸೇವೆ ಎಂದು ನಂಬಿದ ತಲೆಮಾರುಗಳು, ಜನಸ್ನೇಹಿಯಾಗಿ ಚಿಕಿತ್ಸೆ ನೀಡುತ್ತ ಪೋಷಿಸಿಕೊಂಡು ಬಂದ ಜ್ಞಾನನಿಧಿಯವು. ಆದರೆ, ಇಂದು ಎಲ್ಲೆಡೆಯೂ ಆಕ್ರಮಿಸುತ್ತಿರುವ ವ್ಯಾಪಾರೀಕರಣ ಹಾಗೂ ಲಾಭಕೋರತನ ಈ ಕ್ಷೇತ್ರವನ್ನೂ ಸುಡತೊಡಗಿದೆ. ಪ್ರಾಮಾಣಿಕ ಪಾರಂಪರಿಕ ಪರಿಣತರು ಮರೆಯಾಗಿ, ರಾತ್ರೋರಾತ್ರಿ ಚಿಕಿತ್ಸಾಸಿದ್ಧಿ ಗಳಿಸಿ ಪ್ರಸಿದ್ಧರಾಗುತ್ತಿರುವ ‘ನವ ಪಾರಂಪರಿಕ ವೈದ್ಯರು’ ಆಕ್ರಮಿಸತೊಡಗಿದ್ದಾರೆ. ಇವರ ರೋಗನಿದಾನ ಜ್ಞಾನ, ನೀಡುವ ಮದ್ದಿನಲ್ಲಿರುವ ಅಂಶ- ಎಲ್ಲವೂ ನಿಗೂಢವೆ! ಎಲ್ಲೆಡೆ ವ್ಯಾಪಿಸುತ್ತಿರುವ ಈ ಖೊಟ್ಟಿ ನಾಟಿವೈದ್ಯಕೀಯದಿಂದ ಸಸ್ಯಸಂಪತ್ತು ಸದ್ದಿಲ್ಲದೆ ಕರಗುತ್ತಿದೆ; ಜನರ ಆರೋಗ್ಯವೂ ಕುಸಿಯುತ್ತಿದೆ.

ಪ್ರಕೃತಿದತ್ತ ಮೂಲಿಕಾ ಸಂಪತ್ತು ಹಾಗೂ ಜನರ ಆರೋಗ್ಯ- ಇವೆರಡನ್ನೂ ಬಲಿ ತೆಗೆದುಕೊಳ್ಳುತ್ತಿರುವ ಈ ವರ್ಗದ ಇನ್ನೊಂದು ಗುಂಪೆಂದರೆ ಕೆಲವು ಆಧುನಿಕ ‘ಸಸ್ಯಜನ್ಯ ಔಷಧ ಉತ್ಪಾದಕರು’! ಆಯುರ್ವೇದದಲ್ಲಿ ಹೇಳದ ಹೊಸಬಗೆಯ ಮದ್ದುಗಳನ್ನೇ ತಯಾರಿಸುವ ಉದ್ಯಮ ಕ್ಷೇತ್ರವಿದು. ಆಯುರ್ವೇದ ಔಷಧಿಗಳನ್ನು ತಯಾರಿಸುವವರು ಪಾಲಿಸಲೇಬೇಕಾದ ‘ಆಯುರ್ವೇದ ಫಾರ್ಮಾಕೋಪಿಯಾ’ದ ಸೂತ್ರಗಳಿರುವಂತೆ, ಈ ಹೊಸ ಬಗೆಯ ಮದ್ದುಗಳಿಗೆ ನಿಶ್ಚಿತ ಚೌಕಟ್ಟಿಲ್ಲ. ಕಾನೂನಿನಲ್ಲಿರುವ ‘ಸ್ವಾಮ್ಯತ್ವ ಔಷಧಿ’ (‘ಪ್ರಾಪರೈಟರಿ’) ಎಂಬ ಅವಕಾಶವನ್ನೇ ಇನ್ನಿಲ್ಲದಷ್ಟು ಹಿಗ್ಗಿಸಿ, ತರಾವರಿ ಬಗೆಯ ಹೊಸಸೂತ್ರಗಳ ಔಷಧಿಗಳನ್ನು ಉತ್ಪಾದಿಸಿ, ಜಾಹೀರಾತುಗಳ ಮೂಲಕ ರೋಗಿಗಳನ್ನು ಆಕರ್ಷಿಸಿ, ದುಬಾರಿ ಬೆಲೆಗೆ ಮಾರುತ್ತಿದ್ದಾರೆ. ಇಂದು ಮಾರಾಟವಾಗುವ ಅಂಥ ಹಲವು ಮದ್ದುಗಳ ಕ್ಷಮತೆಯಾಗಲೀ, ಅದರಲ್ಲಿರುವ ಮೂಲಿಕೆಗಳ ನೈಜತೆ ಹಾಗೂ ಪ್ರಮಾಣವಾಗಲೀ- ಏನೊಂದೂ ಸಂಶೋಧನೆಯಲ್ಲಿ ಸಿದ್ಧವಾಗಿರುವುದೇ ಇಲ್ಲ. ಅತ್ತ ಪಾರಂಪರಿಕ ಜ್ಞಾನವೂ ಅಲ್ಲ; ಇತ್ತ ಸಂಶೋಧನೆಯಿಂದ ಹೊರಹೊಮ್ಮಿದ ನವೀನ ಔಷಧವೂ ಅಲ್ಲ! ಕಾಡಿನ ಮೂಲಿಕೆಗಳನ್ನೆಲ್ಲ ಅಗ್ಗದಲ್ಲಿ ಹೀರಿ ತೆಗೆಯುವ ಈ ಲಾಭಕೋರತನ ಉದ್ಯಮ ತಂತ್ರಕ್ಕೆ, ನಾಡಿನ ಸಸ್ಯಸಂಪತ್ತೇ ಬಲಿಯಾಗುತ್ತಿದೆ.

ಇವನ್ನೆಲ್ಲ ಯಾರು ನಿಯಂತ್ರಿಸಬೇಕು? ಖೊಟ್ಟಿ ಪಾರಂಪರಿಕ ವೈದ್ಯಕೀಯ ಹಾಗೂ ‘ಪ್ರಾಪರೈಟರಿ’ ಹೆಸರಿನ ಮದ್ದುಗಳ ಬೆಲೆ ನಿಯಂತ್ರಿಸುವುದು, ಔಷಧ ಬೆಲೆ ನಿಯಂತ್ರಣಾ ಪ್ರಾಧಿಕಾರದ ವ್ಯಾಪ್ತಿಯಲ್ಲಿಲ್ಲ. ಔಷಧಗಳ ನೈಜತೆ ಅರಿಯಲು ಸರ್ಕಾರಿ ಔಷಧಿ ಪರಿವೀಕ್ಷಕರಿಗೆ ಸಾಧ್ಯವಾಗುತ್ತಿಲ್ಲ; ಆರೋಗ್ಯ ಇಲಾಖೆಯಲ್ಲಿ ಬೇರೆ ನಿರ್ವಹಣಾ ವ್ಯವಸ್ಥೆಯೂ ಇಲ್ಲ. ಅರಣ್ಯ ಇಲಾಖೆಯಾದರೋ, ತನ್ನ ವ್ಯಾಪ್ತಿಯ ನೆಲವನ್ನು ಉಳಿಸಿಕೊಳ್ಳಲೂ ಸೋಲುತ್ತಿದೆ. ಗ್ರಾಮ ಪಂಚಾಯಿತಿಗಳ ‘ಜೀವವೈವಿಧ್ಯ ನಿರ್ವಹಣಾ ಸಮಿತಿ’ಗಳಿಗೆ, ತಮ್ಮ ಕಾರ್ಯವ್ಯಾಪ್ತಿ ಹಾಗೂ ಜವಾಬ್ದಾರಿಗಳ ಅರಿವೇ ಇಲ್ಲ. ಇನ್ನು, ತಾವು ಬಳಸುವ ಮೂಲಿಕೆಗಳ ಮೂಲ ಮತ್ತು ಪ್ರಮಾಣವನ್ನು ಸಸ್ಯೋದ್ಯಮಗಳು ಜೀವವೈವಿಧ್ಯ ಮಂಡಳಿಗೆ ಸಲ್ಲಿಸಬೇಕೆಂಬ ಕಾನೂನೂ ಇದೆ. ಆದರೆ, ಈ ಉದ್ಯಮದ ಲಾಬಿ ಹೇಗಿದೆಯೆಂದರೆ, ಈ ಕಾನೂನಿನ ಅಗತ್ಯವನ್ನೇ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿವೆ! ದೇಶ ಮಟ್ಟದಲ್ಲೇನೋ ಅರಣ್ಯ ಇಲಾಖೆ, ಗಿಡಮೂಲಿಕಾ ಪ್ರಾಧಿಕಾರ, ಜೀವವೈವಿಧ್ಯ ಪ್ರಾಧಿಕಾರಗಳೂ ರೂಪಿಸಿರುವ ಅನೇಕ ಯೋಜನೆಗಳಿವೆ. ಭಾರಿ ಅನುದಾನದ ಸಂಶೋಧನೆಗಳೂ ನಡೆಯುತ್ತಿರುತ್ತವೆ. ಆದರೆ, ಈ ಸದಾಶಯಗಳನ್ನೆಲ್ಲ ತಳಮಟ್ಟದಲ್ಲಿ ಅನುಷ್ಠಾನಗೊಳಿಸಲು ಮಾತ್ರ ಸರ್ಕಾರಿ ವ್ಯವಸ್ಥೆ ಸಂಪೂರ್ಣ ಸೋತಿದೆ!

ಔಷಧಕ್ಕೆ ಬಳಸಲಾಗದ ಸಸ್ಯವೇ ಇರಲಾರದೆಂಬ ನಂಬಿಕೆ ನಮ್ಮ ದೇಶದ್ದು. ಇದನ್ನೇ ಮಂತ್ರವನ್ನಾಗಿಸಿಕೊಂಡಂತಿರುವ ಮೂಲಿಕಾ ಉದ್ಯಮಗಳು ಬಳಸುತ್ತಿರುವ ಕಾಡುಗಿಡಗಳಿಗೆ ಮಿತಿಯೇ ಇಲ್ಲದಂತಾಗಿದೆ. ವನ್ಯಜನ್ಯ ಸಂಪತ್ತನ್ನು ಕರಗಿಸುತ್ತಿರುವ ಈ ಮಹಾರೋಗಕ್ಕೆ ಮದ್ದನ್ನೆಲ್ಲಿ ಹುಡುಕುವುದು? ಮೂಲಿಕಾ ಔಷಧಿಯ ಸಂಮೋಹನಕ್ಕೆ ಒಳಗಾದಂತಿರುವ ಬಳಕೆದಾರರ ಜಗತ್ತು, ತಾವು ಬಳಸುವ ಮದ್ದಿನ ಕ್ಷಮತೆ ಹಾಗೂ ಅದರಲ್ಲಿನ ಗಿಡಗಳ ಮೂಲದ ಕುರಿತು ಪ್ರಶ್ನಿಸಲು ಆರಂಭಿಸಿದರೆ ಮಾತ್ರ, ಪರಿಹಾರದ ದಾರಿ ಕಾಣಿಸತೊಡಗೀತು.

ಲೇಖಕ: ನಿರ್ದೇಶಕ,ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ,ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT