ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹದಿಂದ ಹಕ್ಕು ಚಲಾವಣೆ

ಉಡುಪಿ ಜಿಲ್ಲೆಯಲ್ಲಿ ಶೇ 78.57 ಮತದಾನ
Last Updated 13 ಮೇ 2018, 8:39 IST
ಅಕ್ಷರ ಗಾತ್ರ

ಉಡುಪಿ: ಉತ್ಸಾಹದಿಂದ ಮತದಾನ ಮಾಡುವ ಮೂಲಕ ಜಿಲ್ಲೆಯ ಜನರು ಜನತಂತ್ರದ ಹಬ್ಬವನ್ನು ಶನಿವಾರ ಆಚರಿಸಿದರು. ಜನರ ಬದ್ಧತೆಯ ಪರಿಣಾಮ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಯಿತು. 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ 76.62ರಷ್ಟು ಮತದಾನವಾಗಿತ್ತು, ಈ ಬಾರಿ ಅದನ್ನು ಮೀರಿಸಿ ಶೇ 78.57 ಮತದಾನವಾಯಿತು.

ಮತ ಚಲಾಯಿಸಲು ಜನರು ಭಾರಿ ಉತ್ಸಾಹ ತೋರಿದರು. ಜಿಲ್ಲೆಯ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗುವ ಮುನ್ನವೇ ಜನರು ಬಂದು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಧ್ಯಾಹ್ನ 1 ಗಂಟೆವರೆಗೆ ಮತಗಟ್ಟೆಗಳು ಗಿಜಿಗಿಡುತ್ತಿದ್ದವು. ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು ಹಾಗೂ ಯುವ ಮತದಾರರು ಸಾಲು ಸಾಲಾಗಿ ಮತಗಟ್ಟೆಯತ್ತ ಹೆಜ್ಜೆ ಹಾಕಿದರು.

ಮಧ್ಯಾಹ್ನ ಬಿಸಿಲು ಏರಿದಂತೆ ಕೆಲವು ಮತಗಟ್ಟೆಗಳಲ್ಲಿ ಸರದಿ ಸಾಲುಗಳು ಕರಗಿದಂತೆ ಕಂಡುಬಂತು. ನಾಲ್ಕು ಗಂಟೆಯ ನಂತರ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತಗಟ್ಟೆಯತ್ತ ಬಂದು ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಿದರು. ಮುಕ್ತವಾಗಿ ಮತದಾನ ಮಾಡಲು ಅನುಕೂಲವಾಗುವಂತೆ ಮತಗಟ್ಟೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸೂಕ್ಷ್ಮ ಮತಗಟ್ಟೆಗಳಿಗೆ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಶಸ್ತ್ರಧಾರಿ ಸಿಬ್ಬಂದಿ ಮತಗಟ್ಟೆಯ ಸುತ್ತ ಹದ್ದಿನ ಕಣ್ಣಿಟ್ಟಿದ್ದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿರುವ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು.

ಉಡುಪಿಯ ಕುಕ್ಕಿಕಟ್ಟೆಯಲ್ಲಿ ಮತ ಯಂತ್ರದಲ್ಲಿ ದೋಷ ಕಂಡುಬಂತು. ಅದನ್ನು ಬದಲಾಯಿಸಲು ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಮತದಾರರು ಅಸಮಾಧಾನ ವ್ಯಕ್ತಪಡಿಸಿ ದರು. ಸುಮಾರು 200 ಮಂದಿ ಬೆಳಿಗ್ಗೆ ಮತದಾನ ಮಾಡಲು ಬಂದಿದ್ದರು. ಉಡುಪಿಯ ಮೂಡಬೆ ಟ್ಟಿನಲ್ಲಿ ನಿಧಾನಗತಿಯ ಮತದಾನದಿಂದ ಜನರು ಅಸಮಾಧಾನಗೊಂಡರು. ಸಿಬ್ಬಂದಿ ವೇಗವಾಗಿ ಕಾರ್ಯನಿರ್ವಹಿಸದ ಕಾರಣ ಸುಮಾರು ನೂರೈವತ್ತು ಜನ ಸಾಲುಗಟ್ಟುವಂತಾಯಿತು. ಅದರಲ್ಲಿ ಕೆಲವರು ಮತದಾನ ಮಾಡದೆ ವಾಪಸ್ ಮರಳಿದರು ಎಂದು ಮುರಳೀಧರ ಆಚಾರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಪಿಂಕ್ ಮತಗಟ್ಟೆಯ ಆಕರ್ಷಣೆ ಮಹಿಳಾ ಮತದಾರರ ಸಂಖ್ಯೆ ಶೇ 50ಕ್ಕಿಂತ ಹೆಚ್ಚಿರುವ ಕಡೆಗಳಲ್ಲಿ ‘ಪಿಂಕ್’ ಮಹಿಳಾ ಮತಗಟ್ಟೆ ತೆರೆಯಲಾಗಿತ್ತು. ಗುಲಾಬಿ ಬಣ್ಣದಿಂದ ಮತಗಟ್ಟೆಯನ್ನು ಸಿಂಗರಿಸಲಾಗಿತ್ತು. ಮತಗಟ್ಟೆ ಹಾಗೂ ಭದ್ರತೆಗೆ ಮಹಿಳಾ ಸಿಬ್ಬಂದಿಯನ್ನೇ ನಿಯೋಜಿಸಲಾಗಿತ್ತು. ಉಡುಪಿಯ ಕನ್ನರ್ಪಾಡಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಪಿಂಕ್ ಮತಗಟ್ಟೆ ತೆರೆಯಲಾ ಗಿತ್ತು. ಅಲ್ಲಿ ಬೆಳಿಗ್ಗೆ 7.30ರ ಸುಮಾರಿಗೆ ನೂರಾರು ಮಂದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು. ಮಹಿಳಾ ಮತದಾ ರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಒಟ್ಟು 10 ಪಿಂಕ್ ಮತಗಟ್ಟೆ ತೆರೆಯಲಾಗಿತ್ತು.

ಬುಡಕಟ್ಟು ಮತಗಟ್ಟೆ ಸಹ ಈ ಚುನಾವಣೆಯ ಆಕರ್ಷಣೆಯಾಗಿತ್ತು. ಹೆಬ್ರಿಯ ಮತಗಟ್ಟೆ ಸಂಖ್ಯೆ 13ಅನ್ನು ಬುಡಕಟ್ಟು ಮತಗಟ್ಟೆ ಎಂದು ಪರಿಗಣಿಸಿ ಸಿಂಗರಿಸಲಾಗಿತ್ತು. ಕುಂದಾಪುರದ ತೆಕ್ಕಟ್ಟೆ ಮತಗಟ್ಟೆಯಲ್ಲಿ ಒಟ್ಟು 85 ಅಂಗವಿಕಲ ಮತದಾರರು ಇರುವ ಕಾರಣ ಅದನ್ನು ಅಂಗವಿಕಲರ ಮತಗಟ್ಟೆ ಎಂದು ಪರಿಗಣಿಸಿ ವಿಶೇಷ ಸೌಲಭ್ಯ ಒದಗಿಸಲಾಗಿತ್ತು. ಗಾಲಿ ಕುರ್ಚಿ, ಸ್ಟಿಕ್ ಇಡಲಾಗಿತ್ತು. ಅಂಗವಿಕಲರು ಮತಗಟ್ಟೆಯ ಒಳಗೆ ಹೋಗಿ ಮತದಾನ ಮಾಡಲು ಸಿಬ್ಬಂದಿ ನೆರವು ನೀಡಿದರು. ನಕ್ಸಲ್‌ ಪೀಡಿತ ಮತಗಟ್ಟೆಗಳಲ್ಲಿ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು,

**
ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಮಾಡುವ ಮೂಲಕ ಜಿಲ್ಲಾಡಳಿತದ ಕರೆಗೆ ಸ್ಪಂದಿಸಿದ್ದಾರೆ. ಹೆಚ್ಚಿನ ಮತದಾನವಾಗಿರುವುದು ಸಂತೋಷ ತಂದಿದೆ
– ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT