ಸೋಮವಾರ, ಅಕ್ಟೋಬರ್ 14, 2019
23 °C
‘ಒಂದು ಮತ ಎರಡು ಸರ್ಕಾರ’ದ ಭರವಸೆ: ನಂಬಿ ಕೆಟ್ಟರೇ ನಾಡಿನ ಜನ?

ಮಹಾಮಳೆಗೆ ಸೂರು, ಪೈರು ಹಾನಿ | ಕೇಂದ್ರ ತಾತ್ಸಾರ: ಸಂತ್ರಸ್ತರಿಗೆ ಸಿಗದ ಪರಿಹಾರ

Published:
Updated:

ತಿಂಗಳ ಹಿಂದೆ ಸುರಿದ ಮಹಾಮಳೆಗೆ ಸೂರು, ಪೈರು ಕಳೆದುಕೊಂಡ ಕನ್ನಡ ತಾಯಿಯ ಮಕ್ಕಳು ತಬ್ಬಲಿಗಳಾಗಿದ್ದಾರೆ. ಕೊಚ್ಚಿಹೋದ ಸೇತುವೆ, ರಸ್ತೆಗಳಿಂದ ಸಂಪರ್ಕವೇ ಕಡಿದುಹೋಗಿದ್ದು, ವಿಪತ್ತು ತಂದ ಆಘಾತದಿಂದ ಚೇತರಿಸಿಕೊಳ್ಳಲಾಗದೇ ಜನರು ಏದುಸಿರು ಬಿಡುತ್ತಿದ್ದಾರೆ. ಗುಡ್ಡಗಳೇ ಕುಸಿದು ಮನೆ, ಜಮೀನು ಕಾಣೆಯಾಗಿದ್ದರಿಂದಾಗಿ ಕಂಗಾಲಾದ ಮಣ್ಣಿನ ಮಕ್ಕಳು ಆತ್ಮಹತ್ಯೆಯತ್ತ ಮುಖ ಮಾಡುತ್ತಿರುವ ಸುದ್ದಿ ಆತಂಕ ತರುತ್ತಿದೆ. ದಿಕ್ಕುಗಾಣದ ಸ್ಥಿತಿಯಲ್ಲಿ ಒದ್ದಾಡುತ್ತಿರುವ ನಾಡಿನ ಜನರ ಸಂಕಷ್ಟಕ್ಕೆ ಧಾವಿಸಬೇಕಾಗಿದ್ದ ಸರ್ಕಾರ ಮಾತ್ರ ಅಸ್ತಿತ್ವದಲ್ಲಿದ್ದೂ ಇಲ್ಲದಂತಾಗಿದೆ.

‘ಅನರ್ಹ ಶಾಸಕರಿಗಾಗಿ ಉಳಿಸಿಕೊಂಡಿದ್ದೇವೆ’ ಎಂದು ಹೇಳಿದ ಬಿಜೆಪಿ ನಾಯಕರು ಸಚಿವ ಸಂಪುಟದ ಅರ್ಧದಷ್ಟನ್ನು ಮಾತ್ರ ಭರ್ತಿ ಮಾಡಿದರು. ಪೂರ್ಣ ಪ್ರಮಾಣದಲ್ಲಿ ಸಚಿವರೂ ಇಲ್ಲ; ಸಚಿವರಾದವರಿಗೆ ಜಿಲ್ಲಾ ಉಸ್ತುವಾರಿಯನ್ನು ಹಂಚಿಕೆ ಮಾಡಿಲ್ಲ. ಬೆಂಗಳೂರು ಉಸ್ತುವಾರಿ ಕೊಟ್ಟಿಲ್ಲವೆಂದು ಸಿಟ್ಟಾಗಿರುವ ಕಂದಾಯ ಸಚಿವ ಆರ್. ಅಶೋಕ್‌, ಸಂತ್ರಸ್ತರ ನಾಡಿಗೆ ಕಾಲಿಟ್ಟಿಲ್ಲ. ಕೃಷಿ ಖಾತೆ ಮುಖ್ಯಮಂತ್ರಿ ಬಳಿಯೇ ಇದೆ. ತಕ್ಷಣದ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲಾಗಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಸರ್ಕಾರ ಕಾರ್ಯತತ್ಪರವಾಗಿಲ್ಲ ಎಂಬ ಆಕ್ರೋಶ ನೆರೆ ಸಂತ್ರಸ್ತರ ಒಡಲಾಳದಿಂದ ಹೊರಹೊಮ್ಮಲು ಆರಂಭವಾಗಿದೆ.

2009ರಲ್ಲಿ ಇಂತಹದೇ ಪ್ರವಾಹ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದಾಗ ಯಡಿಯೂರಪ್ಪನವರೇ ಮುಖ್ಯಮಂತ್ರಿ. ಆಗ ಪ್ರಧಾನಿಯಾಗಿದ್ದ ಮನಮೋಹನಸಿಂಗ್‌ ರಾಜ್ಯಕ್ಕೆ ಧಾವಿಸಿ, ವೈಮಾನಿಕ ಸಮೀಕ್ಷೆ ನಡೆಸಿದ್ದರು. ರಾಜ್ಯದಿಂದ ನಿರ್ಗಮಿಸುವ ಮೊದಲು ₹1500 ಕೋಟಿ ಪರಿಹಾರ ಘೋಷಿಸಿದ್ದರು. ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರು ನಡೆದುಕೊಳ್ಳಬೇಕಾದ ಮಾದರಿ ಇದಾಗಿತ್ತು ಎಂದರೆ ಪ್ರಶಂಸೆಯಾಗುವುದಿಲ್ಲ.

‘ಮೊನ್ನೆಯ ಪ್ರವಾಹದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಗೃಹ ಸಚಿವ ಅಮಿತ್ ಶಾ ಬಂದು ಹೋದರು. ಆದರೆ, ಪರಿಹಾರ ಮಾತ್ರ ನಯಾಪೈಸೆ ಉದುರಲಿಲ್ಲ. ನಾವು ಜನರಿಗೆ ಏನು ಹೇಳುವುದು’ ಎಂಬುದು ಬಿಜೆಪಿ ನಾಯಕರು ಆಪ್ತರ ಜತೆ ಹೇಳಿಕೊಳ್ಳುತ್ತಿರುವ ನೋವಿನ ನುಡಿ. 

ಪ್ರಧಾನಿ ಮೋದಿ ರಾಜ್ಯಕ್ಕೆ ಬಂದರೂ ಚಂದ್ರಯಾನ ವೀಕ್ಷಿಸಿ ಹೋದರೆ ವಿನಃ ಸಂತ್ರಸ್ತರ ಕಷ್ಟ ನೋಡುವ  ಔದಾರ್ಯ ತೋರಲಿಲ್ಲ. ಸಂಬಂಧವೇ ಇಲ್ಲದ ರಷ್ಯಾಕ್ಕೆ ಸುಮಾರು ₹7,200 ಕೋಟಿ ನೀಡಿದ ಪ್ರಧಾನಿಯವರಿಗೆ ತಮ್ಮದೇ ದೇಶದ ‘ಬಾಯಿಯೋ ಔರ್ ಬೆಹನೋ’ಗಳ ಸಂಕಷ್ಟ ಕಾಣಿಸಲಿಲ್ಲವೇ?. ಪರಿಹಾರ ಕೊಡಲು ಮಾನದಂಡಗಳಿವೆ ನಿಜ; ಆದರೆ ಅದರಾಚೆಗೆ ಮಾನವೀಯತೆಯ ಅಂತರ್ಸೆಲೆಯು ಆಡಳಿತಗಾರರ ಹೃದಯದಲ್ಲಿರಬೇಕು ಎಂದು ಮತದಾರರು ಭಾವಿಸುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಪರಾಧವಲ್ಲ. 

‘ಬಿಜೆಪಿ ಸರ್ಕಾರ ಬಂದರೆ ಸ್ವರ್ಗವನ್ನೇ ಧರೆಗೆ ಇಳಿಸುತ್ತೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಅನುದಾನದ ಮಹಾಪ್ರವಾಹ ಹರಿದು ಬಂದು, ದೇಶದಲ್ಲೇ ಮಾದರಿ ರಾಜ್ಯವಾಗಿ ಕನ್ನಡ ನಾಡು ಕಂಗೊಳಿಸಲಿದೆ. ಅಪವಿತ್ರ ಮೈತ್ರಿ ಸರ್ಕಾರ ತೊಲಗಬೇಕಾದರೆ ‘ಜನಾದೇಶ’ದಂತೆ ನಾಡಿನಲ್ಲಿ ಕಮಲ ಅರಳಬೇಕು’ ಎಂದು ಲೋಕಸಭೆ ಚುನಾವಣೆ ವೇಳೆ ಬಿ.ಎಸ್‌. ಯಡಿಯೂರಪ್ಪ ಬಾಯಿತುಂಬ ಹೇಳಿದ್ದರು.

ಆಗ ಮತಯಾಚನೆಗೆ ಬಂದಿದ್ದ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದೇ ವರಸೆಯಲ್ಲಿ ಭರವಸೆಗಳ ಗಂಗೆಯನ್ನೇ ಹರಿಸಿದ್ದರು. ಆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂಥ ಉನ್ನತ ಹುದ್ದೆಗೇರಿರುವ ಕನ್ನಡಿಗರಾದ ಬಿ.ಎಲ್. ಸಂತೋಷ್‌, ‘ಒಂದು ಮತ ಎರಡು ಸರ್ಕಾರ’ ಎಂಬ ಘೋಷಣೆ ಕೊಟ್ಟು ಕೇಸರಿ ಪಡೆಯನ್ನು ಹುರಿದುಂಬಿಸಿದ್ದರು. 

ಇವರ ಮಾತನ್ನು ನಂಬಿದ ಜನ ಬಿಜೆಪಿ ಬೆಂಬಲಿತ ಸುಮಲತಾ ಅಂಬರೀಷ್ ಸೇರಿದಂತೆ 26 ಸಂಸದರನ್ನು ಕರ್ನಾಟಕದಿಂದ ಆರಿಸಿ ಕಳುಹಿಸಿದರು. ಆದರೆ, ಈಗ ಕರ್ನಾಟಕಕ್ಕೆ ನಮಗೂ ಸಂಬಂಧವೇ ಇಲ್ಲ ಎಂಬಂತೆ ಕೇಂದ್ರ ಸರ್ಕಾರ ವರ್ತಿಸುತ್ತಿರುವುದು ವಿರೋಧ ಪಕ್ಷ ಕಾಂಗ್ರೆಸ್–ಜೆಡಿಎಸ್‌ ಟೀಕೆಯಲ್ಲ. ಜನರ ಸಿಟ್ಟಿಗೂ ಕಾರಣವಾಗುತ್ತಿದೆ. ವಾಗ್ದಾನಗಳನ್ನು ಈಡೇರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಜನರ ವಾಗ್ಬಾಣಗಳು ಬಿಜೆಪಿಯತ್ತ ತೂರಲಿವೆ ಎಂಬ ಅಭಿಮತಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಹಬ್ಬುತ್ತಿವೆ. 

ಸಂತ್ರಸ್ತರಲ್ಲಿ ಬದುಕಿನ ಬಗ್ಗೆ ಭರವಸೆ ಮೂಡಿಸುವ ಕಾರ್ಯದಲ್ಲಿ ಸರ್ಕಾರ ತೊಡಗದೇ ಇದ್ದರೆ ಮೈತ್ರಿ ಸರ್ಕಾರವೇ ಉತ್ತಮವಾಗಿತ್ತು ಎಂದು ಈಗ ಮೊಳೆತಿರುವ ಭಾವನೆ, ವಿಸ್ತಾರವಾಗಿ ಹಬ್ಬಲಿದೆ.

ಸಾಲು ವರ್ಗಾವಣೆಯೇ ಸಾಧನೆ!

ಬಿಜೆಪಿ ಸರ್ಕಾರ ಬಂದು ಒಂದೂವರೆ ತಿಂಗಳ ಮಾಡಿದ ಪ್ರಮುಖ ಸಾಧನೆ ಎಂದರೇ ಸಾಲು ಸಾಲು ವರ್ಗಾವಣೆ. ಉನ್ನತ ಸ್ತರದ ಅಧಿಕಾರಿಗಳಿಂದ ಹಿಡಿದು ಕೆಳಹಂತದವರೆಗೂ ವರ್ಗಾವಣೆಗಳು ಪ್ರತಿನಿತ್ಯ ಎಂಬಂತೆ ನಡೆಯುತ್ತಲೇ ಇವೆ. ಹೀಗಾದರೆ, ಸಮರ್ಪಕವಾಗಿ ಕೆಲಸ ನಿರ್ವಹಿಸುವುದು ಹೇಗೆ ಸಾಧ್ಯ ಎಂಬುದು ಅಧಿಕಾರಿ ವಲಯದ ಪ್ರಮುಖ ಆಕ್ಷೇಪ.

‘ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೇವಲ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ’ ಎಂದು ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದರು. ಈಗಿನ ಸರ್ಕಾರದ ಅಲ್ಪಾವಧಿಯಲ್ಲಿ ಎಲ್ಲ ಹಂತದ ವರ್ಗಾವಣೆಗಳ ಲೆಕ್ಕ ಹಿಡಿದರೆ ಅದರ ಸಂಖ್ಯೆ 250ರ ಗಡಿ ದಾಟುತ್ತದೆ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗಿನ ವಿರೋಧ ಪಕ್ಷ ಕಾಂಗ್ರೆಸ್ ಒತ್ತಾಯಿಸಿದರೂ ಒಂದೇ ಒಂದು ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಿರಲಿಲ್ಲ. ಐಎಂಎ ವಂಚನೆ, ಟೆಲಿಫೋನ್ ಕದ್ದಾಲಿಕೆ ಹಾಗೂ ಧಾರವಾಡ ಜಿಲ್ಲಾಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಕೊಲೆ  ಹೀಗೆ ಮೂರು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದು ಸಾಧನೆಯ ಮತ್ತೊಂದು ಮಜಲು. 

Post Comments (+)