ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ‍‍ಪಿಎಂ ರಾಜಕೀಯ ನಡೆ ಮರುಚಿಂತನೆಯ ದಿಕ್ಸೂಚಿ

Last Updated 24 ಏಪ್ರಿಲ್ 2018, 19:32 IST
ಅಕ್ಷರ ಗಾತ್ರ

ಮತ್ತೆ ಮೂರು ವರ್ಷಗಳ ಅವಧಿಗೆ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಅವರನ್ನು ಮುಂದುವರಿಸಲಾಗಿದೆ. ಹಲವು ವಾರಗಳ ಅನಿಶ್ಚಯದ ನಂತರ, ಮತ್ತೊಮ್ಮೆ ಎರಡನೇ ಅವಧಿಗೆ ಯೆಚೂರಿ ಅವರ ಆಯ್ಕೆಯ ಬಗ್ಗೆ ಹೈದರಾಬಾದ್‌ನಲ್ಲಿ ನಡೆದ ಪಕ್ಷದ 22ನೇ ಸಮ್ಮೇಳನದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ ನಂತರ ನಡೆದ ಆಯ್ಕೆ ಇದು. ಸಿಪಿಎಂನ ಭದ್ರಕೋಟೆಗಳಾಗಿದ್ದ ಪಶ್ಚಿಮ ಬಂಗಾಳ ಹಾಗೂ ತ್ರಿಪುರಾಗಳಲ್ಲಿ ತೀವ್ರತರ ಸೋಲನುಭವಿಸಿರುವ ಸಿಪಿಎಂ ಅಂಚಿಗೆ ಸರಿದುಹೋಗಿದೆ. ಕೇರಳದಲ್ಲಿ ಮಾತ್ರ ಆಡಳಿತ ನಡೆಸುತ್ತಿರುವ ಈ ಪಕ್ಷ ಈಗ ಕೇವಲ 14 ಸಂಸತ್‌ ಸದಸ್ಯರನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ನಡೆದ ಪಕ್ಷದ ಸಮ್ಮೇಳನ ಗಮನ ಸೆಳೆದುಕೊಂಡಿದ್ದು ಸಹಜವೇ ಆಗಿತ್ತು. ಮುಂದಿನ ಮೂರು ವರ್ಷಗಳವರೆಗೆ ಸಿ‍ಪಿಎಂನ ರಾಜಕೀಯ ಲೆಕ್ಕಾಚಾರಗಳ ವಿಚಾರಧಾರೆಯನ್ನು ಈ ಸಮ್ಮೇಳನ ಅಂತಿಮಗೊಳಿಸುತ್ತದೆಯಾದ್ದರಿಂದ ಈ ಸಮ್ಮೇಳನಕ್ಕೆ ಇನ್ನಷ್ಟು ಪ್ರಾಮುಖ್ಯ ಪ್ರಾಪ್ತವಾಗಿತ್ತು. ಸಿಪಿಎಂನ ಹೊಸ ಕರಡು ರಾಜಕೀಯ ನಿರ್ಣಯದ ಬಗ್ಗೆ ತಿಂಗಳುಗಟ್ಟಲೆ ಕೊಸರಾಟವೂ ನಡೆದಿತ್ತು. ಕಾಂಗ್ರೆಸ್ ಜೊತೆಗೆ ಸಿ‍ಪಿಎಂ ಹೊಂದಬಹುದಾದ ಸಂಬಂಧದ ಬಗ್ಗೆ  ಪಕ್ಷದೊಳಗೇ ಇರುವ ತೀವ್ರವಾದ ಭಿನ್ನ ಮತ ಇಲ್ಲಿ ಮುಖ್ಯವಾದುದಾಗಿತ್ತು.  ಬಿಜೆಪಿಯನ್ನು ವಿರೋಧಿಸುವ ಬಗ್ಗೆ ಸಿಪಿಎಂ ಒಗ್ಗಟ್ಟಾಗಿಯೇ ಇದೆ. ಆದರೆ, ಕಾಂಗ್ರೆಸ್ ಜೊತೆಗಿನ ಯಾವುದೇ ಚುನಾವಣಾ ಮೈತ್ರಿಗೆ ಕೇರಳ ಹಾಗೂ ತ್ರಿಪುರಾ ಘಟಕಗಳಿಂದ ತೀವ್ರ ವಿರೋಧ ಇದೆ. ಇದರಿಂದಾಗಿ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ನಿಲುವಿನ ಪರವಾಗಿರುವ ಯೆಚೂರಿ ಅವರ ರಾಜಕೀಯ ಕಾರ್ಯತಂತ್ರ ನಡೆಗೆ ಪ್ರಮುಖ ಸವಾಲು ಎದುರಾಗಿತ್ತು. ಕಡೆಗೆ, ‘ಕಾಂಗ್ರೆಸ್ ಜೊತೆ ಯಾವುದೇ ಚುನಾವಣಾ ಮೈತ್ರಿ ಬೇಡ’ ಎಂಬ ಮಾತುಗಳನ್ನು ತೆಗೆದು ಅಧಿಕೃತ ರಾಜಕೀಯ ಕಾರ್ಯತಂತ್ರಗಳ ಕರಡಿನಲ್ಲಿ ತಿದ್ದುಪಡಿ ಮಾಡಲು ನಿರ್ಧರಿಸಿದ್ದು ಮುಖ್ಯ ಬೆಳವಣಿಗೆ. ಯೆಚೂರಿ ಅವರು ಹೊಂದಿದ್ದ ದೃಷ್ಟಿಕೋನಕ್ಕೆ ಸಂದ ಜಯ ಇದು ಎಂದು ಭಾವಿಸಲಾಗಿದೆ. ಹೀಗಿದ್ದೂ ಗೊಂದಲಗಳು ಪೂರ್ತಿ ಬಗೆಹರಿದಂತೇನೂ ಕಂಡುಬರುತ್ತಿಲ್ಲ.

2016ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಕೈಗೊಂಡ ನಿರ್ಧಾರದಿಂದಾಗಿ ಯೆಚೂರಿ ಹಾಗೂ ಸಿ‍ಪಿಎಂನ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್‌ ಬಣಗಳ ನಡುವಿನ ಭಿನ್ನಾಭಿಪ್ರಾಯ ತೀವ್ರವಾಗಿತ್ತು. ಕಾರಟ್ ಅವರು ಸಿಪಿಎಂನ ಪಾರಂಪರಿಕ ಕಾಂಗ್ರೆಸ್ ವಿರೋಧಿ ಧೋರಣೆಗೆ ಲಾಗಾಯ್ತಿನಿಂದಲೂ ಅಂಟಿಕೊಂಡಿದ್ದಾರೆ. 1964ರಲ್ಲಿ ಭಾರತದ ಕಮ್ಯುನಿಸ್ಟ್ ಪಾರ್ಟಿ ವಿಭಜನೆಯಾಗಲು ಕಾಂಗ್ರೆಸ್ ಜೊತೆಗಿನ ಸಂಬಂಧದಲ್ಲಿನ ವಿವಾದವೂ ಮುಖ್ಯ ಕಾರಣವಾಗಿತ್ತು ಎಂಬುದನ್ನು ಸ್ಮರಿಸಬಹುದು. ಹೀಗಾಗಿ ಈಗ ಸಿಪಿಎಂ ಅಳವಡಿಸಿಕೊಂಡಿರುವ ವಿಸ್ತೃತವಾದ ನಿಲುವು ಮರುಚಿಂತನೆಯ ಆರಂಭವನ್ನು ಸೂಚಿಸುತ್ತದೆಯೇ?  ಈ ದೃಷ್ಟಿಯಿಂದ ಹೈದರಾಬಾದ್ ಅಧಿವೇಶನ ಮಹತ್ವದ್ದು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗಾಗಿ ಕೆಲಸ ಮಾಡುವುದು ತಮ್ಮ ಪಕ್ಷದ ತಕ್ಷಣದ ಗುರಿ ಎಂದು ಯೆಚೂರಿ ಪ್ರಕಟಿಸಿದ್ದಾರೆ. ಇದಕ್ಕಾಗಿ  ಕಾಂಗ್ರೆಸ್ ಸೇರಿದಂತೆ ಯಾವುದೇ ಬೂರ್ಜ್ವಾ ಪಕ್ಷದ ಜೊತೆ ಮೈತ್ರಿ ಏರ್ಪಾಡು ಹೊಂದಲು ಅವರಿಗೆ ಈಗ ಸ್ವಾತಂತ್ರ್ಯವಿದೆ. ಆದರೆ ಕೇರಳದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡುತ್ತಾ ಬೇರೆ ರಾಜ್ಯಗಳಲ್ಲಿ ಮೈತ್ರಿ ಅರಸುವ ದ್ವಂದ್ವದ ಸವಾಲುಗಳೂ ಸಿಪಿಎಂ ಮುಂದಿವೆ. ಯೆಚೂರಿ ಅವರು ಒಂದು ಅರ್ಥದಲ್ಲಿ ಹರಿಕಿಶನ್ ಸಿಂಗ್ ಸುರ್ಜಿತ್ ಅವರ ಉತ್ತರಾಧಿಕಾರಿಯಂತೆ ಗೋಚರಿಸುತ್ತಾರೆ. ಆಗ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುರ್ಜಿತ್ ಅವರ ವಾಸ್ತವಿಕ ದೃಷ್ಟಿಕೋನ 1989ರಲ್ಲಿ ವಿ.ಪಿ. ಸಿಂಗ್ ಅವರ ರಾಷ್ಟ್ರೀಯ ರಂಗ ಸರ್ಕಾರ ರಚನೆಗೆ ಮುಖ್ಯ ಕಾರಣವಾಗಿತ್ತು. ಕಾಂಗ್ರೆಸ್‌ನ ಈ ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ನಾಯಕರೊಂದಿಗೆ ಯೆಚೂರಿ ಅವರು ಬಾಂಧವ್ಯವನ್ನು ಕಾಪಾಡಿಕೊಂಡಿದ್ದಾರೆ. ಸೈದ್ಧಾಂತಿಕ ಕಾರಣಗಳಿಗಾಗಿ ಸಿಪಿಎಂ ಪಕ್ಷದಲ್ಲಿ ಆಂತರಿಕವಾಗಿ ಭಿನ್ನ ಮತ ಇರುವುದನ್ನು ಯೆಚೂರಿ ಅವರೇನೋ ತಳ್ಳಿಹಾಕಿದ್ದಾರೆ. ‘ನಮ್ಮ ಏಕತೆ ಉಕ್ಕಿನಷ್ಟು ಗಟ್ಟಿಯಾಗಿದೆ’ ಎಂದು ಹೇಳಿಕೊಂಡಿದ್ದಾರೆ. ಹೀಗಿದ್ದೂ 2019ರ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ‘ಕಾಂಗ್ರೆಸ್’  ಜೊತೆಗಿನ ಬಾಂಧವ್ಯದ ವಿಚಾರ ಕಾರಟ್ ಹಾಗೂ ಯೆಚೂರಿ ಬಣಗಳ ಮಧ್ಯೆ ಮತ್ತೆ ವಿವಾದವನ್ನೇನೂ ಸೃಷ್ಟಿಸುವುದಿಲ್ಲ ಎಂಬುದನ್ನು ಹೇಳಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT