ಉಪ ಚುನಾವಣೆ ಸೋಲು ಗೆಲುವಿನ ರಾಜಕೀಯ ಲೆಕ್ಕಾಚಾರ

7

ಉಪ ಚುನಾವಣೆ ಸೋಲು ಗೆಲುವಿನ ರಾಜಕೀಯ ಲೆಕ್ಕಾಚಾರ

Published:
Updated:

ಬೆಂಗಳೂರು: ಉಪ ಚುನಾವಣೆಗಳು ಮಹಾ ಚುನಾವಣೆಗೆ ದಿಕ್ಸೂಚಿಯಾದ ನಿದರ್ಶನಗಳು ಎಂದೂ ಇಲ್ಲ. ಗೆಲುವು ಸಿಕ್ಕಾಗ ರಾಜಕೀಯ ನಾಯಕರು ಹೀಗೆ ವಿಶ್ಲೇಷಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಪರಿಪಾಟ ನಡೆದು ಬಂದಿದೆ. ಆದರೆ, ಅದು ವಾಸ್ತವಕ್ಕೆ ದೂರ. ಏಕೆಂದರೆ, ಉಪಚುನಾವಣೆ ಅಥವಾ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕಿಂತ ಮಹಾ ಚುನಾವಣೆಯ ಜನಾದೇಶ ವಿಭಿನ್ನವಾಗಿರುವ ಅನೇಕ ಸಾಕ್ಷ್ಯಗಳು ನಮ್ಮ ಮುಂದಿವೆ.

2008 ಹಾಗೂ 2013ರ ವಿಧಾನಸಭೆ ಚುನಾವಣೆಗಳ ಬಳಿಕ ನಡೆದ ಉಪ ಚುನಾವಣೆಗಳನ್ನು ಗಮನಿಸಿದರೆ ರಾಜ್ಯದ ಆಡಳಿತಾರೂಢ ಪಕ್ಷವೇ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್, ಕಾಂಗ್ರೆಸ್‌ನ 16ಕ್ಕೂ ಹೆಚ್ಚು ಶಾಸಕರ ರಾಜೀನಾಮೆ ಕೊಡಿಸಿದ್ದರು. ಆಗ ಮಧುಗಿರಿ, ತುರುವೇಕೆರೆಗಳಲ್ಲಿ ಜೆಡಿಎಸ್, ಗೋವಿಂದರಾಜನಗರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಉಳಿದ ಕಡೆ ಬಿಜೆಪಿಯೇ ಗೆದ್ದಿತ್ತು.

2013ರಲ್ಲಿ ವಿಧಾನಸಭೆಗೆ ಆಯ್ಕೆಯಾದ ಕುಮಾರಸ್ವಾಮಿ, ಚೆಲುವರಾಯಸ್ವಾಮಿ ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಈ ಚುನಾವಣೆಗಳಲ್ಲಿ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಗೆದ್ದಿತ್ತು.

2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಆಯ್ಕೆಯಾದ ಬಿ.ಎಸ್. ಯಡಿಯೂರಪ್ಪ, ಶ್ರೀರಾಮುಲು, ಪ್ರಕಾಶ್ ಹುಕ್ಕೇರಿ ಕ್ರಮವಾಗಿ ಶಿಕಾರಿಪುರ, ಬಳ್ಳಾರಿ ಗ್ರಾಮಾಂತರ ಹಾಗೂ ಚಿಕ್ಕೋಡಿ ಸದಲಗ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಆಗ ಶಿಕಾರಿಪುರದಲ್ಲಿ ಮಾತ್ರ ಬಿಜೆಪಿ ಗೆದ್ದರೆ, ಉಳಿದ ಕಡೆ ಕಾಂಗ್ರೆಸ್ ಗೆದ್ದಿತ್ತು. ಶಾಸಕರ ಅಕಾಲಿಕ ಮರಣ ಹಾಗೂ ಶಾಸಕರು ರಾಜೀನಾಮೆ ನೀಡಿದ್ದರಿಂದ ನಡೆದ ಉಪಚುನಾವಣೆಗಳಲ್ಲಿ ಒಂದರಲ್ಲಿ ಮಾತ್ರ ಬಿಜೆಪಿ, ಉಳಿದ ಮೂರು ಕಡೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಈ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು.

ಹೀಗೆ ಅಧಿಕಾರದಲ್ಲಿದ್ದ ಪಕ್ಷ ಉಪ ಚುನಾವಣೆಯಲ್ಲಿ ಗೆಲ್ಲುವುದು ಅನೂಚಾನವಾಗಿ ನಡೆದು ಬಂದಿದೆ. ಹೀಗಾಗಿ, ಮೈತ್ರಿಕೂಟ ಈ ವಿಷಯದಲ್ಲಿ ಬೀಗುವ ಅಗತ್ಯವಿಲ್ಲ. ಆದರೆ, ಮೈತ್ರಿಕೂಟದಲ್ಲಿ ಒಗ್ಗಟ್ಟು ಇಲ್ಲದೇ ಇರುವುದು, ಸರ್ಕಾರದಲ್ಲಿ ಸಮನ್ವಯ ಕಾಣಿಸದೇ ಇರುವುದರ ಮಧ್ಯೆಯೂ ಮಿತ್ರಕೂಟದ ಅಭ್ಯರ್ಥಿಗಳು ಜಯಬೇರಿ ಬಾರಿಸಿರುವುದು ವಿಶೇಷ. ಇನ್ನೇನು ಆರು ತಿಂಗಳೊಳಗೆ ಬರಲಿರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಮುನ್ನ ನಡೆದ ಈ ಉಪ ಚುನಾವಣೆ, ಮೋದಿ ಜನಪ್ರಿಯತೆ ಮತ್ತು ಯಡಿಯೂರಪ್ಪ ನಾಯಕತ್ವದ ಪರೀಕ್ಷೆ ಎನ್ನುವುದಾದರೆ ಬಿಜೆಪಿಗೆ ದೊಡ್ಡ ಹಿನ್ನಡೆ ಎನ್ನದೇ ವಿಧಿಯಿಲ್ಲ.

ರಾಜ್ಯ ರಾಜಕಾರಣದ ಮೇಲೆ ಉಪಚುನಾವಣೆ ಪರಿಣಾಮಗಳೇನು

ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ

* ಉಪ ಚುನಾವಣೆ ನಡೆದ ಒಟ್ಟು ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಮೈತ್ರಿಕೂಟ ಜಯ ಸಾಧಿಸಿರುವುದು ನಾಯಕರ ಉತ್ಸಾಹ ಇಮ್ಮಡಿಗೊಳಿಸಲಿದೆ.

* ಲೋಕಸಭೆ ಚುನಾವಣೆಗೆ ಅನುಕೂಲಕಾರಿ ವಾತಾವರಣ ಇದೆ ಎಂಬ ಭಾವನೆ ಮೂಡಿಸಲಿದ್ದು, ಬಿಜೆಪಿ ಮುಕ್ತ ಭಾರತದ ರಾಹುಲ್ ಗಾಂಧಿ ಕರೆಗೆ ಕೈಜೋಡಿಸುವ ಉಮೇದು ಹೆಚ್ಚಿಸಲಿದೆ.

* ಜೆಡಿಎಸ್ ಜತೆಗಿನ ಮೈತ್ರಿಯಿಂದ ನಷ್ಟವಾಗಿದೆ ಎಂಬ ಕಾರ್ಯಕರ್ತರ ಅಸಮಾಧಾನವನ್ನು ಹೋಗಲಾಡಿಸಿ, ಬಿಜೆಪಿ ಸೋಲಿಸಲು ಮೈತ್ರಿ ಅನಿವಾರ್ಯ ಎಂಬುದನ್ನು ಅರ್ಥ ಮಾಡಿಸಲು ಇದು ನೆರವಾಗಲಿದೆ. ಎರಡು ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಮೈತ್ರಿಯನ್ನು ಮತ್ತಷ್ಟು ಬಲಗೊಳಿಸಲಿದೆ.

* ಚುನಾವಣೆವರೆಗೂ ಪಕ್ಷದ ಚಟುವಟಿಕೆಯಿಂದ ಸ್ವಲ್ಪಮಟ್ಟಿಗೆ ದೂರ ಉಳಿದಿದ್ದ ಸಿದ್ದರಾಮಯ್ಯ ಶಲ್ಯ ಕೊಡವಿ ನಿಂತು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪಕ್ಷಕ್ಕೆ ಸಿದ್ದರಾಮಯ್ಯ ನಾಯಕತ್ವ ಅಗತ್ಯ ಎಂಬುದನ್ನು ಈ ಚುನಾವಣೆ ಪ್ರತಿಪಾದಿಸಿದೆ.

* ಬಳ್ಳಾರಿ ಚುನಾವಣೆ ಉಸ್ತುವಾರಿ ಹೊತ್ತಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಈ ಗೆಲುವನ್ನು ತಮ್ಮ ನಾಯಕತ್ವ ಮತ್ತು ಪ್ರಭಾವಕ್ಕೆ ಬಳಸಿಕೊಳ್ಳಲು ಅಣಿಯಾಗಲಿದ್ದಾರೆ. ಇದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಧ್ಯೆ ನಡೆಯುತ್ತಿರುವ ನಾಯಕತ್ವದ ಸಮರಕ್ಕೂ ದಾರಿ ಮಾಡಿಕೊಡಲಿದೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ನಾಯಕತ್ವದ ಪೈಪೋಟಿ ಮತ್ತಷ್ಟು ಹೆಚ್ಚಾಗಬಹುದು.

* ಮುಂದೆ ನಡೆಯಲಿರುವ ಮಹಾಚುನಾವಣೆಯಲ್ಲಿ ಮೈತ್ರಿಕೂಟದಿಂದ ಅಭ್ಯರ್ಥಿ ಕಣಕ್ಕೆ ಇಳಿಸಿದರೆ, ಗೆಲ್ಲುವುದು ಸುಲಭ ಎಂಬ ತರ್ಕದಲ್ಲಿ ರಾಜಕೀಯ ನಿಲುವು, ನಿರ್ಣಯಗಳು ಬದಲಾಗಬಹುದು.

ಕಮಲ ತಳಮಳ: ನಾಯಕತ್ವದ ವಿರುದ್ಧ ಬಂಡು

* ಬಳ್ಳಾರಿ, ಶಿವಮೊಗ್ಗ, ಜಮಖಂಡಿಯಲ್ಲಿ ಗೆದ್ದಿದ್ದರೆ ಮೈತ್ರಿ ಸರ್ಕಾರ ಪತನಗೊಳಿಸುವ ಯತ್ನ ಮತ್ತೆ ಆರಂಭಿಸುವ ಚಿಂತನೆ ನಾಯಕರಲ್ಲಿತ್ತು. ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಸರ್ಕಾರ ಪ್ರತಿಷ್ಠಾಪನೆ ಮಾಡುವ ಇರಾದೆಯೂ ಅಮಿತ್ ಶಾ ಅವರಿಗೆ ಇತ್ತು. ಒಂದೇ ಕ್ಷೇತ್ರದಲ್ಲಿ ಗೆದ್ದಿರುವುದರಿಂದ ಲೋಕಸಭೆ ಚುನಾವಣೆವರೆಗೂ ಸರ್ಕಾರ ಪತನದ ಯತ್ನವನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ.

* ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಾಜ್ಯ ನಾಯಕರಾಗಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಓಡಾಡದೇ, ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಗೆಲ್ಲಿಸಿಕೊಳ್ಳಲು ಶಿವಮೊಗ್ಗಕ್ಕೆ ಸೀಮಿತರಾದರು. ಇದರಿಂದಾಗಿ ಬಳ್ಳಾರಿ, ಜಮಖಂಡಿಯಲ್ಲಿ ಸೋಲಾಯಿತು ಎಂಬ ವಾದ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಗೆ ಮುನ್ನವೇ ನಾಯಕತ್ವ ಬದಲಾವಣೆಯಾಗಬೇಕು ಎಂಬ ಕೂಗು ಜೋರಾಗಬಹುದು.

* ವಾಲ್ಮೀಕಿ ನಾಯಕ ಸಮುದಾಯದ ನೇತಾರ ತಾನಾಗಿದ್ದು ತನಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎಂಬ ಬಿ. ಶ್ರೀರಾಮುಲು ಪ್ರತಿಪಾದನೆಗೆ ಭಂಗ ಬಂದಿದೆ. ಈ ಸಮುದಾಯದ ಅತಿ ಹೆಚ್ಚು ಮತದಾರರಿರುವ, ಮೀಸಲು ಕ್ಷೇತ್ರದಲ್ಲಿ ತಮ್ಮ ಸೋದರಿಯನ್ನು ಗೆಲ್ಲಿಸಿಕೊಳ್ಳಲಾಗದೇ, ಹೀನಾಯ ಸೋಲು ಅನುಭವಿಸಿದ್ದರಿಂದ ಶ್ರೀರಾಮುಲುಗೆ ಪಕ್ಷದಲ್ಲಿ ತೀವ್ರ ಹಿನ್ನಡೆಯಾಗಲಿದೆ.

* ಯಡಿಯೂರಪ್ಪ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ; ಯಾರ ಮಾತನ್ನೂ ಕೇಳುವುದಿಲ್ಲ ಎಂಬ ‘ಪಕ್ಷ ನಿಷ್ಠ’ರ ಆರೋಪಕ್ಕೆ ಮತ್ತೆ ಬಲ ಬರಲಿದ್ದು, ಬಿಜೆಪಿಯಲ್ಲಿ ಭಿನ್ನಮತ ಸ್ಪೋಟವಾಗಬಹುದು.

* ಯಡಿಯೂರಪ್ಪ ತಮ್ಮ ಕ್ಷೇತ್ರಕ್ಕೆ ಸೀಮಿತರಾದರೂ ಗೆಲುವಿನ ಅಂತರ ತೀರಾ ಕುಸಿದಿದೆ. ಇದು ನಾಯಕತ್ವದ ಸಾಮರ್ಥ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ. ಇದನ್ನು ಯಡಿಯೂರಪ್ಪ ವಿರೋಧಿ ಬಣದಲ್ಲಿರುವ ನಾಯಕರು ಅಸ್ತ್ರವಾಗಿ ಬಳಸಿಕೊಂಡು, ಯಡಿಯೂರಪ್ಪ ಅವರನ್ನು ತೆರೆಯ ಹಿಂದೆ ಸರಿಸಲು ಕಾರಣವಾಗಬಹುದು.

* ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಹೊಸ ಕಾರ್ಯತಂತ್ರ ಹೆಣೆಯಲು ಈ ಚುನಾವಣೆ ಪಾಠವಾಗಲಿದೆ.

ಜೆಡಿಎಸ್: ಹೊಸ ಹುರುಪು; ಹೊಸ ಲೆಕ್ಕ

* ಎರಡು ಸ್ಥಾನಗಳನ್ನು ಉಳಿಸಿಕೊಂಡಿರುವುದು, ಮೈತ್ರಿಗೆ ಮುನ್ನಡೆ ಹಾಗೂ ಒಬ್ಬ ಶಾಸಕನೂ ಇಲ್ಲದ ಶಿವಮೊಗ್ಗದಲ್ಲಿ ಭಾರಿ ಪೈಪೋಟಿ ನೀಡಿದ್ದು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿಶ್ವಾಸವನ್ನು ದುಪ್ಪಟ್ಟುಗೊಳಿಸಲಿದೆ.

* ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರ ಸಹಕಾರವಿಲ್ಲ; ಮೈತ್ರಿ ಬೇಕಿಲ್ಲ ಎಂಬರ್ಥದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ ತಮ್ಮ ನಿಲುವು ಬದಲಿಸಿಕೊಳ್ಳಲು ಇದು ಕಾರಣವಾಗಬಹುದು.

* ಲೋಕಸಭೆ ಚುನಾವಣೆಗೆ ಮುನ್ನ ಅಥವಾ ಬಳಿಕ ಮೈತ್ರಿ ಕಡಿದುಕೊಳ್ಳುವ ಆಲೋಚನೆಯಲ್ಲಿದ್ದ ಜೆಡಿಎಸ್ ನ ಕೆಲವು ನಾಯಕರ ಚಿಂತನೆಗೆ ಇದು ಕಡಿವಾಣ ಹಾಕಬಹುದು.

* ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಿದರೆ ಪಕ್ಷಕ್ಕೆ ಲಾಭವಾಗಲಿದೆ; ಪಕ್ಷದ ನೆಲೆಯನ್ನು ರಾಜ್ಯದಾದ್ಯಂತ ವಿಸ್ತರಿಸುವ ಲೆಕ್ಕಾಚಾರಕ್ಕೆ ಇದು ನಾಂದಿ ಹಾಡಲಿದೆ.

* ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಭಾರಿ ಪೈಪೋಟಿ ನೀಡಿದ್ದರಿಂದಾಗಿ, ಲೋಕಸಭೆ ಚುನಾವಣೆಯಲ್ಲಿ ತನ್ನ ನೆಲೆಯಿಲ್ಲದ ಕ್ಷೇತ್ರಗಳನ್ನೂ ಬಿಟ್ಟುಕೊಡುವಂತೆ ಮಿತ್ರ ಪಕ್ಷದ ಚೌಕಾಶಿ ನಡೆಸಿ, ಒತ್ತಡ ಹೇರಲು ಇದು ದಾರಿ ಮಾಡಿಕೊಟ್ಟಿದೆ.

* ಮಂಡ್ಯ ಮತ್ತು ಹಾಸನ ಲೋಕಸಭೆ ಕ್ಷೇತ್ರ ಮಾತ್ರ ಈಗ ಜೆಡಿಎಸ್ ವಶದಲ್ಲಿದೆ. ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು ಕ್ಷೇತ್ರಗಳಿಗೆ ಬೇಡಿಕೆ ಇಡಲು ಇದು ನೆವವಾಗಬಹುದು.

ಬರಹ ಇಷ್ಟವಾಯಿತೆ?

 • 48

  Happy
 • 4

  Amused
 • 3

  Sad
 • 3

  Frustrated
 • 4

  Angry

Comments:

0 comments

Write the first review for this !