ಗುರುವಾರ , ಡಿಸೆಂಬರ್ 5, 2019
20 °C

ಅಭಿಮತ | ಮನೆ ಮಾತಾದ ವಿಶ್ವಾಸಮತದ ಚರ್ಚೆ, ಒಬ್ಬೊಬ್ಬರದು ಒಂದೊಂದು ‘ಕಥೆ’

Published:
Updated:
Prajavani

ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಸೋತಿರುವ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿದೆ. ಆದರೆ ವಿಶ್ವಾಸಮತ ಯಾಚನೆಯ ಪ್ರಕ್ರಿಯೆಯ ಸುತ್ತ ನಡೆದ ಘಟನಾವಳಿಗಳು ಕರ್ನಾಟದಕದಲ್ಲಿ ಮನೆ ಮಾತಾಗಿ ಉಳಿದಿದೆ. ಸಂವಿಧಾನ, ಕಾನೂನು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಅಧಿಕಾರ ವ್ಯಾಪ್ತಿ, ಸ್ಪೀಕರ್‌, ರಾಜ್ಯಪಾಲರ ನಡೆಯ ಬಗ್ಗೆ ಕರ್ನಾಟಕ ವಿಧಾನಸಭೆಯ ಕಲಾಪದಲ್ಲಿ ಮತ್ತು ಅದೇ ಹೊತ್ತಲ್ಲಿ ಸದನದಿಂದ ಹೊರಗೆ ವಿಸ್ತೃತ ಚರ್ಚೆಯಾಗಿದೆ.

ಈ ಚರ್ಚೆಯು ಸಂಸದೀಯ ವ್ಯವಸ್ಥೆಯಲ್ಲಿ ಅಗತ್ಯವೆನಿಸಿದರೂ, ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿಯೇ ಕಾಲಹರಣಕ್ಕೆ ಮಾಡಿಕೊಟ್ಟ ದಾರಿ ಎಂದು ಬಿಜೆಪಿ ದೊಡ್ಡ ಮಟ್ಟದಲ್ಲಿ ಹುಯಿಲೆಬ್ಬಿಸಿತು. ಬಿಜೆಪಿಯ ಈ ಕೂಗು ಜನಾಭಿಪ್ರಾಯವಾಗುತ್ತಾ ಸಾಗಿತು. ಕಲಾಪದ ಕಾಲಹರಣವಾಗುತ್ತಿದೆ. ಸರ್ಕಾರ ಉಳಿಸಿಕೊಳ್ಳುವ ತಂತ್ರವಿದು ಎಂದು ಜನರೂ ಮಾತನಾಡಲಾರಂಭಿಸಿದರು. ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ಎಷ್ಟು ಸಮರ್ಥವಾಗಿ ನಿರೂಪಿಸುತ್ತಾರೋ ಅದೇ ಜನಮನ್ನಣೆಯನ್ನೂ ಪಡೆಯುತ್ತದೆ ಎಂಬುದಕ್ಕೆ ಬಿಜೆಪಿಯ ಈ ನಡೆ ಸಾಕ್ಷಿಯಾಯಿತು.  ಸದ್ಯ ದೇಶದಲ್ಲಿ ಆಗುತ್ತಿರುವುದೂ ಅದೆ, ಜನರ ನಾಡಿ ಮಿಡಿತ ಅರಿತು ಯಾರು ಹೇಗೆ ತಮ್ಮವಿಚಾರ ಧಾರೆಯನ್ನು ಪ್ರತಿಪಾದಿಸುತ್ತಾರೋ ಜನರೂ ಹಾಗೆಯೇ ಮಾತನಾಡುತ್ತಾರೆ. 

ರಾಜಕೀಯ ಪಕ್ಷಗಳು, ರಾಜಕೀಯ ನಾಯಕರ ಮಾತು ಹೇಗೆ ಜನರಿಂದ ಅಂಗೀಕಾರವಾಗುವ ಪ್ರಕ್ರಿಯೆಯನ್ನು ನಾವು ಇತ್ತೀಚಿನ ವಿಶ್ವಾಸ ಮತ ಯಾಚನೆ ಪ್ರಕ್ರಿಯ ಮೂಲಕ ಪರಾಮರ್ಶಿಸೋಣ. 

ಬಹುಮತ

ನಾವು ನೂರೈದಿದ್ದೇವೆ. ಕುಮಾರಸ್ವಾಮಿ ಅವರಿಗೆ ಬಹುಮತವಿಲ್ಲ. ಅವರು ಗೆದ್ದಿರುವುದು ಕೇವಲ 37 ಸ್ಥಾನಗಳನ್ನು ಮಾತ್ರ ಎಂಬುದು ಯಡಿಯೂರಪ್ಪ ಅವರ ಎಂದಿನ ವಾದವಾಗಿತ್ತು. ಇದೇ ವಾದವನ್ನೇ ಬಿಜೆಪಿ ನಾಯಕರೂ ಪ್ರತಿಪಾದಿಸಿದರು. ಯಡಿಯೂರಪ್ಪ ಅವರ ವಾದ ಸಾರ್ವಜನಿಕರಿಗೂ ಹೌದೆನಿಸಿತು. 105ರ ಎದುರು 37 ಸಣ್ಣದೇ. ಆದರೂ ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದು ಸರಿಯಲ್ಲ ಎಂಬ ಭಾವನೆ ಜನರ ಮನದಲ್ಲಿ ಮೂಡಲಾರಂಭಿಸಿತು.

ನಾವು ಗೆದ್ದಿರುವುದು 78 ಸ್ಥಾನಗಳಾದರೂ, ನಮ್ಮೊಂದಿಗೆ ಜೆಡಿಎಸ್‌ನ 37 ಸ್ಥಾನಗಳಿವೆ. ಕಾಂಗ್ರೆಸ್‌ –ಜೆಡಿಎಸ್‌ಗೆ ಲಭಿಸಿರುವ ಮತಗಳ ಪ್ರಮಾಣ ಬಿಜೆಪಿಗಿಂತಲೂ ಮಿಗಿಲು. ಅಂದರೆ, ನಮ್ಮಿಬ್ಬರ ಮತ ಪ್ರಮಾಣ  ಶೇ. 54.44. ಹೀಗಾಗಿ ನಮಗೆ ಜನಾಭಿಪ್ರಾಯವಿದೆ ಎಂಬುದು ಸಿದ್ದರಾಮಯ್ಯ ಅವರ ವಾದವಾಗಿತ್ತು. ಅಲ್ಲದೆ, ಸಂಖ್ಯೆ ನಮ್ಮ ಕಡೆ ಇರುವಾಗ ನಮ್ಮಿಂದ ರಚನೆಯಾದ ಸರ್ಕಾರ ಪ್ರಜಾಸತ್ತಾತ್ಮಕ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರಾದರೂ, ಅದು ಒಪ್ಪಿತವಾಗಲೇ ಇಲ್ಲ.

ಯಡಿಯೂರಪ್ಪ ಅವರ ನಾವು 105 ಇದ್ದೇವೆ ಎಂಬ ಮಾತು ಜನರಿಗೆ, ಮಾಧ್ಯಮಗಳಿಗೆ ಹೆಚ್ಚು ಸಹ್ಯವಾಯಿತು.

ಶಾಸಕರ ಖರೀದಿ

ಬಿಜೆಪಿ ಶಾಸಕರನ್ನು ಖರೀದಿಸುತ್ತಿದೆ ಎಂಬುದು ಕುಮಾರಸ್ವಾಮಿ ಅವರ ಆರೋಪ. ಅವರು ಕಡೆಯವರೆಗೆ ಇದನ್ನೇ ವಾದಿಸಿದರು. ಶಾಸಕರ ಖರೀದಿಗೆ ಬಿಜೆಪಿ ಎಷ್ಟು ಹಣ ಖರ್ಚು ಮಾಡುತ್ತಿದೆ? ಈ ದುಡ್ಡು ಬಂದದ್ದು ಎಲ್ಲಿಂದ? ಕೇಂದ್ರ ಬಿಜೆಪಿ ಇದರ ಹಿಂದಿದೆ, ಪ್ರಧಾನಿಗಳು ಇದರ ಹಿಂದೆ ಇದ್ದಾರೆ ಎಂದೂ ಅವರು ವಾದಿಸುತ್ತಿದ್ದರು. ಒಂದು ಹಂತದಲ್ಲಿ ಅವರು ಸಾಕ್ಷಿಗಳನ್ನೂ ಜನರ ಮುಂದಿಟ್ಟರಾದರೂ, ಅದು ದೊಡ್ಡ ಮಟ್ಟದ ಸದ್ದಾಗಲೇ ಇಲ್ಲ.

ಮೈತ್ರಿಯಲ್ಲಿ ಒಳಜಗಳ ಹೆಚ್ಚಾಗಿದೆ. ಮೈತ್ರಿ ಸರ್ಕಾರದ ಆಡಳಿತಕ್ಕೆ ಬೇಸತ್ತು ಶಾಸಕರು ಹೊರ ಬಂದರೆ ಆಗ ನಾವು ಕೈಕಟ್ಟಿ ಕೂರುವುದಿಲ್ಲ. ಸರ್ಕಾರ ರಚನೆ ಮಾಡುತ್ತೇವೆ. ನಾವಂತೂ ಆಪರೇಷನ್‌ ಕಮಲಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದರು. ಕೊನೆಯವರೆಗೂ ಅವರು ಮಾತನಾಡಿದ್ದು ಹೀಗೆ. ಆದರೆ, ಶಾಸಕರ ರಾಜೀನಾಮೆಯ ಹಿಂದೆ ಯಡಿಯೂರಪ್ಪ ಕೈವಾಡವಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿತ್ತು. ಆದರೆ, ಶಾಸಕರನ್ನು ಸೆಳೆಯುವುದು ರಾಜಕೀಯವಾಗಿ ನೈತಿಕ ನಡೆಯಲ್ಲದಿದ್ದರೂ, ಅದು ಸಾರ್ವಜನಿಕವಾಗಿ ಚರ್ಚೆಯಾಗಲೇ ಇಲ್ಲ. ಈ ವಿಚಾರಕ್ಕೆ ಸಿಕ್ಕ ಆದ್ಯತೆಯೂ ಕಡಿಮೆಯೇ.

ಯಡಿಯೂರಪ್ಪ ಆಪರೇಷನ್‌ ಕಮಲ ನಡೆಸಿ ತಮ್ಮ ಶಾಸಕರನ್ನು ಸೆಳೆದಿದ್ದಾರೆ ಎಂಬುದು ಸಿದ್ದರಾಮಯ್ಯ ಅವರ ವಾದ. ಇದು ಜನತಂತ್ರದ ಕಗ್ಗೊಲೆ ಎಂದೂ ಅವರು ವಾಖ್ಯಾನಿಸುತ್ತಾರೆ. ಶಾಸಕರ ಖರೀದಿ, ಕುದುರೆ ವ್ಯಾಪಾರ, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ಕಾನೂನನ್ನು ಮೀರಿದ ಹಿಂಬಾಗಿಲ ಪ್ರಯತ್ನಗಳು. ಆದರೆ, ನೈತಿಕ ನೆಲೆಗಟ್ಟಿನವಲ್ಲ. ಆದರೆ, ಬಿಜೆಪಿ ಇದನ್ನು ಅತ್ಯಂತ ನಾಜೂಕಾಗಿ ಮಾಡಿ ಮುಗಿಸಿತು. ಅದರ ಬಗ್ಗೆ ಸಾರ್ವಜನಿಕ ಚರ್ಚೆಗಳು ಆಗಲಿಲ್ಲ.

ರಾಜ್ಯಪಾಲರ ಆದೇಶ

ಸರ್ಕಾರ ಅಂತಿಮ ಘಟ್ಟದಲ್ಲಿರುವಾಗ ಸ್ಪೀಕರ್‌ ಅವರು ಸದನದಲ್ಲಿ ಅನಗತ್ಯ ಚರ್ಚೆಗೆ ಅವಕಾಶ ಮಾಡಿಕೊಟ್ಟು ಕಾಲಹರಣಕ್ಕೆ ದಾರಿ ಮಾಡಿದ್ದಾರೆ ಎಂಬುದು ಬಿಜೆಪಿ ವಾದವಾಗಿತ್ತು. ಅದೇ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಿತ್ತು. ರಾಜ್ಯಪಾಲರೂ ತಕ್ಷಣವೇ ಬಹುಮತ ಸಾಬೀತಾಗಲಿ ಸಿಎಂ, ಸ್ಪೀಕರ್‌ಗೆ ಆದೇಶ ನೀಡಿದ್ದರು. ಸರ್ಕಾರ ರಚನೆಯ ಉಮೇದಿನಲ್ಲಿದ್ದ ಬಿಜೆಪಿ ರಾಜ್ಯಪಾಲರ ಆದೇಶವನ್ನು ಸರಿ ಎಂದು ವಾದಿಸಿತು.

ಬಹುಮತ ಪ್ರಕ್ರಿಯೆ ಆರಂಭವಾಗಿರುವಾಗ, ಕಲಾಪದ ಪ್ರಕ್ರಿಯೆಗಳು ನಡೆಯುತ್ತಿರುವಾಗ ಸದನಕ್ಕೆ ಸಂಬಂಧಿಸಿದ ಯಾವುದೇ ಆದೇಶಗಳನ್ನು ರಾಜ್ಯಪಾಲರು ನೀಡುವುದು ಕಾನೂನು ಬಾಹಿರ ಎಂಬುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ವಾದವಾಯಿತು. ಅದು ನಿಯಮಾವಳಿಗಳ ಪ್ರಕಾರ ಸತ್ಯವೂ ಹೌದು. ಅದಾಗಲೇ ಮುಖ್ಯಮಂತ್ರಿ ತಮ್ಮ ಪ್ರಸ್ತಾವವನ್ನು ಚರ್ಚೆಗೆ ಹಾಕಿದ್ದರು. ಅದೆಲ್ಲ ಪೂರ್ಣಗೊಂಡ ಬಳಿಕ ಮತಕ್ಕೆ ಹಾಕುವುದೇ ಅಂತಿಮವಾಗಿರುತ್ತಿತ್ತು. ಈ ಹಂತದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿದ್ದರು. ಇದು ಬಿಜೆಪಿಯ ಆತುರದ ನಡೆಯನ್ನು ತೋರಿಸಿತ್ತಾದರೂ, ಕಾನೂನುಬದ್ಧವಾದ ಈ ವಾದಕ್ಕೆ ಹೆಚ್ಚು ಪುರಸ್ಕಾರ ಸಿಗಲಿಲ್ಲ.

ಸಂಸದೀಯ ವ್ಯವಸ್ಥೆಯಲ್ಲಿ ರಾಜ್ಯಪಾಲರ ಈ ಮಧ್ಯಪ್ರವೇಶದ ಅಗತ್ಯ, ಔಚಿತ್ಯದ ಚರ್ಚೆಗಳಿಗೆ ಬಿಜೆಪಿ ಯಾವ ಹಂತದಲ್ಲೂ ಅವಕಾಶ ನೀಡಲಿಲ್ಲ. ಈಗಲೂ ಬಿಜೆಪಿ ಅತ್ಯಂತ ನಯವಾಗಿಯೇ ಈ ವಿಚಾರದಲ್ಲಿ ಗೆದ್ದಿತ್ತು. ಈ ವಿಷಯದಲ್ಲಿ ಜನ ತಮ್ಮ ಪರವಾಗಿಯೇ ಮಾತನಾಡುವಂತೆ ಬಿಜೆಪಿ ವ್ಯವಸ್ಥೆ ಮಾಡಿಕೊಂಡಿದ್ದು ಸುಳ್ಳಲ್ಲ. 

ಸ್ಪೀಕರ್ ಮಾಡಿದ್ದು

ರಾಜೀನಾಮೆ ಅಂಗೀಕಾರದ ವಿಚಾರದಲ್ಲಿ 2008ರಲ್ಲಿ ಅಂದಿನ ಸ್ಪೀಕರ್‌ ಆಗಿದ್ದ ಬೋಪಯ್ಯನವರು ಮಿತಿಗಳನ್ನು ಮೀರಿದ್ದರು. ಆತುರದ ವರ್ತನೆ ತೋರಿದ್ದರು ಎಂಬುದು ನ್ಯಾಯಾಲಯದ ಅಭಿಪ್ರಾಯವೂ ಆಗಿತ್ತು. 12 ಶಾಸಕರನ್ನು ಅನರ್ಹ ಮಾಡಿದ್ದು ಪ್ರಶ್ನಾರ್ಹ ಎನಿಸಿಕೊಂಡಿತು. ಬೋಪಯ್ಯ ಮತ್ತು ಬಿಜೆಪಿ ನಾಯಕರು ಈ ವಿಚಾರದಲ್ಲಿ ಇಂದೂ ಕೂಡ ಮೌನಿಗಳೇ.

ಈ ಬಾರಿ ಸ್ಪೀಕರ್‌ ರಮೇಶ್‌ ಕುಮಾರ್‌ ಕೂಡ ಅಂಥದ್ದೇ ತಪ್ಪು ಮಾಡುತ್ತಿದ್ದಾರೆ, ಆಳುವ ಪಕ್ಷಕ್ಕೆ ನೆರವಾಗುತ್ತಿದ್ದಾರೆ ಎಂದು ಬಿಂಬಿಸಲಾಯಿತಾದರೂ, ಈ ವಾದ ರಮೇಶ್‌ಕುಮಾರ್‌ ವಿಚಾರದಲ್ಲಿ ಅಷ್ಟು ಪ್ರಬಲವಾಗಲೇ ಇಲ್ಲ. ಅವರ ಹಿಂದಿನ ನಡವಳಿಕೆಗಳು, ಕಾನೂನಿನ ಚೌಕಟ್ಟಲ್ಲಿ ಕಾರ್ಯನಿರ್ವಹಿಸುವ ಅವರ ನಡೆ ಸಮಾಜದ ಬಹುತೇಕರಿಗೆ ಒಪ್ಪಿಗೆಯಾಯಿತು. ಆದರೆ, ಕಲಾಪದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟದ್ದು ಬಹುತೇಕರ ಕೆಂಗಣ್ಣಿಗೆ ಗುರಿಯಾಯಿತು.

ವಿದಾಯ ಭಾಷಣ

2018ರಲ್ಲಿ ಮೂರು ದಿನಗಳಿಗೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ವಿದಾಯದ ಭಾಷಣದ ವೇಳೆ ಮೈತ್ರಿ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದರು. ನಿಮ್ಮ ಕಚ್ಚಾಟವೇ ನಿಮ್ಮಿಂದ ಅಧಿಕಾರ ಕಸಿಯುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅಲ್ಲದೆ, ಅಪ್ಪ ಮಕ್ಕಳು ಕಾಂಗ್ರೆಸ್‌ ಅನ್ನು ಮುಗಿಸಲಿದ್ದಾರೆ ಎಂದು ಅಬ್ಬರಿಸಿದ್ದರು. ಸರ್ಕಾರ ಉರುಳುವವರೆಗೆ ಜೆಡಿಎಸ್‌ ವಿರುದ್ಧ ಹೋರಾಡುವುದಾಗಿ ಘೋಷಿಸಿದ್ದರು. ಅವರ ಮಾತುಗಳಂತೇ ಸರ್ಕಾರವೂ ನಡೆಯಿತು. ಮೈತ್ರಿ ಸರ್ಕಾರವನ್ನು ಅಡಿಗಡಿಗೆ ಕಾಡಿದ ಯಡಿಯೂರಪ್ಪ ತಮ್ಮ ಮಾತಿನಂತೇ ಸರ್ಕಾರ ಉರುಳುವವರೆಗೆ ಹೋರಾಡಿದ್ದರು. ಅಂತಿಮವಾಗಿ ಜಯ ಸಿಕ್ಕಾಗ ಇದು ಪ್ರಜಾಪ್ರಭುತ್ವದ ಗೆಲುವು ಎಂದು ಹೇಳಿದರು. ಆದರೆ, ಆ ಜಯ ಪಡೆದುಕೊಳ್ಳಲು ಅವರು ಅನುಸರಿಸಿದ ಹಾದಿ ವಿಮರ್ಶೆಗೊಳಪಡಬೇಕಾಗಿತ್ತಾದರೂ, ಅದರತ್ತ ಜನರ ಗಮನ ಹೆಚ್ಚಾಗಿ ಹರಿಯಲಿಲ್ಲ.

ಸರ್ಕಾರ ರಚಿಸಿದಾಗಿನಿಂದ ಬಿಜೆಪಿ, ಮಾಧ್ಯಮಗಳಿಂದ ಕೇಳಿ ಬಂದ ಟೀಕೆಗಳನ್ನು ಕುಮಾರಸ್ವಾಮಿ ತಮ್ಮ ವಿದಾಯದ ಭಾಷಣದಲ್ಲಿ ಪ್ರಸ್ತಾಪಿಸಿ ಗುಡುಗಿದರು. ಬಿಜೆಪಿ ನಡೆಸಿರುವ ಆಪರೇಷನ್‌ ಕಮಲವನ್ನು ಖಂಡಿಸಿದರು. ಅಲ್ಲದೆ, ತಮಗೆ ಕೈ ಕೊಟ್ಟು ಹೋದ ಶಾಸಕರನ್ನೂ ಟೀಗೆ ಗುರಿಪಡಿಸಿದ ಎಚ್‌ಡಿಕೆ ಅವರಿಗೆ ಉಪ ಚುನಾವಣೆಯಲ್ಲಿ ಪಾಠವಾಗಬೇಕು ಎಂಬುದನ್ನು ಪರೋಕ್ಷವಾಗಿ ಹೇಳಿದಂತಿತ್ತು. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬುದನ್ನು ಪುನರುಚ್ಚರಿಸಿದರು. ಇದೇ ವೇಳೆ, ತಮ್ಮಲ್ಲಿದ್ದ ಒಳಜಗಳ ಮುಂದೆ ಬಿಜೆಪಿಯಲ್ಲಿ ಆರಂಭವಾಗುವುದಾಗಿಯೂ, ಮುಂದೆ ಬರುವ ಸರ್ಕಾರಗಳೂ ಅಸ್ಥಿರತೆ ಅನುಭವಿಸುವುದಾಗಿಯೂ ಅವರು ಭವಿಷ್ಯ ನುಡಿದು ಹೋದರು.

ಆದರೆ, ಕುಮಾರಸ್ವಾಮಿ ಅವರ ವಿದಾಯದ ಭಾಷಣ ಜನರಿಗೆ ಅಷ್ಟು ತಲುಪಿದಂತೆ ಕಾಣುವುದಿಲ್ಲ. ಇಲ್ಲಿವರೆಗಿನ ಅವರ ಆಡಳಿತದಲ್ಲಿದ್ದ ಗೊಂದಲಗಳು ಅವರ ನಿರ್ಗಮನ ಭಾಷಣಕ್ಕೆ ಸಿಗಬೇಕಿದ್ದ ಪ್ರಾಮುಖ್ಯತೆಯನ್ನು ಕಸಿದಿತ್ತು. 

2018ರಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಈ ವರೆಗೆ ಬಿಜೆಪಿ ಮೈತ್ರಿ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿದೆ. ಅಲ್ಲಿನ ಗೊಂದಲಗಳನ್ನು ಬೀದಿಗೆ ತಂದು ಹಾಕಿ, ಚರ್ಚೆಗೆ ದೂಡಿದೆ. ಮೈತ್ರಿ ವಿರುದ್ಧದ ತನ್ನ ಪ್ರತಿ ವಾದಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸಿದ ಬಿಜೆಪಿ, ಜನರಿಂದ ಉತ್ತಮ ಸ್ಪಂದನೆ ಪಡೆದಿದ್ದಂತೂ ಸುಳ್ಳಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು