ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ: ಪ್ರತಿಭಟನೆ, ಹಿಂಸೆ ಏಕೆ?

ಪ್ರತಿಭಟನೆಯ ಹೆಸರಿನಲ್ಲಿ ಜನರನ್ನು ಕೆರಳಿಸುವುದು ಪ್ರಜಾತಂತ್ರಕ್ಕೆ ಅಪಮಾನ
Last Updated 28 ಡಿಸೆಂಬರ್ 2019, 2:54 IST
ಅಕ್ಷರ ಗಾತ್ರ

ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾರ್ಯಕ್ರಮದ ವಿಚಾರವಾಗಿ ನಡೆದ ಪ್ರತಿಭಟನೆಗಳು ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಹಿಂಸಾಚಾರಕ್ಕೆ ಕೂಡ ಕಾರಣವಾಗಿವೆ. ಹಿಂಸಾಚಾರದ ಪರಿಣಾಮವಾಗಿ ಮಂಗಳೂರಿನಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಬಹಳಷ್ಟು ಪೊಲೀಸರು, ಪ್ರತಿಭಟನಕಾರರು ಕೂಡ ಗಾಯಗೊಂಡಿದ್ದಾರೆ. ಈ ಗಲಭೆಗಳ ಕಾರಣದಿಂದಾಗಿ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟಾಗಿದೆ.

ಇದು ಅತ್ಯಂತ ದುರದೃಷ್ಟಕರ. ಪ್ರತಿಭಟನೆ, ಧರಣಿ ನಡೆಸುತ್ತಿರುವವರಿಗೆ ತಾವು ಯಾಕಾಗಿ ಇದನ್ನು ಮಾಡುತ್ತಿದ್ದೇವೆ ಎಂಬುದು ಗೊತ್ತಿಲ್ಲವೇ? 1955ರ ಪೌರತ್ವ ಕಾಯ್ದೆಗೆ ಈಗ ತಂದಿರುವ ತಿದ್ದುಪಡಿಯು ತಮ್ಮ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಕೂಡ ಅವರಿಗೆ ಗೊತ್ತಿಲ್ಲ. ಲಾಠಿ ಚಾರ್ಜ್‌ ನಡೆಸುವ ಮೂಲಕ, ಆಶ್ರುವಾಯು ಪ್ರಯೋಗಿಸುವ ಮೂಲಕ, ಕೆಲವು ಸ್ಥಳಗಳಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸರು ತಮ್ಮ ಬಲವನ್ನು ಮಿತಿಮೀರಿ ಪ್ರಯೋಗಿಸಿದ್ದಾರೆ ಎಂದು ಜನ ದೂರುತ್ತಿದ್ದಾರೆ. ತಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ; ಪೊಲೀಸರು ಕೈಗೊಂಡ ಕ್ರಮದಿಂದಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ತಮ್ಮ ಸಾಂವಿಧಾನಿಕ ಹಕ್ಕಿಗೆ ಧಕ್ಕೆ ಆಗಿದೆ ಎಂದು ಬುದ್ಧಿಜೀವಿಗಳೆಂದು ಕರೆಸಿಕೊಂಡವರು ಪ್ರತಿಪಾದಿಸುತ್ತಿದ್ದಾರೆ. ಹೀಗೆ ಮಾಡುವುದು ತಮ್ಮ ಅನಿಸಿಕೆಗಳನ್ನು ಶಾಂತಿಯುತವಾಗಿ ವ್ಯಕ್ತಪಡಿಸುವುದನ್ನು ಹತ್ತಿಕ್ಕಿದಂತೆ ಆಗುತ್ತದೆ ಎಂದೂ ಅವರು ಹೇಳುತ್ತಿದ್ದಾರೆ. ಭಾವನೆಗಳು ತೀವ್ರವಾಗಿ ವ್ಯಕ್ತವಾಗುತ್ತಿವೆ. ಈ ಪ್ರತಿಭಟನೆಗಳ ಅಬ್ಬರಕ್ಕೆ ವಿವೇಕವಂತರು ಕೂಡ ಮಾರುಹೋಗಿದ್ದಾರೆ.

ಈ ದೇಶದಲ್ಲಿ ದೊಡ್ಡ ಸಂಖ್ಯೆಯ ಜನ ಇಂದಿಗೂ ಬಡತನದ ರೇಖೆಗಿಂತ ಕೆಳಗಿದ್ದಾರೆ. ಅವರಿಗೆ ಸಾಕಷ್ಟು ಆದಾಯ ಇಲ್ಲ. ಸ್ವಾತಂತ್ರ್ಯ ದೊರೆತ ಏಳು ದಶಕಗಳ ನಂತರವೂ ಎಲ್ಲರಿಗೂ ಆಹಾರ, ವಸತಿ, ಬಟ್ಟೆ, ಶಿಕ್ಷಣ ಇನ್ನಿತರ ಮೂಲ ಸೌಕರ್ಯ ಒದಗಿಸಲು ನಮಗೆ ಸಾಧ್ಯ ವಾಗಿಲ್ಲ. ಹೀಗಿರುವಾಗ, ಪೌರರಲ್ಲದವರಿಗೆ ಸಮಾನತೆ, ಅಕ್ರಮ ವಲಸಿಗರ ಮಾನವ ಹಕ್ಕುಗಳು ಎಂಬ ಹೆಸರು ಗಳಲ್ಲಿ ಪ್ರತಿಭಟನೆ ನಡೆಸುವುದು ಇಬ್ಬಂದಿತನದ ತುತ್ತತುದಿ ಇದ್ದಂತೆ. ಈ ಪ್ರತಿಭಟನೆಗಳ ಸಾಧಕ–ಬಾಧಕಗಳನ್ನು ರಾಜಕೀಯ ಅಥವಾ ಪಕ್ಷಗಳ ನೆಲೆಯಲ್ಲಿ ಚರ್ಚಿಸುವುದು ಈ ಬರಹದ ಉದ್ದೇಶವಲ್ಲ. ಪೌರತ್ವ ಕಾಯ್ದೆಗೆ ಈಗ ತಂದಿರುವ ಬದಲಾವಣೆಗಳನ್ನು ವಸ್ತುನಿಷ್ಠವಾಗಿ ಚರ್ಚಿ ಸುವುದು ಇದರ ಉದ್ದೇಶ. ಈ ತಿದ್ದುಪಡಿಯಿಂದ ಆಗಿರುವ ಬದಲಾವಣೆಗಳನ್ನು ವಸ್ತುನಿಷ್ಠವಾಗಿ, ನಿರ್ಭಾ ವುಕವಾಗಿ ಜನಸಾಮಾನ್ಯರ ಮುಂದೆ ಇರಿಸಬೇಕಿರುವುದು ಇಂದಿನ ಅಗತ್ಯ.

‘ಅಕ್ರಮ ವಲಸಿಗ’ ಎನ್ನುವ ವ್ಯಾಖ್ಯಾನಕ್ಕೆ ಒಂದು ವಿನಾಯಿತಿಯನ್ನು ನೀಡಿರುವುದು ಈಗಿನ ತಿದ್ದುಪಡಿಯಿಂದ ಆಗಿರುವ ಮೊದಲ ಬದಲಾವಣೆ. ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಸಮುದಾಯಗಳಿಗೆ ಸೇರಿದವರು 2014ರ ಡಿಸೆಂಬರ್‌ 31ಕ್ಕೂ ಮೊದಲು ಭಾರತ ಪ್ರವೇಶಿಸಿದ್ದರೆ ಅಂಥವರನ್ನು ‘ಅಕ್ರಮ ವಲಸಿಗರು’ ಎಂದು ಪರಿಗಣಿಸುವುದಿಲ್ಲ. ಇದನ್ನು ಸರಳವಾಗಿ ಹೇಳಬೇಕು ಎಂದಾದರೆ, ಹಿಂದೂ, ಸಿಖ್, ಜೈನ, ಕ್ರೈಸ್ತ, ಬೌದ್ಧ ಅಥವಾ ಪಾರ್ಸಿ ಸಮುದಾಯಗಳಿಗೆ ಸೇರಿದ ವ್ಯಕ್ತಿ ಅಫ್ಗಾನಿಸ್ತಾನ, ಪಾಕಿಸ್ತಾನ ಅಥವಾ ಬಾಂಗ್ಲಾದೇಶದಿಂದ 2014ರ ಡಿಸೆಂಬರ್‌ 31ಕ್ಕೂ ಮೊದಲು ಭಾರತಕ್ಕೆ ಬಂದಿದ್ದರೆ ಅವರನ್ನು ‘ಅಕ್ರಮ ವಲಸಿಗರು’ ಎಂದು ಪರಿಗಣಿಸದೆ, ಅವರನ್ನು ‘ವಲಸಿಗರು’ ಎಂದು ಪರಿಗಣಿಸಲಾಗುತ್ತದೆ. ಭಾರತವು ಇತರ ಯಾವುದೇ ಸಕ್ರಮ ವಲಸಿಗರಿಗೆ ಒದಗಿಸುವ ಎಲ್ಲ ಸೌಲಭ್ಯಗಳನ್ನು ಈ ವಲಸಿಗರಿಗೂ ಕೊಡಲು ಅಡ್ಡಿಯಿಲ್ಲ. ಯಾರೊಬ್ಬರ ಹಕ್ಕನ್ನೂ ಸೌಲಭ್ಯವನ್ನೂ ಈ ತಿದ್ದುಪಡಿಯು ಕಿತ್ತುಕೊಳ್ಳುವುದಿಲ್ಲ ಎಂಬುದನ್ನು ಗುರುತಿಸಬೇಕು.

ಅಫ್ಗಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂ, ಸಿಖ್, ‍ಕ್ರೈಸ್ತ, ಜೈನ, ಬೌದ್ಧ ಮತ್ತು ಪಾರ್ಸಿ ಸಮುದಾಯದವರು ಸಹಜವಾಗಿ ಭಾರತದ ಪೌರತ್ವ ಪಡೆಯಲು ಅಗತ್ಯವಿದ್ದ ‘11 ವರ್ಷಗಳ ವಾಸ್ತವ್ಯ’ ಎನ್ನುವ ವ್ಯಾಖ್ಯಾನವನ್ನು ಈ ತಿದ್ದುಪಡಿಯು ‘5 ವರ್ಷಗಳು’ ಎಂದು ಬದಲಾಯಿಸಿರುವುದು ಗುರುತಿಸಬೇಕಾದ ಇನ್ನೊಂದು ಅಂಶ. ಈ ವಿಚಾರಗಳನ್ನು ಓದಿದಾಗ, ಈಗಿರುವ ಯಾವುದೇ ಹಕ್ಕುಗಳನ್ನು ಅಥವಾ ಸೌಲಭ್ಯ ಗಳನ್ನು ಯಾವ ವ್ಯಕ್ತಿಯಿಂದಲೂ ಕಿತ್ತುಕೊಳ್ಳುವುದಿಲ್ಲ, ಯಾರನ್ನೂ ತಾರತಮ್ಯಕ್ಕೆ ಗುರಿಪಡಿಸುವುದಿಲ್ಲ ಎನ್ನುವುದು ಗೊತ್ತಾಗುತ್ತದೆ. ಅದರ ಬದಲು, ‘ಅಕ್ರಮ ವಲಸಿಗ’ ಎಂಬ ವ್ಯಾಖ್ಯಾನಕ್ಕೆ ಬದಲಾವಣೆ ತಂದು, ಸಹಜವಾಗಿ ಪೌರತ್ವ ಪಡೆಯಲು ಬೇಕಿದ್ದ ವಾಸ್ತವ್ಯದ ಅವಧಿಯನ್ನು ತಗ್ಗಿಸಿ, ಮೇಲೆ ಹೆಸರಿಸಿದ ದೇಶಗಳಲ್ಲಿ ದೌರ್ಜನ್ಯಕ್ಕೆ ಗುರಿಯಾದ ಸಮುದಾಯಗಳಿಗೆ ಸೇರಿದವರಿಗೆ ಈ ತಿದ್ದುಪಡಿಯು ತುಸು ಅನುಕೂಲ ಕಲ್ಪಿಸುತ್ತದೆ.

ದೇಶದ ಎಲ್ಲ ಪೌರರ ಹೆಸರು ಹೊಂದಿರುವ ‘ರಾಷ್ಟ್ರೀಯ ಪೌರತ್ವ ನೋಂದಣಿ’ (ಎನ್‌ಆರ್‌ಸಿ) ಕಡ್ಡಾಯ ಎನ್ನುವ ವಿಚಾರವಾಗಿ ಕೂಡ ವಿವಾದ ಎದ್ದಿದೆ. ಎನ್‌ಆರ್‌ಸಿ ಎಂಬುದು ಹೊಸದೇನೂ ಅಲ್ಲ. ವಾಸ್ತವವೆಂದರೆ, ದೇಶದಲ್ಲಿ ಈ ಮೊದಲು ಇಡೀ ದೇಶಕ್ಕೆ ಅನ್ವಯವಾಗುವಂತಹ ನೋಂದಣಿಯನ್ನು ಸಿದ್ಧಪಡಿಸಿರಲಿಲ್ಲ. ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಅದನ್ನು ಸೀಮಿತ ಮಾಡಲಾಗಿತ್ತು. ಅಸ್ಸಾಂ ರಾಜ್ಯವೊಂದನ್ನು ಹೊರತುಪಡಿಸಿದರೆ, ಭಾರತದ ಇತರ ಯಾವುದೇ ಪ್ರದೇಶಗಳಲ್ಲಿ ಇದನ್ನು ಜಾರಿಗೊಳಿಸಿರಲಿಲ್ಲ. ಇದನ್ನು ಈಗ ರಾಜ್ಯಗಳ ವಿವೇಚನಾಧಿಕಾರದ ಅಡಿಯಲ್ಲಿ, ಇಡೀ ದೇಶದಲ್ಲಿ ಜಾರಿಗೊಳಿಸುವ ಪ್ರಸ್ತಾವ ಇದೆ. ಯಾವುದೇ ಕಾನೂನಿನ ಬದಲಾವಣೆಯಿಂದ ಇದು ಆದದ್ದಲ್ಲ; ಬದಲಿಗೆ ಈಗಾಗಲೇ ಇರುವ ಕಾನೂನಿನ ಅಡಿ ಮಾಡುತ್ತಿರುವುದು. ಎನ್‌ಆರ್‌ಸಿಯಲ್ಲಿ ಸ್ಥಾನ ಪ‍ಡೆಯದ ಪೌರರಿಗೆ ಏನಾಗಬಹುದು ಎಂಬ ಒಂದೇ ಪ್ರಶ್ನೆ ಇಲ್ಲಿ ಉದ್ಭವಿಸಬಹುದು. ಅವರನ್ನು ‘ಅಕ್ರಮ ವಲಸಿಗರು’ ಎಂದು ಪರಿಗಣಿಸಬಹುದು, ಅಷ್ಟೇ.

ಎನ್‌ಆರ್‌ಸಿ ಪಟ್ಟಿಯಲ್ಲಿ ಇರದ ವ್ಯಕ್ತಿಗಳನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎಂಬುದು ಊಹೆಯ ಮೂಲಕ ಹೇಳುತ್ತಿರುವುದಷ್ಟೆ. ಒಬ್ಬ ‘ಅಕ್ರಮ ವಲಸಿಗ’ನು ಆ ಸ್ಥಿತಿಯಲ್ಲೇ ಇರುತ್ತಾನೆ, ಅಂಥವರನ್ನು ಈಗ ಹೇಗೆ ನೋಡಿಕೊಳ್ಳಲಾಗುತ್ತಿದೆಯೋ, ಅದೇ ರೀತಿಯಲ್ಲೇ ಮುಂದೆಯೂ ನೋಡಿಕೊಳ್ಳಲಾಗುತ್ತದೆ. ಹೀಗಿರುವಾಗ, ಇಷ್ಟೆಲ್ಲ ಗದ್ದಲ ಏಕೆ?

ಅನುಮೋದನೆ ನೀಡುವ ಮೊದಲು ಈ ತಿದ್ದುಪಡಿ ಬಗ್ಗೆ ನಮ್ಮ ಸಂಸದರು ಇನ್ನಷ್ಟು ಅರ್ಥಪೂರ್ಣವಾಗಿ ಚರ್ಚೆ ನಡೆಸಿದ್ದಿದ್ದರೆ, ಮಸೂದೆಯನ್ನು ಪೂರ್ಣ ಪ್ರಮಾಣದಲ್ಲಿ ಚರ್ಚೆಗೆ ಒಳಪಡಿಸಿದ್ದಿದ್ದರೆ, ಮಸೂದೆಯ ಒಳ್ಳೆಯ ಹಾಗೂ ಒಳ್ಳೆಯದಲ್ಲದ ಅಂಶಗಳನ್ನು ಚರ್ಚಿಸಿದ್ದಿದ್ದರೆ, ಕಾಯ್ದೆಗೆ ತರುತ್ತಿರುವ ಬದಲಾವಣೆಗಳ ಬಗ್ಗೆ ಜನಪ್ರತಿನಿಧಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಿದ್ದರೆ ಇಷ್ಟೆಲ್ಲ ಗೊಂದಲಗಳನ್ನು ಬಹುಶಃ ತಡೆಯಬಹುದಿತ್ತು. ಆದರೆ, ಅರ್ಥಪೂರ್ಣ ಚರ್ಚೆಗಳು ಇಂದು ನಮ್ಮ ಶಾಸನಸಭೆಗಳಲ್ಲಿ ನಡೆಯುತ್ತಿಲ್ಲ. ಮಾತನಾಡುವವರಿಗೆ ಅಡ್ಡಿಪಡಿಸುವುದು, ಗಟ್ಟಿಯಾಗಿ ಕೂಗುವ ಮೂಲಕ ಮಾತುಗಳಿಗೆ ಅಡ್ಡಿ ಉಂಟುಮಾಡುವುದು ಹಾಗೂ ಘೋಷಣೆಗಳನ್ನು ಕೂಗುವುದು ಮಾತ್ರ ಇಂದು ನಮ್ಮ ಸಂಸತ್ತಿನಲ್ಲಿ ನಡೆಯುತ್ತಿದೆ. ಯಾವ ರಾಜಕೀಯ ಪಕ್ಷವೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ.

ಒಂದು ಮಸೂದೆಯ ಪರವಾಗಿ ಎಷ್ಟು ಸಂಸದರು ಮತ ಚಲಾಯಿಸುತ್ತಾರೆ ಎಂಬುದು ಮುಖ್ಯವಾದರೂ, ಮತ ಚಲಾಯಿಸುವುದಕ್ಕೂ ಮೊದಲು ಪರಿಣಾಮಕಾರಿ ಚರ್ಚೆ ನಡೆಯಬೇಕು. ಮುಂದಿನ ದಿನಗಳಲ್ಲಿಯಾದರೂ ಅದು ಸಾಧ್ಯವಾಗುತ್ತದೆ ಎನ್ನುವ ಆಶಾಭಾವ ಹೊಂದೋಣ. ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಭಿನ್ನಾಭಿಪ್ರಾಯ ಇದ್ದಾಗ, ಬಹುಸಂಖ್ಯೆಯ ಜನರ ಅಭಿಪ್ರಾಯಕ್ಕೆ ಹೆಚ್ಚು ಬೆಲೆ ಇರುತ್ತದೆಯಾದರೂ, ಕಡಿಮೆ ಸಂಖ್ಯೆಯ ಜನರ ಅನಿಸಿಕೆ ಹತ್ತಿಕ್ಕಬಾರದು. ತಿದ್ದುಪಡಿಯ ವಿಚಾರದಲ್ಲಿ ‘ಇದು ಅಸಾಂವಿಧಾನಿಕ’ ಎಂಬ ಅನುಮಾನವು ಅಲ್ಪಸಂಖ್ಯಾತರಲ್ಲಿ ಇದ್ದರೆ ಅದಕ್ಕೆ ಇರುವ ಪರಿಹಾರ ಮಾರ್ಗ ಸಾಂವಿಧಾನಿಕ ನ್ಯಾಯಾಲಯಗಳ ಮೊರೆ ಹೋಗುವುದು. ಪ್ರತಿಭಟನೆಯ ಹೆಸರಿನಲ್ಲಿ ಜನರನ್ನು ಕೆರಳಿಸುವುದು ಪ್ರಜಾತಂತ್ರಕ್ಕೆ ಅಪಮಾನ.

ಲೇಖಕ: ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT