ಶನಿವಾರ, ಆಗಸ್ಟ್ 24, 2019
28 °C
ಆಹಾರ ವ್ಯರ್ಥವಾಗದಂತೆ ತಡೆಯಲು ಮನುಷ್ಯರ ವರ್ತನೆ ಬದಲಾಗಬೇಕು

ಆಹಾರ ಪೂರೈಕೆ ವ್ಯವಸ್ಥೆಗೆ ಅಪಾಯ

Published:
Updated:
Prajavani

ವಿಶ್ವದ ನೆಲ ಮತ್ತು ಜಲ ಸಂಪತ್ತುಗಳನ್ನು ‘ಹಿಂದೆಂದೂ ಕಾಣದ ಪ್ರಮಾಣದಲ್ಲಿ’ ದುರ್ಬಳಕೆ ಮಾಡಿಕೊಳ್ಳ ಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿಯೊಂದು ಎಚ್ಚರಿಕೆ ನೀಡಿದೆ. ಈ ದುರ್ಬಳಕೆ ಜೊತೆ ಹವಾಮಾನ ಬದಲಾವಣೆಯ ಪರಿಣಾಮಗಳೂ ಸೇರಿದ ಕಾರಣದಿಂದ, ಮನುಕುಲದ ಆಹಾರ ಉತ್ಪಾದನಾ ಸಾಮರ್ಥ್ಯದ ಮೇಲೆಯೇ ಗಂಭೀರ ಒತ್ತಡ ಸೃಷ್ಟಿಯಾಗಿದೆ. ಈ ವರದಿ
ಯನ್ನು 52ಕ್ಕೂ ಹೆಚ್ಚು ದೇಶಗಳ 100ಕ್ಕೂ ಹೆಚ್ಚಿನ ತಜ್ಞರು ಸಿದ್ಧಪಡಿಸಿದ್ದಾರೆ. ಅಪಾಯವನ್ನು ನಿರ್ವಹಿಸಲು ಇರುವ ಅವಕಾಶ ಕ್ಷೀಣಿಸುತ್ತಿದೆ ಎಂದು ವರದಿ ಹೇಳಿದೆ.

ತೀವ್ರವಾಗಿ ಮರುಭೂಮಿಯಾಗಿ ಪರಿವರ್ತನೆ ಕಾಣುತ್ತಿರುವ, ಮಣ್ಣು ಸೃಷ್ಟಿಯಾಗುವ ಪ್ರಮಾಣಕ್ಕಿಂತ ಮಣ್ಣಿನ ಸವಕಳಿ ಹತ್ತರಿಂದ ನೂರು ಪಟ್ಟು ಹೆಚ್ಚಾಗಿರುವ ಪ್ರದೇಶಗಳಲ್ಲಿ ಐವತ್ತು ಕೋಟಿ ಜನ ಈಗ ವಾಸಿಸುತ್ತಿದ್ದಾರೆ. ಮರುಭೂಮಿಯಾಗುವ ಮತ್ತು ಮಣ್ಣಿನ ಸವಕಳಿ ಸಮಸ್ಯೆಯ ತೀವ್ರತೆಯನ್ನು ಹವಾಮಾನ ಬದಲಾವಣೆಯು ಇನ್ನಷ್ಟು ವಿಷಮಗೊಳಿಸಲಿದೆ. ನೆರೆ, ಬರ, ಬಿರುಗಾಳಿ ಮತ್ತು ಇನ್ನಿತರ ನೈಸರ್ಗಿಕ ವಿಕೋಪಗಳು ಜಾಗತಿಕ ಆಹಾರ ಪೂರೈಕೆಗೆ ಧಕ್ಕೆ ತರುವ ಅಪಾಯ ಇದೆ.

ವಿಶ್ವದ ಶೇ 10ರಷ್ಟಕ್ಕಿಂತ ಹೆಚ್ಚಿನ ಜನ ಅಪೌಷ್ಟಿಕತೆಗೆ ಈಗಾಗಲೇ ತುತ್ತಾಗಿದ್ದಾರೆ. ಆಹಾರದ ಕೊರತೆಯು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಜನರ ವಲಸೆಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ವರದಿಯನ್ನು ಸಿದ್ಧಪಡಿಸಿರುವ ಕೆಲವರು ಹೇಳಿದ್ದಾರೆ. ಆಹಾರದ ಕೊರತೆಯು ಹಲವು ಭೂಖಂಡಗಳಲ್ಲಿ ಏಕಕಾಲದಲ್ಲಿ ಕಾಣಿಸಿಕೊಳ್ಳುವ ಅಪಾಯವಿದೆ ಎಂದು ವರದಿ ತಯಾರಿಕೆಯಲ್ಲಿ ಪಾಲ್ಗೊಂಡಿದ್ದ ಸಂಶೋಧಕಿ ಸಿಂಥಿಯಾ ರೋಸೆನ್‌ವೆಗ್‌ ಹೇಳಿದ್ದಾರೆ. ‘ಆಹಾರ ಧಾನ್ಯ ಉತ್ಪಾದಿಸುವ ಪ್ರಮುಖ ಪ್ರದೇಶಗಳಲ್ಲಿ ಇಳುವರಿ ಕಡಿಮೆ ಆಗುವ ಅಪಾಯ ಹೆಚ್ಚುತ್ತಿದೆ’ ಎಂದೂ ಸಿಂಥಿಯಾ ಹೇಳಿದ್ದಾರೆ. ಆಹಾರದ ಬಿಕ್ಕಟ್ಟನ್ನು ನಿಭಾಯಿಸಲು ಇರುವ ಮಾರ್ಗಗಳನ್ನು ಸೂಚಿಸಿ, ಒಂದಿಷ್ಟು ಭರವಸೆಯನ್ನೂ ಈ ವರದಿ ನೀಡಿದೆ. ಕೃಷಿ ಜಮೀನಿನ ಉತ್ಪಾದಕತೆ ಹೆಚ್ಚಿಸುವುದು, ಆಹಾರ ವ್ಯರ್ಥಗೊಳಿಸುವು
ದನ್ನು ತಗ್ಗಿಸುವುದು, ಸಾಕುಪ್ರಾಣಿಗಳ ಮಾಂಸ ಹಾಗೂ ಇತರ ಮಾಂಸದ ಬಳಕೆ ತ್ಯಜಿಸುವಂತೆ ಜನರ ಮನವೊಲಿಸು
ವುದು ಈ ವರದಿಯ ಶಿಫಾರಸುಗಳಲ್ಲಿ ಸೇರಿವೆ.

‘ಅಪಾಯಗಳನ್ನು ತಡೆಯಲು ಸಾಕಷ್ಟು ಕೆಲಸ ಮಾಡಬಹುದು ಎಂಬುದು ವರದಿ ಸಿದ್ಧಪಡಿಸುವಾಗ ನಾವು ಕಂಡ ಮುಖ್ಯ ವಿಷಯಗಳಲ್ಲಿ ಒಂದು’ ಎಂದು ಸಿಂಥಿಯಾ ಹೇಳಿದರು. ‘ಆದರೆ, ಈ ಕೆಲಸ ಮಾಡಲು ಹಣಕಾಸಿನ ನೆರವು ಬೇಕು, ಪೂರಕ ವಾತಾವರಣ ಬೇಕು ಮತ್ತು ಸೂಕ್ತ ಗಮನ ನೀಡಿ ಕೆಲಸ ಮಾಡಬೇಕು’ ಎಂದರು. ವರದಿಯ ಮುಖ್ಯ ಅಂಶಗಳನ್ನು ಹವಾಮಾನ ಬದಲಾವಣೆ ಕುರಿತ ಅಂತರ್ ಸರ್ಕಾರಿ ಸಮಿತಿಯು ಬಿಡುಗಡೆ ಮಾಡಿದೆ. ಹವಾಮಾನ ಬದಲಾವಣೆ ವಿಚಾರವಾಗಿ ಈ ಸಮಿತಿ ಹಲವು ವರದಿಗಳನ್ನು ಸಿದ್ಧಪಡಿಸಿದೆ. ಭೂಮಿಯ ತಾಪಮಾನವು ಕೈಗಾರಿಕಾ ಯುಗಕ್ಕೂ ಮೊದಲಿನ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್‌ ನಷ್ಟು ಹೆಚ್ಚಿದರೆ ವಿನಾಶ ಕಾದಿದೆ ಎಂದು ಎಚ್ಚರಿಸಿದ್ದ ವರದಿಯನ್ನು ಸಿದ್ಧಪಡಿಸಿದ್ದೂ ಇದೇ ಸಮಿತಿ.

ಆಹಾರದ ಕೊರತೆಯು ವಿಶ್ವದ ಬಡ ಪ್ರದೇಶಗಳನ್ನು ಶ್ರೀಮಂತ ಪ್ರದೇಶಗಳಿಗಿಂತ ಹೆಚ್ಚು ತೀವ್ರವಾಗಿ ಬಾಧಿಸಲಿದೆ ಎಂದು ವರದಿ ಸಿದ್ಧಪಡಿಸಿದ ಕೆಲವರು ಹೇಳಿದ್ದಾರೆ. ಇದರ ಪರಿಣಾಮವಾಗಿ, ರಾಜಕೀಯವಾಗಿ ಈಗಾಗಲೇ ಬದಲಾವಣೆ ಕಾಣುತ್ತಿರುವ ಉತ್ತರ ಅಮೆರಿಕ, ಯುರೋಪ್ ಮತ್ತು ವಿಶ್ವದ ಇತರ ಪ್ರದೇಶಗಳಲ್ಲಿ ವಲಸೆ ಹೆಚ್ಚಬಹುದು. ‘ವಲಸೆಯ ಒತ್ತಡದಿಂದಾಗಿಯೂ ಜನರ ಬದುಕು ಬದಲಾವಣೆ ಕಾಣಲಿದೆ’ ಎಂದು ಪೀಟ್ ಸ್ಮಿತ್ ಹೇಳಿದ್ದಾರೆ. ಇವರೂ ವರದಿ ಸಿದ್ಧಪಡಿಸುವ ಕೆಲಸದ ಭಾಗವಾಗಿದ್ದವರು.

2010ರಿಂದ 2015ರ ನಡುವಿನ ಅವಧಿಯಲ್ಲಿ ಎಲ್‌ ಸಾಲ್ವಡೋರ್‌, ಗ್ವಾಟೆಮಾಲ ಮತ್ತು ಹೊಂಡುರಾಸ್‌ನಿಂದ ಬಂದ ವಲಸಿಗರು ಅಮೆರಿಕ–ಮೆಕ್ಸಿಕೊ ಗಡಿಯಲ್ಲಿ ಕಾಣಿಸಿಕೊಳ್ಳುವುದು ಐದು ಪಟ್ಟು ಹೆಚ್ಚಾಗಿತ್ತು. ಈ ಅವಧಿಯಲ್ಲಿ ಆ ಮೂರು ಕಡೆಗಳಲ್ಲಿ ಆಹಾರದ ಕೊರತೆ ಕೂಡ ಕಾಣಿಸಿತ್ತು. ಇದು ಹವಾಮಾನ ಬದಲಾವಣೆಯ ಸೂಚನೆ ಕೂಡ ಹೌದು ಎಂದು ವಿಜ್ಞಾನಿಗಳು ಹೇಳಿದ್ದರು. ಆಹಾರದ ತೀವ್ರ ಕೊರತೆಯ ಅಪಾಯವನ್ನು ಹವಾಮಾನ ಬದಲಾವಣೆಯು ಇನ್ನಷ್ಟು ಹೆಚ್ಚಿಸುತ್ತದೆ ಎಂದು ವರದಿ ಹೇಳಿದೆ. ವಾತಾವರಣ ಬಿಸಿಯಾದಂತೆಲ್ಲ ವಿಶ್ವದಲ್ಲಿ ಬರಗಾಲ, ಪ್ರವಾಹ, ಬಿಸಿಗಾಳಿ, ಕಾಳ್ಗಿಚ್ಚು ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಮಣ್ಣಿನ ಸವಕಳಿ ಕೂಡ ಹೆಚ್ಚುತ್ತದೆ ಎಂದು ವರದಿ ಹೇಳಿದೆ.

ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ಹೆಚ್ಚುವುದರಿಂದ ಆಹಾರದಲ್ಲಿನ ಪೌಷ್ಟಿಕಾಂಶಗಳ ಮೇಲೆಯೂ ಪರಿಣಾಮ ಉಂಟಾಗುತ್ತದೆ. ತಾಪಮಾನದ ಹೆಚ್ಚಳವು ಬೆಳೆಯ ಪ್ರಮಾಣ ಕಡಿಮೆ ಮಾಡುತ್ತದೆ. ಇವುಗಳ ಕಾರಣದಿಂದಾಗಿ, ಪರಿಸ್ಥಿತಿಗೆ ಹೊಂದಿ
ಕೊಳ್ಳುವ ಕೃಷಿ ಕ್ಷೇತ್ರದ ಸಾಮರ್ಥ್ಯ ಕಡಿಮೆ ಆಗುವ ಅಪಾಯ ಇದೆ. ಹವಾಮಾನ ಬದಲಾವಣೆ, ಮಣ್ಣಿನ ಸವಕಳಿಯ ಪರಿಣಾಮವಾಗಿ ಬೆಳೆ ಪ್ರಮಾಣ ಕಡಿಮೆ ಆಗಿದೆ ಎಂದು ವರದಿ ಹೇಳಿದೆ.

ಹಸಿರುಮನೆ ಅನಿಲಗಳ ಹೊರಸೂಸುವಿಕೆ ಹೆಚ್ಚುತ್ತ ಸಾಗಿದಂತೆ ಆಹಾರದ ಬೆಲೆ ಕೂಡ ಹೆಚ್ಚುತ್ತದೆ. ‘ಆಹಾರ ಬೆಳೆದು, ನಮ್ಮನ್ನೆಲ್ಲ ಸಾಕುವ ವಿಚಾರದಲ್ಲಿ ಕೃಷಿ ಭೂಮಿ ನಿಸ್ಸಹಾಯಕ ಆಗಿ ಕೈಚೆಲ್ಲುವ ಸ್ಥಿತಿಯತ್ತ ನಾವು ಸಾಗುತ್ತಿದ್ದೇವೆ’ ಎನ್ನುತ್ತಾರೆ ಆಕ್ಸ್‌ಫ್ಯಾಮ್ ಅಮೆರಿಕ ಸಂಸ್ಥೆಯಲ್ಲಿ ಹಿರಿಯ ಸಲಹೆಗಾರ್ತಿ ಆಗಿರುವ ಅದಿತಿ ಸೆನ್. ಹವಾಮಾನ ಬದಲಾವಣೆಯು ಕೃಷಿ ಚಟುವಟಿಕೆಗಳನ್ನು ಕಷ್ಟಕರಗೊಳಿಸುತ್ತಿರುವ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳೇ ಹವಾಮಾನ ಬದಲಾವಣೆ ಸಮಸ್ಯೆಯನ್ನು ಬಿಗಡಾಯಿಸುತ್ತಲೂ ಇವೆ ಎಂದು ಕೆಲವು ಸಂಶೋಧಕರು ಹೇಳುತ್ತಾರೆ.

ದನಕರುಗಳಿಂದ ಗಣನೀಯ ಪ್ರಮಾಣದಲ್ಲಿ ಮಿಥೇನ್‌ ಉತ್ಪಾದನೆ ಆಗುತ್ತದೆ. ಇದು ಕೂಡ ಹಸಿರುಮನೆ ಅನಿಲಗಳಲ್ಲೊಂದು. ಜಾಗತಿಕವಾಗಿ ದನದ ಮಾಂಸ ಮತ್ತು ಇತರ ಮಾಂಸಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ, ದನಕರುಗಳ ಸಾಕಣೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಕಾಡಿನ ನಾಶ ಕೂಡ ಉಂಟಾಗುತ್ತಿದೆ. ಆದರೆ, ನಮ್ಮ ಆಹಾರ ವ್ಯವಸ್ಥೆಯಲ್ಲಿ ಬದಲಾವಣೆ ತಂದುಕೊಂಡು, ಅಪಾಯಗಳನ್ನು ಕಡಿಮೆ ಮಾಡಿಕೊಳ್ಳಲು ಸಮಯ ಇದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಆಹಾರ ಉತ್ಪಾದನೆ ಹಾಗೂ ವಿತರಣೆಯಲ್ಲಿ ಸುಧಾರಣೆ ತರಬೇಕು, ಮಣ್ಣಿನ ನಿರ್ವಹಣೆ ಚೆನ್ನಾಗಿ ಆಗಬೇಕು, ಬಹುಬೆಳೆಯತ್ತ ಮುಖ ಮಾಡಬೇಕು ಎಂದು ವರದಿ ಹೇಳಿದೆ. ವಿಶ್ವದಲ್ಲಿ ಶೇಕಡ 25ರಷ್ಟು ಆಹಾರ ವ್ಯರ್ಥವಾಗುತ್ತಿದೆ ಎಂದು ಹೇಳಿರುವ ವರದಿಯು, ಮನುಷ್ಯರ ವರ್ತನೆಯಲ್ಲಿ ಬದಲಾವಣೆ ಬರಬೇಕು ಎಂದು ಹೇಳಿದೆ.

ಭಾರಿ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಾತಾವರಣದಲ್ಲಿನ ಹಸಿರುಮನೆ ಅನಿಲದ ಪ್ರಮಾಣವನ್ನು ಪ್ರತಿ ವರ್ಷ 9 ಗಿಗಾ ಟನ್‌ಗಳಷ್ಟು ಕಡಿಮೆ ಮಾಡಬಹುದು ಎಂದು ರೂಟ್ಗರ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಪಮೇಲಾ ಮೆಕೆಲ್ವಿ ಹೇಳುತ್ತಾರೆ.

ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗದಂತೆ ತಡೆಯಲು ಸಸಿ ನೆಡುವ ಬೃಹತ್‌ ಆಂದೋಲನವೂ ಬೇಕು, ಸಾಂಪ್ರದಾಯಿಕ ಇಂಧನಗಳ ಬಳಕೆ ಕಡಿಮೆ ಮಾಡಲು ಅಗತ್ಯವಿರುವ ಜೈವಿಕ ಇಂಧನವೂ ಬೇಕು. ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಲ್ಲಿ ಆಹಾರ ಉತ್ಪಾದನೆ ಮೇಲಿನ ಒತ್ತಡ ಹೆಚ್ಚುತ್ತದೆ. ‘2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ ವಿಶ್ವ
ದಲ್ಲಿ ಹಸಿವಿನ ತಾಪಕ್ಕೆ ತುತ್ತಾಗುವ ಜನರ ಸಂಖ್ಯೆ 10 ಕೋಟಿಯಷ್ಟು ಹೆಚ್ಚಾಗಬಹುದು’ ಎನ್ನುತ್ತಾರೆ ಸಂಶೋಧಕ ಎಡುವರ್ಡ್‌ ಡಾವಿನ್.

ದಿ ನ್ಯೂಯಾರ್ಕ್‌ ಟೈಮ್ಸ್‌

Post Comments (+)