ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರಿಗೆ ಬಿಸಿನೀರ ಎರೆಯುವ ಈ ಪರಿ

ಒಂದು ಕೈಯಲಿ ಬೆಣ್ಣೆ ಇನ್ನೊಂದು ಕೈಯಲಿ ದೊಣ್ಣೆ ಸರಿಯೇ? ಗುರುವೇ?
Last Updated 25 ಸೆಪ್ಟೆಂಬರ್ 2019, 20:02 IST
ಅಕ್ಷರ ಗಾತ್ರ

‘ಈ ಸಂಸಾರದಲ್ಲಿ ಗುರುವನ್ನುಳಿದು ಬೇರೆ ಏನೂ ಕೆಲಸಕ್ಕೆ ಬರುವುದಿಲ್ಲ. ಗುರು ಎಂದರೆ ಯಾರು? ಗುರು ಎಂದರೆ ಶಬ್ದ, ಬುದ್ಧಿ ಮತ್ತು ಮಾರ್ಗದರ್ಶನ. ಇವಿದ್ದರೆ ಮಾತ್ರ ವ್ಯಕ್ತಿ ತನ್ನ ಲಕ್ಷ್ಯದೆಡೆಗೆ ಚಲಿಸಲು ಸಾಧ್ಯ. ಆದರೆ ನಾವಾದರೋ ಅಸಂಖ್ಯ ಮೋಹಗಳಲ್ಲಿ ಬಂಧಿತರು. ಇದೇ ಶಾಶ್ವತ ಎಂದು ನಂಬಿದವರು. ಆದರೆ ಪ್ರೇಮ ಸದ್ಭಾವದ ಪ್ರವಾಹ ಹರಿಸಿ ಒಬ್ಬರನ್ನೊಬ್ಬರನ್ನು ಜೋಡಿಸಿ, ವಿಷಮತೆಯನ್ನು ಸಮತೆಯೆಡೆಗೆ ತರುವ ಗುರು ಮಾತ್ರ ಶಾಶ್ವತವೇ ಹೊರತು ಇನ್ನಾವುದೂ ಅಲ್ಲ’ ಸೂಫಿಸಂತ ಕಬೀರನ ಚಿಂತನೆಗಳನ್ನು ಗಾಯಕ ಪ್ರಹ್ಲಾದ್ ತಪನ್ಯಾ ಹೀಗೆ ಸಂಗ್ರಹಿಸುತ್ತಾರೆ.

ತಾವಾಡುವ ಮಾತಿನಂತೆಯೇ ಭೌತಿಕ ಆಮಿಷಗಳನ್ನು, ಸವಲತ್ತುಗಳನ್ನು ತಿರಸ್ಕರಿಸಿ ಜನರ ನಡುವೆ ಬೆರೆತ ಕಬೀರನಂತಹವರ ದೊಡ್ಡ ಪರಂಪರೆ ಭಾರತಕ್ಕಿದೆ. ಅವರುಗಳು ಜನರ ನಡುವೆ ಇರಿಸಿಹೋದ ನಂಬಿಕೆ ಎಷ್ಟು ದೊಡ್ಡದೆಂದರೆ, ಇಂದು ಅವರುಗಳಂತೆ ವೇಷ ತೊಟ್ಟು, ಅವರ ಬಿರುದುಗಳನ್ನು ಕದ್ದುಕೊಂಡು, ಮಾತಿನ ಮರುಳು ಮಂಟಪ ಕಟ್ಟುವವರನ್ನು ಕೂಡ ಜನ ಅವರುಗಳ ಅಪರಾವತಾರ ಎಂದು ನಂಬುತ್ತಾರೆ. ಗುರುತನ ಎಂಬುದು ಅಷ್ಟು ಸದರವಾಗಿ ಹೋಗಿರುವ ಕಾಲವಿದು. ನಿಮಗೆ ತಿಳಿದಿರಬಹುದು, ಹಳೆಗನ್ನಡದಲ್ಲಿರುವ ವಡ್ಡಾರಾಧನೆಯ ಕತೆಗಳಲ್ಲಿ ತಸ್ಕರ ಶಾಸ್ತ್ರದ ಉಲ್ಲೇಖ ಬರುತ್ತದೆ. ಹಾಗಂದರೆ, ಕಳ್ಳತನದ ಪಟ್ಟುಗಳನ್ನು ಕಲಿಸುವ ಶಾಸ್ತ್ರ ಎಂದರ್ಥ. ಕಳ್ಳರನ್ನೂ, ಕಾವಲುಗಾರರನ್ನೂ ಏಕಕಾಲದಲ್ಲಿ ತಯಾರಿಸುವ ಪಾಠಶಾಲೆಗಳು ಆಗ ಇದ್ದುವಂತೆ. ಇದು ನಿಜವೋ, ಕಲ್ಪನೆಯೋ ತಿಳಿದಿಲ್ಲ. ಕಳ್ಳರ ಶಾಸ್ತ್ರವನ್ನು ಈಗ ಅಧಿಕೃತವಾಗಿ ಕಲಿಸುತ್ತಿಲ್ಲವಾದರೂ ಶಾಸ್ತ್ರಬದ್ಧವಾಗಿ ಏನನ್ನೇ ಕಳ್ಳತನ ಮಾಡಿದರೂ ಅವರಿಗೆ ಈ ಸಮಾಜದಲ್ಲಿ ಅಪಾರ ಗೌರವವಿದೆ ಎಂಬುದಕ್ಕೆ ವಿಶೇಷ ತನಿಖೆಯೇನೂ ಬೇಡ.

ಹೀಗೆ ಗೌರವ ಎಂಬುದು ಜಾಗ ಬದಲಿಸಿದ ಮೇಲೆ ಗೌರವಿಸಿಕೊಳ್ಳಬಯಸುವವರೂ ಜಾಗ ಬದಲಿಸಲೇ
ಬೇಕಲ್ಲ. ‘ನಾವೇನು ಸನ್ಯಾಸಿಗಳಾ’ ಎಂಬ ಮಾತು ಎಷ್ಟೊಂದು ಸಲ ನಮ್ಮ ಕಿವಿ ಮೇಲೆ ಬಿದ್ದಿರುವುದಿಲ್ಲ. ಹಿರಿಯರೇ ಹೀಗಾದ ಮೇಲೆ ಕಿರಿಯರನ್ನು ದೂರಿ ಏನು ಫಲ? ಇತ್ತೀಚೆಗೆ ಶಿರಸಿಯ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಗಳಿಗೆ ಮೊಬೈಲ್ ದುಷ್ಪರಿಣಾಮ ವಿವರಿಸಿ, ಕಾಲೇಜಲ್ಲಿ ನಿಷೇಧವಿದ್ದರೂ ತಂದ ಮೊಬೈಲ್‍ಗಳನ್ನು ಸುತ್ತಿಗೆಯಿಂದ ಒಡೆದು ಹಾಕಿದ್ದು ಸುದ್ದಿಯಾಯಿತು, ಸದ್ದು ಮಾಡಿತು. ಈ ಬಗ್ಗೆ ಮೆಚ್ಚುಗೆಯೂ ಬಂತು. ಆದರೆ ನನಗೆ ಅವರ ಕಷ್ಟಗಳೇ ಕಣ್ಣ ಮುಂದೆ ಬಂತು. ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಎಷ್ಟೆಲ್ಲಾ ದಾರಿ ಹುಡುಕಬೇಕಲ್ಲಪ್ಪಾ ಅಂತ. ಇನ್ನೂ ಒಂದು ವಿಚಾರ ಮುಂದೆ ಬಂತು. ಅದೇನೆಂದರೆ, ಹೀಗೆ ಕುಟ್ಟಿ ಒಡೆದು ಹಾಕಿದ ಮಾತ್ರಕ್ಕೆ ಮಕ್ಕಳು ಹೆದರಿ ಬಿಡುತ್ತಾರಾ ಅಥವಾ ಅವರು ಪೋಷಕರಿಗೆ ಭಾವುಕ ಬೆದರಿಕೆ ಒಡ್ಡಿ ಹೊಚ್ಚ ಹೊಸ ಮಾದರಿಯ ಜಂಗಮವಾಣಿಯನ್ನು ಈಗಾಗಲೇ ಕೊಂಡುಕೊಂಡಿರಬಹುದಾ? ಎರಡನೆಯ ಸಾಧ್ಯತೆಯೇ ಹೆಚ್ಚು.

ವಿದ್ಯಾರ್ಥಿಗಳಿಗೇನೋ ಹೇಳುತ್ತೇವೆ. ಅವರಿಗಿಂತ ಹೆಚ್ಚು ದಾಸರಾಗಿರುವ ಉಪನ್ಯಾಸಕರಿಗೇನೂ ಕೊರತೆಯಿಲ್ಲ. ಕ್ಲಾಸ್ ಮುಗಿಸಿ ಓಡಿ ಬಂದು ವಿಡಿಯೊ ನೋಡುವ, ಅಲ್ಲಿನ ಅರಚಾಟಗಳಿಗೆ ತಮ್ಮದೊಂದಿಷ್ಟು ಕಿರುಚಾಟ ಸೇರಿಸುವ ದೃಶ್ಯಗಳಿಗೆ ಈಗ ಹೆಚ್ಚು ಹುಡುಕುವುದೇನೂ ಬೇಡ. ಪೋಷಕರೂ ಮೊಬೈಲ್‍ನ ಕಡಿಮೆ ವ್ಯಸನಿಗಳೇನೂ ಅಲ್ಲ. ಮೊಬೈಲ್ ಎಂಬ ಗುರುವೀಗ ಅವರ ಕೈವಶವಾಗಿದೆ. ಇಡೀ ದೇಶಕ್ಕೆ ಉಚಿತ ಡಾಟಾದ ರುಚಿ ಹತ್ತಿಸಿದ ಜಿಯೋವನ್ನು ಜೀವನ ಸಂಗಾತಿಗಿಂತಲೂ ಗಾಢವಾಗಿ ಅಪ್ಪಿಕೊಂಡಿರುವಾಗ, ಅದರಲ್ಲಿ ಎಲ್ಲವೂ ‘ಉಚಿತ’ವಾಗಿ ಸಿಗುವಾಗ, ದೊಡ್ಡವರನ್ನು ‘ಇವರೇನು ಸಾಚಾಗಳಾ’ ಎಂದು ಚಿಕ್ಕವರು ಒಳಗೊಳಗೇ ಗುರುಗುಟ್ಟದೆ ಇನ್ನೇನು ಮಾಡುತ್ತಾರೆ. ಹುಸಿ ಆಧುನಿಕತೆಯ ಅತ್ಯಂತ ಪ್ರಮುಖ ಲಕ್ಷಣವೆಂದರೆ ಈ ಒಳಗೊಂದು ಹೊರಗೊಂದುತನ. ನಾವು ಬೇರಿಗೆ ಹಾಕುವ ನೀರೇ ಒಂದು, ಅದು ಬಿಡಬೇಕು ಎಂದು ಬಯಸುವ ಫಲವೇ ಇನ್ನೊಂದೆಂದಾದರೆ ಅದು ಹೇಗೆ ಹೊಂದಾಣಿಕೆಯಾಗಲು ಸಾಧ್ಯ?

ಎರಡು ತಿಂಗಳ ಹಿಂದೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು, ಪದವಿ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳ ಟ್ವಿಟರ್ ಖಾತೆ, ಫೇಸ್‍ಬುಕ್ ಖಾತೆಗಳನ್ನು ತೆರೆದು ಅದನ್ನು ಗುಂಪಾಗಿಸಿ, ಬೇರೆ ಕಾಲೇಜಿನ ಗುಂಪಿನ ಜೊತೆ ಲಿಂಕ್ ಮಾಡಿಸಿ ಅದರಲ್ಲಿ ಸ್ಫೂರ್ತಿಯ, ಯಶಸ್ಸಿನ ಕತೆಗಳನ್ನು ಪರಸ್ಪರ ಹಂಚಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಮತ್ತು ಅದಕ್ಕೆ ಕಾಲೇಜಿನಿಂದ ಒಬ್ಬರನ್ನು ನೇಮಿಸಬೇಕು ಎಂದು ಸೂಚನೆ ಕಳಿಸಿತ್ತು. ಈಗಾಗಲೇ ಪದವಿಗಳಲ್ಲಿ ಗಣಕೀಕೃತ ಪ್ರವೇಶಾತಿ ಕಡ್ಡಾಯವಾಗಿದ್ದು ವಿದ್ಯಾರ್ಥಿಗಳು ಮೊಬೈಲ್ ನಂಬರ್‌ ಅನ್ನು ಕಡ್ಡಾಯವಾಗಿ ಕೊಡಬೇಕಿದೆ.

ಪ್ರಾಂಶುಪಾಲರುಗಳೇ, ಸುತ್ತಿಗೆ ಸುತ್ತಿಡುವುದಲ್ಲದೆ ಬೇರೆ ಗತಿಯಿಲ್ಲ! ಕೃಷ್ಣಸಂಧಾನದ ಭಾಗದಲ್ಲಿ ಪಂಪ ಒಂದು ಅದ್ಭುತ ಮಾತು ಹೇಳಿಸುತ್ತಾನೆ. ಯುದ್ಧ ಬೇಡ ಎಂಬ ಮಾತಿಗೆ ದುರ್ಯೋಧನ ಅಪಹಾಸ್ಯ ಮಾಡಿದಾಗ ಕೃಷ್ಣ, ‘ಸಮುದ್ರದ ನೀರೇ ಕುದಿಯುವ ನೀರಾಗಿಬಿಟ್ಟರೆ, ಅದನ್ನು ತಣಿಸಲು ತಣ್ಣೀರನ್ನು ಎಲ್ಲಿಂದ ತರಬೇಕು?’ ಎನ್ನುತ್ತಾನೆ. ಕೊನೆಯಿಲ್ಲದ ಭೋಗಗಳನ್ನೇ ಮೌಲ್ಯವಾಗಿಸುತ್ತಿರುವ ಮಾರುಕಟ್ಟೆಕೇಂದ್ರಿತ ಆರ್ಥಿಕತೆಗೆ, ಕಾರು ಮಾರಾಟ ಆಗುತ್ತಿಲ್ಲ ಎಂಬುದು ಪ್ರವಾಹದಲ್ಲಿ ಜನ ಕೊಚ್ಚಿಕೊಂಡು ಹೋಗುವುದಕ್ಕಿಂತ ಗುರುತರ ಸಮಸ್ಯೆ ಆಗಿರುತ್ತದೆ. ಯಾಕೆಂದರೆ, ಕಣ್ಣು,ಕಿವಿಯಿಲ್ಲದ ಅರ್ಥಶಾಸ್ತ್ರಕ್ಕೆ ಆ ಸಾವುಗಳೆಂದರೆ, ಜನಸಂಖ್ಯಾ ನಿಯಂತ್ರಣದ ಅಂಕಿ ಅಂಶವಷ್ಟೇ ಆಗಿರಬಹುದು.

ಹೀಗಲ್ಲದ ಆರ್ಥಿಕತೆಯೂ ಒಂದಿದೆ. ಇವತ್ತಿಗೂ ಅದು ಅಲ್ಲಲ್ಲಿ ಸಣ್ಣದಾಗಿ ಉಸಿರಾಡಿಕೊಂಡಿದೆ. ಇಲ್ಲೂ ಆದಾಯ, ಖರ್ಚುಗಳಿರುತ್ತವೆ. ಆದರೆ ಅದು, ಎಷ್ಟು ಅವಶ್ಯಕತೆಯಿದೆಯೋ ಅಷ್ಟನ್ನು ಮಾತ್ರ ಹೊಂದು, ಅದೂ ಸಾಧ್ಯವಿಲ್ಲವೆಂದರೆ ಅದೇನೂ ಅವಮಾನದ ಸಂಗತಿಯಲ್ಲ ಎನ್ನುತ್ತಿತ್ತು. ಇರುವುದರಲ್ಲಿ ಹಸಿದವನಿಗೆ ತುಸುವಾದರೂ ಕೊಟ್ಟು ತಿನ್ನು ಅನ್ನುತ್ತಿತ್ತು. ನಂಬಿಕೆಯನ್ನೇ ವ್ಯವಹಾರದ ಮೂಲ ಮಾನದಂಡವನ್ನಾ
ಗಿಸುತ್ತಿತ್ತು. ಒರಟಾದರೂ ದಿಟವಾಗಿರುವುದನ್ನು ಪುರಸ್ಕರಿಸುತ್ತಿತ್ತು. ಈಚೆಗೊಮ್ಮೆ ಬಟ್ಟೆ ಖರೀದಿಸುವಾಗ, ‘ಈ ರೀತಿ ಪ್ರಿಂಟ್ ಇದ್ರೆ ಇದು ಸ್ವಲ್ಪ ಸಮಯಕ್ಕೇ ಫೇಡ್ ಆಗಿ ಬಿಡುತ್ತೆ ಕಣ್ರೀ’ ಎಂದಾಗ, ಆ ಪುಟ್ಟ ಊರಿನ, ಪುಟ್ಟ, ಹಳೆಯ, ಯಾವ ದೌಲತ್ತೂ ಇಲ್ಲದ, ಸೋವಿಯಾದ ಬಟ್ಟೆಗಳೇ ಸಿಗುವ ಅಂಗಡಿಯಾತ, ‘ಮೇಡಂ, ನೀವು ನಮ್ಮಲ್ಲಿಂದ ತಗೊಂಡು ಹೋದ ಬಟ್ಟೇನ ಬಳಸ್ಬೇಕು, ಬಳಸಿದ್ಮೇಲೆ ಅದು ಫೇಡ್ ಆಗ್ಬೇಕು, ಆಮೇಲೆ ನೀವು ಮತ್ತೆ ನಮ್ಮಂಗಡಿಗೆ ಬಂದು ಹೊಸ ಬಟ್ಟೆ ತಗೊಳ್ಬೇಕು, ಇಲ್ದಿದ್ರೆ ನಾವು ಬದುಕೋದು ಹೇಗೆ?’ ಅಂದಾಗ ಒಂದು ಕ್ಷಣ ನಾನು ಆತನ ನೇರವಂತಿಕೆಗೆ ದಂಗಾದೆ. ಆತನ ಅರ್ಥಶಾಸ್ತ್ರಕ್ಕೆ ತಲೆದೂಗಿದೆ. ಆಧುನಿಕ ಜಾಹೀರಾತುಗಳ ಸುಳ್ಳುಗಳು, ಥಳುಕು ಬಳುಕುಗಳು ಅಲ್ಲಿರಲಿಲ್ಲ. ಎಂದೂ ಸವೆಯದ ವಸ್ತು ಎಂದಿಗೂ ಇರುವುದಿಲ್ಲ ಎಂಬ ಅನುಭವದ ನುಡಿಪಾಠ ಅಲ್ಲಿತ್ತು. ಇಂತಹ ಒಂದು ಸರಳ ಬದುಕು ಮರೆಯಾಗಿ ಆಕರ್ಷಕ ಸುಳ್ಳುಗಳೇ ನಮ್ಮನ್ನೀಗ ಆಳುತ್ತಿವೆ. ಅಂತಹ ಜಾಹೀರಾತುಗಳೇ ನಮ್ಮ ಅತ್ಯಾಧುನಿಕ ಗುರುಗಳು.

‘ಜಾನುವಾರುಗಳು ಹಾದಿಯಲ್ಲಿ ಸಾಗುವಾಗ ವಯಸ್ಸಾದ ಹೋರಿಯೊಂದು ದಾರಿ ತಪ್ಪಿದರೆ, ಅದನ್ನು ಹಿಂಬಾಲಿಸುವ ಜಾನುವಾರುಗಳು ಸಹ ಹಾದಿ ತಪ್ಪುತ್ತವೆ. ಅದೇ ರೀತಿಯಲ್ಲಿ ಮನುಷ್ಯರಲ್ಲೂ ಮುಂದಾಳು ಎನಿಸಿಕೊಂಡವನು ಅಡ್ಡಮಾರ್ಗವನ್ನು ತುಳಿದರೆ, ಉಳಿದವರು ಕೂಡ ಅವನನ್ನು ಹಿಂಬಾಲಿಸುತ್ತಾರೆ’ ಎನ್ನುತ್ತಾನೆ ಬುದ್ಧ.

ಹಣ್ಣುಗಳನ್ನು ಅಂಗಡಿಯಾತ ಪ್ಲಾಸ್ಟಿಕ್ ಕವರ್‌ನಲ್ಲಿ ಕೊಟ್ಟಾಗ, ‘ಪ್ಲಾಸ್ಟಿಕ್ ಯಾಕೆ?’ ಅಂತ ಒಬ್ಬರು ಕೇಳಿದರು. ಅದಕ್ಕಾತ, ‘ಎಲ್ಲಿಯವರೆಗೆ ನಮಗೆ ಕವರ್ ಸಿಗುತ್ತೋ ಅಲ್ಲಿಯವರೆಗೆ ನಾವು ಅದರಲ್ಲೇ ಕೊಡ್ತೀವಿ’ ಅಂದ. ಖಂಡಿತ ನ್ಯಾಯವಾದ ಮಾತು ಮತ್ತು ಆತ ನ್ಯಾಯವಾದ ಗುರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT