ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಮತ್ತು ಸಮಾನ ಶಿಕ್ಷಣ

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಯು ಸರ್ಕಾರಿ ಶಾಲೆಗಳ ಉಳಿವಿನ ಪ್ರಶ್ನೆಯೂ ಹೌದು
Last Updated 13 ಡಿಸೆಂಬರ್ 2019, 9:13 IST
ಅಕ್ಷರ ಗಾತ್ರ

ಅಂಗನವಾಡಿಗಳಲ್ಲೇ ಎಲ್‍ಕೆಜಿ, ಯುಕೆಜಿ ಪ್ರಾರಂಭಿಸಬೇಕೆಂದು ಒತ್ತಾಯಿಸಿ ರಾಜ್ಯ ಅಂಗನವಾಡಿಗಳ30 ಸಾವಿರಕ್ಕೂ ಅಧಿಕ ಕಾರ್ಯಕರ್ತೆಯರು ಈ ತಿಂಗಳ 10ರಿಂದ ತುಮಕೂರಿನಿಂದ ಪಾದಯಾತ್ರೆ ಹೊರಟು ಬೆಂಗಳೂರು ಸೇರುವವರಿದ್ದರು. ಆದರೆ ಅವರ ಪಾದಯಾತ್ರೆಯನ್ನು ತುಮಕೂರಿನಲ್ಲಿಯೇ ಸರ್ಕಾರವು ತಡೆಹಿಡಿದಿತ್ತು. ಈ ಸಂಬಂಧ ಮಾತುಕತೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿದ ಕಾರಣ, ತಮ್ಮ ಹೋರಾಟವನ್ನು ಅವರು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ. ಆದರೆ, ಕೊರೆವ ಚಳಿಯಲ್ಲಿ ಬಡ ತಾಯಂದಿರು ಬೀದಿಗಿಳಿದು ಹೋರಾಟ ಮಾಡಬೇಕಾಗಿ ಬಂದಿದ್ದರ ಬಗ್ಗೆ ಸರ್ಕಾರ ನಿಜಕ್ಕೂ ಮಾನವೀಯವಾಗಿ ಚಿಂತಿಸಬೇಕು. ಏಕೆಂದರೆ ಅವರ ಬೇಡಿಕೆಯು ಅಂಗನವಾಡಿಗಳ ಅಥವಾ ಕಾರ್ಯಕರ್ತೆಯರ ಉಳಿವಿನ ಪ್ರಶ್ನೆ ಮಾತ್ರವಲ್ಲ, ಇದು ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಯ ಉಳಿವಿನ ಪ್ರಶ್ನೆಯೂ ಹೌದು!

ಖಾಸಗಿ ಶಿಕ್ಷಣ ವ್ಯವಸ್ಥೆಗೆ ವರ್ಷ ವರ್ಷವೂ ಮಣೆ ಹಾಕುತ್ತಾ ಬಂದ ಸರ್ಕಾರಗಳು, ಸಾವಿರ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಾ ಬಂದಿವೆ. ಮಗು ಕೇಂದ್ರಿತವಾಗಿ ಯೋಚಿಸಿ, ಮೂಲಭೂತ ಶಿಕ್ಷಣವನ್ನು ಸಮಾನ ಶೈಕ್ಷಣಿಕ ನೀತಿಯಾಧಾರಿತವಾಗಿ ರೂಪಿಸಲು ಪ್ರಭುತ್ವವು ಮನಸ್ಸು ಮಾಡದಿರುವುದು ಅಕ್ಷಮ್ಯ. ಹೀಗೆಂದೇ ಬಡ, ಹಳ್ಳಿಗಾಡಿನ, ತಳಸಮುದಾಯದ ಮಕ್ಕಳು ಈ ವ್ಯವಸ್ಥೆಯಲ್ಲಿ ಅನಿವಾರ್ಯವಾಗಿ ಅಸಮಾನ ಶಿಕ್ಷಣ ಪಡೆಯುವ ಮೂಲಕ, ಸಮಾಜದಲ್ಲಿ ಶಾಶ್ವತವಾದ ಅಸಮಾನತೆಯನ್ನು ಅನುಭವಿಸುವಂತಾಗಿದೆ. ಈಗಲಾದರೂ ಈ ಅನ್ಯಾಯವನ್ನು ಸರಿಪಡಿಸಲು ಸರ್ಕಾರ ಯೋಚಿಸಲೇಬೇಕಿದೆ.

ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ಇಲ್ಲದಿರುವುದು, ಸರ್ಕಾರಿ ಶಾಲೆಗಳಿಗೆ ಮಕ್ಕಳು ಸೇರುವ ಪ್ರಮಾಣದಲ್ಲಿನ ತೀವ್ರ ಹಿನ್ನಡೆಗೆ ಮುಖ್ಯವಾದ ಕಾರಣಗಳಲ್ಲಿ ಒಂದು. ಈ ಕಂದಕವನ್ನೇ ಖಾಸಗಿ ಶಿಕ್ಷಣ ಸಂಸ್ಥೆಗಳು ದಾಳವಾಗಿಸಿಕೊಂಡಿವೆ. ಕಳೆದ 20– 25 ವರ್ಷಗಳಲ್ಲಿ ಖಾಸಗಿ ಶಿಶುವಿಹಾರಗಳು ನಾಯಿಕೊಡೆಗಳಂತೆ ಎಲ್ಲೆಂದ ರಲ್ಲಿ ತಲೆ ಎತ್ತುವಂತೆ ಮಾಡಿ, ತಮ್ಮ ಬಲಿಷ್ಠ ಬೇರುಗಳನ್ನು ಹರಡಿಬಿಟ್ಟಿವೆ. ತನ್ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನು ತಮ್ಮ ಆಕ್ಟೋಪಸ್ ಹಿಡಿತಕ್ಕೆ ತೆಗೆದುಕೊಂಡಿವೆ. ನಿಜಕ್ಕೂ ಈಗ ಆಗಬೇಕಿರುವುದೆಂದರೆ, ಖಾಸಗಿ ಪೂರ್ವಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಆನಂತರ ರಾಜ್ಯದ ಎಲ್ಲ ಮಕ್ಕಳ ಪೂರ್ವಪ್ರಾಥಮಿಕ ಶಿಕ್ಷಣದ ಹೊಣೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಕನ್ನಡವನ್ನು ಮಾಧ್ಯಮವಾಗಿ, ಇಂಗ್ಲಿಷ್ ಅನ್ನು ಒಂದು ಭಾಷೆಯಾಗುಳ್ಳ ಸಮಾನ ಶಿಕ್ಷಣ, ಸಮಾನ ಶಾಲಾ ವ್ಯವಸ್ಥೆಯನ್ನು ಎಲ್ಲ ಮಕ್ಕಳಿಗೂ ಉಚಿತವಾಗಿ ನೀಡಬೇಕು. ಇದನ್ನು ಹಂತ ಹಂತವಾಗಿ ಪ್ರಾಥಮಿಕ ಶಾಲೆಗೂ ವಿಸ್ತರಿಸಿ, ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಸರ್ವರಿಗೂ ಖಾತ್ರಿಗೊಳಿಸಲು ಸನ್ನದ್ಧವಾಗಬೇಕು.

ಸರ್ಕಾರಿ ವ್ಯವಸ್ಥೆಯಲ್ಲಿ ಪೂರ್ವಪ್ರಾಥಮಿಕ ಶಿಕ್ಷಣದ ಕಂದಕ ತುಂಬಲು ಅನೇಕ ಒತ್ತಡ, ಒತ್ತಾಯಗಳು ಕೇಳಿಬಂದಿದ್ದವು. ಆನಂತರ 2012-13ನೇ ಸಾಲಿನಲ್ಲಿ ರಾಜ್ಯ ಯೋಜನಾ ನಿರ್ದೇಶಕರ ಮೌಖಿಕ ಆದೇಶದಂತೆ, ಸರ್ವ ಶಿಕ್ಷಣ ಅಭಿಯಾನ ನಿರ್ದೇಶನಾಲಯವು ಹಾಸನ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಯ್ದ 31 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ‘ಮಕ್ಕಳ ಮನೆ’ ಎಂಬ ಪೂರ್ವಪ್ರಾಥಮಿಕ ವಿಭಾಗವನ್ನು ಪ್ರಾರಂಭಿಸಿತು. ಇದಕ್ಕೆ ಮಕ್ಕಳ ಹೆಚ್ಚಿನ ದಾಖಲೀಕರಣವೂ ಆಯಿತು. ಹೀಗಾಗಿ ಶಿಕ್ಷಣ ಇಲಾಖೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಪ್ರತೀ ಜಿಲ್ಲೆಯಲ್ಲಿ ‘ಮಕ್ಕಳ ಮನೆ’ಗಳನ್ನು ಸ್ಥಳೀಯರ ಸಹಭಾಗಿತ್ವದಲ್ಲಿ ಪ್ರಾರಂಭಿಸಿತು. ಪೂರ್ವಪ್ರಾಥಮಿಕ ಶಾಲೆ ಓದಿದ ಮಕ್ಕಳು ಅಲ್ಲೇ ಸರ್ಕಾರಿ ಶಾಲೆಗೆ ದಾಖಲಾಗಿ ಮುಂದುವರಿಯುವ ಪ್ರಮಾಣ ಹೆಚ್ಚಾಗಿರುವುದರಿಂದ, ಸರ್ಕಾರಿ ಶಾಲೆಗಳನ್ನು ಉಳಿಸಲು ಇದೊಂದು ಸಮರ್ಥ ಪ್ರಯೋಗವೇ ಆಗಿತ್ತು. ಈ ‘ಮಕ್ಕಳ ಮನೆ’ಗಳಿಗೆ ಬಹಳಷ್ಟು ಕಡೆ ಅಂಗನವಾಡಿ ಕೇಂದ್ರಗಳನ್ನು ಜೋಡಿಸಲಾಗಿತ್ತು. ಎಲ್‍ಕೆಜಿ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರೇ ಬೋಧಿಸುತ್ತಿದ್ದರು. ಯುಕೆಜಿ ಮಕ್ಕಳಿಗೆ ಬೋಧಿಸಲು ಗೌರವಧನ ನೀಡಿ ಅತಿಥಿ ಶಿಕ್ಷಕರನ್ನು ಶಾಲಾಭಿವೃದ್ಧಿ ಸಮಿತಿಯವರೇ ನೇಮಿಸಿಕೊಳ್ಳುತ್ತಿದ್ದರು. ಇವರಿಗೆ ಮಕ್ಕಳ ಪೋಷಕರು, ದಾನಿಗಳು ಸೇರಿ ಕೈಲಾದಷ್ಟು ಗೌರವಧನವನ್ನು ನೀಡುತ್ತಿದ್ದರು.

ಕೇಂದ್ರ ಸರ್ಕಾರದ ಯೋಜನೆಯಂತೆ 1975ರಲ್ಲಿ ದೇಶದಾದ್ಯಂತ ಪ್ರಾರಂಭವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮುಖ್ಯ ಗುರಿಯು ಗರ್ಭಿಣಿ, ಬಾಣಂತಿ, ಕಿಶೋರಿಯರು ಮತ್ತು 6 ವರ್ಷದೊಳಗಿನ ಮಕ್ಕಳ ಸರ್ವತೋಮುಖ ಆರೋಗ್ಯ. ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸಲು ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಅವು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ, ನಗರದ ಕೊಳೆಗೇರಿಗಳಲ್ಲಿ ಸ್ಥಾಪನೆಗೊಂಡಿವೆ. ಇಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ದಾಖಲಾಗಿರುತ್ತಾರೆ ಎಂಬುದು ಗಮನಾರ್ಹ. ಪೋಷಣೆಯ ಜೊತೆಗೆ ಅಂಗನವಾಡಿ ಕೇಂದ್ರಗಳು 3-6 ವರ್ಷದ ಮಕ್ಕಳಿಗೆ ಕೆಲಮಟ್ಟಿನ ಶಾಲಾಪೂರ್ವ ಶಿಕ್ಷಣ ನೀಡಬೇಕೆಂಬ ನಿರ್ದೇಶನವೂ ಸರ್ಕಾರದಿಂದ ಇದೆ. ಆದರೆ ಇದಕ್ಕೆ ಬೇರೆ ಬೇರೆ ವಯೋಮಾನಕ್ಕೆ ತಕ್ಕಂತೆ ಶಿಸ್ತುಬದ್ಧ ನಿಗದಿತ ನಮೂನೆಯ ಪಠ್ಯವಾಗಲೀ ಪ್ರತ್ಯೇಕ ಶಾಲಾ ಕೊಠಡಿಯಾಗಲೀ ತರಬೇತಾದ ಬೋಧನಾ ಸಿಬ್ಬಂದಿಯಾಗಲೀ ಇಲ್ಲ. ಹೀಗೆಂದೇ ಇದು ಶೈಕ್ಷಣಿಕ ವ್ಯವಸ್ಥೆಯಾಗಿ ಸರ್ಕಾರದಲ್ಲಿ ದಾಖಲಾಗುವುದೇ ಇಲ್ಲ!

ಸರ್ಕಾರವು ಇದೇ ಮೇ ತಿಂಗಳಿನಲ್ಲಿ ಸುತ್ತೋಲೆ ಹೊರಡಿಸಿ, ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಿಸಬೇಕೆಂದು ಆದೇಶಿಸಿದೆ. ಇದರಿಂದ ಸಹಜವಾಗಿ ಅಂಗನವಾಡಿ ತಾಯಂದಿರು ಆತಂಕಕ್ಕೆ ಒಳಗಾಗಿದ್ದಾರೆ. ಈ ವಿಷಯವನ್ನು ಸರ್ಕಾರ ಸೂಕ್ಷ್ಮವಾಗಿ ಬಗೆಹರಿಸಲು ಸಾಧ್ಯವಿದೆ. ಪ್ರತಿ ಅಂಗನವಾಡಿಯನ್ನೂ ಆಯಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣಕ್ಕೆ ಸ್ಥಳಾಂತರಿಸಿ, ಉನ್ನತೀಕರಿಸಿ, ಅಲ್ಲೇ ಪೂರ್ವಪ್ರಾಥಮಿಕ ವ್ಯವಸ್ಥೆಯನ್ನು (ಪ್ರತ್ಯೇಕ ಬೇಬಿ ಸಿಟ್ಟಿಂಗ್, ಎಲ್‍ಕೆಜಿ, ಯುಕೆಜಿ ತರಗತಿಗಳು) ಪ್ರಾರಂಭಿಸಬಹುದು. ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಸಿಯೂಟ ವ್ಯವಸ್ಥೆಯನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯೊಂದಿಗೆ ಬೆಸೆದರೆ ಹೆಚ್ಚಿನ ಹೊರೆಯಿಲ್ಲದೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಈ ಎಳೆಯ ಮಕ್ಕಳಿಗೂ ನೀಡಲು ಸಾಧ್ಯವಾಗುತ್ತದೆ. ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಎಸ್‍ಎಸ್‍ಎಲ್‍ಸಿ ಉತ್ತಿರ್ಣರಾದವರೂ ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದವರೂ ಆಗಿರುವುದರಿಂದ ಇವರಿಗೇ ನಿಗದಿತ ಶೈಕ್ಷಣಿಕ ತರಬೇತಿ ನೀಡಿ, ಪರೀಕ್ಷೆ ನಡೆಸಿ ಅದರಲ್ಲಿ ಉತ್ತೀರ್ಣರಾದವರನ್ನು ನೇಮಿಸಿಕೊಳ್ಳಬೇಕು. ಅವರಿಗೆ ಶಾಸನಬದ್ಧ ಕನಿಷ್ಠ ವೇತನ ನೀಡಿ, ಸೇವೆಯನ್ನು ಖಾತ್ರಿಗೊಳಿಸಬೇಕು. ಅಗತ್ಯವಿದ್ದರೆ ಹೆಚ್ಚುವರಿಯಾಗಿ ಶಿಕ್ಷಕರನ್ನೂ ನೇಮಿಸಿಕೊಳ್ಳಬಹುದು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಗರ್ಭಿಣಿ, ಬಾಣಂತಿ ಮತ್ತು ಕಿಶೋರಿಯರ ಆರೈಕೆಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನದ ಉಳಿಕೆ ಕೆಲಸವನ್ನು ಯಾವುದೇ ತೊಡಕಿಲ್ಲದೆ ಅಂಗನವಾಡಿ ಸಹಾಯಕಿಯರು ಖಂಡಿತಾ ನಿರ್ವಹಿಸಬಲ್ಲರು. ಇದಕ್ಕಾಗಿ ಹೆಚ್ಚಿನ ನೌಕರರನ್ನು ನೇಮಿಸಿಕೊಂಡು, ಅವರಿಗೇ ಹೆಚ್ಚಿನ ತರಬೇತಿ ನೀಡಿ, ಹೆಚ್ಚಿನ ವೇತನವನ್ನು ನಿಗದಿಗೊಳಿಸಬೇಕಷ್ಟೆ. ಸರ್ಕಾರಿ ಶಾಲೆಯಲ್ಲಿ ಪೂರ್ವಪ್ರಾಥಮಿಕ ಶಾಲೆ ಪ್ರಾರಂಭಿಸುವುದು ಈಗಲಾದರೂ ಸಮಾನ ಶಿಕ್ಷಣವನ್ನು ನೀಡುವ ಆಶಯಕ್ಕೆ ಮತ್ತು ಸಮ ಸಮಾಜದ ನಿರ್ಮಾಣಕ್ಕೆ ಪೂರಕವಾದುದಾಗಿದೆ. ಆದರೆ, ಇದರ ಅನುಷ್ಠಾನದಲ್ಲಿ ಆಗುವ ಗೊಂದಲಗಳನ್ನು ನಿವಾರಿಸಲು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಪದಾಧಿಕಾರಿಗಳು, ಶಿಕ್ಷಣ ತಜ್ಞರು, ಮಕ್ಕಳ ಹಕ್ಕುಗಳ ಚಿಂತಕರು, ಹೋರಾಟಗಾರರು ಮತ್ತು ಸಮಾಜಶಾಸ್ತ್ರಜ್ಞರನ್ನು ಒಳಗೊಂಡಂತೆ ಸಮಿತಿ ರಚಿಸಿ, ಅವರ ಸಲಹೆಗಳನ್ನಾಧರಿಸಿ ಮುಂದುವರಿಯಲು ಸರ್ಕಾರ ಮನಸ್ಸು ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT