ಸೋಮವಾರ, ಮಾರ್ಚ್ 30, 2020
19 °C
ಜನರನ್ನು ಒಳಗೊಳ್ಳದ ಅರಣ್ಯ ಸಂರಕ್ಷಣಾ ಸಿದ್ಧಾಂತದ ವೈಜ್ಞಾನಿಕ ಆಕರಗಳಾವುವು?‌

ಆಲಿಸಿ... ಕಾನನದ ಕೂಗು

ಜಿ.ಎಸ್‌. ಜಯದೇವ Updated:

ಅಕ್ಷರ ಗಾತ್ರ : | |

‘ಮಾಗಳಿ ಬೇರಿನ ಕಳ್ಳಸಾಗಾಣಿಕೆ’– ಹೀಗೊಂದು ಸುದ್ದಿ ಓದಿ ಕುತೂಹಲವಾಯಿತು. ತಮಿಳುನಾಡಿನ ಕೆಲವರು ಕಾವೇರಿ ವನ್ಯಧಾಮಕ್ಕೆ ನುಗ್ಗಿ, ಅಲ್ಲಿಯ ಕಾಡುಗಳಲ್ಲಿ ಬೆಳೆದಿದ್ದ ಮಾಗಳಿ ಬೇರನ್ನು ಅಗೆದು ತೆಗೆದು, ಮೂಟೆ ಗಳಲ್ಲಿ ತುಂಬಿಕೊಂಡು ತಮಿಳುನಾಡಿಗೆ ಸಾಗಿಸುತ್ತಿದ್ದರು. ಅವರನ್ನು ಕರ್ನಾಟಕದ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಲುಸಮೇತ ಬಂಧಿಸಿದ್ದರು. ಮಾಗಳಿ ಬೇರಿನ ಉಪ್ಪಿನಕಾಯಿಯ ರುಚಿ–ಸುವಾಸನೆಗೆ ಸರಿಸಮ ವಾದದ್ದು ಯಾವುದೂ ಇಲ್ಲ. ಹಾಗಾಗಿ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ಮಾಗಳಿ ಬೇರನ್ನು ಅಗೆದು ಮಾರುವವರ ಸಂಖ್ಯೆಯೂ ಹೆಚ್ಚಾಗಿದೆ.

ಕಡಿಮೆ ಮಳೆ ಬೀಳುವ, ಕಾಡಂಚಿನ ಕಲ್ಲುಗಾಡಿನ ನೆಲದಲ್ಲಿ ಬೆಳೆಯುವ ಮಾಗಳಿ ಬೇರು ಹಿಂದೆಲ್ಲ ಯಥೇಚ್ಛ ವಾಗಿ ಸಿಗುತ್ತಿತ್ತು. ಆದರೆ ಈಗ ಇದು ಅಪಾಯದ ಅಂಚಿನಲ್ಲಿರುವ ಸಸ್ಯ. ವಿಜ್ಞಾನಿಗಳು ಇದನ್ನು ಕೆಂಪು ಪುಸ್ತಕದ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇಷ್ಟೆಲ್ಲ ಆಗುವ ದಶಕದ ಮೊದಲೇ ಬಿಳಿಗಿರಿರಂಗನ ಬೆಟ್ಟದ ಸೋಲಿಗರು ಮಾಗಳಿ ಬೇರು ಅಪರೂಪವಾಗುತ್ತಿರುವ ಸಂಗತಿಯನ್ನು ಹೇಳುತ್ತಿದ್ದರು. ಪರಿಸರವಾದಿ ಅ.ನ.ಯಲ್ಲಪ್ಪ ರೆಡ್ಡಿ ಅವರ ಪ್ರಕಾರ, ಮಾಗಳಿ ಬೇರು ನೆಲದಲ್ಲಿ ನೀರನ್ನು ಹಿಡಿದಿಡುವ ವಿಶೇಷ ಸಸ್ಯ. ಇದು ಇಲ್ಲದಿದ್ದರೆ ನೆಲ ಬರಡಾದೀತು. ಇಷ್ಟೆಲ್ಲ ಸದ್ಗುಣಗಳಿರುವ ಈ ಬೇರನ್ನು ಅಳಿಯಲು ಬಿಡಬೇಕೇ?

ನಂದಿ ಬೆಟ್ಟದ ಬಳಿ ‘ಮಾಕಳಿ ಬೆಟ್ಟ’ ಎಂಬ ಚಿಕ್ಕ ಗುಡ್ಡ ಇದೆಯೆಂದೂ, ಇದರಲ್ಲಿದ್ದ ಬಹುಪಾಲು ಮಾಗಳಿ ಗಿಡಗಳನ್ನು ಜನರು ನಾಶ ಮಾಡಿರುವುದರಿಂದ ಅಲ್ಲಿ ನೆಡಲು ಲಕ್ಷಾಂತರ ಸಸಿಗಳು ಬೇಕೆಂದೂ ಯಲ್ಲಪ್ಪ ರೆಡ್ಡಿಯವರು ಬೇಡಿಕೆ ಇಟ್ಟರು. ಮಾಗಳಿ ಬಳ್ಳಿ ಯಾವಾಗ ಹೂ ಬಿಡುತ್ತದೆ, ಯಾವಾಗ ಕಾಯಿ ಕಚ್ಚಿ ಬೀಜ ಬಲಿಯುತ್ತದೆ ಇತ್ಯಾದಿ ವಿವರಗಳೆಲ್ಲ ಬಿಳಿಗಿರಿರಂಗನ ಬೆಟ್ಟದ ರಾಮೇಗೌಡ ಅವರಿಗೆ ಕರಾರುವಾಕ್ಕಾಗಿ ಗೊತ್ತು. ಅಂತೂ ಅವರ ಸಹಾಯದಿಂದ ಸಾವಿರಾರು ಸಸಿಗಳನ್ನು ಬೆಳೆಸಿ, ಹಿತ್ತಲಲ್ಲಿ ಒಂದು ಮಾಗಳಿ ಬಳ್ಳಿ ನೆಡಿ ಎಂದು ಮಾಗಳಿಪ್ರಿಯರಿಗೆ ವಿತರಿಸಿದೆ. ಯಲ್ಲಪ್ಪ ರೆಡ್ಡಿಯವರಿಗೂ ಸರಬರಾಜು ಮಾಡಿದೆ. ಮಾಗಳಿ ಸಸಿಗಳಲ್ಲದೆ ರಾಮೇಗೌಡರ ಸಹಾಯದಿಂದ ಅಪರೂಪದ, ಅಪಾಯದ ಅಂಚಿನಲ್ಲಿರುವ ಸುಮಾರು 30 ಜಾತಿಯ ಸಸಿಗಳನ್ನು ಯಲ್ಲಪ್ಪ ರೆಡ್ಡಿ ಅಲ್ಲಲ್ಲಿ ನೆಡುತ್ತಿದ್ದಾರೆ.

ಈಗ ಒಂದು ಮುಖ್ಯವಾದ ಪ್ರಶ್ನೆಗೆ ಬರೋಣ. ಕಾಡಿನಲ್ಲಿ ದೊರೆಯುವ ಈ ಅಪರೂಪದ ಜಾತಿಯ ಸಸ್ಯಗಳನ್ನು, ಅರಣ್ಯ ಅಧಿಕಾರಿಗಳು ನಮ್ಮ ಸೋಲಿಗ ರಾಮೇಗೌಡರ ಹಾಗೆ ಗುರುತಿಸಬಲ್ಲರೇ? ಈ ಸಸ್ಯಗಳ ಬಗ್ಗೆ ಅವರಿಗೆ ಪ್ರೀತಿ, ಕಾಳಜಿಗಳಿವೆಯೇ? ಇವು ಶಾಶ್ವತವಾಗಿ ಕಣ್ಮರೆಯಾದರೆ ಇವರಿಗೆ ದುಃಖವಾಗುತ್ತದೆಯೇ? ಬಹುಶಃ ‘ಇಲ್ಲ’ ಎನ್ನುವುದೇ ಸರಿಯಾದ ಉತ್ತರ. ಹೋಗಲಿ, ವಿನಾಶದ ಅಂಚಿನಲ್ಲಿರುವ ಅಪರೂಪದ ಸಸ್ಯಗಳನ್ನು ಬೆಳೆಸಬಲ್ಲ ರಾಮೇಗೌಡ ಅವರಿಗೆ ಸಹಾಯ ಮಾಡಲು ಇವರಿಗೆ ಮನಸ್ಸಿದೆಯೇ?

ರಾಮೇಗೌಡರಿಗೆ ಒಂದು ಕೊಳವೆಬಾವಿ ಹಾಕಿಸಿ ಕೊಡಲು ಯಲ್ಲಪ್ಪ ರೆಡ್ಡಿ ಎರಡು– ಮೂರು ಬಾರಿ ಚಾಮರಾಜನಗರಕ್ಕೆ ಬಂದು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ, ಅರಣ್ಯ ಇಲಾಖೆ ಅಧಿಕಾರಿಗಳೊಡನೆ ಚರ್ಚೆ ಮಾಡಿದರು. ಈ ಕೊಳವೆಬಾವಿಗೆ ಇಲಾಖೆಯ ಹಣ ಬೇಕಾಗಿಲ್ಲ. ಬೇಕಾಗಿರುವುದು ಬರೀ ಅನುಮತಿ. ರಾಮೇಗೌಡರಿಗೆ ಬಿಳಿಗಿರಿರಂಗನ ಬೆಟ್ಟದಲ್ಲಿ ಸ್ವಂತ ಕಂದಾಯ ಜಮೀನಿದೆ. ನೀರಿನ ಸೌಲಭ್ಯಕ್ಕಾಗಿ ಹಣ ಖರ್ಚು ಮಾಡಲು ನಾವು ತಯಾರಿದ್ದೇವೆ. ಈ ಸೌಕರ್ಯಗಳಿಂದ ರಾಮೇಗೌಡ ಅಪರೂಪದ ಸಸ್ಯ ಪ್ರಭೇದಗಳನ್ನು ಕಾಪಾಡುತ್ತಾರೆ. ಆದರೆ ಇದು ‘ಹುಲಿ ಸಂರಕ್ಷಿತ ಪ್ರದೇಶ’ ಎಂಬ ಕಾರಣಕ್ಕೆ ಕಂದಾಯ ಭೂಮಿಯಲ್ಲಿ ಕೊಳವೆಬಾವಿ ತೋಡಿಸಲು ಅನುಮತಿ ಸಿಗುತ್ತಿಲ್ಲ. ಅವರು ಬೆಳೆಸಿರುವ ಸಾವಿರಾರು ಸಸಿಗಳು ನೀರಿಲ್ಲದೆ ಸತ್ತುಹೋಗಿವೆ. ಮಾಗಳಿ ಬೇರಿನ ಕಳ್ಳಸಾಗಾಣಿಕೆ ಮಾಡುವ ಕಳ್ಳರನ್ನು ಹಿಡಿದು ಸುದ್ದಿ ಮಾಡಿಕೊಳ್ಳುವ ಅಧಿಕಾರಿಗಳಿಗೆ, ಅವುಗಳನ್ನು ಉಳಿಸುವ ರಾಮೇಗೌಡರ ಕೆಲಸ ಆಕರ್ಷಕವಾಗಿ ಕಾಣುವುದೇ ಇಲ್ಲ!

ಇದೇ ಬಿಳಿಗಿರಿರಂಗನ ಬೆಟ್ಟದಲ್ಲಿ ಹಣಕ್ಕಾಗಿ ಐಷಾರಾಮಿ ವಸತಿಗೃಹಗಳನ್ನು, ರೆಸಾರ್ಟ್‌ಗಳನ್ನು ನಡೆಸುವವರಿಗೆ ಕಾನೂನು ತೊಡಕಾಗುವುದಿಲ್ಲ. ಬೇಕಾದಷ್ಟು ಹುಲಿಗಳಿರುವ ಬೇಡಗುಳಿ ಕಾಡಿನಲ್ಲಿ ಸಾವಿರಾರು ಎಕರೆ ಕಾಫಿ ತೋಟ ಮಾಡಿಕೊಂಡು ಲಾಭ ಮಾಡುತ್ತಿರುವ ಎಸ್ಟೇಟ್ ಉದ್ಯಮಿಗಳಿಗೆ ಕಾನೂನಿನ ತೊಡಕಿಲ್ಲ. ಆದರೆ ಅಪಾಯದ ಅಂಚಿನಲ್ಲಿರುವ ಅನೇಕ ಸಸ್ಯ ಪ್ರಭೇದಗಳನ್ನು ಬೆಳೆಸಬಲ್ಲ ರಾಮೇಗೌಡ ಅಂತಹವರಿಗೆ ಮಾತ್ರ ಕಾನೂನಿನ ತೊಡಕು.

ತಮ್ಮದೇ ಜ್ಞಾನ ಪರಂಪರೆಯಲ್ಲಿ, ಪದ್ಧತಿ, ನಂಬಿಕೆ ಗಳಲ್ಲಿ ಬೆಳೆದುಬಂದ ಅರಣ್ಯವಾಸಿ ಬುಡಕಟ್ಟು ಜನರ ವಿವೇಕವು ಕಾಡನ್ನು ಕಾಪಾಡಬಲ್ಲದು ಎನ್ನುತ್ತಾರೆ ಅನೇಕ ತಜ್ಞರು. ಈ ಘಟನೆಯನ್ನು ನೋಡಿ: ಕೊಡಗಿನಲ್ಲಿ ಗುಡ್ಡ ಕುಸಿದು ಮನೆ–ಮಠ ಕಳೆದುಕೊಂಡು ವಲಸೆ ಹೋಗುತ್ತಿದ್ದ ವ್ಯಕ್ತಿಯನ್ನು ಪತ್ರಕರ್ತನೊಬ್ಬ ಕೇಳಿದ ‘ಏನು, ಕಾಡಿನ ಮರಗಳನ್ನು ವಿಪರೀತ ಕಡಿದಿದ್ದರಿಂದ ಈ ಗತಿ ಬಂತಲ್ಲವೇ?’ ಆ ವ್ಯಕ್ತಿ ಹೇಳಿದ ‘ಛೇ ಛೇ, ಹಾಗೇನಿಲ್ಲ ಪ್ರಕೃತಿ ವಿಕೋಪಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಅದಕ್ಕೂ ಮರ ಕಡಿಯುವುದಕ್ಕೂ ಯಾವ ಸಂಬಂಧವೂ ಇಲ್ಲ’. ಕಾಡು ಇವನಿಗೆ ಹಣ ಗಳಿಕೆಯ ತಾಣ ಅಷ್ಟೆ. ಆದರೆ ಕಾಡಿನ ಬುಡಕಟ್ಟು ನಿವಾಸಿಗಳಿಗೆ ‘ಪ್ರಪಂಚ’ ಎಂದರೆ ಕಾಡು; ಕಾಡಿಲ್ಲದ ಬದುಕು ಇವರಿಗೆ ಅರ್ಥಹೀನ. ನಮ್ಮ ಕಾಡು ಉಳಿಸಿದ ಚಿಪ್ಕೊ ಚಳವಳಿಯಂತಹ ಚಳವಳಿಗೆ ಕಾರಣವಾಗಿದ್ದು ಅರಣ್ಯವಾಸಿ ಜನರಲ್ಲವೇ?

ಇನ್ನು, ಆಧುನಿಕ ಪರಿಸರವಾದಿಗಳು ಅಮೆರಿಕ ಮಾದರಿಯ ಸಂರಕ್ಷಣೆಯನ್ನೇ ಪರಮಶ್ರೇಷ್ಠ ಎಂದು ಭಾವಿಸುತ್ತಾರೆ. ಅವರ ಪ್ರಕಾರ ‘ಕಾಡಿನ ಮೂಲನಿವಾಸಿಗಳೇ ಹುಲಿಗಳಿಗೆ ಕಂಟಕ!’ ಹುಲಿ ಸಂರಕ್ಷಣೆ ಎಂದರೆ ಕಾಡಿನ ನಿವಾಸಿಗಳನ್ನು ಹೊರಗೆ ಕಳುಹಿಸಿಬಿಟ್ಟರೆ ಕಾಡು ರಕ್ಷಿಸಿದಂತೆ. ಜನರನ್ನು ಒಳಗೊಳ್ಳದೇ ಹೊರಗಿಡುವ ಈ ಬಗೆಯ ಸಂರಕ್ಷಣಾ ಸಿದ್ಧಾಂತದ ವೈಜ್ಞಾನಿಕ ಆಕರಗಳಾವುವು? ಈ ಮನುಷ್ಯದ್ವೇಷಿ ನಿಲುವು ನಮ್ಮನ್ನು ಎಷ್ಟು ದೂರ ಕೊಂಡೊಯ್ಯಬಲ್ಲದು?

ಅಮೆರಿಕದ ಜಾರ್ಜ್ ಶೆಲ್ಲರ್ ಎಂಬ ವನ್ಯಜೀವಿ ತಜ್ಞ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಭಾರತದ ಹುಲಿಗಳ ಭವಿಷ್ಯದ ಬಗ್ಗೆ ನಮ್ಮ ಪತ್ರಕರ್ತರು ಅವರನ್ನು ಕೇಳಿದರು. ಹುಲಿಗಳು ಹೆಚ್ಚಿರುವ ಕುರಿತು ಇಲಾಖೆಗಳು ಒದಗಿಸಿರುವ ಅಂಕಿಅಂಶಗಳನ್ನು ಶೆಲ್ಲರ್ ಪೂರ್ತಿಯಾಗಿ ನಂಬಲಿಲ್ಲ. ಜಗತ್ತಿನ ಹುಲಿಗಳ ಪೈಕಿ ಭಾರತದಲ್ಲೇ ಅರ್ಧದಷ್ಟು ಇರುವುದು ನಿಜವಾದರೂ ಅವುಗಳ ಭವಿಷ್ಯ ಸುರಕ್ಷಿತ ವಾಗಿಲ್ಲ ಎಂಬುದು ಅವರ ಅಭಿಪ್ರಾಯ. ಹಾಗಿದ್ದರೆ ಅವುಗಳ ರಕ್ಷಣೆಗಾಗಿ ಅಮೆರಿಕದಲ್ಲಿ ಮಾಡುವಂತೆ ಕಾಡುಗಳಿಂದ ಮನುಷ್ಯರನ್ನು ಹೊರಗೆ ಹಾಕಬೇಕೇ ಎಂದು ಪ್ರಶ್ನಿಸಲಾಯಿತು. ಶೆಲ್ಲರ್ ಹೇಳಿದರು ‘ಇಲ್ಲ, ಅಮೆರಿಕದ ಮಾದರಿಯನ್ನು ಭಾರತೀಯರು ಅನುಸರಿಸ ಬೇಕಾಗಿಲ್ಲ. ಭಾರತೀಯರು ತಮ್ಮದೇ ಸಂರಕ್ಷಣಾ ವಿಧಾನ ವನ್ನು ಅನುಸರಿಸಬೇಕು. ಪಾರಂಪರಿಕವಾಗಿ ಕಾಡಿನಲ್ಲಿ ವಾಸಿಸುವ ಜನರನ್ನು ಒಳಗೊಳ್ಳದೆ ನಿಜವಾದ ಅಭಿವೃದ್ಧಿ ಸಂರಕ್ಷಣೆ ಸಾಧ್ಯವಿಲ್ಲ’. ಅವರ ಪ್ರಕಾರ, ರಾಷ್ಟ್ರೀಯ ಉದ್ಯಾನವನ ಅಥವಾ ಹುಲಿ ಸಂರಕ್ಷಿತ ಕಾಡುಗಳಿಗೆ ಪ್ರವೇಶ ಶುಲ್ಕ ವಿಧಿಸಿ, ಅದನ್ನು ಅರಣ್ಯವಾಸಿಗಳ ಜೀವನೋಪಾಯಕ್ಕಾಗಿ ಬಳಸಬೇಕು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‍ ಅವರು ಕೆಲವು ದಿನಗಳ ಹಿಂದೆ ನಮ್ಮ ಆಶ್ರಮಕ್ಕೆ ಬಂದು, ಸೋಲಿಗ ಬುಡಕಟ್ಟು ಜನರೊಡನೆ ಚರ್ಚಿಸಿದರು. ಅರಣ್ಯ ಸಂರಕ್ಷಣೆ ಯನ್ನು ನಿಷ್ಠೆಯಿಂದ, ಪ್ರೀತಿಯಿಂದ ಮಾಡಬಲ್ಲ ಸೋಲಿಗ ಆದಿವಾಸಿಗಳಿಗೆ ಅರಣ್ಯ ಇಲಾಖೆಯಲ್ಲಿ ಶೇ 75ರಷ್ಟು ಹುದ್ದೆಗಳನ್ನು ಮೀಸಲಿಡಬೇಕೆಂದು ಸೋಲಿಗರು ಕೋರಿದರು. ಅರಣ್ಯದ ಹೃದಯವನ್ನು ಬಲ್ಲವರು ಮಾತ್ರ ಅದನ್ನು ರಕ್ಷಣೆ ಮಾಡುತ್ತಾರೆ ಎನ್ನುವುದಾದರೆ ಈ ಬೇಡಿಕೆಯನ್ನು ಪರಿಗಣಿಸುವುದು ಸಮಂಜಸ ಆಗಲಾರದೇ? ನಾಗಮೋಹನದಾಸ್ ಆಯೋಗ ಶಿಫಾರಸು ಮಾಡಬಹುದಾದ ಈ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂದು ಆಶಿಸುತ್ತೇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು