ಶುಕ್ರವಾರ, ಜೂಲೈ 10, 2020
27 °C
ಸರ್ವಾಧಿಕಾರ ಧೋರಣೆಯ ಕರಾಳ ಕಥೆಯನ್ನು ಮತ್ತೆ ಮತ್ತೆ ಹೇಳಬೇಕಾಗಿದೆ

ಸೂರ್ಯ ನಮಸ್ಕಾರ | ತುರ್ತು ಪರಿಸ್ಥಿತಿಯ ನೆನಪುಗಳು

ಎ. ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

ಹೈಕೋರ್ಟ್‌ನ ತೀರ್ಪೊಂದು ತಮ್ಮ ಸಂಸತ್ ಸದಸ್ಯತ್ವ ಕಿತ್ತುಕೊಂಡಿದ್ದರೂ ಅಧಿಕಾರದಲ್ಲಿ ಉಳಿಯಬೇಕು ಎಂಬ ಕಾರಣಕ್ಕೆ 1975ರಲ್ಲಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದರ ಘೋರ ನೆನಪುಗಳನ್ನು ಜೂನ್‌ ತಿಂಗಳು ಪ್ರತಿ ವರ್ಷವೂ ಹೊತ್ತು ತರುತ್ತದೆ. ಅಧಿಕಾರಕ್ಕೆ ಅಂಟಿಕೊಳ್ಳಲು ಇಂದಿರಾ ಅವರು ಅದೆಷ್ಟು ಹಟ ತೊಟ್ಟಿದ್ದರೆಂದರೆ, ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಸೆರೆಯಲ್ಲಿ ಇರಿಸಿದರು. ತಮ್ಮ ನಿಯಂತ್ರಣದಲ್ಲಿದ್ದ ಸಂಸತ್ತನ್ನು ಬಳಸಿಕೊಂಡು ನ್ಯಾಯಾಂಗ ಹಾಗೂ ಮಾಧ್ಯಮಗಳ ಸ್ವಾತಂತ್ರ್ಯವನ್ನು ಹೊಸಕಲು ಯತ್ನಿಸಿದರು. ಚುಟುಕಾಗಿ ಹೇಳಬೇಕು ಎಂದಾದರೆ, ವಿಶ್ವದ ಅತ್ಯಂತ ಚೈತನ್ಯಶಾಲಿ ಪ್ರಜಾತಂತ್ರವನ್ನು ಅವರು ಫ್ಯಾಸಿಸ್ಟ್‌
ವ್ಯವಸ್ಥೆಯನ್ನಾಗಿಸಿದರು!

ಪರಿಸ್ಥಿತಿ ಹೇಗೆ ಸಂಪೂರ್ಣವಾಗಿ ಕೈಮೀರಿಹೋಯಿತು, ಸರ್ವಾಧಿಕಾರಿಗಳು ದೇಶದ ಎಲ್ಲೆಡೆ ಹುಟ್ಟಿಕೊಂಡಿದ್ದು ಹೇಗೆ ಮತ್ತು ಅವರು ದೌರ್ಜನ್ಯಗಳನ್ನು ಹೇಗೆ ನಡೆಸಿದರು ಎಂಬ ಬಗ್ಗೆ ಬಹಳಷ್ಟು ಬರೆದಾಗಿದೆ. ಭಾರತವನ್ನು ಸರ್ವಾಧಿಕಾರದ ಅಡಿಯಲ್ಲಿ ತರುವ ಇಡೀ ಯೋಜನೆಯನ್ನು ಪ್ರಧಾನಿಯವರ ನಿವಾಸದಲ್ಲಿ ರೂಪಿಸಲಾಯಿತು, ಅದನ್ನು 1975ರ ಜೂನ್‌ 25ರಂದು ಜಾರಿಗೆ ತರಲಾಯಿತು. ರಾಷ್ಟ್ರಪತಿಯಿಂದ ಆರಂಭವಾಗಿ, ನ್ಯಾಯಾಂಗ ಮತ್ತು ಅಧಿಕಾರಶಾಹಿ ಸೇರಿದಂತೆ ಪ್ರಜಾತಂತ್ರ ವ್ಯವಸ್ಥೆಯ ಚೌಕಟ್ಟಿನಡಿ ಕೆಲಸ ಮಾಡುವ ಹೊಣೆ ಹೊತ್ತಿರುವ ಸಂಸ್ಥೆಗಳು ಕುಸಿದುಬಿದ್ದಾಗ ಏನಾಗಬಹುದು ಎಂಬುದನ್ನು ಆ ದಿನ (1975ರ ಜೂನ್‌ 25) ನಡೆದ ಘಟನೆಗಳು ಹೇಳುತ್ತವೆ.

ಇಂದಿರಾ ಅವರ ಸರ್ವಾಧಿಕಾರದ ಪರಿಣಾಮವು ಹಿಂದಿ ಭಾಷಿಕ ಪ್ರದೇಶದಲ್ಲಿ ತೀರಾ ಕಠಿಣವಾಗಿತ್ತು. ಅಲ್ಲಿ ಪೊಲೀಸ್ ದೌರ್ಜನ್ಯ ಇತ್ತು, ಸಂತಾನಶಕ್ತಿಹರಣದ ಶಸ್ತ್ರಚಿಕಿತ್ಸಾ ಶಿಬಿರಗಳು ದೊಡ್ಡ ಮಟ್ಟದಲ್ಲಿ ನಡೆದವು. ಆದರೆ, ಕರ್ನಾಟಕದಲ್ಲಿ ಇದು ಅಷ್ಟು ತೀವ್ರವಾಗಿರಲಿಲ್ಲ. ಏಕೆಂದರೆ, ಕರ್ನಾಟಕದಲ್ಲಿ ದೇವರಾಜ ಅರಸು ಅವರಂತಹ ಸಮಚಿತ್ತದ ರಾಜಕೀಯ ನಾಯಕ ಮುಖ್ಯಮಂತ್ರಿಯಾಗಿದ್ದರು. ಹೀಗಿದ್ದರೂ, ದೇಶವು ಸರ್ವಾಧಿಕಾರಿಯ ಆಡಳಿತದಲ್ಲಿದೆ ಎಂಬುದನ್ನು ಜನರಿಗೆ ನೆನಪಿಸಿಕೊಡುವ ನಿದರ್ಶನಗಳು ಇಲ್ಲಿ ಇದ್ದವು.

ಈ ಲೇಖಕನಿಗೆ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಇರುವುದು ವಿಚಿತ್ರವಾದ, ಭಯ ಹುಟ್ಟಿಸುವ ನೆನಪುಗಳು. ಈ ಲೇಖಕ ಕೆಲಸ ಮಾಡುತ್ತಿದ್ದ ಪತ್ರಿಕೆಯ ಮುಖ್ಯ ವರದಿಗಾರರು ಜೂನ್‌ 26ರ ಬೆಳಿಗ್ಗೆ ಕರೆ ಮಾಡಿ, ತುರ್ತು ಪರಿಸ್ಥಿತಿ ಹೇರಲಾಗಿದೆ, ಹಲವು ರಾಷ್ಟ್ರೀಯ ನಾಯಕರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಲೇಖಕನನ್ನು ಕಚೇರಿಗೆ ಕರೆಸಿ, ವಿದ್ಯಮಾನಗಳ ಬೆನ್ನು ಹತ್ತುವಂತೆ ಸೂಚಿಸಲಾಯಿತು. ನಮ್ಮ ದಿನಪತ್ರಿಕೆಯನ್ನು ಪ್ರಕಟಣಾಪೂರ್ವ ಸೆನ್ಸಾರ್‌ಷಿಪ್‌ಗೆ ಒಳಪಡಿಸಲಾಗುತ್ತದೆ,
ಪ್ರಕಟಣೆಗೆ ಆಯ್ಕೆ ಮಾಡಿಕೊಂಡ ಎಲ್ಲ ಬರಹಗಳನ್ನು ಮುಖ್ಯ ಸೆನ್ಸಾರ್ ಅಧಿಕಾರಿಗೆ ಕಳುಹಿಸಬೇಕು ಎಂಬುದು ಇದಾದ ಕೆಲವೇ ಹೊತ್ತಿನಲ್ಲಿ ಗೊತ್ತಾಯಿತು.

ಮಾಧ್ಯಮಗಳನ್ನು ಅವಮಾನಿಸುವ ಉದ್ದೇಶದಿಂದ ಸರ್ಕಾರವು ಅಂದಿನ ಪೊಲೀಸ್ ಮಹಾನಿರ್ದೇಶಕರನ್ನು (ಐಜಿಪಿ) ರಾಜ್ಯದ ಮುಖ್ಯ ಸೆನ್ಸಾರ್ ಅಧಿಕಾರಿಯನ್ನಾಗಿ ನೇಮಿಸಿತ್ತು. ಐಜಿಪಿ ಬಳಿ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಹಾಗೂ ವಾರ್ತಾ ಇಲಾಖೆಯ ಅಧಿಕಾರಿಗಳ ತಂಡವೊಂದು ಇತ್ತು. ಆ ತಂಡದಲ್ಲಿದ್ದವರು ‘ಚೋಟಾ ಸೆನ್ಸಾರ್‌ ಅಧಿಕಾರಿ’ಗಳಂತೆ ಕೆಲಸ ಮಾಡುತ್ತಿದ್ದರು. ಸಂಪಾದಕೀಯಗಳು, ಲೇಖನಗಳು ಹಾಗೂ ವರದಿಗಾರರ ವರದಿಗಳ ಟೈಪ್‌ ಮಾಡಿದ ಪ್ರತಿಯನ್ನು ಇಟ್ಟುಕೊಂಡು ನಮ್ಮ ಕಚೇರಿಯಿಂದ ಮುಖ್ಯ ಸೆನ್ಸಾರ್ ಅಧಿಕಾರಿ ಕಚೇರಿಗೆ ವ್ಯಾನುಗಳು ಹೋಗುವುದು ಬರುವುದು ಇರುತ್ತಿತ್ತು. ಸೆನ್ಸಾರ್ ಅಧಿಕಾರಿಗಳು ಬರಹಗಳನ್ನು ನೋಡಿ, ಇಂದಿರಾ ಗಾಂಧಿ ಅವರನ್ನು ಟೀಕಿಸಿದಂತೆ ಕಂಡುಬಂದ ಅಥವಾ ಸರ್ಕಾರವನ್ನು ನಕಾರಾತ್ಮಕವಾಗಿ ಬಿಂಬಿಸಿದಂತೆ ಕಂಡುಬಂದ ಎಲ್ಲದಕ್ಕೂ ಕತ್ತರಿಹಾಕಿ, ಬರಹಗಳನ್ನು ಪತ್ರಿಕಾ ಕಚೇರಿಗೆ ಮರಳಿಸುತ್ತಿದ್ದರು.

ಸೆನ್ಸಾರ್ ಅಧಿಕಾರಿಗಳ ಸೂಚನೆಗಳು ಪಾಲನೆಯಾಗುವಂತೆ ಮಾಡುವುದು ಹಿರಿಯ ಸಂಪಾದಕೀಯ ಸಿಬ್ಬಂದಿಯ ಹೊಣೆಯಾಗಿತ್ತು. ಅಂದರೆ, ವಾಸ್ತವದಲ್ಲಿ ತುರ್ತು ಪರಿಸ್ಥಿತಿಯುದ್ದಕ್ಕೂ ಐಜಿಪಿ ಅವರೇ ಪತ್ರಿಕೆಯ ಸಂಪಾದಕ ಆಗಿದ್ದರು! ಸೆನ್ಸಾರ್‌ಷಿಪ್‌ ಮಾತ್ರವೇ ಅಲ್ಲದೆ, ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ಕರಾಳ ‘ಮೀಸಾ’ ಕಾನೂನಿನ ಅಡಿ ಭಾರಿ ಸಂಖ್ಯೆಯಲ್ಲಿ ಪತ್ರಕರ್ತರನ್ನು ಬಂಧಿಸಿತ್ತು. ಪತ್ರಿಕೆಯೊಂದು ‘ಸಾರ್ವಜನಿಕ ಸುವ್ಯವಸ್ಥೆ’ಗೆ ಧಕ್ಕೆ ತರುತ್ತದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟರು ಭಾವಿಸಿದರೆ, ಆ ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸಿ, ಮುದ್ರಣ ಯಂತ್ರಗಳನ್ನು ಸ್ಥಗಿತಗೊಳಿಸುವ ಅಧಿಕಾರವನ್ನು ಆ ಮ್ಯಾಜಿಸ್ಟ್ರೇಟರಿಗೆ ನೀಡುವ ‘ಆಕ್ಷೇಪಾರ್ಹ ವಿಷಯಗಳ ಪ್ರಕಟಣಾ ಕಾಯ್ದೆ’ಯನ್ನು ಕೂಡ ಸರ್ಕಾರ ಜಾರಿಗೊಳಿಸಿತು.

ಕರ್ನಾಟಕದ ಸಿಒಡಿ ಅಧಿಕಾರಿಗಳು 1977ರ ಮಾರ್ಚ್‌ನಲ್ಲಿ ಲಾರೆನ್ಸ್‌ ಫರ್ನಾಂಡೀಸ್ ಅವರನ್ನು ಬಿಡುಗಡೆ ಮಾಡಿದ ನಂತರ, ಈ ಲೇಖಕ ಅವರನ್ನು ಸಂದರ್ಶಿಸಿದ್ದರು. ಸೆನ್ಸಾರ್‌ಷಿಪ್‌ ಹಿಂಪಡೆದು, ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಈ ಸಂದರ್ಶನ ನಡೆಯಿತು. ಲಾರೆನ್ಸ್ ಅವರನ್ನು ಪೊಲೀಸರು ಕ್ರೂರವಾಗಿ ಹಿಂಸಿಸಿದ್ದರು. ಈ ಸಂದರ್ಶನ ಪ್ರಕಟವಾದಾಗ, ಜನ ಆಘಾತಕ್ಕೆ ಒಳಗಾಗಿದ್ದರು, ಕೇಂದ್ರ ಸರ್ಕಾರ ಕೋಪಗೊಂಡಿತ್ತು. ಸರ್ಕಾರದ ಹೇಳಿಕೆಯನ್ನು ಮುಖಪುಟದಲ್ಲಿ ಪ್ರಕಟಿಸುವಂತೆ ಸರ್ಕಾರವು ಸಂಪಾದಕರಿಗೆ ಸೂಚಿಸಿತ್ತು. ಚುನಾವಣೆ ನಂತರ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇಂದಿರಾ ನೇತೃತ್ವದ ಸರ್ಕಾರಕ್ಕೆ ಇತ್ತು.

ಲಾರೆನ್ಸ್ ಅವರು ತಾವು ಅನುಭವಿಸಿದ್ದನ್ನು ಶಾ ವಿಚಾರಣಾ ಆಯೋಗದ ಎದುರು ಇನ್ನಷ್ಟು ವಿಸ್ತೃತವಾಗಿ ಹೇಳಿದರು. ತಮಗೆ ಹಿಂಸೆಕೊಟ್ಟ ಪೊಲೀಸ್ ಅಧಿಕಾರಿಯ ಹೆಸರನ್ನೂ ಅವರು ಹೇಳಿದರು. ಲಾರೆನ್ಸ್‌ ಅವರನ್ನು ಬಂಧಿಸಿ ಸಿಒಡಿ ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ನೀಡಿದ ಉತ್ತರಗಳಿಂದ ತೃಪ್ತರಾಗದ ಎಸ್‌ಪಿ, ‘ಕೆಲಸ ಶುರು ಮಾಡಿ’ ಎಂದು ಪೊಲೀಸರಿಗೆ ಸೂಚಿಸಿದರು. ಆಗ 8–10 ಜನ ಪೊಲೀಸರು ಲಾರೆನ್ಸ್‌ ಅವರನ್ನು ಹಿಂಸಿಸಲು ಆರಂಭಿಸಿದರು. ಅವರನ್ನು ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ, ಒಂದು ಊರಿನಿಂದ ಇನ್ನೊಂದು ಊರಿಗೆ ಅಲೆಸಲಾಯಿತು. ಸುಮಾರು ಹತ್ತು ದಿನ ದೌರ್ಜನ್ಯಕ್ಕೆ ಗುರಿಪಡಿಸಲಾಯಿತು. ವಶಕ್ಕೆ ಪಡೆದ ಹತ್ತು ದಿನಗಳ ನಂತರ ಲಾರೆನ್ಸ್‌ ಅವರನ್ನು ಬಂಧಿಸಿದ್ದಾಗಿ ಪೊಲೀಸರು ದಾಖಲೆಗಳಲ್ಲಿ ತೋರಿಸಿದರು. ಈ ಆರೋಪಗಳನ್ನೆಲ್ಲ ಅಲ್ಲಗಳೆದ ಪೊಲೀಸರು, ಆಯೋಗದ ದಿಕ್ಕುತಪ್ಪಿಸಲು ಯತ್ನಿಸಿದರು. ಆದರೆ, ತಾನು ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದಲ್ಲಿ ಆಯೋಗವು, ಲಾರೆನ್ಸ್‌ ಅವರನ್ನು ಪೊಲೀಸರು ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದ್ದರು, ಅವರನ್ನು ಪೊಲೀಸರು ದೌರ್ಜನ್ಯಕ್ಕೆ ಗುರಿಪಡಿಸಿದ್ದರು ಎಂಬುದರಲ್ಲಿ ಅನುಮಾನವಿಲ್ಲ ಎಂದು ಹೇಳಿತು.

ಲಾರೆನ್ಸ್‌ ಪ್ರಕರಣವು ವ್ಯಕ್ತಿಯೊಬ್ಬರನ್ನು ಪೊಲೀಸರು ಅಕ್ರಮವಾಗಿ ವಶದಲ್ಲಿ ಇರಿಸಿಕೊಳ್ಳುವುದನ್ನು, ಅವರ ಮೇಲೆ ದೌರ್ಜನ್ಯ ನಡೆಸಿದ್ದನ್ನು ಮಾತ್ರ ತೋರಿಸುತ್ತಿಲ್ಲ. ಬದಲಿಗೆ, ಇಡೀ ಕಾನೂನು ವ್ಯವಸ್ಥೆಯನ್ನು, ನ್ಯಾಯಾಂಗ ಪ್ರಕ್ರಿಯೆಯನ್ನು ಸರ್ಕಾರದ ಹಿರಿಯ ಹಾಗೂ ಜವಾಬ್ದಾರಿಯುತ ಸೇವಕರೇ ಅಡಿಮೇಲಾಗಿಸಿದ್ದನ್ನು ತೋರಿಸುತ್ತಿದೆ ಎಂದು ಆಯೋಗ ಹೇಳಿತು.

ತುರ್ತು ಪರಿಸ್ಥಿತಿಯ ಹಲವು ವರ್ಷಗಳ ನಂತರ, ಕಾಂಗ್ರೆಸ್ಸಿನ ಹಿರಿಯ ನಾಯಕಿ ಮಾರ್ಗರೆಟ್ ಆಳ್ವ ಅವರು, ಆ ದಿನಗಳಲ್ಲಿ ನಡೆದ ಘಟನೆಗಳ ಬಗ್ಗೆ ತಮ್ಮ ಆತ್ಮಕಥೆಯಲ್ಲಿ ಅವಲೋಕನ ನಡೆಸಿದರು. ‘ಏನೇ ಇದ್ದರೂ, ಇಂದಿರಾ ಗಾಂಧಿ ಅವರು ಏನೇ ಹೇಳಿಕೊಂಡರೂ, ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು ದೇಶವನ್ನು ಉಳಿಸುವುದಕ್ಕಿಂತಲೂ ಹೆಚ್ಚಾಗಿ ಕುರ್ಚಿ ಉಳಿಸಲು ಎಂಬ ಗ್ರಹಿಕೆ ಜನರಲ್ಲಿತ್ತು. ತುರ್ತು ಪರಿಸ್ಥಿತಿಗೆ ತಕ್ಷಣದಲ್ಲೇ ಪ್ರತಿರೋಧ ಎದುರಾಯಿತು. ಇಂದಿರಾಜಿ ಅವರನ್ನು ಸಂಸತ್ತಿನಲ್ಲಿ ದುರ್ಗೆ ಎಂದು ಪ್ರಶಂಸಿಸಿದ್ದವರು, ಬಾಂಗ್ಲಾ ಯುದ್ಧದ ನಂತರ ಅವರನ್ನು ಹೊಗಳಿದ್ದವರು, ಅವರ ಕಟು ಟೀಕಾಕಾರರೂ ಶತ್ರುಗಳಾಗಿ ಬದಲಾಗಿದ್ದರು’ ಎಂದು ಆಳ್ವ ಬರೆದಿದ್ದಾರೆ.

ತುರ್ತು ಪರಿಸ್ಥಿತಿಯ ಕಥೆಯನ್ನು ಪ್ರತಿವರ್ಷವೂ ಮತ್ತೆ ಮತ್ತೆ ಹೇಳಬೇಕು. ನಾವು ನಮ್ಮ ಪ್ರಜಾತಾಂತ್ರಿಕ ಪರಂಪರೆಯನ್ನು ಕಳೆದುಕೊಂಡರೆ ಅನುಭವಿಸಬೇಕಾದ ಪರಿಣಾಮಗಳ ಬಗ್ಗೆ ನಮಗೆ ನೆನಪಿಸಲು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾತಂತ್ರವನ್ನು ನಾಶ ಮಾಡಿದವರು ಕ್ಷಮೆ ಕೇಳಿಲ್ಲ. ಅವರಿಗೆ ಶಿಕ್ಷೆ ಕೂಡ ಆಗಿಲ್ಲ. ಆದರೆ, ನಮಗೆ ಮತ್ತೆ ಇಂತಹ ಸಂದರ್ಭ ಎದುರಾಗಬಾರದು ಎಂದಾದರೆ, ಇದಕ್ಕೆ ಕಾರಣರಾದವರನ್ನು ನಾವು ಮರೆಯಬಾರದು, ಕ್ಷಮಿಸಬಾರದು.


         ಎ. ಸೂರ್ಯ ಪ್ರಕಾಶ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು