ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವ್ಯವಸ್ಥೆಗೆ ಒಂದು ‘ಕಿಸ್’!

ಅರ್ಥವಾಗುವಂತೆ ವ್ಯವಸ್ಥೆಯನ್ನು ಸರಳವಾಗಿಡಬೇಕೆಂಬ ಅರಿವು ಅಧಿಕಾರಶಾಹಿಗೆ ಇರದು
Last Updated 23 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡುವುದಾಗಿ ಘೋಷಿಸಿರುವುದು ಉದ್ಯಮ ವಲಯದ ಮೇಲೆ ಚೇತೋಹಾರಿ ಪರಿಣಾಮ ಬೀರಿದೆ. ಆದರೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪ್ರಮಾಣದಲ್ಲಿನ ಬದಲಾವಣೆ ವಿಚಾರದಲ್ಲಿ ಅವರು ಆಡಿದ ಮಾತು ಅಸಂತೋಷಕ್ಕೆ ಕಾರಣವಾಗಿದೆ.

ಭಾರತದ ವಾಣಿಜ್ಯೋದ್ಯಮ ವಲಯದ ಜೀವಸೆಲೆ ಆದ ಜಿಎಸ್‌ಟಿ ವ್ಯವಸ್ಥೆಯು ಈಗ ವಾಣಿಜ್ಯೋದ್ಯಮಗಳ ಪಾಲಿಗೆ, ಅದರಲ್ಲೂ ಮುಖ್ಯವಾಗಿ ಸಣ್ಣ ವಾಣಿಜ್ಯ ವಹಿವಾಟುದಾರರಿಗೆ ಹಾಗೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಪಾಲಿಗೆ, ಗಂಟಲಿನಲ್ಲಿ ಸಿಕ್ಕಿಕೊಂಡ ಕಡುಬಿನಂತೆ ಆಗಿದೆ. ‘ಕಾರ್ಮಿಕ ನಿರೀಕ್ಷಕರು, ಸ್ಥಳೀಯಾಡಳಿತದ ಕಡೆಯಿಂದ ಬರುವ ಬಕಪಕ್ಷಿಗಳು, ಪೊಲೀಸರು, ಆರೋಗ್ಯ ಇಲಾಖೆ ಕಡೆಯಿಂದ ಬರುವ ಹದ್ದುಗಳು ಹಾಗೂ ಇತರ ಸ್ಥಳೀಯರಿಗೆ ಹಫ್ತಾ ಕೊಟ್ಟು ಆದ ನಂತರ, ಆಗಾಗ ಎದುರಾಗುವ ಅನಿರೀಕ್ಷಿತ ಬಂದ್‌ಗಳಿಂದ ಆಗುವ ನಷ್ಟ ಅನುಭವಿಸಿದ ಬಳಿಕ ನಮಗೆ ಉಳಿಯುವುದು ಶೇಕಡ 10ರಿಂದ 15ರಷ್ಟು ಲಾಭ. ಹೊಸ ಜಿಎಸ್‌ಟಿ ವ್ಯವಸ್ಥೆಯು ಆ ಪಾಲನ್ನು ಕೂಡ ಕಿತ್ತುಕೊಳ್ಳುತ್ತಿದೆ, ಜೀವನ ದುರ್ಭರ ಆಗುತ್ತಿದೆ’ ಎಂದು ರಸ್ತೆ ಬದಿಯ ದರ್ಶಿನಿಯೊಂದರ ಮಾಲೀಕ ನನ್ನ ಬಳಿ ಹೇಳಿದ್ದರು. ಈ ಸಂದರ್ಭದಲ್ಲಿ ನಮ್ಮ ಹಣಕಾಸು ಸಚಿವರಿಗೆ ‘ಕಿಸ್’ (KISS – Keep It Simple, Stupid) ತತ್ವವನ್ನು ನೆನಪಿಸಿಕೊಡಬೇಕು. ‘ಕಿಸ್’ ಅಂದರೆ ‘ಮೂರ್ಖರಿಗೂ ಅರ್ಥವಾಗುವಂತೆ ವ್ಯವಸ್ಥೆಯನ್ನು ಸರಳವಾಗಿಡು’ ಎಂದು ಅರ್ಥ.

ಇದು ವಾಣಿಜ್ಯೋದ್ಯಮದಲ್ಲಿ ಬಹುತೇಕರಿಗೆ ಗೊತ್ತಿರುವಂಥದ್ದು, ಎಲ್ಲರೂ ಒಪ್ಪಿರುವ ಮಾತು ಕೂಡ. ಈ ಮಾತನ್ನು ಹೇಳಿದ್ದು ವಿಮಾನ ಎಂಜಿನಿಯರ್ ಕೆಲ್ಲಿ ಜಾನ್ಸನ್ ಎಂಬ ನಂಬಿಕೆ ಇದೆ. ವಿಮಾನದ ವಿನ್ಯಾಸವನ್ನು ಅತ್ಯಂತ ಸರಳವಾಗಿ ಇರಿಸಬೇಕು, ಯುದ್ಧರಂಗದಲ್ಲಿ ಅತ್ಯಂತ ಮಾಮೂಲಿ ಸಲಕರಣೆ ಬಳಸಿ ಒಬ್ಬ ಮೂರ್ಖ ಕೂಡ ಆ ವಿಮಾನ ರಿಪೇರಿ ಮಾಡಲು ಸಾಧ್ಯವಾಗಬೇಕು ಎಂದು ಅವರು ತಮ್ಮಲ್ಲಿ ಕೆಲಸ ಮಾಡುವ ಎಂಜಿನಿಯರ್‌ ಗಳಿಗೆ ಹೇಳುತ್ತಿದ್ದರು.

ಆದರೆ, ಜಗತ್ತಿನ ಎಲ್ಲೆಡೆ ಅಧಿಕಾರಶಾಹಿಗೆ ಈ ‘ಕಿಸ್’ ತತ್ವದ ಅರಿವು ಸಾಮಾನ್ಯವಾಗಿ ಇರುವುದಿಲ್ಲ. ತಾನು ಒಂದು ಕೋಟಿಗಿಂತ ಹೆಚ್ಚು ಬಗೆಯ ವಸ್ತುಗಳನ್ನು ಮಾರಾಟ ಮಾಡುವುದಾಗಿ ಅಮೆಜಾನ್ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಅಮೆಜಾನ್ ಮೂಲಕ ಹಲವು ಬಗೆಯ ಸೇವೆಗಳೂ ದೊರೆಯುತ್ತವೆ. ಪ್ರತಿದಿನವೂ ಒಂದಿಲ್ಲೊಂದು ಹೊಸದನ್ನು ಸೇರಿಸಲಾಗುತ್ತಿರುತ್ತದೆ. ಈ ಪರಿಪ್ರೇಕ್ಷ್ಯದಿಂದ ಕಂಡಾಗ, ಎಲ್ಲ ಬಗೆಯ ವಸ್ತುಗಳನ್ನು ಹಾಗೂ ಸೇವೆಗಳನ್ನು ಗುರುತಿಸಿ ಅವುಗಳನ್ನು ಜಿಎಸ್‌ಟಿ ವ್ಯವಸ್ಥೆಯ ಬೇರೆ ಬೇರೆ ಪ್ರಮಾಣದ ತೆರಿಗೆ ವರ್ಗಗಳ ಅಡಿ ತನ್ನಿ ಎಂದು ಅಧಿಕಾರಿಗಳಿಗೆ ಹೇಳುವುದೂ ಒಂದೇ, ಗೊಂದಲಮಯ ಸ್ಥಿತಿಯನ್ನು ಸೃಷ್ಟಿಸುವುದೂ ಒಂದೇ.

ಏಕರೂಪದ ತೆರಿಗೆ ವ್ಯವಸ್ಥೆಯಿಂದ ಆಗುವ ಲಾಭಗಳ ಬಗ್ಗೆ ವಿಶ್ವದ ಎಲ್ಲೆಡೆ ವಿವಾದಕ್ಕೆ ಆಸ್ಪದ ಇಲ್ಲದಂತಹ ಅಂಕಿ-ಅಂಶಗಳು ಸಿಗುತ್ತವೆ. ಹಾಗಾಗಿ, ಬರೀ ಎರಡು ಬಗೆಯ ತೆರಿಗೆ ವರ್ಗಗಳನ್ನು ಗುರುತಿಸುವಂತೆ ಅಧಿಕಾರ ಶಾಹಿಗೆ ಸ್ಪಷ್ಟವಾದ ಸೂಚನೆ ರವಾನೆ ಆಗಬೇಕು. ಶೂನ್ಯ ತೆರಿಗೆ ವಸ್ತುಗಳು ಒಂದು ವರ್ಗದಲ್ಲಿ, ಇನ್ನುಳಿದ ಎಲ್ಲ ವಸ್ತುಗಳು ಇನ್ನೊಂದು ವರ್ಗದಲ್ಲಿ ಬರಬೇಕು. ಇನ್ನೊಂದು ವರ್ಗದ, ಅಂದರೆ ತೆರಿಗೆ ವ್ಯಾಪ್ತಿಯ ವಸ್ತು ಗಳಿಗೆ ಶೇಕಡ 10ರಷ್ಟರಿಂದ 15ರಷ್ಟು ತೆರಿಗೆ ನಿಗದಿ ಮಾಡಬೇಕು. ಇದರಿಂದ ತೆರಿಗೆ ನಿಯಮಗಳ ಪಾಲನೆ ಸುಲಭವಾಗುವುದಷ್ಟೇ ಅಲ್ಲದೆ, ಸ್ವಇಚ್ಛೆಯಿಂದ ತೆರಿಗೆ ಪಾವತಿ ಹಾಗೂ ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಕೂಡ ಕಡಿಮೆ ಆಗುತ್ತದೆ.

ಇದು ಸಾಧ್ಯವಾಗಬೇಕು ಎಂದಾದರೆ, ರಾಜಕೀಯ ಮಟ್ಟದಲ್ಲಿ ಸುಧಾರಣಾವಾದಿ ಆಲೋಚನೆಗಳು ಬೇಕು. ತಂಬಾಕು ಅಥವಾ ಮದ್ಯದಂತಹ ವಸ್ತುಗಳ ಮೇಲೆ ವಿಧಿಸುವ ತೆರಿಗೆಯನ್ನು ಗಮನಿಸಿ. ‘ಭಾರತದಲ್ಲೇ ತಯಾ ರಿಸಿ’ ಅಭಿಯಾನದ ಅಡಿ ಉದ್ಯೋಗ ಸೃಷ್ಟಿಸುವ ಅಥವಾ ಬೆಳವಣಿಗೆ ಸಾಧಿಸುವ ಸರ್ಕಾರದ ಆಲೋಚನೆಗಳಿಗೆ ಈ ತೆರಿಗೆ ಪೂರಕವಾಗಿ ಇಲ್ಲ. ಹೋಟೆಲ್‌ಗಳ ಮೇಲಿನ ತೆರಿಗೆ ಪ್ರಮಾಣ ಕಡಿತ ಸರ್ಕಾರದ ಆಲೋಚನೆಗೆ ಪೂರಕವಾಗಿದ್ದರೂ, ಇನ್ನಷ್ಟು ಕಡಿತ ಬೇಕು.

300 ಕೋಣೆಗಳ ಒಂದು ಪಂಚತಾರಾ ಹೋಟೆಲ್‌ ನೇರವಾಗಿ ಅಂದಾಜು 500 ಜನರಿಗೆ ಉದ್ಯೋಗ ನೀಡು ತ್ತದೆ. ಹಾಗೆಯೇ, ಪೂರಕ ಕ್ಷೇತ್ರಗಳಲ್ಲಿ ಪರೋಕ್ಷವಾಗಿ ಇನ್ನಷ್ಟು ಉದ್ಯೋಗ ಸೃಷ್ಟಿಸುತ್ತದೆ. ಹೋಟೆಲ್ ಉದ್ಯಮವು ಲಿನೆನ್, ಆಲಂಕಾರಿಕ ಬಟ್ಟೆಗಳು, ರಗ್ಗು, ನೆಲಹಾಸುಗಳನ್ನು ಖರೀದಿಸುತ್ತದೆ (ಇವನ್ನೆಲ್ಲ ಕಾಲ ಕಾಲಕ್ಕೆ ಬದಲಾಯಿಸಬೇಕಿರುವ ಕಾರಣ, ಜವಳಿ ಕ್ಷೇತ್ರ ದಲ್ಲಿ ಒಂದಿಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ). ಆಹಾರೋತ್ಪನ್ನಗಳನ್ನು ಹೋಟೆಲ್‌ಗಳು ಬೃಹತ್ ಪ್ರಮಾಣದಲ್ಲಿ ಬಳಸುತ್ತವೆ. ಹಾಗಾಗಿ, ರೈತರಿಗೆ ಆದಾಯ ಸಿಗುತ್ತದೆ. ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಪಂಚತಾರಾ ಹೋಟೆಲ್‌ಗಳು ವಿದೇಶಿ ವಿನಿಮಯ ಸಂಗ್ರಹಕ್ಕೂ ಕೊಡುಗೆ ನೀಡುತ್ತವೆ. ಹಾಗಾಗಿ, ಇಂತಹ ಹೋಟೆಲ್‌ಗಳ ಮೇಲೆ ‘ಸಾಯಹೊಡೆಯುವ’ ರೀತಿಯಲ್ಲಿ ತೆರಿಗೆ ವಿಧಿಸುವುದು ತಪ್ಪು. ಒಂದು ಚಾಕೊಲೇಟ್‌ ಅನ್ನು ಉದಾಹರಣೆಯಾಗಿ ನೋಡಿ: ಇದರ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳು ಕೋಕಾ ಮತ್ತು ಸಕ್ಕರೆ. ಅಂದರೆ, ಆಲೋಚನೆ ಮಾಡದೆ ಚಾಕೊಲೇಟ್‌ ಮೇಲೆ ಏಟು ನೀಡಿದರೆ ರೈತರಿಗೂ ತೊಂದರೆ ಆಗುತ್ತದೆ, ಕಾರ್ಖಾನೆಯಲ್ಲಿ ಕೆಲಸ ಮಾಡುವವರಿಗೂ ತೊಂದರೆ ಆಗುತ್ತದೆ.

ಶ್ರೀಮಂತರಿಂದ ಹೆಚ್ಚು ಹಣ ಖರ್ಚು ಮಾಡಿಸಿ, ಅರ್ಥ ವ್ಯವಸ್ಥೆಗೆ ಚುರುಕು ನೀಡಬೇಕು. ಪ್ರವರ್ಧಮಾನಕ್ಕೆ ಬರುತ್ತಿರುವ ಗ್ರಾಹಕರ ಕೈಗೆ ಕೆಲವು ವಸ್ತುಗಳು ನಿಲುಕದಂತೆ ತೆರಿಗೆ ನಿಗದಿ ಮಾಡುವ ಬದಲು, ಹೆಚ್ಚೆಚ್ಚು ಜನ ಹವಾನಿಯಂತ್ರಕಗಳನ್ನು, ರೆಫ್ರಿಜರೇಟರ್‌ಗಳನ್ನು ಖರೀದಿಸುವ ಸಾಮರ್ಥ್ಯ ಪಡೆಯುವಂತೆ ಮಾಡಬೇಕು.

ರಸ್ತೆ ಬದಿಯ ಬೇಕರಿಗಳನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಅಧಿಕಾರಿಗಳು ಅಲ್ಲಿ ಗೊಂದಲ ಸೃಷ್ಟಿಸುವುದನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ ಎನ್ನಬೇಕು. ಬ್ರೆಡ್‌ಗೆ ತೆರಿಗೆ ಇಲ್ಲ, ಆದರೆ ತರಕಾರಿ ಸ್ಯಾಂಡ್‌ವಿಚ್‌ಗೆ ಶೇಕಡ 5ರಷ್ಟು ತೆರಿಗೆ ಇದೆ. ಅಂದರೆ ತರಕಾರಿ ಮಾರುವವನ ಮೇಲೆ ನೇರವಾದ ಏಟು. ಬನ್‌ಗೆ ತೆರಿಗೆ ಇಲ್ಲ. ಆದರೆ, ಒಣದ್ರಾಕ್ಷಿ ಇರುವ ಬನ್‌ಗೆ ಶೇಕಡ 5ರಷ್ಟು ತೆರಿಗೆ. ಕೇಕ್ ಮತ್ತು ಬಿಸ್ಕತ್ತುಗಳಿಗೆ ಶೇಕಡ 18ರಷ್ಟು ತೆರಿಗೆ! ಇದೇ ರೀತಿಯ ತೆರಿಗೆ ಸಮಸ್ಯೆಗಳು ದ್ರಾಕ್ಷಿ, ಕಬ್ಬು ಬೆಳೆಗಳು ಹಾಗೂ ಕೋಕಾ ಉದ್ದಿಮೆಯ ಜೀವನಾಡಿಗಳಾದ ವೈನ್, ರಮ್, ಬಿಯರ್ ಮೇಲೆಯೂ ಇವೆ.

ಕಿಸ್ ತತ್ವದ ಕಾರಣದಿಂದಾಗಿ ಕಡಿಮೆ ದರದ ವಿಮಾನಯಾನ ಸಂಸ್ಥೆಗಳು ಯಶಸ್ಸು ಕಂಡಿವೆ. ಇವು ಒಂದು ರೀತಿಯಲ್ಲಿ, ಆಕಾಶದಲ್ಲಿ ಸ್ವಸಹಾಯ ಪದ್ಧತಿಯ ಉಡುಪಿ ಹೋಟೆಲ್‌ಗಳಿದ್ದಂತೆ!

ಅವಸರ ಮಾಡುವುದು ಬೇಡ. ಹಣಕಾಸು ಸಚಿವರು ನಿಧಾನವಾಗಿಯಾದರೂ, ಗೊಂದಲಮಯ ತೆರಿಗೆ ವರ್ಗೀಕರಣವನ್ನು ಇಲ್ಲವಾಗಿಸಬೇಕು. ತೆರಿಗೆ ವಿಧಿಸಲು ಯೋಗ್ಯವಾದ ಎಲ್ಲವನ್ನೂ ಒಂದೇ ವರ್ಗದ ಅಡಿ ತರಬೇಕು. ಇದರಿಂದಾಗಿ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾಗುತ್ತದೆ, ಅರ್ಥ ವ್ಯವಸ್ಥೆಗೆ ಪ್ರಯೋಜನ ಆಗುತ್ತದೆ. ಈ ರೀತಿಯ ಕ್ರಮ ಜನಪ್ರಿಯವೂ ಆಗುತ್ತದೆ, ಅರ್ಥಶಾಸ್ತ್ರಜ್ಞರೂ ಮೆಚ್ಚುತ್ತಾರೆ.

ಹೆಚ್ಚಿನ ಪ್ರಮಾಣದ ತೆರಿಗೆಗಳು ಯಾವ ಸಂದರ್ಭ ದಲ್ಲೂ ದೇಶದ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಜಿಎಸ್‌ಟಿ ವ್ಯವಸ್ಥೆ ಬಗ್ಗೆ ವ್ಯಕ್ತವಾಗಿರುವ ಟೀಕೆಗಳನ್ನು ಗುರುತಿಸಿ, ದಿಟ್ಟ ಸುಧಾರಣೆಗಳನ್ನು ತರಲು ಅವುಗಳನ್ನು ಅವಕಾಶವಾಗಿ ಬಳಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT