ಪ್ರಸಕ್ತ ರಾಜಕಾರಣದ ಮೂರು ಮಾದರಿಗಳು

7
ಆಡಳಿತಶಾಹಿಯ ಅಸತ್ಯದೆದುರು ಸತ್ಯವನ್ನು ಒತ್ತಾಯಿಸುವ ನೈತಿಕ ಶಕ್ತಿಯನ್ನೇ ನಾವು ಕಳೆದುಕೊಂಡಂತಿದೆ

ಪ್ರಸಕ್ತ ರಾಜಕಾರಣದ ಮೂರು ಮಾದರಿಗಳು

Published:
Updated:
Deccan Herald

ಮಹಾತ್ಮ ಗಾಂಧಿಯ 150ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಪ್ರಸಕ್ತ ಕಾಲಘಟ್ಟದ ಕೆಲವು ನಿರ್ದಿಷ್ಟ ಬಗೆಯ ಧಾರ್ಮಿಕ ಗೊಂದಲಗಳಿಗೆ ‘ಗಾಂಧಿ ಮಾರ್ಗ’ದಲ್ಲಿರುವ ಪರಿಹಾರಗಳೇನು...? ಎನ್ನುವ ಕುರಿತು ಪರಿಶೀಲನೆ ನಡೆಸುವ ಪ್ರಯತ್ನ ಇಲ್ಲಿದೆ. ಈ ದಿಸೆಯಲ್ಲಿ ಎರಡು ದೃಷ್ಟಾಂತಗಳನ್ನು ಇಲ್ಲಿ ಪ್ರಸ್ತಾಪಿಸಬಹುದು.

ಮೊದಲನೆಯದು, ಭಾರತದ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ನಡೆದಂತಹ ವೈಕಂ ಸತ್ಯಾಗ್ರಹದ ಸಂದರ್ಭದಲ್ಲಿ ಕೇರಳದ ಪಂಡಿತರ ಜೊತೆಗೆ ಗಾಂಧಿ ನಡೆಸಿದ ವಾಗ್ವಾದ. ಎರಡನೆಯದು, ಈಗಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಚುನಾವಣೆಗಳ ಹಿನ್ನೆಲೆಯಲ್ಲಿ ಮಠಮಂದಿರಗಳಿಗೆ ಭೇಟಿ ನೀಡುತ್ತ ಪ್ರದರ್ಶಿಸುತ್ತಿರುವ ಧಾರ್ಮಿಕ ರಾಜಕಾರಣಕ್ಕೆ ಸಂಬಂಧಿಸಿದ್ದು.

ಇವೆರಡು ದೃಷ್ಟಾಂತಗಳು ಭಾರತದ ಧಾರ್ಮಿಕ ಪರಿಪ್ರೇಕ್ಷ್ಯಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ; ಅವು ಭಾರತದ ರಾಜಕಾರಣದ ನೆಲೆಯಲ್ಲಿ ಮೂಡಿ ಬಂದಿರುವ ಎರಡು ಧೋರಣೆಗಳೂ ಹೌದು. ಇವನ್ನು ಅರ್ಥ ಮಾಡಿಕೊಳ್ಳುವುದೆಂದರೆ, ಭಾರತೀಯ ಸೆಕ್ಯುಲರ್‌ವಾದ ಎದುರಿಸುತ್ತಿರುವ ತೊಡಕುಗಳನ್ನು ಗುರುತಿಸುವುದರ ಜೊತೆಗೆ, ಭಾರತೀಯ ಸೆಕ್ಯುಲರ್‌ವಾದದ ಕಾರ್ಯಸೂಚಿಯನ್ನು ಮರು
ಸಂಘಟಿಸುವ ದಾರಿಗಳನ್ನು ಅನ್ವೇಷಿಸುವುದೂ ಹೌದು.

ಮೊದಲಿಗೆ ವೈಕಂ ಸತ್ಯಾಗ್ರಹದ ದೃಷ್ಟಾಂತ ಗಮನಿಸೋಣ. ಆ ಸಂದರ್ಭದಲ್ಲಿ ಗಾಂಧಿಯವರು ತಿರುವಾಂಕೂರಿನ ಬ್ರಾಹ್ಮಣ ಪಂಡಿತರ ಜೊತೆ ನಡೆಸಿದ ವಾಗ್ವಾದ, ಸಾಂಸ್ಕೃತಿಕವಾಗಿ ಮುಖ್ಯವಾದದ್ದು. ಈ ವಾಗ್ವಾದದ ಮೂಲಕ ಗಾಂಧಿ ಮಂಡಿಸಿದ ಹಿಂದೂ ಧರ್ಮದ ಪುನರ್‌ ವ್ಯಾಖ್ಯಾನವು ಚಾರಿತ್ರಿಕವಾಗಿ ಬಹುಮುಖ್ಯವೆಂದು ಗಾಂಧಿಯವರ ಬದುಕು- ಚಿಂತನೆಗಳ ಕುರಿತು ಅಧ್ಯಯನ
ನಡೆಸಿದ ಅನೇಕ ವಿದ್ವಾಂಸರು ಬರೆದಿದ್ದಾರೆ.

ಹಿಂದೂ ಧರ್ಮದ ನಿಷ್ಠಾವಂತ ಪರಿಪಾಲಕ ಗಾಂಧಿ. ಅವರಿಗೆ ಹಿಂದೂ ಧರ್ಮದ ಮೂಲಭೂತ ಮೌಲ್ಯಗಳ ಬಗ್ಗೆ ಅಚಲ ವಿಶ್ವಾಸವಿತ್ತು. ಅವರು ವೈಷ್ಣವ ಪಂಥವೊಂದರ ಹಿನ್ನೆಲೆಯಿಂದ ಬಂದವರಾಗಿದ್ದರೂ ತಾವು ಪ್ರತಿನಿಧಿಸುತ್ತಿರುವುದು ಎಲ್ಲರನ್ನೂ ಒಳಗೊಳ್ಳುವ, ಮಾನವೀಯವಾದ ಹಾಗೂ ಸನಾತನವಾದ ಹಿಂದೂ ಧರ್ಮವನ್ನು ಎಂದು ತಿಳಿದುಕೊಂಡಿದ್ದರು. ಸನಾತನ ಹಿಂದೂ ಧರ್ಮದ ಕುರಿತಾದ ಅವರ ಅಚಲವಾದ ಶ್ರದ್ಧೆಯೇ ಅವರನ್ನು ಹಿಂದೂ ಧರ್ಮದೊಳಗಿರುವ ಹುಳುಕುಗಳನ್ನು ತೀಕ್ಷ್ಣವಾದ ವಿಮರ್ಶೆಗೆ ಒಳಪಡಿಸುವಂತೆಯೂ ಪ್ರೇರೇಪಿಸಿತು. ಆದ್ದರಿಂದಲೇ ಅವರು ಹಿಂದೂ ಧರ್ಮದ ಕೇಂದ್ರ ಭಾಗದಲ್ಲಿರುವ ಪಾಪರೂಪೀ ಅಸ್ಪೃಶ್ಯತೆಯ ವಿರುದ್ಧ ಯುದ್ಧ ನಡೆಸಲು ನಿರ್ಧರಿಸಿದರು. ಗಾಂಧಿಯವರ ಪ್ರಕಾರ, ಅಸ್ಪೃಶ್ಯತೆಯು ಹಿಂದೂ ಧರ್ಮಕ್ಕಂಟಿರುವ ಭೀಕರವಾದ ಶಾಪ ಅಥವಾ ಪಾಪ. ಇದರ ವಿರುದ್ಧ ಆಳವಾದ ಧಾರ್ಮಿಕ ಶ್ರದ್ಧೆಯ ಹೋರಾಟವನ್ನು ನಡೆಸುವ ಪ್ರಯತ್ನದಲ್ಲಿ ಗಾಂಧಿ, ‘ಹಿಂದೂಧರ್ಮಶಾಸ್ತ್ರ, ಅಸ್ಪೃಶ್ಯತೆಯನ್ನು ಮಾನ್ಯ ಮಾಡುವುದಿಲ್ಲ’ ಎನ್ನುವ ಪ್ರತಿಪಾದನೆಯನ್ನು ವೈಕಂ ಸತ್ಯಾಗ್ರಹದ ಸಂದರ್ಭದಲ್ಲಿ ಮುಂದಿಡುತ್ತಾರೆ.

ಅಸ್ಪೃಶ್ಯತೆಯು ಹಿಂದೂ ಧರ್ಮಶಾಸ್ತ್ರಕ್ಕೆ ಹೊರತಾದ ವಿದ್ಯಮಾನವೆನ್ನುವ ಪ್ರತಿಪಾದನೆಯನ್ನು ಗಾಂಧಿ, ಕೇರಳದ ವೇದಶಾಸ್ತ್ರ ಪಾರಂಗತರಾದ ಬ್ರಾಹ್ಮಣ ಪಂಡಿತರೆದುರು ಮಾಡುತ್ತಾರೆ. ವೈದಿಕ ಪರಂಪರೆಯ ಚೌಕಟ್ಟನ್ನು ಎಳ್ಳಷ್ಟೂ ಸಡಿಲಿಸಲು ನಿರಾಕರಿಸುವ ಪಂಡಿತರ ಮುಂದೆ ಅಷ್ಟೇನೂ ಸಂಸ್ಕೃತ ಬಾರದ, ಧರ್ಮಶಾಸ್ತ್ರಗಳ ವಿಚಾರದಲ್ಲಿ ದೊಡ್ಡ ಮಟ್ಟದ ಪ್ರಾವೀಣ್ಯವನ್ನೂ ಹೊಂದಿರದ ಗಾಂಧಿಯವರು ಧರ್ಮಸೂಕ್ಷ್ಮದ ಪ್ರಶ್ನೆಗಳನ್ನು ಎತ್ತುವುದು ಅಪಾರ ಸಂತಸ ಮೂಡಿಸುವ ವಿದ್ಯಮಾನ. ಇದು ತಮ್ಮ ಧರ್ಮದ ಬಗೆಗೆ ಗಾಂಧಿಯವರಿಗಿರುವ ಸರಿಸಾಟಿಯಿಲ್ಲದ ಆತ್ಮವಿಶ್ವಾಸವನ್ನು ಪ್ರದರ್ಶಿಸುತ್ತದೆ. ಬಹುಶಃ, ಅನುಪಮವಾದ ಆತ್ಮವಿಶ್ವಾಸವೇ ಗಾಂಧಿ ಅವರ ರಾಜಕಾರಣದ ಬಹುಮುಖ್ಯವಾದ ಲಕ್ಷಣವೆನ್ನಬಹುದು.

ಅಸ್ಪೃಶ್ಯತೆಯನ್ನು ಧರ್ಮಶಾಸ್ತ್ರ ಮಾನ್ಯ ಮಾಡುವುದಿಲ್ಲ ಎನ್ನುವ ಗಾಂಧಿಯವರ ಪ್ರತಿಪಾದನೆಗೆ ಕೇರಳದ ಪಂಡಿತರು ಗಾಂಧಿಯವರನ್ನುದ್ದೇಶಿಸಿ ‘ನೀನು ವೇದಪಾರಂಗತನಾದ ಬ್ರಾಹ್ಮಣನಲ್ಲ. ನಿನಗೆ ಬ್ರಹ್ಮೋಪದೇಶವಾಗಿಲ್ಲ. ಅದ್ದರಿಂದ ಧರ್ಮ ಸೂಕ್ಷ್ಮಗಳನ್ನು ಅರಿಯುವ ಪ್ರಾಥಮಿಕ ಅರ್ಹತೆಯೇ ನಿನಗಿಲ್ಲ’ ಎಂದಾಗ ಗಾಂಧಿ; ‘ನಾನೋರ್ವ ಹಿಂದೂ. ನನ್ನ ತಂದೆ ತಾಯಿಗಳೂ ಹಿಂದೂಗಳು. ನನ್ನ ವಂಶದ ಪೂರ್ವಜರೂ ಹಿಂದೂ ಎಂದು ಕರೆಯಲಾಗುವ ಪರಂಪರೆಯಿಂದಲೇ ಬಂದಿದ್ದಾರೆ. ನನಗೆ ಹಿಂದೂ ಧರ್ಮ ಪ್ರತಿನಿಧಿಸುವ ನೈತಿಕಮೌಲ್ಯಗಳಲ್ಲಿ ಅಚಲ ವಿಶ್ವಾಸವಿದೆ. ಆದ್ದರಿಂದ ಧರ್ಮಶಾಸ್ತ್ರದ ಪ್ರಶ್ನೆಗಳನ್ನು ಎತ್ತುವ ಮತ್ತು ಧರ್ಮಶಾಸ್ತ್ರದ ಅರ್ಥವನ್ನು ನಿರೂಪಿಸುವ ಅಧಿಕಾರವನ್ನು ಯಾರೂ ನನಗೆ ಕೊಡಬೇಕಾಗಿಲ್ಲ. ಅದು ನನಗೆ ಪಿತ್ರಾರ್ಜಿತವಾಗಿ ಹಾಗೂ ಸ್ವಯಾರ್ಜಿತವಾಗಿ ಬಂದಿದೆ’ ಎಂದು ಮರು ಪ್ರತಿಪಾದಿಸುತ್ತಾರೆ.

ಈ ವಾಗ್ವಾದದ ಮೂಲಕ ತತ್ವಜ್ಞಾನೀಯ ನೆಲೆಯಿಂದ ಅತ್ಯಂತ ಮಹತ್ವದ ವಿಚಾರವೊಂದನ್ನು ನಮ್ಮ ಮುಂದಿಡುತ್ತಾರೆ ಗಾಂಧಿ. ಅದು ಧರ್ಮದ ಸ್ವರೂಪ ಮತ್ತು ಧರ್ಮವನ್ನು ಅನುಸರಿಸುವವರಿಗೂ ಹಾಗೂ ಧರ್ಮಕ್ಕೂ ಇರುವ ಸಂಬಂಧದ್ದು. ಗಾಂಧಿಯವರ ಪ್ರಕಾರ, ಧರ್ಮ ಮೂಲತಃ ಮಾನವ ಸೃಷ್ಟಿ. ಆದ್ದರಿಂದ, ಕಾಲಕಾಲಕ್ಕೆ ಮಾನವಾಭ್ಯುದಯದ ನೆಲೆಯಿಂದ ಧರ್ಮವನ್ನು ಮರುನಿರೂಪಿಸಬೇಕಾಗುತ್ತದೆ. ಹಾಗಾಗಿ ಧರ್ಮಶಾಸ್ತ್ರದ ಅರ್ಥವನ್ನು ತನ್ನ ನೈತಿಕ ಪ್ರಜ್ಞೆ ಹಾಗೂ ಸಾಮುದಾಯಿಕ ಜವಾಬ್ದಾರಿಯ ನೆಲೆಯಿಂದ ಮನುಷ್ಯ ನಿರಂತರವಾಗಿ ಮರುನಿರೂಪಿಸುತ್ತಿರುತ್ತಾನೆ ಎಂದು ಗಾಂಧಿ ತಿಳಿಯುತ್ತಾರೆ. ಅಂದರೆ ಗಾಂಧಿಯವರ ದೃಷ್ಟಿಯಲ್ಲಿ ಧರ್ಮ, ಮಾನವ ಸಮುದಾಯದ ಐಹಿಕಾಭ್ಯುದಯದ ಸಲಕರಣೆಯೂ ಹೌದು; ಅಂತೆಯೇ ಅದು ನಮ್ಮೆಲ್ಲರ ಆಧ್ಯಾತ್ಮಿಕ ಹುಡುಕಾಟದ ಸಾಧನವೂ ಹೌದು. ಗಾಂಧಿ ತಮ್ಮ ರಾಜಕೀಯ ಬದುಕಿನುದ್ದಕ್ಕೂ ಪ್ರತಿಪಾದಿಸಿದ ಈ ಸೆಕ್ಯುಲರ್ ನೆಲೆಯ ಯುಗಧರ್ಮ ದೃಷ್ಟಿ ಏಕಕಾಲದಲ್ಲಿ ಆಧುನಿಕವೂ-ಕ್ರಾಂತಿಕಾರಕವೂ ಆಗಿ ಕಾಣಿಸುತ್ತದೆ. ಬಹುಶಃ ನಮ್ಮ ಕಾಲದ ಧಾರ್ಮಿಕ ಸಂಕಟಗಳನ್ನು ನೀಗಿ
ಕೊಳ್ಳಲು ಮತ್ತು ಭಾರತೀಯ ಸೆಕ್ಯುಲರ್‌ವಾದದ ಕಾರ್ಯಸೂಚಿಯನ್ನು ಮಹತ್ವಪೂರ್ಣವಾಗಿ ಮರುಸಂಘಟಿಸಿಕೊಳ್ಳಲು ಗಾಂಧಿಯವರ ಈ ಮೂಲಜಿಜ್ಞಾಸಿಕ ಧರ್ಮದೃಷ್ಟಿ ಬಹುಮುಖ್ಯವಾದುದಾಗಿದೆ.

ಇನ್ನೊಂದು ದೃಷ್ಟಾಂತ, ನಮ್ಮ ಕಾಲದ ಗಾಂಧಿಯಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುರಿತಾದದ್ದು. ಇತ್ತೀಚೆಗೆ ಚುನಾವಣೆ ಸಂದರ್ಭಗಳಲ್ಲಿ ರಾಹುಲ್ ಮಠ- ಮಂದಿರಗಳಿಗೆ ಭೇಟಿ ನೀಡಿದರು. ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡು ಶಿವಲಿಂಗವನ್ನು ಅರ್ಚಿಸುವ ಫೋಟೊಗಳನ್ನು ಪ್ರಚಾರ ಕಾರ್ಯಗಳಲ್ಲಿ ಬಳಸಿಕೊಂಡರು. ಅವರ ಸಭೆಗಳಲ್ಲಿ ಈಗ ತ್ರಿಶೂಲಧಾರಿಗಳಾದ ಶಿವವೇಷಧಾರಿಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ರಾಹುಲ್‍ರ ಈ ದಿಢೀರ್ ದೈವಾಸಕ್ತಿಯನ್ನು ಕೆಲವರು ಮೃದು ಹಿಂದುತ್ವವೆಂದು ಕರೆದರೆ; ಕಾಂಗ್ರೆಸ್ ನಾಯಕರು ರಾಹುಲ್‍ರ ಈ ಶಿವಭಕ್ತಿಯನ್ನು ಅನುಪಮವಾದ ವರ್ಚಸ್ಸು ಎಂದು ಬಣ್ಣಿಸುತ್ತ ರಾಹುಲ್‍ರ ಈ ನಡೆ ಕಾಂಗ್ರೆಸ್‍ಗೆ ಶ್ರೇಯಸ್ಸು ತರುತ್ತದೆ ಎಂದು ಕೊಂಡಾಡುತ್ತಿದ್ದಾರೆ. ಕಾಂಗ್ರೆಸ್ ವಿರೋಧಿಗಳಾದ ಸಂಘ ಪರಿವಾರದವರು ರಾಹುಲ್‍ ಅವರ ಹಿಂದೂತನದ ಯಥಾರ್ಥತೆಯನ್ನೇ ಪ್ರಶ್ನಿಸಿದ್ದಾರೆ. ಅವರ ಹಿಂದೂ ಮೂಲವನ್ನು ಅನುಮಾನಿಸಿದವರಿಗೆ ಅವರು ಹಿಂದೂ ಮಾತ್ರವಲ್ಲ, ಕುಲೀನ ಬ್ರಾಹ್ಮಣ ಹಿನ್ನೆಲೆಯಿಂದ ಬಂದ ಹಿಂದೂ ಎನ್ನುವ ರೀತಿಯಲ್ಲಿ ಕೆಲವರು ಮಾತನಾಡಿದ್ದಾರೆ.

ರಾಹುಲ್‍ರ ಈ ಎಲ್ಲ ವರಸೆಗಳ ಬಗ್ಗೆ ‘ಅದು ಅವರ ವೈಯಕ್ತಿಕ ವಿಚಾರ’ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಇದು ಪೂರ್ಣಪ್ರಮಾಣದ ‘ಪೊಲಿಟಿಕಲ್ ಥಿಯೇಟರ್’. ರಾಹುಲ್ ಜನಿವಾರ ತೋರಿಸಿ ತನ್ನದು ಬ್ರಾಹ್ಮಣ ಡಿಎನ್‍ಎ ಎಂದಿರುವುದನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ಪಕ್ಷದ ಮೂರ್ಖತನವನ್ನು ರಾಹುಲ್ ಅತ್ಯಂತ ಸಮರ್ಥವಾಗಿ ಪ್ರತಿನಿಧಿಸುತ್ತಿದ್ದಾರೆ. ಸಂಘಪರಿವಾರದ ಕುಹಕದ ಬಲೆಗೆ ತಾನೇತಾನಾಗಿ ಬಂದು ಬೀಳುವ ಮಿಕವೂ ಆಗಿರುವ ರಾಹುಲ್, ಸದ್ಯದ ಭಾರತದ ರಾಜಕಾರಣವೆಂಬ ರಂಗಭೂಮಿಯ ಕಪಟನಾಟಕ ಪಾತ್ರಧಾರಿಯೂ ಹೌದು.

ಅಡ್ವಾಣಿಯವರ ರಥಯಾತ್ರೆಯನ್ನು ನೆನಪಿಸುವಂತೆ ರಾಹುಲ್‍ ಅವರ ಈ ತೀರ್ಥಯಾತ್ರಾ ಮಾದರಿಯ ರಾಜಕಾರಣ, ನೆಹರೋತ್ತರದ ದಿನಗಳಲ್ಲಿ ಕಾಂಗ್ರೆಸ್ ನಿರ್ವಹಿಸಿಕೊಂಡು ಬರುತ್ತಿರುವ ವಿರೋಧಾಭಾಸಗಳಿಂದಕೂಡಿರುವ ರಾಜಕಾರಣದ ಒಂದು ವಿಶಿಷ್ಟ ನಮೂನೆ.
ಇದನ್ನು ಸೆಕ್ಯುಲರ್ ಎಂದು ಕರೆಯಲು ಸಾಧ್ಯವಿಲ್ಲ. ನೆಹರೂ ತಮ್ಮ ರಾಜಕೀಯ ಜೀವನದಲ್ಲಿ ಬಲುನಿಷ್ಠೆಯಿಂದ ಪ್ರತಿಪಾದಿಸಿದ ಮತ್ತು ಬಲುಕಷ್ಟದಿಂದ ಕಾರ್ಯಗತಗೊಳಿಸಲು ಯತ್ನಿಸಿದ ಸೆಕ್ಯುಲರ್‌ವಾದದ ಸೂಕ್ಷ್ಮತೆಯ ಯಾವ ಅರಿವೂ ಈಗಿನ ಕಾಂಗ್ರೆಸ್ ನಾಯಕತ್ವಕ್ಕೆ ಇದ್ದಂತಿಲ್ಲ. ವೋಟ್‍ಬ್ಯಾಂಕ್ ರಾಜಕಾರಣದ ಲೆಕ್ಕಾಚಾರಗಳಲ್ಲಿ ಕಾಂಗ್ರೆಸ್ ತನ್ನ ಎಲ್ಲಾ ಪ್ರಜಾತಾಂತ್ರಿಕ ಹಾಗೂ ಸೆಕ್ಯುಲರ್ ಹಿನ್ನೆಲೆಗಳನ್ನು ನಿರ್ಲಕ್ಷಿಸಿ ಇತರ ರಾಜಕೀಯ ಪಕ್ಷಗಳಂತೆ ಎಲ್ಲ ಬಗೆಯ ಕೋಮುವಾದಗಳಿಗೂ ಸಮಾನ ಗೌರವವನ್ನು ಸೂಚಿಸುತ್ತಾ ಬಂದಿದೆ.

ರಾಹುಲ್‍ ಅವರ ಧರ್ಮ- ದೈವಾಸಕ್ತಿಯನ್ನು ಮೃದು ಹಿಂದುತ್ವವೆಂದೋ ಅಥವಾ ಇನ್ನಾವುದೋ ಆಪ್ಯಾಯಮಾನವಾದ ಹೆಸರಿನಲ್ಲಿ ಕರೆದರೂ ಈ ರಾಜಕಾರಣದ ಹಿಂದಿನ ಬೊಗಳೆತನವನ್ನು ಮರೆಮಾಚಲಾಗದು. ಜಾಗತೀಕರಣಗೊಂಡ ಇಂದಿನ ಭಾರತದ ರಾಜಕಾರಣದಲ್ಲಿ ಪ್ರಜಾತಂತ್ರ ಮತ್ತು ಅದು ಪ್ರತಿನಿಧಿಸುವ ಮೌಲ್ಯಗಳನ್ನು ಅಣಕಿಸುವಂತೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಯ ರಾಜಕಾರಣವನ್ನು ನಡೆಸಲು ಹೆಣಗಾಡುತ್ತಿವೆ.

ಇಂತಹ ಮೌಲ್ಯರಹಿತ ರಾಜಕಾರಣದ ಸಂದರ್ಭದಲ್ಲಿ ನಮಗೆ ನಿಜವಾಗಿಯೂ ಬೇಕಿರುವುದು ಮತ- ಪಂಥಗಳ, ಜಾತಿವಾರು ಲೆಕ್ಕಾಚಾರಗಳ ಪ್ರಜಾತಂತ್ರವೋ? ಸಾಂಪ್ರದಾಯಿಕ ಧಾರ್ಮಿಕಾಧಿಕಾರದ ಎದುರು ಅಥವಾ ಆಧುನಿಕ ರಾಜ್ಯಾಧಿಕಾರದ ಎದುರು; ಅವುಗಳ ಮುಖಕ್ಕೆ ನಿರ್ಭೀತಿಯಿಂದ ಸತ್ಯವನ್ನು ಹಿಡಿಯುವ ಮತ್ತು ಸತ್ಯವನ್ನು ಆಗ್ರಹಿಸುವ, ನೈತಿಕ ಶಕ್ತಿಯನ್ನು ಕೊಡುವ ಪೂರ್ಣ ಸ್ವಾತಂತ್ರ್ಯದ ರಾಜಕಾರಣವೋ...? ಈ ಪೂರ್ಣ ಸ್ವಾತಂತ್ರ್ಯದ ಒಂದು ನಿದರ್ಶನವನ್ನು ನಾವು ಗಾಂಧಿಯವರ ಹೋರಾಟದಲ್ಲಿ ಕಾಣುತ್ತೇವೆ. ಗಾಂಧಿ ತಮ್ಮ ಜೀವನದುದ್ದಕ್ಕೂ ನಡೆಸಿದ ಸತ್ಯಾಗ್ರಹವೆನ್ನುವ ಹಕ್ಕೊತ್ತಾಯದ ಹೋರಾಟ, ಸ್ವರಾಜ್ಯ
ವೆನ್ನುವ ಮಾನವನ ನೈತಿಕ ನೆಲೆಯ ಸ್ವಂತಿಕೆಯ ಸಾಕ್ಷಾತ್ಕಾರವೂ ಹೌದು. ಅಂತೆಯೇ ಸಾಮುದಾಯಿಕ ನೆಲೆಗಟ್ಟಿನ ವಿಸ್ತರಣೆಯೂ ಹೌದು.

ಗಾಂಧಿಯವರ ರಾಜಕೀಯ ತತ್ವಜ್ಞಾನದಲ್ಲಿ ಸತ್ಯಾಗ್ರಹ ಮತ್ತು ಸ್ವರಾಜ್ಯಗಳು ಬೇರ್ಪಡಿಸಲಾಗದ ಒಂದೇ ಮೌಲಿಕ ಚಿಂತನೆಯ ಎರಡು ಮುಖಗಳು. ಸತ್ಯಾಗ್ರಹ ನಿರಂತರವಾಗಿ ಅಧಿಕಾರಶಾಹಿಯ ಎದುರು ಸತ್ಯವನ್ನು ಒತ್ತಾಯಿಸುವ ರಾಜಕೀಯ ಕ್ರಿಯಾಚರಣೆಯಾದರೆ; ಸ್ವರಾಜ್ಯಈ ರಾಜಕೀಯ ಕ್ರಿಯಾಚರಣೆಯ ನಿರಂತರತೆಯಲ್ಲಿ ಮತ್ತೆ ಮತ್ತೆ ಚಿಗುರೊಡೆಯುವ ಒಂದು ಚಲನಶೀಲ ನೈತಿಕ
ವರ್ಚಸ್ಸು. ಈ ಅರ್ಥದಲ್ಲಿ ಸತ್ಯಾಗ್ರಹವು ಗಾಂಧಿ ರಾಜಕೀಯ ಚಿಂತನೆಯ ಸಾಧನವಾದರೆ; ಸ್ವರಾಜ್ಯ ಅದರ ಸಿದ್ಧಿ.

ಜಗತ್ತೇ ಮಾರುಕಟ್ಟೆಯಾಗಿ ಪರಿವರ್ತನೆಗೊಂಡ ಸಂದರ್ಭದಲ್ಲಿ ಅದರ ಒಂದು ಭಾಗವಾಗಿರುವ ಭಾರತದಲ್ಲಿ ಸರಿ-ತಪ್ಪುಗಳ, ಒಳಿತು-ಕೆಡುಕುಗಳ, ನ್ಯಾಯಾನ್ಯಾಯಗಳ, ಸತ್ಯಾಸತ್ಯಗಳ ನಡುವಿನ ನೈತಿಕ ಸಂಘರ್ಷ ಸಂಪೂರ್ಣವಾಗಿ ನಾಪತ್ತೆಯಾದಂತೆ ಕಾಣುತ್ತದೆ. ಆಡಳಿತಶಾಹಿಯ ಅಸತ್ಯದೆದುರು ಸತ್ಯವನ್ನು ಒತ್ತಾಯಿಸುವ ನೈತಿಕ ಶಕ್ತಿಯನ್ನೇ ನಾವು ಕಳೆದುಕೊಂಡಂತಿದೆ. ಗಾಂಧಿಯವರ ಆಳವಾದ ಧಾರ್ಮಿಕ ಶ್ರದ್ಧೆಯ ನೈತಿಕ ರಾಜಕೀಯ ಕ್ರಿಯಾಚರಣೆಯ ಯಾವ ಅಂಶವೂ ನಮ್ಮನ್ನು ಪ್ರಭಾವಿಸಿದಂತಿಲ್ಲ.

ಇಂದಿನ ಭಾರತದ ರಾಜಕಾರಣದಲ್ಲಿ ಬಹಳ ಸ್ಪಷ್ಟವಾಗಿ ನಮ್ಮ ಮುಂದೆ ಮೂರು ಮಾದರಿಗಳು ಇವೆ. ಹಿಂದೂ ಧರ್ಮದ ಒಳಗಿದ್ದುಕೊಂಡೇ ವಿಶಿಷ್ಟವಾದ ಸ್ವಾತಂತ್ರ್ಯವನ್ನು ಘೋಷಿಸಿದ, ಧಾರ್ಮಿಕ ಶ್ರದ್ಧೆಯನ್ನು ಹೊಂದಿದ್ದೂ ತನ್ನದೇ ಧರ್ಮದ ಅನೇಕಾನೇಕ ಸಂಗತಿಗಳನ್ನು ಕಟುಟೀಕೆಗೆ ಗುರಿಪಡಿಸಿದ, ಆಸ್ತಿಕನಾಗಿದ್ದೂ ಸಂದೇಹದ ಸ್ವಾತಂತ್ರ್ಯ ಉಳಿಸಿಕೊಂಡ ಮಹಾತ್ಮ ಗಾಂಧಿಯವರ ರಾಜಕಾರಣ ಒಂದು ಕಡೆ; ಧಾರ್ಮಿಕ ಕೋಮುವಾದ ಮತ್ತು ಅನ್ಯಧರ್ಮ ದ್ವೇಷದ ಸಂಘಪರಿವಾರದ ರಾಜಕಾರಣ ಮತ್ತೊಂದೆಡೆ; ಧಾರ್ಮಿಕ ಕಪಟತನ ಮತ್ತು ಅಧಿಕಾರದ ಬಹು ರೂಪಗಳಿಗೆ ತಗ್ಗಿ-ಬಗ್ಗಿ ನಡೆಯುವ, ಎಲ್ಲ ಸಂಕುಚಿತ ಹಿತಾಸಕ್ತಿಗಳೊಂದಿಗೆ ರಾಜೀ-ಕಬೂಲಿಗಾಗಿ ಪ್ರಯತ್ನಿಸುವ, ಉಗ್ರವಾದದ ಜಬರ್ದಸ್ತಿನ ಎದುರು ಮೃದುತ್ವದ ಡೊಗ್ಗು ಸಲಾಮು ಹಾಕುವ ಬೆನ್ನೆಲುಬಿಲ್ಲದ ಕಾಂಗ್ರೆಸ್ ಮಾದರಿಯ ರಾಜಕಾರಣ ಮಗದೊಂದೆಡೆ ಇದೆ. ಇವುಗಳಲ್ಲಿ ನಮ್ಮ ಆಯ್ಕೆ ಯಾವುದು? ಭಾರತೀಯ ರಾಜಕಾರಣದ ಸತ್ವ
ಪರೀಕ್ಷೆಯ ಸಂದರ್ಭವಿದು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !