ಶುಕ್ರವಾರ, ಫೆಬ್ರವರಿ 26, 2021
20 °C
ಮನುಕುಲಕ್ಕೆ ತಿಳಿದಿರುವ ಅತ್ಯಂತ ವ್ಯಸನಕಾರಿ ವಸ್ತು ಹೊಗೆಸೊಪ್ಪು

ತಂಬಾಕು ಸೃಷ್ಟಿಸಿರುವ ಆರೋಗ್ಯ ಸಮಸ್ಯೆ

ಕೆ.ವಿ. ಧನಂಜಯ Updated:

ಅಕ್ಷರ ಗಾತ್ರ : | |

ಮಹಾಭಾರತದಲ್ಲಿ ಕೌರವರು ಮತ್ತು ಪಾಂಡವರು ತಂಬಾಕನ್ನು ಬಳಕೆ ಮಾಡಿದ್ದರೇ?! ತಂಬಾಕು, ಭಾರತದ ಪುರಾತನ ಸಂಸ್ಕೃತಿಯ ಭಾಗವೇ?

ಈಚೆಗೆ ‘ಸದ್ಭಾವನಾ ದಿನ’ದ ಅಂಗವಾಗಿ ವೈದ್ಯರನ್ನು ಉದ್ದೇಶಿಸಿ ಮಾತನಾಡುವಾಗ, ‘ಭಾರತದಲ್ಲಿ ಪ್ರತಿವರ್ಷ ತಂಬಾಕಿನ ಕಾರಣದಿಂದಾಗಿ ಎಷ್ಟು ಜನ ಸಾಯುತ್ತಿದ್ದಾರೆ’ ಎಂದು ಕೇಳಿದೆ. ವೈದ್ಯರು ಉತ್ಸಾಹದಿಂದ ಉತ್ತರಿಸಿದರು. ಹತ್ತು ಸಾವಿರ ಎಂದು ಒಬ್ಬರು ಹೇಳಿದರು. ಒಂದು ಲಕ್ಷ ಎಂದು ಇನ್ನೊಬ್ಬರು ಹೇಳಿದರು. ಆದರೆ, ಕೇಂದ್ರ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವಂತೆ ಭಾರತದಲ್ಲಿ ಪ್ರತಿವರ್ಷ ತಂಬಾಕಿನ ಕಾರಣದಿಂದಾಗಿ 13.5 ಲಕ್ಷ ಜನ ಸಾಯುತ್ತಿದ್ದಾರೆ. ಇದನ್ನು ಕೇಳಿದ ವೈದ್ಯರು ಒಮ್ಮೆ ಮೌನವಾದರು.

ತಂಬಾಕಿನಿಂದ ಸಾವಿಗೆ ಈಡಾಗುವವರ ಸಂಖ್ಯೆ ಎಷ್ಟಿರಬಹುದು ಎಂಬುದನ್ನು ಅಲ್ಲಿ ಆಲೋಚಿಸುತ್ತಿದ್ದ ಎರಡು ನಿಮಿಷಗಳ ಅವಧಿಯಲ್ಲಿ ದೇಶದಲ್ಲಿ ಇನ್ನೂ ಐದು ಜನ ಸತ್ತಿದ್ದರು! ಮನುಕುಲಕ್ಕೆ ತಿಳಿದಿರುವ ಅತ್ಯಂತ ವ್ಯಸನಕಾರಿ ವಸ್ತು ತಂಬಾಕು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ತಂಬಾಕು ತ್ಯಜಿಸಲು ಪ್ರಯತ್ನಿಸುವ ಪ್ರತಿ 100 ಮಂದಿಯಲ್ಲಿ 83 ಮಂದಿ ಮೊದಲ ವಾರದಲ್ಲೇ ವೈಫಲ್ಯ ಕಾಣುತ್ತಾರೆ. 100 ಮಂದಿಯಲ್ಲಿ ಆರು ಮಂದಿ ಮಾತ್ರ ಒಂದು ವರ್ಷದ ನಂತರವೂ ತಂಬಾಕಿನಿಂದ ದೂರ ಉಳಿದುಕೊಂಡಿರುತ್ತಾರೆ. ತಂಬಾಕು ಮನುಷ್ಯನ ಪ್ರತಿ ಅಂಗದ ಮೇಲೂ ಪರಿಣಾಮ ಉಂಟುಮಾಡುತ್ತದೆ, ಬಹುತೇಕ ಕ್ಯಾನ್ಸರ್‌ಗಳಲ್ಲಿ ಇದರ ಪ್ರಭಾವ ಇದೆ. ಭಾರತದಲ್ಲಿ ಪುರುಷರಲ್ಲಿ ಕಾಣಿಸಿಕೊಳ್ಳುವ ಶೇಕಡ 45ರಷ್ಟು ಕ್ಯಾನ್ಸರ್‌ಗಳಿಗೆ ಕಾರಣ ತಂಬಾಕು.

ಈ ಲೇಖನವನ್ನು ಮುಂದೆ ಓದುವ ಮುನ್ನ ಒಮ್ಮೆ ಕಣ್ಣುಮುಚ್ಚಿ, ಹೀಗೊಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ. ಆ ಮೂಲಕ ಸಾರ್ವಜನಿಕ ಆರೋಗ್ಯ ವಿಷಯವನ್ನು ಇನ್ನಷ್ಟು ಸೂಕ್ಷ್ಮವಾಗಿ ಕಾಣಲು ಆಗುತ್ತದೆ.

‘ಮುಂದಿನ ಎರಡು ನಿಮಿಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಐದು ಜನ ಸಾಯುತ್ತಾರೆ. ಮೃತದೇಹಗಳ ಸುತ್ತ ಕುಟುಂಬದ ದುಃಖತಪ್ತ ಸದಸ್ಯರು ನಿಂತಿದ್ದಾರೆ. ಸಾವಿಗೆ ಈಡಾದವರು, ತಂಬಾಕು ವ್ಯಸನದ ಕಾರಣದಿಂದಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಒದ್ದಾಟ ನಡೆಸಿದ್ದಾರೆ. ವ್ಯಸನ ತ್ಯಜಿಸಲು ಕಷ್ಟಪಟ್ಟಿದ್ದರೂ ಅದು ಫಲ ಕೊಡಲಿಲ್ಲ. ಇದರಿಂದಾಗಿ, ಹಲವು ವರ್ಷಗಳವರೆಗೆ ಅವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಸಾವನ್ನಪ್ಪಿದವರು ಹಾಗೂ ಅವರ ಕುಟುಂಬದ ಸದಸ್ಯರು ತಂಬಾಕಿನ ಎದುರು ಅಸಹಾಯಕರಾಗಿದ್ದರು. ವೈದ್ಯಕೀಯ ವೆಚ್ಚಗಳ ಕಾರಣದಿಂದಾಗಿ ಕುಟುಂಬದ ಉಳಿತಾಯ ಬರಿದಾಯಿತು, ಸಾಲವೂ ಹೆಚ್ಚಾಯಿತು. ಅನಾರೋಗ್ಯದ ಕಾರಣ ತನ್ನ ಕುಟುಂಬದ ಸದಸ್ಯರಿಗಾಗಿ ಹೆಚ್ಚಿನ ಗಮನ ನೀಡಲು ಆ ವ್ಯಕ್ತಿಗೆ ಸಾಧ್ಯವಾಗಲಿಲ್ಲ. ಅಲ್ಲದೆ, ತಾನಿಲ್ಲದ ನಂತರ ಕುಟುಂಬದ ಇತರರ ಜೀವನ ಕಷ್ಟವಾಗುತ್ತದೆ ಎಂಬುದೂ ಅವನಿಗೆ ಗೊತ್ತಿದೆ. ಬದುಕಬೇಕು ಎಂದು ಒದ್ದಾಟ ನಡೆಸಿದರೂ ತಂಬಾಕು ಅದಕ್ಕೆ ಅವಕಾಶ ಕೊಡಲಿಲ್ಲ...’ ತಂಬಾಕು ಪ್ರತಿ ಎರಡು ನಿಮಿಷಕ್ಕೆ ಒಮ್ಮೆ ಸೃಷ್ಟಿಸುತ್ತಿರುವುದು ಈ ಪರಿಸ್ಥಿತಿಯನ್ನು.

ತಂಬಾಕು, ಭಾರತ ಮೂಲದ ಸಸ್ಯವಂತೂ ಅಲ್ಲ. ಇದನ್ನು 1492ರ ನವೆಂಬರ್‌ನಲ್ಲಿ ಕ್ರಿಸ್ಟೊಫರ್ ಕೊಲಂಬಸ್ ಪತ್ತೆಮಾಡಿದ. ಇದನ್ನು 15ನೇ ಶತಮಾನದಲ್ಲಿ ಡಚ್ ವ್ಯಾಪಾರಿಗಳು ಭಾರತಕ್ಕೆ ತಂದರು. ತಂಬಾಕು ವ್ಯಸನಿಗಳನ್ನು ಕಂಡರೆ ಮೊಘಲ್ ದೊರೆ ಜಹಾಂಗೀರ್‌ಗೆ ಬಹಳ ಕೋಪ ಬರುತ್ತಿತ್ತು. ಹಾಗಾಗಿ ಆತ ತಂಬಾಕು ಸೇವನೆ ನಿಷೇಧಿಸಿ ಹಲವು ಬಾರಿ ಆದೇಶಿಸಿದ್ದ. ತಾನು ಹೊರಡಿಸಿದ ಆದೇಶವನ್ನು ಪ್ರಜೆಗಳು ನಿರ್ಲಕ್ಷಿಸುತ್ತಿದ್ದಾರೆ ಎಂಬುದು 1617ರಲ್ಲಿ ಗೊತ್ತಾದಾಗ ಜಹಾಂಗೀರ್, ತಂಬಾಕು ಸೇವಿಸುವ ಕೆಲವರ ತುಟಿಯನ್ನು ಲಾಹೋರ್‌ನಲ್ಲಿ ಬಹಿರಂಗವಾಗಿ ಕತ್ತರಿಸುವಂತೆ ಆದೇಶಿ ಸಿದ. ತಂಬಾಕನ್ನು ಬ್ರಿಟಿಷ್ ವಸಾಹತುಗಳಲ್ಲಿ ಬೆಳೆಯಲು ಅವಕಾಶ ಕೊಟ್ಟರೆ ಅದರ ಮಾರಾಟದಿಂದ ಬಂದ ಒಂದು ಪಾಲನ್ನು ಪಾವತಿಸುವುದಾಗಿ ಬ್ರಿಟಿಷ್ ಈಸ್ಟ್‌ ಇಂಡಿಯಾ ಕಂಪನಿಯು 1620ರಲ್ಲಿ ಜಹಾಂಗೀರ್‌ಗೆ ಹೇಳಿತು. ಇದಕ್ಕೆ ಜಹಾಂಗೀರ್ ಒಪ್ಪಿದ, 16ನೇ ಶತಮಾನದಲ್ಲಿ ತಂಬಾಕು ಬೆಳೆ ದೇಶದ ಕೆಲವೆಡೆ ವಿಸ್ತರಿಸಿತು.

ಆದರೆ, ಆ ಸಂದರ್ಭದಲ್ಲಿ ಹಾಗೂ ಅಲ್ಲಿಂದ ಮುಂದೆ ಮೂರು ಶತಮಾನಗಳವರೆಗೆ ತಂಬಾಕಿನ ಬಳಕೆಯು ಜನರ ನಡುವೆ ಅಷ್ಟೇನೂ ವ್ಯಾಪಕವಾಗಿ ಇರಲಿಲ್ಲ. 20ನೇ ಶತಮಾನದ ಆರಂಭದಲ್ಲಿ ಯಾಂತ್ರೀಕರಣದ ಪರಿಣಾಮವಾಗಿ ತಂಬಾಕಿನ ಉತ್ಪನ್ನಗಳನ್ನು ಬೃಹತ್ ಪ್ರಮಾಣದಲ್ಲಿ ಸಿದ್ಧಪಡಿಸುವುದು ಸಾಧ್ಯವಾಯಿತು. ಅಮೆರಿಕದ ವೈದ್ಯಕೀಯ ದಾಖಲೆಗಳ ಪ್ರಕಾರ 1900ರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ. 1900ರ ನಂತರವೇ ತಂಬಾಕಿನ ಬಳಕೆ ಕಾಳ್ಗಿಚ್ಚಿನಂತೆ ವಿಶ್ವದಾದ್ಯಂತ ಹರಡಿತು. ಇದು ಇಂದು ಭಾರಿ ಅಪಾಯಗಳನ್ನು ಸೃಷ್ಟಿಸುತ್ತಿದೆ.

ಈ ವರ್ಷ ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ ವಿಶ್ವದಲ್ಲಿ 18 ಲಕ್ಷ ಜನ ಸಾಯುತ್ತಾರೆ, ಅವರಲ್ಲಿ ಶೇಕಡ 85ರಷ್ಟು ಜನರಿಗೆ ಕ್ಯಾನ್ಸರ್ ಬಂದಿದ್ದಕ್ಕೆ ಕಾರಣ ಧೂಮಪಾನ. 1901ರಿಂದ 2000ದ ನಡುವಿನ ಅವಧಿಯಲ್ಲಿ ಜಗತ್ತಿನ 10 ಕೋಟಿ ಜನ ತಂಬಾಕಿನ ಕಾರಣದಿಂದಾಗಿ ಸತ್ತರು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. 2001ರಿಂದ 2100ರ ನಡುವಿನ ಅವಧಿಯಲ್ಲಿ 100 ಕೋಟಿ ಜನ ತಂಬಾಕಿನಿಂದಾಗಿ ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಅದು ಅಂದಾಜಿಸಿದೆ.

ಭಾರತದಲ್ಲಿ 15 ವರ್ಷಕ್ಕಿಂತ ಹೆಚ್ಚು ವಯಸ್ಸಾದವರ ಪೈಕಿ ಶೇಕಡ 30ರಷ್ಟು ಮಂದಿ ತಂಬಾಕು ಸೇವಿಸುತ್ತಿದ್ದಾರೆ. ತಂಬಾಕಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ವೆಚ್ಚವಾಗುವ ಹಣದ ಜೊತೆ ಹೋಲಿಸಿದಾಗ ತಂಬಾಕಿನ ಮಾರಾಟದಿಂದ ಬರುವ ಆದಾಯ ತೀರಾ ಕಡಿಮೆ ಎಂಬುದನ್ನು ಕೇಂದ್ರ ಸರ್ಕಾರ ಮತ್ತೆ ಮತ್ತೆ ಸ್ಪಷ್ಟಪಡಿಸಿದೆ. ಈ ವಿಚಾರದಲ್ಲಿ ಕೇಂದ್ರ ಹೇಳಿದ್ದನ್ನು ಯಾರೂ ಅಲ್ಲಗಳೆದಿಲ್ಲ.

ಭಾರತದಲ್ಲಿ ಕೃಷಿಗೆ ಬಳಕೆಯಾಗುತ್ತಿರುವ ಪ್ರತಿ 1,000 ಎಕರೆಯಲ್ಲಿ ಮೂರು ಎಕರೆ ಮಾತ್ರ ತಂಬಾಕು ಬೆಳೆಯಲು ಬಳಕೆಯಾಗುತ್ತಿದೆ. ತಂಬಾಕು ಬೆಳೆಯುವ ರೈತರು ಇತರ ಬೆಳೆಗಳನ್ನು ಬೆಳೆಯುವ ರೈತರಿಗಿಂತ ಹೆಚ್ಚಿನ ಪ್ರಮಾಣದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹಲವು ವರದಿಗಳು ಹೇಳಿವೆ. ತಂಬಾಕು ಉದ್ಯಮವು ಹಲವು ರೈತರನ್ನು ಶೋಷಿಸುತ್ತಿದೆ ಎಂಬ ವರದಿಗಳೂ ಇವೆ. ವಿಶ್ವದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಬಾಯಿಯ ಕ್ಯಾನ್ಸರ್ ಪ್ರಕರಣಗಳು ವರದಿಯಾಗುವುದು ಭಾರತದಿಂದಲೇ.

ಈ ವರ್ಷ ವಿಶ್ವವು ಒಟ್ಟು ಆರು ಲಕ್ಷ ಕೋಟಿ ಸಿಗರೇಟುಗಳನ್ನು ಉತ್ಪಾದಿಸಲಿದೆ. ಇಷ್ಟು ಸಿಗರೇಟುಗಳನ್ನು ಒಂದರ ಮುಂದೆ ಇನ್ನೊಂದರಂತೆ ಲಂಬವಾಗಿ ಜೋಡಿಸಿದರೆ ಅದು ಸೂರ್ಯನನ್ನು ತಲುಪಿ, ಅಲ್ಲಿಂದ ವಾಪಸ್ ಬರಲು ಸಾಕಾಗುವಷ್ಟು ಉದ್ದಕ್ಕೆ ಬೆಳೆದುನಿಲ್ಲುತ್ತದೆ. ತಂಬಾಕು ಕಂಪನಿಗಳ ಉತ್ಪಾದನಾ ಸಾಮರ್ಥ್ಯ, ಲಾಭ, ಆದಾಯ ಹಾಗೂ ತಂಬಾಕಿನಿಂದ ಆಗುವ ಸಾವಿನ ಅಂಕಿಅಂಶಗಳನ್ನು ನೋಡಿದರೆ, ತಂಬಾಕಿನ ಕಂಪನಿಗಳಿಗೆ ವ್ಯಕ್ತಿ ಯೊಬ್ಬ ಎಷ್ಟು ಲಾಭದಾಯಕ ಎಂಬುದನ್ನು ಅಂದಾಜಿಸಬಹುದು. ತಂಬಾಕು ಸೇವನೆಯಿಂದ ಜೀವ ಕಳೆದುಕೊಳ್ಳುವ ವ್ಯಕ್ತಿ ತನ್ನ ಜೀವಮಾನದಲ್ಲಿ ತಂಬಾಕು ಕಂಪನಿಯನ್ನು ₹2.5 ಲಕ್ಷದಷ್ಟು ಹೆಚ್ಚು ಶ್ರೀಮಂತಗೊಳಿಸಿರುತ್ತಾನೆ. ಅಮೆರಿಕದಂತಹ ಶ್ರೀಮಂತ ರಾಷ್ಟ್ರಗಳ ವ್ಯಕ್ತಿ ಈ ಕಂಪನಿಗಳನ್ನು ₹ 7 ಲಕ್ಷದಷ್ಟು ಶ್ರೀಮಂತಗೊಳಿಸಿರುತ್ತಾನೆ.

ಹಾಗಾದರೆ, ಕೇಂದ್ರ ಸರ್ಕಾರವು ತಂಬಾಕಿನ ಮೇಲೆ ನಿಷೇಧ ಹೇರುವುದಿಲ್ಲವೇಕೆ? ವಾಸ್ತವದಲ್ಲಿ, ತಂಬಾಕು ಮಾರಾಟ ಮತ್ತು ಸೇವನೆಯನ್ನು ಕೇಂದ್ರದಲ್ಲಿ ಯಾವ ಸರ್ಕಾರಕ್ಕೂ ಸಮರ್ಥಿಸಿಕೊಳ್ಳಲು ಆಗಿಲ್ಲ. ದೇಶದ ಮೂರನೆಯ ಒಂದು ಭಾಗ ತಂಬಾಕಿನ ದಾಸ್ಯಕ್ಕೆ ಸಿಲುಕಿರುವಾಗ, ಮತ್ತೆ ಮತ್ತೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವಾಗ, ಅವರ ಉತ್ಪಾದಕತೆ ಕುಸಿದಿರುವಾಗ ನಾವು ಆರೋಗ್ಯಕರ ಸಮಾಜ ಹೊಂದಲು ಹೇಗೆ ಸಾಧ್ಯ?

ಲೇಖಕ: ಸುಪ್ರೀಂ ಕೋರ್ಟ್‌ ವಕೀಲ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು